ಸಂದರ್ಶನ : ನನ್ನ ಒಡನಾಡಿಗೆ ಮಾನಸಿಕ ಅನಾರೋಗ್ಯ ಇರಬಹುದು

ಸಂದರ್ಶನ : ನನ್ನ ಒಡನಾಡಿಗೆ ಮಾನಸಿಕ ಅನಾರೋಗ್ಯ ಇರಬಹುದು

ಸಂದರ್ಶನ : ನನ್ನ ಒಡನಾಡಿಗೆ ಮಾನಸಿಕ ಅನಾರೋಗ್ಯ ಇರಬಹುದು

ದಂಪತಿಗಳಿಗೆ ಮಾನಸಿಕ ಅನಾರೋಗ್ಯ ಒಂದು ಸವಾಲಾಗಿ ಕಾಣುತ್ತದೆ. ಮಾನಸಿಕ ಅನಾರೋಗ್ಯ ಹೊಂದಿರುವ ವ್ಯಕ್ತಿಯೊಡನೆ ಸಂಬಂಧ ಹೊಂದಿರುವಾಗ ಅವರ ಬಗ್ಗೆ ಕಾಳಜಿ ವಹಿಸುವುದೇ ಅಲ್ಲದೆ ನಿಮ್ಮ ನಿತ್ಯ ಜೀವನದ ಕ್ರಿಯೆಗಳನ್ನೂ ನಿಭಾಯಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಶಕ್ತಿಯನ್ನು ಕಳೆದುಕೊಳ್ಳದಂತೆ ಎಚ್ಚರವಹಿಸಿ. ರಿತಿಕಾ ಧಲಿವಾಲ್ ಅವರೊಡನೆ ನಡೆಸಿದ ಸಂದರ್ಶನದಲ್ಲಿ  ಮನಶ್ಶಾಸ್ತ್ರಜ್ಞೆ ಪಲ್ಲವಿ ತೋಮರ್, ಮಾನಸಿಕ ಅನಾರೋಗ್ಯ ಇರುವವರೊಡನೆ ಸಂಬಂಧ ಹೊಂದಿರುವವರು ಹೇಗೆ ತಮ್ಮ ಜೀವನ ನಿರ್ವಹಣೆ ಮಾಡಬೇಕು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಶನದ ಸಂಪಾದಿತ ಆವೃತ್ತಿ ಇಲ್ಲಿದೆ :

ಪ್ರ : ನನ್ನ ಒಡನಾಡಿ ಖಿನ್ನತೆ ಅಥವಾ ಆತಂಕದ ಮನಸ್ಥಿತಿ ಹೊಂದಿರುವುದು ನನಗೆ ಹೇಗೆ ತಿಳಿಯುತ್ತದೆ ?

