ಕಲಿಯುವ ತೊಂದರೆ (ಲರ್ನಿಂಗ್ ಡಿಸಬಿಲಿಟಿ - ಎಲ್ ಡಿ)

Q

ಕಲಿಯುವ ತೊಂದರೆಗಳು ಎಂದರೇನು?

A

ಕಲಿಕೆಯಲ್ಲಿನ ತೊಂದರೆ ನರವೈಜ್ಞಾನಿಕ ಖಾಯಿಲೆಯಾಗಿದ್ದು, ಮಾಹಿತಿ ಕಳುಹಿಸುವ, ಸ್ವೀಕರಿಸುವ, ಮತ್ತು ಮಾಹಿತಿಯನ್ನು ಪರಿಷ್ಕರಿಸುವ ಮಿದುಳಿನ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಒಂದು ಮಗು ಕಲಿಕೆಯ ವೈಕಲ್ಯಗಳನ್ನು ಹೊಂದಿದ್ದರೆ ಆ ಮಗುವಿಗೆ ಬರೆಯಲು, ಓದಲು, ಮಾತನಾಡಲು, ಆಲಿಸಲು, ಗಣಿತದ ಪರಿಕಲ್ಪನೆಗಳನ್ನು ಮತ್ತು ಸಾಮಾನ್ಯ ಗ್ರಹಿಕೆಯನ್ನು ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. ಕಲಿಕೆಯ ವೈಕಲ್ಯತೆಯು ಡಿಸ್ಲೆಕ್ಸಿಯ, ಡಿಸ್ಪ್ರಾಕ್ಸಿಯ, ಡಿಸ್ಕ್ಯಾಲ್ಕ್ಯುಲಿಯ ಮತ್ತು ಡಿಸ್ಗ್ರಾಫಿಯ ಖಾಯಿಲೆಯನ್ನು ಒಳಗೊಂಡಿದೆ. ಪ್ರತಿಯೊಂದೂ ಖಾಯಿಲೆ ಕೂಡ ಇನ್ನೊಂದರ ಜೊತೆ ಕಾಣಿಸಿಕೊಳ್ಳಬಹುದು.

ಸೂಚನೆ: ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆ, ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಹಿನ್ನಲೆಯಿಂದ ಕಲಿಕೆಯ ವೈಕಲ್ಯಗಳು ಉಂಟಾಗುವುದಿಲ್ಲ.  ಮಗು ದುರ್ಬಲ ಅಥವಾ ಸೋಮಾರಿ ಎಂಬುದನ್ನು ಇವುಗಳು ಸೂಚಿಸುವುದಿಲ್ಲ.

ಕಲಿಕೆಯ ತೊಂದರೆಯ ವ್ಯಾಖ್ಯೆ:

ಅಮೆರಿಕ ಸರ್ಕಾರದ ಸಾರ್ವಜನಿಕ ಕಾನೂನು 94-142ರಡಿಯಲ್ಲಿ ನಿರೂಪಿಸಿರುವ 'ಕಲಿಕಾ ತೊಂದರೆಯ ವ್ಯಾಖ್ಯೆ'ಯನ್ನೇ ಭಾರತದಲ್ಲಿಯೂ  ಅಳವಡಿಸಿಕೊಳ್ಳಲಾಗಿದೆ.

ಗ್ರಹಿಕೆ ಅಥವಾ ಬರವಣಿಗೆ ಹಾಗೂ ಮಾತಿನ ಮೂಲಕ ಭಾಷೆಯನ್ನು ಉಪಯೋಗಿಸುವ ಸಂದರ್ಭದಲ್ಲಿ, ಯಾವುದೇ ಒಂದು ಅಥವಾ ಹೆಚ್ಚು ಪ್ರಾಥಮಿಕ ಮಾನಸಿಕ ಪ್ರಕ್ರಿಯೆಗಳು ಒಳಗೊಳ್ಳುವ ಒಂದು ವೈಕಲ್ಯತೆಗೆ ‘ನಿರ್ದಿಷ್ಟ ಕಲಿಕೆಯ ತೊಂದರೆ’ ಎನ್ನಲಾಗುತ್ತದೆ. ಈ ವಿಕಲತೆಯಿಂದಾಗಿ ಕೇಳುವುದು, ಮಾತನಾಡುವುದು, ಓದುವುದು, ಶಬ್ದಗಳನ್ನು ಉಚ್ಚರಿಸುವುದು ಅಥವಾ ಗಣಿತದ ಲೆಕ್ಕಾಚಾರಗಳನ್ನು ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ಅಸಾಮರ್ಥ್ಯ ಕಾಣಿಸಿಕೊಳ್ಳಬಹುದು.

