ಕಚೇರಿಯಲ್ಲಿನ ಹಿಂಸೆ ಮತ್ತು ಒತ್ತಡಗಳೂ ಅದನ್ನು ನಿಭಾಯಿಸುವ ವಿಧಾನಗಳು

ಕಚೇರಿಯಲ್ಲಿನ ಹಿಂಸೆ ಮತ್ತು ಒತ್ತಡಗಳೂ ಅದನ್ನು ನಿಭಾಯಿಸುವ ವಿಧಾನಗಳು

ಆಲೋಚನೆಗಳು ಮತ್ತು ಭಾವನೆಗಳು ಆತ್ಮವಿಶ್ವಾಸ ಕಳೆದುಕೊಳ್ಳುವುದು, ಜೀವನದ ಹಾಗೂ ಭವಿಷ್ಯದ ಬಗ್ಗೆ ನಕಾರಾತ್ಮ ಯೋಚನೆಗಳು ಇವೆಲ್ಲವೂ ಹತಾಶೆ, ಅಥವಾ ಅಸಹಾಯಕತೆಗೆ ಎಡೆ ಮಾಡಿಕೊಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಯೋಚನೆಗಳು ಆತ್ಮಹತ್ಯೆಗೂ ಕಾರಣವಾಗಬಹುದು.

ಕಚೇರಿಯಲ್ಲಿನ ಹಿಂಸೆ ಮತ್ತು ಒತ್ತಡಗಳೂ ಅದನ್ನು ನಿಭಾಯಿಸುವ ವಿಧಾನಗಳೂ

( ನಾವು ನಮ್ಮ ನೌಕರಿಯನ್ನು ನಿಭಾಯಿಸುವ ಸ್ಥಳವನ್ನು ಕಾರ್ಯಕ್ಷೇತ್ರ ಎಂದು ಕರೆಯಲಾಗುತ್ತದೆ. ಸಾಮಾನ್ಯ ಓದುಗರಿಗೆ ನೆರವಾಗಲೆಂದು ಕಚೇರಿ ಎಂದು ಬಳಸಲಾಗಿದೆ. ಇದನ್ನು  ಕೆಲಸ ಮಾಡುವ ಸ್ಥಳ ಎಂದೂ ಪರಿಗಣಿಸಬಹುದು-ಅನುವಾದಕ)

“ ನನ್ನ ಮಾಲಿಕ ನನ್ನ ಕೆಲಸದ ಹುರುಪನ್ನೇ ಹಾಳುಮಾಡುವಂತೆ ಇ ಮೇಲ್ ಕಳಿಸುತ್ತಿದ್ದರು. ಆಕೆಯ ಕೆಲಸವನ್ನೆಲ್ಲಾ ನನ್ನ ಮೇಲೆ ಹಾಕುತ್ತಿದ್ದರು. ಆದರೆ ನಾನು ಮಾಡುವ ಕೆಲಸದ ಶ್ರೇಯವನ್ನು ಅವರು ಪಡೆಯುತ್ತಿದ್ದರು. ವಿನಾಕಾರಣ ನನ್ನ ಮೇಲೆ ಕೂಗಾಡುತ್ತಿದ್ದರು, ರೇಗಾಡುತ್ತಿದ್ದರು. ನಾನು ಸಾಕಷ್ಟು ಕೆಟ್ಟ ದಿನಗಳನ್ನು ನೋಡಿಬಿಟ್ಟಿದ್ದೇನೆ. ನನ್ನಲ್ಲಿ ಆಕ್ರೋಶ ಉಂಟಾಗಿದೆ. ದಿನವಿಡೀ ಕೆಲಸ ಮಾಡಿ ಮನೆಗೆ ಬಂದಮೇಲೆಯೂ ಮನೆಯಲ್ಲೇ ಕುಳಿತು ಕೆಲಸ ಮುಗಿಸುವಂತೆ ಆದೇಶ ನೀಡುತ್ತಿದ್ದರು. ಒಂದು ಹಂತದಲ್ಲಿ ನಾನು ಇನ್ನು ಮುಂದೆ ಕೆಲಸಕ್ಕೆ ಹೋಗಲೇ ಕೂಡದು ಎಂದು ನಿರ್ಧರಿಸಿದೆ. ನನಗೆ ಕೋಪ ಬಂದಿತ್ತು, ನಾನು ನಿತ್ರಾಣಳಾಗಿದ್ದೆ ನನ್ನ ಮಾಲಿಕರೊಡನೆ ಯಾವುದೇ ರೀತಿಯ ಸಂಪರ್ಕ ಹೊಂದದಿರಲು ನಿರ್ಧರಿಸಿದೆ. ನಾನು ಸಾಮಾನ್ಯವಾಗಿ ಸದಾ ಮೌನವಾಗಿರುತ್ತಿದ್ದುದರಿಂದ ಆಕೆ ನನ್ನನ್ನು ಹಂಗಿಸುತ್ತಿದ್ದಳು. ”