ಉ : ಖಿನ್ನತೆ ಇದ್ದಲ್ಲಿ ನೀವು ಅವರ ಮನಸ್ಥಿತಿಯಲ್ಲಿ ಕೊಂಚ ಇಳಿಮುಖವಾಗುವುದನ್ನು ಗಮನಿಸಬಹುದು.  ದೀರ್ಘ ಕಾಲ ಅವರು ವಿಷಾದದ ಮನಸ್ಥಿತಿ ಹೊಂದಿರುತ್ತಾರೆ ಮತ್ತು ಈ ಮನಸ್ಥಿತಿ ನಿರಂತರವಾಗಿ ಕಾಡುತ್ತಿರುತ್ತದೆ.  ಈ ಮುನ್ನ ಅವರು ಖುಷಿಯಿಂದ ಮಾಡುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದನ್ನೂ ನೀವು ಗಮನಿಸಬಹುದು. ಸುಲಭವಾಗಿ ಸುಸ್ತಾದಂತೆ ಕಾಣುವ ನಿಮ್ಮ ಒಡನಾಡಿ ಅವರ ಕೆಲಸ ಕಾರ್ಯಗಳಲ್ಲಿ ಎಂದಿನ ಉತ್ಸಾಹ ತೋರುವುದಿಲ್ಲ ಮತ್ತು ಅವರ ಮಾನಸಿಕ ಚಟುವಟಿಕೆಗೆ ಕುಂದಿದಂತೆ ಕಾಣುತ್ತದೆ. ಜನರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ.  ಅವರ ಜೀವನದ ಎಲ್ಲ ಚಟುವಟಿಕೆಗಳಲ್ಲೂ ತೊಡಕು ಎದುರಿಸುತ್ತಾರೆ ಮತ್ತು ನಿಷ್ಕ್ರಿಯರಾಗುತ್ತಾರೆ. ಒಂದು ವೇಳೆ ಅವರು ಕೆಲಸ ಕಾರ್ಯಗಳಲ್ಲಿ ತೊಡಗಿದ್ದರೂ ನಿಭಾಯಿಸಲು ಕಷ್ಟ ಪಡುತ್ತಾರೆ.  ಸಹಜ ಕೆಲಸ ಮಾಡಲು ಅವರು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಖಿನ್ನತೆ ಇರುವಾಗ, ಅವರ ನಿದ್ರೆ, ಹಸಿವಿನ ಪ್ರಮಾಣದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಾಣುತ್ತೀರಿ. ಅವರಲ್ಲಿ ಹೆಚ್ಚಿನ ಸೋಂಬೇರಿತನವನ್ನು ಗಮನಿಸಬಹುದು. ಭರವಸೆ ಕಳೆದುಕೊಳ್ಳುವುದನ್ನು ಕಾಣಬಹುದು ಮತ್ತು ನಾನು ಉಪಯೋಗಕ್ಕೆ ಬಾರದ ವ್ಯಕ್ತಿ ಎನ್ನುವ ಭಾವನೆಯನ್ನು ಗುರುತಿಸಬಹುದು. ಈ ಲಕ್ಷಣಗಳನ್ನು ಅವರ ಮಾತುಕತೆಯಲ್ಲೇ ಗಮನಿಸಬಹುದು. ಕೆಲವು ಸಂದರ್ಭಗಳಲ್ಲಿ ಈ ಸಮಸ್ಯೆ ಇರುವವರು ತಮಗೇ ಹಾನಿ ಮಾಡಿಕೊಳ್ಳುವಂತೆಯೂ, ಜೀವನವೇ ಬೇಡ ಎನ್ನುವಂತೆಯೂ ಮಾತನಾಡಬಹುದು.

ಆತಂಕದ ದೌರ್ಬಲ್ಯ ಅನೇಕ ರೀತಿಯಲ್ಲಿ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಕಂಡುಬರುವ ಆತಂಕದ ಲಕ್ಷಣಗಳೆಂದರೆ ವ್ಯಕ್ತಿಯಲ್ಲಿ ಮುಕ್ತವಾಗಿ ಕಾಣಬಹುದಾದ ಆತಂಕ ವ್ಯಕ್ತವಾಗುತ್ತದೆ. ಇಂಥವರಿಗೆ ಪ್ರತಿಯೊಂದು ಘಟನೆಯೂ ಆತಂಕ ಉಂಟುಮಾಡುತ್ತದೆ. ಇದರೊಂದಿಗೆ ಬೆವರುವುದು, ನಡುಕ, ಕಂಪನ ಮುಂತಾದ ದೈಹಿಕ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವು ಗಾಬರಿ ಹುಟ್ಟಿಸುವ ದೌರ್ಬಲ್ಯ ಇರುವವರಲ್ಲಿ ಕೆಲವು ಪ್ರಸಂಗಗಳಲ್ಲಿ ಆತಂಕ ಅತಿಯಾಗಿ ಹೆಚ್ಚಾಗುತ್ತದೆ. ಇದು ಕೆಲ ಕಾಲವೇ ಇದ್ದರೂ ಸಮಸ್ಯೆ ಎದುರಿಸುವ ವ್ಯಕ್ತಿಯ ಶಕ್ತಿ ಕುಂದುವಂತೆ ಮಾಡುತ್ತದೆ. ಗಾಬರಿ ಹುಟ್ಟಿಸುವಂತಹ ಆತಂಕದ ಸಮಸ್ಯೆ ಇದ್ದಲ್ಲಿ ದೈಹಿಕವಾಗಿ ಹೆಚ್ಚು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಇದರಿಂದ ಭೀತಿಯ ಮನಸ್ಥಿತಿ ಉಂಟಾಗುತ್ತದೆ.

