ಆರೈಕೆದಾರರಲ್ಲಿ ಉಂಟಾಗುವ ಒತ್ತಡ

ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಿರುವ ಪ್ರೀತಿಪಾತ್ರರ ಆರೈಕೆ ನಿಮ್ಮ ಕರ್ತವ್ಯವಾಗಿರಬಹುದು. ಜತೆಗೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ.

ಆರೈಕೆದಾರರಲ್ಲಿ ಉಂಟಾಗುವ ಒತ್ತಡ: ಹಾಗೆಂದರೇನು?

ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆ ಅಥವಾ ಮನೋವೈಕಲ್ಯ ಇರುವವರ ಆರೈಕೆ ಮಾಡುವುದು ಹಲವಾರು ಕಾರಣಗಳಿಗೆ ಸವಾಲಿನ ಕೆಲಸ. ಅವರಿಗೆ ಮಾನಸಿಕ ಸಮಸ್ಯೆಯಿರುವುದನ್ನು ಒಪ್ಪಿಕೊಳ್ಳುವುದು, ಹಲವು ಸಮಯದವರೆಗೆ ಅವರು ಸಾಮಾನ್ಯರಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದಿರುವುದು; ಅವರಿಗೆ ಆರೈಕೆಮಾಡುವಾಗ ಉಂಟಾಗುವ ತೀವ್ರವಾದ ಭಾವನೆಗಳು, ಮನೆಗೆಲಸ ಹಾಗೂ ಆರೈಕೆ ಎರಡನ್ನೂ ಸರಿದೂಗಿಸಬೇಕಾದ ಅನಿವಾರ್ಯತೆ, ಜೊತೆಗೆ ನಮ್ಮ ಸಮಾಜದಲ್ಲಿ ಮಾನಸಿಕ ಸಮಸ್ಯೆಯಿರುವವರ ಕುರಿತು ಇರುವ ಪೂರ್ವಾಗ್ರಹ, ಇತ್ಯಾದಿ ಸಂಗತಿಗಳು ಆರೈಕೆದಾರರರಿಗೆ ಒತ್ತಡ ತರುತ್ತವೆ. ಇದು, ಅನಾರೋಗ್ಯಪೀಡಿತರನ್ನು ಆರೈಕೆ ಮಾಡುವ ಕರ್ತವ್ಯದಿಂದಾದ ದೈಹಿಕ ಮತ್ತು ಮಾನಸಿಕ ಯಾತನೆಯನ್ನು ಸೂಚಿಸುತ್ತದೆ.

ಆರೈಕೆಯ ಹೊರೆ
ತಮ್ಮ ಪ್ರೀತಿಪಾತ್ರರ ಆರೈಕೆ ಸಲುವಾಗಿ ಕಾಳಜಿ ಮಾಡುವವರು ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಯ ಬಗ್ಗೆ ಹೇಳಲು ತಜ್ಞರು ಆರೈಕೆದಾರರ ಹೊರೆ ಎನ್ನುತ್ತಾರೆ. ಈ ಹೊಂದಾಣಿಕೆಗಳು ವಾಸ್ತವದಲ್ಲಿ ಅನಿವಾರ್ಯವಾಗಿರಬಹುದು: ಆರೈಕೆದಾರರು ಕಾಳಜಿಯ ಜವಾಬ್ದಾರಿ ನಿರ್ವಹಿಸಲು ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ; ತಮ್ಮ ವೃತ್ತಿಗೆ ಸಂಬಂಧಿಸಿದಂತೆಯೂ ಅನೇಕ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಬಹುದು ಅಥವಾ ಪೂರ್ಣ ಸಮಯದ ಆರೈಕೆಗಾಗಿ ಕೆಲಸವನ್ನೇ ಬಿಡಬೇಕಾಗಿ ಬಂದಿರಬಹುದು. ಹಣಕಾಸಿನ ( ಹೆಚ್ಚಿದ ಖರ್ಚು ಮತ್ತು ಕಡಿಮೆಯಾದ ಆದಾಯ) ಮತ್ತು ಸಾಮಾಜಿಕ (ಮಾನಸಿಕ ಸಮಸ್ಯೆಗಳ ಕುರಿತು ಸಮಾಜದಲ್ಲಿ ಇರುವ ತಪ್ಪು ಗ್ರಹಿಕೆಯಿಂದಾಗಿ ಮನೆಯವರು ಮತ್ತು ಸ್ನೇಹಿತರೊಂದಿಗೆ ಸರಿಯಾಗಿ ಬೆರೆಯಲಾಗದಿರುವುದು.) ಸಂಗತಿಗಳು ಆರೈಕೆದಾರರ ಮನಸ್ಸಿನ ಮೇಲಿನ ಒತ್ತಡವನ್ನು ಹೆಚ್ಚಿಸಬಹುದು.

ಕ್ಲಿಷ್ಠಕರ ಲಕ್ಷಣಗಳನ್ನು ನಿಭಾಯಿಸಬೇಕಾದ ಸ್ಥಿತಿ:  
ಗಂಭೀರ ಮಾನಸಿಕ ಸಮಸ್ಯೆಗಳಾದ ಮನೋವಿಕಾರ ಅಥವಾ ಸ್ಕಿಜೋಫ್ರೀನಿಯಾದಂತಹ ಖಾಯಿಲೆಯಿರುವ ವ್ಯಕ್ತಿಗಳು ಎರಡು ರೀತಿಯ ಲಕ್ಷಣಗಳನ್ನು ಹೊಂದಿರುತ್ತಾರೆ.

