ಸಂಗೀತದ ಚಿಕಿತ್ಸಕ ಶಕ್ತಿ

ಸಂಗೀತವನ್ನು ಕೇಳುವುದು ಕೇವಲ ಅದರ ರಸಾಸ್ವಾದನೆಗಷ್ಟೇ ಅಲ್ಲ. ಸಂಗೀತಕ್ಕೆ ಮನಸು ಹಾಗೂ ದೇಹದ ಖಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದೆ.

ಅನಾದಿ ಕಾಲದಿಂದಲೂ, ಸಂಗೀತ ಹಾಗೂ ನಾದ, ಇಡೀ ವಿಶ್ವದ ಎಲ್ಲ ಸಂಸ್ಕೃತಿಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಜನ ಹಾಡು ಹೇಳುತ್ತಾರೆ; ವಾದ್ಯ ನುಡಿಸುತ್ತಾರೆ. ಇದು ಮಕ್ಕಳು ಹುಟ್ಟುವಾಗ ಇರಲಿ, ಹಬ್ಬ ಹರಿದಿನವಿರಲಿ, ಕ್ರೀಡಾ ಚಟುವಟಿಕೆಗಳಿರಲಿ ಅಥವಾ ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಘಟನೆಗಳಿರಲಿ. ಸಂಗೀತವನ್ನು ಆರೋಗ್ಯಕ್ಕಾಗಿ ಹಾಗೂ ಚಿಕಿತ್ಸೆಗಾಗಿ ಧೀರ್ಘ ಅವಧಿಯಿಂದ ಬಳಸಲಾಗುತ್ತಿದೆ.

ಸಂಗೀತ ಚಿಕಿತ್ಸೆ ಎಂದರೇನು?
ಒಬ್ಬ ವ್ಯಕ್ತಿಯ ಮನಃಶಾಸ್ತ್ರೀಯ ಅಗತ್ಯಗಳನ್ನು ಪೂರೈಸಲು ಕೈಗೊಳ್ಳುವ ಕ್ರಮಗಳಲ್ಲಿ ಇದೂ ಒಂದು. ಅರ್ಹತೆ ಹೊಂದಿರುವ ಸಂಗೀತ ಚಿಕಿತ್ಸಕ, ಒಬ್ಬ ವ್ಯಕ್ತಿಯ ಮನಃಶಾಸ್ತ್ರೀಯ ಹಾಗೂ ಸಾಮಾಜಿಕ ಅಗತ್ಯಗಳನ್ನು ಅಂದಾಜು ಮಾಡಿ, ನಿರ್ದಿಷ್ಟ ಚಿಕಿತ್ಸೆ ನೀಡುತ್ತಾರೆ. ಇದರಲ್ಲಿ ಹಾಡುವುದು, ಪರಿಕರ ನುಡಿಸುವುದು, ವಾದ್ಯ ಸಂಗೀತ, ಸಂಗೀತ ಆಲಿಸುವುದು, ಸಂಗೀತ ರಚನೆ ಮತ್ತಿತರ ಅಂಶಗಳಿವೆ.

ಚಿಕಿತ್ಸೆಯನ್ನು ಮುಂದುವರಿಸುವಂತೆ ವ್ಯಕ್ತಿಗಳನ್ನು ಉತ್ತೇಜಿಸುವುದು ಈ ಚಿಕಿತ್ಸೆಯ ಮುಖ್ಯ ಅಂಶ. ಅಂಗವೈಕಲ್ಯದ ಸಮಸ್ಯೆ ಇರುವ ಮಕ್ಕಳಲ್ಲಿ ಅವರ ಚಲನಾ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅವರ ಸಂವಹನಕ್ಕೆ ಒಂದು ವೇದಿಕೆ ಕಲ್ಪಿಸುತ್ತದೆ. ಅದರಲ್ಲೂ ಮುಖ್ಯವಾಗಿ ತಮ್ಮ ಯೋಚನೆ ಅಥವಾ ಮನಸ್ಸಿನ ಸುಪ್ತ ಭಾವನೆಗಳನ್ನು ಶಬ್ದಗಳ ಮೂಲಕ ಅಭಿವ್ಯಕ್ತಿಪಡಿಸಲು ಬಯಸದವರಿಗೆ ಇದು ಅತ್ಯಂತ ಸೂಕ್ತ ವಿಧಾನ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಮಾನಸಿಕ ಅಥವಾ ಮನಃಶಾಸ್ತ್ರೀಯ ಆಘಾತವಾಗಿದ್ದರೆ, ಆತ ಆಘಾತದ ಮನಸ್ಥಿತಿಯಲ್ಲಿರಬಹುದು ಅಥವಾ ಸುಮ್ಮನಿರಬಹುದು.

