ಶ್ಯಾಮಲಾಳ ಕಥೆ: ಬೆಳಕಿನತ್ತ ಸಾಗಿದಾಗ

ಕಣ್ಮುಚ್ಚಿ ಕುಳಿತಾಗ  ನನ್ನ ಬಾಲ್ಯದ  ಸುಂದರವಾದ ದಿನಗಳು ನೆನಪಾಗುತ್ತದೆ. ಅದೆಷ್ಟು ಮುಗ್ಧವಾಗಿದ್ದೆ. ನನ್ನ ತಂದೆ, ತಾಯಿ ಅಣ್ಣಂದಿರ ಜೊತೆ ನನ್ನ ಜೀವನ ಸುಖವಾಗಿ ಸಾಗಿತ್ತು. ಯಾವುದೇ ಚಿಂತೆ ಅಥವ ಸಮಸ್ಯೆಗಳ ಊಹೆಯೂ ಇರಲಿಲ್ಲ.ಆಟ, ಪಾಟ,  ಮತ್ತು ಸ್ನೇಹಿತರೊಂದಿಗೆ ಒಡನಾಟ, ಇಷ್ಟೇ ನನ್ನ ಜಗತ್ತಾಗಿತ್ತು.

ಮದುವೆಯಾದಾಗ ನನಗೆ 18 ವರ್ಷ. ಗಂಡನ ಮನೆಯವರು  ಬಹಳ ಸಂಪ್ರದಾಯಸ್ಥರು. ಕುಟುಂಬದ ಹೆಣ್ಣುಮಕ್ಕಳು ಹೆಚ್ಚು ಮಾತನಾಡುವಂತಿಲ್ಲ. ಅನುಮತಿ ಇಲ್ಲದೇ  ಹೊರಗೆ ಹೋಗುವಂತಿಲ್ಲ ಮತ್ತು ಯಾವ ಸ್ನೇಹಿತರೊಂದಿಗೂ ಅತಿಯಾಗಿ ಬೆರೆಯುವಂತಿಲ್ಲ.

ಮದುವೆಯಾದ ಹೊಸದರಲ್ಲಿ ನನಗೆ ಒಂದು ರೀತಿಯ ಮುಜುಗರ, ತಳಮಳ, ಆತಂಕ. ಮನಸ್ಸಿನ ಭಾವನೆಗಳನ್ನು ಯಾರ ಬಳಿಯಾದರೂ  ಹಂಚಿಕೊಂಡರೆ ಎಲ್ಲಿ ತಪ್ಪಾಗುವುದೋ ಎಂದು  ಹಿಂಜರಿಯುತ್ತಿದ್ದೆ.ನನ್ನ ಇಪ್ಪತ್ತನೆ ವಯಸ್ಸಿನಲ್ಲಿ ಹೆಣ್ಣುಮಗುವಿಗೆ ತಾಯಿಯಾದೆ. ಗಂಡು ಮಗುವಾಗಲಿಲ್ಲ ಎಂದು ಮನೆಯವರಿಗೆ ನಿರಾಶೆಯಾಯಿತು. ಎರಡು ವರ್ಷದ  ನಂತರ ಮತ್ತೊಂದು ಹೆಣ್ಣು ಮಗು ಜನಿಸಿತು. ಇನ್ನು ಮನೆಯವರ ನಡವಳಿಕೆ ಮತ್ತು ನನ್ನ ಗಂಡನ ನಿರಾಸೆ ಹೆಚ್ಚಿತು. ಎರಡೇ ಮಕ್ಕಳು ಸಾಕು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತೇನೆ  ಎಂಬ ನನ್ನ ಇಚ್ಛೆಗೆ ಮನೆಯವರ ಬೆಂಬಲ ಸಿಗಲಿಲ್ಲ.  

ಇಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಾ ನನ್ನ ಜೀವನ ಸಾಗುತ್ತಿತ್ತು. ಅಷ್ಟರೊಳಗಾಗಲೇ  ತವರು ಮನೆಯವರೊಂದಿಗಿನ ಮೊದಲಿನ ಆತ್ಮೀಯತೆ ಕಡಿಮೆಯಾಗಿತ್ತು. ಬಾಲ್ಯದಿಂದ ಯಾವಾಗಲೂ ಜೊತೆಯಿರುತ್ತಿದ್ದ ನನ್ನ ಆತ್ಮೀಯ ಸ್ನೇಹಿತೆಯರಾದ ರೂಪ ಮತ್ತು ರಂಜನಾರೊಂದಿಗೆ , ಮೂರು ತಿಂಗಳಿಗೋ ಅಥವ ನಾಲ್ಕು ತಿಂಗಳಿಗೋ ಮಾತನಾಡಿದರೆ ಅದೇ ನನಗೆ ಸಂತೋಷ ಕೊಡುತ್ತಿದ್ದ ಸಂಗತಿ.

