ವಯಸ್ಸಾದ ತಂದೆ – ತಾಯಿಯರ ಪಾಲನೆ

ವಯಸ್ಸಾದ ತಂದೆ – ತಾಯಿಯರ ಪಾಲನೆ

ಇಳಿವಯಸ್ಸಿನ ತಂದೆ ತಾಯಿಯರ ಪಾಲನೆ ಮಾಡುವುದು ಒಂದು ಸವಾಲು. ಏಕೆಂದರೆ ಇದು ಹತ್ತು ಹಲವು ಭಾವನಾತ್ಮಕ ಸಂಗತಿಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಹೊಂದಿಕೊಳ್ಳುವುದು ಹೇಗೆ?
ವೃದ್ಧಾಪ್ಯವು ವ್ಯಕ್ತಿಯನ್ನು ಹಲವು ಬಗೆಯಲ್ಲಿ ಬಾಧಿಸುತ್ತದೆ. ವಯಸ್ಸಾದಂತೆಲ್ಲ ದೇಹ ದುರ್ಬಲಗೊಳ್ಳುತ್ತದೆ. ಸ್ನಾಯು – ಮೂಳೆಗಳು ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ. ದೃಷ್ಟಿ ಮಂದವಾಗುತ್ತದೆ ಹಾಗೂ ಅಂಗಾಂಗಗಳು ಅಶಕ್ತವಾಗಿ ಅದು ಮಾಡುವ ಕೆಲಸವು ಕಡಿಮೆಯಾಗುತ್ತಾ ಸಾಗುತ್ತದೆ. ಮೆದುಳಿನ ಕಾರ್ಯಗತಿ ಕೂಡಾ ನಿಧಾನವಾಗುತ್ತ ಹೋಗುತ್ತದೆ. ಇದರಿಂದಾಗಿಯೇ ಬಹುತೇಕ ವೃದ್ಧರು ಮರೆವಿನ ಸಮಸ್ಯೆಗೆ ಒಳಗಾಗುವುದು ಮತ್ತು ಹೊಸತನ್ನು ಕಲಿಯಲು ಕಷ್ಟ ಪಡುವುದು. ನಿದ್ರೆಯಲ್ಲಿ ವ್ಯತ್ಯಾಸ ಸಾಮಾನ್ಯವಾಗುತ್ತದೆ; ಮತ್ತು ಇದು ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ವೃದ್ಧಾಪ್ಯದಲ್ಲಿರುವ ವ್ಯಕ್ತಿಯು ತಮ್ಮ ಕ್ಷೀಣಿಸುತ್ತಿರುವ ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಒದ್ದಾಡುತ್ತಾ ಇರುತ್ತಾರೆ. ಹಾಗೂ ಇತರರ ಮೇಲೆ ಅವಲಂಬಿತರಾಗಿಬಿಡುತ್ತಾರೆ.  ಇಳಿ ವಯಸ್ಸಿನಲ್ಲಿರುವ ವ್ಯಕ್ತಿಗೆ ಯಾವುದೇ ಗಂಭೀರ ಕಾಯಿಲೆಗಳು ಇಲ್ಲವೆಂದಾದರೆ, ಅಂಥವರು ವೃದ್ಧಾಪ್ಯಕ್ಕೆ ಬೇಗ ಹೊಂದಿಕೊಂಡುಬಿಡುತ್ತಾರೆ. ಆದರೆ, ಧಿಡೀರನೆ ಗಂಭೀರ ಕಾಯಿಲೆಗೆ ಒಳಗಾಗುವ ವೃದ್ಧರಿಗೆ ಇಂಥಾ ಹೊಂದಾಣಿಕೆ ಬಹಳ ಕಷ್ಟ. ಅವರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಔಷಧ ಮತ್ತಿತರ ಸವಲತ್ತುಗಳಿಗಾಗಿ, ಯೋಗಕ್ಷೇಮ ನೋಡಿಕೊಳ್ಳಲಿಕ್ಕಾಗಿ ಇತರರ ಮೇಲೆ ಅವಲಂಬಿತರಾಗಬೇಕಾಗುತ್ತದೆ, ಅವರ ಈ ಅವಲಂಬನೆಯ ಅನಿವಾರ್ಯತೆಯು ಕುಟುಂಬದ ಸದಸ್ಯರ ಮೇಲೆಯೂ ಪರಿಣಾಮ ಬೀರುತ್ತದೆ. ಕಾಯಿಲೆಗೆ ಒಳಗಾಗಿರುವ ವೃದ್ಧರ ಪಾಲನೆಗೆ ಸಮಯ ಹೊಂದಿಸಿಕೊಳ್ಳುವುದೇ ಮೊದಲಾದ ಅನಿರೀಕ್ಷಿತ ಹೆಚ್ಚಿನ ಜವಾಬ್ದಾರಿಯು ಕುಟುಂಬದ ಸದಸ್ಯರ ಜೀವನ ಶೈಲಿಯನ್ನೂ ಬದಲಿಸಿಕೊಳ್ಳಲು ಒತ್ತಡ ಹೇರುತ್ತದೆ. ಮತ್ತು ಧಿಡೀರನೆ ಬಂದೊದಗಿದ ಅನಾರೋಗ್ಯ ಅವರನ್ನು ಮಾನಸಿಕವಾಗಿ ವಿಪರೀತ ಕುಗ್ಗಿಸುತ್ತದೆ., ಹಣ ಕಾಸಿನ  ಚಿಂತೆಯೂ ಕಾಡತೊಡಗುತ್ತದೆ. ಇದರಿಂದ ಖಿನ್ನತೆ, ಉದ್ವೇಗ ಮತ್ತಿತರ ಮಾನಸಿಕ ಕಾಯಿಲೆಗಳಿಗೆ ತುತ್ತಾಗುವ ಆತಂಕವೂ ಉಂಟಾಗುತ್ತದೆ.