ಪ್ರ : ನನ್ನ ಒಡನಾಡಿ ಸೂಕ್ತ ನೆರವು ಪಡೆಯಲು ನಿರಾಕರಿಸಿದರೆ ನಾನು ಏನು ಮಾಡಬೇಕು ?

ಉ : ಇಲ್ಲಿ ನನಗೆ ಅನಿಸುವುದೇನೆಂದರೆ, ನೆರವು ಕೋರುವುದೇ ಮಾನಸಿಕ ಅನಾರೋಗ್ಯ ಇರುವವರನ್ನು ನಿಶ್ಶಕ್ತಗೊಳಿಸಿಬಿಡುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ತಮಗೆ ಈ ರೀತಿಯ ಮಾನಸಿಕ ಅನಾರೋಗ್ಯ ಕಾಡುತ್ತಿದೆ ಮತ್ತು ಚಿಕಿತ್ಸೆ ಪಡೆಯಬೇಕಾಗುತ್ತದೆ ಎನ್ನುವ ಭಾವನೆಯೇ ಅವರನ್ನು ನಿತ್ರಾಣಗೊಳಿಸುತ್ತದೆ. ಹಾಗಾಗಿ ನಿಮ್ಮ ಜೊತೆಗಾರರ ಮನಸ್ಸಿನಲ್ಲಿರುವ ಕಲ್ಪನೆಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅವರು ಯಾವುದರ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಗ್ರಹಿಸಬೇಕು. ನಂತರ ನೆರವು ಪಡೆಯಲು ಅವರಿಗೆ ನೀವೇ ಉತ್ತೇಜನ ನೀಡಬೇಕು.  ಮತ್ತೊಬ್ಬರೊಡನೆ ಮಾತನಾಡಲು ಯತ್ನಿಸುವಂತೆ ಒಪ್ಪಿಸಬೇಕು.  ಅವರು ಈ ಕುರಿತು ಆತಂಕ ವ್ಯಕ್ತಪಡಿಸಿದರೆ  ಆಗ ನೀವು ಸಂಪರ್ಕಿಸುವ ಚಿಕಿತ್ಸಕರೊಡನೆ ಅವರೊಟ್ಟಿಗೆ ಇದ್ದು ಮಾತುಕತೆ ನಡೆಸಬೇಕು. ಆಗ ಚಿಕಿತ್ಸಕರೊಡನೆ ನೀವೇ ಹೆಚ್ಚು ಮಾತನಾಡಬಹುದು. ಅವರು ತಾವಾಗಿಯೇ ಚಿಕಿತ್ಸಕರ ಬಳಿ ಹೋಗಲು ಇಷ್ಟಪಡದೆ ಇದ್ದರೆ ನೀವು ಅವರಿಗೆ ಸಹಾಯವಾಣಿಯ ಮೂಲಕ ಅಥವಾ ಆನ್ ಲೈನ್ ಸಂಪರ್ಕದ ಮೂಲಕ ಚಿಕಿತ್ಸಕರೊಡನೆ ಮಾತನಾಡಲು ಹೇಳಬಹುದು. ಇವೆಲ್ಲವೂ ವಿಫಲವಾದರೆ, ದಂಪತಿಗಳು ಒಟ್ಟಿಗೆ ಬಂದು ಚಿಕಿತ್ಸಕರನ್ನು ಸಂಪರ್ಕಿಸಿ, ಸನ್ನಿವೇಶವನ್ನು ವಿವರಿಸಬಹುದು. ಅವರು ಎದುರಿಸುವ ವಿಶಿಷ್ಟ ಸನ್ನಿವೇಶದ ಬಗ್ಗೆ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಕಿತ್ಸಕರು ಅವರಿಗೆ ಸೂಕ್ತ ಸಲಹೆ ನೀಡಬಹುದು.  ಅನಾರೋಗ್ಯ  ಪೀಡಿತರನ್ನು ಉತ್ತೇಜನ ನೀಡುವಂತೆ, ಅವರೊಡನೆ ಹೇಗೆ ಮಾತುಕತೆ ನಡೆಸುವಂತೆ, ಸಹಾಯ ಕೋರಲು ನೆರವಾಗುವಂತೆ ನಿಮಗೆ ಸಲಹೆ ನೀಡಬಹುದು.

