ಬುದ್ಧಿಮಾಂದ್ಯತೆ

Q

ಬುದ್ಧಿಮಾಂದ್ಯತೆ ಎಂದರೇನು?

A

ಅನಿರುದ್ಧನಿಗೆ ನಾಲ್ಕು ವರ್ಷವಾದರೂ ಇನ್ನೂ ನಡೆಯುತ್ತಿಲ್ಲ. ಅವನು ಕುಟುಂಬದವರು ಮತ್ತು ಕೆಲವು ಸ್ನೇಹಿತರನ್ನು ಮಾತ್ರ ಗುರುತು ಹಿಡಿಯುತ್ತಾನೆ. ತನ್ನ ಕಣ್ಣು, ಮೂಗು, ಬಾಯಿ ಮುಂತಾದ ಅಂಗಗಳನ್ನು ಗುರುತಿಸಲು ಅಥವಾ ಅರ್ಥಪೂರ್ಣ ಪದಗಳನ್ನು ಸೇರಿಸಿ ಮಾತನಾಡಲು ಕಷ್ಟ ಪಡುತ್ತಾನೆ. ಈ ರೀತಿಯ ಲಕ್ಷಣಗಳನ್ನು ಗಮನಿಸಿ ಮತ್ತು ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಅವನಿಗೆ ಬುದ್ಧಿಮಾಂದ್ಯತೆ ಇರುವುದನ್ನು ಪತ್ತೆ ಮಾಡಲಾಯಿತು. ಆತನ ವಯಸ್ಸು ನಾಲ್ಕು ವರ್ಷವಾದರೂ ಬುದ್ಧಿ ಒಂದು ವರ್ಷದ ಮಗುವಿನಂತಿತ್ತು.

ಇದೊಂದು ಕಾಲ್ಪನಿಕ ಕಥೆ. ನಿಜ ಜೀವನದಲ್ಲಿ ಕಂಡುಬರುವ ಬುದ್ಧಿಮಾಂದ್ಯತೆಯನ್ನು ಅರ್ಥಮಾಡಿಕೊಳ್ಳಲು ಇದನ್ನು ರಚಿಸಲಾಗಿದೆ.

ಬುದ್ಧಿಮಾಂದ್ಯತೆಯು ಎಲ್ಲಾ ರೀತಿಯ ಬೆಳವಣಿಗೆಯನ್ನು ತಡವಾಗಿಸುತ್ತದೆ. ಬೆಳವಣಿಗೆಯ ನಾಲ್ಕು ವಿಭಾಗಗಳು: ಚಲನೆ (ದೇಹದ ಚಲನೆಯ ಮೇಲೆ ನಿಯಂತ್ರಣ), ಗ್ರಹಿಕೆ (ಯೋಚಿಸುವುದು, ಅರ್ಥಮಾಡಿಕೊಳ್ಳುವುದು, ಪರಿಸ್ಥಿತಿಗೆ ತಕ್ಕಂತೆ ವರ್ತಿಸುವುದು), ಸಮಾಜದಲ್ಲಿ ಬೆರೆಯುವುದು (ಜನರ ಜೊತೆ ಮಾತನಾಡುವುದು ಮತ್ತು ನಾಲ್ಕು ಜನರ ನಡುವೆ ಹೇಗೆ ವರ್ತಿಸಬೇಕೆಂದು ಕಲಿಯುವುದು) ಮತ್ತು ಭಾಷೆ (ಇತರರು ಹೇಳುವುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾತನಾಡಲು ಕಲಿಯುವುದು); ಈ ಸಮಸ್ಯೆ ಇರುವವರಲ್ಲಿ ಈ ನಾಲ್ಕು ರೀತಿಯ ಬೆಳವಣಿಗೆಯೂ ನಿಧಾನವಾಗುತ್ತದೆ. 

ಬುದ್ಧಿಮಾಂದ್ಯತೆ ಒಂದು ಮಾನಸಿಕ ಖಾಯಿಲೆಯಲ್ಲ. ಬದಲಾಗಿ ಇದು ಮಾನಸಿಕ ಬೆಳವಣಿಗೆಯಲ್ಲಿ ಕಂಡುಬರುವ ನಿಧಾನ ಗತಿ ಮತ್ತು ಬಾಲ್ಯದಿಂದಲೇ ಕಂಡುಬರುತ್ತದೆ.

