ಆರೈಕೆ ಕೆಲಸದಿಂದ ಉಂಟಾಗುವ ಹಣಕಾಸಿನ ಸಮಸ್ಯೆ

ಅಸ್ವಸ್ಥ ಸಂಬಂಧಿಗಳ ಆರೈಕೆ ಬಹಳ ಕಷ್ಟವಾದುದು ಎಂಬುದರ ಬಗ್ಗೆ ನಾವು ಈಗಾಗಲೇ ಚರ್ಚಿಸಿದ್ದೇವೆ. ಆರೈಕೆದಾರರ ಪರಿಸ್ಥಿತಿ ಅವರ ಜೀವನದ ಇತರ ಅಂಶಗಳ ಮೇಲೂ ಬೀರುತ್ತದೆ.

ಆದರೆ, ಹಲವಾರು ಆರೈಕೆದಾರರ ಬಳಿ ಮಾತನಾಡಿದಾಗ ಆರೈಕೆಯಿಂದ ಎದುರಾಗುವ ಹೆಚ್ಚುವರಿ ಆರ್ಥಿಕ ಸಮಸ್ಯೆಯನ್ನು ನಿಭಾಯಿಸಲು ಬಹಳ ಕಷ್ಟ ಎಂದು ಹೇಳಿದ್ದಾರೆ. ಕಡಿಮೆ ಆದಾಯವಿರುವ ಕುಟುಂಬಗಳಲ್ಲಂತೂ ಸಮಸ್ಯೆ ತುಂಬಾ ಹೆಚ್ಚಾಗಿರುತ್ತದೆ.

2015ರಲ್ಲಿ ಕೇರೆರ್ಸ್ ವರ್ಲ್ಡ್ ವೈಡ್ನವರು ನಡೆಸಿದ ಸಮೀಕ್ಷೆಯಲ್ಲಿ ಭಾರತದ ಆಯ್ದ ಸ್ಥಳಗಳಲ್ಲಿ ಶೇಕಡ 93ರಷ್ಟು ಕುಟುಂಬಗಳ ಆರೈಕೆದಾರರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆಂದು ತಿಳಿದು ಬಂದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ನಿಜಕ್ಕೂ ಬಹಳ ಆಘಾತಕಾರಿ ವಿಷಯ.

ಹಾಗಾದರೆ ಈ ಸವಾಲುಗಳನ್ನು ಹೇಗೆ ಪರಿಹರಿಸುವುದು?

ಹಣದ ಕೊರತೆಯಿಂದ ಆರೈಕೆಯ ಕೆಲಸದಲ್ಲಿ ಇನ್ನೂ ಹೆಚ್ಚು ಒತ್ತಡ ಮತ್ತು ಆತಂಕ ಉಂಟಾಗುತ್ತಿದೆ.

ಹಲವಾರು ಸಂದರ್ಭಗಳಲ್ಲಿ, ಖಾಯಿಲೆಗೆ ಒಳಗಾದ ವ್ಯಕ್ತಿಯು ತಮ್ಮ ಉದ್ಯೋಗವನ್ನು ಬಿಡಬೇಕಾಗುತ್ತದೆ ಮತ್ತು ಈ ಆದಾಯ ನಷ್ಟವು ಕುಟುಂಬದಲ್ಲಿ ತೀವ್ರ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರೊಂದಿಗೆ, ಬಹಳ ಸಲ ಆರೈಕೆದಾರರು (ಸಾಮಾನ್ಯವಾಗಿ ಹೆಂಡತಿ ಅಥವಾ ಮನೆಯ ಮಹಿಳಾ ಸದಸ್ಯೆ) ಕೂಡ ತಮ್ಮ ಪ್ರೀತಿ ಪಾತ್ರರ ಆರೈಕೆಗಾಗಿ ತಾವು ಮಾಡುತ್ತಿರುವ ಉದ್ಯೋಗವನ್ನು ಬಿಡಬೇಕಾಗುತ್ತದೆ. ಈ ಎರಡು ಆದಾಯಗಳ ನಷ್ಟದಿಂದ ಕುಟುಂಬಕ್ಕೆ ದೊಡ್ಡ ಹೊಡೆತವುಂಟಾಗುತ್ತದೆ. ಜೊತೆಗೆ ಅನಿವಾರ್ಯ ವೈದ್ಯಕೀಯ ಖರ್ಚಿನ ಹೊರೆಯು ಸಮಸ್ಯೆಯನ್ನು ಇನ್ನೂ ಬಿಗಡಾಯಿಸುತ್ತದೆ.

