ಡೌನ್ ಸಿಂಡ್ರೋಮ್

Q

ಏನಿದು ಡೌನ್ ಸಿಂಡ್ರೋಮ್?

A

ಡೌನ್ ಸಿಂಡ್ರೋಮ್ ಒಂದು ಆನುವಂಶಿಕ ಖಾಯಿಲೆ ಅಥವಾ ವರ್ಣತಂತುವಿನಲ್ಲಿ ಕಂಡುಬರುವ ಅಸ್ವಸ್ಥತೆ. ದೇಹದಲ್ಲಿ ಒಂದು ಜೊತೆ ವರ್ಣತಂತುಗಳು ಹೆಚ್ಚಾಗಿ ಇರುವ ಕಾರಣಕ್ಕೆ ಉಂಟಾಗುವ ಇದು ಜೀವಮಾನವಿಡೀ ಕಾಡುವ ಖಾಯಿಲೆ. ಸಾಮಾನ್ಯವಾಗಿ, ಮಗುವೊಂದು 46 ವರ್ಣತಂತುಗಳೊಂದಿಗೆ ಜನಿಸುತ್ತದೆ. ಮಗುವೊಂದು ಆನುವಂಶಿಕವಾಗಿ, ತಂದೆಯಿಂದ 23 ವರ್ಣತಂತುಗಳ ಸಮೂಹ ಮತ್ತು ತಾಯಿಯಿಂದ 23 ವರ್ಣತಂತುಗಳ ಸಮೂಹವನ್ನು ಪಡೆದುಕೊಳ್ಳುತ್ತದೆ. ಡೌನ್ ಸಿಂಡ್ರೋಮ್ ಹೊಂದಿರುವ ಮಗು 21ನೆಯ ವರ್ಣತಂತುವಿನ ಹೆಚ್ಚಿನ ಜೋಡಿಯೊಂದನ್ನು ಹೊಂದಿರುತ್ತದೆ. ಇದರಿಂದಾಗಿ ಎಲ್ಲ ಸೇರಿ ಒಟ್ಟೂ 47 ವರ್ಣತಂತುಗಳಾಗುತ್ತವೆ. ಆನುವಂಶಿಕವಾದ ಈ ವ್ಯತ್ಯಾಸದಿಂದಾಗಿ ದೈಹಿಕ ಬೆಳವಣಿಗೆ ಹಾಗೂ ಮೆದುಳಿನ ಅಭಿವೃದ್ಧಿಯಲ್ಲಿ ಹಿನ್ನಡೆಯುಂಟಾಗುತ್ತದೆ. ಇದರಿಂದಾಗಿ ಲಘು ಅಥವಾ ಮಧ್ಯಮ ಪ್ರಮಾಣದ ಬೌದ್ಧಿಕ ಅಸಾಮರ್ಥ್ಯ ಉಂಟಾಗಬಹುದು.

ಈ ರೀತಿಯ ಅಧಿಕ ಪ್ರತಿಯ ವರ್ಣತಂತುವನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರಿಸೋಮಿ’ ಎನ್ನುತ್ತಾರೆ. ಆದ್ದರಿಂದ ಡೌನ್ ಸಿಂಡ್ರೋಮನ್ನು ‘ಟ್ರಿಸೋಮಿ 21’ ಎಂದು ಕೂಡ ಕರೆಯಲಾಗುತ್ತದೆ. 

Q

ಡೌನ್ ಸಿಂಡ್ರೋಮಿನ ಲಕ್ಷಣಗಳಾವವು?

A

ಡೌನ್ ಸಿಂಡ್ರೋಮಿನ ಲಕ್ಷಣಗಳು ಮತ್ತು ತೀವ್ರತೆ ಒಂದು ಮಗುವಿಗಿಂತ ಇನ್ನೊಂದು ಮಗುವಿನಲ್ಲಿ ಭಿನ್ನವಾಗಿರಬಹುದು. ಕೆಲವು ಮಕ್ಕಳು ತುಂಬ ಆರೋಗ್ಯವಂತವಾಗಿದ್ದರೆ, ಇನ್ನುಳಿದವರು ದೈಹಿಕ ಅಥವಾ ಬೌದ್ಧಿಕ ಬೆಳವಣಿಗೆಯಲ್ಲಿ ಗಂಭೀರ ಸಮಸ್ಯೆಗಳನ್ನು ಹೊಂದಿರಬಹುದು.

