ಇದು ಯಾವುದೇ ದೆವ್ವದ ಕಾಟ ಅಥವ ಮಾಟಮಂತ್ರದ ಪ್ರಭಾವವಲ್ಲಾ ಎಂದು ನನಗೆ ಗೊತ್ತಿತ್ತು…

“ನನ್ನ ಹೆಸರು ನಿಜಾಮುದ್ದೀನ್. ವಯಸ್ಸು 23. ನಮ್ಮದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಸಣ್ಣ ಗ್ರಾಮ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ನಾನು, ಓದಿರುವುದು ದ್ವಿತೀಯ ಪಿಯುಸಿ. ಪ್ರಸ್ತುತ ಬಿಲ್ಡಿಂಗ್ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದೇನೆ. ಪುಸ್ತಕ,ಕಾದಂಬರಿ ಮತ್ತು ದಿನಪತ್ರಿಕೆ ಓದುವುದು, ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಎಂದರೆ ನನಗೆ ತುಂಬಾ ಇಷ್ಟ. ಸ್ನೇಹಿತರೊಂದಿಗೆ ಕಾಲಕಳೆಯುವುದು ಅಷ್ಟಾಗಿ ಒಗ್ಗುವುದಿಲ್ಲ.ನಾನು, ನನ್ನ ಕೆಲಸ ಜೊತೆಗೆ  ಪುಸ್ತಕಗಳೇ  ನನ್ನ ಬದುಕು.

ಎರಡು ವರ್ಷಗಳಿಗಿಂತ ಮುಂಚೆ ನನಗೆ ಒಂದು ಸಮಸ್ಯೆ ಕಾಡುತ್ತಿತ್ತು. ನಿರ್ಧಿಷ್ಟವಾಗಿ ಇದೇ ಸಮಸ್ಯೆ ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಮುನ್ಸೂಚನೆ ನೀಡದೇ ಇದ್ದಕ್ಕಿದ್ದಂತೆ ಒಂದು  ರೀತಿಯ ತೀರ್ವ ಆತಂಕ, ಭಯ ಆಗುತ್ತಿತ್ತು.ಸುಮಾರು ಮೂವತ್ತು ಸೆಕೆಂಡುಗಳಿಂದ ಒಂದು ನಿಮಿಷದವರೆಗೂ ನನಗೆ ಏನಾಗುತ್ತಿದೆ ಎಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಒಟ್ಟಾರೆಯಾಗಿ ದೇಹದ ಸ್ಥಿಮಿತ ಕಳೆದುಕೊಳ್ಳುತ್ತಿದ್ದೆ. ಓಹ್, ನಾನೀಗ ಸಾಯುತ್ತೇನೆ  ಎಂಬ ಭಾವನೆ ಮೂಡುತ್ತಿತ್ತು.