ಮಾನವರು18 ವರ್ಷದವರೆಗೂ ಕ್ರಮಬದ್ಧವಾಗಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹೊಂದುತ್ತಾರೆ. ಉದಾಹರಣೆಗೆ, ಹೆಚ್ಚಿನ ಮಕ್ಕಳು ಹುಟ್ಟಿದ ಸುಮಾರು 15ನೇ ತಿಂಗಳ ಆಸುಪಾಸಿನಲ್ಲಿ ಕೆಲವು ಪದಗಳನ್ನು ಉಚ್ಛರಿಸುತ್ತವೆ, ನಡೆಯಲು ಆರಂಭಿಸುತ್ತವೆ ಮಕ್ಕಳು ಈ ಹಂತವನ್ನು ತಲುಪದಿದ್ದರೆ, ಬೆಳವಣಿಗೆಯಲ್ಲಿ ಅಥವಾ ಮಾನಸಿಕ ಸಾಮರ್ಥ್ಯದಲ್ಲಿ ಗಮನಾರ್ಹವಾದ ಕೊರತೆ ಕಂಡುಬಂದರೆ ಅಥವಾ ಮಗು ಐಕ್ಯೂ (IQ) ಪರೀಕ್ಷೆಯಲ್ಲಿ ಶೇ.85ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದರೆ, ಆಗ ಮಗು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದೆ ಎಂದರ್ಥ.

Q

ಬುದ್ಧಿಮಾಂದ್ಯತೆಯ ಲಕ್ಷಣಗಳು

A

ಮಗು ಹುಟ್ಟುವಾಗಲೇ ಬುದ್ಧಿಮಾಂದ್ಯತೆಯ ಕೆಲವು ಲಕ್ಷಣಗಳನ್ನು ಗುರುತಿಸಬಹುದು. ಉದಾಹರಣೆಗೆ ಒಂಭತ್ತು ತಿಂಗಳ ಮೊದಲೇ ಜನಿಸಿದ ಮಗು, ಜನಿಸಿದಾಗ ಕಡಿಮೆ ತೂಕ ಹೊಂದಿರುವ ಶಿಶು, ಜನಿಸಿದಾಗ ಉಸಿರಾಟದ ತೊಂದರೆ ಇರುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ತೀವ್ರ ಬುದ್ಧಿಮಾಂದ್ಯತೆ ಇದ್ದರೆ ಅದನ್ನು 6 ರಿಂದ 12 ತಿಂಗಳ ವಯಸ್ಸಿನಲ್ಲಿ ಗುರುತಿಸಬಹುದು. ಸಣ್ಣ ಪ್ರಮಾಣದ ಬುದ್ಧಿಮಾಂದ್ಯತೆಯನ್ನು ಗುರುತಿಸಲು 2 ವರ್ಷವಾಗಬಹುದು. ಕೆಲವರಿಗೆ ಬಾಲ್ಯದಲ್ಲಿ ಮಿದುಳಿಗೆ ಸಂಭವಿಸಿದ ಹಾನಿಯಿಂದಲೂ ಬುದ್ಧಿಮಾಂದ್ಯತೆ ಬರಬಹುದು.

ಬುದ್ಧಿಮಾಂದ್ಯತೆ ಇರುವವರು ಕೆಳಗಿನ ಕೆಲವು ಅಥವಾ ಎಲ್ಲ ಲಕ್ಷಣಗಳನ್ನು ತೋರಿಸಬಹುದು:

  • ಬೆಳವಣಿಗೆಯ ಹಂತಗಳನ್ನು ತಲುಪಲು ತಡವಾಗುತ್ತದೆ
  • ಭಾಷೆ ಕಲಿಯಲು ಕಷ್ಟ ಪಡುತ್ತಾರೆ
  • ಜ್ಞಾಪಕಶಕ್ತಿಯ ಕೊರತೆ
  • ಸಾಮಾಜಿಕ ನಿಯಮಗಳನ್ನು ಕಲಿಯಲು ಕಷ್ಟಪಡುತ್ತಾರೆ
  • ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತೊಂದರೆ
  • ತಮ್ಮನ್ನು ತಾವು ನೋಡಿಕೊಳ್ಳಲು, ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಲು ತಡವಾಗುತ್ತದೆ 
  • ಚಲನೆ, ಭಾಷೆ, ಮೋಟರ್ ಸ್ಕಿಲ್ಸ್ ಕಲಿಯಲು ನಿಧಾನವಾಗುತ್ತದೆ

Q

ಯಾವಾಗ ನೀವು ಜಾಗೃತರಾಗಬೇಕು?

