ಮಾನಸಿಕ ಅಸ್ವಸ್ಥತೆ ಹಾಗೂ ಹಿಂಸಾ ಪ್ರವೃತ್ತಿ

ಮನೋ ರೋಗಿಗಳೆಲ್ಲರೂ ಹಿಂಸಾ ಪ್ರವೃತ್ತಿಯುಳ್ಳವರು ಎಂದು ತಿಳಿಯುವುದು ಯಾವ ದೃಷ್ಟಿಯಿಂದಲೂ ಸರಿಯಲ್ಲ. ಈ ಪ್ರವೃತ್ತಿಯಿಂದ ರೋಗಿಗಳಿಗೆ, ಅವರ ಕುಟುಂಬಗಳಿಗೆ ಅನ್ಯಾಯವಾಗಿ ಕಳಂಕ ಅಂಟಿಕೊಳ್ಳುತ್ತದೆ.

ಒಬ್ಬ ಮನುಷ್ಯ ಇನ್ನೊಬ್ಬನ ಮೇಲೆ ತೋರಿಸಬಹುದಾದ ಹಿಂಸೆ ಅಥವಾ ಕ್ರೌರ್ಯ ಪ್ರವೃತ್ತಿ ಹೊಸದೇನಲ್ಲ. ಅನಾದಿ ಕಾಲದಿಂದಲೂ ಮಾನವ ಜನಾಂಗದಲ್ಲಿ ಬೆಳೆದುಕೊಂಡು ಬಂದಿರುವ ಈ ಪಾಶವೀ ಪ್ರವೃತ್ತಿ ನಾಗರಿಕ ಸಮಾಜಕ್ಕೆ ಒಂದು ಕಳಂಕ. ಮಾನವನ ವಿಕಾಸವಾಗಿ ನಾಗರಿಕತೆ ಬೆಳೆದಂತೆಲ್ಲ ಹಿಂಸಾತ್ಮಕ ಸ್ವಭಾವವೆನ್ನುವುದು ಒಂದು ಪಿಡುಗಿನಂತೆ ಕಂಡುಬರುತ್ತದೆ. ಈ ಕಾಲದಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಇಂತಹ ಪ್ರವೃತ್ತಿಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯನ್ನೂ ನೀಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಮಾನಸಿಕ ರೋಗಿಗಳನ್ನು ನಮ್ಮ ಸಮಾಜ ನೋಡುವ ರೀತಿಯೇ ಭಿನ್ನ. ಮಾನಸಿಕ ರೋಗಿಗಳಲ್ಲಿ ಕಂಡು ಬರುವ ಹಿಂಸಾತ್ಮಕ ಸ್ವಭಾವವನ್ನು ನಮ್ಮ ಸಮಾಜ ವಿಶೇಷತಃ ಕಳಂಕದಿಂದ ನೋಡುತ್ತದೆ. ಮನೋರೋಗಿಗಳು ಅಂದರೆ ಸಾಕು, ಅವರಿಂದ ಸಮಾಜಕ್ಕೆ ಆತಂಕ, ಅಪಾಯ ಎಂಬ ನಂಬಿಕೆ ಬಲವಾಗಿ ಬೇರೂರಿಬಿಟ್ಟಿದೆ. ಈ ನಂಬಿಕೆ ಸುಲಭವಾಗಿ ಬದಲಾಗುವ ಯಾವ ಲಕ್ಷಣಗಳೂ ಸಧ್ಯಕ್ಕೆ ಕಾಣುತ್ತಿಲ್ಲ.

ಮಾನಸಿಕ ಅಸ್ವಸ್ಥತೆ ಅಂದಾಕ್ಷಣ ಬೇರೆ ಬೇರೆ ತರಹದ ಸಮಸ್ಯೆಗಳಿರುವ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸುವುದು ಅವಶ್ಯಕವಾಗಿರುತ್ತದೆ.

