ಅನುಭೂತಿಯಿಂದ ನಿಮ್ಮ ಆಪ್ತರನ್ನು ಅರಿಯಲು ಸಾಧ್ಯ

ನಿಮ್ಮ ಆಪ್ತರ ಅನಾರೋಗ್ಯದ ಅನುಭವಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನೀವು ಅವರಿಗೆ ಸಹಾಯ ಮಾಡಬಹುದು

ಮಾನಸಿಕ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ನೀವು ಆರೈಕೆ ಮಾಡುತ್ತಿದ್ದಲ್ಲಿ ಅದು ನಿಮ್ಮ ಜೀವನದ ಮೇಲೂ ಹಲವಾರು ರೀತಿಯಲ್ಲಿ ಪ್ರಭಾವ ಬೀರಬಹುದು. ಆರಂಭದಲ್ಲಿ ನೀವು ಅವರ ಸಮಸ್ಯೆಯನ್ನು ಒಪ್ಪಿಕೊಂಡು, ಅನೀರೀಕ್ಷಿತವಾಗಿ ಬಂದ ಈ ಜವಾಬ್ದಾರಿಯನ್ನು ಸ್ವೀಕರಿಸಿ, ನಿಮ್ಮ ಪ್ರೀತಿಪಾತ್ರರ ಆರೈಕೆ ಮಾಡಬಹುದು. ನಿಮ್ಮ ಕೆಲಸ ಮತ್ತು ಆದ್ಯತೆಗಳನ್ನು ಅವರ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿಕೊಂಡಿರಲೂಬಹುದು. 

ಆದರೆ ದಿನ ಕಳೆದಂತೆ, ನಿಮಗೆ ಹೆಚ್ಚಿನ ಸವಾಲುಗಳು ಎದುರಾಗುತ್ತದೆ. ಮನೆಯ ಸದಸ್ಯರ ಅನಾರೋಗ್ಯದಿಂದ ಮನೆಗೆಲಸವು ಹೆಚ್ಚುತ್ತದೆ. ಕೆಲವೊಮ್ಮೆ ದಿನವಿಡೀ ಅವರಿಗೆ ಆರೈಕೆ ಮಾಡಬೇಕಾದ ಮತ್ತು ಅವರ ಆರೋಗ್ಯದ ಮೇಲ್ವಿಚಾರಣೆ ಮಾಡಬೇಕಾದ ಅವಶ್ಯಕತೆ ಬರಬಹುದು. ಬದಲಾದ ಜೀವನ ಶೈಲಿ ಮತ್ತು ನಿಮ್ಮ ಆಪ್ತರ ಅನಾರೋಗ್ಯದಿಂದಾಗಿ ನಿಮ್ಮ ಆರ್ಥಿಕ ಯೋಜನೆಗಳನ್ನು ಬದಲಾಯಿಸಬೇಕಾಗಬಹುದು. ಇದರಿಂದಾಗಿ ಒಬ್ಬ ವ್ಯಕ್ತಿಯ ಅನಾರೋಗ್ಯ ಮನೆಯವರೆಲ್ಲರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಇಂತಹ ಸಂದರ್ಭವನ್ನು ನಿಭಾಯಿಸುವುದು: ಈ ಮುಂಚೆ ಮನೆ, ಉದ್ಯೋಗವನ್ನು,  ಸಮರ್ಥವಾಗಿ ನಿಭಾಯಿಸುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಅವನ್ನೆಲ್ಲಾ ನಿಭಾಯಿಸಲು ಅಸಮರ್ಥರಾದಾಗ ಮನೆಯವರಿಗೆ ಈ ಸತ್ಯಾಂಶವನ್ನು ಒಮ್ಮೆಲೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳಲ್ಲಿ – ಸ್ನಾನ, ಊಟ, ನಿದ್ರೆ ಮತ್ತು ಸ್ವಂತ ಸ್ವಚ್ಛತೆಯ ನಿರ್ವಹಣೆ ಇವುಗಳ ವಿಚಾರದಲ್ಲಿ ನಿರಾಸಕ್ತಿ ತೋರಬಹುದು.

