ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿಯ ಕುಟುಂಬದವರೂ ಸಹ ಕಳಂಕದಿಂದ ಬಳಲುತ್ತಾರೆ

ಸಾಮಾಜಿಕ ಕಳಂಕ ಆರೈಕೆದಾರರ ಹೊರೆಯನ್ನು ಅಧಿಕ ಮಾಡುತ್ತದೆ ಮತ್ತು ಅವರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ

ಆಕ್ಸ್ ಫರ್ಡ್ ನಿಘಂಟುವಿನಲ್ಲಿ ಹೇಳಿರುವ ಪ್ರಕಾರ, ಕಳಂಕ ಎಂದರೆ ಒಂದು ನಿರ್ಧಿಷ್ಟ ಸನ್ನಿವೇಶ, ವ್ಯಕ್ತಿ ಅಥವಾ ಗುಣಕ್ಕೆ ಸಂಬಂಧಿಸಿದ್ದಂತೆ ಅಪಮಾನವುಂಟು ಮಾಡುವ ಸ್ಥಿತಿ.

ಪುರಾತನ ಕಾಲದಿಂದಲೂ, ನಮ್ಮ ಸಮುದಾಯವು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಪೋಷಣೆ ಮಾಡುವ ಆರೈಕೆದಾರನನ್ನು ಕಳಂಕಿತನಂತೆ ಕಾಣುತ್ತಾ ಬಂದಿರುವುದು ವಿಷಾದಕರ ಸಂಗತಿ.

ವಿಶ್ವ ಆರೋಗ್ಯ ಸಂಸ್ಥೆಯ, ಮಾನಸಿಕ ಆರೋಗ್ಯ ಶಾಖೆಯ ಮಾಜಿ ನಿರ್ದೇಶಕರಾದ ಡಾ.ನಾರ್ಮನ್ ಸಾರ್ಟೋರಿಯಸ್ ರವರು ಹೇಳುವ ಪ್ರಕಾರ ಮಾನಸಿಕ ಕಾಯಿಲೆಯ ಚಿಕಿತ್ಸೆಗೆ ಅಡ್ಡಿಯಾಗಿರುವ ಅತೀ ದೊಡ್ಡ ಮತ್ತು ಏಕೈಕ ಕಾರಣವೆಂದರೆ ಸಾಮಾಜಿಕ ಕಳಂಕ.

ಹಾಗಾದರೆ, ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿ ಮಾತ್ರ ಕಳಂಕವನ್ನು ಎದುರಿಸುವನೇ? ಆತನ ಕುಟುಂಬದವರು ಕಳಂಕದಿಂದ ಬಳಲುತ್ತಾರೆಯೇ?

ಕೆಲವೊಂದು ತಾತ್ಕಾಲಿಕ ಕಾಯಿಲೆಗಳು ಅಥವಾ ಮಾನಸಿಕ ಸಮಸ್ಯೆ ಕಾಣಿಸಿಕೊಂಡಾಗ, ಅವಶ್ಯಕತೆಯಿದ್ದಲ್ಲಿ ಮಾತ್ರ ಆರೈಕೆದಾರರು ತಮ್ಮ ಸ್ನೇಹಿತರರೊಂದಿಗೆ ಅಥವಾ ಹಿತೈಷಿಗಳೊಂದಿಗೆ ಸಮಸ್ಯೆಯನ್ನು ಹಂಚಿಕೊಳ್ಳುತ್ತಾರೆ. ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದರೂ ವಿಷಯವನ್ನು ತಮ್ಮಲ್ಲಿಯೇ ಮುಚ್ಚಿಡುತ್ತಾರೆ ಮತ್ತು ಯಾರ ಬಳಿಯೂ ಅದರ ಬಗ್ಗೆ ಮಾತನಾಡುವುದಿಲ್ಲ.

ನಿಮ್ಹಾನ್ಸ್ ಕೇಂದ್ರದ ಪುನರ್ವಸತಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಟಿ. ಶಿವಕುಮಾರ್ರವರು ಹೇಳುವ ಪ್ರಕಾರ, ಧೀರ್ಘಕಾಲದ ಕಾಯಿಲೆಗಳನ್ನು ಹೆಚ್ಚು ದಿನಗಳವರೆಗೆ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಆದರೆ ವ್ಯಾಪಕವಾದ ಸಾಮಾಜಿಕ ಕಳಂಕದ ಕಾರಣದಿಂದ ಆರೈಕೆದಾರರು ಮಾನಸಿಕವಾಗಿ ಹೆಚ್ಚು ಬಳಲುತ್ತಾರೆ.

ಸಾಮಾಜಿಕ ಕಳಂಕ ಎಂದರೇನು ?

ಒಬ್ಬ ಆರೈಕೆದಾರ/ ಕುಟುಂಬದ ಸದಸ್ಯ/ ಆತ್ಮೀಯ ಸ್ನೇಹಿತರನ್ನು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ ಸಂಬಂಧವಿರುವ ಕಾರಣಕ್ಕೆ, ಅವರನ್ನು ಸಮಾಜದಿಂದ ದೂರವಿಡುವ ಮತ್ತು ಹೀನಾಯವಾಗಿ ಕಾಣುವ ಸ್ಥಿತಿಯನ್ನು ಸಾಮಾಜಿಕ ಕಳಂಕ ಎನ್ನಬಹುದು.

