ಮಾನಸಿಕ ಕಾಯಿಲೆಯ ವಿಷಯವನ್ನು ಪ್ರಸ್ತಾಪಿಸುವುದು

ನಿಮ್ಮ ಪ್ರೀತಿಪಾತ್ರರಿಗೆ ಮಾನಸಿಕ ಕಾಯಿಲೆಯಿದ್ದಾಗ, ಈ ವಿಷಯವನ್ನು ಅವರಿಗೆ ಹೇಗೆ ತಿಳಿಸುವಿರಿ ? ಇಲ್ಲಿವೆ ಕೆಲವು ಸಲಹೆಗಳು

ಮಾನಸಿಕ ಕಾಯಿಲೆಯೆಂಬುದು ತುಂಬಾ ಸೂಕ್ಷ್ಮ ವಿಷಯ, ಅದರಲ್ಲಿಯೂ ಕಾಯಿಲೆಯ ಲಕ್ಷಣಗಳಿರುವ ವ್ಯಕ್ತಿಯೊಡನೆ ಇದರ ಬಗ್ಗೆ ಮಾತನಾಡುವುದೆಂದರೆ ಬಹಳ ಗೊಂದಲ ಉಂಟಾಗುತ್ತದೆ. ವ್ಯಕ್ತಿಯ ಕುಟುಂಬದವರು ಮತ್ತು ಸ್ನೇಹಿತರು ಆತನ ನಡವಳಿಕೆ, ಮನಸ್ಥಿತಿಯಲ್ಲಿ ಆಗುವ ಬದಲಾವಣೆಯನ್ನು ಯಾವಾಗಲೂ ಗಮನಿಸುತ್ತಿರುತ್ತಾರೆ ಮತ್ತು ಈ ವಿಷಯದ ಬಗ್ಗೆ ಚರ್ಚಿಸಲು ಇಕ್ಕಟ್ಟಿನಲ್ಲಿ ಸಿಲುಕುತ್ತಾರೆ.

“ನಾನು ಅವನೊಂದಿಗೆ ಈ ವಿಷಯದ ಬಗ್ಗೆ ಹೇಗೆ ಚರ್ಚೆ ಮಾಡುವುದು ? ಆತನ ಬಗ್ಗೆ ನನಗಿರುವ ಕಾಳಜಿಯನ್ನು ಹೇಗೆ ಅರ್ಥ ಮಾಡಿಸುವುದು ಮತ್ತು ಆತನಿಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ಹೇಗೆ ತಿಳಿಸುವುದು ? ಮಾನಸಿಕ ಕಾಯಿಲೆಯ ಬಗ್ಗೆ ಸಾಮಾಜಿಕ ಕಳಂಕವಿರುವುದರಿಂದ, ಒಂದು ವೇಳೆ ಮನೋವೈದ್ಯರನ್ನು ಅಥವಾ ಆಪ್ತಸಲಹೆಗಾರರನ್ನು ಭೇಟಿ ಮಾಡಲು ಸಲಹೆ ನೀಡಿದರೆ, ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾನೆ?

ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ 

ಅವರ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಿ ಮತ್ತು ಅವರಲ್ಲಿ ಯಾವ ರೀತಿಯ ನಿರ್ಧಿಷ್ಟ ಲಕ್ಷಣಗಳು ಕಂಡುಬರುತ್ತಿವೆ ಎಂಬುದನ್ನು ಗಮನಿಸಿ. ನೀವು ಗಮನಿಸಿದ ವಿಷಯ ಸರಿಯಾಗಿದೆ ಎಂಬುದನ್ನು ನಿರ್ಧರಿಸಲು ಸ್ವಲ್ಪ ತಾಳ್ಮೆಯಿಂದಿರಿ. ಸಾಧ್ಯವಾದರೆ ಬೇರೆಯವರ ಸಹಾಯವನ್ನೂ ಪಡೆಯಿರಿ. ಮಾನಸಿಕ ಕಾಯಿಲೆಯು ದೈಹಿಕ ಕಾಯಿಲೆಗಳಿಗಿಂತ ಭಿನ್ನವಾಗಿರುವುದಿಲ್ಲ. ಅದಕ್ಕೂ ಚಿಕಿತ್ಸೆ ಇದೆ. ಅದು ಯಾರಿಗೆ ಬೇಕಾದರೂ ಬರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ, ನಿಮ್ಮ ಪ್ರೀತಿಪಾತ್ರ ಬಗ್ಗೆ ಸಹಾನುಭೂತಿ ಉಂಟಾಗುತ್ತದೆ.