ಈ ಮೊದಲು ಮನೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಅಥವಾ ಆರ್ಥಿಕವಾಗಿ ಸಂಪಾದಿಸುತ್ತಿದ್ದ ವ್ಯಕ್ತಿ ಮಾನಸಿಕ ಅನಾರೋಗ್ಯ ಉಂಟಾದಾಗ ಅವನ್ನು ಮುಂಚಿನಂತೆ ನಿಭಾಯಿಸಲು ಅಸಮರ್ಥನಾಗಬಹುದು. ಪದೇ ಪದೇ ಅವರ ಮೂಡಿನಲ್ಲಿ ಏರುಪೇರು ಉಂಟಾಗಬಹುದು ಅಥವಾ ಪೂರ್ವಾಪರ ಯೋಚಿಸದೇ ನಡೆದುಕೊಳ್ಳುವ ಪ್ರವೃತ್ತಿ ಕಾಣಿಸಿಕೊಳ್ಳಬಹುದು. ಆರ್ಥಿಕ ಸಂಪಾದನೆಯಲ್ಲಿ ಅಥವಾ ಮನೆಯ ಕೆಲಸಗಳಲ್ಲಿ ಸಹಾಯ ದೊರೆಯದಿದ್ದಾಗ ಆರೈಕೆದಾರರು ಹತಾಶರಾಗಬಹುದು ಅಥವಾ ವ್ಯಕ್ತಿಯು ಸಾಮಾಜಿಕ ಪರಿಸರದಿಂದ ವಿಮುಖನಾಗಬಹುದು. ಎಲ್ಲರೊಂದಿಗೆ ಬೆರೆಯುವುದನ್ನು ನಿಲ್ಲಿಸಬಹುದು, ಅಥವಾ ಸಾಮಾಜಿಕವಾಗಿ ಸಮಂಜಸವಲ್ಲದ ನಡವಳಿಕೆಯಲ್ಲಿ (ದುರುಗುಟ್ಟಿ ನೋಡುವುದು, ತಮ್ಮೊಟ್ಟಿಗೆ ಮಾತನಾಡಿಕೊಳ್ಳುವುದು ಅಥವಾ ಇನ್ನೊಬ್ಬರಿಗೆ ಪ್ರತಿಕ್ರಿಯಿಸದಿರುವುದು) ತೊಡಗಿಸಿಕೊಳ್ಳಬಹುದು.

ನಡುವಳಿಕೆಯ ಬದಲಾವಣೆಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು: ನಿಮ್ಮ ಆಪ್ತರು ಪದೇ ಪದೇ ಸಿಟ್ಟಾಗುವುದು, ಕಿರಿಕಿರಿಗೊಳ್ಳುವುದು ಮತ್ತು ಅಸಹಕಾರದ ನಡವಳಿಕೆ ತೋರಿದಾಗ ಹತಾಶೆಯೆನಿಸಬಹುದು. ನೀವು ಅವರ ನಡವಳಿಕೆಗೆ ಪ್ರತಿಕ್ರಿಯಿಸುವ ಮುನ್ನ ಒಮ್ಮೆ ಆ ವ್ಯಕ್ತಿಯು ಏಕೆ ಆ ರೀತಿ ವರ್ತಿಸುತ್ತಿದ್ದಾರೆ? ಈ ಮೂಲಕ ಅವರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ? ಎಂದು ಯೋಚಿಸಿ.

ವ್ಯಕ್ತಿಯ ಯಾವುದೋ ಅವಶ್ಯಕತೆಯು ಈಡೇರದಿದ್ದಾಗ ಅವರು ಈ ರೀತಿಯ ನಡವಳಿಕೆಯನ್ನು ತೋರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಒಂದೊಮ್ಮೆ ಆರೈಕೆದಾರರು ಅಂತಹ ನಡವಳಿಕೆಗಳಿಗೆ ಮೂಲ ಕಾರಣವಾದ ಅಂಶಗಳು ಯಾವುದೆಂದು ಕಂಡುಹಿಡಿದಲ್ಲಿ ಅವರ ಆಪ್ತರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಸಮಸ್ಯೆಗೆ ಪರಿಹಾರ ಹುಡುಕಬಹುದು. ಉದಾಹರಣೆಗೆ ಹಸಿವೆಯಾದ ವ್ಯಕ್ತಿಗೆ ಕಿರಿಕಿರಿಯಾದಾಗ ಅವರು ತಮಗೆ ಹಸಿವೆಯಾಗಿರುವುದನ್ನು ಸ್ಪಷ್ಟವಾಗಿ ತಿಳಿಸದೇ ಸಿಟ್ಟಾಗಬಹುದು.

