ವೃದ್ಧಾಪ್ಯದ ಖಿನ್ನತೆ (ಜೆರಿಯಾಟ್ರಿಕ್ ಡಿಪ್ರೆಶನ್)

Q

ವೃದ್ಧಾಪ್ಯದ ಖಿನ್ನತೆ (ಗೆರಿಯಾಟ್ರಿಕ್ ಡಿಪ್ರೆಶನ್) ಎಂದರೇನು?

A

 

ಸುಂದರ್‌, 60ರ ವಯೋಮಾನದ ಹಿರಿಯರು. ಉಳಿದಂತೆಲ್ಲ ಆರೋಗ್ಯವಾಗಿದ್ದರೂ ಆಗಾಗ ಮೈಕೈ ನೋವು ಕಾಡುತ್ತಿರುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಹೀಗಿರಲು, ಯಾವಾಗಲೋ ಒಮ್ಮೊಮ್ಮೆ ಅವರು ಇದ್ದಕ್ಕಿದ್ದಂತೆ ವಿನಾಕಾರಣ ಕಿರಿಕಿರಿಗೊಳ್ಳತೊಡಗಿದರು. ಕೋಪಗೊಂಡು ಕುಟುಂಬದ ಸದಸ್ಯರ ಮೇಲೆ ರೇಗತೊಡಗಿದರು. ಇವರಲ್ಲಿನ ಈ ಧಿಡೀರ್‌ ಬದಲಾವಣೆ ಅವರ ಮಗನನ್ನು ಚಿಂತೆಗೀಡು ಮಾಡಿತು. ನಂತರ ವೈದ್ಯರೊಂದಿಗಿನ ಸಮಾಲೋಚನೆಯಿಂದ ಸುಂದರ್‌ ಖಿನ್ನತೆಯಿಂದ ಬಳಲುತ್ತಿರುವುದು ಖಾತ್ರಿಯಾಯಿತು. ಎಷ್ಟೋ ಸಲ ನಾವು ಈ ವರ್ತನೆಯನ್ನು ವಯೋಸಹಜ ಲಕ್ಷಣ ಎಂದುಕೊಂಡುಬಿಡುತ್ತೇವೆ.

ಹಿರಿಯರಲ್ಲಿನ ಈ ರೀತಿಯ ಖಿನ್ನತೆಯನ್ನು ‘ವೃದ್ಧಾಪ್ಯದ ಖಿನ್ನತೆ’ ಎಂತಲೂ ಕರೆಯುತ್ತಾರೆ. ವಯಸ್ಸಾದವರಲ್ಲಿ ಇದನ್ನು ಬಹಳ ವಿರಳವಾಗಿ ಪತ್ತೆಹಚ್ಚಲಾಗುತ್ತದೆ. ಇದಕ್ಕೆ ಚಿಕಿತ್ಸೆ ಪಡೆಯುವವರೂ ಕೂಡ ಕಡಿಮೆ. ಹಿರಿಯರು ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದರಿಂದ ಅಥವಾ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿತರಾಗಿರುವುದರಿಂದ ಬೇಸರಗೊಂಡು ರೇಗಾಡುತ್ತಿರುವುದು ಸಹಜ ಎಂಬ ತಪ್ಪು ಕಲ್ಪನೆಯಿದೆ.  ವಯಸ್ಸಾದಂತೆಲ್ಲ ಸಿಡುಕುವುದು ಸಹಜವಾದದ್ದು ಎಂದೇ ಭಾವಿಸಿ ಅವರಲ್ಲಿನ ಖಿನ್ನತೆಯನ್ನು ಗುರುತಿಸುವ ಗೋಜಿಗೇ ಹೋಗುವುದಿಲ್ಲ. ಜೊತೆಗೆ ಬಹುತೇಕ ಹಿರಿಯರು ಕೂಡ, ಮಕ್ಕಳು, ಮನೆಮಂದಿ ತಮ್ಮನ್ನು ಅಪಹಾಸ್ಯ ಮಾಡಬಹುದು ಅಥವಾ ಕಡೆಗಣಿಸಬಹುದು ಎಂಬ ಭಯದಿಂದ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ. 

Q

ವೃದ್ಧಾಪ್ಯದ ಖಿನ್ನತೆಯ ಲಕ್ಷಣಗಳೇನು?

