We use cookies to help you find the right information on mental health on our website. If you continue to use this site, you consent to our use of cookies.

ಮನಕ್ಕೆ ಕವಿದಿದ್ದ ಮುಸುಕು

ನಾನು ಪರ್ಫೆಕ್ಶನಿಸ್ಟ್ ಆಗುವ ಅಗತ್ಯವಿಲ್ಲ ಎಂದು ಮನವರಿಕೆಯಾಯಿತು.

24ರ ಹರೆಯದ ನಾನು, ಕಾಲೇಜಿನಿಂದ ಹೊರಬಂದಂತೆಯೇ, ಸಣ್ಣ ಶಿಶುವಿನಂತೆ ನಾ ಕಂಡ ಪ್ರತಿ ಹೊಸ ವಸ್ತು, ವಿಷಯಗಳನ್ನೂ ಬಹಳ ಅಚ್ಚರಿಯಿಂದ ನೋಡಿದೆ. ನರ್ಸರಿಯಿಂದ ಹಿಡಿದು ಎಂ.ಕಾಂ ಪದವಿ ಗಳಿಸುವವರೆಗೂ ನಾ ಕಂಡ ಹಾಗು ನಂಬಿದ ಒಂದೇ ಸತ್ಯ ‘ಯಶಸ್ಸು’. ನೃತ್ಯದಲ್ಲಿ, ಓದಿನಲ್ಲಿ ಮೇಲುಗೈ ಇತ್ತು. ಆಪ್ತ ಗೆಳೆಯರು, ಮನೆಯಲ್ಲಿ ಸುರಕ್ಷಿತ ವಾತಾವರಣ, ಒಳ್ಳೆ ಸಂಬಳ ನೀಡುವ ಕೆಲಸ. ಹೀಗಿರುವಾಗ ಖಿನ್ನತೆಗೊಳಗಾಗುವಶಷ್ಟು ಸಮಸ್ಯೆಯಾದರೂ ಏನು? ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು ಎಂದರಿಯದ ಯಾರಾದರೂ ಕೇಳುವ ಪ್ರಶ್ನೆಯಿದು.

ಶುಭ್ರವಾಗಿ, ಹೊಸ ಬಟ್ಟೆ ಧರಿಸಿ ಮೊದಲ ದಿನ ನನ್ನ ಆಫೀಸಿಗೆ ತೆರಳಿದೆ. ಹೊಸ ಗೆಳೆಯರನ್ನು ಸಂಪಾದಿಸಿದೆ, ಬಹಳಷ್ಟು ವಿಷಯಗಳನ್ನು ಅರಿತೆ, ಕಲಿತೆ. 2015ರ ಆಗಸ್ಟ್ ತಿಂಗಳು ಹೀಗೆ ಕಳಿಯಿತು.

ನನ್ನ ತರಬೇತಿ ಮುಗಿದು ಯಾವಾಗ ನನಗೆ ಕೆಲಸಗಳನ್ನು ವಹಿಸಲಾಯಿತೋ, ಅಲ್ಲಿಂದ ಸಮಸ್ಯೆಗಳ ಸುರಿಮಳೆಯೇ ಬಂದೊದಗಿತು. ಒಂದು ವಾರವಾದರೂ ಕಾಡಿದ ಡಯೆರಿಯಾ (ಲೂಸ್ ಮೋಶನ್) ಗಮನಿಸಿ, ನಾ ತಿನ್ನುವ ಆಹಾರ ಪದ್ಧತಿಯನ್ನು ದೂಷಿಸಿದೆ. ಒಂದು ತಿಂಗಳ ಮಟ್ಟಿಗೆ ಔಷಧಿಗಳನ್ನು ಸೇವಿಸಿದರೂ ಸಮಸ್ಯೆ ಹೆಚ್ಚಾಗಿ, ಜೊತೆಗೆ ಉಸಿರಾಟಕ್ಕೆ ತೊಂದರೆಯನ್ನೂ ಒಡ್ಡಿತು. ವೈದ್ಯರು ನನಗೆ ಯಾವ ಯಾವ ಸಂದರ್ಭಗಳಲ್ಲಿ ಈ ರೀತಿಯ ಅನುಭವಗಳು ಎದುರಾಗುತ್ತವೆ ಎಂದು ಗಮನಿಸಲು ಹೇಳಿದರು. ನಾ ಮೊದಲು ಗಮನಿಸಿದ ಸಂದರ್ಭ, ನನಗೆ ಪ್ರಥಮವಾಗಿ ಒಂದು ಕೆಲಸ ಕಲಿಸಲಾಗುತಿತ್ತು ಆದರೆ ನನಗೆ ಒಂದೇ ಸಲ ಅದರ ಗ್ರಹಿಕೆ ಸಾಧ್ಯವಾಗಲಿಲ್ಲ.

