ಅಡಿಕ್ಷನ್‌ನ ಪರಿಣಾಮಗಳು

ವ್ಯಸನಕಾರಿ ಡ್ರಗ್ಸ್ ಕೆಮಿಕಲ್‌ ಗಳಾಗಿದ್ದು ಅವು ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ

ಮಾದಕ ವಸ್ತುಗಳು ಕೆಮಿಕಲ್ ಗಳಾಗಿದ್ದು ಅವು ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಡ್ರಗ್ಸ್ ವ್ಯಸನಿಗಳು ಅದರಿಂದ ಸಿಗುವ ಉನ್ಮಾದದ ಮೇಲೆ ಮಾತ್ರ ಆಕರ್ಷಿತನಾಗಿರುತ್ತಾರೆ. ಆದರೆ ವೈಯಕ್ತಿಕ ಬದುಕು ಮತ್ತು ಪ್ರೊಫೆಷನಲ್ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾಕೆಂದರೆ, ಅವರು ವ್ಯಸನದ ಮೇಲೆಯೇ ತಮ್ಮೆಲ್ಲಾ ಗಮನ ಹರಿಸುತ್ತಾರೆ. ಈ ವ್ಯಸನವು ಕ್ರಮೇಣವಾಗಿ ಅವರ ಕೆಲಸ ಮತ್ತು ಆತ್ಮೀಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.

ಮಾದಕ ವಸ್ತುಗಳ ದುರುಪಯೋಗ ಮತ್ತು ವ್ಯಸನದಿಂದ ಉಂಟಾಗುವ ಇನ್ನಿತರ ಸಮಸ್ಯೆಗಳು:

  • ಮನೋವಿಕೃತಿಗೊಳಪಡುವ ಸಾಧ್ಯತೆ, ಮಾನಸಿಕ ಹಾಗೂ ದೈಹಿಕ ವರ್ತನೆಯ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಗಳ ಬೆಳವಣಿಗೆ

  • ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು: ಲಿವರ್ಗೆ ಹಾನಿ (ಮದ್ಯಪಾನದಿಂದ), ಶ್ವಾಸಕೋಶದ ಕ್ಯಾನ್ಸರ್ (ತಂಬಾಕು ಸೇವನೆಯಿಂದ), ನರಮಂಡಲಗಳಿಗೆ ಹಾನಿ (ಡ್ರಗ್ ಬಳಕೆಯಿಂದ). ಮದ್ಯ ಮತ್ತು ತಂಬಾಕು ವ್ಯಸನಿಗಳಿಗೆ ಕ್ಯಾನ್ಸರ್ ಹಾಗೂ ಇನ್ನಿತರ ಸಾಂಕ್ರಾಮಿಕವಲ್ಲದ ರೋಗಗಳು ಬರುವ ಅಪಾಯ ಹೆಚ್ಚು.

  • ವ್ಯಕ್ತಿಯು ಮದ್ಯ ಹಾಗೂ ತಂಬಾಕು, ಎರಡೂ ವ್ಯಸನಕ್ಕೆ ಒಳಗಾದರೆ ಅವರ ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗುವ ಅಪಾಯ ಅಧಿಕ.

  • ಅತಿಯಾದ ಡ್ರಗ್ ಸೇವನೆ ವ್ಯಕ್ತಿಗಳ ವರ್ತನೆಯ ಮೇಲೆ ಪ್ರಭಾವ ಬೀರುವುದರಿಂದ, ಹಿಂಸೆ, ಎಚ್ಚರಿಕೆ ಇಲ್ಲದ ವಾಹನ ಚಾಲನೆ, ಅಪಘಾತ, ಅಸಭ್ಯ ಲೈಂಗಿಕ ವರ್ತನೆ ಹಾಗೂ ಕೌಟುಂಬಿಕೆ ಹಿಂಸೆಯ ಸಾಧ್ಯತೆಗಳು ಹೆಚ್ಚು.

  • ಲೈಂಗಿಕತೆಯ ಪ್ರದರ್ಶನ (ವಿಶೇಷವಾಗಿ ಯುವತಿಯರಲ್ಲಿ) ಮತ್ತು ಲೈಂಗಿಕ ರೋಗಗಳ ಹರಡುವಿಕೆಯ ಅಪಾಯ ಹೆಚ್ಚಾಗುತ್ತದೆ.