ಮಾನಸಿಕ ಕಾಯಿಲೆಯ ಬಗ್ಗೆ ಓದಿ ತಿಳುಯುವುದರಿಂದ ನಿಮ್ಮ ಪ್ರೀತಿಪಾತ್ರರು ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಇದೊಂದೇ ಪರಿಹಾರವಲ್ಲ. ಕಾಯಿಲೆಯು ಖಚಿತವಾದ ನಂತರ ಸೂಕ್ತ ಮಾನಸಿಕ ತಜ್ಞರನ್ನು ಭೇಟಿ ಮಾಡಿ ಸಹಾಯ ಪಡೆದುಕೊಳ್ಳಬೇಕು.

ವ್ಯಕ್ತಿಯೊಂದಿಗೆ ಚರ್ಚಿಸಲು ಬೇರೆಯವರ ಸಹಾಯ ಪಡೆಯಿರಿ

ಈ ವಿಷಯವನ್ನು ಪ್ರಸ್ತಾಪಿಸಲು ನಿಮಗೆ ಯಾರಾದರೂ ಸಹಾಯ ಮಾಡಬಹುದೇ? ಅಥವಾ ನಿಮಗಿಂತ ಸೂಕ್ತ ವ್ಯಕ್ತಿ ಇರಬಹುದೇ ಎಂಬುದರ ಬಗ್ಗೆ ಖಚಿತ ಪಡಿಸಿಕೊಳ್ಳಿ. ವ್ಯಕ್ತಿಯ ನಂಬಿಕೆಗೆ ಅರ್ಹರಾದ ಆತ್ಮೀಯ ಸ್ನೇಹಿತರ ಮುಖಾಂತರ ವಿಷಯ ಪ್ರಸ್ತಾಪಿಸಿದರೆ ಸೂಕ್ತವಾಗಿರುತ್ತದೆ. ಇದರಿಂದ ವ್ಯಕ್ತಿಗೆ ಕಾಯಿಲೆಯ ಬಗ್ಗೆ ಭೀತಿಯುಂಟಾಗುವುದನ್ನು ತಡೆಗಟ್ಟಬಹುದು.

ಸಾಮಾನ್ಯ ವಿಷಯಗಳೊಂದಿಗೆ ಚರ್ಚೆ ಪ್ರಾರಂಭವಾಗಲಿ

ಸಾಮಾನ್ಯ ವಿಷಯಗಳ ಮೂಲಕ ಮಾತನ್ನು ಪ್ರಾರಂಭಿಸಿ, ಅವರ ನಡವಳಿಕೆಯಲ್ಲಿನ ವ್ಯತ್ಯಾಸಗಳು ಸ್ವಂತ ಗಮನಕ್ಕೆ ಬರುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಸ್ಕಿಜ಼ೋಫ್ರೇನಿಯದಂತಹ ತೀರ್ವವಾದ ಕಾಯಿಲೆಯುಳ್ಳ ವ್ಯಕ್ತಿಯನ್ನು ಹೊರತು ಪಡಿಸಿ, ಬಹಳಷ್ಟು ಜನರಿಗೆ ತಮ್ಮಲ್ಲಿ ಉಂಟಾಗುತ್ತಿರುವ ವ್ಯತ್ಯಾಸಗಳ ಬಗ್ಗೆ ಗಮನವಿರುತ್ತದೆ.

ವ್ಯಕ್ತಿಯ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಾ ವಿಷಯವನ್ನು ಪ್ರಾರಂಭಿಸಿ. ಇತ್ತೀಚೆಗೆ ಏನಾದರೂ ವ್ಯತ್ಯಾಸ ಕಾಣಿಸಿಕೊಳ್ಳುತ್ತಿದೆಯೇ, ವಿಚಾರಿಸಿ. ತಮ್ಮಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತಿರುವುದನ್ನು ಒಪ್ಪಿಕೊಂಡರೆ,ಯಾವುದೇ ತೀರ್ಮಾನಕರ ಹೇಳಿಕೆಗಳನ್ನು ನೀಡದೇ, ಅವರ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಿ. 

ತಮ್ಮ ಮೊದಲಿನ ನಡವಳಿಕೆಗೂ, ಈಗಿನ ನಡವಳಿಕೆಗೂ ವ್ಯತ್ಯಾಸವಿರುವುದು ಅರಿವಿಗೆ ಬರುತ್ತದೆ ಅಥವಾ ತಮಗೆ ಇತರರಿಗಿಂತ ಭಿನ್ನವಾದ ಅನುಭವವಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಸಾಮಾನ್ಯವಾಗಿ ಆತಂಕದ ಅಸ್ವಸ್ಥತೆ ಅಥವಾ ಖಿನ್ನತೆಯ ಸಮಸ್ಯೆಯಿದ್ದರೆ ತಮ್ಮ ನಡವಳಿಕೆಯ ವ್ಯತ್ಯಾಸದ ಬಗ್ಗೆ ಅರಿವಿರುತ್ತದೆ.