ಅವರು ಇಂಥ ಸಂದರ್ಭದಲ್ಲಿ ತಮ್ಮ ಆಳವಾದ ಭಾವನೆಗಳು ಹಾಗೂ ಮನಸ್ಥಿತಿಯನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳಲು ಇಚ್ಛಿಸದೇ ಇರಬಹುದು. ಸಂಗೀತ ಚಿಕಿತ್ಸೆ ಇಂಥ ತಡೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ಅವರು ತಮ್ಮ ಆಂತರಿಕ ಸಂಘರ್ಷವನ್ನು ಮತ್ತು ಅಭಿವ್ಯಕ್ತಗೊಳಿಸಲಾಗದೇ ಹತ್ತಿಕ್ಕಿಕೊಂಡಿರುವ ಭಾವನೆಗಳನ್ನು ಹೊರಹಾಕಲು ವೇದಿಕೆ ಒದಗಿಸುತ್ತದೆ.

ಇತರ ಎಲ್ಲ ಬಗೆಯ ಮನೋಲ್ಲಾಸಗಳಂತೆ, ಉತ್ತಮ ಸಂಗೀತವನ್ನು ಹಾಡುವುದು ಹಾಗೂ ಆಲಿಸುವುದು ಅಥವಾ ಸಂಗೀತ ವಾದ್ಯಗಳನ್ನು ನುಡಿಸುವುದು, ನಮ್ಮ ಮೆದುಳನ್ನು ಪ್ರಚೋದಿಸುತ್ತದೆ. ಜತೆಗೆ ನಮ್ಮ ಅರಿವಿನ, ಭಾವನಾತ್ಮಕ ಹಾಗೂ ಭೌತಿಕ ಚಟುವಟಿಕೆಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಸಂಗೀತ ಶಿಕ್ಷಣ ಹಾಗೂ ಸಂಗೀತ ಚಿಕಿತ್ಸೆ ನಡುವಿನ ವ್ಯತ್ಯಾಸ
ಸಂಗೀತ ಚಿಕಿತ್ಸೆ ಹಾಗೂ ಸಂಗೀತ ಶಿಕ್ಷಣ ಅವರನ್ನು ಸಂಗೀತದಲ್ಲಿ ತೊಡಗಿಸುವುದೇ ಆಗಿದ್ದರೂ, ಅದರ ಉದ್ದೇಶ ಮಾತ್ರ ಭಿನ್ನವಾಗಿರುತ್ತದೆ.

