ಆರೈಕೆದಾರರೇ, ಸಹಾಯವನ್ನು ಸ್ವೀಕರಿಸಿ

ಆರೈಕೆದಾರರೇ, ಸಹಾಯವನ್ನು ಸ್ವೀಕರಿಸಿ

ಜವಾಬ್ದಾರಿಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಕುಟುಂಬದವರ ಮತ್ತು ಸ್ನೇಹಿತರ ಸಹಾಯವನ್ನು ಸ್ವೀಕರಿಸಿ.

ಆರೈಕೆ ಮಾಡುವುದು ಒಂದು ದೀರ್ಘ ಪ್ರಯಾಣವಾಗಿದ್ದು, ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ. ಸಹಾಯವನ್ನು ಕೇಳುವುದು ಸುಲಭವಲ್ಲ. ಅದರಲ್ಲೂ ಮಾನಸಿಕ ಅನಾರೋಗ್ಯ ಪೀಡಿತರನ್ನು ಕಾಳಜಿ ಮಾಡುವಾಗ ಅವರ ಕುರಿತು ಇರುವ ಪೂರ್ವಗ್ರಹ ಮತ್ತು ತಾರತಮ್ಯದಿಂದಾಗಿ ಸಹಾಯ ದೊರಕುವುದು ಕಷ್ಟಕರ. ಆದರೆ ತಜ್ಞರ ಪ್ರಕಾರ ಯಾರಾದರೂ ನಿಮಗೆ ಸಹಾಯ ಮಾಡಲು ಮುಂದೆ ಬಂದರೆ ಅದನ್ನು ಒಪ್ಪಿಕೊಳ್ಳುವುದರಿಂದ ನಿಮಗೆ ಒತ್ತಡ ಮತ್ತು ಬಳಲಿಕೆ ಉಂಟಾಗುವುದು ತಪ್ಪುತ್ತದೆ.

ಭಾರತದಲ್ಲಿ ಮಾನಸಿಕ ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುವುದು ಕುಟುಂಬದ ಸದಸ್ಯರಿಗೆ ಹೆಚ್ಚಿನ ಹೊರೆಯಾಗಿದೆ. ಹೆಚ್ಚುತ್ತಿರುವ ಖರ್ಚು, ಸಮಯದ ಅಭಾವ ಮತ್ತು ಬದಲಾದ ಸಾಮಾಜಿಕ ಸಂಬಂಧಗಳು ಒಂದು ತರಹದ ಹೊರೆಯಾದರೆ ಆರೈಕೆದಾರರು ಅನುಭವಿಸುವ ಬಾವನಾತ್ಮಕ ಸಂಕಷ್ಟಗಳು ಇನ್ನೊಂದು ರೀತಿಯದ್ದಾಗಿವೆ. “ಕುಟುಂಬದಲ್ಲಿ ಆರೈಕೆದಾರರು ಲಭ್ಯವಿದ್ದರೂ ಕೂಡ ಸಾಮಾನ್ಯವಾಗಿ ಮಾನಸಿಕ ಅನಾರೋಗ್ಯ ಪೀಡಿತರನ್ನು ಒಬ್ಬರೇ ನೋಡಿಕೊಳ್ಳುತ್ತಿರುತ್ತಾರೆ,” ಎನ್ನುತ್ತಾರೆ ನಿಮ್ಹಾನ್ಸ್ನ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರತಿ ಜಗನ್ನಾಥನ್. ಗಂಭೀರವಾದ ಅಥವಾ ಉಲ್ಭಣಿಸುತ್ತಿರುವ ಮಾನಸಿಕ ಕಾಯಿಲೆಗಳನ್ನು, ಸ್ಕಿಜೋಫ್ರೀನಿಯಾ ಅಥವಾ ಅಲ್ಝಮೈರ್, ಹೊಂದಿರುವ ವ್ಯಕ್ತಿಗಳ ಹಲವಾರು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ, ಉದಾಹರಣೆಗೆ ಸ್ನಾನಮಾಡಿಸುವುದು, ಸ್ವಚ್ಛಗೊಳಿಸುವುದು, ಸರಿಯಾದ ಸಮಯಕ್ಕೆ ಔಷಧನೀಡುವುದು, ವ್ಯಕ್ತಿಯ ಆರೋಗ್ಯವನ್ನು ಮೇಲ್ವಿಚಾರಿಸುವುದು ಮತ್ತು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿ. ಈ ರೀತಿಯ ದೀರ್ಘಕಾಲೀನ ಕಾಳಜಿಯ ಹೊರೆಯಿಂದ ವ್ಯಕ್ತಿಗೆ ಒತ್ತಡವುಂಟಾಗಬಹುದು. ಆದ್ದರಿಂದ ಉಳಿದವರ ಸಹಾಯದ ಅವಶ್ಯಕತೆಯಿರುತ್ತದೆ.

