ಆತ್ಮಹತ್ಯೆ ಆಲೋಚನೆಯಿಂದ ಹೊರಬರುವುದು ಹೇಗೆ?

ಬಿರುಗಾಳಿ ಕಳೆಯಲು ಕಾಯಬೇಡಿ, ಮಳೆಯಲ್ಲಿ ಕುಣಿಯಲು ಕಲಿಯಿರಿ - ವಿವಿಯನ್ ಗ್ರೀನ್

 ಈ ಮೇಲಿನ ಹೇಳಿಕೆ ಸಮಸ್ಯೆಗಳು ಬಂದಾಗ ನಾವು ಹೇಗೆ ಪರಿಹಾರ ಹುಡುಕಬೇಕು ಹಾಗೂ ಆತ್ಮಹತ್ಯೆ ಆಲೋಚನೆಗಳನ್ನು ತಡೆಗಟ್ಟುವ ಮಾರ್ಗದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಬದುಕಿನಲ್ಲಿ ಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂಥ ಸಮಯದಲ್ಲಿ ತನಗೆ ತಾನೆ ಹೇಗೆ ಸಹಾಯ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ಹಲವು ಮಾರ್ಗಗಳಿವೆ. 

ಮನೋಜ್ (ಹೆಸರು ಬದಲಿಸಲಾಗಿದೆ), 26 ವರ್ಷದ ಐಟಿ ಉದ್ಯೋಗಿ. ಆತ ನಿಷ್ಠಾವಂತ ಕೆಲಸಗಾರನಾಗಿದ್ದು ಆತನ ಕಾರ್ಯದಕ್ಷತೆಯನ್ನು ಸಹೋದ್ಯೋಗಿಗಳು ಮತ್ತು ಮ್ಯಾನೇಜರ್ ಮೆಚ್ಚುತ್ತಿದ್ದರು. ಆತನಿಗೆ ಇತ್ತೀಚೆಗೆ ಕೆಲಸ ಕಷ್ಟವೆನಿಸಿತ್ತು. ಸಾಕಷ್ಟು ಸಲ ದಣಿದಂತೆ ಕಾಣುತ್ತಿದ್ದ. ಏಕಾಗ್ರತೆ ಕಳೆದುಕೊಂಡಿದ್ದ. ಆತನಿಗೆ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇವಿಷ್ಟಕ್ಕೂ ಕಾರಣ ಆತನ ಕೌಟಂಬಿಕ ಸಮಸ್ಯೆಗಳು.

ಆತನ ತಂದೆ ದಿನ ನಿತ್ಯ ಕುಡಿದು ಬಂದು ತಾಯಿಗೆ ಹೊಡೆಯುತಿದ್ದರು. ಇತ್ತೀಚಿನ ದಿನಗಳಲ್ಲಿ ಮನೋಜ್ ತನ್ನ ತಂದೆಯ ವರ್ತನೆಯ ಬಗ್ಗೆ ಹೆಚ್ಚು ಚಿಂತೆಗೀಡಾಗಿದ್ದ. ತಾಯಿಯ ಆರೋಗ್ಯ ಮತ್ತು ಮನೆಯ ಆರ್ಥಿಕ ಸಂಕಷ್ಟದ ಬಗ್ಗೆ ಚಿಂತೆ ಮಾಡಿ ಬಹಳ ನೊಂದಿದ್ದ. ಈ ಕಾರಣದಿಂದ  ಆತ ತನ್ನ ಬದುಕನ್ನು ಕೊನೆಗೊಳಿಸಿಕೊಳ್ಳುವ ಆಲೋಚನೆ ಮಾಡುತ್ತಿದ್ದ.

