ಕಿರುಕುಳಕ್ಕೆ ಒಳಗಾದ ಮಕ್ಕಳ ಆರೈಕೆ

ಸಾಮಾನ್ಯವಾಗಿ ಒಂದು ಮಗು ಲೈಂಗಿಕ ಕಿರುಕುಳಕ್ಕೆ ಒಳಗಾದಾಗ, ಪೋಷಕರು ಅಥವಾ ಆರೈಕೆದಾರರು ಘಟನೆಯಿಂದ ಆಘಾತಕ್ಕೊಳಗಾಗುವುದು ಸಹಜ. ಅದಾಗ್ಯೂ, ಇಂತಹ ಸನ್ನಿವೇಶದಲ್ಲಿ ತಾಳ್ಮೆಯಿಂದ ಇರುವುದು ಬಹಳ ಮುಖ್ಯ. ಮಗುವಿಗೆ ಬೆಂಬಲ ಮತ್ತು ಭರವಸೆ ನೀಡುವ ಜವಾಬ್ದಾರಿ ನಿಮ್ಮದು. ಇದರಿಂದ  ಮಗುವಿನ ಯಾತನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು.ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಹಾಗು ತರುಣರ ಮನೋವೈದ್ಯರಾದ ಡಾ. ಪ್ರೀತಿ ಜೇಕಬ್ ರವರು, ಲೈಂಗಿಕ ಕಿರುಕುಳ ಅನುಭವಿಸಿದ ಮಗುವಿಗೆ ಬೆಂಬಲ ನೀಡುವ ಬಗ್ಗೆ ಕೆಲವು ಮುಖ್ಯ ಸಲಹೆಗಳನ್ನು ನೀಡುತ್ತಾರೆ.

 ಏನು ಮಾಡಬೇಕು:

  1. ಮಗು ಹೇಳಿದ ಮಾತನ್ನು ನಂಬಿ ಮತ್ತು ಮಗುವಿಗೆ ತಾನು ಸುರಕ್ಷಿತವಾಗಿದ್ದೇನೆ ಎಂಬ ಭರವಸೆ ನೀಡಿ.
  2. ಮಗು, ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಉತ್ತೇಜಿಸಿ. ಭಾವನೆಗಳಲ್ಲಿ, ಇದು ಸರಿ ಅಥವ ಇದು ತಪ್ಪು ಎನ್ನುವ ಭೇದವಿಲ್ಲ ಎಂದು ಅರ್ಥ ಮಾಡಿಸಿ. ಇದರಿಂದ ಮಗು ತನ್ನ ಆತ್ಮೀಯರ ಬಳಿ ಮುಕ್ತವಾಗಿ ಮಾತನಾಡಲು ಸಾಧ್ಯ.
  3. ಮಗುವಿಗೆ, ತನಗೆ ಕಿರುಕುಳ ನೀಡಿದ ವ್ಯಕ್ತಿಯ ಬಗ್ಗೆ ಅಸ್ಪಷ್ಟ ಭಾವನೆಗಳಿರುತ್ತದೆ. (ಒಂದು ವೇಳೆ ವ್ಯಕ್ತಿ ಕುಟುಂಬದವರೇ ಆಗಿದ್ದಾಗ, ಉದಾಹರಣೆಗೆ ಮಾವ, ಅಣ್ಣಾ, ಅಂಕಲ್, ಡ್ರೈವರ್, ಇತ್ಯಾದಿ) ಮಕ್ಕಳು ಅದರ ಬಗ್ಗೆ ಹೇಳಿಕೊಳ್ಳಲು ಪೋಷಕರು ಸೂಕ್ತ ತಿಳುವಳಿಕೆ ಮೂಡಿಸಬೇಕು.
  4. ಇಂತಹ ಆಘಾತಕಾರಿ ಅನುಭವವನ್ನು ನಿಭಾಯಿಸುವುದು ತುಂಬಾ ಯಾತನೆಯ ವಿಷಯ. ಈ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುವಾಗ ಆತಂಕ ಸಹಜ. ಆದ್ದರಿಂದ ಆತ್ಮೀಯರ ಬೆಂಬಲಪಡೆಯಿರಿ ಮತ್ತು ಅಗತ್ಯವಿದ್ದರೆ ತಜ್ಞರ ಸಹಾಯ ಪಡೆಯಿರಿ.