ಗಂಡು ಮಗು ಬೇಕೆಂಬ ಮನೆಯವರ ಒತ್ತಾಯಕ್ಕೆ ಮಣಿದು ಗರ್ಭ ಧರಿಸುತ್ತಿದ್ದೆ. ಗರ್ಭಪಾತ ಕಾನೂನುಬಾಹಿರ ಎಂಬ ವಿಷಯ ತಿಳಿದಿದ್ದರೂ , ಪರಿಚಯಸ್ಥ ವೈದ್ಯರ ಸಹಾಯ ಪಡೆದು ಲಿಂಗ ಪತ್ತೆ ಹಚ್ಚಿ,  ಹೆಣ್ಣು ಮಗು ಎಂದು ತಿಳಿದ ತಕ್ಷಣ  ಗರ್ಭಪಾತ ಮಾಡಿಸುತ್ತಿದ್ದರು. ಈ ರೀತಿ ಒಟ್ಟು ಮೂರು ಸಲ ಗರ್ಭಪಾತ ಮಾಡಿಸಿದರು. ಕೊನೆಗೂ ಒಂದು ಗಂಡು ಮಗುವಾಯಿತು. ಆದರೆ ನನ್ನ ಆರೋಗ್ಯ ಮತ್ತು  ಮನಸ್ಥಿತಿ ಮೊದಲಿನಂತೆ  ಇರಲಿಲ್ಲ.

ನಂತರದ ದಿನಗಳಲ್ಲಿ ದಿನೇ ದಿನೇ ನಿಶ್ಯಕ್ತಳಾದೆ.  ಮೊದಲಿನ ಚೈತನ್ಯವಿರುತ್ತಿರಲಿಲ್ಲ.  ಸರಿಯಾಗಿ ಊಟ ಮಾಡಲು ಮತ್ತು ನೆಮ್ಮದಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಆಗಾಗ ಮೂರ್ಛೆ ಹೋಗುತ್ತಿದ್ದೆ. ಕೈ ಕಾಲುಗಳಲ್ಲಿ ನಡುಕ ಕಾಣಿಸಿಕೊಳ್ಳುತ್ತಿತ್ತು ಮತ್ತು ವಿನಃ ಕಾರಣ ಹೆಚ್ಚು ಬೆವರುತ್ತಿದ್ದೆ. ಮೊದಲಿನಂತೆ  ಮನೆಗೆಲಸ ಮಾಡಲು ಮತ್ತು ಮಕ್ಕಳ ಆರೈಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗರ್ಭಪಾತ ಮಾಡಿಸಿದ್ದರಿಂದ ನನ್ನ ಆರೋಗ್ಯ ಕೆಡಲು ಕಾರಣವಾಯಿತು ಎನ್ನುವ ವಿಷಯ ಮನೆಯವರಿಗೆ ತಿಳಿದಿದ್ದರೂ ತಮ್ಮ ತಪ್ಪು ಒಪ್ಪಿಕೊಳ್ಳುವ ಮನಸ್ಥಿತಿ ಯಾರಲ್ಲೂ ಇರಲಿಲ್ಲ.

ಆಗಾಗ ಬದುಕು ತುಂಬಾ ಬೇಸರವೆನ್ನಿಸುತ್ತಿತ್ತು. ಆತ್ಮಹತ್ಯೆಯ ಆಲೋಚನೆಗಳು ಕಾಡುತ್ತಿತ್ತು. ಒಬ್ಬಳೇ ತುಂಬಾ ಅಳುತ್ತಿದ್ದೆ. ವೈದ್ಯರ ಬಳಿ ತಪಾಸಣೆಗೆ ಹೋದಾಗ  ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇರುವುದು ತಿಳಿಯಿತು.ಅಲ್ಲಿಂದ ಆರಂಭವಾದ ಆಸ್ಪತ್ರೆಯ ನಂಟು  ಇಂದಿನವರೆಗೂ ನಿಂತಿಲ್ಲ.  ಔಷಧಿಗಳ ಸಹಾಯವಿಲ್ಲದೇ ನನ್ನ ದಿನವನ್ನು ದೂಡಲು ಕಷ್ಟವಾಯಿತು.

ಎರಡು ವರ್ಷಗಳ ಹಿಂದೆ ನಮ್ಮೂರಿನ ಜಾತ್ರೆಯಲ್ಲಿ ಬಾಲ್ಯಸ್ನೇಹಿತೆ ರಂಜನಾ ಸಿಕ್ಕಿದ್ದಳು. ವೃತ್ತಿಯಲ್ಲಿ ಆಯುರ್ವೇದ  ವೈದ್ಯೆ. ಅವಳೊಂದಿಗೆ ನನ್ನ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಂಡೆ. ಗರ್ಭಪಾತದಿಂದ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ, ಭಾವನಾತ್ಮಕವಾಗಿ ಸಮಸ್ಯೆಗಳು ಉಂಟಾಗುತ್ತವೆ ಎಂಬ ವಿಷಯ  ತಿಳಿಸಿದಳು. “ನೀನು ಯಾಕೆ ಮನೋ ವೈದ್ಯರನ್ನು ಒಮ್ಮೆ ಭೇಟಿ ಮಾಡಬಾರದು ?” ಎಂದು ಸಲಹೆ ನೀಡಿದಳು.