ಇನ್ನೊಂದು ಮುಖ್ಯವಾದ ಅಂಶವೆಂದರೆ ಅವರಿಗೆ ಪ್ರೀತಿ ವಿಶ್ವಾಸದಿಂದ ಬೆಂಬಲ ನೀಡುವುದು. ಮಾನಸಿಕ ಆರೋಗ್ಯ ಇರುವ ವ್ಯಕ್ತಿಯನ್ನು ನಿಮ್ಮ ನಿಕಟವರ್ತಿಗಳು, ನೆರೆಹೊರೆಯವರು ಒಪ್ಪಿಕೊಳ್ಳುವುದು ಮುಖ್ಯ. ಹಾಗಾಗಿ ಕೆಲವೊಮ್ಮೆ ಅವರೊಡನೆ ಇರುವುದೇ ಮುಖ್ಯವಾದ ಸಂಗತಿಯಾಗಿದೆ.

ಪ್ರ : ನನ್ನ ಒಡನಾಡಿ ಪ್ರೀತಿ ಮತ್ತು ಸುರಕ್ಷತಾ ಭಾವನೆ ಹೊಂದುವಂತೆ ಏನು ಮಾಡಬೇಕು ?

ಉ: ನಿಮ್ಮ ಜೊತೆಗಾರ ಅಥವಾ ಜೊತೆಗಾರ್ತಿ ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು  ನಿಮಗೆ ತಿಳಿದಾಗ, ನೀವು ಅವರ ಸಮಸ್ಯೆಯನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದು ಮುಖ್ಯ. ಅಂದರೆ, ಅವರ ಅನಾರೋಗ್ಯ ಸಮಸ್ಯೆಯ ವಾಸ್ತವತೆಯನ್ನು ತಿಳಿದುಕೊಳ್ಳದೆ ಹೋದರೆ, ಅದರಿಂದ ಉಂಟಾಗುವ ಪರಿಣಾಮಗಳನ್ನು ಗ್ರಹಿಸದೆ ಹೋದರೆ ನೀವು ಏನನ್ನೂ ಮಾಡಲಾಗುವುದಿಲ್ಲ. ಹಾಗಾಗಿ ನೀವು ಅವರಲ್ಲಿನ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅನಾರೋಗ್ಯದ ಕಾರಣಗಳನ್ನು ಅರ್ಥಮಾಡಿಕೊಳ್ಳಿ. ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳಿ.  ಚಿಕಿತ್ಸಕರನ್ನು ಮತ್ತು ನಿಮ್ಮ ಒಡನಾಡಿಗೆ ಚಿಕಿತ್ಸೆ ನೀಡುತ್ತಿರುವ ತಂಡದವರನ್ನು ಭೇಟಿ ಮಾಡಿ. ಇದು ಬಹಳ ಮುಖ್ಯವಾದ ಕೆಲಸ. ಇಷ್ಟೇ ಅಲ್ಲದೆ ನಿಮ್ಮ ಒಡನಾಡಿಯ ಮಾನಸಿಕ ಅನಾರೋಗ್ಯದ ಅನುಭವಗಳನ್ನು ಅರ್ಥಮಾಡಿಕೊಳ್ಳಿ ಏಕೆಂದರೆ  , ಲಕ್ಷಣಗಳು ಒಂದೇ ರೀತಿ ಕಂಡುಬಂದರೂ, ಅವರಿಗೆ ಯಾವ ಕೆಲಸ ಮಾಡಲು ತುಂಬ ಕಷ್ಟವಾಗುತ್ತದೆ, ಯಾವುದು ಹೆಚ್ಚು ಕ್ಲಿಷ್ಟವಾಗುತ್ತದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಪ್ರ : ನಾನು ನನ್ನ ಬಹುಪಾಲು ಸಮಯವನ್ನು ನನ್ನ ಒಡನಾಡಿಯ ಆರೈಕೆಗೇ ಮೀಸಲಿಟ್ಟು ನನ್ನ ಬಗ್ಗೆ ಕಾಳಜಿ ವಹಿಸುವುದು ಹೇಗೆ ?

