ಬೈಪೋಲಾರ್ ಡಿಸಾರ್ಡರ್

Q

ಬೈಪೋಲಾರ್ ಡಿಸಾರ್ಡರ್ ಎಂದರೇನು?

A

ರಮಣ್ ಎಂಬ ಐಟಿ ಉದ್ಯೋಗಿಯೊಬ್ಬರು ಹೇಳಿಕೊಂಡ ಕಥೆಯಿದು: “ನನ್ನ ಸಹೋದ್ಯೋಗಿಯೊಬ್ಬರು ಒಮ್ಮೊಮ್ಮೆ ವಿಚಿತ್ರವಾಗಿ ವರ್ತಿಸುತ್ತಾರೆ. ಒಮ್ಮೊಮ್ಮೆ ಅವರು ಕೆಲವು ಕ್ಷಣಗಳ ಕಾಲ ಭಾವಾವೇಶಕ್ಕೊಳಗಾಗುತ್ತಾರೆ, ಅಸ್ಪಷ್ಟ ವಿಷಯಗಳ ಕುರಿತಾಗಿ ನಿರಂತರವಾಗಿ ಮಾತನಾಡುತ್ತಾರೆ ಅಥವಾ ಹೊಸ ಕಂಪನಿಯ ಮಾಲೀಕನಾಗುತ್ತೇನೆ ಮತ್ತು ಮಿಲಿಯನ್ ಡಾಲರ್ ಸಂಪಾದಿಸುತ್ತೇನೆ ಎನ್ನುತ್ತ ಅತಿಮಹಾತ್ವಾಕಾಂಕ್ಷೆಯ ಯೋಜನೆಗಳ ಕುರಿತಾಗಿ ಜಂಭದಿಂದ ಮಾತನಾಡುತ್ತಾರೆ. ಆದರೆ ನಂತರದ ಕೆಲವು ದಿನಗಳ ಕಾಲ ಅವರು ತಮ್ಮಷ್ಟಕ್ಕೆ ತಾವೇ ಮೌನದ ಮೊರೆ ಹೋಗುತ್ತಾರೆ. ಯಾರೊಂದಿಗೂ ಮಾತುಕತೆ ನಡೆಸುವುದಿಲ್ಲ ಅಥವಾ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರೈಸುವುದಿಲ್ಲ.

ಒಮ್ಮೆ, ನಾವೆಲ್ಲರೂ ಸಹೋದ್ಯೋಗಿಗಳು ಸೇರಿ ಊಟಕ್ಕೆಂದು ಹೊಟೇಲೊಂದಕ್ಕೆ ಹೋಗಿದ್ದೆವು. ಆ ಸಂದರ್ಭದಲ್ಲಿ ಅವರು ತಾನು ಆರ್ಡರ್ ಮಾಡಿದ್ದನ್ನು ಸಮಯಕ್ಕೆ ಸರಿಯಾಗಿ ತರಲಿಲ್ಲವೆಂದು ವೇಟರ್ ಮೇಲೆ ಪ್ಲೇಟನ್ನು ಎಸೆದರು. ಅವರ ವರ್ತನೆಯಿಂದ ನಮೆಲ್ಲರಿಗೂ ಗಾಬರಿಯಾಯಿತು. ದಿನ ಕಳೆದಂತೆ, ಅವರ ವರ್ತನೆಯನ್ನುಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಅವರ ಕೆಲಸದ ಮೇಲೆ ಹಾಗೂ ಸಹೋದ್ಯೋಗಿಗಳೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರತೊಡಗಿತ್ತು. ಅಂತಿಮವಾಗಿ ಅವರನ್ನು ಸಂಸ್ಥೆಯವರು ಕೆಲಸದಿಂದ ತೆಗೆದರು.

ಅವರು ಆ ರೀತಿಯಾಗಿ ಯಾಕೆ ವರ್ತಿಸುತ್ತಿದ್ದರು ಎಂಬುದನ್ನು ತಿಳಿಯುವ ಕುತೂಹಲ ನನ್ನದಾಗಿತ್ತು. ನಮ್ಮ ಕುಟುಂಬ ವೈದ್ಯರ ಜೊತೆ ಈ ವಿಷಯದ ಬಗ್ಗೆ ಚರ್ಚಿಸಿದಾಗ ನನ್ನ ಸಹೋದ್ಯೋಗಿಯು ಅಧಿಕ ಖುಷಿ ಅಧಿಕ ದುಃಖವನ್ನುಂಟುಮಾಡುವ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿದ್ದಾರೆ ಎಂದು ಅರಿವಾಯಿತು.

ಈ ಕಾಲ್ಪನಿಕ ಕಥೆಯನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಕೂಡ ಬೈಪೋಲಾರ್ ಡಿಸಾರ್ಡರ್ ಕಾಣಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಣೆಯಲಾಗಿದೆ.

ಬೈಪೋಲಾರ್ ಡಿಸಾರ್ಡರ್, (ಮ್ಯಾನಿಕ್ ಡಿಪ್ರೆಶನ್ ಎಂದು ಕೂಡ ಹೇಳಲಾಗುತ್ತದೆ) ಎನ್ನುವುದು ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಗಂಭೀರ ಮಾನಸಿಕ ಅಸ್ವಸ್ಥತೆ. ವ್ಯಕ್ತಿಯು ‘ಗರಿಷ್ಠ’ (ವೈದ್ಯಕೀಯ ಭಾಷೆಯಲ್ಲಿ ಉನ್ಮಾದ ಎನ್ನುತ್ತಾರೆ) ಮತ್ತು ‘ಕನಿಷ್ಠ’ (ಖಿನ್ನತೆ ಎಂದು ತಿಳಿಯಲಾಗುತ್ತದೆ) ಎಂಬ ಎರಡು ಪ್ರಮಾಣದಲ್ಲಿ ಈ ತೊಂದರೆಯನ್ನು ಅನುಭವಿಸಬಹುದು. ಈ ಅಸ್ವಸ್ಥತೆಯು ಕೆಲವು ದಿನ ಅಥವಾ ಬಹಳ ವಾರಗಳ ಕಾಲ ಕಾಣಿಸಿಕೊಳ್ಳಬಹುದು. ವ್ಯಕ್ತಿಯು ವಿಭಿನ್ನ ರೀತಿಗಳಲ್ಲಿ ಮತ್ತು ಸರಣಿ ರೂಪದಲ್ಲಿ ಕಾಣಿಸಿಕೊಳ್ಳಬಹುದಾದ ಉನ್ಮಾದ ಮತ್ತು ಖಿನ್ನತೆಯನ್ನು ಅನುಭವಿಸಬಹುದು ಹಾಗೂ ಒಂದು ಬಗೆಯ ತೊಂದರೆ ಹೀಗೆಯೇ ಬಾಧಿಸುತ್ತದೆ ಎಂದು ನಿಖರವಾಗಿ ಹೇಳಲಾಗದು. ವಾರದವೊಂದರಲ್ಲಿ ಅನೇಕ ಬಾರಿಯೂ ಈ ತೊಂದರೆಯು ಪುನರಾವರ್ತಿಸಬಹುದು.