A

  • ಮಗು 9 ತಿಂಗಳ ಮುನ್ನ ಜನಿಸಿದ್ದು, ಮಗುವಿನ ತೂಕ ಹುಟ್ಟಿದಾಗ 2 ಕೆ.ಜಿಗಿಂತ ಕಡಿಮೆ ಇದ್ದರೆ
  • ನವಜಾತ ಶಿಶು ಪದೇ ಪದೇ ನಡುಗುತ್ತಿದ್ದರೆ
  • ಮಗು ನಿರುತ್ಸಾಹಿ ಅಥವಾ ನಿಷ್ಕ್ರಿಯವಾಗಿದ್ದರೆ
  • 4-5 ವರ್ಷಗಳಾದರೂ ಮಗು ಆಹಾರ ಸೇವಿಸಲು, ಉಡುಪು ಧರಿಸಲು, ಶೌಚ ಮುಂತಾದ ಕೆಲಸಗಳನ್ನು ಮಾಡಲು ಮತ್ತೊಬ್ಬರ ಸಹಾಯ ಪಡೆದರೆ
  • ನಡೆಯಲು, ಭಾಷೆ ಕಲಿಯಲು ನಿಧಾನವಾದರೆ

Q

ಬುದ್ಧಿಮಾಂದ್ಯತೆಯೊಂದಿಗೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಗಳು

A

ಬುದ್ಧಿಮಾಂದ್ಯತೆ ಹೊಂದಿರುವ ಹೆಚ್ಚಿನ ಮಕ್ಕಳು ಉಳಿದಂತೆಲ್ಲ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತಾರೆ. ಆದರೆ ಇತರರಿಗಿಂತ ಅವರ ಬುದ್ಧಿವಂತಿಕೆ ಕಡಿಮೆ ಇರುತ್ತದೆ. ಬುದ್ಧಿಮಾಂದ್ಯತೆಯೊಂದಿಗೆ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ವರ್ತನೆ ಸಮಸ್ಯೆ: ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಯಲ್ಲಿನ ಚಡಪಡಿಕೆ ಮಟ್ಟ, ದುಡುಕುತನ, ಕೋಪ, ಹೆಚ್ಚಿರುತ್ತದೆ. ಇದನ್ನು ನಿಭಾಯಿಸುವಾಗ ಆರೈಕೆದಾರರಿಗೆ ಒತ್ತಡ ಉಂಟುಮಾಡಬಹುದು. ಇದರ ಬಗ್ಗೆ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

ಸೆಡೆತಗಳು: ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಯಲ್ಲಿ ಸೆಡೆತಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಸೆಡೆತ ಇಡೀ ದೇಹವನ್ನು, ದೇಹದ ಕೆಲ ಭಾಗ, ಅಥವಾ ಒಂದು ಜಳುಕಿನಿಂದ ವ್ಯಕ್ತಿ ದೇಹದ ಸಮತೋಲನ ಕಳೆದುಕೊಂಡು ಕೆಳಗೆ ಬೀಳಬಹುದು. ಸೆಡೆತವನ್ನು ಔಷಧದಿಂದ ಸುಲಭವಾಗಿ ನಿಯಂತ್ರಣದಲ್ಲಿಡಬಹುದು.

ಸಂವೇದನೆಯ ತೊಂದರೆಗಳು: ಬುದ್ಧಿಮಾಂದ್ಯತೆ ಹೊಂದಿರುವ ಶೇ.10 ರಷ್ಟು ವ್ಯಕ್ತಿಗಳು ದೃಷ್ಟಿ ಮತ್ತು ಶ್ರವಣ ತೊಂದರೆಗಳನ್ನು ಹೊಂದಿರುತ್ತಾರೆ. ಈ ತೊಂದರೆಗಳನ್ನು ಕನ್ನಡಕ ಅಥವಾ ಕಣ್ಣಿನ ಶಸ್ತ್ರ ಚಿಕಿತ್ಸೆಯಿಂದ ಪರಿಹರಿಸಿಕೊಳ್ಳಬಹುದು.

ಸೂಚನೆ: ಬುದ್ಧಿಮಾಂದ್ಯತೆಯೊಂದಿಗೆ ಸೆರೆಬ್ರಲ್ ಪಾಲ್ಸಿ, ಮಾತಿನ ಸಮಸ್ಯೆ, ಆಟಿಸಂ ಮುಂತಾದ ಬೆಳವಣಿಗೆಯ ತೊಂದರೆಗಳು ಕಾಣಿಸಿಕೊಳ್ಳಬಹುದು.

Q

ಬುದ್ಧಿಮಾಂದ್ಯತೆ ಬರಲು ಕಾರಣಗಳು

A

ಬುದ್ಧಿಮಾಂದ್ಯತೆಗೆ ನೂರಕ್ಕಿಂತ ಹೆಚ್ಚು ಕಾರಣಗಳಿವೆ. ಈ ಕೆಳಗೆ ಹೇಳಲಾದವು ಕೇವಲ ಸೂಚಕಗಳು ಮಾತ್ರ.