  1. ಸಂಗೀತ ಚಿಕಿತ್ಸೆಯಲ್ಲಿ ಮೂಲಭೂತವಾಗಿ ಸಂಗೀತ ಚಿಕಿತ್ಸಕರು ಕೆಲವು ಬಗೆಯ ದೈಹಿಕ ಅಥವಾ ಭಾವನಾತ್ಮಕ ತೊಂದರೆಗಳಿದ್ದವರ ಜತೆ ಕೆಲಸ ಮಾಡುತ್ತಾರೆ. ಅದು ಬೌದ್ಧಿಕ ಅಂಗವೈಕಲ್ಯ ಇರಬಹುದು; ಮಾನಸಿಕ ಕಾಯಿಲೆಗಳಿರಬಹುದು ಅಥವಾ ಬೆಳವಣಿಗೆ ಸಮಸ್ಯೆಗಳಿರಬಹುದು.
  2. ಆದರೆ ಸಂಗೀತ ಶಿಕ್ಷಕ ಸಾಂಪ್ರದಾಯಿಕ ವಿಧಾನದಲ್ಲಿ ಸಂಗೀತ ಬೋಧನೆ ಮಾಡುತ್ತಾರೆ. ಹಾಗೂ ಯಾವುದೇ ಸಮಸ್ಯೆ ಇಲ್ಲದ ಶಿಷ್ಯರಿಗಾಗಿ ಅವರು ಬೋಧನೆ ಮಾಡುತ್ತಾರೆ.
  3. ಸಂಗೀತ ಚಿಕಿತ್ಸೆಯಲ್ಲಿ ವ್ಯಕ್ತಿಗಳಿಗೆ ಅವರ ವೈಯಕ್ತಿಕ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಗೀತ ಕಲಿಸಲಾಗುತ್ತದೆ. ಅವರು ಕಲಿಕೆ ಪ್ರಕ್ರಿಯೆಯನ್ನು ಯಾವುದೇ ಅಂಜಿಕೆ ಇಲ್ಲದೇ ಸಂತೋಷದಿಂದ ಅನುಭವಿಸುವಂತೆ ಮಾಡಲಾಗುತ್ತದೆ ಹಾಗೂ ಪರಿಪೂರ್ಣತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
  4. ಆದರೆ ಸಂಗೀತ ಶಿಕ್ಷಣದಲ್ಲಿ ಶಿಷ್ಯರು ವಿವಿಧ ಮೂಲಭೂತ ಅಂಶಗಳು ಹಾಗೂ ಪರಿಪೂರ್ಣತೆಗೆ ತಂತ್ರಗಳನ್ನು, ಶೈಲಿಯನ್ನು ಕಲಿಯಬೇಕಾಗುತ್ತದೆ.
  5. ಸಂಗೀತ ಚಿಕಿತ್ಸೆಯಲ್ಲಿ ಚಿಕಿತ್ಸಕ ಹಾಗೂ ಸಮಸ್ಯೆಯುಳ್ಳ ವ್ಯಕ್ತಿ ಜತೆಗೇ ಕಾರ್ಯನಿರ್ವಹಿಸಿ ಪರಸ್ಪರ ನಿಕಟ ಸಂಬಂಧ ಹೊಂದಿರುತ್ತಾರೆ. ಪರಸ್ಪರ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಚಿಕಿತ್ಸೆ ಮತ್ತಷ್ಟು ಪರಿಣಾಮಕಾರಿಯಾಗಲು ಕಾರಣರಾಗುತ್ತಾರೆ.
  6. ಆದರೆ ಸಂಗೀತ ಶಿಕ್ಷಣದಲ್ಲಿ, ಸೌಹಾರ್ದಯುತ ಶಿಕ್ಷಕ- ಶಿಷ್ಯ ಸಂಬಂಧ ಇರುತ್ತದೆ. ಹಾಗೂ ವಿದ್ಯಾರ್ಥಿಗಳ ಗುರಿ ಸಂಗೀತದಲ್ಲಿ ಪರಿಪೂರ್ಣತೆ ಸಾಧಿಸುವುದೇ ಆಗಿರುತ್ತದೆ.
  7. ಸಂಗೀತ ಚಿಕಿತ್ಸಕರು ವ್ಯಕ್ತಿಗಳಲ್ಲಿ ವಿವಿಧ ಅಂಶಗಳಾದ ಅರಿವಿಗೆ ಸಂಬಂಧಿಸಿದ, ಸಂವಹನ, ಶೈಕ್ಷಣಿಕ, ಚಲನೆಯ, ಭಾವನಾತ್ಮಕ, ಸಂಘಟನಾತ್ಮಕ, ಸೃಜನಾತ್ಮಕ ಹಾಗೂ ಸಾಮಾಜಿಕ ಕೌಶಲಗಳನ್ನು ತಿಳಿಸುತ್ತಾರೆ. ಈ ಕೌಶಲಗಳು ವ್ಯಕ್ತಿಗಳಿಗೆ ಪರಿಸ್ಥಿತಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಹಾಗೂ ಜೀವನದ ಅಗತ್ಯ ಚಟುವಟಿಕೆ ನಿರ್ವಹಿಸಿಕೊಳ್ಳಲು ಸಹಾಯವಾಗುತ್ತದೆ.
  8. ಸಂಗೀತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅರಿವಿನ ಕೌಶಲ, ಏಕಾಗ್ರತೆ, ಸಾಮಾಜಿಕ ಹಾಗೂ ಸೃಜನಾತ್ಮಕ ಕೌಶಲ ಬೆಳೆಸಿಕೊಳ್ಳಲು ಸಹಕರಿಸುತ್ತದೆ. ಆದರೆ ಇಲ್ಲಿ ಕಲಿಕೆಯನ್ನು ಕೇವಲ ಸಂಗೀತ ಕಚೇರಿಗಳಲ್ಲಿ ಮಾತ್ರ ಹೆಚ್ಚಾಗಿ ಅನ್ವಯಿಸಲಾಗುತ್ತದೆ.