 • ಧನಾತ್ಮಕ ಲಕ್ಷಣಗಳು: ಉದಾಹರಣೆಗೆ ಭ್ರಮೆ, ಭ್ರಾಂತಿ, ಅಸಂಬದ್ಧ ಮಾತು ಮತ್ತು ವಿಚಿತ್ರ ನಡವಳಿಕೆ.
 • ಋಣಾತ್ಮಕ ಲಕ್ಷಣಗಳು: (ಹೆಚ್ಚಿನ ಜನರಲ್ಲಿ ಕಂಡುಬರುವ, ಆದರೆ ನಿರ್ದಿಷ್ಟ ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯಲ್ಲಿ ಕಂಡುಬರದ ಲಕ್ಷಣಗಳು)  ತಮ್ಮನ್ನು ಕಾಳಜಿ ಮಾಡುವ ಸಾಮರ್ಥ್ಯ, ಸುತ್ತಲಿನ ವ್ಯಕ್ತಿಗಳೊಂದಿಗೆ ಸಂವಹಿಸುವ ಸಾಮರ್ಥ್ಯ ಮತ್ತು ಆ ಸಮಯದಲ್ಲಿ ಉಂಟಾಗುವ ಭಾವನೆಗಳನ್ನು ಮುಖದ ಅಭಿವ್ಯಕ್ತಿ ಅಥವಾ ಮಾತಿನ ಧಾಟಿಯಲ್ಲಿ ವ್ಯಕ್ತಿಪಡಿಸುವ ಸಾಮರ್ಥ್ಯ. ಕೆಲವು ವ್ಯಕ್ತಿಗಳಲ್ಲಿ ತಮ್ಮ ಮಾನಸಿಕ ಸಮಸ್ಯೆಯಿಂದಾಗಿ ಈ ಕಾರ್ಯಗಳನ್ನು ನಡೆಸುವ ಸಾಮರ್ಥ್ಯವು ಬಹುಮಟ್ಟಿಗೆ ಕುಸಿದಿರಬಹುದು. ಉದಾಹರಣೆಗೆ ಸ್ಕಿಜೋಫ್ರೀನಿಯಾ ಇರುವ ವ್ಯಕ್ತಿಯು ತನ್ನನ್ನು ತಾನು ಸ್ವಚ್ಛವಾಗಿ ಇರಿಸಿಕೊಳ್ಳಲು ಅಸಮರ್ಥನಾಗಬಹುದು (ಸ್ವಚ್ಛತೆ ಮತ್ತು ಸ್ವ-ಕಾಳಜಿಯ ಕೊರತೆ), ಉಳಿದವರೊಂದಿಗೆ ಸಂವಹಿಸಲು ಇಷ್ಟಪಡದೇ ಇರಬಹುದು (ಸಾಮಾಜಿಕ ಹಿಂಜರಿತ) ಮತ್ತು ಅವರು ತಮಗೆ ಅತ್ಯಂತ ಆಸಕ್ತಿಯಿರುವ ವಿಷಯದ ಕುರಿತು ಮಾತನಾಡುತ್ತಿದ್ದರೂ ಮುಖದಲ್ಲಿ ಅನಾಸಕ್ತಿಯ ಅಥವಾ ಶೂನ್ಯ ಭಾವ ಕಾಣಿಸಬಹುದು.

ತಜ್ಞರ ಪ್ರಕಾರ ಆರೈಕೆ ಮಾಡುವವರಿಗೆ ಧನಾತ್ಮಕ ಲಕ್ಷಣಗಳಿಗಿಂತ ಋಣಾತ್ಮಕ ಲಕ್ಷಣಗಳು ಹೆಚ್ಚಿನ ಯಾತನೆ ಉಂಟುಮಾಡುತ್ತವೆ. ಇದು ಮುಖ್ಯವಾಗಿ ಎರಡು ಕಾರಣಗಳು: ಮೊದಲನೆಯದಾಗಿ, ಔಷಧಗಳು ಬಹುಮಟ್ಟಿಗೆ ರೋಗಿಯ ಧನಾತ್ಮಕ ಲಕ್ಷಣಗಳನ್ನು ನಿಯಂತ್ರಿಸುತ್ತವೆ. ಎರಡನೆಯ ಮತ್ತು ಪ್ರಮುಖ ಕಾರಣವೆಂದರೆ ಋಣಾತ್ಮಕ ಲಕ್ಷಣಗಳು ವ್ಯಕ್ತಿಯನ್ನು ಅಸಹಜ ಅಥವಾ ಮಾನಸಿಕ ರೋಗಿ ಎಂದು ಗುರುತಿಸುವಂತೆ ಮಾಡುತ್ತದೆ.