ಸಾಮಾನ್ಯವಾದ ದೈಹಿಕ ಬೆಳವಣಿಗೆಯನ್ನು ಹೊಂದಿರುವ ಮಕ್ಕಳಿಗೆ ಹೋಲಿಸಿದಲ್ಲಿ ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳ ಬೆಳವಣಿಗೆಯ ಹಂತಗಳು ನಿಧಾನಗತಿಯವಾಗಿರುತ್ತವೆ.

ಡೌನ್ ಸಿಂಡ್ರೋಮ್ ನ ಕೆಲವು ಸಾಮಾನ್ಯ ಲಕ್ಷಣಗಳು ಇಂತಿವೆ:

  • ಚಪ್ಪಟೆಯಾದ ಮುಖ. ವಿಶೇಷವಾಗಿ ಮೂಗಿನ ಏಣು.

  • ಮೇಲ್ಗಡೆಗೆ ವಾಲಿರುವ ಕಣ್ಣುಗಳು.

  • ಗಿಡ್ಡ ಕುತ್ತಿಗೆ ಮತ್ತು ಚಿಕ್ಕ ಕಿವಿಗಳು.

  • ಬಾಯಿಂದ ಮುಂಚಾಚಿದಂತೆ ತೋರುವ ನಾಲಿಗೆ.

  • ಸದೃಢವಲ್ಲದ ಮಾಂಸಖಂಡಗಳು, ಸಡಿಲವಾದ ಕೀಲುಗಳು ಮತ್ತು ಅತಿಯಾದ ಬಾಗುವಿಕೆ.

  • ಅಗಲವಾದ, ಚಿಕ್ಕದಾದ ಬೆರಳುಗಳು, ಚಿಕ್ಕ ಕೈಗಳು ಮತ್ತು ಪಾದಗಳು.

  • ಕುಬ್ಜತೆ

  • ಕಣ್ಣಿನ ಪಾಪೆಯಲ್ಲಿ ಚಿಕ್ಕಚಿಕ್ಕ ಬಿಳಿಬಣ್ಣದ ಚುಕ್ಕೆಗಳು 

Q

ಡೌನ್ ಸಿಂಡ್ರೋಮ್ ಉಂಟಾಗಲು ಕಾರಣವೇನು?

A

ದೇಹದಲ್ಲಿ ಅಸ್ವಾಭಾವಿಕ ಸಂಖ್ಯೆಯ ವರ್ಣತಂತುಗಳು ಇದ್ದಾಗ ಡೌನ್ ಸಿಂಡ್ರೋಮ್ ಉಂಟಾಗುತ್ತದೆ. ಸಾಮಾನ್ಯವಾಗಿ, ವ್ಯಕ್ತಿಯೋರ್ವನು 46 ವರ್ಣತಂತುಗಳನ್ನು ಹೊಂದಿರುತ್ತಾನೆ. ಆದರೆ, ಡೌನ್ ಸಿಂಡ್ರೋಮ್ ಹೊಂದಿರುವ ಮಗು 47 ವರ್ಣತಂತುಗಳನ್ನು ಹೊಂದಿರುತ್ತದೆ. ಈ ಅಧಿಕತಮ ಜೋಡಿ ವರ್ಣತಂತುಗಳು ದೈಹಿಕ ಬೆಳವಣಿಗೆ ಮತ್ತು ಮೆದುಳಿನ ಅಭಿವೃದ್ಧಿಯನ್ನು ಪ್ರಭಾವಿಸುತ್ತವೆ.

ಟಿಪ್ಪಣಿ: ವಾತಾವರಣದ ಪರಿಣಾಮವಾಗಿ, ಜನಾಂಗೀಯ, ಸಾಂಸ್ಕೃತಿಕ ಅಥವಾ ಬೌದ್ಧಿಕ ಅಂಶಗಳ ಕಾರಣಗಳಿಗಾಗಿ ಡೌನ್ ಸಿಂಡ್ರೋಮ್ ಉಂಟಾಗುವುದಿಲ್ಲ.

ಕೆಳಗೆ ಹೇಳಲಾದ ಯಾವುದೇ ಒಂದು ಆನುವಂಶಿಕ ವ್ಯತ್ಯಯಗಳು ಡೌನ್ ಸಿಂಡ್ರೋಮಿಗೆ ಕಾರಣವಾಗಬಹುದು.

