ಪ್ರಸವಾನಂತರದ ಆರೈಕೆ

ನೂತನ ಜವಾಬ್ಧಾರಿಗಳು ಆಗತಾನೇ ತಾಯಿಯಾದ ಮಹಿಳೆಗೆ ಹೊರೆಯೆನಿಸಬಹುದು

ಗರ್ಭಧಾರಣೆಯ ಸಮಯದಲ್ಲಿ ಎಲ್ಲಾ ಗಮನವು ಭಾವೀ ತಾಯಿಯ ಕಡೆಗೆ ಇದ್ದರೆ, ಪ್ರಸವಾನಂತರ ಕೂಡಲೇ ಆ ಗಮನವು ಮಗುವಿನ ಕಡೆಗೆ ಹೊರಳುತ್ತದೆ. ಆಗಷ್ಟೇ ಚೇತರಿಸಿಕೊಳ್ಳುತ್ತಿರುವ, ಮೊದಲ ಬಾರಿ ತಾಯಿಯಾಗುತ್ತಿರುವ ಮಹಿಳೆಗೆ ಕೂಡಲೇ ಮಗುವಿನ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದು ಕಷ್ಟವಾಗಬಹುದು. ನೂತನ ಜವಾಬ್ಧಾರಿಗಳು ಆಗತಾನೇ ತಾಯಿಯಾದ ಮಹಿಳೆಗೆ ಹೊರೆಯೆನಿಸಬಹುದು. ಆ ಸಂದರ್ಭವನ್ನು ನೀವು ಈ ರೀತಿಯಾಗಿ ನಿರ್ವಹಿಸಬಹುದು:

  • ಪ್ರಸವಾನಂತರ ಕೆಲವು ದಿನ ಅಥವಾ ವಾರಗಳವರೆಗೆ ಬಳಲಿಕೆಯುಂಟಾಗುವುದು ಮತ್ತು ಸುಸ್ತೆನಿಸುವುದು ಸಹಜ. ಅತಿಯಾದ ರಕ್ತಸ್ರಾವದಿಂದಾಗಿ ನೀವು ಬಳಲಿರಬಹುದು ಅಥವಾ ಭಯಬೀತರಾಗಿರಬಹುದು. ತೂಕವು ವೇಗವಾಗಿ ಕಡಿಮೆಯಾಗುವುದರ ಜೊತೆಗೆ ‘ಹೊಟ್ಟೆಯು ಖಾಲಿ’ ಎನಿಸಬಹುದು. ಮೊದಲ 2/3 ವಾರಗಳ ಕಾಲ ಚೆನ್ನಾಗಿ ವಿಶ್ರಮಿಸಿ.

  • ನೀರು ಮತ್ತು ದ್ರವಗಳನ್ನು ಹೆಚ್ಚಾಗಿ ಸೇವಿಸಿ: ಈ ಹಂತದಲ್ಲಿ ದೇಹಕ್ಕೆ ಸಾಕಷ್ಟು ನೀರನ್ನು ಒದಗಿಸುವುದು ಅತ್ಯಂತ ಅಗತ್ಯ.

  • ಪೋಷಕಾಂಶಗಳಿರುವ ಸಾಮಾನ್ಯ ಆಹಾರವನ್ನು ಸೇವಿಸಿ.

  • ನೂತನ ತಾಯಂದಿರಿಗೆ ಪೋಷಕಾಂಶಭರಿತ ಆಹಾರದ ಅಗತ್ಯವಿರುತ್ತದೆ. ನಿಮ್ಮ ಆಹಾರಭ್ಯಾಸ ಹೇಗಿರಬೇಕು ಎಂಬ ಕುರಿತು ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಕೇವಲ ಉಳಿದವರು ಹೇಳಿದರೆಂಬ ಕಾರಣಕ್ಕೆ ಯಾವುದೇ ಆಹಾರಾಭ್ಯಾಸವನ್ನು ಪಾಲಿಸಬೇಡಿ. ಪ್ರಸವಾನಂತರದ ಆಹಾರದ ಕುರಿತು ಹಲವು ನಂಬಿಕೆಗಳಿವೆ. ಆದ್ದರಿಂದ ವೈಜ್ಞಾನಿಕವಾದ, ವೈದ್ಯಕೀಯವಾಗಿ ಸರಿಯೆನಿಸಿರುವ ಆಹಾರಾಭ್ಯಾವನ್ನು ಅನುಸರಿಸಿ.