ಋಣಾತ್ಮಕ ಲಕ್ಷಣಗಳು ವ್ಯಕ್ತಿಯ ಸಾಮಾನ್ಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುವುದರಿಂದ ಹೆಚ್ಚು ಗಂಭೀರವಾದವುಗಳಾಗಿವೆ. ಈ ಲಕ್ಷಣಗಳನ್ನು ಮಾನಸಿಕ ರೋಗಿಯ ಸುತ್ತಲೂ ಇರುವ ವ್ಯಕ್ತಿಗಳು ಸುಲಭವಾಗಿ ಗುರುತಿಸಬಹುದಾಗಿರುವುದರಿಂದ ಆತನ ನಡವಳಿಕೆಯನ್ನು ಅಸಹಜವೆಂದು ಪರಿಗಣಿಸುತ್ತಾರೆ.

ಹೀಗೆ ಸಮಸ್ಯೆಯಿರುವ ಕೆಲವು ವ್ಯಕ್ತಿಗಳು ತಮ್ಮ ಮನೆಯವರು ಮತ್ತು ಆರೈಕೆದಾರರನ್ನು ಅನುಮಾನದಿಂದ ನೋಡಬಹುದು; ಇದು ಕೂಡ ಆರೈಕೆದಾರರಲ್ಲಿ ಒತ್ತಡಕ್ಕೆ ಕಾರಣವಾಗಬಹುದು- ಬಹಳ ಮುಖ್ಯವಾಗಿ ಅವರು ತಮ್ಮ ಪ್ರೀತಿಪಾತ್ರರ ಮಾನಸಿಕ ಸಮಸ್ಯೆಯ ಕುರಿತು ಬಹಿರಂಗವಾಗಿ ಮಾತನಾಡಲು ಇಷ್ಟಪಡದ ಸಂದರ್ಭದಲ್ಲಿ. ಸ್ನೇಹಿತರು, ನೆರೆಹೊರೆಯವರು, ಮನೆಯವರು ಅಥವಾ ಸಮುದಾಯದವರು ತಮ್ಮ ಪ್ರೀತಿಪಾತ್ರರ ಸಮಸ್ಯೆಯನ್ನು ಗುರುತಿಸಬಹುದು ಅಥವಾ ತಿಳಿಯಬಹುದು ಎಂಬ ಭಯವು ಅವರೊಡನೆ ಒಳ್ಳೆಯ ಸಂಬಂಧವನ್ನು ಹೊಂದಲು ಅಡ್ಡಿಯಾಗಬಹುದು. ಇದರಿಂದ ಆರೈಕೆದಾರರು ತಮ್ಮ ಭಾವನೆಗಳು ಮತ್ತು ಸಮಸ್ಯೆಯನ್ನು ಸುತ್ತಲಿನವರ ಜೊತೆ ಹಂಚಿಕೊಳ್ಳದೇ ಬೇರೆಯಾಗಿರಲು ಬಯಸಬಹುದು.

ಸ್ಕಿಜೋಫ್ರೇನಿಯಾ ಅಥವಾ ಮನೋವಿಕಾರದಂತಹ ಮಾನಸಿಕ ಸಮಸ್ಯೆಯಿರುವ ವ್ಯಕ್ತಿಗಳಿಗೆ ಭ್ರಮೆ ಅಥವಾ ಭ್ರಾಂತಿಯ ಅನುಭವವಾಗಬಹುದು. ಈ ಭ್ರಮೆ ಮತ್ತು ಭ್ರಾಂತಿಯಿಂದಾಗಿ ಅವರು ಆರೈಕೆದಾರರು ತಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಭಾವಿಸಬಹುದು. ಭ್ರಾಂತಿಯಿಂದಾಗಿ ಅವರು ಭಯಗೊಳ್ಳಬಹುದು ಅಥವಾ ದೊಡ್ಡದಾಗಿ ನಗಬಹುದು. ಈ ಲಕ್ಷಣಗಳು ರೋಗಿ ಮತ್ತು ಆರೈಕೆದಾರರ ನಡುವೆ ಅವಿಶ್ವಾಸ ಅಥವಾ ಅಪಾರ್ಥಕ್ಕೆ ಕಾರಣವಾಗಬಹುದು.  

ಧ್ವನಿಯ ಭ್ರಾಂತಿಯಿರುವ ವ್ಯಕ್ತಿಗಳು ತಮ್ಮದೇ ಪ್ರಪಂಚದಲ್ಲಿ ಕಳೆದುಹೋಗಿರಬಹುದು ಅಥವಾ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳಬಹುದು. ಆರೈಕೆದಾರರಿಗೆ ಇಂತಹ ನಡವಳಿಕೆಯನ್ನು, ತಮ್ಮ ಸುತ್ತಲಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅರ್ಥಮಾಡಿಕೊಳ್ಳುವುದು ಕಷ್ಟವೆನಿಸಬಹುದು. ಅಂತಹ ಭ್ರಾಂತಿಗೆ ಒಳಗಾದ ವ್ಯಕ್ತಿಗಳು ಅಕಾರಣವಾಗಿ ಕೋಪಗೊಳ್ಳಬಹುದು, ಸುತ್ತಲಿನವರಿಗೆ ಗದರಿಸಬಹುದು ಅಥವಾ ಕಾರಣವಿಲ್ಲದೇ ಹಿಂಸಿಸಬಹುದು.