ಸಹಾನುಭೂತಿ ತೋರಿಸಿ

ಸಹಾನುಭೂತಿಯೆಂದರೆ, ಮತ್ತೊಬ್ಬ ವ್ಯಕ್ತಿಯ ಜೀವನವನ್ನು ಸ್ವತಃ ಅನುಭವಿಸದಿದ್ದರೂ, ಆತನ ಅನುಭವಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ. ವ್ಯಕ್ತಿಯು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಸಹಾನುಭೂತಿ ತೋರಿಸಿ. ಅವರ ತೊಂದರೆಗೆ ಚಿಕಿತ್ಸೆ ಇದೆ ಎಂದು ಹೇಳಿ ಭರವಸೆ ನೀಡಿ. ಇದರಿಂದ ಅವರ ಸಮಸ್ಯೆಯ ಬಗ್ಗೆ ನಿಮಗೆ ಅರ್ಥವಾಗಿದೆ ಎಂಬ ಭಾವನೆ ಮೂಡುತ್ತದೆ.

ಅವರ ಅಭಿಪ್ರಾಯವನ್ನು ಗೌರವಿಸಿ

ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಅವರ ಆಯ್ಕೆಗಳೇನು? ಎಂಬುದರ ಬಗ್ಗೆ ವಿಚಾರಿಸಿ. ಏನಾದರೂ ಸಹಾಯದ ಅವಶ್ಯಕತೆಯಿದೆಯೇ ತಿಳಿದುಕೊಳ್ಳಿ. ಒತ್ತಾಯಪೂರ್ವಕವಾಗಿ ಸಹಾಯ ಮಾಡದಿರಿ. ಇದರಿಂದ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದಿರಬಹುದು ಅಥವಾ ನೀಡುವ ಚಿಕಿತ್ಸೆಯ ಪ್ರಭಾವ ಕಡಿಮೆಯಾಗಬಹುದು. ವೃತ್ತಿಪರರು ಹೇಳುವಂತೆ, ವ್ಯಕ್ತಿಯು ತನಗೆ ಸಹಾಯದ ಅವಶ್ಯಕತೆಯಿದೆ ಎಂಬುದನ್ನು ಅರಿತು ಒಪ್ಪಿಗೆ ನೀಡಿದಾಗ ಮಾತ್ರ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ನಿಮ್ಮ ಬೆಂಬಲ ನೀಡಿ

ಅವಶ್ಯಕತೆಯ ಸಂದರ್ಭವನ್ನು ಹೊರತುಪಡಿಸಿ, ಕಾಯಿಲೆಯ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಮತ್ತು ನೀವು ಅವರಿಗೆ ಸದಾ ನೆರವಾಗುವಿರಿ ಎಂಬ ಭರವಸೆ ನೀಡಿ. ಒಳ್ಳೆಯ ಮಾನಸಿಕ ಆರೋಗ್ಯ ತಜ್ಞರನ್ನು ಪತ್ತೆ ಮಾಡಿ ವ್ಯಕ್ತಿಯ ಜೊತೆ ಆಸ್ಪತ್ರೆಗೆ ಹೋಗಿ.

ಮನೋಸ್ಥೈರ್ಯ ಕಡಿಮೆಯಾದರೆ ಆತ್ಮೀಯರ ಸಹಾಯ ಪಡೆಯಿರಿ.

ಇಂತಹ ಸನ್ನಿವೇಶಗಳಲ್ಲಿ ನಿಮಗೆ ಗೊಂದಲ ಉಂಟಾಗಬಹುದು ಅಥವಾ ಧೈರ್ಯ ಕುಸಿಯಬಹುದು. ಈ ರೀತಿಯ ಸಮಸ್ಯೆಗಳು ಎದುರಾದಲ್ಲಿ, ತಕ್ಷಣ ಆಪ್ತಸಲಹೆಗಾರರನ್ನು ಭೇಟಿ ಮಾಡಿ ಅಥವ ಮನೋ ವೈದ್ಯರ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿ ಮಾನಸಿಕ ಕಾಯಿಲೆಯನ್ನು ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತಾರೆ. ನಿಮಗೆ  ವ್ಯಕ್ತಿಯ ಬಗ್ಗೆ ಆತಂಕ, ಬೇಸರವಾಗುವುದು ಸಹಜವಾದ ಪ್ರಕ್ರಿಯೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು  ನಿಮ್ಮ ಪ್ರೀತಿಪಾತ್ರರ ಭಾವನಾತ್ಮಕ ಬೆಂಬಲ ಪಡೆದುಕೊಳ್ಳಿ. 

ಈ ಲೇಖನವನ್ನು, ದೆಹಲಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಪಿ ಹೆಚ್ ಡಿ ಪಡೆದಿರುವ ಮನೋಶಾಸ್ತ್ರಜ್ಞರಾದ ಡಾ. ಗರಿಮಾ ಶ್ರೀವಾಸ್ತವರವರ ಮಾರ್ಗದರ್ಶನದಲ್ಲಿ ರಚಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org