ತಂದೆ / ತಾಯಿಯರ ಪಾಲನೆ ಮಾಡುವುದು

ವೃದ್ಧ ತಂದೆ / ತಾಯಿಯರು ಅನಾರೋಗ್ಯಕ್ಕೆ ಈಡಾದಾಗ ಅವರ ಕಾಳಜಿ ವಹಿಸುವುದು ಸವಾಲಿನ ಕೆಲಸ. ನಿಮ್ಮ ದೈನಂದಿನ ಚಟುವಟಿಕೆಗಳು, ಉದ್ಯೋಗ ಇತ್ಯಾದಿಗಳ ಜೊತೆಗೆ ಅವರ ಪಾಲನೆ ಪೋಷಣೆಯ ಕೆಲಸವೂ ಹೆಚ್ಚುವರಿಯಾಗಿ ಸೇರಿಕೊಳ್ಳುತ್ತದೆ. ಅವರ ಚಿಕಿತ್ಸೆಗಾಗಿ ಹಣದ ಹೊಂದಾಣಿಕೆ, ಆಸ್ಪತ್ರೆಗೆ ಕರೆದೊಯ್ಯುವುದು, ಕಾಲಕಾಲಕ್ಕೆ ಔಷಧಗಳನ್ನು ಕೊಡುವುದೇ ಮೊದಲಾದ ಜವಾಬ್ದಾರಿಗಳನ್ನು ವಹಿಸಬೇಕಾಗುತ್ತದೆ.

ಈ ಎಲ್ಲವೂ ನಿಮ್ಮನ್ನು ಭಾವನಾತ್ಮಕವಾಗಿ ಯಾತನೆ ಪಡುವಂತೆ ಮಾಡಬಹುದು. ನಿಮ್ಮ ತಂದೆ/ತಾಯಿಯ ಅನಾರೋಗ್ಯದ ಸ್ಥಿತಿ ನಿಮ್ಮನ್ನು ಭಾವೋದ್ವೇಗಕ್ಕೆ ಒಳಪಡಿಸಬಹುದು. ನಿಮ್ಮ ಉದ್ಯೋಗ ಮೊದಲಾದ ಕರ್ತವ್ಯಗಳಿಂದಾಗಿ ಕ್ರಮೇಣ ನೀವು ಅವರ ಕಾಳಜಿ ವಹಿಸಲು ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ಕೆಲಸಗಳಿಗೆ ತೊಂದರೆ ಮಾಡಿಕೊಳ್ಳದಂತೆ ಪೋಷಕರ ಪಾಲನೆಯನ್ನು ನಿರ್ವಹಿಸುವುದು ಮತ್ತೂ ದೊಡ್ಡ ಸವಾಲು.