  • ಇದು ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಯುವತಿ ನಿಖಿತಾ ಅವರ ಅಭಿಪ್ರಾಯ.

“ ನಾನು ನಿಜಕ್ಕೂ ಬಹಳ ಶ್ರಮಪಟ್ಟು ದುಡಿದು ಒಂದು ವರದಿಯನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದೆ. . ನನ್ನ ಮಾಲಿಕ ನಾನು ಸಿದ್ಧಪಡಿಸಿದ ವರದಿಯನ್ನು ತಾವೇ ಸಿದ್ಧಪಡಿಸಿದ್ದಾಗಿ ಪ್ರಕಟಿಸುತ್ತಿದ್ದರು. ನನ್ನ ಕಚೇರಿಯಲ್ಲಿ ನಂಬಿಕಸ್ಥರು ಯಾರೂ ನನಗೆ ಕಾಣುತ್ತಿರಲಿಲ್ಲ. ಅದು ನನ್ನ ಮೊದಲ ನೌಕರಿಯಾಗಿತ್ತು. ನನ್ನ ಬಾಸ್ ನನ್ನ ಮೇಲೆ ಸದಾ ರೇಗಾಡುತ್ತಿದ್ದರು ‘ ಅವರು ನಿನಗೆ ಹೇಳಿಕೊಟ್ಟಿಲ್ಲವೇ ? ಏನು ಕಲಿತಿದ್ದೀಯ’ ಎಂದು ಹೀಯಾಳಿಸುತ್ತಿದ್ದರು. ನನ್ನನ್ನು ಸದಾ ಹಂಗಿಸುತ್ತಿದ್ದರು. ನಾನು ಯಾವುದಾದರೂ ಉತ್ತಮ ವರದಿಯನ್ನು ಸಿದ್ಧಪಡಿಸಿದರೆ ನನ್ನ ಮೇಲೆ ಒತ್ತಡ ಹೇರಿ, ನನ್ನನ್ನು ನಿಯಂತ್ರಿಸುವ ಮೂಲಕ ನನ್ನನ್ನು ನಿಂದಿಸುತ್ತಿದ್ದರು. ಸಣ್ಣ ಪುಟ್ಟ ಕೆಲಸಗಳಿಗೂ ನಾನು ಅವರ ಅನುಮತಿ ಪಡೆಯಬೇಕಿತ್ತು. ಇವೆಲ್ಲಾ ವಿಚಾರಗಳ ಪರಿಣಾಮ ನಾನು ನೌಕರಿ ತ್ಯಜಿಸಲು ನಿರ್ಧರಿಸಬೇಕಾಯಿತು. ಏಕೆಂದರೆ ನನ್ನ ಆತ್ಮ ಗೌರವಕ್ಕೆ ಪೆಟ್ಟಾಗಿತ್ತು. ನಾನು ಇಷ್ಟೊಂದು ಮೂರ್ಖಳೇ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತಾಯಿತು. ”

  • ಇದು ಯುವ ಸುದ್ದಿ ವರದಿಗಾರರ ಕಥೆ. ಹೆಸರನ್ನು ಅವರ ಮನವಿಯ ಮೇರೆಗೆ ಸೂಚಿಸಲಾಗಿಲ್ಲ.