ಮಾನಸಿಕ ಅಸ್ವಸ್ಥತೆಗೆ ಸಂಗೀತ ಚಿಕಿತ್ಸೆ
ಸಂಗೀತ ಚಿಕಿತ್ಸೆಯನ್ನು ಇತರ ಚಿಕಿತ್ಸಾ ವಿಧಾನಗಳಿಗೆ ಪೂರಕವಾಗಿ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸಂಗೀತ ಚಿಕಿತ್ಸೆಯ ಮುಖ್ಯ ಗುರಿ ಎಂದರೆ, ಕೇವಲ ಔಷಧಿ ಅಥವಾ ಶಬ್ದಗಳ ಮೂಲಕ ಗುಣಪಡಿಸಲಾಗದ ಸಮಸ್ಯೆಗಳನ್ನು ನಿವಾರಿಸುವುದು. ಒಬ್ಬ ವೃತ್ತಿಪರ ಸಂಗೀತ ಚಿಕಿತ್ಸಕ, ಸಮರ್ಪಕ ಸಂಗೀತ ಸಾಧನವನ್ನು ಆಯ್ಕೆ ಮಾಡುತ್ತಾರೆ.

ಆ ವ್ಯಕ್ತಿಯ ವೈಯಕ್ತಿಕ ಹಾಗೂ ಸಾಂಸ್ಕೃತಿಕ ನಡತೆನ್ನು ನೋಡಿಕೊಂಡು ಪರಿಣಾಮಕಾರಿಯಾಗುವ ಸಂಗೀತ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡುತ್ತಾರೆ. ಸಂಗೀತ ಚಿಕಿತ್ಸೆಯು ಮುಖ್ಯವಾಗಿ ಆಟಿಸಂ, ಎಡಿಎಚ್‌ಡಿ, ಡೌನ್ಸ್ ಸಿಂಡ್ರೋಮ್, ಛಿದ್ರ ಮನಸ್ಕತೆ, ಆತಂಕ, ಖಿನ್ನತೆ, ಮರೆವು ರೋಗ, ಮಾದಕ ವ್ಯಸನ ಮತ್ತಿತರ ಸಮಸ್ಯೆಗಳಿಗೆ ಪರಿಣಾಮಕಾರಿ. ಕುಟುಂಬದ ಸದಸ್ಯರು ಕೂಡಾ ಇಂಥ ಸಮಸ್ಯೆಗಳಿಂದ ಹೊರಬರಲು ಈ ಚಿಕಿತ್ಸಾ ವಿಧಾನವನ್ನು ಬಳಸಿಕೊಳ್ಳಬಹುದು.