ಅನಾರೋಗ್ಯಕ್ಕೀಡಾದ ತಂದೆ /ತಾಯಿಯರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಲ್ಲಿ, ಅವರನ್ನು ಮನೆಗೆ ಕರೆದುಕೊಂಡು ಬರಬೇಕೋ ಅಥವಾ ನಾವೇ ಅಲ್ಲಿ ಹೋಗಿರಬೇಕೋ ಅನ್ನುವ ಗೊಂದಲ ಉಂಟಾಗುವುದೂ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದ ಪಕ್ಷದಲ್ಲಿ ಪಾಲಕರನ್ನು ನೇಮಿಸಿಕೊಳ್ಳಬಹುದಾದರೂ ತಂದೆ ತಾಯಿಯರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂಬ ರೂಢಿಗತ ನಿರೀಕ್ಷೆಯಿಂದಾಗಿ ಅಂಥ ನಿರ್ಧಾರ ತಳೆಯಲಾರದ ಸ್ಥಿತಿಯಲ್ಲಿ ಕೆಲವರು ಇರುತ್ತಾರೆ. ಇಂಥ ಗೊಂದಲಗಳಿಂದ ಕುಟುಂಬದ ಮೇಲೆ ಹೆಚ್ಚಿನ ಹೊರೆ ಬಿದ್ದಂತೆ ಆಗುವುದು. ಒತ್ತಡವೂ ಹೆಚ್ಚುವುದು. ದೀರ್ಘಕಾಲ ದೂರವಿದ್ದು, ಅನಾರೋಗ್ಯದ ನಿಮಿತ್ತ ಪುನಃ ಒಂದೇ ಮನೆಯಲ್ಲಿ ವಾಸಿಸಲು ತೊಡಗಿದರೆ ಕೌಟುಂಬಿಕ ಘರ್ಷಣೆಗಳು ಶುರುವಾಗುವ ಅಪಾಯವೂ ಇರುತ್ತದೆ. ತಲೆಮಾರುಗಳ ನಡುವಿನ ಅಂತರ, ಮಕ್ಕಳ ಕುಟುಂಬದ ಜೀವನ ಶೈಲಿಯೊಂದಿಗೆ ತಂದೆ/ತಾಯಿಯರು ಹೊಂದಿಕೊಳ್ಳಲಾಗದ ಚಡಪಡಿಕೆ, ಅಥವಾ ಅವರ ರೀತಿನೀತಿಗಳೊಡನೆ ಮಕ್ಕಳಿಗೆ ಹೊಂದಾಣಿಕೆಯಾಗದೆ ಉಂಟಾಗುವ ಮುಜುಗರಗಳನ್ನು ನಿಭಾಯಿಸುವುದೂ ಒಂದು ಸವಾಲು.

ಕೆಲವು ಮಕ್ಕಳು / ಪಾಲಕರು ಅನಾರೋಗ್ಯಪೀಡಿತ ವೃದ್ಧರ ಬಗ್ಗೆ ತಾತ್ಸಾರ ಬೆಳೆಸಿಕೊಳ್ಳುವುದುಂಟು. ಮತ್ತೆ ಕೆಲವು  ಮಕ್ಕಳು / ಪಾಲಕರ ಅತಿರೇಕದ ಕಾಳಜಿಯಿಂದಾಗಿ ವೃದ್ಧರಿಗೆ ತಾವು ಬಂಧನದಲ್ಲಿರುವಂತೆ ಭಾಸವಾಗುವುದೂ ಉಂಟು.

“ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆಲ್ಲಾ ವ್ಯಕ್ತಿಯು ತನ್ನ ಘನತೆಯನ್ನು ಕಳೆದುಕೊಳ್ಳುತ್ತಾ ಸಾಗಿದಂತೆ ಭಾವಿಸತೊಡಗುತ್ತಾರೆ. ಇದು ಅವರನ್ನು ಭಾವನಾತ್ಮಕವಾಗಿ ಕಾಡತೊಡಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಾವು ನಮ್ಮ ಕ್ಲಯೆಂಟ್ ಗಳ ಜೊತೆ ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ” ಎನ್ನುತ್ತಾರೆ   ಎಲ್ಡರ್ಸ್ ಕೇರ್ ಸರ್ವಿಸಸ್ ಕನ್ಸಲ್ಟೆನ್ಸಿ ನಡೆಸುವ ನ್ಯೂರೋಸೈಕಾಲಜಿಸ್ಟ್ ತನ್ವಿ ಮಲ್ಯ. “ಸ್ವತಃ ಮಕ್ಕಳೇ ತಮ್ಮ ತಂದೆ / ತಾಯಿಯರನ್ನು ನೋಡಿಕೊಳ್ಳಬೇಕಾಗಿ ಬಂದಾಗ, ಅದಲುಬದಲಾದ ಪಾತ್ರ ನಿರ್ವಹಣೆಗೆ ಒಗ್ಗಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ಈ ಅನಿರೀಕ್ಷಿತ ಬದಲಾವಣೆಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ” ಎಂದೂ ಅವರು ಅಭಿಪ್ರಾಯ ಪಡುತ್ತಾರೆ.

ಪಾಲಕರಾಗಿ ನೀವೇನು ಮಾಡಬಹುದು?

ಅವರ ಪರಿಸ್ಥಿತಿಯನ್ನು ಅರಿಯಿರಿ : ವೃದ್ಧಾಪ್ಯದಲ್ಲಿರುವ ವ್ಯಕ್ತಿಯು (ಈಗ ತಾನೇ ಕಾಲಿಡುತ್ತಿರುವವರು ಅಥವಾ ಇಳಿವಯಸ್ಸಿನಲ್ಲಿರುವವರು) ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಂತೆ ಭಾವಿಸುತ್ತಾರೆ ಮತ್ತು ಅವರ ಇದಕ್ಕೆ ಹೊಂದಿಕೊಳ್ಳುವುದು ಕಷ್ಟಕರವಾಗಿ ತೋರುತ್ತದೆ. “ವರ್ಷಗಟ್ಟಲೆ ಸ್ವತಂತ್ರವಾಗಿದ್ದ ವ್ಯಕ್ತಿಗೆ ಇನ್ಯಾರದೋ ಅವಲಂಬನೆಯಲ್ಲಿ ಕಾಲ ಕಳೆಯಬೇಕು ಅನ್ನುವ ಯೋಚನೆಯೇ ನೋವುಂಟು ಮಾಡುತ್ತದೆ. ಅದಕ್ಕಾಗಿ ಅವರು ಎಷ್ಟು ಮಾನಸಿಕ ಸಿದ್ಧತೆ ಮಾಡಿಕೊಂಡರೂ ಕಡಿಮೆಯೇ. ಇದರಿಂದ ಅವರ ಮನಸ್ಸು ಬೇಸತ್ತು ಹೋಗುತ್ತದೆ. ಇದನ್ನು ಪಾಲಕರು ಅರ್ಥಮಾಡಿಕೊಳ್ಳಬೇಕಾಗುತ್ತದೆ” ಎನ್ನುತ್ತಾರೆ ಸೈಕಾಲಜಿಸ್ಟ್ ಡಾ.ಗರಿಮಾ ಶ್ರೀವಾಸ್ತವ.