ಇದಾದ ನಂತರ ಆಫೀಸ್ ತಲುಪುವುದು, ನನ್ನ ಮ್ಯಾನೇಜರ್ ನ ಮೈಲ್ ಓದುವುದು, ಸಹೋದ್ಯೋಗಿಗಳೊಂದಿಗೆ ಮಾತನಾಡುವುದು, ಒಂಟಿತನದ ಭಾವನೆ, ಭಯ ಹೀಗೆ ಎಲ್ಲಾ ಸಂದರ್ಭಗಳಲ್ಲೂ ಈ ಸಮಸ್ಯೆ ಎದುರಾಗತೊಡಗಿತು. ಡಾಕ್ಟರ್ ಇದನ್ನು ಐ.ಬಿ.ಎಸ್ (ಇರ್ರಿಟಬಲ್ ಬೊವೆಲ್ ಸಿಂಡ್ರೋಮ್) ಎಂದರು. ಕೆಲಸ ಬಿಡುವುದೇ ಸೂಕ್ತ ಎನಿಸಿ ರಾಜೀನಾಮೆ ನೀಡಿದೆ.

ಆದರೆ, ಇದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ನನ್ನ ದೇಹಸ್ಥಿತಿ ಮತ್ತಷ್ಟು ಹದಗೆಟ್ಟು ನಿದ್ರಾಹೀನತೆ, ಉಸಿರಾಟ ತೊಂದರೆ, ಆಲಸ್ಯ, ತೂಕದ ಇಳಿತ, ತಲೆ ಸುತ್ತು, ಕಡಿಮೆಯಾದ ರಕ್ತದೊತ್ತಡ ಹಾಗು ಮಾನಸಿಕ ವೇದನೆಯಂತಹ ಸಮಸ್ಯೆಗಳು ಕಾಣಿಸಿಕೊಂಡವು. ಐ.ಬಿ.ಎಸ್ ಗೆ ಚಿಕಿತ್ಸೆ ಪಡೆದು ಕೆಲ ಕಾಲ ಆರಾಮೆನಿಸಿತು. ನೃತ್ಯ ಕ್ಷೇತ್ರದಲ್ಲಿ ಮುಂದಿನ ಹೆಜ್ಜೆಯಿಡಲು ಸರಿಯಾದ ಸಮಯ ಎಂದುಕೊಂಡು ಮುನ್ನುಗ್ಗಿ, ಹಲವಾರು ತೊಡಕುಗಳನ್ನೆದುರಿಸಿ ಪುನಃ ಸೋತೆ. ನಂಬಿಕೆ, ಆಸೆಗಳನ್ನು ತೊರೆದು, ನನ್ನ ಬಗ್ಗೆ ನನಗೇ ಜಿಗುಪ್ಸೆ ಉಂಟಾಯಿತು. ಕಾರಣವಿಲ್ಲದೆ ದುಃಖಿಸುತ್ತಿದ್ದೆ, ಅಳುತ್ತಿದ್ದೆ. ಯಾವುದೇ ರೋಗವನ್ನು ತಡೆಗಟ್ಟಲು, ಸಹಿಸಲು ಅಸಮರ್ಥವಾಗಿದ್ದ ನನ್ನ ದೇಹ ನನಗೆ ಬೇಡವೆನಿಸಿತು. ಇಡೀ ದಿನ ಗೋಡೆಯನ್ನು ದಿಟ್ಟಿಸಿ ನೋಡುತ್ತಾ ಕೂರುತ್ತಿದ್ದೆ.