  • ಮೊದಲನೆಯ ಗುಂಪು: ತೀವ್ರವಾದ ಮಾನಸಿಕ ರೋಗವುಳ್ಳವರು (ಚಿತ್ತವಿಕಲತೆ, ಬೈಪೋಲಾರ್ ಖಾಯಿಲೆ, ತೀವ್ರವಾದ ಖಿನ್ನತೆ, ತೀವ್ರಸ್ವರೂಪದ ಗೀಳುರೋಗ ಸಮಸ್ಯೆ ಇತ್ಯಾದಿ)
  • ಎರಡನೆಯ ಗುಂಪು: ಈ ಗುಂಪಿನಲ್ಲಿ ವ್ಯಕ್ತಿತ್ವ ದೋಷಗಳುಳ್ಳ ರೋಗಿಗಳು ಬರುತ್ತಾರೆ. ಇತರರೊಂದಿಗೆ ವ್ಯವಹರಿಸುವ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ವಿಶಿಷ್ಟ ಸ್ವರೂಪದ್ದಾಗಿ ಕಂಡುಬರುತ್ತದೆ. ಹಾಗಾಗಿ ಪ್ರತಿ ಮನುಷ್ಯನೂ ವಿಭಿನ್ನ ವ್ಯಕ್ತಿತ್ವವುಳ್ಳವನೇ ಆಗಿರುತ್ತಾನೆ. ಈ ವ್ಯಕ್ತಿತ್ವದಲ್ಲಿಯೇ ದೋಷಗಳು ಕಾಣಿಸಿಕೊಂಡಾಗ, ಅಂತವರು ತಮಗೆ ತಾವೇ ಯಾತನೆಗೊಳಗಾಗುತ್ತಾರೆ. ತಮ್ಮ ಕೆಲಸಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಅಸಮರ್ಥರಾಗುತ್ತಾರೆ. ಕೆಲವೊಮ್ಮೆ ತಮ್ಮ ಕುಟುಂಬಕ್ಕೂ, ಸಮಾಜಕ್ಕೂ ಹೊರೆಯಾಗಿಬಿಡುತ್ತಾರೆ.
  • ಮೂರನೆಯ ಗುಂಪು: ಮದ್ಯ ಹಾಗೂ ಇತರ ಮಾದಕ ವಸ್ತುಗಳ ವ್ಯಸನಕ್ಕೊಳಗಾಗಿರುವ ಜನರದ್ದು.ಈ ಗುಂಪಿಗೆ ಸೇರುವ ಜನರನ್ನೂ ಸಹ ಮಾನಸಿಕ ರೋಗಿಗಳು ಎಂದೇ ಪರಿಗಣಿಸಲಾಗುತ್ತದೆ. ಆದರೆ, ಸಮಾಜದ ಕೆಲವು ಸ್ತರಗಳಲ್ಲಿ ಇಂತವರನ್ನು ರೊಗಿಗಳೆಂದು ನೋಡುವುದಿಲ್ಲ. ಮದ್ಯ ಹಾಗೂ ಮಾದಕ ಪದಾರ್ಥಗಳನ್ನು ಸೇವಿಸಿದಾಗ ಉಂಟಾಗುವ ಅಮಲಿನ ಮತ್ತಿನಲ್ಲಿ ವಿವೇಚನಾ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ಈ ರೀತಿಯ ಜನರು ತಾವೂ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುವುದಲ್ಲದೆ ಸಮಾಜಕ್ಕೂ ಹಾನಿಯನ್ನುಂಟುಮಾಡುತ್ತಾರೆ.

