ವಯಸ್ಸಾದಂತೆಲ್ಲ ಮಾನಸಿಕ ಅಸ್ವಸ್ಥ ಮಗುವಿನ ಪಾಲನೆಯ ಸವಾಲುಗಳೂ ಹೆಚ್ಚುತ್ತವೆ

ದೀರ್ಘಕಾಲಿಕ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳ ಪೋಷಕರಿಗೆ ಕುಟುಂಬ ಹಾಗೂ ಸಮುದಾಯದ ಬೆಂಬಲ ಅತ್ಯಗತ್ಯ.

ಮಾನಸಿಕ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಲ್ಲ. ಆಟಿಸಮ್’ಗೆ ಒಳಗಾಗಿರುವ ಅಥವಾ ಸ್ಕಿಜೋಫ್ರೇನಿಯಾದಂಥ ಮನೋರೋಗಕ್ಕೆ ತುತ್ತಾದ ಹರೆಯದ ಮಕ್ಕಳನ್ನು ಸಂಭಾಳಿಸುವುದು ಕೂಡಾ ಪೋಷಕರಿಗೆ ವಿಪರೀತ ಸವಾಲಿನ ಕೆಲಸ. ಒಂದು ರೀತಿಯಿಂದ ಇವೆರಡೂ ಜೀವನ ಪರ್ಯಂತ ಆರೈಕೆ ಬೇಡುವ ಸಂಗತಿಗಳು.

ಮಾನಸಿಕ ಕಾಯಿಲೆಗೂ, ಬೆಳವಣಿಗೆ ಕುಂಠಿತವಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಸ್ಕೀಜೋಫ್ರೇನಿಯಾ ಅಥವಾ ಬೈಪೋಲಾರ್ ಅಸ್ವಸ್ಥತೆಯನ್ನು ಹೊಂದಿರುವವರು ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆತರೆ ಸಹಜ ಜೀವನ ನಡೆಸುವಂತೆ ಆಗುತ್ತಾರೆ. ಆದರೆ ಸಾಮಾನ್ಯ ಅಥವಾ ತೀವ್ರ ಸ್ವರೂಪದಲ್ಲಿ ಮಾನಸಿಕ ಬೆಳವಣಿಗೆ ಕುಂಠಿತಗೊಂಡಿರುವವರು ಎಲ್ಲರಂತೆ ಜೀವನ ನಡೆಸುವುದು ಬಹಳ ಕಷ್ಟ. ಮೆದುಳು ಬೆಳವಣಿಗೆಗೊಳ್ಳದೆ ಆಟಿಸಮ್ ಅಥವಾ ಬೌದ್ಧಿಕ ಬೆಳವಣಿಗೆ ಕುಂಠಿತಗೊಂಡಿದ್ದರೆ, ಅಂತಹ ವ್ಯಕ್ತಿಗಳು ಸಮಾಜದೊಂದಿಗೆ ವ್ಯವಹರಿಸುವುದು ಸುಲಭವಲ್ಲ. ಅವರ ಸಮಸ್ಯೆ ಸರಿಪಡಿಸಬಹುದಾಗಿರುವಂಥದ್ದೂ ಅಲ್ಲ.

