ಆರೈಕೆ ಎಂದರೇನು?

ತಮ್ಮ ಪ್ರೀತಿ ಪಾತ್ರರು ಸಾಮಾನ್ಯ ಬದುಕು ನಡೆಸಲು ಆರೈಕೆದಾರರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ…

ನಾವು ದೈಹಿಕ ಅನಾರೋಗ್ಯದಿಂದಾಗಿ (ತಾತ್ಕಾಲಿಕ ಅಥವಾ ಶಾಶ್ವತ)  ದಿನನಿತ್ಯದ ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ ನಮ್ಮ ಪ್ರೀತಿಪಾತ್ರರ ಸಹಾಯದ ಮೇಲೆ ಅವಲಂಬಿತರಾಗುತ್ತೇವೆ.   ಈ ಪರಿಸ್ಥಿತಿಯಲ್ಲಿ ನಮ್ಮ ಜೀವನವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಡೆಸಲು ಅವರ ಸಹಾಯ ಮತ್ತು ಆರೈಕೆ  ಪ್ರಾಮುಖ್ಯವಾಗಿರುತ್ತದೆ. ನಾವು ಆಸ್ಪತ್ರೆ ಅಥವಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದ ನಂತರವೂ ನಮ್ಮ ಪ್ರೀತಿಪಾತ್ರರ ಸಹಾಯ ಬೇಕಾಗುತ್ತದೆ.

ಅದರಂತೆ ಮಾನಸಿಕ ಅನಾರೋಗ್ಯದಿಂದ ವ್ಯಕ್ತಿಯು ಸ್ವತಂತ್ರ ಬದುಕು ನಡೆಸುವ ಸ್ಥಿತಿಯಲ್ಲಿ ಇರುವುದಿಲ್ಲ. ಖಾಯಿಲೆ ಮತ್ತು ಅದರ ಗಂಭೀರತೆ ಆಧರಿಸಿ ಅವರಿಗೆ ನಿತ್ಯದ ಕೆಲಸಗಳನ್ನು ಪೂರ್ಣಗೊಳಿಸಲು ಇನ್ನೊಂದು ವ್ಯಕ್ತಿಯ ಸಹಾಯ ಬೇಕಾಗಬಹುದು. ಹೆಚ್ಚಿನ ಸಂಧರ್ಭಗಳಲ್ಲಿ ವ್ಯಕ್ತಿಗೆ ತನ್ನ ಕುಟುಂಬದ ಸದಸ್ಯರಿಂದ ಈ ಆರೈಕೆ ಒದಗುತ್ತದೆ ಮತ್ತು ವ್ಯಕ್ತಿಯ ಆರೈಕೆಯಲ್ಲಿ ಕುಟುಂಬದ ಸದಸ್ಯರು ಪ್ರಮುಖ ಪಾತ್ರ ವಹಿಸುತ್ತಾರೆ.  ಅವರು ಪಾವತಿಯಿಲ್ಲದೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಪೂರಕವಾಗಿ ಆರೈಕೆ ನೀಡುತ್ತಾರೆ. 

ಈ ಆರೈಕೆದಾರರು ಕುಟುಂಬದ ಹತ್ತಿರದ ಸದಸ್ಯರು-ಹೆತ್ತವರು, ಸಹೋದರರು, ಜೊತೆಗಾರರು ಅಥವಾ ಸ್ನೇಹಿತರಾಗಿರುತ್ತಾರೆ. ಭಾರತದಲ್ಲಿ ವೃತ್ತಿಪರ ಆರೈಕೆ ಸೇವೆ ಕೂಡ ನಿಧಾನವಾಗಿ ಹೆಚ್ಚುತ್ತಿದೆ. ಆದರೂ ಕುಟುಂಬದವರೇ ಆರೈಕೆ ನೀಡುವಲ್ಲಿ ಪ್ರಾಮುಖ್ಯ ಪಾತ್ರ ವಹಿಸುತ್ತಾರೆ.