ಏನು ಮಾಡಬಾರದು :

  • ಈ ಅನುಭವ ಮತ್ತು ಪರಿಣಾಮವನ್ನು ದುರಂತದಂತೆ ಪರಿಗಣಿಸಬೇಡಿ. ಉದಾಹರಣೆಗೆ, ಕಿರುಕುಳಕ್ಕೆ ಒಳಗಾದ ಮಗುವಿನ ತಾಯಿಗೆ, ಈ ಘಟನೆಯಿಂದ ಮಗುವಿನ ಮದುವೆಗೆ ಅಡ್ಡಿಯಾಗಬಹುದು ಎಂಬ  ಭಾವನೆ ಮೂಡಬಹುದು.
  • ಪೋಷಕರ ಅಭಿಪ್ರಾಯ ಮತ್ತು ಭಾವನೆಗಳು ಮಗುವಿನ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ ಪೋಷಕರು ತಮ್ಮೊಳಗಿರುವ ನಕಾರಾತ್ಮಕ ಯೋಚನೆಯನ್ನು ಗುರುತಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಮಗುವಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.
  • ಮಕ್ಕಳು ಕಿರುಕುಳದ ಬಗ್ಗೆ ಮಾತನಾಡಲು ಬಯಸಿದರೆ, ತಡೆಯಬೇಡಿ. ಹಲವು ಮಕ್ಕಳು ದೌರ್ಜನ್ಯ ನಂತರದ  ಪರಿಣಾಮಗಳ ಬಗ್ಗೆ ಆತಂಕಗೊಳ್ಳುತ್ತಾರೆ. ಉದಾಹರಣೆಗೆ, ಒಂದು ಮಗು ಈ ಘಟನೆಯ ನಂತರ ಶಾಲೆಗೆ ಹೋಗಲು ಮತ್ತು ತನ್ನ ಸಹಪಾಠಿಗಳನ್ನು ಮಾತನಾಡಿಸಲು ಹಿಂಜರಿಯುತ್ತದೆ. ಈ ಸಮಯದಲ್ಲಿ ಮಗುವಿಗೆ ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಬೇಕು.
  • ತಮ್ಮ ಮಗುವಿಗಾದ ತೊಂದರೆ ಬಗ್ಗೆ ಕೋಪ ಮತ್ತು ಆಕ್ರೋಶವಿರುತ್ತದೆ. ಘಟನೆಯ ಬಗ್ಗೆ ಮತ್ತೆ ಮಾತನಾಡಿದರೆ, ಮಗು ತನಗಾದ ಭೀಕರ ಅನುಭವವನ್ನು ನೆನಪಿಸಕೊಳ್ಳಬಹುದು ಎಂಬ ಗೊಂದಲಕ್ಕೆ ಸಿಲುಕಿ, ವಿಷಯವನ್ನು ಪ್ರಸ್ತಾಪಿಸದೇ ಇರಬಹುದು. ಈ ಕಾರಣದಿಂದ ಮಗು  ತನ್ನ ಪೋಷಕರಿಗೆ ಬೇಸರ ಉಂಟಾಗುತ್ತದೆ ಎಂದು ತನ್ನ ಭಾವನೆಗಳನ್ನು ಹೇಳಿಕೊಳ್ಳದೇ ಸಂಕಟ ಪಡುತ್ತದೆ. ಒಂದು ವೇಳೆ ಮಗುವಿಗೆ ಸಹಾಯ ಮಾಡಲು ನೀವು ಅಸಹಾಯಕರಾದರೆ, ಸೂಕ್ತ ತಜ್ಞರ ಸಹಾಯ ಪಡೆಯಿರಿ.   
  • ಮಗು, ತನ್ನ ಮೇಲೆ ಜರುಗಿದ ದೌರ್ಜನ್ಯದ ವಿಷಯವನ್ನು ನಿಮ್ಮೊಂದಿಗೆ ತಕ್ಷಣ ಹೇಳಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಮಗುವಿನ ಮೇಲೆ ಕೋಪಗೊಳ್ಳಬೇಡಿ. ಇದಕ್ಕೆ ಹಲವಾರು ಕಾರಣವಿರಬಹುದು. ಉದಾಹರಣೆಗೆ, ಕೆಲವು ಮಕ್ಕಳಿಗೆ ತಾವು ಬೆಳೆದುಬಂದ ರೀತಿಯಿಂದ ವಿಷಯವನ್ನು ಹೇಗೆ ಪ್ರಸ್ತಾಪಿಸಬೇಕು? ತಮ್ಮ ಮೇಲೆ ಆಪಾದನೆ ಬಂದರೆ ಎಂಬ ಆತಂಕ,  ಒಂದು ವೇಳೆ ದೌರ್ಜನ್ಯ ಎಸಗಿದ ವ್ಯಕ್ತಿಯು ಕುಟುಂಬದವನಾಗಿದ್ದು, ವಿಷಯವನ್ನು ಯಾರೊಂದಿಗೂ ಹೇಳಬಾರದು ಎಂಬ ಒತ್ತಾಯ ಹೇರಿರಬಹುದು ಅಥವಾ ಹೆದರಿಸಿರಬಹುದು. ತಮಗೆ ಏನಾದರೂ ತೊಂದರೆಯಾದರೆ ಅಥವಾ ಆ ವ್ಯಕ್ತಿಗೆ ತೊಂದರೆಯಾದರೆ ಎಂಬ ಭೀತಿಯಿರುತ್ತದೆ. ಈ ಎಲ್ಲಾ ಕಾರಣಕ್ಕೆ ಮಗು ವಿಷಯವನ್ನು ಮುಚ್ಚಿಡುತ್ತದೆ. 