  • ಸ್ತನ್ಯಪಾನ: ಚೊಚ್ಚಲ ತಾಯಂದಿರಿಗೆ ಮೊದಲು ಕೆಲವು ದಿನಗಳು ಎದೆ ಹಾಲು ಉಣಿಸುವುದು ಕಷ್ಟವೆನಿಸಬಹುದು. ಆಸ್ಪತ್ರೆಯಲ್ಲಿ ವೈದ್ಯರ ಅಥವಾ ದಾದಿಯರ ಸಹಾಯ ಪಡೆಯಿರಿ. ಸ್ತನ್ಯಪಾನದ ಕುರಿತು ಸಲಹೆ ಪಡೆಯಲು ಹಿಂಜರಿಯಬೇಡಿ ಮತ್ತು ಅನಗತ್ಯ ಒತ್ತಡಕ್ಕೆ ಒಳಗಾಗಬೇಡಿ. ಸರಿಯಾದ, ಆರಾಮದಾಯಕ ಭಂಗಿ, ಸೂಕ್ತ ಮನಸ್ಥಿತಿ ಮತ್ತು ಸರಿಯಾದ ವಿಧಾನದ ಸಹಾಯದಿಂದ ಸ್ತನ್ಯಪಾನವನ್ನು ಸುಲಭವಾಗಿ ಕಲಿಯಬಹುದು. ನಿಮಗೆ ಸಮಸ್ಯೆಗಳು ಅಥವಾ ಅನುಮಾನಗಳಿದ್ದಲ್ಲಿ ಎದೆಹಾಲು ತಜ್ಞರ ಬಳಿ ಸಮಾಲೋಚಿಸಿ.

  • ಪ್ರಸವಾನಂತರ ನಿಮಗೆ ಸುಸ್ತೆನಿಸುವುದು ಸಹಜ ಮತ್ತು ಕೆಲವೊಮ್ಮೆ ನೀವು ಮಗುವನ್ನು ಹೊಂದುವ ನಿಮ್ಮ ನಿರ್ಧಾರವನ್ನು ಪ್ರಶ್ನಿಸಬಹುದು-ಮುಖ್ಯವಾಗಿ ಮೊದಲ ಕೆಲವು ದಿನಗಳಲ್ಲಿ. ಆದ್ದರಿಂದ ನಿಮಗೆ ಅಗತ್ಯ ವಿಶ್ರಾಂತಿ ದೊರೆಯಲು ಯಾರದಾದರೂ ಸಹಾಯ ಪಡೆಯುವುದು ಒಳ್ಳೆಯದು.

  • ಸುಸ್ತು ಮತ್ತು ಯಾವುದೇ ನಿರ್ಧಾರಕ್ಕೆ ಬರಲಾಗುತ್ತಿಲ್ಲವೆಂಬ ಭಾವನೆ ಮೊದಲ ಕೆಲವು ತಿಂಗಳುಗಳಲ್ಲಿ ಸಾಮಾನ್ಯವಾಗಿದೆ.

  • ವ್ಯಾಯಾಮ: ಹೆರಿಗೆಯಾದ ಕೆಲವು ವಾರಗಳ ನಂತರ ನೀವು ಹಗುರವಾದ ವ್ಯಾಯಾಮಗಳನ್ನು ಆರಂಭಿಸಬಹುದು. ವೈದ್ಯರ ಸಲಹೆ ಪಡೆದು ನಿಮ್ಮ ದೈಹಿಕ ಪರಿಸ್ಥಿತಿಗೆ ಸೂಕ್ತವಾದ ವ್ಯಾಯಾಮಗಳನ್ನು ಆರಂಭಿಸಿ.

  • ಅವರ ಸಮಯ ಮತ್ತು ಗಮನವು ಮಗುವಿಗೇ ಹೆಚ್ಚಾಗಿ ಮೀಸಲಾಗಿರುವುದರಿಂದ, ನೂತನ ತಾಯಂದಿರು ಪತಿಯ ಜೊತೆಗೆ ಸಮಯ ಕಳೆಯಲು ಅಷ್ಟಾಗಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಮಗುವಿನ ಆರೈಕೆಯಲ್ಲಿ ಅವರನ್ನೂ ಸೇರಿಸಿಕೊಳ್ಳಿ. ಇದರಿಂದ ನೀವು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ಒಟ್ಟಾಗಿ ಸಮಯ ಕಳೆಯಲೂ ಸಾಧ್ಯವಾಗುತ್ತದೆ.