ಮುಕ್ತವಾಗಿ ಮಾತಾಡಿ: ವೃದ್ಧರ ಜೊತೆ ಮುಕ್ತವಾಗಿ ಮಾತನಾಡಿ ಅವರ ಸುಖ ದುಃಖಗಳನ್ನು ವಿಚಾರಿಸುತ್ತಿರಿ. ಅವರ ಜೀವನ ಶೈಲಿಯ ಹಠಾತ್ ಬದಲಾವಣೆಗೆ ಹೊಂದಿಕೊಳ್ಳಲು ಸಾಧ್ಯವಾಗಿದೆಯೇ ಇಲ್ಲವೇ ಎಂದು ಕೇಳಿ ತಿಳಿದುಕೊಳ್ಳಿ. ಹಾಗೆಯೇ ಅವರಿಗಾಗಿ ನೀವು ಏನೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಿ ಅನ್ನುವುದನ್ನೂ ವಿವರಿಸಿ. ಅದರ ಹೊರತಾಗಿಯೂ ಅವರಿಗೆ ಏನಾದರೂ ಅಗತ್ಯವಿದೆಯೇ, ಏನಾದರೂ ಸಹಾಯ ಬೇಕಾಗಿದೆಯೇ ಎಂದು ವಿಚಾರಿಸುತ್ತಿರಿ.

ಆರ್ಥಿಕ ಸ್ವಾವಲಂಬನೆಗೆ ಸಹಕರಿಸಿ: ವೃದ್ಧರು ತಮ್ಮ ಹಣಕಾಸಿನ ನಿಯಂತ್ರಣವನ್ನು ತಾವೇ ಇರಿಸಿಕೊಳ್ಳಲು ಸಹಕರಿಸಿ. ಅವರ ಕೈಲಾಗುವಷ್ಟು ಕಾಲವೂ ಅದನ್ನು ಅವರೇ ನೋಡಿಕೊಳ್ಳಲಿ. ಇದರಿಂದ ಅವರಲ್ಲಿ ಅಭದ್ರತಾ ಭಾವನೆ ಮೂಡುವುದಿಲ್ಲ ಮತ್ತು ನಿಮ್ಮಲ್ಲಿ ಕೇಳಬೇಕಾದ ಕೀಳರಿಮೆ ಬಾಧಿಸುವುದಿಲ್ಲ. ಅವರ ಬ್ಯಾಂಕ್ ಡಾಕ್ಯುಮೆಂಟ್ಸ್, ಪಾಸ್ ಬುಕ್ಸ್, ಡೆಬಿಟ್ / ಕ್ರೆಡಿಟ್ ಕಾರ್ಡ್’ಗಳು ಅವರಿಗೆ ಸದಾ ಲಭ್ಯವಾಗುವಂತೆ ಇರಿಸಿ.

ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಕರಿಸಿ: ತಾವು ವಾಸಿಸುವ ವಾತಾವರಣ ಒಗ್ಗದೆ ನಿಮ್ಮ ತಂದೆ/ತಾಯಿಯರ ಆರೋಗ್ಯ ಹಾಳಾದರೆ, ಅವರನ್ನು ಹೊಸ ವಾತಾವರಣದಲ್ಲಿರಿಸಿ, ಅದಕ್ಕೆ ಹೊಂದಿಕೊಳ್ಳಲು ಸಹಕರಿಸಿ. ಸುತ್ತಮುತ್ತಲಿನ ಪರಿಸರದ ಜೊತೆ ಗುರುತನ್ನು ಬೆಳೆಸಿಕೊಂಡು ತಮ್ಮ ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ.