ಎರಡನೇ ಮಹಾಯುದ್ಧದ ಬಳಿಕ ಹಲವು ಮಂದಿ ಸಂಗೀತಗಾರರು, ಅಮೆರಿಕದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಯುದ್ಧೋತ್ತರ ಭೌತಿಕ ಹಾಗೂ ಭಾವನಾತ್ಮಕ ಆಘಾತದಿಂದ ಹೊರಬರಲು ರೋಗಿಗಳಿಗಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು ಎನ್ನುವುದು ನಿಮಗೆ ತಿಳಿದಿದೆಯೇ? ಆ ನಂತರ ವೈದ್ಯರು ಇಂಥ ಸಂಗೀತಗಾರರನ್ನು ನೇಮಿಸಿಕೊಂಡು ಅದರ ಮಹತ್ವವನ್ನು ಹಾಗೂ ಪ್ರಯೋಜನವನ್ನು ಅರಿತರು.

ಸಂಗೀತ ಚಿಕಿತ್ಸೆ ವಿಧಾನಗಳು:
ಒಬ್ಬ ವ್ಯಕ್ತಿಯ ಅಗತ್ಯ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅಥವಾ ಕಲಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ, ಬೇರೆ ಬೇರೆ ವಿಧಾನವನ್ನು ಚಿಕಿತ್ಸಕ ಬಳಸಬಹುದಾಗಿದೆ.

ಹಿನ್ನೆಲೆ ಸಂಗೀತ ಚಿಕಿತ್ಸೆ: ಇದರಲ್ಲಿ ಆಸ್ಪತ್ರೆಗಳಲ್ಲಿ ಸಂಗೀತವನ್ನು ಹಾಡಲಾಗುತ್ತದೆ. ರೇಡಿಯೊ ಅಥವಾ ಆಡಿಯೊ ಟೇಪ್ ಮೂಲಕ ಕೆಲ ಗಂಟೆಗಳವರೆಗೆ ಸಂಗೀತ ಕೇಳಿಸಲಾಗುತ್ತದೆ. ಪ್ರಶಾಂತ ವಾತಾವರಣವನ್ನು ಸೃಷ್ಟಿಸುವುದು ಇದರ ಗುರಿ. ಇಂಥ ಚಟುವಟಿಕೆಗಳು ಆತಂಕ, ಒತ್ತಡಗಳನ್ನು ನಿವಾರಿಸಿ ಸಮಸ್ಯೆಯಿರುವ ವ್ಯಕ್ತಿಗಳು ಆರಾಮದಾಯಕವಾಗಿ ಇರುವಂತೆ ಮಾಡುತ್ತದೆ.

ವಿಚಾರಶೀಲ ಸಂಗೀತ ಚಿಕಿತ್ಸೆ: ಈ ಸಂಗೀತ ಚಿಕಿತ್ಸೆ ವಿಧಾನದಲ್ಲಿ, ಮುಖ್ಯವಾಗಿ ಸಮಸ್ಯೆಯಿರುವ ವ್ಯಕ್ತಿಗಳು ಸಂಗೀತ ಹಾಗೂ ಕಲೆಯ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುವಂತೆ ಮಾಡಲಾಗುತ್ತದೆ. ಸಂಗೀತವನ್ನು ಆರಂಭಿಸುವ ಮುನ್ನ, ಒಂದು ಗುಂಪು ಆ ಸಂಗೀತ ಸಂಯೋಜಕರ ಬಗೆಗೆ ವಿವರಿಸುತ್ತದೆ. ಹಾಗೂ ಸಂಗೀತದ ವಿವಿಧ ಅಂಶಗಳ ಬಗ್ಗೆ ತಿಳಿಸುತ್ತದೆ. ಇದು ಪ್ರತಿರೋಧಾತ್ಮಕ ಅಥವಾ ದುಃಖದ ಖಿನ್ನತೆಯನ್ನು ದೂರ ಮಾಡಬಲ್ಲದು.