  • ಒಂದುವೇಳೆ ಮಗುವಿನ ಆರೈಕೆಯಿಂದ ಒತ್ತಡ ಉಂಟಾಗಿದ್ದಲ್ಲಿ, ಇನ್ನೊಬ್ಬರು ಮಗುವನ್ನು ನೋಡಿಕೊಳ್ಳುತ್ತಿರುವಾಗ ನಿಮಗಾಗಿ ಕೆಲವು ಸಮಯಗಳನ್ನು ಮೀಸಲಿಡಿ.

  • ಮಗುವು ಖುಷಿಯಿಂದ, ಶಾಂತಿಯಿಂದ ಇರುವಾಗ ಅದರ ಜೊತೆ ಸಮಯ ಕಳೆಯಿರಿ.

ಉದ್ಯೋಗಸ್ಥ ಭಾವಿ ತಾಯಂದಿರಿಗೆ

  • ಮಗುವಿನ ಜನನದ ನಂತರದ ಕೆಲಸದ ವಿಧಾನವನ್ನು ಮುಂಚಿತವಾಗಿಯೇ ಯೋಜಿಸಿ.

  • ನಿಮ್ಮ ಮ್ಯಾನೇಜರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ನಿಮ್ಮ ಅವಶ್ಯಕತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ನಿಮಗೆ ಕೆಲವೊಮ್ಮೆ ತಲೆ ತಿರುಗುವ ಅಥವಾ ನಿಶ್ಯಕ್ತಿಯ ಅನುಭವವಾಗಬಹುದು. ನಿಮ್ಮ ದೇಹಕ್ಕೆ ಅಗತ್ಯವಿರುವಾಗ ನಿಮ್ಮ ಮೇಲಾಧಿಕಾರಿಯ ಅನುಮತಿ ಪಡೆದು ವಿಶ್ರಾಂತಿ ಪಡೆಯಿರಿ. ಮನೆಯಿಂದ ಕೆಲಸ ಮಾಡುವ ಅನುಕೂಲತೆಯಿದೆಯೇ ವಿಚಾರಿಸಿ. ಉದ್ಯೋಗಸ್ಥ ತಾಯಂದಿರ ಕೆಲಸದ ನಿಯಮಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಿ.

  • ವಿಶ್ರಾಂತಿಯ ಸಮಯ: ನಿಮಗೆ ಪ್ರತಿ 10-15 ನಿಮಿಷಗಳಿಗೊಮ್ಮೆ ಲಘು ವಿರಾಮ ಪಡೆಯಲು ಸಾಧ್ಯವಿದೆಯೇ?

  • ನೀವು ಕೆಲಸದ ಕಾರಣಕ್ಕೆ ಹೊರಗೆ ಹೋಗಬೇಕಾದ ಸಂದರ್ಭ ಬಂದರೆ ಎದೆಹಾಲನ್ನು ತೆಗೆದು, ಸಂಗ್ರಹಿಸಿಡುವ ವಿಧಾನದ ಬಗ್ಗೆ ತಿಳಿದುಕೊಳ್ಳಿ.

  • ಒತ್ತಡವು ತಾಯಿ ಮತ್ತು ಮಗು ಇಬ್ಬರನ್ನೂ ಬಾಧಿಸುತ್ತದೆ. ನಿಮ್ಮ ಕೆಲಸದಿಂದಾಗಿ ಒತ್ತಡವುಂಟಾಗುತ್ತಿದ್ದರೆ, ನಿಮ್ಮ ಮೇಲಾಧಿಕಾರಿಯ ಜೊತೆ ಮಾತನಾಡಿ ಮತ್ತು ನಿಮ್ಮ ಜವಾಬ್ದಾರಿಯನ್ನು ಬದಲಾಯಿಸಿಕೊಳ್ಳಿ. ಪ್ರಯಾಣದ ಆಯಾಸವನ್ನು ತಪ್ಪಿಸಲು ಮನೆಯಿಂದ ಕೆಲಸ ಮಾಡುವುದು ಸಾಧ್ಯವಿದೆಯೇ ಎಂದು ತಿಳಿದುಕೊಳ್ಳಿ. ನಿಮ್ಮ ಸಂಸ್ಥೆಯು ನೀಡುವ ಹೆರಿಗೆ ರಜೆಯನ್ನು ಸದುಪಯೋಗ ಪಡಿಸಿಕೊಳ್ಳಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org