ಕೆಲಸ ಮಾಡುವ ಕಚೇರಿಯಲ್ಲಿ ಈ ರೀತಿಯ ಹಿಂಸೆ ಎದುರಿಸುವುದರಿಂದ ವ್ಯಕ್ತಿಯ ಆತ್ಮಗೌರವಕ್ಕೆ ದೊಡ್ಡ ಪೆಟ್ಟು ಬೀಳುವುದು ಸಹಜ. ನಮ್ಮ ದಿನದ ಬಹುಪಾಲು ಅವಧಿಯನ್ನು ನಾವು ಕೆಲಸ ಮಾಡುವ ಸ್ಥಳದಲ್ಲಿ, ಕಚೇರಿಯಲ್ಲಿ ಕಳೆಯುತ್ತೇವೆ. ನಮ್ಮ ಬಹುಪಾಲು ಶಕ್ತಿ, ಸಾಮಥ್ರ್ಯ ಮತ್ತು ಚಿಂತನೆಯನ್ನು ಅಲ್ಲಿಯೇ ಖರ್ಚುಮಾಡುತ್ತೇವೆ.  ಇಂತಹ ಸ್ಥಳದಲ್ಲಿ ದುಡಿಯುವವರನ್ನು ಕೆಟ್ಟದಾಗಿ ನಡೆಸಿಕೊಂಡರೆ, ನಿಂದಿಸುವುದು, ರೇಗಾಡುವುದನ್ನು ಮಾಡಿದರೆ ಅದು ಕಚೇರಿಯ ವಾತಾವರಣವನ್ನೇ ಹದಗೆಡಿಸುತ್ತದೆ. ಅ ವ್ಯಕ್ತಿಯ ಮನಸೂ ಕೆಡುತ್ತದೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಗೆಡುತ್ತದೆ. ಈ ನಿಟ್ಟಿನಲ್ಲಿ ಅಂತಹ ವರ್ತನೆಯ ವಿರುದ್ಧ ನಾವು ಎಚ್ಚರದಿಂದಿರಬೇಕಾಗುತ್ತದೆ.

ಕಚೇರಿಯ ಅಥವಾ ಕೆಲಸ ಮಾಡುವ ಸ್ಥಳದಲ್ಲಿನ ಹಿಂಸೆ ಮತ್ತು ಒತ್ತಡಗಳು ಹಲವು ರೀತಿಯಲ್ಲಿ ಸಂಭವಿಸುತ್ತವೆ. ಕೆಲವು ಪ್ರಮುಖ ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ ;

ಕೆಲಸ ಮಾಡುವ ಸ್ಥಳದಲ್ಲಿ ಕಾಣುವ ಹಿಂಸೆ ಅಥವಾ ಒತ್ತಡಗಳ ಲಕ್ಷಣಗಳು ಹೀಗಿವೆ :

•           ನೀವು ಕೆಲಸ ಮಾಡುತ್ತಿದ್ದಾಗ ನಿಮ್ಮನ್ನು ನಿಂದಿಸಿ ಅವಮಾನಿಸಲಾಗುತ್ತದೆ.

•           ನೀವು ಮಾಡುವ ಯಾವುದೇ ಕೆಲಸವೂ ಒಳ್ಳೆಯ ಗುಣಮಟ್ಟ ಹೊಂದಿರುವುದಿಲ್ಲ ಎಂದು ನಿಮಗೆ ಪದೇಪದೇ ಹೇಳಲಾಗುತ್ತದೆ.

•           ನಿಮ್ಮನ್ನು ಅಸಮರ್ಥ/ಅಸಮರ್ಥಳು ಎಂದು ಬಿಂಬಿಸಲಾಗುತ್ತದೆ. ಕೆಲವೊಮ್ಮೆ ನಿಮ್ಮ ಬಗ್ಗೆಯಾಗಲೀ, ನೀವು ನಿರ್ವಹಿಸುವ ಕೆಲಸದ ಬಗ್ಗೆಯಾಗಲೀ ಏನೂ ತಿಳಿಯದವರೂ ಹೀಗೆ ಹೇಳುತ್ತಾರೆ.

•           ನಿಮ್ಮ ಕೆಲಸದಲ್ಲಿ ಸದಾ ಹಸ್ತಕ್ಷೇಪ ಮಾಡಲಾಗುತ್ತದೆ, ಮೂಗು ತೂರಿಸಲಾಗುತ್ತದೆ.