  • ಟ್ರಿಸೋಮಿ 21 – ದೇಹದಲ್ಲಿರುವ 21ನೆಯ ವರ್ಣತಂತುವಿನ ಅಧಿಕತಮ ಪ್ರತಿಯನ್ನು ವ್ಯಾಖ್ಯಾನಿಸಲು ಬಳಸಲಾಗುವ ವೈದ್ಯಕೀಯ ಪರಿಭಾಷೆ ‘ಟ್ರಿಸೋಮಿ 21’. ದೇಹದ ಎಲ್ಲ ಜೀವಕೋಶಗಳಲ್ಲಿ ಈ 21ನೆಯ ವರ್ಣತಂತುವಿನ ಅಧಿಕತಮ ಪ್ರತಿಯ ಉಪಸ್ಥಿತಿಯಿಂದಾಗಿ 95 ಪ್ರತಿಶತ ಡೌನ್ ಸಿಂಡ್ರೋಮ್ ಕೇಸುಗಳು ಉಂಟಾಗುತ್ತವೆ ಎಂದು ಅಂದಾಜಿಸಲಾಗಿದೆ.

  • ಮೊಸಾಯಿಕ್ ಡೌನ್ ಸಿಂಡ್ರೋಮ್ – ಇದೊಂದು ಬಲು ಅಪರೂಪದ ಪರಿಸ್ಥಿತಿ. ಈ ಕೇಸುಗಳಲ್ಲಿ ಕೆಲವೇ ಕೆಲವು ಜೀವಕೋಶಗಳು 21ನೆಯ ವರ್ಣತಂತುವಿನ ಅಧಿಕತಮ ಪ್ರತಿಯನ್ನು ಹೊಂದಿರುತ್ತವೆ. ಫಲವಂತಿಕೆಯ ನಂತರ ನಡೆಯುವ ಜೀವಕೋಶ ವಿಭಜನೆಯಿಂದಾಗಿ ಕೆಲವು ಸ್ವಾಭಾವಿಕ ಮತ್ತೆ ಕೆಲವು ಅಸ್ವಾಭಾವಿಕ ಜೀವಕೋಶಗಳು ರೂಪುಗೊಳ್ಳುತ್ತವೆ.
  • ಟ್ರಾನ್ಸ್ ಲೊಕೇಶನ್ ಡೌನ್ ಸಿಂಡ್ರೋಮ್ – ಈ ಸ್ಥಿತಿಯಲ್ಲಿ, 21ನೆಯ ವರ್ಣತಂತುವಿನ ಕೆಲ ಭಾಗ ಬೇರೆಯಾಗುತ್ತದೆ ಮತ್ತು ಇನ್ನೊಂದು ವರ್ಣತಂತುವಿಗೆ ಸೇರಿಕೊಳ್ಳುತ್ತದೆ. ಈ ರೀತಿಯಲ್ಲಿ ಮಾತ್ರ ಪಾಲಕರಿಂದ ಮಗುವಿಗೆ ಈ ಖಾಯಿಲೆ ವರ್ಗಾವಣೆಗೊಳ್ಳಲು ಸಾಧ್ಯ. ಇಲ್ಲಿ, ತಾಯಿ ಅಥವಾ ತಂದೆ ಈ ಆನುವಂಶಿಕ ಲಕ್ಷಣವನ್ನು ಹೊಂದಿರುತ್ತಾರಾದರೂ ಅವರು ಸ್ವಾಭಾವಿಕವಾಗಿರುತ್ತಾರೆ ಮತ್ತು ಆರೋಗ್ಯವಂತರಾಗಿಯೇ ಇರುತ್ತಾರೆ. ಅವರು ಈ ಆನುವಂಶಿಕ ಲಕ್ಷಣವನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಬಹುದು. ಆ ಕಾರಣಕ್ಕಾಗಿ ಡೌನ್ ಸಿಂಡ್ರೋಮ್ ಉಂಟಾಗುತ್ತದೆ.

  • ಮರುಜೋಡಣೆಗೊಂಡ 21ನೆಯ ವರ್ಣತಂತುವನ್ನು ಹೊಂದಿದ ಪಾಲಕರನ್ನು ಸಹ ಅವಲಂಬಿಸಿ ಈ ಅಧಿಕತಮ ವಂಶವಾಹಿ ವರ್ಗಾವಣೆಗೊಳ್ಳುವ ಸಂಭವನೀಯತೆ ಇರುತ್ತದೆ.

  • ಒಂದೊಮ್ಮೆ ತಂದೆಯಲ್ಲಿ ಈ ವರ್ಣತಂತುವಿದ್ದಲ್ಲಿ ಅದು ವರ್ಗಾವಣೆಗೊಳ್ಳುವ ಅಪಾಯ ಸುಮಾರು 3% ಆಗಿರುತ್ತದೆ.

  • ಒಂದೊಮ್ಮೆ ತಾಯಿಯಲ್ಲಿ ಈ ವರ್ಣತಂತುವಿದ್ದಲ್ಲಿ ಅದು ವರ್ಗಾವಣೆಗೊಳ್ಳುವ ಅಪಾಯ ಸುಮಾರು 10% ರಿಂದ 15% ಆಗಿರುತ್ತದೆ.

