ಸಂದರ್ಶನ: ಖ್ಯಾತ ಕನ್ನಡ ಸಾಹಿತಿ ನಾ.ಡಿಸೋಜ ಅವರೊಂದಿಗೆ ಮಾತುಕತೆ

"ನಾವು ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು. ಮಾನಸಿಕ ಅಸ್ವಸ್ಥತೆಯ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ ಇಲ್ಲದೇ ಇರುವುದರಿಂದ ನಾವು ಮತ್ತೊಬ್ಬರಿಗೆ ನೆರವಾಗಲು ಸಾಧ್ಯವಿಲ್ಲ"

ನಾರ್ಬರ್ಟ್ (ನಾ) ಡಿಸೋಜ ಅವರು, ಸಾಗರ್, ಶಿವಮೊಗ್ಗ ಜಿಲ್ಲೆಯ, ಕನ್ನಡದ ಪ್ರಸಿದ್ಧ ಲೇಖಕರು. ಅವರು ಮೂರು ದಶಕಗಳಿಂದ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇವರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ವೈಟ್ ಸ್ವಾನ್ ಫೌಂಡೇಶನ್ನಿಂದ ಪೆಟ್ರಿಶಿಯ ಪ್ರೀತಂ ನಾ ಡಿಸೋಜ ಅವರೊಂದಿಗೆ ಮಾತನಾಡಿದರು ಮತ್ತು ಅವರು ಮಾನಸಿಕ ಆರೋಗ್ಯದ ಮೇಲೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.    

ಪ್ರಶ್ನೆ: ಮಾನಸಿಕ ಆರೋಗ್ಯ ಹಾಗೂ ಅಸ್ವಸ್ತತೆಯ  ಕುರಿತು ನಿಮ್ಮ  ಅನಿಸಿಕೆಯೇನು?

ನಾ.ಡಿಸೋಜ: ಸಾಮಾನ್ಯವಾಗಿ, ನಾವೆಲ್ಲ ದೈಹಿಕ ಖಾಯಿಲೆಗಳ ಕುರಿತು ಹೆಚ್ಚು ಯೋಚಿಸುತ್ತೇವೆ. ದೇಹಕ್ಕೆ ಮಾತ್ರ ಖಾಯಿಲೆಗಳು ಬರುವುದು ಎನ್ನುವ ನಂಬಿಕೆ ನಮ್ಮದು. ಆದರೆ, ಮಾನಸಿಕವಾಗಿಯೂ ಖಾಯಿಲೆಗಳು ಬರುತ್ತವೆ, ಮಾನಸಿಕವಾಗಿಯೂ ಮನುಷ್ಯ ಬಳಲಿಕೆಗೆ ಒಳಗಾಗುತ್ತಾನೆ. ಇದರ ಬಗ್ಗೆ ನಮ್ಮಲ್ಲಿ ಬಹಳ ಜನರಿಗೆ ಕಲ್ಪನೆಯಿಲ್ಲ. ಹೀಗಾಗಿ ನಾವು ದೈಹಿಕ ಆರೋಗ್ಯದ ಕಡೆಗೆ ಎಷ್ಟು ಗಮನ ನೀಡುತ್ತೇವೆಯೋ, ಹಾಗೆಯೇ ಮಾನಸಿಕ ಆರೋಗ್ಯದ ಬಗ್ಗೆಯೂ ಅಷ್ಟೇ ಗಮನವನ್ನು ನೀಡಬೇಕು ಎಂದು ನಾವು ಅಂದುಕೊಳ್ಳುತ್ತಾ ಇಲ್ಲ. ಇದು ನಮ್ಮ ದೇಶದ ದುರಂತ ಎಂದು ನಾನಂದುಕೊಳ್ಳುತ್ತೇನೆ .  ಮನಸ್ಸು ಕೂಡ ಮನುಷ್ಯನಿಗೆ ಬಹಳ ಮುಖ್ಯ. ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯ ಬಹಳ ಮುಖ್ಯ. ಆದರೆ, ಅದನ್ನೇ ನಾವು ನಿರ್ಲಕ್ಷಿಸಿದ್ದೇವೆಯೇನೋ ಎಂದು ನನಗನಿಸುತ್ತಿದೆ.