ಮೊದಮೊದಲು ದಿನಕ್ಕೆ ಒಂದು ಸಲ ಕಾಡುತ್ತಿದ್ದ ಈ ಸಮಸ್ಯೆ, ಕ್ರಮೇಣ ದಿನಕ್ಕೆ ಎರಡು ಅಥವ ಮೂರು ಸಲ ತೊಂದರೆ ನೀಡಲು ಆರಂಭಿಸಿತು. ಕಾರಣ ಮಾತ್ರ ತಿಳಿಯಿತ್ತಿರಲಿಲ್ಲ. ಹಗಲು- ರಾತ್ರಿ, ಯಾವ ಸಮಸಯದಲ್ಲಿ ಬೇಕಾದರೂ ಈ ಸಮಸ್ಯೆ ಉಂಟಾಗುತ್ತಿತ್ತು. (ಹೆಚ್ಚಾಗಿ ರಾತ್ರಿ ವೇಳೆ)ಇದ್ದಕ್ಕಿದ್ದಂತೆ ಹೃದಯದ ಬಡಿತ ಹೆಚ್ಚಾಗುತ್ತಿತ್ತು. ಉಸಿರು ಕಟ್ಟಿದ್ದಂತೆ ಆಗುತ್ತಿತ್ತು. ಕೆಲವೊಮ್ಮೆ ನಮಾಜ್ಹ್ ಮಾಡುವಾಗ ಎಲ್ಲರ ಮಧ್ಯೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನರ ಮಧ್ಯೆ ಸಿಕ್ಕಿಹಾಕಿಕೊಂಡರೆ  ಏನಾದರೂ ಅಪಾಯ ಆಗುತ್ತದೆ ಎಂದು ಹೆದರುತ್ತಿದ್ದೆ. ನನ್ನನ್ನು ಯಾರಾದರೂ ಕೊಲ್ಲುತ್ತಾರೆ ಎಂದು ಭಯ ಆಗುತ್ತಿತ್ತು.ಮೈಯೆಲ್ಲಾ ಬೆವರುತ್ತಿತ್ತು. ಆದ್ದರಿಂದ ನಮಾಜ್ಹ್ ಮಾಡಲು ಕೊನೆಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಬಸ್ಸಿನಲ್ಲಿ ಪಯಣಿಸುವಾಗಲೂ ಸಹ ಇದೇ ರೀತಿ ಆಗುತ್ತಿತ್ತು. ಬಸ್ಸಿನಲ್ಲಿ ಇದ್ದಾಗ, ಆಕ್ಸಿಡೆಂಟ್ ಆಗಬಹುದು ಅಥವ ನನ್ನ ಸುತ್ತಮುತ್ತ ಯಾರಾದರೂ ನನಗೆ ಅಪಾಯ ಮಾಡಬಹುದು ಎಂಬ ಭೀತಿಗೆ ಉಸಿರುಗಟ್ಟುತ್ತಿದ್ದೆ.ಏನಾದರೂ ಮಾಡಿ ನನ್ನನ್ನು ನಾನು ರಕ್ಷಿಸಿಕೊಳ್ಳಬೇಕು ಎಂದು ಗಾಬರಿಯಾಗಿ,ಇಳಿಯುವ ಸ್ಥಳಕ್ಕೂ ಮುಂಚೆ ಬಸ್ಸಿನಿಂದ ಇಳಿದುಬಿಡುತ್ತಿದ್ದೆ. ಅಲ್ಲಿಂದ ಕೆಲಸದ ಸ್ಥಳದವರೆಗೂ  ನೆಡೆದುಕೊಂಡು ಹೋಗುತ್ತಿದ್ದೆ.

ಈ ಸಮಸ್ಯೆ ದಿನೇ ದಿನೇ ಹೆಚ್ಚಾಯಿತು. ಯಾರೊಂದಿಗೆ ಹೇಳಲಿ ಅರ್ಥವಾಗುತ್ತಿರಲಿಲ್ಲ.ನನ್ನದು  ಕಡಿಮೆ ಮಾತನಾಡುವ ಸ್ವಭಾವ. ತಂದೆಗೆ ಹೇಳಲು ಹೆದರಿಕೆ,ಸ್ನೇಹಿತರಿಗೆ  ಹೇಳಿದರೆ ನನ್ನನ್ನು ಯಾವ ದೃಷ್ಟಿಯಿಂದ ನೋಡುತ್ತಾರೋ ಎಂಬ ಗೊಂದಲ. ಕಡೆಗೆ ನನ್ನ ತಾಯಿಗೆ ಹೇಳೋಣ ಎಂದು ನಿರ್ಧರಿಸಿದೆ. ನನಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡೆ. ಮೊದಲೇ ಹೊರಗಿನ ಪ್ರಪಂಚದ ಅನುಭವವಿರದ ನನ್ನ ತಾಯಿ ಆತಂಕಕ್ಕೊಳಗಾದರು. ಈ ವಿಷಯವನ್ನು ಯಾರೊಂದಿಗೂ ಹೇಳಬೇಡ, ಮುಂದೆ ನಿನ್ನ ಮದುವೆಗೆ ತೊಂದರೆಯಾಗಬಹುದು ಮತ್ತು ನೆಂಟರಿಷ್ಟರು ನಮ್ಮ ಕುಟುಂಬದ ಬಗ್ಗೆ ಅಪಹಾಸ್ಯ ಮಾಡಬಹುದು. ಆದ್ದರಿಂದ ಯಾರಿಗೂ ಈ ವಿಷಯ ತಿಳಿಸಬೇಡ ಎಂದು ಸಲಹೆಯಿತ್ತರು.