ಹೆಚ್ಚಿನ ಬಾರಿ, ಈ ರೀತಿಯ ಸಮಸ್ಯೆಯನ್ನು, ನಡವಳಿಕೆಯಲ್ಲಿ ಬದಲಾವಣೆಗಳಾದಾಗಲೇ ಗುರುತಿಸಲು ಸಾದ್ಯ. ಆದರೆ ಮಾನಸಿಕ ಆರೋಗ್ಯದ ಕುರಿತು ಇರುವ ತಿಳಿವಳಿಕೆಯ ಕೊರತೆಯಿಂದಾಗಿ, ಇಂತಹ ನಡವಳಿಕೆಗಳು ಗಂಭೀರ ಸ್ವರೂಪವನ್ನು ತಾಳುವವರೆಗೆ ಆರೈಕೆದಾರರು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದಿಲ್ಲ. ತಜ್ಞರ ಪ್ರಕಾರ ರೋಗಿಯನ್ನು ಮುಂಚಿತವಾಗಿ ತಂದಷ್ಟೂ, ಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುವ ಮತ್ತು ಸಾಮಾನ್ಯ ಜೀವನಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಡವಾದಷ್ಟೂ ರೋಗ ಗಂಭೀರ ಸ್ವರೂಪ ಪಡೆಯುತ್ತದೆ ಮತ್ತು ಆರೈಕೆದಾರರಿಗೆ ಇನ್ನಷ್ಟು ಒತ್ತಡ ಮತ್ತು ಯಾತನೆಯನ್ನು ನೀಡುತ್ತವೆ.

ಕಳಂಕದಿಂದ ಉಂಟಾಗುವ ಒತ್ತಡ
ಕೆಲವೊಮ್ಮೆ ಮಾನಸಿಕ ಅನಾರೋಗ್ಯದ ಕುರಿತು ಸಮಾಜದಲ್ಲಿರುವ ಕಳಂಕ ಹಾಗೂ ತಪ್ಪು ಗ್ರಹಿಕೆಯಿಂದಾಗಿ, ರೋಗಿಗಳ ಲಕ್ಷಣಗಳು ಮತ್ತು ನಡವಳಿಕೆಯಿಂದ ಉಂಟಾಗುವ ಒತ್ತಡವನ್ನು ನಿಯಂತ್ರಿಸುವುದು ಕಠಿಣವೆನಿಸುತ್ತದೆ. ಮತಿಭ್ರಾಮಕ ಸ್ಕಿಜೋಫ್ರೀನಿಯಾಕ್ಕೆ ಒಳಗಾದ ರಾಜೇಶ್ ಎಂಬುವರ ಉದಾಹರಣೆಯನ್ನು ಇಲ್ಲಿ ನೋಡೋಣ.

ರಾಜೇಶನ ಸಂಶಯ ಪ್ರವೃತ್ತಿಯಿಂದ ಅವನ ಪಾಲಕರಿಗೆ ಆತನನ್ನು ನೋಡಿಕೊಳ್ಳುವುದು ಕಷ್ಟದ ವಿಷಯವಾಗಿತ್ತು. ಸಾಮಾಜಿಕ ಕಳಂಕ್ಕೆ ಹೆದರಿ ಅವರು ಈ ವಿಷಯವನ್ನು ಕುಟುಂಬದ ಉಳಿದ ಸದಸ್ಯರು ಮತ್ತು ಸ್ನೇಹಿತರಿಂದ ಗೌಪ್ಯವಾಗಿಟ್ಟರು. ನೆರೆಹೊರೆಯವರಿಗೆ ವಿಷಯ ತಿಳಿಯಬಹುದೆಂಬ ಕಾರಣಕ್ಕೆ, ಅದರಲ್ಲೂ ವಿಶೇಷವಾಗಿ ರಾಜೇಶನಲ್ಲಿ ಮತಿಭ್ರಾಮಕ ಲಕ್ಷಣಗಳು ಕಂಡುಬಂದಾಗ, ಅವರು ತಮ್ಮ ನೆರೆಹೊರೆಯವರು ಮತ್ತು ಸಂಬಂಧಿಕರಿಂದ- ದೂರವಿರಲು ಪ್ರಯತ್ನಿಸಿದರು. ರಾಜೇಶನ ಮಾನಸಿಕ ಆರೋಗ್ಯ ಮತ್ತು ಬದಲಾದ ನಡವಳಿಕೆಯ ಕುರಿತು ಕೇಳಬಹುದಾದ ಪ್ರಶ್ನೆಗಳನ್ನು ಎದುರಿಸಲು ಅವರು ಹೆದರಿದ್ದರು. ತಮ್ಮ ಮಗನ ಅನಾರೋಗ್ಯದ ವಿಷಯ ಬಹಿರಂಗವಾಗಿ ಬಿಡಬಹುದೆಂಬ ಭಯ ಅವರಲ್ಲಿ ಅತೀವವಾದ ಒತ್ತಡ ಉಂಟುಮಾಡಿತು. ಇದರಿಂದ ಅವರು ರಾಜೇಶನ ಬದಲಾದ ನಡವಳಿಕೆಯನ್ನು ಯಾವುದೇ ಸಾಮಾಜಿಕ ಬೆಂಬಲದ ನೆರವಿಲ್ಲದೇ ನಿಭಾಯಿಸಬೇಕಾಯಿತು.