ಮನೆಯವರನ್ನು ಹೇಗೋ ಒಪ್ಪಿಸಿ ಅವಳೊಂದಿಗೆ  ಮನೋ ವೈದ್ಯರನ್ನು ಭೇಟಿಯಾದೆ.ನನ್ನ ಎಲ್ಲಾ ಸಮಸ್ಯೆಗಳ ಬಗ್ಗೆ ಅವರಿಗೆ ಹೇಳಿದೆ.  ಕಾರಣವನ್ನು ಸೂಕ್ಷ್ಮವಾಗಿ ಪರಿಗಣಿಸಿದ ಅವರ ನನಗೆ ಖಿನ್ನತೆಯ ಸಮಸ್ಯೆಯಿರುವುದನ್ನು ಪತ್ತೆ ಮಾಡಿದರು.ಮತ್ತು ಅದನ್ನು ನಿಭಾಯಿಸಲು ಸಾಧ್ಯವಿದೆ ಎಂಬ ಭರವಸೆಯನ್ನಿತ್ತರು.  ಸಮಯಕ್ಕೆ ಸರಿಯಾಗಿ ನನ್ನ ಗೆಳತಿಯ ಸಲಹೆ ಉಪಯೋಗಕ್ಕೆ ಬಂತು.  

ಮೊದಮೊದಲು ನನಗೆ ಮುಜುಗರವಾಗುತ್ತಿತ್ತು. ನನಗೆ ಮಾನಸಿಕ ಸಮಸ್ಯೆಯಿದೆಯೇ ? ನನ್ನ ಕುಟುಂಬದವರು ನನ್ನನ್ನು ಮತ್ತೆ ಹೇಗೆ ಉಪಚರಿಸಬಹುದು? ಅಕ್ಕ ಪಕ್ಕದವರಿಗೆ ಗೊತ್ತಾದರೆ ಅವಮಾನವಾದೀತೆ ?  ಎಂಬೆಲ್ಲಾ ಆಲೋಚನೆ ಬರುತ್ತಿತ್ತು. ಎರಡು, ಮೂರು ಭೇಟಿಯಲ್ಲಿ ವೈದ್ಯರು ನನ್ನೊಂದಿಗೆ  ತಾಳ್ಮೆಯಿಂದ ಮಾತನಾಡಿದಾಗ, ಅವರ ಸ್ಪೂರ್ತಿದಾಯಕ ಮಾತುಗಳು ಸ್ವಲ್ಪ ಧೈರ್ಯ ನೀಡಿತು.

ಈಗ, ವೈದ್ಯರ ಸಲಹೆಯಂತೆ  ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳುತ್ತೇನೆ. ನನ್ನ ದಿನನಿತ್ಯದ ಕೆಲಸದ ಜೊತೆ ಯೋಗಾಭ್ಯಾಸ ಮಾಡುತ್ತೇನೆ.ಮನೆಯ ಹತ್ತಿರವಿರುವ  ಧ್ಯಾನ ಮಂದಿರಕ್ಕೆ ಹೋಗುತ್ತೇನೆ. ರಂಜನಾಳ ಸಲಹೆಯಂತೆ  ಸ್ಪೂರ್ತಿದಾಯಕ ಕಥೆಗಳನ್ನು ಓದಲು ಆರಂಭಿಸಿದ್ದೇನೆ.  ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ಈ ಎರಡು ವರ್ಷಗಳಲ್ಲಿ ನನ್ನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಯಾಗಿದೆ.ಮೊದಲಿನಂತೆ ಒಂಟಿಯಾಗಿ ಅಳುವುದಿಲ್ಲ. ನನ್ನ ಮನಸ್ಸಿನ ಭಾವನೆಗಳನ್ನು ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇನೆ.   ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗಿದೆ.  ಸಮಯಕ್ಕೆ ಸರಿಯಾದ ಊಟ, ನಿದ್ರೆ ಮಾಡುತ್ತೇನೆ.   ಸ್ನೇಹಿತರ ಕಾಳಜಿ ಮತ್ತು ವೈದ್ಯರ ಸಹಾಯದಿಂದ ನನ್ನ ಸಮಸ್ಯೆಯನ್ನು ನಿಭಾಯಿಸಲು ಕಲಿತಿದ್ದೇನೆ.

ಕೇವಲ ಕತ್ತಲೆಯ ಬಗ್ಗೆ ಯೋಚಿಸುತ್ತಾ ಕುಳಿತರೆ ಬೆಳಕಿನಲ್ಲಿ ಕಾಣುವ ಬದುಕಿನ ಸೌಂದರ್ಯ ಕಾಣುವುದಿಲ್ಲ. ನಾನೀಗ ಬೆಳಕಿನತ್ತ ನನ್ನ ಪಯಣವನ್ನು ಮುಂದುವರೆಸಿದ್ದೇನೆ...!

ಸೂಚನೆ: ವ್ಯಕ್ತಿಯ ಖಾಸಗಿ ಬದುಕಿನ ಹಿತಾಸಕ್ತಿಯನ್ನು ಕಾಪಾಡಲು  ನಿಜವಾದ ಹೆಸರನ್ನು ಬದಲಾಯಿಸಲಾಗಿದೆ

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org