ಈಗಾಗಲೇ ದಿನದ ಖರ್ಚನ್ನು ನಿಭಾಯಿಸಲು ಕಷ್ಟಪಡುವ ಕುಟುಂಬಗಳಂತೂ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. 

ಇಂತಹ ವ್ಯಕ್ತಿಗಳ ಬೆಂಬಲಕ್ಕಾಗಿ ನಮ್ಮ ದೇಶದಲ್ಲಿ ಹಲವಾರು ಸರ್ಕಾರಿ ಯೋಜನೆಗಳಿವೆ. ಇವುಗಳಲ್ಲಿ ರಾಜ್ಯ ಅಶಕ್ತರ ಪಿಂಚಣಿ ಯೋಜನೆ (disability pension) ಮತ್ತು ರಾಷ್ಟ್ರೀಯ ದತ್ತಿ ಯೋಜನೆಗಳು ತೀವ್ರ ಅಸ್ವಸ್ಥ ಜನರಿಗೆ ವೈದ್ಯಕೀಯ ಖರ್ಚು ಹಾಗೂ ಚಿಕಿತ್ಸೆಗೆ ನೆರವು ನೀಡುತ್ತದೆ. ಆದರೆ, ಕುಟುಂಬದಲ್ಲಿ ಉಂಟಾಗುವ ವ್ಯಾಪಕ ಕಷ್ಟಗಳನ್ನು ಇನ್ನೂ ಗುರುತಿಸಿಲ್ಲ ಮತ್ತು ಆರೈಕೆದಾರರ ಸಂಬಂಧಿಗಳು ಯಾವ ಆರ್ಥಿಕ ಸಹಾಯ ನೀಡುವುದಿಲ್ಲ.

ಆರೈಕೆದಾರರಿಗೆ ಜವಾಬ್ದಾರಿಯ ಜೊತೆಗೆ ನಿರಂತರ ಆದಾಯ ತರುವ ಅವಕಾಶಗಳು ಬೇಕು ಎಂಬ ಅಂಶವನ್ನು ಕೇರರ್ಸ್ ವರ್ಲ್ಡ್ ವೈಡ್ ಗುರುತಿಸಿದೆ. ಭಾರತಾದ್ಯಂತ ಎನ್ ಜಿ ಓ ಸಹಭಾಗಿತ್ವದಲ್ಲಿ ಕೇರರ್ಸ್ ವರ್ಲ್ಡ್ ವೈಡ್ ನ ಪ್ರಮುಖ ಕಾರ್ಯಗಳಲ್ಲಿ ಒಂದು.

ಆರೈಕೆದಾರರನ್ನು ಗಮನದಲ್ಲಿಟ್ಟುಕೊಂಡು ಅವರ ವೈಯಕ್ತಿಕ ಆಸಕ್ತಿ, ಕೌಶಲ್ಯ, ಕುಟುಂಬದ ಅಗತ್ಯ ಮತ್ತು ಆರೈಕೆಯ ಜವಾಬ್ದಾರಿಗಳ ಜೊತೆಗೆ ಸ್ಥಳೀಯ ಮಾರುಕಟ್ಟೆ ಅಗತ್ಯಗಳು ಮತ್ತು ಅವಕಾಶಗಳನ್ನು ಜಾಗರೂಕತೆಯಿಂದ ಗಣನೆಗೆ ತೆಗೆದುಕೊಳ್ಳುತ್ತೇವೆ. ಈ ಮೂಲಕ ಆರೈಕೆದಾರರು ಮತ್ತು ಅವರ ಕುಟುಂಬಕ್ಕೆ ಸೂಕ್ತ ಹಾಗೂ ನಿರಂತರವಾದ ಜೀವನೋಪಾಯ ಮಾರ್ಗಗಳನ್ನು ಗುರುತಿಸುತ್ತೇವೆ.