ಪ್ರಶ್ನೆ: ಕನ್ನಡ ಸಮುದಾಯದ ಬಗ್ಗೆ ನಿಮಗೆ ಹೆಚ್ಚು ತಿಳುವಳಿಕೆಯಿದೆ. ನಮ್ಮ ಸಮಾಜದಲ್ಲಿರುವ ಮಾನಸಿಕ ಅಸ್ವಸ್ಥತೆಗಳ ಬಗ್ಗೆ ಇರುವ ಕಳಂಕ  ಮತ್ತು  ಭೇದ-ಭಾವವನ್ನು ಹೋಗಲಾಡಿಸಲು  ನಾವೇನು  ಮಾಡಬಹುದು? 

ನಾ.ಡಿಸೋಜ: ಬಹಳ ಮುಖ್ಯವಾಗಿ, ನಾವು ನಮ್ಮ ಜನರನ್ನು ವೈಜ್ಞಾನಿಕವಾಗಿ ಮುಂದಕ್ಕೆ ತರಬೇಕು. ನಮ್ಮ ಜನರಲ್ಲಿರುವ ಮೂಢನಂಬಿಕೆಗಳೆಲ್ಲ ನಮ್ಮ ಅವನತಿಗೇ ಕಾರಣವಾಗುತ್ತಿರುವುದರಿಂದ, ಮೂಢನಂಬಿಕೆಗಳನ್ನು ಹೋಗಲಾಡಿಸುವ ದಿಕ್ಕಿನಲ್ಲಿ ನಾವು ಕೆಲಸಮಾಡಬೇಕಾಗಿದೆ. ವಿಶೇಷವಾಗಿ, ಮಾನಸಿಕವಾಗಿ ಬಳಲುವ ಎಲ್ಲರೂ ಕೂಡ ನಮ್ಮಲ್ಲಿ ಈ ಮೂಢನಂಬಿಕೆಗಳಿಗೆ ಬಲಿಯಾಗುತ್ತಾರೆ. ಮೈಮೇಲೆ ದೇವರು ಬಂತು ಅಂತ ಹೇಳುತ್ತಾರೆ. ಯಾವುದೋ ಭೂತದ ಕಾಟ, ಪ್ರೇತದ ಕಾಟ ಅಂತೆಲ್ಲ ಹೇಳುತ್ತಾರೆ. ಇನ್ನೂ ಏನೇನೋ ಮೂಢನಂಬಿಕೆಗಳು ನಮ್ಮನ್ನು ಮಾನಸಿಕವಾಗಿ ಬಹಳ ತೊಳಲಾಟಕ್ಕೆ ಒಳಗುಮಾಡುತ್ತವೆ. ಇದನ್ನು ಮೊದಲು ನಾವು ಬಿಡಬೇಕು. ಇದನ್ನು ಬಿಡಬೇಕು ಅಂತಾದರೆ, ನಾವು ಜನರ ಹತ್ತಿರ ಹೋಗಿ, ಇರುವ ವಿಷಯವನ್ನು ಸ್ಪಷ್ಟವಾಗಿ ತಿಳಿಸಬೇಕು. ಅರಿವು ಮೂಡಿಸದೇ ಇದ್ದರೆ, ಬಹುಶಃ ಮನುಷ್ಯ ಅಜ್ಞಾನದಲ್ಲಿಯೇ ಉಳಿದು ಬಿಡುತ್ತಾನೆ. ಅದರಲ್ಲಿಯೂ, ಮಾನಸಿಕವಾಗಿ ಮನುಷ್ಯ ಎಷ್ಟು ಗಟ್ಟಿಯಾಗಿರುತ್ತಾನೋ, ಶಕ್ತಿಶಾಲಿಯಾಗಿರುತ್ತಾನೋ ಅಷ್ಟು ಅವನು ಬದುಕಿನಲ್ಲಿ ಜಯವನ್ನು ಗಳಿಸುತ್ತಾನೆ. ಆ ವಿಷಯದಲ್ಲಿ ನಾವು ಬಹಳ ಹಿಂದುಳಿದು ಬಿಟ್ಟಿದ್ದೇವೆಯೇನೋ ಎಂದು ನನಗೆ ಅನಿಸುತ್ತದೆ. ಯಾಕೆಂದರೆ, ನಮ್ಮಲ್ಲಿರುವ ಎಲ್ಲ ಮೂಢನಂಬಿಕೆಗಳು ಈ ಮಾನಸಿಕ ಖಾಯಿಲೆಗಳಿಗೆ ಕಾರಣವಾಗಿರುವುದನ್ನು ನೋಡಿದಾಗ ನನಗೆ ಬಹಳ ಸಂಕಟ ಕೂಡ ಆಗುತ್ತದೆ.