•           ನಿಮ್ಮಿಂದ ದೂರ ಇರುವಂತೆ ಇತರ ನೌಕರರಿಗೆ ಹೇಳಲಾಗುತ್ತದೆ. ನಿಮ್ಮೊಡನೆ ಮಾತನಾಡದಂತೆ, ಕೆಲಸ ಮಾಡದಂತೆ ಸೂಚಿಸಲಾಗುತ್ತದೆ.

•           ನಿಮ್ಮನ್ನು ಹಿಂಸಿಸುವ ಪ್ರತಿಯೊಂದು ಸನ್ನಿವೇಶವೂ ಅವರ ಮನಸ್ಥಿತಿಯನ್ನು ಆಧರಿಸಿರುತ್ತದೆ. ಅವರ ವೈಯಕ್ತಿಕ ಹಿತಾಸಕ್ತಿಗಾಗಿ ನಿಮ್ಮನ್ನು ಹಿಂಸಿಸುತ್ತಾರೆಯೇ ಹೊರತು, ಸಂಸ್ಥೆಯ ಒಳಿತಿಗಾಗಿ ಅಲ್ಲ.

•           ನೀವು ಸದಾ ಆತಂಕದಿಂದಿರುತ್ತೀರಿ, ಏನೂ ಸರಿಹೋಗುತ್ತಿಲ್ಲ ಎಂದು ಭಾವಿಸುತ್ತೀರಿ.

•           ಕೆಲಸದ ಸ್ಥಳದಲ್ಲಿ ನೀವು ಒಂಟಿತನವನ್ನು ಅನುಭವಿಸುತ್ತೀರಿ. ಮಾನವ ಸಂಪನ್ಮೂಲ ಅಧಿಕಾರಿಯಿಂದ ಅಥವಾ ಸಿಬ್ಬಂದಿಯ ಬೆಂಬಲ ಇಲ್ಲ ಎಂದು ನಿಮಗೆ ಭಾಸವಾಗುತ್ತದೆ.

•           ಇತರರು ನಿಮಗೆ ಏನಾದರೂ ಹೇಳಲು, ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ನೀವು ನಿಮ್ಮನ್ನು ಸಮರ್ಥಿಸಿಕೊಂಡು ಅವರ ಎದುರು ನಿಂತು ಮಾತನಾಡಲು ಅವಕಾಶ ಇರುವುದಿಲ್ಲ.

•           ಹಾಗೊಂದು ವೇಳೆ ನೀವು ಧೈರ್ಯದಿಂದ ಮಾತನಾಡಿದರೆ ನೀವು ಕಿರುಕುಳ ನೀಡುತ್ತಿದ್ದೀರೆಂದು ಆಪಾದನೆ ಮಾಡಲಾಗುತ್ತದೆ.

•           ಕಚೇರಿಯಲ್ಲಿ ಬೇರೆ ರೀತಿಯ ಕೆಲಸ ನೀಡಲು ನೀವು ಮಾಡುವ ಮನವಿ, ಬೇರೆ ವಿಭಾಗಕ್ಕೆ ಅಥವಾ ಸ್ಥಳಕ್ಕೆ ವರ್ಗಾವಣೆ ಮಾಡಲು ನೀಡುವ ಮನವಿ ಅಥವಾ ಮತ್ತೊಬ್ಬ ಬಾಸ್‍ಗೆ ನಿಮ್ಮ ಆರೋಪಗಳನ್ನು ಹೇಳುವ ಅವಕಾಶ, ಎಲ್ಲವೂ ತಿರಸ್ಕøತವಾಗುತ್ತವೆ.

•           ನೀವು ಮಾಡುವ ಯಾವುದೇ ಕೆಲಸದ ಶ್ರೇಯವನ್ನು ಮೇಲಧಿಕಾರಿಗಳು ನಿಮಗೆ ನೀಡುವುದಿಲ್ಲ ಬದಲಾಗಿ ನೀವು ಮಾಡುವ ಕೆಲಸಕ್ಕೆ ಅವರು ಕೀರ್ತಿ ಸಂಪಾದಿಸುತ್ತಾರೆ.