ಆರೈಕೆಯ ರೀತಿ ವ್ಯಕ್ತಿಯ ಸ್ಥಿತಿ ಮತ್ತು ಅನಾರೋಗ್ಯದ ತೀವ್ರತೆಯ ಮೇಲೆ ಆಧರಿಸಿರುತ್ತದೆ. ತಮ್ಮ ಪ್ರೀತಿಪಾತ್ರರ ಸಮಸ್ಯೆಗಳನ್ನು ಆಲಿಸುವುದರಿಂದ ಆರಂಭಿಸಿ ಅವರ ದೈಹಿಕ ಮತ್ತು ಭಾವನಾತ್ಮಕ ಅಗತ್ಯತೆಗಳ ಕುರಿತು ಕಾಳಜಿ ವಹಿಸುವುದರವರೆಗೆ ಆರೈಕೆದಾರರು ಹಲವು ಹಂತಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಕುಟುಂಬದ ಸದಸ್ಯರು ಆರೈಕೆಯಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಾರೆ. ಕೆಲವರು ವ್ಯಕ್ತಿಯ ದೈಹಿಕ ಅಗತ್ಯತೆಗಳನ್ನು ನೋಡಿಕೊಳ್ಳಬಹುದು, ಕೆಲವರು ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳಬಹುದು. ಕುಟುಂಬದ ಮತ್ತೊಂದು ಸದಸ್ಯ ಅವರಿಗೆ ಪ್ರಬಲವಾದ ಭಾವನಾತ್ಮಕ ಬೆಂಬಲ ನೀಡುವತ್ತ ಗಮನಹರಿಸಬಹುದು.

ಈ ಕಾರಣದಿಂದ ಆರೈಕೆದಾರ, ಆರೈಕೆಯ ಕೆಲ ಕೌಶಲ್ಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಆರೈಕೆದಾರರ ಸೇವೆ ಕೇವಲ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಸಮಸ್ಯೆ ಮಿತವಾಗಿಸುವುದು ಮಾತ್ರವಲ್ಲದೆ, ಅವರು ಸಾಧ್ಯವಾದಷ್ಟು ಸ್ವಾವಲಂಬಿಯಾಗಿ ಜೀವನ ನಡೆಸುವುದಕ್ಕೆ ಪ್ರೇರೇಪಿಸಬೇಕು.

ಹೀಗಾಗಿ ನಮ್ಮ ಸಮಾಜದಲ್ಲಿ ಆರೈಕೆದಾರರು ಸಾಮಾಜಿಕ ಮತ್ತು ಆರ್ಥಿಕ ಸಮತೋಲನ ನೀಡುವಲ್ಲಿ ಸಂಕೀರ್ಣವಾದ ಪಾತ್ರ ವಹಿಸುತ್ತಾರೆ. ಆರ್ಥಿಕತೆಗೆ ಅವರ ಸಂಯೋಜಿತ ಕೊಡುಗೆ ಪ್ರಮುಖವಾಗಿದೆ.

ಆದಾಗ್ಯೂ ಆರೈಕೆದಾರರ ಬದುಕು ಪೂರ್ಣವಾಗಿ ಸವಾಲಿನಿಂದ ಮತ್ತು ಕಷ್ಟಗಳಿಂದ ಕೂಡಿರುತ್ತದೆ.  ಆರೈಕೆ ಮಾಡಲು ದೈಹಿಕ, ಮಾನಸಿಕ, ಹಾಗು ಭಾವನಾತ್ಮಕ ಸಾಮರ್ಥ್ಯ ಹೊಂದಿರಬೇಕು ಮತ್ತು ಇವರಿಗೆ ಸಾಮಾಜಿಕ ಬೆಂಬಲ ಸಹ ಇರುವುದಿಲ್ಲ.   

ಹಲವು ಸಂಧರ್ಭಗಳಲ್ಲಿ ಆರೈಕೆದಾರರು ವೈದ್ಯಕೀಯ, ಭಾವನಾತ್ಮಕ ಮತ್ತು ಶುಶ್ರೂಷೆ ಸಹಾಯವನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡಬೇಕಾಗುತ್ತದೆ. ಇದರ ನಡುವೆ ಅವರು ಕೂಡ ಗುಣಮಟ್ಟದ ಬದುಕನ್ನು ನಡೆಸಬೇಕಾಗುತ್ತದೆ.

ನಮ್ಮ ಜೀವಿತಾವಧಿಯಲ್ಲಿ ಪ್ರತಿಯೊಬ್ಬರಿಗೂ ಯಾವುದಾದರು ಒಂದು  ಹಂತದಲ್ಲಿ ಆರೈಕೆ ಮಾಡುವ ಅವಕಾಶ ಸಿಗುತ್ತದೆ. ಈ ವಿಭಾಗದಲ್ಲಿ ನಾವು ಆರೈಕೆದಾರರ ಅನುಭವಗಳು ಹಾಗೂ ಅವರ ಜಗತ್ತಿನ ಬಗ್ಗೆ ಹೆಚ್ಚು ಚರ್ಚಿಸುತ್ತೇವೆ. ನಾವು ಜ್ಞಾನ ಮತ್ತು ಸಂಪನ್ಮೂಲಗಳನ್ನು ನೀಡುವುದಲ್ಲದೆ, ಆರೈಕೆದಾರರಿಗೆ ಅನುಭೂತಿ ತೋರಿಸುವ ಪ್ರಯತ್ನವನ್ನು ಮಾಡುತ್ತೇವೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org