ಪ್ರಶ್ನೆ: ಮಾನಸಿಕ ಅಸ್ವಸ್ಥತೆ ಇಲ್ಲದಿದ್ದರೂ ಆ ಕುರಿತಾದ ತಿಳುವಳಿಕೆಯ ಅವಶ್ಯಕತೆಯಿದೆಯೇ ? ಇದರಿಂದ  ಸಾಮಾನ್ಯ  ಜನರೂ ಕೂಡ ಹೇಗೆ ಉಪಯೋಗ ಪಡೆಯಬಹುದು?

ನಾ.ಡಿಸೋಜ: ಮಾನಸಿಕ ಅಸ್ವಸ್ಥತೆ ಇಲ್ಲದೇ ಹೋದರೂ ಕೂಡ, ಅದರ ಬಗ್ಗೆ ತಿಳುವಳಿಕೆ ಬೇಕೇಬೇಕು. ನಾವು ದೈಹಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡು ಹೋಗುತ್ತೇವೆಯೋ, ಅದರ ಬಗ್ಗೆ ನಮ್ಮಲ್ಲಿ ಹೇಗೆ ತಿಳಿದುಕೊಳ್ಳಬೇಕೆಂಬ ಹಂಬಲವಿದೆಯೋ, ಹಾಗೆಯೇ, ಮಾನಸಿಕ ಅಸ್ವಸ್ಥತೆಯ ಬಗ್ಗೆಯೂ ನಮಗೆ ತಿಳುವಳಿಕೆಯಿದ್ದರೆ, ನಮ್ಮ ಬದುಕು ಸರಿಹೋಗುತ್ತದೆ. ನಮ್ಮ ಅಕ್ಕಪಕ್ಕದಲ್ಲಿರುವ, ನಮ್ಮ ಸಂಬಂಧಿಗಳ, ಸ್ನೇಹಿತರ ಬದುಕು ಕೂಡ ಸರಿಹೋಗುತ್ತದೆ. ಮಾನಸಿಕ ಅಸ್ವಸ್ಥತೆಗಳ ಬಗ್ಗೆ ನಾವು ತಿಳುವಳಿಕೆ ಹೊಂದುವುದಷ್ಟೇ ಅಲ್ಲ, ಇನ್ನೊಬ್ಬರಿಗೂ ತಿಳುವಳಿಕೆ ಕೊಡುವ ಅವಶ್ಯಕತೆ ತುಂಬಾ ಇದೆ. ನಮ್ಮ ಬಂಧುಬಳಗದಲ್ಲಿ, ಸ್ನೇಹಿತರಲ್ಲಿ ಇರುವಂತಹ ಮಾನಸಿಕ ಅಸ್ವಸ್ಥತೆಯನ್ನು ನಾವೇ ಹೋಗಲಾಡಿಸಲು ಸಾಧ್ಯವಿದೆ. ಆ ಕೆಲಸವನ್ನು ಕೂಡ ನಾವು ಮಾಡುತ್ತಿಲ್ಲ. ಯಾಕೆಂದರೆ, ಮಾನಸಿಕ ಅಸ್ವಸ್ಥತೆಯ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ ಇಲ್ಲದೇ ಇರುವುದರಿಂದ ನಾವು ಮತ್ತೊಬ್ಬರಿಗೆ ನೆರವಾಗಲು ಸಾಧ್ಯವಿಲ್ಲ. 