ಅವರ ಅಗತ್ಯಗಳನ್ನು ಅರಿಯಿರಿ: ನಿಮ್ಮ ಪ್ರೀತಿಪಾತ್ರರಿಗೆ ಏನು ಬೇಕೆಂದು ಅರಿಯಿರಿ ಹಾಗೂ ಅವರಿಗೇನು ಬೇಕೆಂದು ನೀವು ಭಾವಿಸಿದ್ದೀರೋ ಅದನ್ನು ಅದರಿಂದ ಪ್ರತ್ಯೇಕಗೊಳಿಸಿ. ಉದಾಹರಣೆಗೆ: ನಿಮ್ಮ ತಂದೆ/ತಾಯಿ ವೃದ್ಧಾಪ್ಯದ ಇಳಿವಯಸ್ಸಿನಲ್ಲಿದ್ದು, ದಿನಕ್ಕೆರಡು ಬಾರಿ ಬ್ರಶ್ ಮಾಡಲು ಇಚ್ಛಿಸದೆ ಹೋಗಬಹುದು. ಆದರೆ ನೀವು ಅವರು ಎರಡು ಬಾರಿ ಬ್ರಶ್ ಮಾಡುವುದು ಅಗತ್ಯವೆಂದು ಭಾವಿಸಿರಬಹುದು. ಆ ವಯಸ್ಸಿನಲ್ಲಿ ಎರಡು ಬಾರಿ ಬ್ರಶ್ ಮಾಡದೆ ಇರುವುದರಿಂದ ಅಂಥಾ ವ್ಯತ್ಯಾಸವೇನಾಗುವುದಿಲ್ಲ. ಆದ್ದರಿಂದ ನೀವು ಅಗತ್ಯಗಳನ್ನು ಗಮನಿಸಿ, ಅದರಂತೆ ಅವರಿಗೆ ಮನ್ನಣೆ ಕೊಡಿ. ಇಲ್ಲವಾದರೆ ಚಿಕ್ಕಪುಟ್ಟ ಮುನಿಸು, ಜಗಳಗಳು ಉಂಟಾಗುವವು.

ಸುರಕ್ಷಿತ ವಾತಾವರಣ ಕಲ್ಪಿಸಿ: ಬಹಳ ಬಾರಿ ಪಾಲಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತೆಯೇ ತಮ್ಮ ತಂದೆ/ತಾಯಿಯರನ್ನೂ ನೋಡಿಕೊಳ್ಳಲು ಬಯಸುತ್ತಾರೆ. ಆದರೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೂ ತಂದೆ/ತಾಯಿಯರನ್ನು ನೋಡಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮಕ್ಕಳ ಪಾಲನೆ ಮಾಡುವಾಗ ಅವರು ಜೀವನ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆದು ಸ್ವತಂತ್ರರಾಗಿ ಬಾಳಲಿ ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಆದರೆ ವೃದ್ಧರು ಹಾಗಲ್ಲ. ಅವರು ದಿನ ಕಳೆದಂತೆಲ್ಲ ದುರ್ಬಲರಾಗುತ್ತಾ ಹೋಗುತ್ತಾರೆ. ಹಾಗೂ ತಮ್ಮನ್ನು ತಾವು ಸಂಭಾಳಿಸಿಕೊಳ್ಳಲಾಗದ ಸ್ಥಿತಿ ತಲುಪುತ್ತಾರೆ. ಆದ್ದರಿಂದ ಸಾಧ್ಯವಾದಷ್ಟೂ ವೃದ್ಧ ತಂದೆ/ತಾಯಿಯರ ಸಾಮರ್ಥ್ಯಕ್ಕೆ ಹೊಂದುವಂಥದ್ದನ್ನೆ ಮಾಡಲು ಬಿಡಿ. ಅವರು ಏನನ್ನು ಮಾಡಲು ಬಯಸುವುದಿಲ್ಲವೋ ಅದನ್ನು ಮಾಡುವಂತೆ ಒತ್ತಡ ಹೇರಲು ಹೋಗಬೇಡಿ. ಅದರಿಂದ ಅವರ ದೇಹಕ್ಕೆ ಹಾನಿಯಾಗುವುದು ಮಾತ್ರವಲ್ಲ, ತಮ್ಮ ಅಶಕ್ತತೆಯ ಬಗ್ಗೆ ಕೀಳರಿಮೆಯಿಂದ ಮಾನಸಿಕ ಸ್ವಾಸ್ಥ್ಯವೂ ಕೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಂದೆ/ತಾಯಿಯರಿಗೆ ತಾವಿಲ್ಲಿ ಸುರಕ್ಷಿತವಾಗಿದ್ದೇವೆ ಅನ್ನುವ ಭಾವನೆ ಮೂಡಿಸಲು ಯತ್ನಿಸಿ.