•           ಮೇಲಧಿಕಾರಿಗಳು ಅವರ ವ್ಯಕ್ತಿಗತ ಕೀಳು ಮಟ್ಟದ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತಾರೆ. ಅವರ ವೈಯಕ್ತಿಕ ಹಿರಿಮೆಗಾಗಿ ನಿಮ್ಮಿಂದ ದುಡಿಸಿಕೊಳ್ಳುತ್ತಾರೆ. ನೀವು ಈ ಕೆಲಸಗಳನ್ನು ಮಾಡಲು ನಿರಾಕರಿಸಿದರೆ ನೌಕರಿಯಿಂದ ವಜಾ ಮಾಡುವ ಅಥವಾ ನಿಮ್ಮ ನೌಕರಿಯಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದ ಎಚ್ಚರಿಕೆ ನೀಡುತ್ತಾರೆ.

ಕೆಲಸ ಮಾಡುವ ಸ್ಥಳದಲ್ಲಿ, ಕಚೇರಿಗಳಲ್ಲಿ ಈ ರೀತಿಯ ಹಿಂಸೆ ಮತ್ತು ಒತ್ತಡಗಳನ್ನು ಎದುರಿಸಿ ನಿಭಾಯಿಸುವ ಮುನ್ನ, ಈ ಹಿಂಸೆ ಮತ್ತು ಒತ್ತಡಗಳ ಮೂಲ ಲಕ್ಷಣಗಳೇನು ಎನ್ನುವುದನ್ನು ಅರಿತಿರಬೇಕು. ನಂತರ ಅದನ್ನು ಎದುರಿಸಲು ನೀವು ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಇದಕ್ಕೂ ಮುನ್ನ ನೀವು ಈ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಇದ್ದರೆ ಚಿಂತೆ ಇಲ್ಲ. ಅದು ನಿಮ್ಮ ತಪ್ಪಲ್ಲ. ನಿಮಗೆ ಅತಿ ಮುಖ್ಯವಾದ ಅಂಶ ಎಂದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಅಗತ್ಯ ಬಿದ್ದಲ್ಲಿ ನೀವು ಪ್ರತಿರೋಧ ವ್ಯಕ್ತಪಡಿಸಬೇಕು.

ಕೆಲಸ ಮಾಡುವ ಸ್ಥಳದಲ್ಲಿ ಹಿಂಸೆ ಒತ್ತಡವನ್ನು ಎದುರಿಸಲು ಕೆಲವು ಸೂಚನೆಗಳು :

        ನೀವು ಕೆಲಸ ಮಾಡುವ ಸ್ಥಳದಲ್ಲಿ ಮತ್ತೊಬ್ಬರು ಪ್ರವೇಶಿಸಲು ಅವಕಾಶ ಕೊಡಬೇಡಿ.

        ನಿರ್ದಿಷ್ಟ ಸನ್ನಿವೇಶದಲ್ಲಿ ನಿಮಗೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಮುಜುಗರ ಉಂಟಾದರೆ ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

        ನೀವು ಎದುರಿಸುವ ಹಿಂಸೆ ಮತ್ತು ಒತ್ತಡಗಳ ಹಿಂದಿರುವ ಸಂಸ್ಥೆಯ  ನಿಲುವುಗಳನ್ನು ಅರ್ಥಮಾಡಿಕೊಂಡು ನಿಮ್ಮ ಆಯ್ಕೆಗಳೇನು ಎಂದು ನಿರ್ಧರಿಸಿ.

        ನೀವು ಎದುರಿಸುವ ಹಿಂಸೆ ಅಥವಾ ಒತ್ತಡಗಳು ಯಾವ ವೇಳೆಯಲ್ಲಿ, ಯಾವ ದಿನದಂದು, ಯಾವ ದಿನಾಂಕದಲ್ಲಿ ನಡೆಯಿತು ಮತ್ತು ಅದರ ವಿವರಗಳನ್ನು ಒಂದೆಡೆ ದಾಖಲಿಸಿ, ಇದು ನೀವು ಎಂದಾದರೂ ದೂರು ಸಲ್ಲಿಸಿದಾಗ ನೆರವಿಗೆ ಬರುತ್ತದೆ.