ಮಗುವಿನ ಸಹಜವಾದ ಚಟುವಟಿಕೆಗಳಲ್ಲಿ ಬದಲಾವಣೆ ತರಬೇಡಿ. ಇಂತಹ ಘಟನೆಯ ನಂತರ ಸಾಮಾನ್ಯವಾಗಿ ನಿಮಗೆ ಅಪರಾಧಿ ಪ್ರಜ್ಞೆಕಾಡುತ್ತಿರುತ್ತದೆ. ಆಗ ಮಗುವಿನ ಆಸೆಗಳ/ ಬಯಕೆಗಳ ಮೇಲೆ ನಿಯಂತ್ರಣ ಹಾಕುವುದಿಲ್ಲ. ಉದಾಹರಣೆಗೆ, ಮಗುವಿಗೆ ಜಾಸ್ತಿ ಹೊತ್ತು  ಟಿವಿ ನೋಡಲು ಬಿಡುವುದು, ಹೆಚ್ಚು ಶಾಪಿಂಗ್ ಮಾಡಿಸುವುದು ಅಥವಾ ಹೆಚ್ಚಾಗಿ ತಿನ್ನಿಸುವುದು, ಇತ್ಯಾದಿ.  ಇದರಿಂದ ಮಗುವಿಗೆ ಯಾವುದೇ ಸಹಾಯವಾಗುವುದಿಲ್ಲ. ಬದಲಾಗಿ ಇನ್ನಿತರ ನಡವಳಿಕೆಯ ಸಮಸ್ಯೆ ಬೆಳೆಯಲು ಕಾರಣವಾಗುತ್ತದೆ.

ಡಾ.ಪ್ರೀತಿ ಜೇಕಬ್, ಸಹ ಪ್ರಾಧ್ಯಾಪಕರು, ಮಕ್ಕಳ ಮತ್ತು ತರುಣರ ಮನೋವೈದ್ಯರು, ನಿಮ್ಹಾನ್ಸ್

Was this helpful for you?

ಶಿಫಾರಸು ಮಾಡಿದ ಲೇಖನಗಳು