ಕೊಡು-ಕೊಳ್ಳುವಿಕೆಯ ಸಂಬಂಧ

ಆರೈಕೆದಾರರಿಗೆ ಯಾರಾದರೂ ಸಹಾಯವನ್ನು ಮಾಡಲು ಮುಂದೆ ಬಂದಾಗ “ನೀವು ಯಾಕೆ ಸಹಾಯ ಮಾಡಲು ಬಯಸುತ್ತೀರಿ? ನನ್ನಿಂದ ಏನಾದರೂ ನಿರೀಕ್ಷಿಸುತ್ತಿರುವಿರಾ?” ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಬ್ಬ ಸ್ನೇಹಿತ ಅಥವಾ ಸಂಬಂಧಿಯು ಸಹಾಯ ಮಾಡಲು ಮುಂದೆ ಬಂದಾಗ ಆರೈಕೆದಾರರು ಅವರ ಸಹಾಯವನ್ನು ಹೇಗೆ ಮರಳಿಸುವುದು ಎಂಬ ಯೋಚನೆಗೆ ಬೀಳುತ್ತಾರೆ. ಇದರಿಂದ ಆರೈಕೆದಾರರಲ್ಲಿ ಪಶ್ಚಾತ್ತಾಪದ ಭಾವನೆ ಉಂಟಾಗಬಹುದು. ಕೆಲವು ಸ್ನೇಹಿತರು ಮತ್ತು ಸಂಬಂಧಿಗಳು ಪ್ರತಿಫಲವನ್ನು ನಿರೀಕ್ಷಿಸಿದರೂ ಉಳಿದವರು ಕೇವಲ ಸಹಾಯ ಮಾಡುವ ಉದ್ದೇಶವನ್ನು ಮಾತ್ರ ಹೊಂದಿರಬಹುದು. ಈ ಸಂದರ್ಭದಲ್ಲಿ ಆರೈಕೆದಾರರು ಅವರಿಂದ ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅಥವಾ ಅವರು ರೋಗಿಯನ್ನು ನೋಡಿಕೊಳ್ಳುವಾಗ ಮನೆಯ ಕೆಲಸವನ್ನು ಮಾಡಿಕೊಳ್ಳಲು ಸಹಾಯವನ್ನು ಪಡೆದುಕೊಳ್ಳಬಹುದು.

ಹಂಚಿಕೆಯ ಭಯ

ಮಾನಸಿಕ ಅನಾರೊಗ್ಯದ ಕುರಿತು ಸಮಾಜದಲ್ಲಿರುವ ಪೂರ್ವಾಗ್ರಹ ಮತ್ತು ತಾರತಮ್ಯ ಭಾವನೆಯ ಕಾರಣದಿಂದ ಆರೈಕೆದಾರರು ಸಮಾಜವು ತಮ್ಮ ಪರಿಸ್ಥಿತಿಯನ್ನು ಸ್ವೀಕರಿಸುವುದಿಲ್ಲವೆಂದು ಭಾವಿಸಬಹುದು. ಇದಕ್ಕೆ ಪುಷ್ಠಿಕೊಡುವಂತೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅವರ ಹೊರೆಯನ್ನು ಈ ರೀತಿ ಇನ್ನಷ್ಟು ಹೆಚ್ಚಿಸುತ್ತಾರೆ:

  • ಪೂರ್ವಗ್ರಹವನ್ನು ಉಂಟುಮಾಡುವ ಮೂಲಕ

  • ಟೀಕಿಸುವುದರಿಂದ ಮತ್ತು

  • ಅವರನ್ನು ಪ್ರತ್ಯೇಕಿಸುವ ಮೂಲಕ.

ಇದನ್ನು ತಪ್ಪಿಸಲು, ಅವರಿಂದ ಪ್ರತ್ಯೇಕಗೊಳ್ಳುವ ಬದಲು ಆರೈಕೆದಾರರು, ತಮ್ಮ ಕುಟುಂಬದವರು, ಸ್ನೇಹಿತರು ಮತ್ತು ಸಂಬಂಧಿಗಳಿಗೆ ತಮ್ಮ ಪ್ರೀತಿಪಾತ್ರರ ಅನಾರೋಗ್ಯದ ಕುರಿತು ತಿಳುವಳಿಕೆ ಮೂಡಿಸಬೇಕು. ಅವರು ಒಮ್ಮೆಅನಾರೋಗ್ಯದ ಕುರಿತು ಅರಿತು ಕೊಂಡರೆ ಆರೈಕೆದಾರರಿಗೆ ಅವರ ಸಹಾಯವನ್ನು ಯಾಚಿಸುವುದು ಸುಲಭವಾಗುತ್ತದೆ. “ರೋಗಿಗಳನ್ನು ಮತ್ತು ಆರೈಕೆದಾರರನ್ನು ಒಪ್ಪಿಕೊಳ್ಳುವಂತಹ ಸಮುದಾಯವಿರುವ, ಮುಕ್ತವಾದ ಸಮಾಜವನ್ನು ಹೊಂದಿರುವುದು ಆರೈಕೆದಾರರ ಭಾವನಾತ್ಮಕ ಹೊರೆಯನ್ನು ಬಹಳಷ್ಟು ಮಟ್ಟಿಗೆ ಕಡಿಮೆಮಾಡುತ್ತದೆ,” ಎನ್ನುತ್ತಾರೆ ಡಾ. ಜಗನ್ನಾಥನ್.

ಆರೈಕೆದಾರರು ರೋಗಿಗೆ ಆತ್ಮೀಯವಾಗಿದ್ದಷ್ಟು ಅವರ ಜವಾಬ್ದಾರಿಯ ಹೊರೆಯು ಹೆಚ್ಚುತ್ತದೆ. ನಿಮ್ಮ ಸಾಮಾಜಿಕ ವಲಯದಿಂದ ಸಹಾಯವನ್ನು ಸ್ವೀಕರಿಸುವುದರಿಂದ ನಿಮ್ಮ ಜೀವನವು ಸಮತೋಲನಗೊಳ್ಳುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರನ್ನು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org