ನನ್ನ ಸಮಸ್ಯೆಯನ್ನೇನೋ ಮುಚ್ಚಿಡಬಹುದು ಆದರೆ ಪರಿಹಾರವೇನು? ಸ್ವಲ್ಪ ದಿನಗಳವರೆಗೂ ಸುಮ್ಮನಾದೆ. ಆ ದಿನಗಳಲ್ಲಿ ನಮಾಜ್ಹ್ ಮಾಡಲು ಹೋಗುತ್ತಿರಲಿಲ್ಲ. ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿರಲಿಲ್ಲ.(ಬಸ್ಸಿನಲ್ಲಿ ಇಂದಿಗೂ ಪ್ರಯಾಣ ಮಾಡುವುದಿಲ್ಲ) ರಸ್ತೆಯಲ್ಲಿ ಚಲಿಸುವ ದ್ವಿಚಕ್ರ ವಾಹನಗಳ ಸಹಾಯ ಪಡೆದು  ಕೆಲಸದ ಸ್ಥಳ ತಲುಪುತ್ತಿದ್ದೆ ಅಥವ ಅರ್ಧ ಗಂಟೆ ಮೊದಲೇ ಮನೆ ಬಿಟ್ಟು ನೆಡೆದುಕೊಂಡು ಹೋಗುತ್ತಿದ್ದೆ.

ಒಮ್ಮೊಮ್ಮೆ ನನ್ನ ನೆಚ್ಚಿನ ಸ್ನೇಹಿತನ ಜೊತೆ  ಮೋಟಾರ್ ಬೈಕಿನಲ್ಲಿ ಹೋಗುತ್ತಿದ್ದೆ.ಇತ್ತೀಚಿಗಿನ ನನ್ನ ಈ ನಡವಳಿಕೆಯನ್ನು ಗಮನಿಸುತ್ತಿದ್ದ ಅವನು, ಕಾರಣ ಹೇಳಲು ಬಲವಂತ ಮಾಡಿದ. ಇರುವ ವಿಷಯವನ್ನು ಅವನಿಗೂ ತಿಳಿಸಿದೆ.

ನಮ್ಮದು ಪುಟ್ಟ ಗ್ರಾಮ.ಮೂಡನಂಬಿಕೆ ತುಂಬಿದ ಪರಿಸರ.ನಾನು ಹೆಚ್ಚಿಗೆ ಯಾರೊಂದಿಗೂ ಮಾತಾಡದೇ ಒಂಟಿಯಾಗಿರಲು ಬಯಸಲು ಇದೂ ಒಂದು ಕಾರಣವಿರಬಹುದು. ವಿಷಯ ಕೇಳಿದ ಅವನು ನನಗೆ ದೆವ್ವ ಹಿಡಿದಿರಬಹುದು ಅಥವ ನನಗೆ ಆಗದ ಯಾರೋ ಶತ್ರುಗಳು ಮಾಟಮಂತ್ರ ಮಾಡಿಸಿರಬಹುದು.ಅದಕ್ಕೆ ಹೀಗೆ ಆಗುತ್ತಿದೆ ಎಂದು ಹೇಳಿ ಪಕ್ಕದ ಹಳ್ಳಿಯಲ್ಲಿ ವಾಮಾಚಾರ ತೆಗೆಯುವ ಜ್ಯೋತಿಷಿ ಇದ್ದಾರೆ, ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಪಟ್ಟು ಹಿಡಿದ.

ನಾನು ಇದ್ಯಾವುದಕ್ಕೂ ಒಪ್ಪಲಿಲ್ಲ. ನನಗೆ ಯಾವ ದೆವ್ವ ಭೂತ ಹಿಡಿದಿಲ್ಲ ಆದರೆ ಏನೋ ಮನಸ್ಸಿಗೆ ಸಂಬಂಧಿಸಿದ  ಸಮಸ್ಯೆ ಇರಬಹುದು ಎಂದು ಹೇಳಿದೆ.ಈ ವಿಷಯವನ್ನು ಇತರರೊಂದಿಗೆ ಹೇಳಬೇಡ ಎಂದು ಮಾತು ಪಡೆದು, ಇದಕ್ಕೆ ಪರಿಹಾರ ನಾನೇ ಕಂಡುಹಿಡಿಯಬೇಕು ಎಂಬ ನಿರ್ಧಾರಕ್ಕೆ ಬಂದೆ.