ಪ್ರಶ್ನೆ: ಮಾನಸಿಕ ಆರೋಗ್ಯದ ಕುರಿತು ನಮ್ಮ ಕನ್ನಡದ ಓದುಗರಿಗೆ ನೀವು ಏನು ಹೇಳಲು ಬಯಸುತ್ತೀರಿ?

ನಾ.ಡಿಸೋಜ: ಕನ್ನಡದ ಓದುಗರು ಈ ಬಗ್ಗೆ ಇರುವ ಪುಸ್ತಕಗಳನ್ನು ಹೆಚ್ಚು ಓದಬೇಕು. ತ್ರಿವೇಣಿಯವರು, ಡಾ.ಶಿವರಾಮ, ಡಾ.ಸಿ.ಆರ್.ಚಂದ್ರಶೇಖರ್ ಅವರು ಜನರಲ್ಲಿ ತಿಳುವಳಿಕೆ ಹೆಚ್ಚಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಲವಾರು ಲೇಖಕರು ನಮ್ಮಲ್ಲಿ ಮಾನಸಿಕ ಖಾಯಿಲೆಗಳ ಬಗ್ಗೆ ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಈ ಪುಸ್ತಕಗಳಿಗೆ ಕೂಡಾ ಒಳ್ಳೆಯ ಬೇಡಿಕೆ ಇದೆ ಎಂದು ನಾನು ಕೇಳಿದ್ದೇನೆ. ಹಲವು ಪುಸ್ತಕದಂಗಡಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳ ಪುಸ್ತಕ ಮಳಿಗೆಗಳಲ್ಲಿ ಈ ಬಗ್ಗೆ ಇರುವ ಪುಸ್ತಕಗಳು ಹೆಚ್ಚುಹೆಚ್ಚಾಗಿ ಮಾರಾಟವಾಗುತ್ತವೆ ಎಂಬುದರ ಬಗ್ಗೆಯೂ ಕೇಳಿ ತಿಳಿದುಕೊಂಡಿದ್ದೇನೆ. ಈ ದೃಷ್ಟಿಯಲ್ಲಿ, ಪುಸ್ತಕಗಳನ್ನು ಹೆಚ್ಚು ಓದಿದಷ್ಟೂ, ಮನನ ಮಾಡಿದಷ್ಟೂ ಕೂಡ ನಮಗೆ ನಮ್ಮ ಮನಸ್ಸಿನ ಬಗ್ಗೆ ಸ್ಪಷ್ಟವಾದ ಕಲ್ಪನೆ ಮೂಡತೊಡಗುತ್ತದೆ. ಮತ್ತೊಬ್ಬರ ಮಾನಸಿಕ ಖಾಯಿಲೆಗಳ ಬಗ್ಗೆಯೂ ನಮಗೆ ತಿಳುವಳಿಕೆ ಬರುತ್ತದೆ. ಈ ಓದುವ ಕಾರ್ಯ ಹೆಚ್ಚಾಗಬೇಕು. ಪುಸ್ತಕಗಳು ಹೆಚ್ಚು ಓದುಗರನ್ನು ತಲುಪಬೇಕು. ಈ ಕೆಲಸವಾದರೆ, ಬಹುಶಃ, ಮಾನಸಿಕ ರೋಗಗಳು ದೂರವಾಗಬಹುದೇನೋ ಎಂದು ನನಗನಿಸುತ್ತದೆ.

ಪ್ರಶ್ನೆ: ಮಾನಸಿಕ ಅಸ್ವಸ್ಥತೆಯುಳ್ಳವರಿಗೆ ಸಮಾಜ ಯಾಕೆ ಅನುಕಂಪ ತೋರಿಸಬೇಕು?