        ನೀವು ಮೇಲಿನ ಹಂತದ ಮೇನೇಜರ್ ಅವರ ವಿಶ್ವಾಸ ಗಳಿಸಿ ಅವರಿಗೆ ಸುದ್ದಿ ತಲುಪಿಸುತ್ತಿರಿ.

ಕೆಲಸದ ಸ್ಥಳದಲ್ಲಿನ ಹಿಂಸೆ ಮತ್ತು ಒತ್ತಡವನ್ನು ಎದುರಿಸಲು ಸಾಧ್ಯವೇ ? ಮತ್ತು ಹೇಗೆ ಸಾಧ್ಯ ?

ಕಾರ್ಯಕ್ಷೇತ್ರದ ಆಯ್ಕೆಗಳು ಸಂಘಟನೆಯ ನಿರ್ದೇಶಕಿಯೂ, ಆಪ್ತ ಸಮಾಲೋಚನೆಯ ತಜ್ಞರೂ ಆದ ಮೌಲಿಕಾ ಶರ್ಮ ಹೇಳುವಂತೆ “ ಕೆಲಸದ ಸ್ಥಳದಲ್ಲಿನ ಅಥವಾ ಕಚೇರಿಯಲ್ಲಿನ ಹಿಂಸೆ ಮತ್ತು ಒತ್ತಡಗಳು ವ್ಯಕ್ತಿಯ ಕ್ರಿಯಾಶೀಲತೆಯನ್ನು ಕುಂದುವಂತೆ ಮಾಡುವುದರಿಂದ ಉತ್ಪಾದಕೀಯತೆ,ಉತ್ಸಾಹ, ಹುರುಪು, ಸ್ಪೂರ್ತಿ,  ಉತ್ತೇಜನ, ನೌಕರಿಯಲ್ಲಿನ ಆನಂದದ ಕ್ಷಣಗಳು, ಆತ್ಮ ಗೌರವ ಮತ್ತು ಸ್ವ ಸಾಮಥ್ರ್ಯವನ್ನು ಕಡಿಮೆಯಾಗುವಂತೆ ಮಾಡುತ್ತದೆ. ”

ಹಾಗಾಗಿ ಕಚೇರಿಯಲ್ಲಿನ ಹಿಂಸೆ ಮತ್ತು ಒತ್ತಡವನ್ನು ಎದುರಿಸಲು ಮೌಲಿಕ ಶರ್ಮ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತಾರೆ. “ ಸಂಸ್ಥೆ ಅಥವಾ ಸಂಘಟನೆಯಲ್ಲಿ ಈ ರೀತಿಯ ಹಿಂಸೆ ಮತ್ತು ಒತ್ತಡಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎನ್ನುವ ನೀತಿ ಇದ್ದರೆ ಅಲ್ಲಿನ ನೌಕರರು ಹಲವು ಮಾರ್ಗಗಳನ್ನು ಅನುಸರಿಸಬಹುದು. ಔಪಚಾರಿಕವಾಗಿ ದೂರು ಸಲ್ಲಿಸಬಹುದು, ಅನೌಪಚಾರಿಕವಾಗಿ ಎರಡು ಹಂತ ಮೇಲ್ಪಟ್ಟ ಮೇನೇಜರ್ ಅಥವಾ ಅಧಿಕಾರಿಗೆ ಅಹವಾಲು ಸಲ್ಲಿಸಬಹುದು. ಒಂದು ವೇಳೆ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ನೌಕರರಿಗೆ ಮಾತನಾಡಲು ಅವಕಾಶವೇ ಇಲ್ಲದಿದ್ದರೆ , ಇಂತಹ ದುರ್ವರ್ತನೆಯ ಬಗ್ಗೆ ವರದಿ ಮಾಡುವ ಅವಕಾಶವೇ ಇಲ್ಲದಿದ್ದರೆ, ಆಗ ನೌಕರರಿಗೆ ಏನೂ ಮಾಡಲಾಗುವುದಿಲ್ಲ. ಮೇನೇಜರ್ ಅಥವಾ ಸಿಇಒ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳು ಈ ರೀತಿ ಹಿಂಸಿಸುವ ಅಧಿಕಾರಿ ಅಥವಾ ಮೇನೇಜರ್ ಪರವಾಗಿದ್ದರೆ, ನೌಕರರು ತಮ್ಮ ನೌಕರಿಯನ್ನು ಬದಲಾಯಿಸುವುದನ್ನು ಬಿಟ್ಟರೆ ಬೇರೆ ಆಯ್ಕೆಯೇ ಇರುವುದಿಲ್ಲ ” ಎಂದು ಹೇಳುತ್ತಾರೆ.