ತೀವ್ರ ಸ್ವರೂಪದ ಬೈಪೋಲಾರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗಳಲ್ಲಿ ಭ್ರಮೆ ಅಥವಾ ಭ್ರಾಂತಿ ಮತ್ತು ತನಗೇ ತಾನೇ ಹಾನಿ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಯ ಆಲೋಚನೆಗಳಂತಹ ಮನೋವಿಕೃತ ಲಕ್ಷಣಗಳು ಕಂಡುಬರಬಹುದು. ಬೈಪೋಲಾರ್ ಡಿಸಾರ್ಡರ್ ನಿಂದಾಗಿ ವ್ಯಕ್ತಿಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸ್ವಾಭಾವಿಕ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಅಲ್ಲದೇ, ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಕೂಡ ದುಷ್ಪರಿಣಾಮ ಬೀರಬಹುದು.

ಗಮನಿಸಿ: ಹೃದಯ ತೊಂದರೆ ಅಥವಾ ಮಧುಮೇಹದಂತೆಯೇ ಬೈಪೋಲಾರ್ ಡಿಸಾರ್ಡರ್ ಕೂಡ ದೀರ್ಘ ಸಮಯ ಕಾಡುವ ಮಾನಸಿಕ ಅಸ್ವಸ್ಥತೆ. ಜೀವನಪೂರ್ತಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅವಶ್ಯಕತೆಯಿದೆ.

Q

ಯಾವುದು ಬೈಪೋಲಾರ್ ಡಿಸಾರ್ಡರ್ ಅಲ್ಲ?

A

ನಾವೆಲ್ಲರೂ ಕೂಡ ಆಗೀಗ ಮೂಡ್ ಬದಲಾಗುವ ಮತ್ತು ಭಾವಪರವಶವಾಗುವ ಭಾವನೆಗಳನ್ನು ಅನುಭವಿಸುತ್ತಿರುತ್ತೇವೆ. ಆದರೆ ಅದರಿಂದಾಗಿ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದಿರಬಹುದು. ನಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಬರದ ರೀತಿಯಲ್ಲಿ ಎಲ್ಲೋ ಒಮ್ಮೊಮ್ಮೆ ಇಂತಹ ಮಾನಸಿಕ ಪರಿಸ್ಥಿತಿಯನ್ನು ಅನುಭವಿಸುವುದು ಬೈಪೋಲಾರ್ ಡಿಸಾರ್ಡರ್ ಅಲ್ಲ.

ಖಿನ್ನತೆ ಹಾಗೂ ಬೈಪೋಲಾರ್ ಡಿಸಾರ್ಡರ್‌ನಲ್ಲಿ ಸಾಮ್ಯತೆ ಕಂಡುಬಂದರೂ ಕೇವಲ ಖಿನ್ನತೆಯಷ್ಟೇ ಬೈಪೋಲಾರ್ ಡಿಸಾರ್ಡರ್‌ ಅಲ್ಲ.

ಬೈಪೋಲಾರ್ ಡಿಸಾರ್ಡರ್ ಉನ್ಮಾದ ಹಾಗೂ ಖಿನ್ನತೆಯೊಂದಿಗೆ ತೀವ್ರ ಚಿತ್ತ ಚಂಚಲತೆಯನ್ನು ಕೂಡ ಉಂಟುಮಾಡುತ್ತದೆ. ಇದು ಖಿನ್ನತೆಗೂ ಬೈಪೋಲಾರ್ ಡಿಸಾರ್ಡರಿಗೂ ಇರುವ ಪ್ರಮುಖ ವ್ಯತ್ಯಾಸ.

 

Q

ಬೈಪೋಲಾರ್ ಡಿಸಾರ್ಡರ್‌ನ ಲಕ್ಷಣಗಳೇನು?

A

ಬೈಪೋಲಾರ್ ಡಿಸಾರ್ಡರಿನಿಂದ ಬಳಲುತ್ತಿರುವ ವ್ಯಕ್ತಿಗಳು ಎರಡು ರೀತಿಯ ಗುಣಲಕ್ಷಣಗಳನ್ನು ಉನ್ಮಾದ ಮತ್ತು ಖಿನ್ನತೆಯ ಹಂತಗಳಲ್ಲಿ ತೋರ್ಪಡಿಸುತ್ತಾರೆ.

ಉನ್ಮಾದದ ಹಂತ: ಉನ್ಮಾದದ ಅವಧಿಯಲ್ಲಿ ವ್ಯಕ್ತಿಗಳು ಆವೇಶದಿಂದ ವರ್ತಿಸುತ್ತಾರೆ ಮತ್ತು ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳದೆ ಥಟ್ಟನೆಯ

ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಅನಗತ್ಯ ಅಪಾಯಕ್ಕೆ ಗುರಿಯಾಗುತ್ತಾರೆ. ಅಲ್ಲದೇ ಈ ಸಂದರ್ಭಗಳಲ್ಲಿ, ವ್ಯಕ್ತಿಗಳು ತಮ್ಮ ಅನಿರೀಕ್ಷಿತ ವರ್ತನೆಯಿಂದಾಗುವ ಋಣಾತ್ಮಕ ಪರಿಣಾಮಗಳನ್ನು ಅಲಕ್ಷಿಸಬಹುದು ಅಥವಾ ಅವುಗಳ ಕುರಿತು ತಿಳಿಯದೇ ಇರಬಹುದು.