ಮಾನಸಿಕ ಬೆಳವಣಿಗೆ ಕುಂಠಿತಗೊಂಡಿರುವ ಮಕ್ಕಳ ಆರೈಕೆ ಮತ್ತು ಮಾನಸಿಕ ರೋಗಕ್ಕೆ ತುತ್ತಾದ ಹರೆಯದ ಮಕ್ಕಳ ಆರೈಕೆ ಎರಡೂ ಬೇರೆ ಬೇರೆ ಸಂಗತಿಗಳು. (ಬಹುತೇಕ ಮಾನಸಿಕ ಸಮಸ್ಯೆಗಳು ಹದಿ ವಯಸ್ಸಿನ ಏರುಪೇರುಗಳ ಕಾರಣದಿಂದ ಉಂಟಾಗುತ್ತವೆ). ಮಾನಸಿಕ ಬೆಳವಣಿಗೆ ಕುಂಠಿತವಾಗಿರುವ ಮಗುವಿನ ಆರೈಕೆಯಲ್ಲಿ  - ಶುಚಿತ್ವ ಕಾಯ್ದುಕೊಳ್ಳುವುದು, ಬ್ರಶ್ ಮಾಡುವುದು, ಸ್ನಾನ, ಸರಿಯಾಗಿ ಬಟ್ಟೆ ತೊಟ್ಟುಕೊಳ್ಳುವುದೇ ಮೊದಲಾದ ಸಂಗತಿಗಳನ್ನು ಕಲಿಸುವುದು ಮುಖ್ಯವಾಗಿರುತ್ತದೆ. ಸ್ಕೀಜೋಫ್ರೇನಿಯಾ ಅಥವಾ ಬೈಪೋಲಾರ್ ಡಿಸಾರ್ಡರ್’ನಂಥ ತೀವ್ರ ಸ್ವರೂಪದ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ಮಕ್ಕಳ ಆರೈಕೆಯಲ್ಲಿ -  ಅವರ ಅಸ್ವಸ್ಥತೆಗೆ ಕಾರಣವಾದ ಜೀವನ ಶೈಲಿಯನ್ನು ಬದಲಿಸುವ ಮನೋ ದೈಹಿಕ ಬದಲಾವಣೆಗಳನ್ನು ಉಂಟು ಮಾಡುವುದು ಮುಖ್ಯವಾಗುತ್ತದೆ. ಇಂಥಾ ತೀವ್ರ ಸ್ವರೂಪದ ಮಾನಸಿಕ ಕಾಯಿಲೆಯನ್ನು ಹೊಂದಿರುವ ಬಹುತೇಕ ವ್ಯಕ್ತಿಗಳು ತಮ್ಮ ಕುಟುಂಬ ಹಾಗೂ ಗೆಳೆಯರ ಸಹಕಾರದಿಂದ ಸಂಪೂರ್ಣ ಬದುಕನ್ನು ನಡೆಸುತ್ತಾರೆ.  

ಎರಡೂ ಸಂದರ್ಭಗಳಲ್ಲಿ ಪೋಷಕರನ್ನು ಕಾಡುವ ಕೆಲವು ಸವಾಲುಗಳು ಹೀಗಿವೆ:

1. ನನ್ನ ನಂತರ ಮಗುವನ್ನು ಯಾರು ನೋಡಿಕೊಳ್ಳುತ್ತಾರೆಂಬ ಆತಂಕ: ವರ್ಷಗಟ್ಟಲೆಯಿಂದ ತಮ್ಮ ಮಾನಸಿಕ ಅಸ್ವಸ್ಥ ಮಕ್ಕಳ ಆರೈಕೆ ಮಾಡುತ್ತ ವೃದ್ಧಾಪ್ಯವನ್ನ ಸಮೀಪಿಸುವ ಪೋಷಕರಿಗೆ ಒಂದು ಪ್ರಶ್ನೆ ಕಾಡುತ್ತದೆ. ಅದು, ಇದೀಗ ವಯಸ್ಕನಾ/ಳಾಗಿರುವ ಮಗುವನ್ನು ನನ್ನ ನಂತರ ಯಾರು ನೋಡಿಕೊಳ್ಳುತ್ತಾರೆ? ಎಂಬುದು. ತಮ್ಮ ಮಗುವಿನ ಅಗತ್ಯಗಳನ್ನು ಕಾಲಕಾಲಕ್ಕೆ ಪೂರೈಸುವವರು ಯಾರು? ಸಮಯಕ್ಕೆ ಸರಿಯಾಗಿ ಔಷಧಗಳನ್ನು ನೀಡುವವರು ಯಾರು? ವೈದ್ಯರ ಬಳಿಗೆ ಕರೆದೊಯ್ಯುವವರು ಯಾರು? ಅವರನ್ನು ಪ್ರೀತಿಯಿಂದ ಯಾರಾದರೂ ನೋಡಿಕೊಳ್ಳಬಲ್ಲರೇ? ಅನ್ನುವ ಪ್ರಶ್ನೆಗಳು ಕಾಡುತ್ತವೆ.  