ಸೆಪ್ಟೆಂಬರ್ 2016ರ ವೇಳೆಗೆ ಆತ್ಮಹತ್ಯೆಯ ಆಲೋಚನೆ ಬಂದಾಗ ನನಗೆ ಸಹಾಯದ ಅಗತ್ಯವಿದೆ ಎಂದು ಅರಿವಾಯಿತು. ಆದರೆ ಮಾನಸಿಕ ಸಮಸ್ಯೆಗಳ ಬಗ್ಗೆ ಅತಿ ಕಡಿಮೆ ಅರಿವಿರುವ ಈ ಸಮಾಜದಲ್ಲಿ, ಸಲಹೆ ಮತ್ತು ನೆರವಿನ ಕೊರತೆಯಿದೆ. ಅಂತರ್ಜಾಲದಲ್ಲಿ ಬಹಳಷ್ಟು ಓದಿ ನನಗಾಗುತ್ತಿರುವುದು ವೈದ್ಯರಿಂದ ಗುಣಪಡಿಸಬಹುದಾದ ಮತ್ತು ಮನಸ್ಸು-ದೇಹಗಳ ಪರಸ್ಪರ ಯುದ್ಧವೆಂದರಿತೆ.

ಸರಿಯಾದ ಸಹಾಯ ಪಡೆಯುವುದು ಬಹಳ ಮುಖ್ಯ. ನಿಮ್ಮ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಲು, ನೀವು ಕೇಳುಗರನ್ನು ನಂಬಿ ಅವರೊಂದಿಗೆ ಬಾಂಧವ್ಯ ಬೆಳೆಸುವುದು ಮುಖ್ಯ. ನಾನು ಹಲವು ಆಪ್ತಸಮಾಲೋಚಕರನ್ನು, ಸಹಾಯಕ ದೂರವಾಣಿಗಳನ್ನು ಸಂಪರ್ಕಿಸಿದೆ, ಆದರೆ ಅವರೆಲ್ಲರ ಮಾತು, ಸಲಹೆ ನನಗೆ ಕಿರಿಕಿರಿ ಉಂಟುಮಾಡಿತು.

ನನ್ನ ಅಕ್ಕ ಸಮಸ್ಯೆಯನ್ನು ಆಲಿಸಿ ಮನೋರೋಗ ತಜ್ಞರನ್ನು ಪರಿಚಯಿಸಿದಳು. ಆದರೆ ಇದರ ಅಗತ್ಯವಿಲ್ಲ, ಎಲ್ಲಾ ನನ್ನ ಭ್ರಮೆ ಎಂಬುದು ಅವಳ ಅಭಿಪ್ರಾಯವಾಗಿತ್ತು. ಎಲ್ಲರೂ ನನ್ನನ್ನು ಸೋಂಬೇರಿ ಮತ್ತು ದುರ್ಬಲ ಎಂದರು. ಇಪ್ಪತ್ನಾಲ್ಕು ಗಂಟೆ ನಿರತಳಾಗಿದ್ದ ನಾನು, ಏನೂ ಮಾಡದೆ ಕೂರುವವರೆಗೆ ಕರೆತಂದಿದ್ದ ಈ ಕಾಲದಲ್ಲಿ ನಾನು ಯಾರೆಂಬ ಅರಿವು ನನಗೇ ಇಲ್ಲದಾಯಿತು.