ಮಾನಸಿಕ ಅಸ್ವಸ್ಥತೆ ಹಾಗೂ ಕ್ರೌರ್ಯಪ್ರವೃತ್ತಿಯ ಕುರಿತು ಮಾತನಾಡುವಾಗ ನಾವು ಮೇಲೆ ಹೇಳಿದ ಯಾವ ಗುಂಪಿನ ಜನರ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದರ ಕುರಿತು ಗಮನ ಹರಿಸಬೇಕು. ಈ ಮೂರೂ ಗುಂಪಿನ ಜನರನ್ನು ಒಟ್ಟಾಗಿ ನೋಡಿದರೆ, ಇವರಲ್ಲಿ ಕಂಡುಬರುವ ಹಿಂಸಾ ಪ್ರವೃತ್ತಿ ಸಾಮಾನ್ಯ ಜನರಿಗಿಂತಲೂ ಕೊಂಚ ಹೆಚ್ಚೇ ಎನ್ನಬಹುದು. ಆದರೆ ವ್ಯಕ್ತಿತ್ವ ದೋಷ ಸಮಸ್ಯೆಯುಳ್ಳವರು ಹಾಗೂ ಮಾದಕ ವ್ಯಸನಿಗಳನ್ನು ಹೊರತು ಪಡಿಸಿ, ಕೇವಲ ತೀವ್ರ ಸ್ವರೂಪದ ಮನೋರೋಗಿಗಳನ್ನು ಗಣನೆಗೆ ತೆಗೆದುಕೊಂಡರೆ, ಸಾಮಾನ್ಯ ಜನರಿಗಿಂತಲೂ ಇವರಲ್ಲಿ ಹಿಂಸಾ ಪ್ರವೃತ್ತಿ ಬಹಳ ಕಡಿಮೆ. ಮಾನಸಿಕ ಅಸ್ವಸ್ಥರಲ್ಲಿ ಹಿಂಸಾಪ್ರವೃತ್ತಿ ಕಂಡುಬಂದಾಗ ಕೆಲವೊಂದು ಅಂಶಗಳನ್ನು ಗಮನಿಸುವುದು ಅವಶ್ಯಕ.

ಆತ/ಆಕೆ ತೀವ್ರವಾದ ಮನೋರೋಗದಿಂದ ಬಳಲುತ್ತಿರುವರೇ ಎಂಬುದನ್ನು ಮೊದಲು ಗಮನಿಸಬೇಕು. ರೋಗ ಇನ್ನೂ ಸಕ್ರಿಯವಾಗಿರುವಾಗ ಕ್ರೌರ್ಯ ಪ್ರದರ್ಶನವಾಗಿದೆಯೇ ಅಥವಾ ಖಾಯಿಲೆಯಿಂದ ಚೇತರಿಸಿಕೊಂಡ ನಂತರದಲ್ಲಿ ವ್ಯಕ್ತಿಯು ಹಿಂಸೆಗೆ ಇಳಿದಿದ್ದಾನೆಯೇ ಎಂಬುದನ್ನು ಗಮನಿಸುವುದು ಕೂಡ ಮಹತ್ವದ್ದು. ಖಾಯಿಲೆಯಿಂದ ಗುಣಮುಖನಾದ ವ್ಯಕ್ತಿ ಹಿಂಸೆ ಪ್ರದರ್ಶಿಸಿದಲ್ಲಿ, ಅದು ಸಾಮಾನ್ಯ ಮನುಷ್ಯನೊಬ್ಬನ ಪ್ರದರ್ಶಿಸಬಹುದಾದ ಹಿಂಸೆಯೆಂದೇ ಪರಿಗಣಿಸಬೇಕಾಗುತ್ತದೆ. ಈ ಅಂಶವನ್ನು ಗಮನದಲ್ಲಿಡದೇ ಹಿಂಸಾ ಪ್ರವೃತ್ತಿಗೆ ಮಾನಸಿಕ ಅಸ್ವಸ್ಥತೆಯನ್ನು ಜೋಡಿಸಿ, ಮನೋರೋಗಿಗಳೆಲ್ಲರೂ ಹಿಂಸಾಪ್ರವೃತ್ತಿಯುಳ್ಳವರು ಎಂದು ತಿಳಿಯುವುದು ಯಾವ ದೃಷ್ಟಿಯಿಂದಲೂ ಸರಿಯಲ್ಲ. ಈ ಪ್ರವೃತ್ತಿಯಿಂದ ರೋಗಿಗಳಿಗೆ, ಅವರ ಕುಟುಂಬಗಳಿಗೆ ಅನ್ಯಾಯವಾಗಿ ಕಳಂಕ ಅಂಟಿಕೊಳ್ಳುತ್ತದೆ. ಹೀಗಾಗುವುದರಿಂದ ಸಮಾಜದ ಮುಖ್ಯವಾಹಿನಿಯಿಂದ ಅವರು ದೂರವೇ ಉಳಿದುಬಿಡುತ್ತಾರೆ.