Q

ಡೌನ್ ಸಿಂಡ್ರೋಮಿನ ಸಂಕೀರ್ಣತೆಗಳೇನು?

A

ಡೌನ್ ಸಿಂಡ್ರೋಮ್ ಹೊಂದಿರುವ ಕೆಲವು ಮಕ್ಕಳು ಕೆಲವು ಜನ್ಮಜಾತ ದೋಷಗಳು ಅಥವಾ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರಬಹುದು. ಈ ಸಂಗತಿಗಳ ಕುರಿತಾಗಿ ವೈದ್ಯರು ಮತ್ತು ಪರಿಣತ ತಜ್ಞರು ಮಕ್ಕಳನ್ನು ಕೂಲಂಕುಶವಾಗಿ ಗಮನಿಸಿ ಅವಶ್ಯಕವಿರುವ ಚಿಕಿತ್ಸೆ ಅಥವಾ ಥೆರಪಿಗಳನ್ನು ನೀಡುತ್ತಾರೆ. ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಈ ಲಕ್ಷಣಗಳನ್ನು ತೋರಬಹುದು:

  • ಕಿವುಡುತನ

  • ಕಿವಿಯಲ್ಲಿ ಸೋಂಕು

  • ಕಣ್ಣಿನ ತೊಂದರೆಗೆ ಸಂಬಂಧಿಸಿದಂತೆ ಕನ್ನಡಕದ ಅವಶ್ಯಕತೆಯುಂಟಾಗಬಹುದು ಮತ್ತು ಕ್ಯಾಟರಾಕ್ಟ್ ನಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು.

  • ಜನ್ಮದಾರಭ್ಯದಿಂದ ಕಾಣಿಸಿಕೊಳ್ಳಬಹುದಾದ ಹೃದಯದ ತೊಂದರೆ.

  • ಥೈರಾಯ್ಡ್

  • ಶಸ್ತ್ರಚಿಕಿತ್ಸೆ ಅವಶ್ಯಕವಿರಬಹುದಾದ ಕರುಳಿಗೆ ಸಂಬಂಧಿಸಿದ ಅಡೆತಡೆಗಳು.

  • ರಕ್ತಹೀನತೆ

  • ಶೈಶವದಲ್ಲಿ ಅಥವಾ ಬಾಲ್ಯದ ಆರಂಭದಲ್ಲಿ ಲ್ಯುಕೇಮಿಯಾ

  • ಸ್ಥೂಲಕಾಯ

Q

ಡೌನ್ ಸಿಂಡ್ರೋಮನ್ನು ಪತ್ತೆಮಾಡುವುದು ಹೇಗೆ?

A

ಮಗು ಗರ್ಭಾವಸ್ಥೆಯಲ್ಲಿರುವಾಗ ಅಥವಾ ಜನಿಸಿದ ಕೂಡಲೇ ತಜ್ಞವೈದ್ಯರು ಡೌನ್ ಸಿಂಡ್ರೋಮ್ ಪತ್ತೆಮಾಡುವುದು ಸಾಧ್ಯವಿದೆ. ಬಸಿರಿನ ಸಂದರ್ಭದಲ್ಲಿ ಇದಕ್ಕಾಗಿರುವ ಪರೀಕ್ಷೆಯನ್ನು ಮಾಡಿಸಿಕೊಂಡರೆ ಅನುಕೂಲ. ಇದರಿಂದಾಗಿ ಪಾಲಕರು ತಮ್ಮ ಮಗುವಿನ ವಿಶೇಷ ಅವಶ್ಯಕತೆಗಳನ್ನು ಪೂರೈಸಲು ತಮ್ಮನ್ನು ಅಣಿಗೊಳಿಸಿಕೊಳ್ಳುವುದು ಸುಲಭವಾಗುತ್ತದೆ.

ಜನನಪೂರ್ವ ಪರೀಕ್ಷೆ – ಬಸಿರಿನ ಸಂದರ್ಭದಲ್ಲಿ ಸ್ಕ್ರೀನಿಂಗ್ ಮತ್ತು ರೋಗಪತ್ತೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಭ್ರೂಣವು ಡೌನ್ ಸಿಂಡ್ರೋಮ್ ಲಕ್ಷಣಗಳನ್ನು ಹೊಂದಿರುವ ಸಾಧ್ಯತೆಗಳನ್ನು ಸ್ಕ್ರೀನಿಂಗ್ ನಿಂದ ಪತ್ತೆಮಾಡಬಹುದು. ಅಂತೆಯೇ, ರೋಗಪತ್ತೆ ಪರೀಕ್ಷಾವಿಧಾನವು ಮಗು ಡೌನ್ ಸಿಂಡ್ರೋಮನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬ ಕುರಿತು ಖಚಿತವಾದ ಫಲಿತಾಂಶವನ್ನು ನೀಡುತ್ತದೆ.