ವ್ಯಕ್ತಿಯ ಅವಶ್ಯಕತೆಯು ಪೂರೈಸದಿದ್ದಾಗ ಆತನಲ್ಲಿ ಹತಾಶೆಯನ್ನುಂಟು ಮಾಡುವ ಹಲವು ಸಂದರ್ಭಗಳಿರುತ್ತವೆ. ಹಾಗೆಯೇ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿಯೂ ಸಹ ಕೆಲವು ಕಾರಣಗಳಿಂದ ಕಷ್ಟ ಸಾಧ್ಯವಾದ ನಡವಳಿಕೆಯು ಕಂಡುಬರುತ್ತದೆ.

  • ಅನಾರೋಗ್ಯದಿಂದಾಗಿ ಅಥವಾ ಔಷಧಗಳ ಪರಿಣಾಮದಿಂದಾಗಿ ಕೆಲವು ತರಹದ ನಡುವಳಿಕೆಗಳು ಕಂಡುಬರಬಹುದು. ಅದನ್ನು ಉಳಿದವರು ಅಸಮಂಜಸವೆಂದು ಭಾವಿಸಬಹುದು.
  • ಆರೈಕೆದಾರರು ವ್ಯಕ್ತಪಡಿಸಿದ/ವ್ಯಕ್ತಪಡಿಸದ ನಿರೀಕ್ಷೆಗಳು ಮತ್ತು ಉಳಿದವರೊಡನೆ ಮಾಡಲಾಗುವ ಹೋಲಿಕೆಗಳು: (ಉದಾ: “ನೀನು ಮಕ್ಕಳಂತೆ ವರ್ತಿಸುತ್ತಿದ್ದೀಯಾ” ಅಥವಾ “ನೋಡು ಅವನಿಗೆ ಕೋಪ ಬರುವುದಿಲ್ಲ”) ಆರೈಕೆದಾರರು ಅನಾರೋಗ್ಯ ಪೀಡಿತ ವ್ಯಕ್ತಿಯು ಇತರರಂತೆ ನಡೆದುಕೊಳ್ಳಬೇಕೆಂದು ನಿರೀಕ್ಷಿಸಬಹುದು. ಇದರಿಂದ ವ್ಯಕ್ತಿಗೆ ಹತಾಶೆಯುಂಟಾಗಿ,  ಅಸಮರ್ಥ ಭಾವನೆಯುಂಟಾಗಬಹುದು. 
  • ಅತಿಯಾದ ಆರೈಕೆ: ಆರೈಕೆದಾರರು ವ್ಯಕ್ತಿಯ ಕುರಿತು ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ವಹಿಸಿದರೆ  ಅವರನ್ನು ದೈನಂದಿನ ಕೆಲಸ, ಮನೆಕೆಲಸ ಅಥವಾ ಇತರ ಚಟುವಟಿಕೆಯಿಂದ ದೂರವಿರಿಸಬಹುದು.
  • ಉತ್ತೇಜನದ ಕೊರತೆ ಅಥವಾ ಅತಿಯಾದ ಉತ್ತೇಜನ: ಕೆಲವೊಮ್ಮೆ ಅನಾರೋಗ್ಯ ಪೀಡಿತ ವ್ಯಕ್ತಿಗೆ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಯಾರೂ ಇಲ್ಲದೇ ಇರಬಹುದು.

ಸವಾಲಿನ ಸಂದರ್ಭಗಳನ್ನು ನಿಭಾಯಿಸುವುದು: ಉಳಿದ ಅನಾರೋಗ್ಯ ಸಮಸ್ಯೆಗಳಂತೆ ಮಾನಸಿಕ ಸಮಸ್ಯೆಗಳೂ ಸಹ ಚಿಕಿತ್ಸೆಯಿಂದ ವಾಸಿಯಾಗುತ್ತವೆ. ಅನಾರೋಗ್ಯದಿಂದ ಪೀಡಿತ ವ್ಯಕ್ತಿ ಬೇಕೆಂದೇ ಅಸಮಂಜಸವಾಗಿ ವರ್ತಿಸುವುದಿಲ್ಲ. ಈ ರೀತಿಯ ನಡವಳಿಕೆ ಖಾಯಿಲೆಯ ಪರಿಣಾಮ ಎಂದು ಆರೈಕೆದಾರರಾದ ನೀವು ಅರಿಯಬೇಕು.