ಮಾನಸಿಕ ರೋಗಿಗಳು ಬೇರೆ ಬೇರೆ ಕಾರಣಗಳಿಂದ ಕ್ರೌರ್ಯದಲ್ಲಿ ತೊಡಗಬಹುದು. ಉದಾಹರಣೆಗೆ ಮೇನಿಯಾ ರೋಗಿಗಳು (ಉನ್ಮಾದ ಖಾಯಿಲೆ) ವಿನಾಕಾರಣ ಸಿಟ್ಟಾಗುವುದು, ತಮ್ಮ ಭಾವನೆಗಳ ಉದ್ರೇಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕ್ರೌರ್ಯ ಪ್ರದರ್ಶನಕ್ಕೆ ಆರಂಭಿಸಬಹುದು. ಹೊಡೆದಾಟ, ಬೈದಾಟ, ಮ್ಮೊಮ್ಮೆ ಮತ್ತೊಬ್ಬರ ಮೇಲೆ ದಾಳಿ ಮಾಡುವುದು ಇತ್ಯಾದಿ ಚಿಹ್ನೆಗಳು ಅಂತವರಲ್ಲಿ ಕಂಡುಬರಬಹುದು.

ಚಿತ್ತವಿಕಲ ರೋಗಿಗಳೂ ಸಹ ಕೆಲವೊಂದು ಪರಿಸ್ಥಿತಿಯಲ್ಲಿ ಕ್ರೌರ್ಯಕ್ಕೆ ಇಳಿಯಬಹುದು. ಉದಾಹರಣೆಗೆ ಖಾಯಿಲೆಯ ಕಾರಣಕ್ಕಾಗಿ ಇನ್ನೊಬ್ಬರ ಮೇಲೆ ತಪ್ಪುತಪ್ಪಾದ, ಸ್ವಯಂ ಕಲ್ಪಿತ ನಂಬಿಕೆಗಳು ಬೇರೂರಿರುತ್ತವೆ. ಬೇರೆಯವರಿಂದ ತನ್ನ ಪ್ರಾಣಕ್ಕೆ ಅಪಾಯವಿದೆಯೆಂದು ನಂಬಿದ ರೋಗಿಯು ತನ್ನ ಪ್ರಾಣ ರಕ್ಷಣೆಯ ಸಲುವಾಗಿ ಮತ್ತೊಬ್ಬರ ಮೇಲೆ ದಾಳಿಮಾಡಬಹುದು. ತನ್ನ ಸಂಗಾತಿಯು ಬೇರೊಬ್ಬರ ಜೊತೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಾರೆಂಬ ಅಪನಂಬಿಕೆಯಿಂದ ವ್ಯಕ್ತಿಯ ಮೇಲೆ ಅಥವಾ ಸಂಗಾತಿಯ ಮೇಲೆ ಹಿಂಸೆ ಅಥವಾ ಕ್ರೌರ್ಯವೆಸಗಬಹುದು. ಹೀಗೆ ಚಿತ್ರವಿಚಿತ್ರವಾದ ಅಪನಂಬಿಕೆಗಳು ಚಿತ್ತವಿಕಲ ರೋಗಿಗಳಲ್ಲಿ ಅಥವಾ ಬೇರೆ ಮನೋರೋಗಿಗಳಲ್ಲಿ ಖಾಯಿಲೆಯ ದೆಸೆಯಿಂದ ಕಾಣಿಸಿಕೊಳ್ಳಬಹುದು.