ಜನನಾನಂತರದ ಪರೀಕ್ಷೆ – ಮಗು ಜನಿಸಿದ ನಂತರ ವೈದ್ಯರು ಡೌನ್ ಸಿಂಡ್ರೋಮನ್ನು ಸೂಚಿಸುವ ನಿಶ್ಚಿತ ದೈಹಿಕ ಲಕ್ಷಣಗಳನ್ನು ಪತ್ತೆಮಾಡುತ್ತಾರೆ.

Q

ಡೌನ್ ಸಿಂಡ್ರೋಮಿಗೆ ಚಿಕಿತ್ಸೆ

A

ಡೌನ್ ಸಿಂಡ್ರೋಮ್ ಜೀವನ ಪರ್ಯಂತ ಕಾಡುವ ಖಾಯಿಲೆ. ಆರಂಭಿಕ ಹಂತದಲ್ಲಿ ಪತ್ತೆಮಾಡಿ, ಚಿಕಿತ್ಸೆ ಅಥವಾ ಥೆರಪಿಯನ್ನು ನೀಡುವುದು ಮಗುವಿನ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಎತ್ತರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮತ್ತು ಮಗುವಿನ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಸಹಕಾರಿಯಾಗಿರುವ ವಿಧಾನಗಳ ಮೇಲೆ ಚಿಕಿತ್ಸೆಯು ಕೇಂದ್ರೀಕೃತವಾಗಿರುತ್ತದೆ.

ಟಿಪ್ಪಣಿ: ಡೌನ್ ಸಿಂಡ್ರೋಮ್ ಹೊಂದಿರುವ ಬಹುತೇಕ ಮಕ್ಕಳು, ಜೀವನದ ಯಾವುದೇ ಹಂತದಲ್ಲಿಯೇ ಆದರೂ ದೃಷ್ಟಿ ಮತ್ತು ಶ್ರವಣ ಸಂಬಂಧೀ ಸಮಸ್ಯೆಗಳಿಗೆ ತುತ್ತಾಗುವ ಸಂಭವವಿರುವುದರಿಂದ ಅಂತಹ ಮಕ್ಕಳ ದೃಷ್ಟಿ ಮತ್ತು ಶ್ರವಣ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸುತ್ತಿರಬೇಕು.

ಆರಂಭಿಕ ಹಂತದ ಮಧ್ಯಸ್ಥಿಕಾ ಕಾರ್ಯಕ್ರಮ - ಈ ವಿಧಾನವು ಇಂದ್ರಿಯ ಸಂವೇದನೆ, ಚಲನೆ ಮತ್ತು ಗ್ರಹಣ ಸಾಮರ್ಥ್ಯದ ಚಟುವಟಿಕೆಗಳನ್ನು ಜಾಗೃತಗೊಳಿಸಲು ಮತ್ತು ಸುಧಾರಿಸಲು ಅವಶ್ಯಕವಿರುವ ವಿಧಾನಗಳ ಮಿಶ್ರಣವನ್ನು ಒಳಗೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿಶೇಷ ಶಿಕ್ಷಕರು, ಮಕ್ಕಳ ತಜ್ಞರು, ಮಾನಸಿಕ ಚಿಕಿತ್ಸಕರು, ಔದ್ಯೋಗಿಕ ಚಿಕಿತ್ಸಕರು, ಮತ್ತು ಮಾತಿನ ತಜ್ಞರನ್ನೊಳಗೊಂಡ ತಂಡವೊಂದು ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಮಗುವಿನಲ್ಲಿ ಭಾಷಾಕೌಶಲ್ಯ, ಸಾಮಾಜಿಕ ಮತ್ತು ಸ್ವಸಹಾಯ ಕೌಶಲ್ಯಗಳನ್ನು ಬೆಳೆಸುವಲ್ಲಿ ಕೂಡ ಇವರು ಪ್ರಯತ್ನಿಸುತ್ತಾರೆ.