ಉದಾಹರಣೆಗೆ ಒಬ್ಬ ಹುಡುಗ ಅಥವಾ ಹುಡುಗಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬದವರೊಂದಿಗೆ ಮದುವೆ ಸಂಬಂಧವನ್ನು ತಿರಸ್ಕರಿಸಬಹುದು. ಡಾ. ಟಿ. ಶಿವಕುಮಾರ್ ರವರು ಹೇಳುವಂತೆ, “ಮಾನಸಿಕ ಅಸ್ವಸ್ಥ ವ್ಯಕ್ತಿಯೊಂದಿಗೆ ಕೇವಲ ಸಮಾಜದವರು ಮಾತ್ರವಲ್ಲ, ಕುಟುಂಬದ ಸದಸ್ಯರೂ ಸಹ ಕ್ರೂರವಾಗಿ ವರ್ತಿಸುತ್ತಾರೆ. ಅದರಲ್ಲೂ ಸಮಾಜದಿಂದಾಗುವ ತೊಂದರೆಗಳಿಂದ ಆರೈಕೆದಾರರು ನೋವನ್ನು ಅನುಭವಿಸುತ್ತಾರೆ.”

ಸಮಾಜದ ಜೊತೆಗೆ ಹಲವಾರು ಅಂಶಗಳು ಕಳಂಕಕ್ಕೆ ದಾರಿ ಮಾಡಿಕೊಡುತ್ತದೆ.

  • ಮಾನಸಿಕ ಕಾಯಿಲೆ ಎನ್ನುವುದು ಅನುವಂಶೀಯವಾದದ್ದು ಎಂಬ ತಿಳುವಳಿಕೆಯ ಅಭಾವದಿಂದ, ವ್ಯಕ್ತಿಯ ಕುಟುಂಬದ ಸದಸ್ಯರಿಗೆ ತಾವು ಕಳಂಕಿತರೆನ್ನುವ ಭಾವನೆ ಇರುತ್ತದೆ. 

  • ಆರೈಕೆದಾರರು ವ್ಯಕ್ತಿಯನ್ನು ಈ ಮೊದಲೇ ಮಾನಸಿಕ ತಜ್ಞರ ಬಳಿ ಕರೆದೊಯ್ಯಬೇಕಿತ್ತು, ತನಗೆ ಮಾನಸಿಕ ಅಸ್ವಸ್ಥತೆಯ ಸೂಚನೆಗಳ ಬಗ್ಗೆ ತಿಳುವಳಿಕೆಯಿಲ್ಲದೇ ವ್ಯಕ್ತಿಯನ್ನು ಧೀರ್ಘಕಾಲ ಕಾಯಿಲೆಯಿಂದ ಬಳಲುವಂತಾಗಲು ತಾನೇ ಕಾರಣ ಎಂದು ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಡಾ. ಟಿ. ಶಿವಕುಮಾರ್ ರವರು ಹೇಳುವಂತೆ " ಕೆಲವು ವ್ಯಕ್ತಿಗಳಲ್ಲಿ ಕಾಯಿಲೆಯ ಆರಂಭದ ದಿನಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಒಂದು ವೇಳೆ ಸೂಚನೆಗಳು ಕಂಡುಬಂದರೂ ಅದನ್ನು ಗುರುತಿಸಲು ಬಹಳ ಕಷ್ಟ". ಆರೈಕೆದಾರರು ಸೂಕ್ತ ಸಮಯದಲ್ಲಿ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾತನಾಡಿದಾಗ, ಅಪರಾಧ ಪ್ರಜ್ಞೆಯಿಂದ, ಸ್ವಯಂ ಕಳಂಕಿತ ಭಾವನೆಯಿಂದ ಮತ್ತು ತಪ್ಪು ಮಾಹಿತಿಯಿಂದ ಹೊರಗೆ ಬರಲು ಸಹಾಯವಾಗುತ್ತದೆ.

  • ಸಮಾಜದ ಮೈಲುಗಲ್ಲುಗಳಾದ ಶಿಕ್ಷಣ, ಮದುವೆ ಮತ್ತು ಉದ್ಯೋಗದ ವಿಷಯದಲ್ಲಿ ಗುರಿ ತಲುಪಲು ಸಾಧ್ಯವಾಗದಿದ್ದಾಗ, ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿ ಮತ್ತು ಕುಟುಂಬದವರು ಸಮಾಜದಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ. ಆರೈಕೆದಾರರು ಹತಾಶೆಗೊಳಗಾಗುತ್ತಾರೆ ಮತ್ತು ಅವರ ಜವಾಬ್ದಾರಿ ಹೆಚ್ಚಾಗುತ್ತದೆ. ಇದರಿಂದ ತಮ್ಮ ಆರೈಕೆ ಮಾಡುವ ಸಾಮರ್ಥ್ಯವೂ ಕುಸಿಯುತ್ತದೆ.