ಗುಂಪು ಸಂಗೀತ ಚಿಕಿತ್ಸೆ: ಇಲ್ಲಿ ಚಿಕಿತ್ಸಕ ಒಂದು ಗುಂಪಿಗೆ ಸಂಗೀತ ಕಲಿಸಿಕೊಡುತ್ತಾರೆ. ಅಥವಾ ಸಂಗೀತ ವಾದ್ಯ ನುಡಿಸಲು ಹೇಳಿಕೊಡುತ್ತಾರೆ. ಸಾಮಾನ್ಯವಾಗಿ ಆಸ್ಪತ್ರೆಯ ಒಳಗಿರುವ ಸಮಸ್ಯೆಯಿರುವ ವ್ಯಕ್ತಿಗಳಿಗೆ ಇದನ್ನು ಮಾಡಲಾಗುತ್ತದೆ. ಇಂಥ ಗುಂಪು ಸಂಗೀತ ಆತ್ಮವಿಶ್ವಾಸವನ್ನು ಮತ್ತು ಆತ್ಮಗೌರವವನ್ನು ಹೆಚ್ಚಿಸುತ್ತದೆ.

ಸಂಗೀತಗಾರರಿಂದ ಸಂಗೀತ: ಇಲ್ಲಿ ಸಂಗೀತಗಾರರು ಆಸ್ಪತ್ರೆಯಲ್ಲಿ ಸಂಗೀತವನ್ನು ಹಾಡುವಂತೆ ಮಾಡಲಾಗುತ್ತದೆ. ಈ ಬಗೆಯ ಸಂಗೀತ ಚಿಕಿತ್ಸೆಯನ್ನು ಮಾನಸಿಕ ಅಸ್ವಸ್ಥ ಮಕ್ಕಳ ಚಿಕಿತ್ಸೆಗೆ ಬಳಸಲಾಗುತ್ತದೆ. ಜತೆಗೆ ಆಟಿಸಂ ಹಾಗೂ ಭಾವನಾತ್ಮಕ ಸಮಸ್ಯೆಗಳ ಮಂದಿಗೂ ಇದು ಪ್ರಯೋಜನಕಾರಿ.

ಸೃಜನಶೀಲ ಸಂಗೀತ ಚಿಕಿತ್ಸೆ: ಇಲ್ಲಿ ವ್ಯಕ್ತಿಗಳು ಹಾಡುಗಳನ್ನು ಬರೆಯುತ್ತಾರೆ; ಸಂಗೀತ ಸಂಯೋಜನೆ ಮಾಡುತ್ತಾರೆ ಹಾಗೂ ವಾದನ ಮಾಡುತ್ತಾರೆ. ಇದು ಒಂದು ಬಗೆಯ ವಿರೇಚನ ಪ್ರಕ್ರಿಯೆ. ಇದು ಅವರು ತಮ್ಮ ದುಃಖಗಳನ್ನು ಅಭಿವ್ಯಕ್ತಪಡಿಸಲು ನೆರವಾಗುತ್ತದೆ. ಜತೆಗೆ ಹತ್ತಿಕ್ಕಿದ ಭಾವನೆಗಳನ್ನು ಒಂದು ಸಂಗೀತದ ಮೂಲಕ ಅಭಿವ್ಯಕ್ತಪಡಿಸಲು ಸಹಕಾರಿಯಾಗುತ್ತದೆ.

ಸಂಗೀತ ಚಿಕಿತ್ಸೆ ಅಂಶಗಳು: ಸಂಗೀತ ಚಿಕಿತ್ಸೆ ಹಲವು ಅಂಶಗಳನ್ನು ಒಳಗೊಳ್ಳುತ್ತದೆ. ಪ್ರತಿಯೊಂದು ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿ. ಒಬ್ಬ ವ್ಯಕ್ತಿ ಪುನಶ್ಚೇತನ ಹೊಂದಲು ಯಾವ ಬಗೆಯ ಅಂಶಗಳು ಅಗತ್ಯವಾಗುತ್ತದೆ ಎನ್ನುವುದನ್ನು ಕಂಡುಕೊಂಡು ಚಿಕಿತ್ಸಕ ಅದಕ್ಕೆ ಸೂಕ್ತವಾದ ಅಂಶಗಳಿಗೆ ಒತ್ತು ನೀಡುತ್ತಾರೆ.