ಆತ ಕಾಲೇಜಿನಲ್ಲಿ ಸೆಕೆಂಡ್ ಸೆಮಿಸ್ಟರ್‍ನಲ್ಲಿ ಫೇಲಾದಾಗಲೂ ಇದೇ ರೀತಿ ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡಿದ್ದ. ಮನೋಜ್ ತನ್ನ ರೂಮೇಟ್ ರವಿಯ ಜೊತೆ ಈ ಆಲೋಚನೆಯ ಬಗ್ಗೆ ಮಾತನಾಡಿದ ನಂತರ ಅವನ ಮನಸ್ಸು ನಿರಾಳವಾಯಿತು. ಆ ಸಮಯದಲ್ಲಿ ಮನೋಜ್ ಕಾಲೇಜ್ ಕ್ರಿಕೆಟ್ ತಂಡದಲ್ಲಿದ್ದ. ಮುಂಬರುವ ಟೂರ್ನಮೆಂಟ್‍ಗಾಗಿ ಅಭ್ಯಾಸ ಮಾಡಬೇಕಿತ್ತು. ಆತ ಕ್ರಿಕೆಟ್‍ನತ್ತ ಹೆಚ್ಚು ಗಮನ ಹರಿಸಿದ್ದರಿಂದ ಮತ್ತು ರವಿ ಜೊತೆ ಮಾತಾಡಿದ್ದರಿಂದ ಆತನ ಆತ್ಮಹತ್ಯೆ ಯೋಚನೆ ಕಡಿಮೆಯಾಯಿತು. ರವಿ ಜೊತೆ ಅಧ್ಯಯನ ಮಾಡಲು ಶುರು ಮಾಡಿದ ಮತ್ತು ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ. ಆಗ ಅವನ ಆತ್ಮಹತ್ಯೆ ಚಿಂತನೆ ಸಂಪೂರ್ಣವಾಗಿ ದೂರವಾಯ್ತು.  ತನ್ನ ಕಾಲೇಜು ದಿನಗಳಲ್ಲಿ ತಾನು ಹೇಗೆ ಎಲ್ಲವನ್ನೂ ಜಯಿಸಿ ಬಂದೆ ಎಂಬುದನ್ನು ನೆನಪಿಸಿಕೊಂಡ ಮನೋಜ್, ಈಗಲೂ ಅದೇ ರೀತಿ ಜಯಿಸಿಲು ನಿರ್ಧರಿಸಿದ. ರವಿಗೆ ಕರೆ ಮಾಡಿ ಪ್ರತಿನಿತ್ಯ ಅವನೊಂದಿಗೆ ವ್ಯಾಯಾಮ ಮಾಡಲು ಆರಂಭಿಸಿದ. 

ಮನೋಜ್‍ನ ಆತ್ಮಹತ್ಯೆ ನಿರ್ಧಾರ ನಿಧಾನವಾಗಿ ದೂರವಾಗತೊಡಗಿತು. ಕೆಲಸದಲ್ಲಿ ಆತನ ಕಾರ್ಯದಕ್ಷತೆ ಹೆಚ್ಚಾಯ್ತು. ಆತ್ಮಹತ್ಯೆ ಆಲೋಚನೆ ಬದಿಗಿಟ್ಟು ಆತ ತನ್ನ ಕುಟುಂಬದ ಬಗ್ಗೆ ಮುಂದಿನ ಯೋಜನೆಗಳ ಕುರಿತು ಯೋಚಿಸತೊಡಗಿದ. ರವಿಯ ಸಹಾಯ ತೆಗೆದುಕೊಂಡು ಹೊಸ ಯೋಚನೆಗಳೊಂದಿಗೆ ಕೆಲಸದಲ್ಲೂ ಉತ್ತಮನಾದ.