ಅವರನ್ನು ಗೌರವದಿಂದ ನಡೆಸಿಕೊಳ್ಳಿ: ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ವೃದ್ಧ ತಂದೆ/ತಾಯಿಯರ ಸಲಹೆ ಪಡೆಯಿರಿ. ಚರ್ಚೆಯಲ್ಲಿ ಅವರನ್ನು ಒಳಗೊಳಿಸಿಕೊಳ್ಳಿ. ಇದರಿಂದ ಅವರಿಗೆ ತಮ್ಮ ಘನತೆಯ ಬಗ್ಗೆ ವಿಶ್ವಾಸ ಮೂಡುತ್ತದೆ. ಕೀಳರಿಮೆ ಇಲ್ಲವಾಗಿ ನೆಮ್ಮದಿ ಮೂಡುತ್ತದೆ.

ಅವರ ಸಲಹೆ ಸೂಚನೆಗಳನ್ನು ಪಾಲಿಸಿ: ವೈದ್ಯಕೀಯ ಚಿಕಿತ್ಸೆ, ಆದ್ಯತೆಗಳು ಮೊದಲಾದವನ್ನು ವೃದ್ಧ ತಂದೆ / ತಾಯಿಯರ ಬಳಿ ಚರ್ಚಿಸಿ, ಅವರ ಸಲಹೆ ಸೂಚನೆಗಳನ್ನು ಪಾಲಿಸಿ.

ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ: ಪಾಲಕರಿಗೆ ಇತರ ಬೇರೆ ಜವಾಬ್ದಾರಿಗಳೂ ಇರುವುದರಿಂದ ವೃದ್ಧ ತಂದೆ/ತಾಯಿಯರಿಗಾಗಿ ಹೆಚ್ಚಿನ ಸಮಯವನ್ನು ಕೊಡಲು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ಅವರ ಜೊತೆ ಕಳೆಯುವಷ್ಟು ಸಮಯವನ್ನು ಉತ್ತಮವಾಗಿ ಕಳೆಯಿರಿ. ಅವರ ದೈನಂದಿನ ಕಾಳಜಿಗೆ ವೃತ್ತಿಪರ ಪಾಲಕರನ್ನು ನೇಮಿಸಲು ಸಾಧ್ಯವಾದರೆ, ಅದನ್ನೂ ಪ್ರಯತ್ನಿಸಿ. ಅವರಿಗೆ ಯಾವ ಚಟುವಟಿಕೆ ಸಂತಸ ನೀಡಿ ಅದರಲ್ಲಿ ನೀವೂ ಭಾಗವಹಿಸಿ ಅವರ ಸಂತೋಷವನ್ನು ಹೆಚ್ಚಿಸಿ.

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ: ವೃದ್ಧರು ವಯಸಾದಂತೆಲ್ಲ ಸಮಾಜದಿಂದ ದೂರವಾಗುತ್ತಾ ಹೋಗುತ್ತಾರೆ. ಇದರಿಂದ ಅವರ ಮನೋದೈಹಿಕ ಸ್ವಾಸ್ಥ್ಯವೂ ಕೆಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಅವರನ್ನು ಸಮಾಜದೊಂದಿಗೆ ಬೆರೆಯುವಂತೆ ನೋಡಿಕೊಳ್ಳಿ. ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ. ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲ ಕಳೆಯಲು ಅವಕಾಶ ಮಾಡಿಕೊಡಿ. ಅವರ ಜೊತೆ ವಾಕ್ ಹೋಗುವುದೇ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ಅವರು ಒಂಟಿತನದ ಭಾವನೆಯಿಂದ ಹೊರಬರಲು ಸಾಧ್ಯವಾಗುವುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org