  • ಡ್ರಗ್ ಗಳನ್ನು ಸೂಜಿಯಿಂದ ಚುಚ್ಚಿಕೊಂಡು ತೆಗೆದುಕೊಳ್ಳುವದರಿಂದ ಕೀವು, ಸೋಂಕು ಮತ್ತು ಇತರ ಸಾಂಕ್ರಾಮಿಕ ರೋಗಗಳಾದ ಎಚ್ಐವಿ/ಏಡ್ಸ್ (HIV/AIDS) ಬರುವ ಸಾಧ್ಯತೆ ಇರುತ್ತದೆ. ಬೇರೆಯವರಿಗೆ ಚುಚ್ಚಿದ ಸೂಜಿಯನ್ನು ಬಳಸುವುದರಿಂದ ಮಾತ್ರವಲ್ಲದೆ, ಕ್ರಿಮಿನಾಶಕದಿಂದ ಸೂಜಿಯನ್ನು ಸ್ವಚ್ಛಗೊಳಿಸದೆ ಒಬ್ಬರೇ ಪದೆ ಪದೆ ಒಂದೇ ಸೂಜಿಯನ್ನು ಬಳಸುವುದರಿಂದಲೂ ಸಾಂಕ್ರಾಮಿಕ ರೋಗಗಳು ಬರಬಹುದು. 

  • ಮಾದಕ ದ್ರವ್ಯಗಳ ಚಟದ ಕಾರಣದಿಂದ ಸಮಾಜದಿಂದ ದೂಷಿತರಾದ ಅಥವಾ ಒಂಟಿತನದ ತೊಂದರೆ ಅನುಭವಿಸುವುದು.

  • ನಿಶೆಯಲ್ಲಿ ತೆಗೆದುಕೊಳ್ಳುವ ಹಾನಿಕಾರಕ ನಿರ್ಣಯ ಮತ್ತು ಅಪಾಯಕಾರಿ ವರ್ತನೆಯ ಕಾರಣಗಳಿಂದ ಅಥವಾ ಚಟಕ್ಕಾಗಿ ಅಕ್ರಮ ಮಾರ್ಗವನ್ನು ಅನುಸರಿಸುವ ನಡುವಳಿಕೆಯಿಂದ ಕಾನೂನಾತ್ಮಕ ಸಮಸ್ಯೆಗಳು ಬರಬಹುದು.

ವ್ಯಕ್ತಿ ವ್ಯಸನಿಯಾಗಿರದಿದ್ದರೂ ಯಾವುದಾದರೂ ಒಂದು ಮಾದಕ ವಸ್ತುವಿನ ಸೇವನೆಯಿಂದ ಈ ತೊಂದರೆಗಳು ಉಂಟಾಗಬಹುದು.

ವ್ಯಸನದ ಲಕ್ಷಣಗಳು:

ನಿಮ್ಮ ಸುತ್ತಲಿನ ಯಾರಾದರು ಒಬ್ಬರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದಾರೆ ಎಂದು ತಿಳಿಯುವುದು ಹೇಗೆ?

ದೈಹಿಕ ಸೂಚನೆಗಳು

  • ಕೆಂಪಾದ ಕಣ್ಣುಗಳು
  • ನಿದ್ರೆಯಲ್ಲಿನ ತೊಂದರೆ
  • ಹಠಾತ್ ಆಗಿ ತೂಕ ಹೆಚ್ಚುವುದು ಅಥವಾ ಇಳಿಯುವುದು
  • ಮದ್ಯ ಅಥವಾ ಡ್ರಗ್ ವಾಸನೆ
  • ನಡುಕ
  • ಸಮತೋಲನ ಇಲ್ಲದೆ ನಡೆಯುವುದು
  • ಗಾಯಗಳು ಹೆಚ್ಚಾಗುತ್ತವೆ