ನಾ.ಡಿಸೋಜ: ಅನುಕಂಪ ಅನ್ನುವದಕ್ಕಿಂತ, ಅವರ ಬಗ್ಗೆ ವಿಶೇಷವಾದ, ಚಿಕಿತ್ಸಾಪೂರ್ವಕ ಕಾಳಜಿ ದೃಷ್ಟಿಯಿಂದ ಅವರನ್ನು ನಾವು ಕಾಣಬೇಕು. ಅನುಕಂಪ ತೋರಿಸಿದರೆ ಅವರ ಮನಸ್ಸಿಗೆ ಇನ್ನೂ ಹೆಚ್ಚು ಕಿರುಕುಳ ಉಂಟಾಗಬಹುದು. ಬಹಳ ನೋವಾಗಬಹುದು. ಅನುಕಂಪದ ಬದಲಿಗೆ, ಅವರಲ್ಲಿ ಧೈರ್ಯವನ್ನು ತುಂಬುವಂತಹ, ಅವರ ಖಾಯಿಲೆ ಗುಣಮುಖವಾಗಲು ಒಂದು ದಾರಿಯನ್ನು ತೋರಿಸುವಂತಹ ಕೆಲಸವನ್ನು ಮಾಡಿದರೆ, ಬಹುಶಃ, ಮಾನಸಿಕ ಅಸ್ವಸ್ಥರು ಸಮಾಜದ ನಡುವೆಯೂ ಕೂಡ ನೆಮ್ಮದಿಯಿಂದ ಇರಲಿಕ್ಕೆ ಸಾಧ್ಯವಿದೆ. ಆದರೆ, ಇಂದು ಏನಾಗಿದೆ ಅಂದರೆ, ಮಾನಸಿಕ ರೋಗಿಗಳು ಮಾತ್ರವಲ್ಲ, ಆ ರೋಗಗಳಿಗೆ ಚಿಕಿತ್ಸೆಯನ್ನು ನೀಡುವ ವೈದ್ಯರನ್ನೂ ಕೂಡ ನಾವು ಬೇರೆ ರೀತಿಯಲ್ಲಿಯೇ ನೋಡುತ್ತೇವೆ. ಈ ಅಭಿಪ್ರಾಯ ಹೋಗಬೇಕು. ಇವತ್ತು ವಿದೇಶದಲ್ಲಿ ಯಾವುದೇ ಮಾನಸಿಕ ತೊಂದರೆಗೂ, ವ್ಯಕ್ತಿ ಕೂಡಲೇ ವೈದ್ಯರನ್ನು ಅಥವಾ ಮನಃಶ್ಯಾಸ್ತ್ರಜ್ಞರನ್ನು ಕಾಣುತ್ತಾನೆ. ನಮ್ಮಲ್ಲಿ ಆ ಪದ್ಧತಿ ಇಲ್ಲ. ಮನಃಶ್ಯಾಸ್ತ್ರಜ್ಞರ ಬಳಿಗೆ ಹೋಗುವುದಕ್ಕೇ ನಾವು ಹಿಂಜರಿಯುತ್ತೇವೆ ಮತ್ತು ಅವರನ್ನು ಕಾಣಲಿಕ್ಕೇ ನಮ್ಮಲ್ಲಿ ಒಂದು ರೀತಿಯ ಹಿಂಜರಿಕೆ ಇದೆ. ಇದನ್ನು ನಾವು ಬಿಟ್ಟರೆ, ಬಹುಶಃ, ಆ ವೈದ್ಯರಿಂದ ನಮಗೆ ತುಂಬ ಅನುಕೂಲವಾಗುತ್ತದೆಯೆಂದು ನಾನು ಅಂದುಕೊಂಡಿದ್ದೇನೆ.