Q

ಡೌನ್ ಸಿಂಡ್ರೋಮ್ ಹೊಂದಿರುವ ಮಗುವಿನ ಆರೈಕೆ

A

ತಮ್ಮ ಮಗು ಡೌನ್ ಸಿಂಡ್ರೋಮನ್ನು ಹೊಂದಿದೆ ಎಂದು ಪತ್ತೆಯಾದ ಮರುಕ್ಷಣ ಪಾಲಕರು ಅಥವಾ ಪೋಷಕರು ವಿಚಲಿತಗೊಳಿಸುವ ಮಟ್ಟದ ಭಾವನಾತ್ಮಕ ಏರುಪೇರುಗಳನ್ನು ಅನುಭವಿಸುತ್ತಾರೆ. ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಅವರಿಗೆ ಕೆಲವು ಸಮಯ ಹಿಡಿಯಬಹುದು. ಆದರೆ, ಕಾಲಕ್ರಮೇಣ, ಅವರು ವಾಸ್ತವಿಕತೆಯನ್ನು ಅರಿತು ಎದುರಿಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತಾರೆ ಮತ್ತು ಮಗುವಿನ ಆರೈಕೆಯಲ್ಲಿ ತೊಡಗಿಕೊಳ್ಳುತ್ತ ಅದು ಚಟುವಟಿಕೆಯಿಂದ ಕೂಡಿದ ಉತ್ತಮ ಜೀವನವನ್ನು ನಡೆಸುವಂತಾಗಲು ಬೇಕಾದ ಎಲ್ಲ ಸಹಾಯಗಳನ್ನೂ ಮಾಡತೊಡಗುತ್ತಾರೆ. ಈ ವಿವೇಕ ಮತ್ತು ದರ್ಶನ ಜನಸಾಮಾನ್ಯರ ಗ್ರಹಿಕೆಗೂ ಮೀರಿದ್ದು. ವಾಸ್ತವ ಸಂಗತಿಯನ್ನು ಅರಿತ ನಂತರದಲ್ಲಿ ತಮ್ಮ ಪ್ರೀತಿಯ ಮಗುವಿಗೆ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆ ಮತ್ತು ಮಧ್ಯಸ್ಥಿಕಾ ವಿಧಾನಗಳನ್ನು ಒದಗಿಸುವುದು ಪಾಲಕರು ತೆಗೆದುಕೊಳ್ಳುವ ಮುಂದಿನ ಹೆಜ್ಜೆ.

ಟಿಪ್ಪಣಿ: ಭಯವನ್ನು ಹೋಗಲಾಡಿಸಲು ಇರುವ ಅತ್ಯುತ್ತಮ ಪರಿಹಾರವೆಂದರೆ ವಸ್ತುನಿಷ್ಠ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ಬೆಂಬಲವನ್ನು ಯಾಚಿಸುವುದು. ಡೌನ್ ಸಿಂಡ್ರೋಮ್ ಕುರಿತು ಚೆನ್ನಾಗಿ ಅರಿತುಕೊಂಡು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆಯನ್ನು ಪಡೆಯುವುದರ ಮೂಲಕ ನಿಮ್ಮ ಮಗುವಿನ ಜೀವನ ಮಟ್ಟ ಗಮನಾರ್ಹವಾಗಿ ಹೆಚ್ಚುತ್ತದೆ.

ನಿಮ್ಮ ಮಗುವಿನ ಆರೈಕೆಯ ಮಾಡುವಲ್ಲಿ ನೀವು ಈ ಕೆಲವು ಸೂಚನೆಗಳನ್ನು ಪರಿಗಣಿಸಬಹುದು:

  • ಮಧ್ಯಸ್ಥಿಕಾ ಕಾರ್ಯಕ್ರಮ: ನಂಬಿಕಸ್ಥ ವೃತ್ತಿಪರ ಪರಿಣತರ ತಂಡವೊಂದನ್ನು ಹುಡುಕಿಕೊಳ್ಳಿ. ಯಾವ ರೀತಿಯ ಚಿಕಿತ್ಸಾವಿಧಾನವನ್ನು ಆಯ್ಕೆಮಾಡಿಕೊಳ್ಳಬೇಕೆಂಬುದನ್ನು ನಿರ್ಧರಿಸಿ. ಅಂತೆಯೇ, ಪರಿಣಿತರ ತಂಡದೊಂದಿಗೆ ಸಹಾಯ ಮಾಡುತ್ತ ನೀವೂ ಚಿಕಿತ್ಸಾವಿಧಾನದಲ್ಲಿ ಪಾಲ್ಗೊಳ್ಳಿ. ಇದರಿಂದ ಮನೆಯಲ್ಲಿಯೂ ನೀವು ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ಮುಂದುವರಿಸಬಹುದು.