ನಾನು ಸಿಟಿಗೆ ಹೋದಾಗ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳನ್ನು ಹುಡುಕಲು ಶುರು ಮಾಡಿದೆ. ನಾನು ಓದಿದ ಯಾವ ಪುಸ್ತಕದಲ್ಲೂ ನನ್ನ ಸಮಸ್ಯೆಯ ಬಗ್ಗೆ ತಿಳಿಸಿರಲಿಲ್ಲ.ಇಂಟರ್ ನೆಟ್ ನಲ್ಲಿ ನನ್ನ ಲಕ್ಷಣಗಳನ್ನು ಟೈಪ್ ಮಾಡಿ ಆಗ ಇದು ಒಂದು ಮಾನಸಿಕ ಸಮಸ್ಯೆ ಎಂದು ತಿಳಿಯಿತು. ಇದನ್ನು ಖಾತರಿ ಪಡಿಸಿಕೊಳ್ಳಲು ತಜ್ಞರ ಬಳಿ ಹೋಗಲು ನಿರ್ಧರಿಸಿದೆ. ಮಂಗಳೂರಿನ ಪ್ರಖ್ಯಾತ ಮನೋವೈದ್ಯರಾದ ಡಾ. ರವೀಶ್ ತುಂಗ ಅವರನ್ನು ಭೇಟಿ ಮಾಡಿದೆ. ಅವರೊಂದಿಗೆ ನನ್ನ ಸಮಸ್ಯೆಯ ಬಗ್ಗೆ ಹೇಳಿಕೊಂಡೆ.

ಸಮಾಧಾನವಾಗಿ ನನ್ನ ಮಾತುಗಳನ್ನು ಕೇಳಿದ ವೈದ್ಯರು ನನಗಿರುವ ಸಮಸ್ಯೆ ಪ್ಯಾನಿಕ್ ಅಟಾಕ್ ಎಂದು ಹೇಳಿದರು. “ಯಾವುದೇ ಅಪಾಯಕಾರಿ ಚಿಹ್ನೆಗಳ ಸೂಚನೆ ನೀಡದೇ ವ್ಯಕ್ತಿಗೆ ಇದ್ದಕ್ಕಿದ್ದಂತೆ ತೀರ್ವ ಆತಂಕ ಅಥವ ಭೀತಿಗೆ ಪ್ಯಾನಿಕ್ ಡಿಸಾರ್ಡರ್ ಎನ್ನುವರು “ ಎಂದು ವಿವರವಾಗಿ ತಿಳಿಸಿದರು.

ಇದಕ್ಕೆ ಕಾರಣವೇನು ಎಂದು ಕೇಳಿದಾಗ ಈ ಸಮಸ್ಯೆಗೆ ಇಂತದ್ದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಅನುವಂಶೀಯತೆ, ಬಾಲ್ಯದ ಯಾವುದಾದರೂ ಆಘಾತ, ತೀರ್ವ ಒತ್ತಡ, ನಕಾರಾತ್ಮಕ ಆಲೋಚನೆಗಳು, ಏನಾದರೂ ಆಗಬಹುದು ಎಂದು ವಿವರಿಸಿದರು. ನನಗೆ ಏಕೆ ಹೀಗೆ ಆಗುತ್ತಿದೆ ಎನ್ನುವುದಕ್ಕೆ ಈಗಲೂ ಕಾರಣ ಗೊತ್ತಿಲ್ಲ. ಅಥವಾ ಬಾಲ್ಯದ  ಯಾವುದೇ ಅಂತಹ ಭಯಾನಕ ಘಟನೆ ನನಗೆ ನೆನಪಾಗುತ್ತಿಲ್ಲ. ಆದರೂ ನನಗೆ ಸಮಸ್ಯೆ ಇರುವುದಂತೂ ನಿಜ ಮತ್ತು ಇದು ಯಾವುದೇ ಭೂತ ಪ್ರೇತದ ಕಾಟವಂತೂ ಖಂಡಿತವಾಗಿಯೂ ಅಲ್ಲ.