ಉ : ಪ್ರತಿಯೊಬ್ಬರೂ ಮಾನಸಿಕ ಅನಾರೋಗ್ಯ ಹೊಂದಿರುವ ವ್ಯಕ್ತಿಯ ಚೇತರಿಕೆಯನ್ನು ಗಮನಿಸುವುದರಿಂದ ನಾವು ಸಹಜವಾಗಿಯೇ ಇವರನ್ನು ಆರೈಕೆ ಮಾಡುವವರ ಬಗ್ಗೆ ಯೋಚಿಸುವುದೇ ಇಲ್ಲ. ಈ ಪ್ರಸಂಗದಲ್ಲಿ ಜೊತೆಗಾರ ಅಥವಾ ಜೊತೆಗಾರ್ತಿ ಇರಬಹುದು. ಇವರೂ ಸಹಾ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸನ್ನಿವೇಶವನ್ನು ಎದುರಿಸಲು ಅವರು ಸನ್ನದ್ಧರಾಗಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಡನಾಡಿಗಳು ಅರ್ಥಮಾಡಿಕೊಳ್ಳಬೇಕಾದ ಒಂದು ಮುಖ್ಯ ಅಂಶವೆಂದರೆ ಅವರು ಸಮಸ್ಯೆಯನ್ನು ಬಗೆಹರಿಸಲು ಆಗುವುದಿಲ್ಲ, ಪರಿಹಾರವೂ ಅಲ್ಲ. ಏಕಾಂಗಿಯಾಗಿ ಅವರಿಗೆ ತಮ್ಮ ಒಡನಾಡಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ.  ನಿಮ್ಮ ಬಗ್ಗೆ ನೀವೇ ಕಾಳಜಿ ವಹಿಸಲು ಕೊಂಚ ಮಟ್ಟಿಗೆ ಅವಕಾಶಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮೊಡನೆ ಆತ್ಮೀಯತೆಯಿಂದಿರುವ ಗೆಳೆಯರು ಮತ್ತು ಕುಟುಂಬಗಳೊಡನೆ ಸಂಪರ್ಕ ಇಟ್ಟುಕೊಳ್ಳಿ. ಏಕೆಂದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಯಾವುದೇ ಆಸಕ್ತಿ ತೋರದ, ಸಮಾಜದೊಡನೆ ಬೆರೆಯಲು ಇಷ್ಟ ಪಡದ, ಯಾವುದೇ ಉದ್ಯೋಗ ಇಲ್ಲದ ಒಡನಾಡಿಯೊಡನೆ ಜೀವನ ನಡೆಸುವುದು ಕೆಲವೊಮ್ಮೆ ಕಷ್ಟವಾಗಬಹುದು. ಇದರಿಂದ ಒತ್ತಡ ಹೆಚ್ಚಾಗಬಹುದು. ಸಂಬಂಧಗಳ ನಡುವೆಯೂ ಒತ್ತಡ ಘರ್ಷಣೆ ಹೆಚ್ಚಾಗಬಹುದು. ಹಾಗಾಗಿ ನಿಮ್ಮ ನೆರವಿಗೆ ಅಗತ್ಯ ಬಿದ್ದಾಗ ಧಾವಿಸುವ ಮತ್ತು ನೀವು ಯಾವ ಘಳಿಗೆಯಲ್ಲಾದರೂ ಮಾತನಾಡಬಹುದಾದ ಗೆಳೆಯರು ಮತ್ತು ಕುಟುಂಬಗಳೊಡನೆ ಸಂಪರ್ಕ ಇಟ್ಟುಕೊಳ್ಳಿ. ಮನೆಯಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ನಿಮಗೆ ಭಾಸವಾದರೆ ವೃತ್ತಿಪರ ಸಲಹೆ ಪಡೆಯುವ ಹಿಂಜರಿಯಬೇಡಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org