ಉದ್ಯೋಗಿ ನೆರವು ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆಗಟ್ಟುವ ಅಂಶವನ್ನು ಸೇರಿಸಿಕೊಳ್ಳಬೇಕು

‘ಉದ್ಯೋಗದ ಸ್ಥಳದಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವುದು’ - ಲೇಖನದ ಎರಡನೇ ಸರಣಿಯಲ್ಲಿ ಶ್ರೀರಂಜಿತಾ ಜೀವೂರ್ಕರ್ ರವರು ಉದ್ಯೋಗ ಸಂಸ್ಥೆಗಳು ಆತ್ಮಹತ್ಯೆಯನ್ನು ತಡೆಗಟ್ಟುವುದರಲ್ಲಿ ಯಾವ ರೀತಿ ಪ್ರಮುಖ ಪಾತ್ರ ವಹಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಹುತೇಕ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ವೈದ್ಯಕೀಯ ಸಹಾಯ ನೀಡುವ ಉದ್ದೇಶದಿಂದ ಕಾರ್ಮೀಕ ಆರೋಗ್ಯ ಯೋಜನೆಯನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಥವಾ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವನ್ನು ಅಳವಡಿಸಬಹುದು.  

ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಸ್ಥಳದಲ್ಲಿ ಸಂಭವಿಸಬಹುದಾದ ಕಠಿನತೆಗಳು ಈ ಕೆಳಗಿನಂತಿವೆ :  

  • ಉದ್ಯೋಗ ಸಂಸ್ಥೆಯ ವಾತಾವರಣ: ಕೆಲಸದ ಸ್ಥಳದಲ್ಲಿ ಯಾವ ರೀತಿಯ ಕೆಲಸ ಜರುಗುತ್ತಿವೆ ? ಉದ್ಯೋಗಿಗಳು ನಿಭಾಯಿಸಬೇಕಾಗಿರುವ ಕೆಲಸದ ಒತ್ತಡ ಎಷ್ಟಿರುತ್ತದೆ? ಜೊತೆಗೆ ತಮ್ಮ ದಿನನಿತ್ಯದ ಕೆಲಸದ ಒತ್ತಡದಿಂದ ಆಗಬಹುದಾದ ಅಪಾಯದ ಮಟ್ಟವೇನು ? ಕೆಲಸದ ಸ್ಥಳವು ಅಚ್ಚುಕಟ್ಟಾಗಿರುವುದೇ ? ಇತ್ಯಾದಿ.

  • ಉದ್ಯೋಗಿಗಳ ವಿವರ: ಎಲ್ಲಿಂದ ಬಂದಿರುತ್ತಾರೆ (ಚಿಕ್ಕ ಪಟ್ಟಣದಿಂದ ದೊಡ್ಡ ನಗರಕ್ಕೆ) ? ಸಂಸ್ಥೆಯ ವಾತಾವರಣಕ್ಕೆ ಹೊಂದಿಕೊಳ್ಳಲು  ಸೂಕ್ತ ಅನುಸರಣೆ ಮಾಡಿಕೊಳ್ಳಬೇಕೆ?

  • ಸಂಸ್ಕೃತಿ ಮತ್ತು ಜನಾಂಗೀಯ ವೈವಿಧ್ಯತೆ: ಸಂಸ್ಥೆಯ ರೀತಿ, ನಿಯಮಗಳಿಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಿರುವ ಉದ್ಯೋಗಿಗಳು  ಇದ್ದಾರೆಯೇ ? ಅದಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಯಾವುದಾದರೂ ಕ್ರಮಗಳಿವೆಯೇ ?

ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವನ್ನು ಅಳವಡಿಸುವ ಮುನ್ನ ಸೂಕ್ತ ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಚರ್ಚಿಸುವುದರ ಜೊತೆಗೆ , ಈ  ಮೇಲಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈ ಕಾರ್ಯಕ್ರಮ ಅಳವಡಿಸಲು ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು.

ತಪ್ಪು ಅಭಿಪ್ರಾಯ ಕಡಿಮೆ ಮಾಡುವುದು: ಆತ್ಮಹತ್ಯೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ತಪ್ಪು ಅಭಿಪ್ರಾಯ ಗಟ್ಟಿಯಾಗಿ ಬೇರೂರಿದ್ದು, ಇದರಿಂದ ಬಳಲುತ್ತಿರುವ  ವ್ಯಕ್ತಿ ತಮ್ಮ ಸಮಸ್ಯೆ  ಬಗ್ಗೆ  ಬೇರೆಯವರಿಗೆ ಹೇಳಲು ಹಿಂಜರಿಯುತ್ತಾರೆ.  ಆದ್ದರಿಂದ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲು ಈ ತಪ್ಪು ಗ್ರಹಿಕೆ ಕಡಿಮೆ ಮಾಡುವ ಅಂಶವನ್ನು ಸೇರಿಸಬೇಕು. ಪರಿಣಾಮವಾಗಿ, ವ್ಯಕ್ತಿಯು ತನ್ನ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಮತ್ತು ಸಹಾಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ.