ವೈದ್ಯರ ಬಳಿ ಚಿಕಿತ್ಸೆ ಪಡೆದ ನಾನು,  ಅಂದಿನಿಂದ ಸುಮಾರು ಆರು ತಿಂಗಳವರೆಗೂ ಕೆಲವು ಔಷಧಿ ತೆಗೆದುಕೊಳ್ಳುತ್ತಾ ಬಂದೆ. ಪ್ರತೀ ತಿಂಗಳು ವೈದ್ಯರನ್ನು ಭೇಟಿ ಮಾಡಿದೆ. ಔಷಧಿ ತೆಗೆದುಕೊಳ್ಳಲು ಆರಂಭಿಸಿದ ಮೇಲೆ ರಾತ್ರಿಯ ವೇಳೆ ಹೆಚ್ಚಾಗಿ ನಿದ್ರೆ ಮಾಡಲು ಆರಂಭಿಸಿದೆ. ಈಗ ರಾತ್ರಿ ವೇಳೆ ಪ್ಯಾನಿಕ್ ಅಟಾಕ್ ಆಗುತ್ತಿಲ್ಲ ಮತ್ತು ನಮಾಜ್ಹ್ ಮಾಡುವಾಗ ಯಾವುದೇ ಭೀತಿಯಿಲ್ಲ. ಆದರೆ ಏನಾದರೂ ಸಮಸ್ಯೆ ಉಂಟಾಗಬಹುದು ಎಂಬ ಭ್ರಮೆಯಂತೂ ಆಗುತ್ತಿರುತ್ತದೆ. ಔಷಧಿಗಳನ್ನು ಧೀರ್ಘಕಾಲ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ವೈದ್ಯರ ಬಳಿ ಇದರ ಬಗ್ಗೆ ಚರ್ಚಿಸಿದಾಗ ಕೆಲವೊಂದು ಚಟುವಟಿಕೆಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮತ್ತು ಇಷ್ಟವಾಗುವ, ಸಂತೋಷ ನೀಡುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.

ಓದುವ ಹವ್ಯಾಸವನ್ನು ಹೆಚ್ಚಿಸಿದ್ದೇನೆ ಜೊತೆಗೆ ಕೆಲವು ಪ್ರಾದೇಶಿಕ ಪತ್ರಿಕೆಗಳಿಗೆ ಲೇಖನ ಬರೆಯಲು ಆರಂಭಿಸಿದ್ದೇನೆ. ಪತ್ರಿಕೆಗಳಿಗೆ ಸುಮಾರು ಕವನಗಳನ್ನು ಬರೆದಿದ್ದೇನೆ.  “ಏನೂ ಅರಿಯದವ”ಎನ್ನುವ ಶೀರ್ಷಿಕೆಯೊಂದಿಗೆ ಕವನಸಂಕಲನ ಬಿಡುಗಡೆ ಮಾಡಬೇಕೆಂದಿದ್ದೇನೆ. ಸಮಸ್ಯೆ ಸಂಪೂರ್ಣ ಗುಣಮುಖವಾಗಿಲ್ಲ. ಆದರೆ  ಪರಿಸ್ಥಿತಿ  ಸಾಕಷ್ಟು ಸುಧಾರಿಸಿದೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹವ್ಯಾಸವಿರುವ ನಾನು ಈ ಸಮಸ್ಯೆ ಬಗ್ಗೆ ಸಂಪೂರ್ಣ ಅರಿವು ಪಡೆದಿದ್ದೇನೆ. ಇದೊಂದು ಸಾಮಾನ್ಯ ಮಾನಸಿಕ ಸಮಸ್ಯೆ. ಇದಕ್ಕೆ ಚಿಕಿತ್ಸೆ ಇದೆ. ಪ್ರತೀನಿತ್ಯ ನನ್ನ ಕೆಲಸದ ಜೊತೆಯಲ್ಲಿ ಯೋಗಾಭ್ಯಾಸ ಮಾಡುತ್ತೇನೆ. ಬ್ರೀದಿಂಗ್ ಎಕ್ಸರ್ಸೈಸ್ ಕೂಡ ಮಾಡುತ್ತೇನೆ.ಇದರಿಂದ ನನ್ನ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಹೆಚ್ಚುವುದರ  ಜೊತೆಗೆ ಮನಸ್ಸಿಗೆ ಉಲ್ಲಾಸವಾಗುತ್ತದೆ.”

ಈ ವರ್ಷದ ಜನವರಿಯಲ್ಲಿಕನ್ನಡ ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ್ದ ಕವಿಗೋಷ್ಟಿಯೊಂದರಲ್ಲಿ ಭಾಗವಹಿಸಲು ಬಂದಿದ್ದ ನಿಜಾಮುದ್ದೀನ್ ಗೋಳಿಪಡ್ಪುರವರು ನಮ್ಮೊಂದಿಗೆ ಹಂಚಿಕೊಂಡ  ಕಥೆ ಇದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org