  • ಕೆಟ್ಟ ಸುದ್ದಿ ಅಥವಾ ದುಃಖದ ವಿಷಯ ಇತ್ಯಾದಿಯಾಗಿ ಯಾವದೂ ಕೂಡ ಪರಿಣಾಮ ಬೀರದಷ್ಟು ಮಟ್ಟಿಗಿನ ಆನಂದೋದ್ರೇಕದ ಭಾವನೆ.
  • ಕ್ಷಣಮಾತ್ರದಲ್ಲಿ ಕ್ರೋಧಗೊಳ್ಳುವುದು ಅಥವಾ ಅತೀವ ಕಿರಿಕಿರಿಗೊಳಗಾವುದು.
  • ಅತಿ ಮಹತ್ವಾಕಾಂಕ್ಷೆಯ ಭ್ರಮೆಗೊಳಗಾಗಬಹುದು ಅಥವಾ ತರ್ಕಕ್ಕೆ ನಿಲುಕದ ವಿಷಯಗಳಲ್ಲಿ ಅತಿಯಾದ ನಂಬಿಕೆಯನ್ನು ಇರಿಸಿಕೊಳ್ಳಬಹುದು. ದೇವರೊಂದಿಗೆ, ಗಣ್ಯ ವ್ಯಕ್ತಿಗಳೊಂದಿಗೆ ಅಥವಾ ಐತಿಹಾಸಿಕ ವ್ಯಕ್ತಿಗಳೊಂದಿಗೆ ತನಗೆ ವಿಶೇಷ ಸಂಪರ್ಕವಿದೆ ಎಂದು ವ್ಯಕ್ತಿ ಹೇಳಿಕೊಳ್ಳಬಹುದು..
  • ತಮ್ಮ ಸಾಮರ್ಥ್ಯದ ಕುರಿತಾಗಿ ಅಸಹಜ ನಂಬಿಕೆಗಳನ್ನು ಹೊಂದಿರುವುದು. ಉದಾಹರಣೆಗೆ, ತಮ್ಮಿಂದ ಅಸಾಧ್ಯದ ಕಾರ್ಯ ಯಾವುದೂ ಇಲ್ಲ. ಯಾವುದೇ ರೀತಿಯ, ಅತ್ಯಂತ ಕಠಿಣವಾದ ಕೆಲಸಗಳನ್ನು ಕೂಡ ಪೂರೈಸುವಲ್ಲಿ ತಮ್ಮನ್ನು ಯಾವುದೂ ತಡೆಯಲಾರದು ಎಂಬ ವಿಚಾರವನ್ನು ಇಂತಹ ವ್ಯಕ್ತಿಗಳು ಮಾಡಬಹುದು.
  • ಭಾವಾವೇಶಗಳನ್ನು ನಿಯಂತ್ರಿಸಲು ಆಗದೇ ಇರುವುದು ಮತ್ತು ಅನವಶ್ಯಕ ವಿಷಯಗಳ ಕುರಿತು ದುಂದುಗಾರಿಕೆ ಅಥವಾ ಆಡಂಬರವನ್ನು ಪ್ರದರ್ಶಿಸುವುದು, ಮೂರ್ಖತನದಿಂದ ವ್ಯಾಪಾರದ ಮೇಲೆ ಹೂಡಿಕೆ ಮಾಡುವುದು, ಅಜಾಗರೂಕತೆಯ ವಾಹನ ಚಾಲನೆ ಅಥವಾ ಅಸ್ವಾಭಾವಿಕ ಲೈಂಗಿಕ ವರ್ತನೆಗಳನ್ನು ತೋರ್ಪಡಿಸುವುದು ಮುಂತಾದ ಅಪಾಯಕರ ನಡುವಳಿಕೆಗಳನ್ನು ಪ್ರದರ್ಶಿಸಬಹುದು
  • ನಿಯಂತ್ರಿಸಲಾಗದ ಯೋಚನೆಗಳು ನಿರಂತರವಾಗಿ ಮನಸ್ಸಿನಲ್ಲಿ ಹರಿದಾಡುತ್ತಿರುವುದು.
  • ಚಡಪಡಿಕೆ ಮತ್ತು ಅತಿಯಾದ ಚಟುವಟಿಕೆಯನ್ನು ಉಂಟುಮಾಡಬಹುದಾದ ನಿದ್ರಾಹೀನತೆ.
  • ಏಕಾಗ್ರತೆಯ ಕೊರತೆಯಿಂದಾಗಿ ಸಾಮಾನ್ಯ ಚಟುವಟಿಕೆಗಳನ್ನು ಕೂಡ ಮಾಡಲಾಗದಿರುವುದು.
  • ದಿನದ ಹೆಚ್ಚಿನ ಅವಧಿಯಲ್ಲಿ ಹತಾಶೆ ಹಾಗೂ ಕಿರಿಕಿರಿಯ ಭಾವನೆ ಹೊಂದಿರುವುದು.
  • ಅತಿ ವೇಗವಾಗಿ ಮಾತನಾಡುವುದು, ಒಂದು ವಿಚಾರದಿಂದ ಇನ್ನೊಂದಕ್ಕೆ ಥಟ್ಟನೆ ನೆಗೆಯುವುದು, ಆಲೋಚನೆಗಳಲ್ಲಿ ಸಮನ್ವಯತೆಯ ಕೊರತೆ.
  • ವಾಸ್ತವಿಕ ಪ್ರಜ್ಞೆಯನ್ನು ಕಳೆದುಕೊಳ್ಳುವುದು. ಇದು ಮನೋವಿಕೃತಿಗೆ ಕಾರಣವಾಗಬಹುದು (ಭ್ರಮೆಗಳು – ವಸ್ತುಗಳು ಅಲ್ಲಿರದಿದ್ದರೂ ನೋಡಿದಂತೆ ಭಾಸವಾಗುವುದು, ಯಾವುದೋ ಶಬ್ದ ಕೇಳಿಸಿದಂತೆ ಭ್ರಮೆಗೆ ಒಳಗಾಗುವುದು.)
  • ಅತಿಯಾದ ಸ್ವಾಭಿಮಾನ ಮತ್ತು ತಮ್ಮ ಸಾಮರ್ಥ್ಯದ ಕುರಿತಾಗಿ ಅಸಹಜ ನಂಬಿಕೆಗಳನ್ನು ಇರಿಸಿಕೊಳ್ಳುವುದು.
  • ಒಬೆಸ್ಸಿವ್ ಕಂಪಲ್ಸಿವ್ ಬಿಹೇವಿಯರ್- ವಸ್ತುಗಳನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸುವುದು ಅಥವಾ ಜೋಡಿಸುವುದು, ಕೇಳಿದ ಸಂಗೀತವನ್ನೇ ಅನೇಕ ದಿನಗಳ ಕಾಲ ಮತ್ತೆ ಮತ್ತೆ ಆಲಿಸುವುದು, ಇತರರ ಮೇಲೆ ಅಧಿಕಾರ ಚಲಾಯಿಸುವುದು ಅಥವಾ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗುವುದು.