ಅವಧಿ ಪೂರ್ವ ಜನನ ಅಥವಾ ಪ್ರಸವಪೂರ್ವದ ಕಾರಣಗಳು:

  • ವರ್ಣತಂತುವಿನ ಕಾರಣದಿಂದ ಬರುವ ಅಸ್ವಸ್ಥತೆಗಳಾದ ಡೌನ್ ಸಿಂಡ್ರೋಮ್, ಫ್ರಜೈಲ್ ಎಕ್ಸ್ ಸಿಂಡ್ರೋಮ್, ಪ್ರೇಡರ್‌ ವಿಲಿ ಸಿಂಡ್ರೋಮ್‌, ಲಿನಿಫೆಲ್ಟರ್ಸ್ ಸಿಂಡ್ರೋಮ್‌
  • ಏಕ ವಂಶವಾಹಿ ಖಾಯಿಲೆಗಳು
  • ಆನುವಂಶೀಯವಾಗಿ ಬರುವ ರುಬಿಸ್ಟೈನ್‌ ಟಬಿ ಸಿಂಡ್ರೋಮ್‌ ಮತ್ತು ಡೆ ಲಾಂಜ್ ಸಿಂಡ್ರೋಮ್‌
  • ತಾಯಿಗೆ ಸಂಬಂಧಿಸಿದ ಅಥವಾ ವಾತಾವರಣದ ಪ್ರಭಾವಗಳು
  • ಐಯೋಡಿನ್‌ ಮತ್ತು ಫೋಲಿಕ್‌ ಆಸಿಡ್‌ನಂತಹ ಪೌಷ್ಠಿಕಾಂಶಗಳ ಕೊರತೆ
  • ಗರ್ಭಾವಸ್ಥೆಯಲ್ಲಿ ತೀವ್ರ ಅಪೌಷ್ಟಿಕತೆ
  • ಗರ್ಭಿಣಿಯಾಗಿದ್ದಾಗ ಮದ್ಯ, ನಿಕೊಟಿನ್‌ ಮತ್ತು ಕೊಕೇನ್‌ನಂತಹ ಮಾದಕವಸ್ತುಗಳ ಸೇವನೆ
  • ಗರ್ಭಾವಸ್ಥೆಯಲ್ಲಿ ಹಾನಿಕಾರಕ ರಾಸಾಯನಿಕಗಳೊಂದಿಗೆ ಕೆಲಸಮಾಡುವುದು, ಲೋಹಗಳೊಂದಿಗೆ ಸಂಪರ್ಕ ಮತ್ತು ಔಷಧಗಳ ಸೇವನೆ
  • ತಾಯ್ತನದ ಸೋಂಕುಗಳಾದ ರುಬೆಲ್ಲ, ಸಿಫಿಲಿಸ್‌ ಮತ್ತು ಎಚ್‌ಐವಿ

ಜನನದ ವೇಳೆ ಅಥವಾ ಹೆರಿಗೆ ಸಮಯದಲ್ಲಿನ ಕಾರಣಗಳು:

ಮೂರನೆ ತ್ರೈಮಾಸಿಕದಲ್ಲಿ

  • ಪ್ಲೆಸೆಂಟಲ್‌ ಡಿಸ್‌ಫಂಕ್ಷನ್‌
  • ತಾಯಿಯಲ್ಲಿ ಹೃದಯ ಅಥವಾ ಕಿಡ್ನಿ ತೊಂದರೆಗಳು

ಪ್ರಸವದ ಸಮಯದಲ್ಲಿ

  • ಅವಧಿಪೂರ್ವ ಜನನ
  • ಜನಿಸಿದಾಗ ಅತಿ ಕಡಿಮೆ ತೂಕ
  • ಜನನದಲ್ಲಿ ಉಸಿರಾಟದ ತೊಂದರೆ
  • ಜನನದ ಆಘಾತ
  • ದೀರ್ಘಕಾಲ ಅನುಭವಿಸಿದ ಪ್ರಸವ ವೇದನೆ

ಜನಿಸಿದ 4 ವಾರಗಳ ಬಳಿಕ ಅಥವಾ ನವಜಾತ ಕಾರಣಗಳು:

  • ಜಾಂಡೀಸ್‌
  • ಹೈಪೊಗ್ಲೈಸಿಮಿಯಾ
  • ಸೆಪ್ಟಿಸೆಮಿಯಾ
  • ಕಷ್ಟಕರ ಪ್ರಸವ

ಶೈಶವ ಅಥವಾ ಬಾಲ್ಯದಲ್ಲಿ

  • ಮಿದುಳು ಸೋಂಕುಗಳಾದ ಕ್ಷಯ ಅಥವಾ ಬ್ಯಾಕ್ಟೀರಿಯಲ್ ಮೆನಿಜೈಂಟಿಸ್‌
  • ಅತಿಯಾಗಿ ಸೀಸದ ಬಳಕೆ
  • ತೀವ್ರಸ್ವರೂಪದ ಅಥವಾ ದೀರ್ಘಕಾಲದ ಅಪೌಷ್ಟಿಕತೆ
  • ತಲೆಗೆ ಉಂಟಾಗುವ ಗಾಯ

Q

ಬುದ್ಧಿಮಾಂದ್ಯತೆಗೆ ಚಿಕಿತ್ಸೆ

A

ಬುದ್ಧಿಮಾಂದ್ಯತೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ಬೆಂಬಲ ಮತ್ತು ಆರೈಕೆಯಿಂದ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿ ಆರೋಗ್ಯವಾಗಿ ಮತ್ತು ಸ್ವತಂತ್ರವಾಗಿ ಬದುಕಬಹುದು. ಸರಿಯಾದ ಆರೈಕೆ ಸಿಗದೆ ಮಕ್ಕಳಲ್ಲಿ ಅನಾರೋಗ್ಯ ಮತ್ತು ವರ್ತನೆಯ ಸಮಸ್ಯೆ ಕಾಣಿಸಬಹುದು. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆ ಆರೈಕೆ ನೀಡಬೇಕು.

Q

ಬುದ್ಧಿಮಾಂದ್ಯತೆ ಹೊಂದಿರುವವರ ಆರೈಕೆ

A

ಬುದ್ಧಿಮಾಂದ್ಯತೆ ಜೀವನಪರ್ಯಂತ ಇರುವ ಸ್ಥಿತಿಯಾಗಿದೆ. ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಯ ಆರೈಕೆ ಒತ್ತಡದಿಂದ ಕೂಡಿದ್ದು ಅದಕ್ಕೆ ಸಹನೆ ಅತ್ಯಗತ್ಯ. ಸಂತಸದ ಸಂಗತಿಯೆಂದರೆ ಸಾಕಷ್ಟು ಸಂಪನ್ಮೂಲಗಳು ಹಾಗೂ ಸಹಾಯ ಗುಂಪುಗಳು ಆರೈಕೆದಾರರ ನೆರವಿಗೆ ಬರುತ್ತವೆ ಮತ್ತು ಅವರ ಪ್ರೀತಿಪಾತ್ರರರು ಸ್ವತಂತ್ರವಾಗಿ ಆರೋಗ್ಯಯುತ ಜೀವನ ನಡೆಸುವ ಭರವಸೆ ನೀಡುತ್ತವೆ.

ಸಮಾನತೆ ಎಂಬ ಪರಿಕಲ್ಪನೆ ಸ್ಕ್ಯಾಂಡಿನೇವಿಯನ್‌ ದೇಶಗಳಲ್ಲಿ ಹುಟ್ಟಿದ್ದು. ಇತರ ಸಾಮಾನ್ಯ ಜನರಿಗೆ ಲಭ್ಯವಿರುವ ದೈನಂದಿನ ಬದುಕಿನ ಅವಶ್ಯಕತೆಗಳು ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿಗಳಿಗೂ ದೊರಕುವಂತಹ ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ. ಗೌರವ ಮತ್ತು ಘನತೆಯೊಂದಿಗೆ ತಮ್ಮ ಬದುಕು ಸಾಗಿಸುವುದು ಬುದ್ಧಿಮಾಂದ್ಯತೆ ಹೊಂದಿದ ವ್ಯಕ್ತಿಗಳ ಹಕ್ಕಾಗಿದೆ. ಅವರನ್ನು ಸಮಾಜದ ಭಾಗವಾಗಿ ಪರಿಗಣಿಸುವುದು ಅತ್ಯಂತ ಪ್ರಮುಖ ಸಂಗತಿ. ಅವರ ವಿರುದ್ಧ ತಾರತಮ್ಯ ಮಾಡುವುದು ತರವಲ್ಲ.

ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವ್ಯಕ್ತಿಯ ಆರೈಕೆದಾರರು ಸಾಕಷ್ಟು ಒತ್ತಡ ಎದುರಿಸುತ್ತಾರೆ. ಸ್ನೇಹಿತರು, ಕುಟುಂಬ ಮತ್ತು ಸಮುದಾಯದಿಂದ ಎದುರಾಗುವ ಕಳಂಕ, ದಿನನಿತ್ಯ ಆರೈಕೆ, ವೈಯಕ್ತಿಕ ಕೆಲಸ ಮಾಡಲು ಸಮಯ ಸಿಗದೆ ಇರುವುದು, ಅಥವಾ ಹಣಕಾಸಿನ ಸಮಸ್ಯೆಗಳಿಂದ ಒತ್ತಡ ಉಂಟಾಗುತ್ತದೆ.

ಆರೈಕೆದಾರರು ತಮ್ಮ ಸ್ವಂತ ಯೋಗಕ್ಷೇಮಕ್ಕೆ ಸಮಯ ನೀಡುವುದು ಅತ್ಯಗತ್ಯ. ಬುದ್ಧಿಮಾಂದ್ಯತೆಯ ಬಗ್ಗೆ ಹೆಚ್ಚು ತಿಳಿದುಕೊಂಡು, ವ್ಯಕ್ತಿಯ ಸುತ್ತ ಸಹಜ ವಾತಾವರಣ ಇರುವಂತೆ ನೋಡಿಕೊಳ್ಳುವ ಬಗ್ಗೆ ಇತರ ಆರೈಕೆದಾರರ ಸಲಹೆ ಪಡೆಯಬಹುದು.

ಆರೈಕೆದಾರರಿಗೆ ಸಲಹೆಗಳು:

  • ತಜ್ಞರಿಂದ ಮಾಹಿತಿ ಪಡೆಯಿರಿ ಮತ್ತು ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
  • ಬೆಂಬಲಕ್ಕಾಗಿ ಇತರ ಆರೈಕೆದಾರರ ಜೊತೆ ಮಾತನಾಡಿ
  • ನಿಮ್ಮ ಮಗುವಿನ ನ್ಯೂನತೆಗಿಂತ ಸಾಮರ್ಥ್ಯದ ಕುರಿತು ಗಮನಹರಿಸಿ
  • ವಿಶೇಷ ಶಿಕ್ಷಣ ತಜ್ಞರಿಂದ ತರಬೇತಿ ನೀಡುವ ವಿಧಾನಗಳನ್ನು ಕಲಿತು ಅದನ್ನು ಅಭ್ಯಾಸ ಮಾಡಿ
  • ಬುದ್ಧಿಮಾಂದ್ಯತೆ ಇರುವ ಮಗು ನಿಧಾನವಾಗಿ ಕಲಿಯುವರು, ಆದರೆ ಅದಕ್ಕೆ ತಾಳ್ಮೆಯಿಂದ ಪಟ್ಟುಹಿಡಿದು ಕಲಿಸಿದರೆ ಹಲವು ಕೌಶಲ್ಯಗಳನ್ನು ಕಲಿಯಬಹುದು ಮತ್ತು ಒಂದು ಮಟ್ಟಕ್ಕೆ ಸ್ವಾವಲಂಬಿಯಾಗಬಹುದು.
  • ಬುದ್ಧಿಮಾಂದ್ಯತೆ ಹೊಂದಿರುವವರ ಕುರಿತು ಅತಿಯಾದ ಕಾಳಜಿ ಬೇಡ.
  • ಬುದ್ಧಿಮಾಂದ್ಯತೆ ವಾಸಿಯಾಗಲು ಅವೈಜ್ಞಾನಿಕ ಮಾರ್ಗಗಳನ್ನು ಹುಡುಕಬೇಡಿ. ಅವುಗಳಿಂದ ಯಾವ  ಉಪಯೋಗವಿಲ್ಲ.

ಕೆಲವು ಗಿಡಮೂಲಿಕೆಗಳು ಬುದ್ಧಿಮಾಂದ್ಯತೆಯನ್ನು ಗುಣಪಡಿಸಬಹುದು ಎಂಬ ಹಲವು ನಂಬಿಕೆಗಳಿವೆ. ಈ ನಂಬಿಕೆಗಳು ಸಂಪೂರ್ಣವಾಗಿ ಸುಳ್ಳು. ಬುದ್ಧಿಮಾಂದ್ಯತೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಮಗುವಿನ ವಿಕಲತೆಯ ಮಟ್ಟವನ್ನು ತಿಳಿಯಲು ಮತ್ತು ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮಾಡಿ ಸಾಮರ್ಥ್ಯ ಮತ್ತು ಮಿತಿಗಳನ್ನು ತಿಳಿದುಕೊಳ್ಳಲು ವೈದ್ಯಕೀಯ ನೆರವು ಪಡೆಯುವುದು ಮುಖ್ಯ. 