  1. ಪದ್ಯರಚನೆ: ಜನ ಪದ್ಯರಚನೆ ಮೂಲಕ ತಮ್ಮಲ್ಲೇ ಹತ್ತಿಕ್ಕಿಕೊಳ್ಳುವ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಸಂಗೀತ ಚಿಕಿತ್ಸಕರು ಸಾಮಾನ್ಯವಾಗಿ ಇಂಥ ವ್ಯಕ್ತಿಗಳಿಗೆ ಸರಳ ಪದ್ಯಗಳನ್ನು ರಚಿಸಲು ಸಹಕರಿಸುತ್ತಾರೆ. ಇದಕ್ಕೆ ಅಗತ್ಯವಾದ ನಾದ ಹಾಗೂ ಲಯವನ್ನು ಹೇಳಿಕೊಡುತ್ತಾರೆ. ಉದಾಹರಣೆಗೆ, ಒಂದು ನಿರ್ದಿಷ್ಟ ಹಾಡಿನ ಶಬ್ದಗಳಿಗೆ ಪರ್ಯಾಯವಾಗಿ ಆ ವ್ಯಕ್ತಿಯ ಭಾವನೆಗಳ ಶಬ್ದಗಳನ್ನೇ ಹಾಕಿ ಸರಳ ಪದ್ಯಗಳನ್ನು ರಚಿಸುವುದು.
  2. ಪದ್ಯ ವಿಶ್ಲೇಷಣೆ: ಒಂದು ಹಾಡಿನಲ್ಲಿ ಇರುವ ಶಬ್ದ ಅಥವಾ ಪಲ್ಲವಿಯನ್ನು ವಿಶ್ಲೇಷಿಸುವ ಕೌಶಲವನ್ನು ಸಂಗೀತ ಚಿಕಿತ್ಸಕ ವ್ಯಕ್ತಿಗಳಿಗೆ ಹೇಳಿಕೊಡುತ್ತಾರೆ. ಇದು ಆ ವ್ಯಕ್ತಿಯ ಭಾವನಾತ್ಮಕ ಸಮಸ್ಯೆಗಳನ್ನು ಬಿಡುಗಡೆ ಮಾಡಲು ಅಗತ್ಯವಾದ ಚರ್ಚೆಯನ್ನು ಹುಟ್ಟುಹಾಕುತ್ತದೆ. ಉದಾಹರಣೆಗೆ ಒಂದು ನಿರ್ದಿಷ್ಟ ಹಾಡಿನ ಲಯಗಳು, ಒಬ್ಬ ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಿದ್ದರೆ, ಅದು, ನಿರ್ದಿಷ್ಟ ವ್ಯಕ್ತಿಗಳ ಭಾವನೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆಯನ್ನು ಕಂಡುಕೊಳ್ಳುತ್ತದೆ.
  3. ಸಂಗೀತ ಆಲಿಕೆ: ಒಂದು ಸಂಗೀತ ಕಾರ್ಯಕ್ರಮ ಅಥವಾ ಧ್ವನಿಮುದ್ರಿತ ಸಂಗೀತವನ್ನು ಕೇಳಿದ ಜನ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಇವರು ಆರಾಮವಾಗಿರುವುದು, ಧ್ಯಾನ, ಮುಕ್ತ ಚಲನೆ, ಚಿತ್ರಕಲೆ ಮೂಲಕ ಸಂಗೀತಕ್ಕೆ ಸ್ಪಂದಿಸಬಹುದು.