ವರ್ತನೆಯಲ್ಲಿನ ಸೂಚನೆಗಳು

  • ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
  • ಮನೆ, ಶಾಲೆ ಅಥವಾ ಕಛೇರಿ ಕೆಲಸಗಳ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು
  • ಆರ್ಥಿಕ ತೊಂದರೆಗಳು
  • ಕಾರಣವಿಲ್ಲದೆ ಜಗಳ ಮಾಡುವುದು
  • ವಿಷಯಗಳನ್ನು ಮುಚ್ಚಿಡುವುದು: ಎಲ್ಲಿಗೆ ಹೋಗುತ್ತೇವೆ, ಯಾರೊಂದಿಗೆ ಸಮಯ ಕಳೆಯುತ್ತೇವೆ, ಹೇಗೆ ಅಪಘಾತವಾಯಿತು ಇತ್ಯಾದಿ ಅಂಶಗಳನ್ನು ಮರೆಮಾಚುವುದು
  • ಏಕಾಂಗಿಯಾಗಿರಲು ಹೆಚ್ಚು ಬಯಸುವುದು, ಬಾಗಿಲುಗಳನ್ನು ಹೆಚ್ಚಿನ ಸಮಯ ಮುಚ್ಚಿಕೊಂಡಿರುವುದು, ತಾವು ಮಾಡುತ್ತಿರುವ ಕೆಲಸದ ಕುರಿತಾಗಿ ಹೇಳದಿರುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಪರಸ್ಪರ ಮಾತನಾಡಲು ನಿರಾಕರಿಸುವುದು
  • ಸಾಮಾಜಿಕ ಸಂದರ್ಭಗಳಿಂದ ತಪ್ಪಿಸಿಕೊಳ್ಳುವುದು

ಮಾನಸಿಕ ಸೂಚನೆಗಳು

  • ವ್ಯಕ್ತಿತ್ವ ಬದಲಾವಣೆ: ಕಿರಿಕಿರಿ, ಒತ್ತಡ, ಪ್ರಕ್ಷುಬ್ಧ ಸ್ಥಿತಿ
  • ಹಠಾತ್ ಆಗಿ ಮನಸ್ಥಿತಿ ಬದಲಾಗುವುದು
  • ಆತಂಕ
  • ಮತಿವಿಕಲ್ಪ
  • ನಿರಾಸಕ್ತಿಯ ಮನೋಭಾವ
  • ಏಕಾಗ್ರತೆಯ ಕೊರತೆ

ಮರೆಗುಳಿತನ, ವಿಶೇಷವಾಗಿ ಮಾದಕ ವಸ್ತುಗಳನ್ನು ತೆಗೆದುಕೊಂಡಾಗ ನೆನಪುಗಳು ಮಾಸುವುದು

ವಿಥ್ಡ್ರಾಯಲ್ ಸಿಂಟಮ್ಸ್ (withdrawal symptoms)

ವ್ಯಕ್ತಿ ತಾನು ಅವಲಂಬಿಸಿದ ಒಂದು ಮಾದಕ ವಸ್ತುವಿನ ಬಳಕೆಯನ್ನು ನಿಲ್ಲಿಸಿದಾಗ ಆತನ ದೈಹಿಕ ಹಾಗೂ ಮಾನಸಿಕ ವರ್ತನೆಗಳಲ್ಲಿ ಕಂಡುಬರುವ ಲಕ್ಷಣಗಳನ್ನು ವಿಥ್ಡ್ರಾಯಲ್ ಸಿಂಪ್ಟಮ್ಸ್ ಎನ್ನಲಾಗುತ್ತದೆ. ಸಾಮಾನ್ಯವಾದ ದೈಹಿಕ ಲಕ್ಷಣಗಳು- ನಡುಕ, ಬೆವರುವಿಕೆ, ವಾಕರಿಕೆ, ಹೃದಯ ಬಡಿತದಲ್ಲಿ ಏರುಪೇರು, ಜೀರ್ಣಕ್ರಿಯೆಯ ತೊಂದರೆಗಳು, ಹಠಾತ್ ರೋಗಗ್ರಸ್ಥವಾಗುವಿಕೆ ( ತೀವ್ರತೆರನಾದ ಸಂದರ್ಭಗಳಲ್ಲಿ). ಭಾವನಾತ್ಮಕ ಲಕ್ಷಣಗಳು- ಆತಂಕ, ಏಕಾಗ್ರತೆಯ ಕೊರತೆ, ಸಮಾಜದಿಂದ ನಿಂದಿಸಲ್ಪಡುವುದು, ಕಿರಿಕಿರಿ, ಚಡಪಡಿಕೆ.