ಖಿನ್ನತೆಯ ಹಂತ: ಖಿನ್ನತೆಯ ಹಂತದಲ್ಲಿ ವ್ಯಕ್ತಿಗಳು ಈ ಕೆಳಗಿನ ಲಕ್ಷಣಗಳನ್ನು ಅನುಭವಿಸಬಹುದು:

  • ತೀವ್ರ ದುಃಖ ಅಥವಾ ಹತಾಶೆಯ ಭಾವನೆ
  • ನಿರಾಶಾವಾದದ ಭಾವನೆ
  • ಈ ಮೊದಲು ಇಷ್ಟಪಡುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
  • ಅಶಕ್ತತೆ, ಬೇಗನೇ ಆಯಾಸಗೊಳ್ಳುವುದು ಮತ್ತು ಆಲಸ್ಯಭಾವನೆ
  • ನಿದ್ರೆಯ ತೊಂದರೆಗಳು; ಅತಿಯಾಗಿ ನಿದ್ರಿಸುವುದು ಅಥವಾ ನಿದ್ರೆಯನ್ನೇ ಮಾಡದಿರುವುದು
  • ಬದಲಾದ ಬಾಯಿರುಚಿ, ಸರಿಯಾಗಿ ತಿನ್ನಲು ಸಾಧ್ಯವಾಗದಿರುವುದು, ಪಥ್ಯ ಮಾಡದಿದ್ದರೂ ಗಣನೀಯವಾಗಿ ತೂಕ ಕಡಿಮೆಯಾಗುವುದು
  • ಏಕಾಗ್ರತೆಯ ಭಂಗ, ಯಾವುದಾದರೊಂದು ಸಂಗತಿಯನ್ನು ನೆನಪಿಸಿಕೊಳ್ಳಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುವುದು.
  • ತಮಗೇ ತಾವೇ ತೊಂದರೆ ಮಾಡಿಕೊಳ್ಳುವ, ಸಾವು ಅಥವಾ ಆತ್ಮಹತ್ಯೆಯ ಕುರಿತಾದ ಆಲೋಚನೆಗಳು

ಈ ರೀತಿಯ ಲಕ್ಷಣಗಳು ನಿಮ್ಮ ಪರಿಚಯದವರಲ್ಲಿ ಕಂಡುಬಂದಲ್ಲಿ, ಮಾನಸಿಕ ತಜ್ಞರನ್ನು ಭೇಟಿ ಮಾಡುವಂತೆ ಅವರನ್ನು ಪ್ರೇರೇಪಿಸಿ.

Q

ಬೈಪೋಲಾರ್ ಡಿಸಾರ್ಡರಿಗೆ ಕಾರಣಗಳೇನು?

A

ಬೈಪೋಲಾರ್ ಡಿಸಾರ್ಡರಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾಮಾನ್ಯವಾಗಿ ಈ ಖಾಯಿಲೆ ಹದಿಹರೆಯದಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ಆರಂಭವಾಗುತ್ತದೆ ಎಂದು ಗುರುತಿಸಲಾಗಿದೆ. ಈ ಖಾಯಿಲೆಯ ಕುರಿತಾಗಿ ಹೆಚ್ಚಿನ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣದಿಂದ ತಜ್ಞರ ಸಹಾಯವನ್ನು ಪಡೆಯುವದಕ್ಕೂ ಮುನ್ನ ದೀರ್ಘಕಾಲ ಬೈಪೋಲಾರ್ ಡಿಸಾರ್ಡರ್ ನಿಂದಾಗಿ ಯಾತನೆ ಅನುಭವಿಸುತ್ತಾರೆ.

ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನ, ವಂಶವಾಹಿ ತೊಂದರೆಗಳು, ದುಃಖಕಾರಕ ಸಂಗತಿಗಳಿಂದ ಉಂಟಾಗುವ ತೀವ್ರ ಆಘಾತ, ಡ್ರಗ್ಸ್ ಅಥವಾ ಮಾದಕದ್ರವ್ಯ ವ್ಯಸನಕ್ಕೆ ಒಳಗಾಗುವುದು, ಮುಂತಾದ ಅಂಶಗಳು ಬೈಪೋಲಾರ್ ಡಿಸಾರ್ಡರ್ ಗೆ ಕಾರಣವಾಗಬಹುದು. ತೀವ್ರವಾದ ಬುದ್ಧಿವಿಕಲ್ಪ ಅಥವಾ ಸ್ಕಿಜ಼ೋಫ್ರೇನಿಯ ಮುಂತಾದ ಮನೋವ್ಯಾಧಿಗಳೊಂದಿಗೆ ಕೂಡ ಬೈಪೋಲಾರ್ ಡಿಸಾರ್ಡರ್‌ ಕಾಣಿಸಿಕೊಳ್ಳಬಹುದು.

Q

ಬೈಪೋಲಾರ್ ಡಿಸಾರ್ಡರ್‌ ವಿಧಗಳು

A

ಮೂಲಭೂತವಾಗಿ ಬೈಪೋಲಾರ್ ಡಿಸಾರ್ಡರಿನಲ್ಲಿ ನಾಲ್ಕು ವಿಧಗಳಿವೆ:

  1. ಬೈಪೋಲಾರ್ ಡಿಸಾರ್ಡರ್ I : ಕನಿಷ್ಠ ಏಳು ದಿನಗಳ ಕಾಲ ಮುಂದುವರೆಯಬಹುದಾದ ಉನ್ಮಾದ ಅಥವಾ ಖಿನ್ನತೆಗಳ ಸಮ್ಮಿಶ್ರ ಸರಣಿಗಳು. ಉನ್ಮಾದದ ಲಕ್ಷಣಗಳು ತೀವ್ರಗೊಂಡರೆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಅದೇ ರೀತಿ ಸರಣಿಯಲ್ಲಿ ಸಂಭವಿಸುವ ಖಿನ್ನತೆಯ ಲಕ್ಷಣಗಳು ಕೂಡ ಕನಿಷ್ಠ ಎರಡು ವಾರಗಳ ಕಾಲ ಮುಂದುವರೆಯಬಹುದು.
  2. ಬೈಪೋಲಾರ್ ಡಿಸಾರ್ಡರ್ II : ಈ ಹಂತದಲ್ಲಿ ಖಿನ್ನತೆ ಮತ್ತು ಲಘು ಉನ್ಮಾದಗಳು ಒಟ್ಟಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ಪ್ರಬಲ ಉನ್ಮಾದದ ಲಕ್ಷಣ ಅಥವಾ ಖಿನ್ನತೆ ಇವೆರಡೂ ಜಂಟಿಯಾಗಿ ಸರಣಿರೂಪದಲ್ಲಿ ಕಂಡು ಬರುವುದಿಲ್ಲ.
  3. ಉಳಿದಂತೆ ನಿರ್ದಿಷ್ಟಪಡಿಸಿರದ ಬೈಪೋಲಾರ್ ಡಿಸಾರ್ಡರ್ (BP-NOS):  ರೋಗದ ಲಕ್ಷಣಗಳು ಇದ್ದಾಗ ರೋಗವನ್ನು ಪತ್ತೆ ಮಾಡಲಾಗುತ್ತದೆ. ಆದರೆ ಈ ಲಕ್ಷಣಗಳು ಬೈಪೋಲಾರ್ I ಅಥವಾ ಬೈಪೋಲಾರ್ II ಗಳ ಗುಣಲಕ್ಷಣಗಳಿಗೆ ಸರಿಹೊಂದಿರುವುದಿಲ್ಲ. ಆದಾಗ್ಯೂ, ಈ ಲಕ್ಷಣಗಳು ವ್ಯಕ್ತಿಗಳ ಸಾಮಾನ್ಯ ವರ್ತನೆಗಿಂತಲೂ ಹೊರತಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ.
  4. ಸೈಕ್ಲೋಥಿಮಿಕ್ ಡಿಸಾರ್ಡರ್ ಅಥವಾ ಸೈಕ್ಲೋಥಿಮಿಯಾ: ಕನಿಷ್ಟ ಎರಡು ವರ್ಷಗಳಿಂದ ವ್ಯಕ್ತಿಯಲ್ಲಿ ಇದ್ದಿರಬಹುದಾದ ಲಘು ಉನ್ಮಾದ ಮತ್ತು ಸ್ವಲ್ಪ ಮಟ್ಟಿನ ಖಿನ್ನತೆಗಳಿಂದ ಕೂಡಿದ ಬೈಪೋಲಾರ್ ಡಿಸಾರ್ಡರಿನ ಲಘುಸ್ವರೂಪವೇ ಸೈಕ್ಲೋಥಿಮಿಕ್ ಡಿಸಾರ್ಡರ್ ಅಥವಾ ಸೈಕ್ಲೋಥಿಮಿಯಾ ಖಾಯಿಲೆ.