ಆರೈಕೆದಾರರು ತಮ್ಮ ಹೊಸ ಜೀವನೋಪಾಯ ಮಾರ್ಗವನ್ನು ಕಂಡುಕೊಳ್ಳಲು ಸ್ಥಳೀಯ ಸರ್ಕಾರಿ ಕಾರ್ಯ ಯೋಜನೆಗಳು, ತರಬೇತಿ ಅಥವಾ ಸಾಲ ಸೌಲಭ್ಯಗಳ ಉಪಯೋಗ ಪಡೆಯಬಹುದು. ಜೊತೆಗೆ ಆರೈಕೆದಾರರ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಸ್ಥಳೀಯ ಎನ್. ಜಿ .ಒ ಗಳು ಒದಗಿಸುವ ಜೀವನೋಪಾಯ ಕೌಶಲ್ಯಗಳನ್ನು ಕಲಿತು ಕೆಲಸ ಮಾಡಬಹುದು.

ಆರೈಕೆದಾರರು ಕೆಲಸ ಮಾಡುವುದರ ಜೊತೆಗೆ ಅಸ್ವಸ್ಥ ವ್ಯಕ್ತಿಯ ಆರೈಕೆ ಮಾಡಲು ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳುವುದು ಬಹು ಮುಖ್ಯ. ಉದಾಹರಣೆಗೆ, ಹತ್ತಿರದ ಕುಟುಂಬ ಸದಸ್ಯರು ಅಥವಾ ನೆರೆಮನೆಯವರ ಸಹಾಯ ಪಡೆಯುವುದು ಅಥವಾ ಆಯ್ದ ಪಾಲುದಾರರ ಸಹಯೋಗದಲ್ಲಿ ಕೆರಿರ್ಸ್ ವರ್ಲ್ಡ್ ವೈಡ್ ನಡೆಸುತ್ತಿರುವ ಸಮುದಾಯ ಕೇಂದ್ರಗಳಲ್ಲಿ ಆರೈಕೆ ಒದಗಿಸುವುದು ಇತ್ಯಾದಿ

ಕಳೆದ ಒಂದು ವರ್ಷದಲ್ಲಿ ಆರೈಕೆದಾರರ ಹಣಕಾಸು ಸಮಸ್ಯೆಯನ್ನು ಪರಿಹರಿಸುವ ಸಕ್ರಿಯ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಸುಮಾರು 900 ಆರೈಕೆದಾರರು ಪುನಃ ಆದಾಯದ ಕೆಲಸಗಳನ್ನು ಆರಂಭಿಸಲು ಮತ್ತು ಅವರ ಕುಟುಂಬಗಳು ಬಡತನದ ರೇಖೆಯಿಂದ ಮೇಲೆ ಬರುವಂತೆ ಮಾಡಲಾಗಿದೆ. ಈ ಆರ್ಥಿಕ ವೃದ್ಧಿಯ ಜೊತೆಗೆ ಆರೈಕೆದಾರರಲ್ಲಿ ಆತ್ಮ ವಿಶ್ವಾಸ ಮರು ಹುಟ್ಟಿದೆ ಮತ್ತು ಸಾಮಾಜಿಕ ಸೇರ್ಪಡೆಯ ಭಾವನೆ ಉಂಟಾಗಿದೆ.