ಮಾನಸಿಕ ಆರೋಗ್ಯ ಕಾರ್ಯಕ್ರಮದಿಂದಾಗುವ ಪ್ರಯೋಜನಗಳು :

  • ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಚರ್ಚೆ ಅಳವಡಿಸುವ ಮೂಲಕ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ  ಇದರ ಮಹತ್ವದ ಬಗ್ಗೆ ತಿಳಿಸಬೇಕು. ಇದರಿಂದ ಸಮಸ್ಯೆ ಇದ್ದರೆ ಉದ್ಯೋಗಿಗಗಳು ಸಹಾಯ ಪಡೆಯಲು ಮುಂದೆ ಬರುತ್ತಾರೆ. (ಸಾಮಾನ್ಯ ಮಾನಸಿಕ ತೊಂದರೆಯ ಬಗ್ಗೆ ಮತ್ತು ಪ್ರಮುಖವಾಗಿ ಆತ್ಮಹತ್ಯೆಯ ಬಗ್ಗೆ.)  

  • ಸಂಸ್ಥೆಯೊಂದರಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರ ಲಭ್ಯತೆಯಿದ್ದಾಗ, ಅವಶ್ಯ ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಮತ್ತು ಸೂಕ್ತ ಸಲಹೆ ಪಡೆಯಲು ಸಹಾಯವಾಗುತ್ತದೆ.

ಜಾಗೃತಿ ಮೂಡಿಸುವ ಕಾರ್ಯಕ್ರಮ: ಇದರ ಮೂಲಕ ಆಡಳಿತ ವರ್ಗ ಮತ್ತು ಉದ್ಯೋಗಿಗಳಿಗೆ ಆತ್ಮಹತ್ಯೆ ತಡೆಗಟ್ಟಲು ಬೇಕಾಗಿರುವ  ಕೌಶಲ್ಯಗಳನ್ನು ಹೇಳಿಕೊಡುತ್ತಾರೆ. ಚರ್ಚೆ, ಸಿನಿಮಾ ಪ್ರದರ್ಶನ,  ಮತ್ತಿತರ ಚಟುವಟಿಕೆಗಳ ಮೂಲಕ ಜನರನ್ನು ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಮುಕ್ತವಾಗಿ ಮಾತನಾಡಲು ಉತ್ತೇಜನ ನೀಡುತ್ತವೆ.

ಗೇಟ್ಕೀಪಿಂಗ್ ತರಬೇತಿ: ಸಂಸ್ಥೆಯು ಉದ್ಯೋಗಿಗಳಿಗೆ ಈ ತರಬೇತಿ ನೀಡಬಹುದು. ಗೇಟ್ಕೀಪರ್ (gatekeeper) ಎಂದರೆ  ಮಾನಸಿಕ ಅಥವಾ ಭಾವನಾತ್ಮಕ ತೊಂದರೆ (ಖಿನ್ನತೆ, ಆತಂಕ, ಆತ್ಮಹತ್ಯೆಯ ಯೋಚನೆ) ಇದ್ದಾಗ, ಅಗತ್ಯವಿರುವ ಭಾವನಾತ್ಮಕ ಬೆಂಬಲ ನೀಡಲು ತರಬೇತಿ ಪಡೆದ ವ್ಯಕ್ತಿ. ಗೇಟ್ಕೀಪರ್ ಯಾರು ಬೇಕಾದರೂ ಆಗಬಹುದು. 

ಗೌಪ್ಯತೆ: ಉದ್ಯೋಗಿಗೆ ಸಮಸ್ಯೆಯಿದ್ದಾಗ ಸಹಾಯ ಕೇಳಲು ಮುಜುಗರ ಪಡುತ್ತಾರೆ. ಏಕೆಂದರೆ ಅವರ ವಿಷಯದ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿದರೆ ? ಎಂಬ ಅನುಮಾನವಿರುತ್ತದೆ.ಆದ್ದರಿಂದ ಸಂಸ್ಥೆಯು  ಗೌಪ್ಯತೆಯ ನಿಯಮಗಳನ್ನು ಕಾಯ್ದುಕೊಳ್ಳಬೇಕು. ಆಗ ಉದ್ಯೋಗಿಗೆ  ತಮ್ಮ ವೈಯಕ್ತಿಕ ವಿಷಯಗಗಳನ್ನು ಸೂಕ್ಷ್ಮವಾಗಿ ನಿಭಾಯಿಸಲ್ಪಡುತ್ತವೆ ಎಂಬ ಭರವಸೆ ಮೂಡುತ್ತದೆ.