ವಿಥ್ಡ್ರಾಯಲ್ ಸಿಂಪ್ಟಮ್ಗಳನ್ನು ಕೂಡ ನಿರ್ವಹಿಸುವುದಕ್ಕೆ ಸಹಾಯಕವಾಗುವ ಔಷಧಿ ಚಿಕಿತ್ಸಾ ಕ್ರಮವನ್ನೇ ಹೆಚ್ಚಾಗಿ ಅನುಸರಿಸಲಾಗುತ್ತದೆ. ನೀವು ವ್ಯಸನದಿಂದ ಹೊರಬರಲು ಪ್ರಯತ್ನಿಸಿ,  ವಿಥ್ಡ್ರಾಯಲ್ ಸಿಂಪ್ಟಮ್ಸ್ ನಿಭಾಯಿಸಲು ಕಷ್ಟವಾಗುತ್ತಿದೆ ಎನಿಸಿದರೆ ವೈದ್ಯರ ಸಹಾಯ ಪಡೆಯಿರಿ.

ಮಾದಕವ್ಯಸನಕ್ಕೆ ಬಲಿಯಾದ ವ್ಯಕ್ತಿಯು ವಿಥ್ಡ್ರಾವಲ್ ಸಿಂಪ್ಟಮ್ಸ್ ಗಳಿಗೆ ಹೆದರಿ, ಮುಂದಿನ ಡೋಸನ್ನು ತೆಗೆದುಕೊಳ್ಳಲು ಇನ್ನು ಸಾಧ್ಯವಿಲ್ಲ ಎಂಬ ಭಯ ಉಂಟಾಗುತ್ತದೆ. ಏಕೆಂದರೆ ಆಹಾರ, ನೀರು ಅಥವಾ ನಿದ್ರೆಗಿಂತ ವ್ಯಸನವೇ ಅವರ ಮೊದಲ ಆದ್ಯತೆಯಾಗಿರುವಷ್ಟು ಪ್ರಮಾಣದಲ್ಲಿ ವ್ಯಸನವು ಅವರ ಪ್ರಚೋದನೆಗಳನ್ನು ಬದಲಾಯಿಸಿ ಇಡೀ ಬದುಕನ್ನು ಆಕ್ರಮಿಸಿಕೊಂಡಿರುತ್ತದೆ. ಪರಿಣಾಮವಾಗಿ, ವ್ಯಕ್ತಿಯು ವ್ಯಸನವನ್ನು ಬಿಡಬೇಕೆಂದುಕೊಂಡರೂ ಡ್ರಗ್ಸ್ ಇಲ್ಲದೆ ಮುಂದಿನ ದಿನಗಳನ್ನು ಕಲ್ಪನೆ ಮಾಡಿಕೊಳ್ಳಲೂ ಆತನಿಗೆ ಸಾಧ್ಯವಾಗುವುದಿಲ್ಲ. ಇದು ಅವರು ವ್ಯಸನದಿಂದ ಹೊರ ಬರಬೇಕೆಂಬ ಇಚ್ಛೆಯನ್ನು ಮುಂದೂಡುವಂತೆ ಮಾಡುತ್ತದೆ. ಜೊತೆಗೆ ನಾಳೆ ಬಿಡುತ್ತೇನೆ ಎಂದು ಪ್ರತಿನಿತ್ಯ ದಿನಗಳನ್ನು ಮುಂದೂಡುವಂತೆ ಮಾಡುತ್ತದೆ.

ವ್ಯಸನವನ್ನು ಪತ್ತೆ ಮಾಡುವುದು

ವ್ಯಕ್ತಿಯು ವ್ಯಸನಕ್ಕೆ ಒಳಗಾಗಿದ್ದಾನೆಯೆ ಎನ್ನುವುದನ್ನು ತಿಳಿದುಕೊಳ್ಳಲು ನಮಗೆ ಅನೇಕ ಪ್ರಶ್ನಾವಳಿಗಳು ಸಹಾಯ ಮಾಡುತ್ತವೆ.

ಕೇಜ್ (CAGE) ಪ್ರಶ್ನಾವಳಿಗಳಿಂದ ಮದ್ಯ ವ್ಯಸನಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಿಳಿದುಕೊಳ್ಳಬಹುದು (ಅದನ್ನೇ ಸ್ವಲ್ಪ ಬದಲಿಸಿ ನಿಕೋಟಿನ್ ಅವಲಂಬಿತ ತೊಂದರೆಗಳಿಗೂ ಬಳಸಬಹುದು).