ಇದೇ ಸಮಯದಲ್ಲಿ ವ್ಯಕ್ತಿಯ ಎಲ್ಲಾ ನಡವಳಿಕೆಗೂ ಅವರ ಅನಾರೋಗ್ಯವನ್ನು ಕಾರಣವನ್ನಾಗಿಸುವುದು ಕೂಡಾ ಸಮಂಜಸವಲ್ಲ. ಕೆಲವೊಮ್ಮೆ ಅನಾರೋಗ್ಯ ಪೀಡಿತ ವ್ಯಕ್ತಿಯು ಇತರರಂತೆ ತನ್ನ ಸಂತೋಷ, ಹತಾಶೆ, ಸಿಟ್ಟು ಅಥವಾ ಕಿರಿಕಿರಿಯನ್ನು ವ್ಯಕ್ತಪಡಿಸುತ್ತಿರಬಹುದು. ಇದಕ್ಕೂ ಆತನ ಅನಾರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲದಿರಬಹುದು.

ಭಾವನೆಗಳನ್ನು ಸೂಕ್ತವಾಗಿ ವ್ಯಕ್ತಪಡಿಸುವದು ರೋಗಿ ಚೇತರಿಸಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ವ್ಯಕ್ತಿ ಮನಸ್ಸನ್ನು ನೋಯಿಸುವ  ಭಾವನೆಗಳನ್ನು ಗ್ರಹಿಸಬಲ್ಲರು ಮತ್ತು ಇದು ಅವರ ಚೇತರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಖಂಡಿಸುವ  ಹೇಳಿಕೆಗಳನ್ನು ಕಡಿಮೆ ಮಾಡಿ. ಬದಲಿಗೆ ಪ್ರೀತಿಯಿಂದ ಮತ್ತು ಅನುಕಂಪದಿಂದ ವ್ಯವಹರಿಸಿ.

ಕೆಲವೊಮ್ಮೆ ಅವರಿಗೆ ಆರೈಕೆದಾರರ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗದಿರಬಹುದು. ಅಥವಾ ಆರೈಕೆದಾರರು ಅತಿಯಾಗಿ ರಕ್ಷಣಾತ್ಮಕವಾಗಿ ವರ್ತಿಸಬಹುದು ಮತ್ತು ಅವರಿಗೆ ಇಡೀ ದಿನ ಹಾಸಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಬಹುದು. ಮನೆಯ ಕೆಲಸ ಮಾಡಲು ಅವಕಾಶ ನೀಡದಿರಬಹುದು. ಮಾನಸಿಕ ರೋಗಿಗಳ ಪುನಃಶ್ಚೇತನವು ದೈಹಿಕ ಖಾಯಿಲೆಯವರ ಚೇತರಿಕೆಗಿಂತ ಭಿನ್ನವಾಗಿರುತ್ತದೆ.

ಕೆಲವೊಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆ ತೆಗೆದುಕೊಳ್ಳುತ್ತಲೇ ಮನೆಗೆಲಸ ಅಥವಾ ವೃತ್ತಿಯಲ್ಲಿ ತೊಡಗಿಕೊಳ್ಳಬಹುದು. ನಿಮ್ಮ ಆಪ್ತರು ಕೆಲವು ಕೆಲಸಗಳನ್ನು ನಿಭಾಯಿಸಲು ಅಸಮರ್ಥರೆಂದು ನಿಮಗೆ ಅನಿಸಿದರೆ ಅವರ ಮನೋವೈದ್ಯರು ಅಥವಾ ಆಪ್ತ ಸಮಾಲೋಚಕರ ಬಳಿ ಚರ್ಚಿಸಿ.

ನಿಮ್ಮ ಪ್ರೀತಿಪಾತ್ರರು ಬೇಜಾರಾಗಿರುವಾಗ ಅವರಿಗೆ ಸಹಾನುಭೂತಿಯನ್ನು ತೋರಿಸಿ. ಅವರೊಡನೆ ಎಂದಿನಂತೆ ವರ್ತಿಸಿ. ಮಾನಸಿಕ ಆರೋಗ್ಯ ಪೀಡಿತರಿಗೂ ಅವರದೇ ಭಾವನೆಗಳಿರುತ್ತವೆ. ಅವರ ಭಾವನೆಗಳನ್ನು ಕೇಳಿಸಿಕೊಳ್ಳಿ. ಕೆಲವೊಮ್ಮೆ ಅವರು ವಿಪರೀತವಾಗಿ ಭಾವಪರವಶರಾಗಿರಬಹುದು ಮತ್ತು ಅದನ್ನು ಹೇಳಿಕೊಳ್ಳಲು ಯಾರೂ ಇಲ್ಲದಿರಬಹುದು. ಅವರಿಗೆ ಏನನ್ನಿಸುತ್ತದೆ ಎಂದು ಕೇಳಿ ಮತ್ತು ಅವರಿಗೆ ಇಷ್ಟವಾದ ಕೆಲಸವನ್ನು ಮಾಡಲು ಬಿಡಿ. ಮನೆಗೆಲಸದಲ್ಲಿ ಸೇರಿಸಿಕೊಳ್ಳಿ. ಇದರಿಂದ ಅವರಿಗೆ ತಾವು ಮನೆಯ ಭಾಗವೆಂದೂ ಮತ್ತು ತಮ್ಮನ್ನು ಎಲ್ಲರೂ ಸ್ವೀಕರಿಸುತ್ತಾರೆಂದೂ ಸಮಾಧಾನ ದೊರೆಯುತ್ತದೆ.