(ಈ ದೃಷ್ಟಾಂತವನ್ನು ಮಾನಸಿಕ ತಜ್ಞರ ನೆರವಿನಿಂದ, ರೋಗದ ಲಕ್ಷಣಗಳನ್ನು ಹಾಗೂ ಸಮಾಜದ ಹಲವು ವರ್ಗದವರ ಅನುಭವಗಳನ್ನು ಆಧರಿಸಿ ರಚಿಸಲಾಗಿದೆ.)

ಆರೈಕೆಯಲ್ಲಿ ಒತ್ತಡವನ್ನುಂಟು ಮಾಡುವ ಇತರೆ ಅಂಶಗಳು

ಹಲವು ಸಲ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಪೋಷಿಸುತ್ತಿರುವವರು ತಮ್ಮ ಜೀವನಕ್ರಮದಲ್ಲಿ ಅಪಾರ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ; ಅವರು ಕೆಲಸವನ್ನು ಬಿಡಬೇಕಾಬಹುದು ಮತ್ತು ತಮ್ಮ ಸ್ವಂತ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಬಹುದು. “ಮೊದಲು ಕೂಡು ಕುಟುಂಬ ವ್ಯವಸ್ಥೆಯಿಂದ ಆರೈಕೆದಾರರಿಗೆ ಹೆಚ್ಚಿನ ಬೆಂಬಲ ದೊರೆಯುತ್ತಿತ್ತು. ಈಗ ಕುಟುಂಬವು ಚಿಕ್ಕದಾಗಿದೆ ಮತ್ತು ಎಲ್ಲರೂ ಉದ್ಯೋಗಸ್ಥರಾಗಿರುತ್ತಾರೆ, ಇದರಿಂದ ಹೆಚ್ಚಿನ ಬೆಂಬಲ ದೊರಕುವುದಿಲ್ಲ,” ಎನ್ನುತ್ತಾರೆ, ನಿಮ್ಹಾನ್ಸ್ ನಲ್ಲಿ ಸೈಕಿಯಾಟ್ರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಸಂತೋಷ್ ಕೆ. ಚತುರ್ವೇದಿ.
ಈ ರೀತಿಯ ಒತ್ತಡವು ಆರೈಕೆದಾರರಲ್ಲಿ ಮಧುಮೇಹ, ಭಾವೋದ್ವೇಗ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಭಾವನೆಗಳ ಮೂಲಕ ತಮ್ಮ ಯಾತನೆಯನ್ನು ವ್ಯಕ್ತಪಡಿಸುವುದು:
ಭಾವನೆಗಳನ್ನು ವ್ಯಕ್ತಪಡಿಸುವುದು ಮಾನಸಿಕ ಆರೋಗ್ಯ ಸಮಸ್ಯೆಯಿರುವ ವ್ಯಕ್ತಿಯ ಚೇತರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೆಲವೊಮ್ಮೆ ಆರೈಕೆದಾರರು ತಿಳಿದೋ, ತಿಳಿಯದೆಯೋ ತಮ್ಮ ವೇದನೆ, ಋಣಾತ್ಮಕ ಬಾವನೆಗಳು, ಟೀಕೆ ಮತ್ತು ಸಿಟ್ಟು ಮುಂತಾದವುಗಳನ್ನು ಮಾನಸಿಕ ರೋಗಿಯ ಎದುರು ವ್ಯಕ್ತಪಡಿಸಬಹುದು. ಆರೈಕೆದಾರರ ಮನೋಭಾವವು ಸಮಸ್ಯೆಯ ಉಪಶಮನದ ಗತಿ ಮತ್ತು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ತೀವ್ರ ಭಾವನಾತ್ಮಕ ಸನ್ನಿವೇಶಗಳು ಕೂಡಾ ಆರೈಕೆದಾರರ ಒತ್ತಡವನ್ನು ಹೆಚ್ಚಿಸಬಹುದು.