A

ಹೆಚ್ಚಿನ ಸಲ ಹಿರಿಯಲ್ಲಿನ ಖಿನ್ನತೆಯನ್ನು ಕಡೆಗಣಿಸಲಾಗುತ್ತದೆ ಅಥವಾ ಅದನ್ನು ಗುರುತಿಸುವುದು ಕಷ್ಟ. ಯಾಕೆಂದರೆ, ಸರಿಯಾಗಿ ಹಸಿವಾಗದಿರುವುದು ಅಥವಾ ನಿದ್ದೆಬಾರದಿರುವುದು, ಆಯಾಸ, ಕಿರಿಕಿರಿ ಅಥವಾ ವಯೋಸಹಜ ದೈಹಿಕ ಖಾಯಿಲೆಗಳು ಮುಂತಾದ ಖಿನ್ನತೆಯ ಸಾಮಾನ್ಯ ಲಕ್ಷಣಗಳನ್ನು ವೃದ್ಧಾಪ್ಯದೊಂದಿಗೆ ಸಮೀಕರಿಸಿ ನೋಡಲಾಗುತ್ತದೆ. ಅಲ್ಜೈಮರ್‌ ಖಾಯಿಲೆಯ ಆರಂಭದ ಲಕ್ಷಣಗಳು, ಪಾರ್ಕಿನ್ಸನ್‌ ಮತ್ತು ದೃಷ್ಟಿಹೀನತೆ, ಕಿವುಡುತನದ ಮುಂತಾದ ಲಕ್ಷಣಗಳು ಕೂಡ ಕೆಲವು ವೇಳೆ ಖಿನ್ನತೆಯ ಕೆಲವು ಲಕ್ಷಣಗಳಂತೆ ಕಾಣಬಹುದು.

ಖಿನ್ನತೆಯ ಸಾಮಾನ್ಯ ಲಕ್ಷಣಗಳೊಂದಿಗೆ ವೃದ್ಧಾಪ್ಯದ ಖಿನ್ನತೆಯು ಕೆಲ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅವುಗಳೆಂದರೆ:

  • ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ರುಯವಾಗದೇ ಇರುವುದು

  • ಇತರೆ ವ್ಯಕ್ತಿಗಳೊಂದಿಗೆ ಮಾತನಾಡಲು, ಬೆರೆಯಲು ಬಯಸದೇ ಇರುವುದು

  • ಹಸಿವು ಮತ್ತು ತೂಕ ಕಳೆದುಕೊಳ್ಳುವಿಕೆ

  • ಪದೇಪದೇ ಕಾಣಿಸಿಕೊಳ್ಳುವ ಮೈಕೈ ನೋವು

  • ತಾಳ್ಮೆ ಕಳೆದುಕೊಳ್ಳುವಿಕೆ ಮತ್ತು ಕುಟುಂಬದ ಸದಸ್ಯರೊಂದಿಗೆ ಆಗಾಗ ಕಿರಿಕಿರಿ, ಸಿಡುಕಿನ ವರ್ತನೆ

  • ನಿದ್ದೆ ಮತ್ತು ವಿಶ್ರಾಂತಿಯ ಕೊರತೆ

  • ಮಧುಮೇಹ, ಅಧಿಕ ಒತ್ತಡ, ಪಾರ್ಶ್ವವಾಯು, ಸಂಧಿವಾತ, ಕ್ಯಾನ್ಸರ್‌ಗಳ ಜೊತೆಗೂ ಖಿನ್ನತೆ ಕಾಣಿಸಿಕೊಳ್ಳಬಹುದು

Q

ವೃದ್ಧಾಪ್ಯ ಖಿನ್ನತೆಗೆ ಚಿಕಿತ್ಸೆ

A

ವೃದ್ಧಾಪ್ಯದ ಖಿನ್ನತೆಯನ್ನು ಪತ್ತೆ ಮಾಡದಿದ್ದರೆ ಅಥವಾ ಚಿಕಿತ್ಸೆಗೊಳಪಡಿಸದಿದ್ದರೆ, ಕುಟುಂಬದ ಸದಸ್ಯರು ಇದರಿಂದ ಅನಗತ್ಯವಾಗಿ ಬಳಲಬೇಕಾಗುತ್ತದೆ. ಅಷ್ಟೇ ಅಲ್ಲ, ಇತರರಂತೆ ನೆಮ್ಮದಿಯ ಜೀವನ ನಡೆಸಬಹುದಾಗಿದ್ದ ವ್ಯಕ್ತಿ ಚಿಕಿತ್ಸೆ ಸಿಗದ ಕಾರಣಕ್ಕಾಗಿ ಅನವಶ್ಯಕ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಹಿರಿಯರಿಗೆ ಖಿನ್ನತೆಯ ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಿಸುವುದು ಮಹತ್ವದ್ದು.