  • ಬೆಂಬಲವನ್ನು ಕೇಳಿ ಪಡೆದುಕೊಳ್ಳಿ: ಇದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿರುವ ಇತರ ಮಕ್ಕಳ ಕುಟುಂಬಸ್ಥರನ್ನು ಭೇಟಿಮಾಡಿ. ಸಪೋರ್ಟ್ ಗ್ರೂಪ್ ಸೇರಿಕೊಂಡು ಡೌನ್ ಸಿಂಡ್ರೋಮಿನಿಂದ ಬಳಲುತ್ತಿರುವ ಇತರ ಮಕ್ಕಳ ಪಾಲಕರ ಸಂಪರ್ಕದಲ್ಲಿರಿ. ಮನೆಯ ಇತರ ಸದಸ್ಯರು ಮತ್ತು ಸ್ನೇಹಿತರು ನಿಮ್ಮ ಪರಿಸ್ಥಿತಿಯನ್ನು ಅರಿತುಕೊಳ್ಳಲು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ನಿಮ್ಮ ಸಹಾಯಕ್ಕೆ ಒದಗಿಬರುತ್ತಾರೆ.

  • ಭರವಸೆಯ ಭವಿಷ್ಯವನ್ನು ನಿರೀಕ್ಷಿಸಿ ಮತ್ತು ಅದಕ್ಕಾಗಿ ನಿಮ್ಮನ್ನು ಅಣಿಗೊಳಿಸಿಕೊಳ್ಳಿ: ಡೌನ್ ಸಿಂಡ್ರೋಮ್ ಹೊಂದಿರುವ ಬಹುತೇಕ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿಭಾಯಿಸುವುದನ್ನು ಕಲಿತುಕೊಳ್ಳುತ್ತಾರೆ. ಮುಖ್ಯವಾಹಿನಿಯ ಶಾಲೆಗೆ ಹೋಗುತ್ತಾರೆ. ಓದಿ ಬರೆದು ಮಾಡುತ್ತಾರೆ. ಕೆಲಸಕ್ಕೆ ಸೇರುತ್ತಾರೆ. ಸಂತೋಷದಿಂದ ಜೀವನ ಸಾಗಿಸುತ್ತಾರೆ.

  • ಮಗುವಿನ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹುರಿದುಂಬಿಸಿ: ಡೌನ್ ಸಿಂಡ್ರೋಮ್ ಹೊಂದಿರುವ ಬಹುತೇಕ ಮಕ್ಕಳು ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ ಮತ್ತು ಕೆಲವು ವಿಶೇಷ ಕೌಶಲಗಳು ಹಾಗೂ ಪ್ರತಿಭೆಗಳಿಂದ ಕೂಡಿರುತ್ತಾರೆ. ಉದಾಹರಣೆಗೆ, ಮಗುವೊಂದು ಈಜುವುದು, ನರ್ತಿಸುವುದು, ಸೈಕ್ಲಿಂಗ್ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ಅದ್ಭುತ ಪ್ರತಿಭೆಯನ್ನು ಹೊಂದಿರಬಹುದು. ಈ ರೀತಿಯ ಪ್ರತಿಭೆಗಳನ್ನು ಮಕ್ಕಳಲ್ಲಿ ಗುರುತಿಸುತ್ತ ಅವರು ಅದರಲ್ಲಿ ಹೆಚ್ಚು ಹೆಚ್ಚು ತೊಡಗುವಲ್ಲಿ, ತಮ್ಮ ಆಸಕ್ತಿಯ ಚಟುವಟಿಕೆಯಲ್ಲಿ ಮಗು ಆನಂದವನ್ನು ಅನುಭವಿಸುವಲ್ಲಿ ಮತ್ತು ಸಂತೋಷದ ಜೀವನವನ್ನು ನಡೆಸುವಲ್ಲಿ ಪಾಲಕರು ಸಹಾಯ ಮಾಡಬಹುದು.

Q

ಡೌನ್ ಸಿಂಡ್ರೋಮ್ ಉಂಟಾಗುವುದರಿಂದಾಗುವ ಅಪಾಯಗಳೇನು?

A

ವರ್ಣತಂತುಗಳು ಸಂಖ್ಯೆಯಲ್ಲಿ ಹೇಗೆ ಮತ್ತು ಯಾಕೆ ಹೆಚ್ಚಳಗೊಳ್ಳುತ್ತವೆ ಎಂಬುದರ ಕುರಿತು ತಜ್ಞರಿಗೂ ತಿಳಿದಿಲ್ಲ. ಆದರೆ, ತಾಯಿಯೊಬ್ಬಳು ಡೌನ್ ಸಿಂಡ್ರೋಮ್ ಹೊಂದಿರುವ ಮಗುವೊಂದಕ್ಕೆ ಜನ್ಮನೀಡುವ ಸಂಭವನೀಯ ಕಾರಣಗಳ ಕುರಿತು ಮತ್ತು ಇದರಿಂದ ಸಂಭವಿಸುವ ಅಪಾಯಗಳ ಕುರಿತು ಅವರು ಊಹಿಸಬಲ್ಲವರಾಗಿದ್ದಾರೆ.