ಭಾವನೆಗಳನ್ನು ವ್ಯಕ್ತಪಡಿಸುವುದು ಮಾನಸಿಕ ಆರೋಗ್ಯ ಸಮಸ್ಯೆಯಿರುವ ವ್ಯಕ್ತಿಯ ಚೇತರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆರೈಕೆದಾರರ ಋಣಾತ್ಮಕ ಭಾವನೆಗಳು ಮತ್ತು ಅವುಗಳನ್ನು ಆತ ಎಷ್ಟು ಬಾರಿ ಪುನಃಪುನಃ ಅಭಿವ್ಯಕ್ತಿಸುತ್ತಾನೆ ಎನ್ನುವುದರ ನಡುವೆ ಸ್ಕಿಜೋಫ್ರೀನಿಯಾದಂತಹ ಸಮಸ್ಯೆಯುಳ್ಳವರಲ್ಲಿ ನೇರವಾದ ಸಂಬಂಧವಿರುತ್ತದೆ. ಸ್ಕಿಜೋಫ್ರೀನಿಯಾ ಹೊಂದಿರುವ ವ್ಯಕ್ತಿ ಪ್ರತಿಕೂಲ ವಾತಾವರಣದಲ್ಲಿ ಬದುಕುತ್ತಿರುವಾಗ ಅವರ ರೋಗದ ತೀವ್ರತೆ ಹೆಚ್ಚಾಗಿರುತ್ತದೆ. ಇದನ್ನು ನಿಭಾಯಿಸಲು ಹೆಚ್ಚಿನ ಔಷಧೋಪಚಾರದ ಅವಶ್ಯಕತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಆರೈಕೆದಾರರ ಒತ್ತಡ ನಿಯಂತ್ರಿಸಲು ಸಹಾಯ ಪಡೆಯುವುದು:
ನೀವು ದೀರ್ಘಕಾಲದಿಂದ ಮಾನಸಿಕ ಅನಾರೋಗ್ಯ ಪೀಡಿತರಾಗಿರುವವರ ಆರೈಕೆಯಲ್ಲಿ ತೊಡಗಿದ್ದರೆ ಕನಿಷ್ಟ ಒಂದಲ್ಲ ಒಂದು ಹಂತದಲ್ಲಿ ನಿಮ್ಮ ಸಹನೆ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಆರೈಕೆದಾರರ ಒತ್ತಡವು ನಿಜವಾಗಿಯೂ ಕಾಳಜಿ ಮಾಡಬೇಕಾದಂತಹ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿ. ಸಹನೆ ಕಳೆದುಕೊಳ್ಳುವುದನ್ನು ದೀರ್ಘಕಾಲೀನ ಹೊಂದಾಣಿಕಾ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ.

ಆರೈಕೆದಾರರ ಒತ್ತಡದ ಕೆಲವು ಲಕ್ಷಣಗಳು ಹೀಗಿವೆ:

 • ನೀವು ಕೊನೆಯ ಬಾರಿಗೆ ಯಾವಾಗ ಸಿನಿಮಾ ನೋಡಲು, ರಾತ್ರಿಯ ಊಟಕ್ಕೆ ಸ್ನೇಹಿತರನ್ನು ಬೇಟಿ ಮಾಡಲು ಹೋಗಿದ್ದಿರಿ ಅಥವಾ ಮೋಜಿನ ಚಟುವಟಿಕೆಯಲ್ಲಿ ತೊಡಗಿದ್ದಿರಿ ಎಂದು ನೆನಪಿರುವುದಿಲ್ಲ.
 • ನಿಮ್ಮ ಕಾರ್ಯಕ್ಷಮತೆಯಲ್ಲಿ ಏಕಾಗ್ರತೆಯ ಕೊರತೆ ಕಂಡುಬರುತ್ತದೆ.
 • ಕಿರಿಕಿರಿ ಎನಿಸುವುದು ಮತ್ತು ಹಠಾತ್ತಾಗಿ ಕೋಪಗೊಳ್ಳುವುದು.
 • ಸಣ್ಣ ವಿಶ್ರಾಂತಿ ಅಥವಾ ರಾತ್ರಿಯ ದೀರ್ಘ ನಿದ್ರೆಯ ನಂತರವೂ ಸುಸ್ತೆನಿಸುವುದು.
 • ಓದುವುದು, ಚಲನಚಿತ್ರ ವೀಕ್ಷಿಸುವುದು, ಸ್ನೇಹಿತರೊಂದಿಗೆ ಊಟ ಮಾಡುವುದು ಮುಂತಾಗಿ ಈ ಮುಂಚೆ ನಿಮಗೆ ಖುಷಿಕೊಡುತ್ತಿದ್ದ ಚಟುವಟಿಕೆಗಳಲ್ಲಿ ಅನಾಸಕ್ತಿ.
 • ಸರಿಯಾಗಿ ನಿದ್ರೆ ಮಾಡಲು ಆಗದಿರುವುದು.
 • ಅತಿಯಾದ ಮದ್ಯಪಾನ ಅಥವಾ ಧೂಮ್ರಪಾನ.
 • ಅತೀ ಗೌಣ ವಿಷಯಗಳಿಗೂ ನೀವು ಆರೈಕೆ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಸಿಡಿಸಿಡಿ ಗೊಳ್ಳುವುದು.
 • ಅವರಿಗೆ ಆರೈಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎನಿಸುವುದು.
 • ಕೆಲವು ಸಂದರ್ಭಗಳಲ್ಲಿ ಒತ್ತಡವು ಅತಿಯಾದಾಗ ಆರೈಕೆದಾರರು ಕಾಳಜಿ ಮಾಡಬೇಕಾದ ವ್ಯಕ್ತಿಯಿಂದ ಮುಕ್ತರಾಗಲು ಬಯಸಬಹುದು ಮತ್ತು ಈ ಯೋಚನೆಯು ಅವರಲ್ಲಿ ತಪ್ಪಿತಸ್ಥ ಭಾವನೆಯನ್ನು ಉಂಟು ಮಾಡಬಹುದು.