ನಿಮ್ಮ ಆರೋಗ್ಯದ ಕಡೆ ಗಮನ ನೀಡುವುದು ಮತ್ತು ಈ ಸಮಯದಲ್ಲಿ ನಿಮ್ಮ ಅವಶ್ಯಕತೆಗಳೇನು ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಕೆಲಸ ಸ್ಥಳದಲ್ಲಿ ಉಂಟಾಗುವ ಹಿಂಸೆ ಮತ್ತು ಒತ್ತಡವನ್ನು ಎದುರಿಸಲು ಸೂಚನೆಗಳು :

        ನಿಮ್ಮ ಇತಿಮಿತಿಯನ್ನು ಅರ್ಥಮಾಡಿಕೊಳ್ಳಿ. ಯಾರೇ ಆಗಿರಲಿ, ನೀವು ಕೆಲಸ ಮಾಡುವ ಚೌಕಟ್ಟಿನಲ್ಲಿ ಪ್ರವೇಶಿಸಲು ಅವಕಾಶ ಕೊಡಬೇಡಿ.

        ಕೆಲವು ಸನ್ನಿವೇಶಗಳಲ್ಲಿ  ನಿಮಗೆ ಮುಜುಗರ ಉಂಟಾದರೆ ಅಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥ ಮಾಡಿಕೊಂಡು ಏನು ನಡೆಯುತ್ತಿದೆ ಎನ್ನುವುದನ್ನೂ ಅರ್ಥಮಾಡಿಕೊಳ್ಳಿ.

        ನೀವು ಎದುರಿಸುವ ಹಿಂಸೆ ಮತ್ತು ಒತ್ತಡದ ಸನ್ನಿವೇಶಗಳು ಯಾವ ಗಳಿಗೆಯಲ್ಲಿ , ಯಾವ ದಿನದಂದು, ಯಾವ ಸಂದರ್ಭದಲ್ಲಿ ನಡೆದಿವೆ ಎನ್ನುವುದನ್ನು ದಾಖಲಿಸಿ. ಒಂದು ವೇಳೆ ಮುಂದೆ ಎಂದಾದರೂ ನೀವು ದೂರು ಸಲ್ಲಿಸಬೇಕಾದ ಸಂದರ್ಭ ಎದುರಿಸಿದಾಗ ಈ ಮಾಹಿತಿ ನೆರವಾಗುತ್ತದೆ.

        ನೀವು ಮೇಲಿನ ಹಂತದ ಮೇನೇಜರ್ ಅವರ ವಿಶ್ವಾಸ ಗಳಿಸಿ ಅವರಿಗೆ ಸುದ್ದಿ ತಲುಪಿಸುತ್ತಿರಿ.

        ಈ ರೀತಿಯ ಚಿತ್ರಹಿಂಸೆ ಮತ್ತು ಒತ್ತಡದ ಬಗ್ಗೆ ನಿಮ್ಮ ಸಂಸ್ಥೆಯ ನಿಲುವು ಏನು ಎಂದು ತಿಳಿದುಕೊಳ್ಳಿ.  ಆಗ ನಿಮ್ಮ ಆಯ್ಕೆಗಳು ಏನಾಗಿರಬೇಕು ಎಂದು ನಿಮಗೆ ಅರ್ಥವಾಗುತ್ತದೆ.

-  ವರ್ಕ್‍ಪ್ಲೇಸ್ ಅಪ್ಷನ್ಸ್ ಸಂಘಟನೆಯ ನಿರ್ದೇಶಕಿ ಮೌಲಿಕ ಶರ್ಮ ಅವರ ಸಲಹೆಗಳನ್ನು ಆಧರಿಸಿದ ಲೇಖನ.

ಉಲ್ಲೇಖ :  https://www.workplacebullying.org/individuals/problem/early-signs/ 

-0-0-0

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org