ಚಿಕಿತ್ಸೆಯ ಜೊತೆಗೆ ಕುಟುಂಬದಲ್ಲಿ ಸಂತೋಷದಿಂದ ಒಡಗೂಡಿದ ವಾತಾವರಣ, ವಾತ್ಸಲ್ಯಪೂರಿತ ಆರೈಕೆಯನ್ನು ಶಿಫಾರಸು ಮಾಡುತ್ತಾರೆ. ಇದರೊಂದಿಗೆ ಪ್ರತಿನಿತ್ಯದ ವ್ಯಾಯಾಮ ಮತ್ತು ನಿರ್ದಿಷ್ಟವಾದ ದಿನಚರಿಯ ಆಚರಣೆಯಿಂದ ಹಿರಿಯರು ಖಿನ್ನತೆಯಿಂದ ಹೊರಬಂದು ಸಂತೋಷವಾಗಿ ಜೀವನ ನಡೆಸುವದು ಸುಲಭವಾಗುತ್ತದೆ.

Q

ವೃದ್ಧಾಪ್ಯ ಖಿನ್ನತೆಯಿಂದ ಬಳಲುವವರ ಆರೈಕೆ

A

ನಿಮ್ಮ ಮನೆಯ ಹಿರಿಯ ವ್ಯಕ್ತಿಯೊಬ್ಬರು ಖಿನ್ನತೆಯಿಂದ ಬಳಲುತ್ತಿದ್ದರೆ, ನೀವು ಅವರಿಗೆ ಭಾವನಾತ್ಮಕ ಬೆಂಬಲವನ್ನು ನೀಡಬೇಕು. ಅವರ ಭಾವನೆಗಳು ಮತ್ತು ಅನಿಸಿಕೆಗಳನ್ನು ಸಹನೆಯಿಂದ, ಅನುಕಂಪದಿಂದ ಆಲಿಸುವುದು ಆ ಹಿರಿಜೀವ ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ನೀವು ಅವರನ್ನು ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಮತ್ತು ಬೇಕಾದ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿ.

ನೀವು ಹೀಗೂ ಮಾಡಬಹುದು:

  • ಅವರು ಇಷ್ಟ ಪಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿ. ಅಂತಹ ಚಟುವಟಿಕೆ ಅವರನ್ನು ಬ್ಯುಸಿಯಾಗಿಡುತ್ತದೆ ಮತ್ತು ಅವರು ಅದರಲ್ಲಿ ಮನಸ್ಸು ತೊಡಗಿಸುತ್ತಾರೆ.

  • ಪ್ರತಿ ದಿನವೂ ಅವರೊಂದಿಗೆ ವಾಕಿಂಗಿಗೆ ಕಂಪನಿ ಕೊಡಿ.

  • ಅವರ ಸ್ನೇಹಿತರು, ಕುಟುಂಬದ ಸದಸ್ಯರು ಅಥವಾ ಸಂಬಂಧಿಕರನ್ನು ಭೇಟಿಯಾಗುವಂತೆ ನಿಧಾನವಾಗಿ ಅವರನ್ನು ಹುರಿದುಂಬಿಸಿ. ಇದರಿಂದಾಗಿ ಅವರು ಇತರರೊಂದಿಗೆ ಬೆರೆತು ಮಾತನಾಡುವಂತಾಗುತ್ತದೆ.

  • ಅವರಿಗಾಗಿ ದಿನಚರಿಯನ್ನು ರೂಪಿಸಿ. ಇದರಿಂದ ಅವರು ನಿಯಮಿತತನವನ್ನು ಪಾಲಿಸಲು ಅನುಕೂಲವಾಗುತ್ತದೆ.

  • ಅವರ ಆಹಾರ, ಪಥ್ಯಗಳ ಕುರಿತು ಗಮನ ವಹಿಸಿ.

  • ಚಿಕಿತ್ಸೆಯನ್ನು ಚಾಚೂ ತಪ್ಪದಂತೆ ಪಾಲಿಸಲು ಉತ್ತೇಜಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org