ಇದೊಂದು ವೈದ್ಯಕೀಯ ಸಮಸ್ಯೆ ಹೌದೋ ಅಲ್ಲವೋ ಎಂದು ತಿಳಿಯಲು ಕಡೆಯ ಅವಕಾಶ ನೀಡುವಂತೆ ಬಿನ್ನಮಿಸಿ ವೈದ್ಯರನ್ನು ಕಂಡೆ. ಆಗ ತಿಳಿಯಿತು 5 ವರ್ಷಗಳಿಂದಲೂ ಅಸಡ್ಡೆ ಮಾಡಿದ ಒತ್ತಡ ಸಂಬಂಧಿತ (stress related) ಸಮಸ್ಯೆಗಳು ಐ.ಬಿ.ಎಸ್ ಗೆ ತಿರುಗಿ ಅದು ತೀವ್ರ ಖಿನ್ನತೆ ಹಾಗು ಆತಂಕಕ್ಕೆ ಎಡೆ ಮಾಡಿದೆ ಎಂದು.

ಅವರೊಂದಿಗಿನ ಪ್ರತಿಯೊಂದು ಸೆಶನ್, ನನಗೆ ನನ್ನ ಹಾಗು ನನ್ನ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿದೆ. ನಾನು ಯಾವಾಗಲೂ ಮುಂಚೂಣಿಯಲ್ಲಿರಬೇಕಿಲ್ಲ, ಎಲ್ಲಾ ಪರೀಕ್ಷೆಗಳಲ್ಲೂ ಪ್ರಥಮ ಸ್ಥಾನ ಗಳಿಸಬೇಕಿಲ್ಲ, ಹೇಳಿಕೊಟ್ಟ ಮೊದಲ ಬಾರಿಗೇ ವಿಷಯಗಳನ್ನು ಗ್ರಹಿಸಬೇಕಿಲ್ಲ, ನಾನು perfectionist ಆಗುವ ಅಗತ್ಯವಿಲ್ಲ ಎಂದು ಮನವರಿಕೆಯಾಯಿತು.

ಇಂದು ಹೊರಗಿನ ಪ್ರಪಂಚ ಇದ್ದಂತೆಯೇ ಇದೆ, ಆದರೆ ನಾನು ಬದಲಾದ ವ್ಯಕ್ತಿಯಾಗಿದ್ದೇನೆ. ಔಷಧಿ, ಚಿಕಿತ್ಸೆ ಮತ್ತು ಸ್ವವಿಶ್ಲೇಷಣೆಯಿಂದಾಗಿ ನಾನು ಹೊಸದೊಂದು ಕೆಲಸ, ಹವ್ಯಾಸಗಳನ್ನು ಮುಂದುವರಿಸುತ್ತಾ, ಬದುಕನ್ನು ಸಕಾರಾತ್ಮಕತೆಯಿಂದ ಕಾಣುತ್ತೇನೆ. ನನ್ನ ದೈಹಿಕ ಸಮಸ್ಯೆಗಳನ್ನು ಇಂದು ನಾನು ನಿಭಾಯಿಸುವ, ಒಪ್ಪಿಕೊಳ್ಳುವ ರೀತಿ ಈಗ ಬದಲಾಗಿದೆ.

ಪ್ರತಿಯೊಬ್ಬರ ಸಹಿಷ್ಣುತೆಯ ಮಿತಿ ಬೇರೆಯಾಗಿರುತ್ತದೆ. ಎಲ್ಲಾ ನೋವು, ದುಃಖ, ಹಿಂಸೆಗಳನ್ನು ‘ಪ್ರಬಲ’ ಅಥವಾ ‘ಹೆಣ್ಣು’ ಎಂಬ ಹೆಸರಿಗೋಸ್ಕರ ಸಹಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಮನಸ್ಸು, ದೇಹ ನಿರಾಕರಿಸುವುದನ್ನು ಮಾಡಬೇಡಿ. ಸೂಕ್ತ ಸಮಯದಲ್ಲಿ ಸಹಾಯ ಪಡೆದು ನಿರಾಳರಾಗಿ. ನೆಮ್ಮದಿಯ ಬದುಕು ನಡೆಸಿ. 

ನಿರೂಪಕರ ಅನುಮತಿಯಿಂದ ದಾಖಲಿಸಿದ ಸತ್ಯ ಘಟನೆಯಿದು. ಗೌಪ್ಯತೆಯ ಕಾರಣಕ್ಕಾಗಿ ಹೆಸರನ್ನು ಉಪಯೋಗಿಸಿಲ್ಲ.