ಅಂತಹ ರಿಸ್ಕುಗಳಲ್ಲಿ ಕೆಲವು ಈ ರೀತಿಯವಾಗಿವೆ:

  • ಹೆಚ್ಚು ವಯಸ್ಸಾದ ನಂತರ ಗರ್ಭಧರಿಸುವವರಲ್ಲಿ (35 ವರ್ಷ ಮತ್ತು ಅದಕ್ಕಿಂತಲೂ ಹೆಚ್ಚು) ಈ ಅಪಾಯ ಕಂಡುಬರುತ್ತದೆ ಎಂಬುದನ್ನು ವೈದ್ಯರು ಗಮನಿಸುತ್ತಾರೆ. ಯಾಕೆಂದರೆ ವಯಸ್ಸಾದ ಅಂಡಗಳು ಅಸಮರ್ಪಕ ವರ್ಣತಂತು ವಿಭಜನೆಯ ಹೆಚ್ಚಿನ ಪ್ರಮಾಣದ ರಿಸ್ಕನ್ನು ಹೊಂದಿರುತ್ತವೆ.

  • ಒಂದೊಮ್ಮೆ ಮೊದಲ ಮಗುವಿಗೆ ಡೌನ್ ಸಿಂಡ್ರೋಮ್ ಇದ್ದಲ್ಲಿ ಎರಡನೆಯ ಮಗುವಿಗೂ ಅದು ಬರುವ ಸಾಧ್ಯತೆ ಹೆಚ್ಚು.

  • ಒಂದೊಮ್ಮೆ ಪಾಲಕರು ಅಧಿಕ ವಂಶವಾಹಿಯನ್ನು ಹೊಂದಿದ್ದಲ್ಲಿ, ಅದು ಮಗುವಿಗೆ ವರ್ಗಾಯಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿಗೆ ಡೌನ್ ಸಿಂಡ್ರೋಮ್ ತಗಲುವ ಸಾಧ್ಯತೆ ಹೆಚ್ಚಿರುತ್ತದೆ.

Q

ಡೌನ್ ಸಿಂಡ್ರೋಮನ್ನು ತಪ್ಪಿಸಬಹುದೇ?

A

ಡೌನ್ ಸಿಂಡ್ರೋಮ್ ಬರದಂತೆ ತಡೆಯುವುದು ಸಾಧ್ಯವಿಲ್ಲ. ಆದರೆ, ನೀವು ಡೌನ್ ಸಿಂಡ್ರೋಮಿನಿಂದ ಕೂಡಿದ ಮಗುವನ್ನು ಪಡೆಯುವ ಸಂಭವನೀಯತೆ ಹೆಚ್ಚಾಗಿದ್ದ ಪಕ್ಷದಲ್ಲಿ ಅಥವಾ ಈಗಾಗಲೇ ಅಂತಹ ಮಗುವನ್ನು ಹೊಂದಿದ್ದಲ್ಲಿ, ಇನ್ನೊಂದು ಮಗುವನ್ನು ಪಡೆಯಲು ಯೋಜಿಸುವುದಕ್ಕಿಂತಲೂ ಮೊದಲು ವಂಶವಾಹಿ ಆಪ್ತ ಸಮಾಲೋಚನಾ ತಜ್ಞರನ್ನು ಭೇಟಿಮಾಡಿ ಸಲಹೆ ಪಡೆಯುವುದು ಒಳಿತು. ವಂಶವಾಹಿ ಆಪ್ತ ಸಮಾಲೋಚನಾ ತಜ್ಞರು ಡೌನ್ ಸಿಂಡ್ರೋಮ್ ಹೊಂದಿರಬಹುದಾದ ಮಗುವಿನ ಜನನ ಸಾಧ್ಯತೆಯನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ಅಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ನಿಮಗೆ ಸಹಾಯ ಮಾಡುತ್ತಾರೆ. ಪ್ರಸವಪೂರ್ವ ಪರೀಕ್ಷೆಗಳು ಮತ್ತು ಅವುಗಳ ಫಲಿತಾಂಶಗಳ ಕುರಿತೂ ಅವರು ವಿವರಿಸುತ್ತಾರೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org