2. ತಮ್ಮದೇ ಅನಾರೋಗ್ಯದ ಜೊತೆ ಹೆಣಗುವುದು : ವಯಸ್ಸಾದಂತೆಲ್ಲ ಹಲವು ಕಾಯಿಲೆಗಳು ಸಹಜವಾಗಿ ಮುತ್ತಿಕೊಳ್ಳತೊಡಗುತ್ತವೆ. ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೈಪರ್’ಟೆನ್ಷನ್ ಹೀಗೆ. ಇಂಥ ಸಂದರ್ಭದಲ್ಲಿ ತಮ್ಮ ಕಾಯಿಲೆಗಳ ಜೊತೆಗೆ ಹೆಣಗುತ್ತಲೇ ವಯಸಿಗೆ ಬಂದ ಮಗುವನ್ನೂ ನೋಡಿಕೊಳ್ಳುವುದು ಹೆಚ್ಚುವರಿ ಒತ್ತಡ ಹೇರುತ್ತದೆ ಮತ್ತು ಸಂಭಾಳಿಸಲು ಕಷ್ಟವಾಗುತ್ತದೆ.

3. ಪಾಲಕರು ಹಾಗೂ ಗುಣಮಟ್ಟದ ಸೇವೆಗಳ ಕೊರತೆ: ತಮ್ಮ ಮಕ್ಕಳ ಆರೈಕೆಗಾಗಿ ವೃತ್ತಿಪರ ಪಾಲಕರನ್ನು ಆಯ್ಕೆ ಮಾಡುವಾಗ ಪೋಷಕರು ಹಲವು ಗೊಂದಲಗಳನ್ನು ಎದುರಿಸುತ್ತಾರೆ. ​ಆರೈಕೆದಾರರು ತಾವು ಮನೆಯಲ್ಲಿ ನೀಡುವ ಸೇವೆಯನ್ನು ನೀಡುತ್ತಾರೋ ಇಲ್ಲವೋ ಅನ್ನುವ ಕುರಿತು ಅನುಮಾನ ಕಾಡುತ್ತದೆ. ನಮ್ಮ ದೇಶದಲ್ಲಿ ಮಾನಸಿಕ ಅಸ್ವಸ್ಥರ ಆರೈಕೆ ಮಾಡುವ ವಸತಿ ಕೇಂದ್ರಗಳ ಕೊರತೆಯೂ ಸಾಕಷ್ಟಿದೆ. ಹಾಗೆ ಕೆಲವು ಇದ್ದರೂ ಜನರಿಗೆ ಅವುಗಳ ಮಾಹಿತಿ ಕಡಿಮೆ.

4. ಮಾನಸಿಕ ಆರೋಗ್ಯದಲ್ಲಿ ಏರುಪೇರು: ನಮ್ಮ ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆಯ ಕುರಿತು ಅದೊಂದು ಕಳಂಕ ಅನ್ನುವಂಥ ತಪ್ಪು ತಿಳುವಳಿಕೆಗಳಿವೆ. ಆದ್ದರಿಂದ ಹಲವು ಬಗೆಯ ಮಾನಸಿಕ ಕಾಯಿಲೆಗಳಿಗೆ ಒಳಗಾಗಿರುವ ಮಕ್ಕಳ ಪೋಷಕರು ಸಮಾಜದಲ್ಲಿ ಪ್ರತ್ಯೇಕತೆಯನ್ನು ಅನುಭವಿಸುತ್ತಾರೆ. ಒಂಟಿತನ ಹಾಗೂ ಸತತ ಆರೈಕೆಯಲ್ಲಿ ನಿರತರಾಗುವ ಮೂಲಕ ಉಂಟಾಗುವ ಒಂಟಿತನಗಳು ಆರೈಕೆಯನ್ನು ಯಾಂತ್ರಿಕವಾಗಿಸುತ್ತವೆ. ದೀರ್ಘಾವಧಿಯಲ್ಲಿ ಇದು ಪಾಲನೆದಾರರಲ್ಲಿ ಅಸಹನೆಯನ್ನು ಹುಟ್ಟುಹಾಕುವ ಸಾಧ್ಯತೆಗಳಿರುತ್ತವೆ.