Q

ಬೈಪೋಲಾರ್ ಡಿಸಾರ್ಡರಿನ ಜೊತೆಗೆ ಕಾಣಿಸಿಕೊಳ್ಳುವ ಖಾಯಿಲೆಗಳು

A

ಕೆಲವು ಸಂಧರ್ಭಗಳಲ್ಲಿ ಬೈಪೋಲಾರ್ ಡಿಸಾರ್ಡರ್ ಜೊತೆ ಸ್ಕಿಜ಼ೋಫ್ರೇನಿಯ ಅಥವಾ ತೀವ್ರ ಸ್ವರೂಪದ ಖಿನ್ನತೆಯಂತಹ ಕೆಲವು ಅಸ್ವಸ್ಥತೆಗಳು ಕಂಡುಬರಬಹುದು. ಬೈಪೋಲಾರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗಳಲ್ಲಿ ಥೈರಾಯಿಡ್, ಮಧುಮೇಹ ಅಥವಾ ಇತರ ಕೆಲವು ಮಾನಸಿಕ ಖಾಯಿಲೆಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ.

Q

ಬೈಪೋಲಾರ್ ಡಿಸಾರ್ಡರ್‌ನ್ನು ಪತ್ತೆ ಮಾಡುವುದು ಹೇಗೆ?

A

ಸ್ಕಿಜ಼ೋಫ್ರೇನಿಯ, ಖಿನ್ನತೆ ಹಾಗೂ ಬೈಪೋಲಾರ್‌ ಡಿಸಾರ್ಡರ್‌ ರೋಗ ಲಕ್ಷಣಗಳು ಒಂದೇ ತೆರನಾಗಿರುವುದರಿಂದ ಸಾಮಾನ್ಯವಾಗಿ ಸ್ಕಿಜ಼ೋಫ್ರೇನಿಯ ಮತ್ತು ಖಿನ್ನತೆಗಳಿಗೆ ಬದಲಾಗಿ ಬೈಪೋಲಾರ್‌ ಡಿಸಾರ್ಡರ್ ಎಂದು ನಿರ್ಧಾರಕ್ಕೆ ಬರುವ ಸಂಭವವಿದೆ. ಅಸಹಜವಾದ ಚಿತ್ತ ಚಾಂಚಲ್ಯ (ಉನ್ಮಾದ ಅಥವಾ ಲಘು ಹುಚ್ಚು) ಬೈಪೋಲಾರ್ ಡಿಸಾರ್ಡರ್‌ನ ಪ್ರಮುಖವಾದ ಲಕ್ಷಣವಾಗಿದೆ.

ಪರಿಸ್ಥಿತಿಯನ್ನು ಸರಿಯಾಗಿ ಪತ್ತೆಮಾಡಲು ಹಾಗೂ ಈ ಲಕ್ಷಣಗಳನ್ನು ಉಂಟು ಮಾಡಬಹುದಾದ ಇನ್ನಿತರ ಒಳ ಸಮಸ್ಯೆಗಳನ್ನು ಕಂಡು ಹಿಡಿಯಲು ಮಾನಸಿಕ ಆರೋಗ್ಯ ತಜ್ಞರು, ಅನೇಕ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ಕೈಗೊಳ್ಳುತ್ತಾರೆ. ಖಾಯಿಲೆಯ ತೀವ್ರತೆಯನ್ನು ನಿರ್ಧರಿಸಲು, ವೈದ್ಯರು ರೋಗಿಗಳ ಹತ್ತಿರ, ಅವರ ಮನಸ್ಥಿತಿ ಬದಲಾಗುವ ಕುರಿತು, ನಿದ್ರೆಯ ಕುರಿತು ಮತ್ತು ದೈನಂದಿನ ಚಟುವಟಿಕೆಗಳ ಕುರಿತು ಪ್ರತಿದಿನವೂ ದಾಖಲಿಸಿಕೊಳ್ಳುವಂತೆ ತಿಳಿಸುತ್ತಾರೆ. ಇದು ಸೂಕ್ತ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಮನೋವೈದ್ಯರು ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ದುಗುಡಗಳನ್ನು ಪರೀಕ್ಷಿಸುತ್ತಾರೆ. ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅವರ ಕುಟುಂಬದ ಸದಸ್ಯರೊಂದಿಗೆ ಕೂಡ ಚರ್ಚಿಸಬಹುದು. ರೋಗದ ತೀವ್ರತೆಯನ್ನು ತಿಳಿಯಲು ಮನೋವೈಜ್ಞಾನಿಕ ಸೆಲ್ಫ್ ಅಸೆಸ್‌ಮೆಂಟ್ ಟೆಸ್ಟ್ ಕೂಡ ಮಾಡಬಹುದು.

Q

ಬೈಪೋಲಾರ್ ಡಿಸಾರ್ಡರ್‌ ಚಿಕಿತ್ಸಾ ವಿಧಾನ

A

ಹೃದಯ ತೊಂದರೆ ಅಥವಾ ಮಧುಮೇಹದ ತೊಂದರೆಗಳಂತೆ ಬೈಪೋಲಾರ್ ಡಿಸಾರ್ಡರ್‌ ಕೂಡ ಒಂದು ದೀರ್ಘಕಾಲೀನ ಖಾಯಿಲೆಯಾಗಿದ್ದು ಜೀವನ ಪರ್ಯಂತ ಇದನ್ನು ನಿರ್ವಹಿಸಿ ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆಯಿದೆ. ಸೂಕ್ತ ರೋಗ ನಿರ್ಣಯ ಮತ್ತು ಚಿಕಿತ್ಸೆಯಿಂದ ವ್ಯಕ್ತಿಗಳು ಉತ್ತಮವಾದ ಮತ್ತು ಆರೋಗ್ಯಯುತ ಜೀವನ ನಡೆಸಬಹುದು. ಚಿಕಿತ್ಸೆಯು ರೋಗ ಲಕ್ಷಣಗಳ ತೀವ್ರತೆ ಮತ್ತು ಮರುಕಳಿಸುವಿಕೆಯನ್ನು ಕಡಿಮೆ ಮಾಡುತ್ತದೆ.