ಈ ಪ್ರಯತ್ನವು ಬದುಕನ್ನೇ ಹೇಗೆ ಬದಲಿಸಬಹುದೆಂಬುದಕ್ಕೆ ನಿರ್ಮಲ ಮತ್ತು ಅವಳ ಕುಟುಂಬದ ಉದಾಹರಣೆಯನ್ನು ಗಮನಿಸಬಹುದು. ವಿಧವೆಯಾದ ನಿರ್ಮಲ, ತನ್ನ ನಾಲ್ಕು ಮಕ್ಕಳ ಜವಾಬ್ದಾರಿ ಹೊತ್ತಳು. ಅವಳ ದೊಡ್ಡ ಮಗಳಾದ ವಿದ್ಯಳಿಗೆ ಸೆರೆಬ್ರಲ್ ಪಾಲ್ಸಿ ಇದೆ. ಸಹಾಯಕ್ಕೆ ಯಾರೂ ಇಲ್ಲದ ಕಾರಣ ನಿರ್ಮಲಳಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ಮನೆಯಲ್ಲಿ ತುಂಬಾ ಕಷ್ಟವಿತ್ತು. ಆಗಲೇ ಅವಳು ಆಂಧ್ರಪ್ರದೇಶದ ನಮ್ಮ ಪಾಲುದಾರ ಸಂಸ್ಥೆಯನ್ನು ಭೇಟಿ ಮಾಡಿದಳು ಮತ್ತು ಕೇರ್ಸ್ ವರ್ಲ್ಡ್ ವೈಡ್ ನ ಆರೈಕೆದಾರರ ಕಾರ್ಯಕ್ರಮದಲ್ಲಿ ಭಾಗಿಯಾದಳು. ಅವಳಿಗೆ 10 ಸಾವಿರ ರೂಪಾಯಿ ಸಾಲ ದೊರಕಿತು.

ಅವಳು ಸ್ಥಳೀಯ ಆರೈಕೆದಾರರ ಗುಂಪನ್ನು ಸೇರಿದಾಗಿನಿಂದ ತನ್ನ ಕುಟುಂಬದ ಭವಿಷ್ಯದ ಸುರಕ್ಷತೆಗಾಗಿ ಗುಂಪಿನ ಉಳಿತಾಯ ಯೋಜನೆಗಳಲ್ಲಿ ಭಾಗಿಯಾಗಿದ್ದಾಳೆ. ವಿದ್ಯಳಿಗೆ ಚಿಕಿತ್ಸೆ ಆರಂಭವಾಯಿತು ಮತ್ತು ಅವಳಿಗೆ ಸ್ಥಳೀಯ ಶಾಲೆಗೆ ಹೋಗಲು ಬೇಕಾದ ಬೆಂಬಲ ಸಿಕ್ಕಿತು. ಈಗ ಅವಳು ಕಲಿಯುತ್ತಿದ್ದಾಳೆ ಮತ್ತು ಸ್ವತಂತ್ರಳಾಗುತ್ತಿದ್ದಾಳೆ. ನಿರ್ಮಲಳಿಗೆ ಕೆಲಸ ಮಾಡುವುದರ ಜೊತೆಗೆ ತನ್ನ ಕುಟುಂಬವನ್ನು ನೋಡಿಕೊಳ್ಳಲು ಬೇಕಾದ ಹಣ ಸಂಪಾದಿಸಲು ಸಾಕಷ್ಟು ಸಮಯ ಸಿಗುತ್ತಿದೆ.

ಆರೈಕೆದಾರರನ್ನು ಕೇಂದ್ರವಾಗಿರಿಸಿಕೊಂಡು ನೀಡುವ ಈ ರೀತಿಯ ಪ್ರಾಯೋಗಿಕ ಬೆಂಬಲವು ನಿರ್ಮಲ ಮತ್ತು ಅವಳಂತಹ ಹಲವಾರು ಆರೈಕೆದಾರರಿಗೆ ನಿರಂತರ ಜೀವನೋಪಾಯ ಒದಗಿಸಲು ಸಾಧ್ಯ. ಈ ಮೂಲಕ ಅವರು ಎದುರಿಸುವ ಅನಾನುಕೂಲ ಪರಿಸ್ಥಿತಿಯಿಂದ ಹೊರಬಂದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ.

* ಗೌಪ್ಯತೆಯ ಉದ್ದೇಶಕ್ಕಾಗಿ ಹೆಸರುಗಳನ್ನು ಬದಲಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org