ಎ .ಬಿ .ಸಿ ವಿಧಾನ: ತಜ್ಞರ ಪ್ರಕಾರ ಎ .ಬಿ .ಸಿ ವಿಧಾನದಲ್ಲಿ ಅನಾರೋಗ್ಯಪೀಡಿತ ವ್ಯಕ್ತಿಯ ನಡವಳಿಕೆಯನ್ನು ದಾಖಲಿಸುವುದರಿಂದ ಆರೈಕೆದಾರರು ಹೆಚ್ಚಿನ ಬೆಂಬಲವನ್ನು ನಿರೀಕ್ಷಿಸಬಹುದು. 

  • ಆಂಟಸಿಡೆಂಟ್: ನಿಮ್ಮ ಪ್ರೀತಿಪಾತ್ರರು ಆ ರೀತಿಯ ನಡವಳಿಕೆ ತೋರುವ ಮುನ್ನ ಏನಾಗಿತ್ತು?
  • ಯಾವ ರೀತಿಯ ವರ್ತನೆಯನ್ನು  (ಕೋಪ, ವಿಮುಖತೆ, ಇತರ) ತೋರುತ್ತಿದ್ದರು? ಇದು ಎಷ್ಟು ದಿನಗಳವರೆಗೆ ಇತ್ತು?
  • ಇದರ ಪರಿಣಾಮವೇನಾಗಿತ್ತು? ಆರೈಕೆದಾರರು ಮತ್ತು ಮನೆಯವರು ಅವರ ವರ್ತನೆಗೆ ಯಾವ ರೀತಿಯ ಪ್ರತಿಕ್ರಿಯೆ ತೋರಿದ್ದರು?

ಎಂಬ ಮಾಹಿತಿಯನ್ನು ಎ.ಬಿ.ಸಿ ವಿಧಾನದಲ್ಲಿ ಪರಿಶೀಲಿಸುತ್ತಾರೆ.

ಇವಿಷ್ಟೆ ಅಲ್ಲದೇ ನೀವು ಅವರಲ್ಲಿ ಒಂದು ನಿರ್ದಿಷ್ಟ ನಡವಳಿಕೆಯ ಲಕ್ಷಣಗಳನ್ನು ಕೂಡಾ ಗುರುತಿಸಬಹುದು. ವ್ಯಕ್ತಿಯು ಕೋಪಗೊಂಡಾಗ ಬಿಗಿಯಾಗಿ ಮುಷ್ಠಿ ಹಿಡಿಯುವುದು, ಧ್ವನಿ ಏರಿಸಿ ಮಾತಾಡುವುದು, ಅಥವಾ ಚಂಚಲವಾಗಿ ವರ್ತಿಸಬಹುದು. ಈ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ . ಈ ವಿಷಯ ತಿಳಿಯುವುದರಿಂದ  ಅವರ ನಡವಳಿಕೆಯನ್ನು ನಿಭಾಯಿಸಲು ನಿಮಗೆ ಸುಲಭವಾಗಬಹುದು.

ಈ ಮಾಹಿತಿಯನ್ನು ಮನೋವೈದ್ಯರು ಅಥವಾ ಆಪ್ತಸಮಾಲೋಚಕರಿಗೆ ತಿಳಿಸಿರಿ.  ವ್ಯಕ್ತಿಯ ನಿರ್ದಿಷ್ಟ ನಡವಳಿಕೆಗೆ ಸುತ್ತಲಿನ ಪರಿಸರದ ಯಾವ ಬದಲಾವಣೆಯು ಪ್ರೇರಣೆ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ, ಮತ್ತು ಅಂತಹ ನಡವಳಿಕೆಯನ್ನು ನಿಭಾಯಿಸಲು ಸಲಹೆ ನೀಡುತ್ತಾರೆ .

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org