ಔಷಧ, ಥೆರಪಿ (ಕಾಗ್ನಿಟಿವ್ ಬಿಹೇವಿಯರ್ ಥೆರಪಿ) ಮತ್ತು ಸಲಹೆಗಳ ಸಂಯೋಜನೆಯ ಚಿಕಿತ್ಸಾವಿಧಾನವು ಬೈಪೋಲಾರ್ ಡಿಸಾರ್ಡರಿಗೆ ಪರಿಣಾಮಕಾರಿಯಾದ ನಿಯಂತ್ರಣ ವಿಧಾನವಾಗಿದೆ. ವ್ಯಕ್ತಿಗಳ ವಯಸ್ಸು, ವೈದ್ಯಕೀಯ ವರದಿ, ಅಸ್ವಸ್ಥತೆಯ ತೀವ್ರತೆ ಅಥವಾ ವ್ಯಕ್ತಿಗಳು ಔಷಧಗಳನ್ನು ಸಹಿಸಿಕೊಳ್ಳುವ ಅಂಶಗಳ ಆಧಾರದ ಮೇಲೆ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ನಿರ್ದಿಷ್ಟ ಪಡಿಸಲಾಗುತ್ತದೆ.

ಚಿಕಿತ್ಸೆಯನ್ನು ಪಡೆಯದೇ ಇರುವುದು ಅಥವಾ ಪಡೆಯುತ್ತಿರುವ ಚಿಕಿತ್ಸೆ ಹಾಗೂ ಔಷಧವನ್ನು ಅರ್ಧಕ್ಕೆ ನಿಲ್ಲಿಸಿದರೆ, ಖಾಯಿಲೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಜೊತೆಗೆ ರೋಗ ಮರುಕಳಿಸುವ ಸಾಧ್ಯತೆಯು ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ರೋಗ ಲಕ್ಷಣಗಳು ಮತ್ತೆ ಕಾಣಿಸಿಕೊಳ್ಳಬಹುದು. ಇದು ವ್ಯಕ್ತಿಗಳಿಗೆ ತಿಳಿಯದೆ ಇರಬಹುದು ಅಥವಾ ನಿಯಂತ್ರಣ ಸಾಧ್ಯವಾಗದೇ ಇರಬಹುದು.

ಚಿಕಿತ್ಸೆಯ ಪ್ರಮುಖ ಉದ್ದೇಶ:

  • ಖಾಯಿಲೆಯ ಪುನರಾವರ್ತನೆ ಮತ್ತು ತೀವ್ರತೆಯನ್ನು ಕಡಿಮೆ ಮಾಡುವುದು
  • ವ್ಯಕ್ತಿ ತನ್ನ ದೈನಂದಿನ ಚಟುವಟಿಕೆಗಳನ್ನು ಮತ್ತು ಮನೆ ಹಾಗೂ ಹೊರಗಿನ ಕೆಲಸವನ್ನು ಸೂಕ್ತವಾಗಿ ಮತ್ತು ಸಂತೋಷದಿಂದ ನಿರ್ವಹಿಸುವಂತೆ ಸಾಧ್ಯವಾಗಿಸುವುದು.
  • ಸ್ವಯಂ ಹಾನಿ ಮತ್ತು ಅತ್ಮಹತ್ಯೆಯ ಯೋಚನೆಯನ್ನು ತಡೆಯುವುದು

ಸೂಚನೆ: ಖಿನ್ನತೆ ಮತ್ತು ಸ್ಕಿಜ಼ೋಫ್ರೇನಿಯ ಖಾಯಿಲೆಗಳಲ್ಲಿ ಕೂಡ ಈ ಮೇಲೆ ಹೇಳಲಾದ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ, ಮನೋವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಹಾಗೂ ಅವರು ವಿಧಿಸುವ ಚಿಕಿತ್ಸಾಕ್ರಮವನ್ನು ಪಡೆಯುವುದು ಅತ್ಯಂತ ಪ್ರಮುಖವಾದ ವಿಷಯವಾಗಿದೆ.

ಗಮನಿಸಿ: ಬೈಪೋಲಾರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಅವಶ್ಯಕ.

Q

ಬೈಪೋಲಾರ್ ಡಿಸಾರ್ಡರ್‌ನ ನಿರ್ವಹಣೆ

A

ಬೈಪೋಲಾರ್ ಡಿಸಾರ್ಡರ್ ನಿಮ್ಮ ಜೀವನದ ಎಲ್ಲ ಅಂಶಗಳ ಮೇಲೆಯೂ ಪರಿಣಾಮ ಬೀರಬಹುದು. ಆದ್ದರಿಂದ ನಿಮಗೆ ಬೈಪೋಲಾರ್ ಡಿಸಾರ್ಡರ್ ಇದೆ ಎನ್ನುವ ವಾಸ್ತವ ಅಂಶವನ್ನು ಒಪ್ಪಿಕೊಂಡು, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವುದರಿಂದ ನಿಮಗೆ ಸಮಸ್ಯೆಯನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಹಾಯವಾಗುತ್ತದೆ.

ನೀವು ಈ ರೀತಿಯಾಗಿ ಮಾಡಬಹುದು:

  • ಮಾನಸಿಕ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು.
  • ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಔಷಧವನ್ನು ಸರಿಯಾಗಿ ತೆಗೆದುಕೊಳ್ಳುವುದು.
  • ಆರೋಗ್ಯಕರ ಜೀವನವನ್ನು ನಡೆಸಲು ಸತ್ವಯುತ ಆಹಾರವನ್ನು ತೆಗೆದುಕೊಳ್ಳುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳುವುದು.
  • ನಿಮ್ಮ ಮಾನಸಿಕ ಸ್ಥಿತಿಯ ಕುರಿತು ಜಾಗರೂಕರಾಗಿರುವುದು ಮತ್ತು ರೋಗ ಲಕ್ಷಣಗಳನ್ನು ಪ್ರಚೋದಿಸುವ ಅಂಶಗಳನ್ನು ಗುರುತಿಸುವುದು
  • ನಿಮ್ಮ ಆರೈಕೆದಾರರಾದ ಕುಟುಂಬದವರು ಹಾಗೂ ಸ್ನೇಹಿತರ ಸಹಾಯವನ್ನು ಒಪ್ಪಿಕೊಳ್ಳಿ ಹಾಗೂ ಅವರ ಬೆಂಬಲವನ್ನು ಗೌರವಿಸಿ
  • ಬೆಂಬಲ ಗುಂಪಿಗೆ (support group) ಸೇರಿಕೊಳ್ಳಿ. ನಿಮ್ಮದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳೊಂದಿಗೆ ಚರ್ಚಿಸಿ. ಆ ರೀತಿಯ ಮಾತುಕತೆಯು ನಿಮಗೆ ಸ್ಫೂರ್ತಿ ನೀಡುತ್ತದೆ, ನೈತಿಕ ಬೆಂಬಲ ಸಿಗುತ್ತದೆ, ಮತ್ತು ಸಮಸ್ಯೆಯನ್ನು ನಿಯಂತ್ರಣ ಮಾಡಲು ಸಹಕರಿಸುತ್ತದೆ.