ಆರೈಕೆದಾರರಲ್ಲಿ ಒತ್ತಡದ ಲಕ್ಷಣಗಳನ್ನು ಗುರುತಿಸಲು ಕಲಿಯುವುದರಿಂದ ನೀವು ಬರ್ನ್ ಔಟ್ ಹಂತವನ್ನು ತಪ್ಪಿಸಬಹುದು. ಒಂದೊಮ್ಮೆ ನೀವು ಆರೈಕೆದಾರರ ಒತ್ತಡದಿಂದ ಬಳಲುತ್ತಿದ್ದರೆ ಆಪ್ತ ಸಮಾಲೋಚಕರು ಅಥವಾ ಮನೋವೈದ್ಯರನ್ನು ಕಾಣಿ. ನಿಮ್ಮ ಆಪ್ತಸಮಾಲೋಚಕರು ಅಥವಾ ಮನೋವೈದ್ಯರು ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ಸಲಹೆ ಅಥವಾ ಚಟುವಟಿಕೆಗಳನ್ನು ಸೂಚಿಸುತ್ತಾರೆ.

ಆರೈಕೆದಾರರಲ್ಲಿ ಒತ್ತಡದ ಹಂತಗಳು:
ಹೆಚ್ಚಿನ ಆರೈಕೆದಾರರಲ್ಲಿ ಒತ್ತಡದ ಹಂತಗಳು ಈ ರೀತಿ ಇರುತ್ತವೆ:

ಆರಂಭಿಕ ಹಂತ ಅಥವಾ ಹನಿಮೂನ್ ಫೇಸ್: ಆರೈಕೆದಾರರು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ತಮ್ಮ ಪ್ರೀತಿಪಾತ್ರರ ಕಾಳಜಿಯನ್ನು ತಮ್ಮ ಕರ್ತವ್ಯದ ಭಾಗವೆಂದು ಭಾವಿಸುತ್ತಾರೆ. ತಮ್ಮ ಕರ್ತವ್ಯಗಳನ್ನು ಧನಾತ್ಮಕವಾಗಿ ಸ್ವೀಕರಿಸಿ, “ನನ್ನ ಆತ್ಮೀಯರನ್ನು ಚೆನ್ನಾಗಿ ನೋಡಿಕೊಳ್ಳೋಣ ಈ ಸಮಯವು ಒಂದು ದಿನ ಮುಗಿಯುತ್ತದೆ,” ಎಂಬ ಭಾವನೆಯಲ್ಲಿ ಮುನ್ನಡೆಯುತ್ತಾರೆ.

ಏಕತಾನತೆಯ ಹಂತ: ಇಲ್ಲಿ ಆರೈಕೆದಾರರು ತಮ್ಮ ಆರೈಕೆಯ ಅವಧಿಯು ಏಳುಬೀಳುಗಳಿಂದ ಕೂಡಿದೆ ಎಂದು ಭಾವಿಸುತ್ತಾರೆ.

ಬ್ರೌನ್ ಔಟ್ ಫೇಸ್: ಇಲ್ಲಿ ಆರೈಕೆದಾರರು ಸುಸ್ತಿನಿಂದ ಬಳಲುತ್ತಾರೆ ಮತ್ತು ಆರೈಕೆ ಮಾಡುವ ವಿಷಯದಲ್ಲಿ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕಾಳಜಿ ಮಾಡುವುದು ಒಂದು ಹೊರೆಯೆಂದು ಭಾವಿಸಲು ಶುರು ಮಾಡುತ್ತಾರೆ.

ಬರ್ನ್ಔಟ್ ಫೇಸ್: ಈ ಹಂತದಲ್ಲಿ ಆರೈಕೆ ಮಾಡುತ್ತಿರುವವರು ತಮ್ಮ ಪ್ರೀತಿಪಾತ್ರರಿಂದ ದೂರವಿರಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರು ಭಾವನಾತ್ಮಕವಾಗಿ ಬಳಲಿರುತ್ತಾರೆ. ಅವರು ಆರೈಕೆಯನ್ನು ಮುಂದುವರೆಸುತ್ತಾರಾದರೂ ಯಂತ್ರಿಕವಾಗಿ ತಮ್ಮ ಕೆಲಸವನ್ನು ಮಾಡುತ್ತಾರೆ. ಅವರಲ್ಲಿ ಈ ಹಂತದಲ್ಲಿ ಖಿನ್ನತೆ, ಸಿನಿಕತನ ಮತ್ತು ಭಾವನಾರಾಹಿತ್ಯಗಳು ಕಂಡುಬರುವುದು.

ಆರೈಕೆದಾರರ  ಬರ್ನ್ ಔಟ್  ತಪ್ಪಿಸುವುದು:
ನೀವು ಒಬ್ಬ ಆರೈಕೆದಾರರಾಗಿದ್ದು ನಿಮ್ಮಲ್ಲಿ ಒತ್ತಡದ ಲಕ್ಷಣಗಳು ಕಂಡುಬರುತ್ತಿದ್ದಲ್ಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಮೂಲಕ ಬರ್ನ್ಔಟನ್ನು ತಪ್ಪಿಸಿಕೊಳ್ಳಿ. ನೀವು ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಮತ್ತೆ ಆರೈಕೆ ಮಾಡಲು ಸಿದ್ಧರಾಗುವವರೆಗೆ ನಿಮ್ಮ ಪ್ರೀತಿಪಾತ್ರರಿಗೆ ಸರಿಯಾದ ಕಾಳಜಿ ದೊರೆಯಲು ಹಲವು ಕ್ರಮಗಳನ್ನು ಅನುಸರಿಸಬಹುದು.