  • ಮದ್ಯ ಬಳಕೆಯಿಂದಾದ ತೊಂದರೆಯನ್ನು ಗುರುತಿಸುವ (AUDIT) ಟೆಸ್ಟ್ ಮಾಡಿ ತಿಳಿದುಕೊಳ್ಳಬಹುದು. http://whqlibdoc.who.int/hq/2001/WHO_MSD_MSB_01.6a.pdf?ua=1
  • ದಿ ಡ್ರಗ್ ಅಬ್ಯೂಸ್ ಸ್ಕ್ರೀನಿಂಗ್ ಟೆಸ್ಟ್ (The Drug Abuse Screening Test - DAST)
  • ನಿಕೋಟಿನ್ ವ್ಯಸನಿಗಳಿಗೆ ಫ್ಯಾಗರ್ಸ್ಟೋಮ್ ಟೆಸ್ಟ್ (Fagerstrom Test)
  • DSM-IV ಮಾರ್ಗದರ್ಶನ ಅವಲಂಬಿತ 4Cs ಮೌಲ್ಯಮಾಪನ.

ಈ ಕೆಲವು ಪರೀಕ್ಷೆಗಳನ್ನು ನೀವೇ ಮಾಡಿಕೊಳ್ಳಬಹುದು. ಉಳಿದ ಕೆಲವು ಪರೀಕ್ಷೆಗಳಿಗೆ ಮನೋವೈದ್ಯರ ಅಥವಾ ಸೂಕ್ತ ತರಬೇತಿ ಪಡೆದ ಮಾನಸಿಕ ಆರೋಗ್ಯ ತಜ್ಞರ ಮಾರ್ಗದರ್ಶನ ಅಗತ್ಯ. ನೀವೇ ಸ್ವಂತವಾಗಿ ಪರೀಕ್ಷೆಗಳನ್ನು ಮಾಡಿಕೊಂಡ ನಂತರ ನಿಮಗೆ ವ್ಯಸನದ ತೊಂದರೆಗಳಿವೆಯೇ ಎಂದು ಆಲೋಚಿಸಿ. ರೋಗ ಅಥವಾ ವ್ಯಸನ ಪತ್ತೆ ಹಚ್ಚುವುದು ಚಿಕಿತ್ಸೆಯ ಮೊದಲ ಹೆಜ್ಜೆ ಮಾತ್ರ. ಸಂಪೂರ್ಣ ಚಿಕಿತ್ಸೆಗಾಗಿ ಮನೋವೈದ್ಯರನ್ನು ಅಥವಾ ವ್ಯಸನ ವರ್ಜನ ಕೇಂದ್ರಗಳನ್ನು ಸಂಪರ್ಕಿಸಿ.

ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಪ್ರೀತಿ ಪಾತ್ರರು ತೊಂದರೆಗೆ ಒಳಗಾಗಿರುವುದನ್ನು ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಗುರುತಿಸಿ, ಅವರು ಸಹಾಯ ಪಡೆಯುವಂತೆ ಸಹಕರಿಸುತ್ತಾರೆ. ನಿಮ್ಮ ಪ್ರೀತಿ ಪಾತ್ರರಿಗೆ ಸಹಾಯದ ಅವಶ್ಯಕತೆಯಿದ್ದರೆ, ನೀವು ಮನೋವೈದ್ಯರನ್ನು ಅಥವಾ ಮಾನಸಿಕ ಆಪ್ತ ಸಲಹೆಗಾರರನ್ನು ಸಂಪರ್ಕಿಸಿ. ಪ್ರಾಥಮಿಕ ತಪಾಸಣೆಯ ನಂತರ ಅಗತ್ಯವಿದ್ದರೆ, ತಜ್ಞರಿಗೆ ಶಿಫಾರಸ್ಸು ಮಾಡುತ್ತಾರೆ. ತಜ್ಞರು ರೋಗಿಗಳೊಂದಿಗೆ ಮತ್ತು ಅವರ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮಾತುಕತೆ ನಡೆಸಿ ತೊಂದರೆಯ ತೀವ್ರತೆಯನ್ನು ಅರ್ಥೈಸಿಕೊಂಡು ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org