Q

ಬೈಪೋಲಾರ್ ಡಿಸಾರ್ಡರ್‌ ತೊಂದರೆ ಅನುಭವಿಸುತ್ತಿರುವವರ ಆರೈಕೆ

A

ನಿಮ್ಮ ಪರಿಚಯದವರಲ್ಲಿ ಯಾರಾದರೂ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿದ್ದರೆ, ಮನೋವೈದ್ಯರನ್ನು ಭೇಟಿ ಮಾಡಲು ಅವರನ್ನು ಪ್ರೇರೇಪಿಸಿ ಮತ್ತು ಚಿಕಿತ್ಸೆ ಕೊಡಿಸಿ. ತಮಗೆ ಸಮಸ್ಯೆ ಇದೆ ಎನ್ನುವುದನ್ನು ವ್ಯಕ್ತಿಯು ಒಪ್ಪಿಕೊಳ್ಳದಿರಬಹುದು. ಆ ಸಂದರ್ಭದಲ್ಲಿ ನೀವು ಮೊದಲು ವೈದ್ಯರನ್ನು ಭೇಟಿ ಮಾಡಿ, ನಂತರ ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ.

ನೀವು ಈ ರೀತಿಯಾಗಿ ಮಾಡಬಹುದು:

  • ವ್ಯಕ್ತಿಯೊಂದಿಗೆ ಮಾತನಾಡುವಾಗ ತಾಳ್ಮೆಯಿಂದ ಹಾಗೂ ಆತ್ಮೀಯವಾಗಿ ವರ್ತಿಸಿ. ನಿಮ್ಮ ತಾಳ್ಮೆಯು ವ್ಯಕ್ತಿಯ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು.

  • ಅವರ ದೈನಂದಿನ ಚಟುವಟಿಕೆಗಳನ್ನು ನಿಯಮಿತವಾಗಿ ಕೈಗೊಳ್ಳುವಂತೆ ಒಂದು ಚಟುವಟಿಕೆ ಯೋಜನೆಯನ್ನು ಅನುಸರಿಸಲು ವ್ಯಕ್ತಿಯನ್ನು ಹುರಿದುಂಬಿಸಿ. ಇದು ರೋಗ ಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಅವರಿಗೆ ಸಹಾಯ ಮಾಡುತ್ತದೆ.

  • ಉನ್ಮಾದ ಹಾಗೂ ಖಿನ್ನತೆಯೊಂದಿಗೆ ಕೂಡಿದ ಬೈಪೋಲಾರ್ ಡಿಸಾರ್ಡರ್‌ನ ಸರಣಿಯು ಹೆಚ್ಚು ಕಿರಿಕಿರಿ ಹಾಗೂ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ ಯಾವ ಸಂಗತಿಗಳು ಅವರಿಗೆ ಅಪಾಯವನ್ನು ಮಾಡಬಹುದು ಎಂದು ಗುರುತಿಸಿ , ಅಂಥ ಸಂಧರ್ಭಗಳಿಂದ ಅವರನ್ನು ದೂರವಿರಿಸಲು ಪ್ರಯತ್ನಿಸಿ. ಉದಾಹರಣೆಗೆ, ನಿಯಮರಹಿತ ಆಹಾರ ಸೇವನೆ, ನಿದ್ರೆಯ ರೂಢಿ ಅಥವಾ ಸುಲಭವಾಗಿ ಹಣ ಕೈಗೆಟಕುವುದು ಇತ್ಯಾದಿ.

  • ವ್ಯಕ್ತಿಯು ಬೈಪೋಲಾರ್ ಸಿಮ್ಟಮ್ ಅನುಭವಿಸಿ ಸ್ವಲ್ಪ ಹೊತ್ತಿನ ನಂತರ ಎಂದಿನ ಸ್ಥಿತಿಗೆ ತೆರಳಿದರೆ ತನ್ನ ಅನುಚಿತ ವರ್ತನೆ ಮತ್ತು ಖಾಯಿಲೆಯ ಕಾರಣದ ಅಪಾಯಕಾರಿ ನಡುವಳಿಕೆಯ ಕುರಿತಾಗಿ ನಾಚಿಕೆಗೊಳ್ಳಬಹುದು ಮತ್ತು ತಪ್ಪಿತಸ್ಥ ಭಾವನೆಯಿಂದ ನರಳಬಹುದು. ಇಂಥ ಸಮಯದಲ್ಲಿ ತಾಳ್ಮೆಯಿಂದ ಅವರನ್ನು ಸಂತೈಸಿ. ಅವರ ವರ್ತನೆ ಖಾಯಿಲೆಯ ಕಾರಣದಿಂದ ಉಂಟಾಗಿದ್ದಾಗಿಯೂ, ಉದ್ದೇಶ ಪೂರಿತವಾಗಿ ಮಾಡಿದ್ದಲ್ಲವೆಂದೂ ಅವರಿಗೆ ಮನದಟ್ಟು ಮಾಡಿಸಿ.

  • ವ್ಯಕ್ತಿಯು ನಿಯಮಿತವಾದ ಚಿಕಿತ್ಸೆಯಿಂದ ಗುಣಮುಖನಾಗಬಹುದು ಮತ್ತು ಎಂದಿನ ಜೀವನವನ್ನು ನಡೆಸಬಹುದು ಎಂದು ಆಶ್ವಾಸನೆ ನೀಡಿ ಹಾಗೂ ಅವರಲ್ಲಿ ಧೈರ್ಯ ತುಂಬಿ.

  • ವ್ಯಕ್ತಿಯು ಸ್ವಯಂ ಹಾನಿ ಹಾಗೂ ಆತ್ಮಹತ್ಯೆಯ ಕುರಿತು ಮಾತನಾಡಿದರೆ ಎಚ್ಚರಿಕೆಯಿಂದ ಅವರನ್ನು ಗಮನಿಸುತ್ತಿರಿ ಅಥವಾ ಆ ರೀತಿಯಾಗಿ ವರ್ತಿಸಿದರೆ ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಿ.