1. ಡೇ ಬೋರ್ಡರ್ ಅಥವಾ ಡೇಕೇರ್ ಸೇವೆ. ಇಲ್ಲಿ ವ್ಯಕ್ತಿಯನ್ನು ಬೆಳಗಿನಿಂದ ಸಾಯಂಕಾಲದವರೆಗೆ ಇರಿಸಿಕೊಂಡು ಅವರಿಗೆ ಹೊಸ ಕೌಶಲ್ಯ  ಮತ್ತು ಕಾರ್ಯಗಳನ್ನು ಕಲಿಸಲಾಗುವುದು. ಇದರಿಂದ ಆರೈಕೆದಾರರು ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಬಹುದು, ಕೆಲಸಕ್ಕೆ ಹೋಗಬಹುದು ಮತ್ತು ಮನೆಯ ಕೆಲಸವನ್ನು ಮುಗಿಸಿ ವಿಶ್ರಾಂತಿ ಪಡೆಯಬಹುದು.

2. ರಿಸ್ಪೈಟ್ ಕೇರ್ ಸೇವೆ. ಹಲವು ವಾರಗಳವರೆಗೆ ನಿರಂತರವಾಗಿ ಯಾವುದೇ ವಿಷಯಕ್ಕೆ ನಿಮ್ಮ ಗಮನ ಅಥವಾ ಹಾಜರಿಯ ಅವಶ್ಯಕತೆಯಿದ್ದಲ್ಲಿ ನೀವು ಈ ಸೇವೆಯನ್ನು ಬಳಸಿಕೊಳ್ಳಬಹುದು. ಇಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ವಸತಿ ಮತ್ತು ವಿಶೇಷ ಆರೈಕೆಯನ್ನು ಒದಗಿಸಲಾಗುತ್ತದೆ. ಹೆಚ್ಚಿನ ಆರೈಕೆದಾರರು ತಾವು ಪ್ರಯಾಣಿಸಬೇಕಾಗಿ ಬಂದಾಗ, ಅನಾರೋಗ್ಯದ ಸಂದರ್ಭದಲ್ಲಿ ಅಥವಾ ಇನ್ನಾವುದೇ ಕೆಲಸಕ್ಕೆ ಅವರು ಸಮಯವನ್ನು ನೀಡಬೇಕಾಗಿದ್ದಲ್ಲಿ ಈ ಸೇವೆಯನ್ನು ಬಳಸಿಕೊಳ್ಳುತ್ತಾರೆ. ನೀವು ಯಾವಾಗಲೋ ಒಮ್ಮೊಮ್ಮೆ, ಅಪರೂಪಕ್ಕೆ, ಅತ್ಯಂತ ಅಗತ್ಯವಿದ್ದಾಗ ಮಾತ್ರ ಈ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಸೂಕ್ತ.

3. ಆರೈಕೆಯ ಹಂಚಿಕೆ. ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಸಹಾಯದಿಂದ ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬಹುದು ಇದರಿಂದ ನಿಮಗೆ ಆರೈಕೆಯಿಂದ ಬಿಡುವು ದೊರೆತು ನಿಮ್ಮ ಸ್ವಂತ ಕೆಲಸಕ್ಕೆ ಸಮಯ ದೊರೆಯುತ್ತದೆ.

4. ಮಾನಸಿಕ ತಜ್ಞರನ್ನು ಭೇಟಿ ಮಾಡುವ ಮೂಲಕ ನಿಮ್ಮ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು.  ಒಂದು ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳುವುದು, ಪ್ರವಾಸಕ್ಕೆ ತೆರಳುವುದು ಸಾಕು ಪ್ರಾಣಿಯನ್ನು ಪೋಷಿಸುವುದು ಅಥವಾ ಪ್ರತಿದಿನ ಅಥವಾ ಪ್ರತಿ ವಾರ ನಿಮ್ಮ ಅಗತ್ಯಗಳಿಗೂ ಸ್ವಲ್ಪ ಸಮಯವನ್ನು ಮೀಸಲಿಡುವ ಮೂಲಕ ನಿಮ್ಮ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರ ಆರೈಕೆಯು ಹೆಚ್ಚಿನ ಸಮಯ ಮತ್ತು ಸಾಮರ್ಥ್ಯವನ್ನು ಬೇಡುತ್ತದೆ. ಆದ್ದರಿಂದ ನಿಮ್ಮ ಬಗ್ಗೆ ಸರಿಯಾದ ಕಾಳಜಿ ತೆಗೆದುಕೊಂಡಾಗ ಮಾತ್ರ ನಿಮ್ಮ ಪ್ರೀತಿ ಪಾತ್ರರನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮಲ್ಲಿ ಆರೈಕೆದಾರರ ಒತ್ತಡದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸಹಾಯವನ್ನು ಪಡೆಯಿರಿ. ಇದರಿಂದ ನಿಮ್ಮ ಪ್ರೀತಿಪಾತ್ರರ ಆರೈಕೆಯು ನಿಮಗೆ ಒಂದು ಹೊರೆಯೆಂದು ಅನಿಸದು.

Related Stories

No stories found.