  4. ಸಂಗೀತ ವಾದ್ಯ ನುಡಿಸುವುದು: ಶಬ್ದಗಳ ಮೂಲಕ ಸಂವಹನ ಮಾಡುವಲ್ಲಿ ಸಮಸ್ಯೆ ಎದುರಿಸುವವರು ತಮ್ಮ ಭಾವನೆಗಳು ಹಾಗೂ ಅನಿಸಿಕೆಗಳನ್ನು ಅವರ ಆಯ್ಕೆಯ ಸಂಗೀತ ಪರಿಕರ ವಾದನದ ಮೂಲಕ ಹೊರಹಾಕಬಹುದು. ಇದು ಅವರಿಗೆ ಸಂತೋಷದಾಯಕ ಹಾಗೂ ಅವರ ಚಲನಾ ಕೌಶಲವನ್ನು ಹೆಚ್ಚಿಸಲು, ಕೈ ಹಾಗೂ ಕಣ್ಣಿನ ನಡುವಿನ ಸಮನ್ವಯತೆ ಸಾಧಿಸಲು ನೆರವಾಗಬಹುದು. ಇಬ್ಬ ವ್ಯಕ್ತಿಯ ಆಂತರಿಕ ಭಾವನೆಗಳ ಜತೆ ಸಂವಹನ ನಡೆಸಲು ಸಂಗೀತ ವಾದ್ಯಗಳನ್ನು ನುಡಿಸುವುದು ಅತ್ಯಂತ ಉತ್ತಮ ವಿಧಾನ. ಇದು ನೆನಪಿನ ಶಕ್ತಿ, ಸಾಮಾಜಿಕ ಕೌಶಲ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಬೆಳೆಸಲೂ ನೆರವಾಗುತ್ತದೆ.
  5. ಮನೋರಂಜನಾತ್ಮಕ ಸಂಗೀತ: ಇಲ್ಲಿ ಸ್ವಯಂ ಅಭಿವ್ಯಕ್ತಿ ತಂತ್ರವಾಗಿದ್ದು, ಇಲ್ಲಿ ವ್ಯಕ್ತಿಗಳು ಹಾಗೂ ಸಂಗೀತ ಚಿಕಿತ್ಸಕರು ಮಹತ್ವದ ಸಂಗೀತವನ್ನು ಸೃಷ್ಟಿಸುತ್ತಾರೆ. ವ್ಯಕ್ತಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಸಂಗೀತ ಅಥವಾ ಇತರ ಸಂಗೀತೇತರ ಮಾದ್ಯಮಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಶಬ್ದ, ದೇಹ, ಧ್ವನಿ, ತಾಳವಾದ್ಯ, ಚಿತ್ರ, ಕಥೆ ಹೀಗೆ ಯಾವ ವಿಧಾನವನ್ನಾದರೂ ಬಳಸಿಕೊಳ್ಳಬಹುದು. ಇದು ವ್ಯಕ್ತಿಗಳು ತಮ್ಮ ಹತ್ತಿಕ್ಕಿಕೊಂಡ ಭಾವನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ನೆರವಾಗುತ್ತದೆ. ನಂತರ ಚಿಕಿತ್ಸಕ ಈ ಭಾವನಾತ್ಮಕ ಅಂಶಗಳ ಬಗ್ಗೆ ಗಮನ ಹರಿಸುತ್ತಾರೆ.

ಮುಂದೆ ಲಯ, ಆಪ್ಯಾಯಮಾನ ಹಾಗೂ ಸಂಗೀತದಲ್ಲಿರುವ ಅರ್ಥಪೂರ್ಣ ಸಾಹಿತ್ಯ ಅಂಥ ವ್ಯಕ್ತಿಗಳಲ್ಲಿ ಧನಾತ್ಮಕ ಪರಿಣಾಮವನ್ನು ಸೃಷ್ಟಿಸುತ್ತದೆ ಹಾಗೂ ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈ ಲೇಖನವನ್ನು ಸಂಗೀತ ತಜ್ಞೆ ಹಾಗೂ ಮೀರಾ ಸೆಂಟರ್ ಫಾರ್ ಮ್ಯೂಸಿಕ್ ಥೆರಪಿಯ ಸಂಸ್ಥಾಪಕಿ ಡಾ.ಮೀನಾಕ್ಷಿ ರವಿ ಅವರಿಂದ ಪಡೆದ ಮಾಹಿತಿ ಆಧಾರದಲ್ಲಿ ಸಿದ್ಧಪಡಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org