 ಪ್ರತಿ ಮೂರು ವ್ಯಕ್ತಿಗಳಲ್ಲಿ ಒಬ್ಬರು ಬದುಕಿನ ಯಾವುದಾದರೂ ಸಮಯದಲ್ಲಿ ಆತ್ಮಹತ್ಯೆ ಯೋಚನೆ ಮಾಡುತ್ತಾರೆ. ಜೀವನದಲ್ಲಿ ಸೋಲು, ನಿರಾಸೆ ಮತ್ತು ಕಹಿ ಘಟನೆಗಳಾದಾಗ ಆತ್ಮಹತ್ಯೆ ಯೋಚನೆ ಸಾಮಾನ್ಯ. ಬೇರೆಯವರೊಂದಿಗೆ ಹಂಚಿಕೊಳ್ಳಲು ಕಷ್ಟ. ಅವರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಬೇಸರಪಡಬಹುದೆಂಬ ಭಯ. ಇನ್ನೂ, ಈ ಆಲೋಚನೆಗಳನ್ನು ಹಂಚಿಕೊಳ್ಳುವವರು ಅತಿಯಾಗಿ ಮಾತನಾಡುತ್ತಿರುವಂತೆ, ಭಾವ ಉದ್ರೇಕಕ್ಕೆ ಒಳಗಾದವರಂತೆ ಭಾಸವಾಗುತ್ತಾರೆ. ಆತ್ಮಹತ್ಯೆ ಕುರಿತ ಆಲೋಚನೆ ಹಂಚಿಕೊಳ್ಳುವುದು ಮನದೊಳಗಿನ ನೋವು ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತದೆ.

ಆತ್ಮಹತ್ಯೆ ಆಲೋಚನೆಗಳು ಮರುಕಳಿಸುತ್ತವೆ ಮತ್ತು ಏಕಾಂಗಿಯಾಗಿದ್ದಾಗ, ಕೆಲಸವಿಲ್ಲದೆ ಖಾಲಿ ಇರುವಾಗ ಹೆಚ್ಚಾಗುತ್ತವೆ. ಕುಟುಂಬದವರೊಂದಿಗೆ ಮಾತನಾಡುವುದು ಅಥವಾ ಹತ್ತಿರದ ಸ್ನೇಹಿತರೊಂದಿಗೆ ಇಷ್ಟವಾದ ಚಟುವಟಿಕೆ ಆರಂಭಿಸುವುದು ಆತ್ಮಹತ್ಯೆ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ ಮನಸ್ಸಿಗೆ ಸಂತೋಷ ಕೊಡುವ ಹವ್ಯಾಸದಲ್ಲಿ ಮತ್ತು ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಆತ್ಮಹತ್ಯೆ ಯೋಚನೆಗಳು ಕಡಿಮೆಯಾಗುತ್ತವೆ.

ಹಿಂದಿನ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ ಉದಾಹರಣೆಗಳನ್ನು ನೆನೆಯುವುದು ಮನಸ್ಸಿಗೆ ಧೈರ್ಯ ತುಂಬುತ್ತದೆ. ಮನೋಜ್ ತನ್ನ ಪ್ರಸ್ತುತದ ಸನ್ನಿವೇಶದಿಂದ ಹೊರಬರಲು ಹಿಂದಿನ ಸಂಗತಿಗಳನ್ನು ಬಳಸಿಕೊಂಡ. ಧನಾತ್ಮಕ ಭವಿಷ್ಯದ ಅನುಭವಗಳನ್ನು ಯೋಚಿಸಿದ. ಇದು ಆತ್ಮಹತ್ಯೆ ಯೋಚನೆಯನ್ನುಮರೆಸಿತು. 

ಆತ್ಮಹತ್ಯೆಯ ಯೋಚನೆಗಳು ದಿನದ ಎಲ್ಲ ಸಮಯದಲ್ಲಿ ಅಥವಾ ಎಲ್ಲ ದಿನಗಳಲ್ಲಿ ಒಂದೇ ರೀತಿಯಾಗಿರದೆ ಏರುಪೇರಾಗಿರುತ್ತದೆ. ಮತ್ತು ಇದು ಕೆಲ ದಿನ ಅಥವಾ ತಿಂಗಳು ಮುಂದುವರಿಯಬಹುದು. ಈ ಆಲೋಚನೆಗಳನ್ನು ತಡೆಯುವ ಮಾರ್ಗವನ್ನು ಹುಡುಕಬೇಕು ಹಾಗೂ ತೀರ ಕಷ್ಟಕರವಾದ ಸಂದರ್ಭಗಳು ಬಂದಾಗ ಯಾರಲ್ಲಿ ಅಥವಾ ಹೇಗೆ ಸಹಾಯ ಪಡೆಯಬಹುದು ಎಂದು ಆಲೋಚನೆ ಮಾಡಬೇಕು. ಇದನ್ನು ಪುಸ್ತಕದಲ್ಲಿ ಬರೆದಿಟ್ಟರೆ ಒಳ್ಳೆಯದು.