ಪ್ರಶ್ನೆ: ಮಾನಸಿಕ  ಆರೋಗ್ಯದ  ಕುರಿತು ಬೆರೆ ಏನಾದರೂ ವಿಚಾರಗಳನ್ನು ನೀವು ಹೇಳಲು ಇಷ್ಟಪಡುವಿರಾ?  

ನಾ.ಡಿಸೋಜ: ಒಂದು ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ಇವತ್ತು ‘ಸೆಲ್ಫಿ’ ಎನ್ನುವ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಇದು ನಾಳೆ ಒಂದು ಮಾನಸಿಕ ರೋಗವಾಗಿ ಪರಿವರ್ತನೆಗೊಳ್ಳಬಹುದೇ ಎಂಬ ಭೀತಿ ನನ್ನನ್ನು ಕಾಡುತ್ತಿದೆ. ಒಂದು ಕಾಲದಲ್ಲಿ ಕನ್ನಡಿಯೆದುರಿಗೆ ನಿಂತು ನಾವು ನಮ್ಮ ಸೌಂದರ್ಯವನ್ನು ನೋಡಿ ಸಂತೋಷಪಟ್ಟು, ಆ ಕನ್ನಡಿಯನ್ನು ಮೋಹಿಸುತ್ತಾ ಇದ್ದೆವು. ಈಗ ಕನ್ನಡಿ ಹೊರಟು ಹೋಗಿ ನಮ್ಮ ಕೈಗೆ ‘ಸೆಲ್ಫಿ’ ಬಂದಿದೆ. ಈ ಸೆಲ್ಫಿಯಿಂದಾಗಿ, ನಮ್ಮನ್ನು ನಾವೇ ಹೊಗಳಿಕೊಳ್ಳುವುದು ಇವತ್ತಿನ ಕಾಲದಲ್ಲಿ ಹೆಚ್ಚಾಗುತ್ತಿದೆ. ನಾನು ತೆಗೆದ ಸೆಲ್ಫಿಯನ್ನು ಬಹಳ ಜನ ನೋಡದೇ ಇದ್ದಾಗ, ಮೆಚ್ಚಕೊಳ್ಳದೇ ಇದ್ದಾಗ, ಅದರ ಬಗ್ಗೆ ಮಾತನಾಡದೇ ಇದ್ದಾಗ, ನನ್ನಲ್ಲೊಂದು ರೀತಿಯ ಮನೋರೋಗ ಪ್ರಾರಂಭವಾಗುತ್ತದೆ. ನಾನು ಯಾರ ಕಣ್ಣಿಗೂ ಬೀಳುತ್ತಿಲ್ಲವೇನೋ, ಯಾರೂ ನನ್ನನ್ನು ಗಮನಿಸುತ್ತಿಲ್ಲವೇನೋ ಅಂದುಕೊಂಡು ನಾವು ಕೊರಗಲು ಆರಂಭಿಸುತ್ತೇನೆ. ಈ ಸೆಲ್ಫಿಯ ಕಾರಣದಿಂದಾಗಿ ಇವತ್ತು ಈ ಕೊರಗು ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಕೂಡಾ ಸೆಲ್ಫಿ ತೆಗೆಯುವ ಮೂಲಕ ತಮ್ಮನ್ನು ಸಾವಿರಾರು ಜನ ನೋಡಬೇಕೆಂದು ಬಯಸುತ್ತಾರೆ. ಆ ಬಯಕೆ ಯಾವಾಗ ಈಡೇರುವುದಿಲ್ಲವೋ ಆಗ ವ್ಯಕ್ತಿ ಮನೋರೋಗಿಯಾಗುತ್ತಾನೆ. ಇದರ ಬಗ್ಗೆ, ಮತ್ತು ಇಂದು ಆಧುನಿಕತೆಯ ಹೆಸರಿನಲ್ಲಿ ಏನೇನು ಬರುತ್ತಾ ಇವೆ, ಅವೆಲ್ಲವುಗಳ ಬಗ್ಗೆ ನಾವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ನನಗೆ ಅನಿಸುತ್ತದೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org