Q

ಆರೈಕೆದಾರರ ಆರೋಗ್ಯ

A

ಆರೈಕೆದಾರರು ಕೂಡ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಒಳಗಾಗುತ್ತಾರೆ. ಬಹುತೇಕವಾಗಿ ಮಹಿಳಾ ಆರೈಕೆದಾರರು ಪುರುಷರಿಗಿಂತಲೂ ಹೆಚ್ಚು ಒತ್ತಡ, ದಣಿವು ಮತ್ತು ತಲ್ಲಣಗಳನ್ನು ಅನುಭವಿಸುತ್ತಾರೆ. ಈ ಕಾರಣಗಳಿಗಾಗಿ ಅವರಲ್ಲಿ ಖಿನ್ನತೆಯುಂಟಾಗುವ ಅಪಾಯವಿದೆ. ಆರೈಕೆದಾರರು ಅವರ ಪ್ರೀತಿಪಾತ್ರರ ಆರೈಕೆಗೆ ಎಷ್ಟು ಕಾಳಜಿ ವಹಿಸುತ್ತಾರೆಂದರೆ ಅವರ ಸ್ವಂತ ಜೀವನದ ಬಗ್ಗೆ ಲಕ್ಷ್ಯ ವಹಿಸುವುದನ್ನೂ ಮರೆತುಬಿಡುತ್ತಾರೆ.

ಆರೈಕೆದಾರರಾಗಿ, ಒಂದೊಮ್ಮೆ ನೀವು ಈ ಕೆಳಗಿನಂತೆ ವರ್ತಿಸತೊಡಗಿದರೆ ನಿಮಗೆ ಸಹಾಯದ ಅವಶ್ಯಕತೆಯಿರುತ್ತದೆ.

  • ರೋಗಿಯ ಆರೈಕೆ ಮಾಡುತ್ತ ಕ್ರಮೇಣ ನೀವು ಮೊದಲಿನಷ್ಟು ಶಕ್ತಿಯುತವಾಗಿಲ್ಲ ಅಥವಾ ಚಟುವಟಿಕೆಯಿಂದ ಕೂಡಿಲ್ಲ ಎಂದು ನಿಮಗೆ ಅನಿಸುತ್ತಿರಬಹುದು.

  • ಮತ್ತೆ ಮತ್ತೆ ಜ್ವರ, ಕೆಮ್ಮು, ಶೀತ, ತಲೆನೋವಿನಿಂದ ನೀವು ಕಷ್ಟಪಡುತ್ತಿರುವುದು

  • ಕೆಲ ಸಮಯದ ನಿದ್ರೆ ಅಥವಾ ವಿಶ್ರಾಂತಿಯ ನಂತರವೂ ನಿರಂತರವಾದ ದಣಿವು ಕಾಣಿಸಿಕೊಂಡರೆ

  • ಹೆಚ್ಚಿನದಾಗಿ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ನಿಮ್ಮ ಸ್ವಂತ ಅಗತ್ಯಗಳನ್ನು ಅಲಕ್ಷಿಸತೊಡಗಿದರೆ

  • ಯಾವಾಗಲೂ ನೀವು ಇತರರ ಆರೈಕೆಯ ಕುರಿತಾಗಿಯೇ ಆಲೋಚಿಸುತ್ತೀರಿ, ಅದು ನಿಮಗೆ ಕೊಂಚ ತೃಪ್ತಿಯನ್ನು ನೀಡುತ್ತದೆ ಎಂದು ನಿಮಗೆ ಅನಿಸತೊಡಗಿದರೆ

  • ಇತರರ ಸಹಾಯ ದೊರೆತಾಗಲೂ ವಿಶ್ರಾಂತಿ ತೆಗೆದುಕೊಳ್ಳಲು ತೊಂದರೆ ಎನಿಸುವುದು.

  • ನೀವು ಆರೈಕೆ ಮಾಡುತ್ತಿರುವ ವ್ಯಕ್ತಿಯೊಂದಿಗೆ ಮತ್ತು ಇತರರೊಂದಿಗೆ ನಿಮ್ಮ ತಾಳ್ಮೆ ಕಳೆದುಕೊಂಡು ಸಿಟ್ಟಿನಿಂದ ವರ್ತಿಸಿದರೆ

  • ಭಾವಪರವಶತೆ, ಅಸಹಾಯಕತೆ ಮತ್ತು ಹತಾಶೆಯ ಭಾವನೆ ಅನುಭವಿಸ ತೊಡಗಿದರೆ

ಈ ಎಲ್ಲ ಕಾರಣಗಳಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಅತಿ ಅವಶ್ಯ. ಈ ಕೆಳಗಿನೆ ಸಲಹಾಸೂತ್ರಗಳು ನಿಮಗೆ ಪ್ರಯೋಜನಕಾರಿಯಾಗುತ್ತದೆ:

  • ಸೂಕ್ತ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ.

  • ಪ್ರತಿನಿತ್ಯ ತಪ್ಪದೇ ವ್ಯಾಯಾಮವನ್ನು ಮಾಡಿ.

  • ಒತ್ತಡ ಕಡಿಮೆ ಮಾಡುವ ವಿಧಾನಗಳನ್ನು ತಿಳಿದುಕೊಳ್ಳಿ ಮತ್ತು ಅನುಸರಿಸಿ.

  • ತಪ್ಪಿತಸ್ಥ ಭಾವನೆಯನ್ನು ಬೆಳೆಸಿಕೊಳ್ಳದೆ, ನಿಮ್ಮ ಸ್ವಂತ ಜೀವನದ ಅಗತ್ಯಗಳಿಗೆ ಸಮಯ ಸಮಯ ನೀಡಿ.

  • ನಿಮಗೆ ಸಂತೋಷ ಹಾಗೂ ಸಮಾಧಾನ ನೀಡುವಂತಹ ಯಾವುದಾದರೂ ಹವ್ಯಾಸ ಅಥವಾ ಚಟುವಟಿಕೆಯನ್ನು ರೂಢಿಸಿಕೊಳ್ಳಿ.

  • ಅವಶ್ಯವಿರುವಾಗ ಕುಟುಂಬದವರ ಮತ್ತು ಸ್ನೇಹಿತರ ಸಹಾಯವನ್ನು ಕೇಳಿ ಪಡೆದುಕೊಳ್ಳಿ.

  • ನಂಬಿಗಸ್ಥ ಸಲಹೆಗಾರರಲ್ಲಿ ಅಥವಾ ಸ್ನೇಹಿತರಲ್ಲಿ ನಿಮ್ಮ ಆಲೋಚನೆ ಹಾಗೂ ಭಾವನೆ ಅನಿಸಿಕೆಗಳನ್ನು ಹೇಳಿಕೊಳ್ಳಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org