ಪ್ರಾಥಮಿಕ ಹಂತದಲ್ಲಿನ ನೆರವು:

ಬುದ್ಧಿಮಾಂದ್ಯತೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಮಾಡಿ ಮಗುವಿನಲ್ಲಿ ಸುರಕ್ಷತಾ ಭಾವವನ್ನು ಉಂಟುಮಾಡುವ ಪ್ರೋತ್ಸಾಹದಾಯಕ ಹಾಗೂ ಪ್ರೀತಿಪೂರ್ವಕ ವಾತಾವರಣ ಕಲ್ಪಿಸಿದರೆ ಮಗುವಿಗೆ ಸಹಾಯವಾಗುತ್ತದೆ. 

ಶಿಕ್ಷಣ:

ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳಿಗೆ ಓದು ಬರಹ, ಶಿಸ್ತು ಮತ್ತು ಸಾಮಾಜಿಕ ಕೌಶಲ್ಯ, ದೈನಂದಿನ ಕೆಲಸ ಮಾಡುವ ಬಗೆ, , ಈ ಎಲ್ಲವನ್ನೂ ತಾಳ್ಮೆಯಿಂದ ಕಲಿಸಿಕೊಡಬೇಕು. ಅಲ್ಪ ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳನ್ನು ವಿಶೇಷ ಶಾಲೆಯ ಬದಲು ಸಾಮಾನ್ಯ ಶಾಲೆಗೆ ಕಳಿಸಬೇಕುx. ತೀವ್ರವಾದ ಬುದ್ಧಿಮಾಂದ್ಯತೆ ಹೊಂದಿರುವವರು ಅವರಿಗಾಗಿಯೇ ಸಿದ್ಧಪಡಿಸಿದ ವಿಶೇಷ ಶಾಲೆಗೆ ಸೇರಿಸಬಹುದು. ಪಾಲಕರು ಯಾವುದೇ ಶಾಲೆಯನ್ನು ಆಯ್ದುಕೊಂಡರೂ, ಮಗುವಿಗೆ ಶೈಕ್ಷಣಿಕ ಅನುಭವ ನೀಡುವುದು ಅತ್ಯಂತ ಮಹತ್ವದ್ದು.

ವೃತ್ತಿಪರ ತರಬೇತಿ:

ಬುದ್ಧಿಮಾಂದ್ಯತೆ ಹೊಂದಿರುವವರ ಸಾಮರ್ಥ್ಯವನ್ನು ನಾವು ಕಡೆಗಣಿಸುತ್ತೇವೆ. ಆದರೆ ಇವರಿಗೆ ವೃತ್ತಿಪರ ತರಬೇತಿ ನೀಡಿ ಅವರನ್ನು ಕೆಲಸಕ್ಕೆ ತಯಾರು ಮಾಡಬಹುದು.

Q

ಬುದ್ಧಿಮಾಂದ್ಯತೆಯನ್ನು ತಡೆಗಟ್ಟಬಹುದೆ?

A

ಬುದ್ಧಿಮಾಂದ್ಯತೆಯನ್ನು ಈ ಕೆಲವು ರೀತಿಯಲ್ಲಿ ತಡೆಗಟ್ಟಬಹುದು: 