ಕುಟುಂಬದವರ ಮೇಲೆ ಕಳಂಕದ ಪರಿಣಾಮಗಳು

  • ಚಿಕಿತ್ಸೆಗೆ ಕರೆದೊಯ್ಯಲು ವಿಳಂಬ: ಡಾ. ಶಿವಕುಮಾರ್ ಹೇಳುವಂತೆ - "ಸಮಾಜದಿಂದ ಪ್ರತ್ಯೇಕತೆ ಉಂಟಾಗುತ್ತದೆ, ಸಮುದಾಯದವರು ದೂರ ಮಾಡುತ್ತಾರೆ ಎಂಬ ಭಯಯಿಂದ ಅದೆಷ್ಟೋ ಸಲ ಕುಟುಂಬದವರು ಮಾನಸಿಕ ಕಾಯಿಲೆಗೆ ಚಿಕಿತ್ಸೆಯನ್ನೇ ಕೊಡಿಸುವುದಿಲ್ಲ. ಚಿಕಿತ್ಸೆ ನೀಡದೆ ಕಾಯಿಲೆ ಗುಣಮುಖವಾಗುತ್ತದೆ ಎಂದು ನಂಬಿರುತ್ತಾರೆ. ಪರಿಸ್ಥಿತಿ ಮೀರಿದ ನಂತರ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾರೆ ".

  •  ಮಾನಸಿಕ ಯಾತನೆ: ಈ ಸಾಮಾಜಿಕ ಕಳಂಕದಿಂದ ಆರೈಕೆದಾರರಿಗೆ  ಮಾನಸಿಕ ಯಾತನೆಗೆ ಉಂಟಾಗಬಹುದು. ಸಮಾಜದಿಂದ, ಸ್ನೇಹಿತರಿಂದ, ಸುತ್ತಮುತ್ತಲ ಜನರಿಂದ ದೂರಾಗಿ ಒಂಟಿಯಾಗುವ ಚಿಂತೆ ಮತ್ತು ಒತ್ತಡ ಅವರ ಭಾವನೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು. ಆರೈಕೆದಾರರು ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳಲು ಮತ್ತು ತಮ್ಮ ಪರಿಸ್ಥಿತಿಯನ್ನು ನಿಭಾಯಿಸಲು ತಜ್ಞರ  ತಜ್ಞರ ಸಹಾಯ ಪಡೆಯಬೇಕು.

  • ಸಮಾಜದಿಂದ ಬಹಿಷ್ಕಾರ ಮತ್ತು ಒಂಟಿತನ: ಹಲವಾರು ಸಂದರ್ಭಗಳಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು, ಆತನ ಕುಟುಂಬದವರು ಸಮಾಜದಿಂದ ಪ್ರತ್ಯೇಕಿಸುತ್ತಾರೆ ಮತ್ತು ಅಪಹಾಸ್ಯಕ್ಕೆ ಗುರಿಯಾಗುವ ಭೀತಿಯಿಂದ ತಾವೂ ಸಹ ಸಮಾಜದಿಂದ ದೂರ ಉಳಿಯುತ್ತಾರೆ. ಮದುವೆ, ಹುಟ್ಟಿದ ಹಬ್ಬ, ಪೂಜೆ, ಹಬ್ಬ ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ದಿನ ಕಳೆದಂತೆ ತಾವೂ ಒತ್ತಡಕ್ಕೆ ಸಿಲುಕಿ, ತಮ್ಮ ಕೋಪ, ಹತಾಶೆಯನ್ನು ವ್ಯಕ್ತಿಯ ಮೇಲೆ ತೋರಿಸುತ್ತಾರೆ ಮತ್ತುಆತನಿಗೆ ಅಗತ್ಯವಿರುವ ಆರೈಕೆಯನ್ನು ಸರಿಯಾಗಿ ಮಾಡುವುದಿಲ್ಲ.

ಮುಕ್ತಾಯ

ಡಾ. ಜಗನ್ನಾಥನ್ ರವರು ಹೇಳುವಂತೆ - "ಕಳಂಕಕ್ಕೆ ಯಾವುದೇ ಕಾರಣಗಳಿರಲಿ, ಮಾನಸಿಕ ಕಾಯಿಲೆಗಳ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಸಿಗಬೇಕು. ಪೂರ್ವಾಗ್ರಹದಿಂದ ಹೊರಗೆ ಬಂದು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಪ್ರಸ್ತುತ ಸನ್ನಿವೇಶದಲ್ಲಿ, ಆರೈಕೆದಾರರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬಳಲುತ್ತಿದ್ದಾರೆ. ಸಮಾಜದಲ್ಲಿ ಕಳಂಕವನ್ನು ಕಡಿಮೆ ಮಾಡುವುದರಿಂದ ಅವರಿಗೆ ತಮ್ಮ ಸಮಸ್ಯೆಯನ್ನು ನಿಭಾಯಿಸಲು ಅನುಕೂಲವಾಗುತ್ತದೆ.

Related Stories

No stories found.