  • ಬದುಕಲು ಇರುವ ಕಾರಣಗಳನ್ನು ಬರೆದಿಡಿ (ಉತ್ತೇಜನ, ಭವಿಷ್ಯದ ಯೋಜನೆಗಳು, ನಿಮ್ಮ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಗಳು, ಹಿಂದಿನ ಒಳ್ಳೆಯ ಅನುಭವಗಳು).
  • ಆತ್ಮಹತ್ಯೆ ಯೋಚನೆಗಳಿಂದ ಹೊರತರುವ ಚಟುವಟಿಕೆಗಳಲ್ಲಿ ಮಗ್ನರಾಗಿ.
  • ನಂಬಿಕಸ್ಥ ವ್ಯಕ್ತಿಗಳನ್ನು ಸಂಪರ್ಕಿಸುವ ಅಥವಾ ಅವರೊಂದಿಗೆ ನಿತ್ಯ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ.
  • ಆತ್ಮಹತ್ಯೆ ತಡೆ ಸಹಾಯವಾಣಿ ಅಥವಾ ಸಲಹೆಗಾರರ ಫೋನ್ ನಂಬರ್ ತೆಗೆದುಕೊಳ್ಳಿ.
  • ಈ ಯೋಜನೆಗಳನ್ನು ನಿಮ್ಮ ನಂಬಿಗಸ್ಥ ವ್ಯಕ್ತಿಗಳ ಜೊತೆ ಹಂಚಿಕೊಳ್ಳಿ. ನಿಮ್ಮ ಬಳಿ ಒಂದು ಪ್ರತಿ ಇಟ್ಟುಕೊಳ್ಳಿ. 
  • ಆತ್ಮಹತ್ಯೆ ಯೋಚನೆಗಳಿಂದ ಹೊರಬರಲು ಅತ್ಯುತ್ತಮ ವಿಧಾನವೆಂದರೆ ಸ್ವಯಂ ಸಹಾಯ.

ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡುವವರು ಈ ಸಂಕಟದಿಂದ ಹೊರಬರಲು ಇಚ್ಛಿಸುತ್ತಾರೆ. ಯಾರಿಂದ ಅಥವಾ ಹೇಗೆ ಸಹಾಯ ಸಿಗಬಹುದು ಎಂದು ಕಾದಿರುತ್ತಾರೆ. ಮೇಲೆ ಹೇಳಿರುವ ಸಲಹೆಗಳನ್ನು ಅನುಸರಿಸಿದ ನಂತರವೂ ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಕೂಡಲೇ ಮನೆ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಹಾಗೂ ಅವರ ಸಲಹೆ ಪಡೆಯಿರಿ. ಪ್ರಾರಂಭದಲ್ಲಿ ಉಲ್ಲೇಖಿಸಿದ ವಿವಿಯಾನ್ ಹೇಳಿಕೆಯಂತೆ ಪ್ರವಾಹಕ್ಕಾಗಿ ಭಯಪಡದೆ ಆಗಾಗ ಮಳೆಯಲ್ಲಿ ನೆನೆದು ಪ್ರಬಲರಾಗುವುದು ಉತ್ತಮ.  

ಡಾ.ವಿ.ಸೆಂತಿಲ್ ಕುಮಾರ್ ರೆಡ್ಡಿ. ಸಹಾಯಕ ಪ್ರಾಧ್ಯಾಪಕರು, ಸೈಕ್ಯಾಟ್ರಿ ವಿಭಾಗ, ನಿಮ್ಹಾನ್ಸ್

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org