ಬುದ್ಧಿಮಾಂದ್ಯತೆಯುಳ್ಳ ರೋಗಿಗಳು ತಮ್ಮಲ್ಲಿನ ಬುದ್ಧಿಶಕ್ತಿಯ ಕೊರತೆಯಿಂದ ಭಾವನೆಗಳನ್ನು ಹತೋಟಿಯಲ್ಲಿಡುವ ಕೌಶಲ್ಯ ಹೊಂದಿರುವುದಿಲ್ಲ. ಬುದ್ಧಿಮಾಂದ್ಯರೂ ಸಹ ಹತ್ತು ಹಲವು ರೀತಿಯ ಮಾನಸಿಕ ರೋಗಗಳಿಗೆ ಈಡಾಗುವುದರಿಂದ ಆ ಸಂದರ್ಭಗಳಲ್ಲಿ ಕ್ರೌರ್ಯ ಪ್ರದರ್ಶಿಸಬಹುದು.

ಕ್ರೌರ್ಯವೆಂದಾಕ್ಷಣ ಬೇರೊಬ್ಬರ ಮೇಲೆ ಮಾತ್ರ ಪ್ರದರ್ಶನ ಮಾಡುವುದಲ್ಲ. ಮಾನಸಿಕ ರೋಗಿಗಳು ಎಷ್ಟೋಸಲ ತಮ್ಮ ಮೇಲೆಯೇ ಸಹ ಕ್ರೌರ್ಯವನ್ನು ಪ್ರದರ್ಶಿಸಿಕೊಳ್ಳುವುದಿದೆ. ಆತ್ಮಹತ್ಯೆಯ ಪ್ರಯತ್ನ ಇದಕ್ಕೆ ಒಳ್ಳೆಯ ಉದಾಹರಣೆ. ತಮ್ಮನ್ನು ತಾವು ಹೊಡೆದುಕೊಳ್ಳುವುದು, ಬೇರೆ ಜನರ ಗಮನವನ್ನು ತಮ್ಮತ್ತ ಸೆಳೆಯಲು ಕೈಮೇಲೆ ‘ಕಟ್ ಮಾರ್ಕ್’ ಗಳನ್ನು ಮಾಡಿಕೊಳ್ಳುವುದು ಇತ್ಯಾದಿಗಳೂ ಸಹ ಮಾನಸಿಕ ರೋಗಿಗಳಲ್ಲಿ ಕಂಡುಬರುವ ಸ್ವಯಂ ಹಿಂಸೆಯ ಪ್ರವೃತ್ತಿಗಳಾಗಿವೆ.

ಹೀಗೆ ಹಿಂಸೆ, ಕ್ರೌರ್ಯದ ಸ್ವಭಾವ ಬೇರೆ ಬೇರೆ ತೆರನಾದ ಮಾನಸಿಕ ರೋಗಿಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಸಿಗುತ್ತವೆ. ಮನೋರೋಗಿಗಳಲ್ಲಿ ಹಿಂಸೆ/ಕ್ರೌರ್ಯ ಪ್ರದರ್ಶಿಸುವ ರೋಗಿಗಳ ಪ್ರಮಾಣ ಬಹಳ ಕಡಿಮೆ. ಪ್ರಾಯಶಃ ಶೇ 5ಕ್ಕಿಂತ ಕಡಿಮೆ. ಇದರರ್ಥ 95% ಕ್ಕೂ ಹೆಚ್ಚು ಪ್ರಮಾಣದ ಜನ ಕ್ರೌರ್ಯ ಅಥವಾ ಹಿಂಸೆಯನ್ನು ಪ್ರದರ್ಶಿಸುವುದಿಲ್ಲ. ಅಲ್ಲದೆ, ರೋಗಿಗಳಿಗೆ ಕಳಂಕ ಹಚ್ಚಿದರೆ, ಅನ್ಯಾಯವಾಗಿ ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಾರೆ. ಇನ್ನೊಂದು ಮುಖ್ಯವಾದ ಅಂಶವೆಂದರೆ, ರೋಗಿಗಳ ಹಿಂಸೆ ಅಥವಾ ಕ್ರೌರ್ಯ ಸ್ವಭಾವಕ್ಕೆ ಮುಖ್ಯವಾದ ಕಾರಣ ಖಾಯಿಲೆ. ಬಹುತೇಕ ಸಂದರ್ಭಗಳಲ್ಲಿ ಈ ಖಾಯಿಲೆಯನ್ನು ಸರಿಯಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡುವುದರಿಂದ ಈ ಪ್ರವೃತ್ತಿ ಕಡಿಮೆಯಾಗುತ್ತದೆ.

ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುವುದರಿಂದ ಅದು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬಹುದು. ಈ ಹಂತದಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಮನೋರೋಗಿಗಳಲ್ಲಿ ಕಂಡುಬರುವ ಹಿಂಸಾ ಸ್ವಭಾವವೆಲ್ಲವನ್ನೂ ಚಿಕಿತ್ಸೆಯಿಂದ ಕಡಿಮೆ ಮಾಡಬಹುದು ಎಂದಲ್ಲ. ಕೆಲವೊಂದು ವ್ಯಕ್ತಿತ್ವದ ದೋಷಗಳಲ್ಲಿ ಈ ಹಿಂಸೆ/ಕ್ರೌರ್ಯ ಚಿಕಿತ್ಸೆಯಿಂದ ಹತೋಟಿಗೆ ಬರುವುದಿಲ್ಲ. ಇಂತವರನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ಅಗತ್ಯ ಕ್ರಮಗಳನ್ನು ಕೈಗೊಂಡು ಸಮಾಜವನ್ನು ರಕ್ಷಿಸಬೇಕಾಗುತ್ತದೆ.

ಯಾವುದೇ ಮನೋರೋಗವಿಲ್ಲದ ವ್ಯಕ್ತಿಗಳೂ ಸಹ ಹಿಂಸೆ/ಕ್ರೌರ್ಯ ಸ್ವಭಾವವನ್ನು ಪ್ರದರ್ಶಿಸುತ್ತಾರೆ. ಇದು ಸಮಾಜದಲ್ಲಿ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣುತ್ತೇವೆ. ಇದನ್ನು ಗಮನಿಸಿದಾಗ, ಮನೋರೋಗಿಗಳಿಗೆ ಮಾತ್ರ ಕಳಂಕ ಅಂಟಿಸುವುದು ಸರಿಯಲ್ಲ. ಅಥವಾ ಮನೋರೋಗಿಯಾದ ಕ್ಷಣ ಆತ/ಆಕೆ ಹಿಂಸೆ ಕ್ರೌರ್ಯವನ್ನು ಪ್ರದರ್ಶಿಸುತ್ತಾರೆ ಎಂದು ನಂಬುವ ಅಗತ್ಯವಿಲ್ಲ.

ಮನೋರೋಗಿಗಳು ಬೇರೆ ಮನುಷ್ಯರ ತರಹ ಗೌರವಕ್ಕೆ, ಆದರಣೆಗೆ ಅರ್ಹರು ಎಂಬುದನ್ನು ಮನಗಾಣಬೇಕು. ಬೇರೆ ಸಾಮಾನ್ಯ ಜನರ ತರಹ ಅವರಿಗೂ ಮಾನವ ಹಕ್ಕುಗಳಿವೆ ಎಂಬುದನ್ನು ಮನಗಾಣಬೇಕು. ಹೀಗೆ ಕಾಣುವುದರಿಂದ ಅವರಿಗೆ ದೊರೆಯಬೇಕಾದ ಚಿಕಿತ್ಸೆ ಮತ್ತು ಸಹಾಯ ದೊರಕಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಅನುಕೂಲವಾಗುತ್ತದೆ.

ಹಾಗೆ ಮಾಡದಿದ್ದರೆ ಮನೋರೋಗಿಗಳು ಕಡೆಗಣಿತರಾಗಿ ನಾಗರಿಕ ಸಮಾಜದಿಂದ ದೂರವೇ ಉಳಿಯುತ್ತಾರೆ. ಹೀಗಾಗುವುದು ಸಾಮಾಜಿಕ ಸ್ವಾಸ್ಥ್ಯದ ಸಂಕೇತವಲ್ಲ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org