ತೊಡಕಿನ ಸನ್ನಿವೇಶ: ಉದ್ಯೋಗದಲ್ಲಿ ಕೆಲವೊಮ್ಮೆ ಕಠಿಣವಾದ ಸನ್ನಿವೇಶಗಳು ತಲೆದೂರಬಹುದು. ಇದರಿಂದ ಕೆಲಸದ ಮೇಲೆ ಹಾಗೂ ಉದ್ಯೋಗಿಯ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು

ಈ ಕೆಲವು ಪರಿಸ್ಥಿತಿಗಳಿಂದ ತೊಂದರೆಯಾಗಬಹುದು:

  • ತಮ್ಮ ಕೆಲಸಕ್ಕೆ ತೊಂದರೆಯಾದರೆ ಅಥವಾ ಸಂಬಳದಲ್ಲಿ ಕಡಿತವಾದರೆ ಎಂಬ ಭೀತಿ

  • ಗ್ರಾಮ ಅಥವ ಚಿಕ್ಕ ಊರಿನಿಂದ ಪಟ್ಟಣಕ್ಕೆ  ವಲಸೆ ಬಂದ ಉದ್ಯೋಗಿಗಳು ಅಥವಾ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಪಡುತ್ತಿರುವವರು

  • ತಮ್ಮ ವೃತ್ತಿಪರ ವಿಷಯ ಅಥವ ವೈಯಕ್ತಿಕ ವಿಷಯದಿಂದ  ಭಾವನಾತ್ಮಕ ಅಥವಾ ಹಣಕಾಸಿನ ಸಮಸ್ಯೆ

  • ಕೆಲವರು ಈ ಹಿಂದೆ ಚೆನ್ನಾಗಿ ಕೆಲಸ ಮಾಡುತ್ತಿದ್ದವರು ಇತ್ತೀಚೆಗೆ ಆಫೀಸ್ ಗೆ ತಡವಾಗಿ ಬರುವುದು, ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸದೆ ಇರುವುದು,  ಹೆಚ್ಚು ರಜೆ ತೆಗೆದುಕೊಳ್ಳುವುದು, ಇತ್ಯಾದಿ. ಹೀಗೆ ಹಲವು ಕಾರಣಗಳಿಂದ ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.

ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮವು ಪರಿಣಾಮಕಾರಿಯಾಗಬೇಕಾದರೆ , ಈ ಕೆಳಗೆ ಸೂಚಿಸಿರುವಂತೆ ಸೂಕ್ತವಾದ ಯೋಜನೆ ಇರಬೇಕು.

  • ಕಾರ್ಯಕ್ರಮದ  ಚಟುವಟಿಕೆಗಳ ಪಟ್ಟಿ

  • ಚಟುವಟಿಕೆಗಳನ್ನು ನಿಭಾಯಿಸಲು ಆಯ್ಕೆಯಾಗಿರುವ ಉದ್ಯೋಗಿಗಳು( ಆರೋಗ್ಯ ವಿಭಾಗ, ಮಾನವ ಸಂಪನ್ಮೂಲ ವಿಭಾಗ ಅಥವಾ ಮತ್ತಿತರ ವಿಭಾಗಗಳು)

  • ವಾರ್ಷಿಕ ಚಟುವಟಿಕೆಗಳ ರೇಖಾಚಿತ್ರ

  • ಕಾರ್ಯಕ್ರಮವನ್ನು ನೆಡೆಸಲು ಆಸಕ್ತಿ ತೋರಿಸುವ ಸ್ವಯಂ ಕಾರ್ಯಕರ್ತರು

  • ಕಾರ್ಯಕ್ರಮದ ಏಳಿಗೆ ಮತ್ತು ಪರಿಣಾಮಗಳನ್ನು ನೋಡಿಕೊಳ್ಳಲು ಒಂದು ಯೋಜನೆ  

 ಈ ಲೇಖನಗಳ ಸರಣಿಯನ್ನು ವೈಟ್ ಸ್ವಾನ್ ಫೌಂಡೇಶನ್ ವತಿಯಿಂದ ರಚಿಸಲಾಗಿದೆ.  ವಿ‍‍ಷಯ ಸಂಗ್ರಹಣೆ : ನಿಮ್ಹಾನ್ಸ್ ಕೇಂದ್ರದ ನುರಿತ ತಜ್ಞರುಗಳಾದ ಡಾ. ಗುರುರಾಜ್ ಗೋಪಾಲಕೃಷ್ಣ ( ಎಪಿಡೆಮಾಲಜಿ ಶಾಖೆಯ ಮುಖ್ಯಸ್ಥರು ), ಡಾ. ಪ್ರಭಾ ಚಂದ್ರ (ಮನೋವೈದ್ಯ ಶಾಸ್ತ್ರ ಪ್ರಾಧ್ಯಾಪಕರು ) , ಡಾ. ಸೀಮಾ ಮಲ್ಹೋತ್ರ ( ಹೆಚ್ಚುವರಿ ಪ್ರಾಧ್ಯಾಪಕರು, ವೈದ್ಯಕೀಯ ಮನೋವಿಜ್ಞಾನ ) , ಡಾ. ಪೂರ್ಣಿಮಾ ಭೋಲಾ ( ಸಹ ಪ್ರಾಧ್ಯಾಪಕರು, ವೈದ್ಯಕೀಯ ಮನೋವಿಜ್ಞಾನ ವಿಭಾಗ) ಮತ್ತು ಡಾ. ಸೆಂಥಿಲ್ ಕುಮಾರ್ ರೆಡ್ಡಿ ( ಸಹ ಪ್ರಾಧ್ಯಾಪಕರು, ಮನೋವೈದ್ಯ ಶಾಸ್ತ್ರ) .

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org