5. ಬದುಕಿನ ವಾಸ್ತವಗಳನ್ನು ವಿವರಿಸುವುದು:  ಸ್ಕೀಜೋಫ್ರೇನಿಯಾ ಮೊದಲಾದ ಮಾನಸಿಕ ಕಾಯಿಲೆಗೆ ಒಳಗಾದ ಮಕ್ಕಳು ಬೆಳೆದು ದೊಡ್ಡವರಾದಂತೆಲ್ಲ ಅವರ ಸುತ್ತಲಿರುವವರು ಮದುವೆಯಾಗಿ, ಮಕ್ಕಳನ್ನು ಹೊಂದಿ, ಉದ್ಯೋಗಗಳಲ್ಲಿ ನಿರತರಾಗಿ ಬದುಕುವುದನ್ನು ಗಮನಿಸುತ್ತಾ ಇರುತ್ತಾರೆ. ಕೆಲವು ಪ್ರಕರಣಗಳಲ್ಲಿ ಇಂಥ ಅಸ್ವಸ್ಥತೆ ಉಳ್ಳವರು ಸಾಮಾನ್ಯ ಜೀವನ ನಡೆಸಲು ಶಕ್ತರಾಗಿರುವುದಿಲ್ಲ. ಹೀಗಿರುವಾಗ ಪೋಷಕರು ತಮ್ಮ ವಯಸ್ಕ ಮಗುವಿಗೆ ಬದುಕಿನ ವಾಸ್ತವ ಚಿತ್ರಣಗಳನ್ನು ವಿವರಿಸಬೇಕಾಗುತ್ತದೆ. ಸಮಾಜದ ನಡವಳಿಕೆ ಮತ್ತು ತಮ್ಮ ಇತಿಮಿತಿಗಳ ಕುರಿತು ಮನದಟ್ಟು ಮಾಡಿಸಬೇಕಾಗುತ್ತದೆ. ಪೋಷಕರಾಗಿ ನಿಮಗೆ ಇದು ಕಠಿಣವಾಗಿ ತೋರಿದರೆ, ವೃತ್ತಿಪರ ಆಪ್ತ ಸಲಹೆಗಾರರ ಜೊತೆ ಚರ್ಚಿಸಿ, ಅವರ ಸಹಾಯ ಪಡೆಯಬಹುದು.

6. ಏಕಾಂಗಿಯಾಗಿ ನಿಭಾಯಿಸುವುದು: ಮಾನಸಿಕವಾಗಿ ಅಸ್ವಸ್ಥವಾಗಿರುವ ಮಗುವನ್ನು ಬಹಳ ಕಾಲದವರೆಗೆ ಪಾಲನೆ ಮಾಡುವುದು ಹೆಚ್ಚಿನ ಸಮಯವನ್ನು ಬೇಡುತ್ತದೆ. ಇದರಿಂದ ತಾಯ್ತಂದೆಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಗಳೂ ಬಹಳವಾಗಿ ಇರುತ್ತವೆ. ಕೆಲವು ಪ್ರಕರಣಗಳಲ್ಲಿ ಅಧಿಕೃತವಾಗಿ  ಬೇರ್ಪಟ್ಟು, ಕೊನೆತನಕ ಮಗುವಿನ ಪಾಲನೆಯ ಹೊಣೆಯನ್ನು ಒಬ್ಬರೇ ಹೊರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮ ಆರೋಗ್ಯದ ಜೊತೆಗೆ ಹಣಕಾಸು ಅಗತ್ಯಗಳನ್ನು ನಿಭಾಯಿಸಬೇಕಾದ ಆತಂಕ, ಮಗುವಿನ ಭವಿಷ್ಯದ ಚಿಂತೆಯೇ ಮೊದಲಾದ ಸಮಸ್ಯೆಗಳು ಏಕಾಂಗಿ ಪೋಷಕರನ್ನು ಮಾನಸಿಕ ಒತ್ತಡಕ್ಕೆ ನೂಕುತ್ತವೆ.