  • ಗರ್ಭಿಣಿ ಮಹಿಳೆಯ ಆರೋಗ್ಯ ಚೆನ್ನಾಗಿದ್ದು, ಅವಳು ಪೌಷ್ಟಿಕ ಆಹಾರ ಸೇವಿಸಿದರೆ ಶಿಸುವಿನ ತೂಕ ಕಡಿಮೆಯಾಗುವುದಿಲ್ಲ.
  • ಐಯೋಡಿನ್‌ಯುಕ್ತ ಉಪ್ಪು ಬಳಕೆ.
  • ನರಮಂಡಲದ ತೊಂದರೆ ಕಡಿಮೆ ಮಾಡಲು ಫೋಲಿಕ್‌ ಆಸಿಡ್‌ ಮಾತ್ರೆ ಸೇವನೆ.
  • ಕಬ್ಬಿಣ್ಣ ಮತ್ತು ಕ್ಯಾಲೋರಿಯುಕ್ತ ಪೌಷ್ಠಿಕಾಂಶಗಳ ಸೇವನೆ.
  • ಮೆದುಳಿಗೆ ಹಾನಿಮಾಡುವ ರೋಗಗಳನ್ನು ತಡೆಯಲು ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುವುದು.
  • ಅತಿ ಕಿರಿಯ ವಯಸ್ಸಿನಲ್ಲಿ ಗರ್ಭ ಧರಿಸಿದರೆ ಜನನ ಸಂದರ್ಭದಲ್ಲಿ ತೊಂದರೆ ಹೆಚ್ಚು. ಆದ್ದರಿಂದ 21 ವರ್ಷ ವಯಸ್ಸಿಗಿಂತ ಮೊದಲು ಗರ್ಭಧಾರಣೆಯಾಗಬಾರದು. ಹಾಗೆಯೇ 35 ವರ್ಷ ವಯಸ್ಸಿನ ನಂತರದ ಗರ್ಭಧಾರಣೆಯು ಶಿಶುವಿನ ಆರೋಗ್ಯಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. 35 ವಯಸ್ಸು ಆದ ಮೇಲೆ ಗರ್ಭ ಧಾರಣೆಯಾದರೆ, ಮಗುವಿಗೆ ಡೌನ್ ಸಿಂಡ್ರೋಮ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
  • ಗರ್ಭಧಾರಣೆಯ ನಡುವೆ ಸಾಕಷ್ಟು ಅಂತರವಿರಬೇಕು.
  • ಗರ್ಭಾವಸ್ಥೆಯಲ್ಲಿ ಮದ್ಯ, ನಿಕೋಟಿನ್‌, ಕೊಕೇನಂತಹ ಹಾನಿಕಾರಕ ವಸ್ತುಗಳನ್ನು ಸೇವಿಸಬಾರದು 
  • ಗರ್ಭಧರಿಸಿದ ಮಹಿಳೆಯಲ್ಲಿ ಸಿಫಿಲಿಸ್‌ನಂತಹ ಸೋಂಕಿನ ಪರೀಕ್ಷೆ ಮಾಡಬೇಕು.
  • ತಾಯಿ ಆರ್‌ಎಚ್‌ ನೆಗೆಟೀವ್‌ ರಕ್ತ ಹೊಂದಿದ್ದರೆ ಆರ್‌ಎಚ್‌ ಐಎಸ್‌ ಒ-ಪ್ರತಿರಕ್ಷಕವನ್ನು ನೀಡಬೇಕು. ಆಂಟಿ ಡಿ ಇಮಿನ್ಯೋಗ್ಲೊಬಿನ್‌ ಹಾಕುವುದರಿಂದ ಭ್ರೂಣಕ್ಕಾಗುವ ಹಾನಿಯನ್ನು ತಡೆಯಬಹುದು.
  • ಬಾಲ್ಯಾವಸ್ಥೆಯಲ್ಲಿ ಸಂಭವಿಸಬಹುದಾದ ತೀವ್ರಸ್ವರೂಪದ ಅತಿಸಾರ ಮತ್ತು ಮೆದುಳಿನ ಸೋಂಕುಗಳಿಗೆ ಚಿಕಿತ್ಸೆ ಪಡೆಯಬೇಕು.

ವಿಶ್ವ ಆರೋಗ್ಯ ಸಂಸ್ಥೆಗಾಗಿ (WHO) ಬುದ್ಧಿಮಾಂದ್ಯತೆಯ ಬಗ್ಗೆ ರೂಪಿಸಲಾಗಿರುವ ದಾಖಲೆಯನ್ನು ಆಧರಿಸಿ ಈ ಲೇಖನವನ್ನು ರಚಿಸಲಾಗಿದೆ. ಇದರ ಮೂಲ ಲೇಖಕರು ಬೆಂಗಳೂರಿನ ನಿಮ್ಹಾನ್ಸ್‌ನ ಡಾ.ಸತೀಶ್ ಗಿರಿಮಾಜಿ, ಬಾಂಗ್ಲಾದೇಶದ ಪ್ರೊಟೊಬೋಂದಿ ಫೌಂಢೇಶನ್ನಿನ ಡಾ.ಸುಲ್ತಾನಾ ಎಸ್ ಜಮಾನ್, ಶ್ರೀಲಂಕಾದ ಸುಸಿತ ಸುವಸೇಥಾ ಪೇರೆಂಟ್ಸ್ ಅಸೋಸಿಯೇಷನ್ನಿನ ಡಾ.ಪಿ.ಎಂ ವಿಜೇತುಂಗ,ಮತ್ತು ಬ್ಯಾಂಕಾಕ್‌ನ ರಾಜಾನುಕಲ್ ಆಸ್ಪತ್ರೆಯ ಡಾ.ಉದೋಮ್‌ ಪೆಜರಸಂಗಮ್.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org