ನಿಮಗೆ ನೀವೇ ಆಸರೆ

ಕೇವಲ ಪಾಲನೆ ಮಾಡುವುದೇ ನಿಮ್ಮ ಏಕೈಕ ಜವಾಬ್ದಾರಿಯಲ್ಲ. ಪಾಲನೆಯ ಒತ್ತಡವನ್ನು ನಿರ್ವಹಿಸಲು ಸಹಕಾರಿಯಾಗಿ ಹಲವು ಮಾರ್ಗಗಳಿವೆ.  

1. ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ ಮತ್ತು ಚೆನ್ನಾಗಿ ನಿದ್ರಿಸಿ. ದೀರ್ಘಕಾಲಿಕ ಅನಾರೋಗ್ಯ ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ. ಚಿಕ್ಕದೊಂದು ಬಿಡುವು ಪಡೆದು ಗೆಳೆಯರನ್ನು ಭೇಟಿ ಮಾಡಲು, ಸಮಾಜದ ನಡುವೆ ಬೆರೆಯಲು ಸಮಯ ಹೊಂದಿಸಿಕೊಳ್ಳಿ.

2. ಪಾಲನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಬಲ್ಲ ಸಂಪನ್ಮೂಲಗಳನ್ನು ಹುಡುಕಿ. ಪಾಲನೆ ಸೇವೆಗಳನ್ನು ಒದಗಿಸುವ ವಿಶ್ರಾಂತಿ ಆರೈಕೆ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ. ಇದು ನೀವು ನಿಮ್ಮ ಖಾಸಗಿ ಹಾಗೂ ಔದ್ಯೋಗಿಕ ಜವಾಬ್ದಾರಿಗಳನ್ನು ನಿಭಾಯಿಸಲು ಸಮಯ ಒದಗಿಸಿ ಅನುಕೂಲ ಮಾಡಿಕೊಡುವುದು.    

3. ಕುಟುಂಬದ ಅಥವಾ ಗೆಳೆಯರ ಬಳಗದ ಸಹಾಯ ಮತ್ತು ನಿರಂತರ ಸಂಪರ್ಕದಿಂದ ನಿಮ್ಮ ಒಂಟಿತನದ ಒತ್ತಡ ಕಡಿಮೆಯಾಗುವುದು. ಪಾಲನೆಗೆ ಸಹಾಯ ಸಿಗುವುದು. ಮತ್ತು ಮುಂದಿನ ದಿನಗಳಲ್ಲಿ ಕೂಡ ಅಗತ್ಯ ಬಿದ್ದಾಗ ಬೆಂಬಲಕ್ಕೆ ಒದಗುವುದು.

4. ದೀರ್ಘಾಕಾಲಿಕ ಆಯಾಸ, ನಿದ್ರಾಹೀನತೆ, ಖಿನ್ನತೆ, ವಿಷಾದ, ಸಿಡುಕುತನವೇ ಮೊದಲಾದ ಭಾವನಾತ್ಮಕ ಏರುಪೇರುಗಳು ನಿಮ್ಮಲ್ಲಿ ಕಂಡುಬಂದರೆ, ವೃತ್ತಿಪರ ಮಾನಸಿಕ ಆರೋಗ್ಯ ಸಮಾಲೋಚಕರ ಸಹಾಯ ಪಡೆಯಿರಿ.

ಆಕರಗಳು :

1. Family burden among long term psychiatric patients, J. Roychaudhuri, D. Mondal, A.Boral, D Bhattacharya

2. Challenges faced by aging parents in caring for their children with mental disability, John Athaide, Prerana Chidanand, Tina Chung, 2013

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org