ಇಂದ್ರಿಯಜನ್ಯ ಅಸಾಮರ್ಥ್ಯಗಳು, ಮೆದುಳಿನಲ್ಲಾಗುವ ಗಾಯ, ಮೆದುಳಿನ ಕನಿಷ್ಠತಮ ಕಾರ್ಯನಿರ್ವಹಣೆ, ಡಿಸ್ಲೆಕ್ಸಿಯಾ ಮತ್ತು ಅಭಿವೃದ್ಧಿಹೊಂದುವ ಅಫೇಸಿಯಾ ಮುಂತಾದ ಅಸ್ವಸ್ಥತೆಗಳನ್ನು ಕಲಿಕಾ ತೊಂದರೆಯು ಒಳಗೊಳ್ಳುತ್ತದೆ.

ದೃಷ್ಟಿ, ಶ್ರವಣದೋಷಗ ಮತ್ತು ಚಲನಾ ವೈಕಲ್ಯ ಅಥವಾ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ, ಭಾವನಾತ್ಮಕ ಅಥವಾ ವಾತಾರವರಣದ ತೊಡಕುಗಳಿಂದ ಕೂಡಿದ, ಸಾಂಸ್ಕೃತಿಕ ಅಥವಾ ಆರ್ಥಿಕ ತೊಂದರೆಗಳನ್ನು ಹೊಂದಿರುವುದರ ಪರಿಣಾಮವಾಗಿ ಕಲಿಕೆಯಲ್ಲಿ ತೊಂದರೆಯನ್ನು ಹೊಂದಿರುವ ಮಕ್ಕಳನ್ನು ಕಲಿಕಾ ವೈಕಲ್ಯ ಹೊಂದಿದವರೆಂದು ಹೇಳಲು ಸಾಧ್ಯವಿಲ್ಲ.

ಕೃಪೆ: ಫೆಡೆರಲ್‌ ರಿಜಿಸ್ಟರ್‌, 1977,ಪಿ.65083) (ಕಾರಂತ್‌, 2002)

Q

ಯಾವುದು ಕಲಿಯುವ ತೊಂದರೆಯಲ್ಲ?

A

ಕೆಲವು ಮಕ್ಕಳು ಆರಂಭದಲ್ಲಿ ನಿಧಾನವಾಗಿ ಕಲಿಯಬಹುದು. ಆದರೆ ಅವರು ಕ್ರಮೇಣವಾಗಿ ಕಲಿಯಲು ಮತ್ತು ಅಧ್ಯಯನಕ್ಕೆ ಹೊಂದಿಕೊಂಡು ಇತರ ಚಟುವಟಿಕೆಗಳನ್ನು ನಿಭಾಯಿಸಲು ಸಮರ್ಥರಾಗುತ್ತಾರೆ. ಕೆಲವು ಮಕ್ಕಳು ನಿರ್ದಿಷ್ಟ ರೂಪದ ಕಲಿಕೆಯಲ್ಲಿ (ಹೊಸ ಭಾಷೆಯನ್ನು ಕಲಿಯುವುದು,ನಿರ್ದಿಷ್ಟ ಚಟುವಟಿಕೆ ಅಥವಾ ಕೌಶಲ್ಯ,ಅಥವಾ ಶೈಕ್ಷಣಿಕ ವಿಷಯಗಳು) ಅಥವಾ ಕ್ರೀಡೆಯಲ್ಲಿ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ಅನಾಸಕ್ತಿ ತೋರಬಹುದು. ಈ ಲಕ್ಷಣಗಳು ಮಗುವಿನ  ಇಷ್ಟ ಅಥವಾ ಅನಿಷ್ಟವನ್ನು ಸೂಚಿಸುತ್ತವೆ. ಇದು ಕಲಿಕೆಯ ತೊಂದರೆಯ ಸೂಚಕವಲ್ಲ.

‘ಲರ್ನಿಂಗ್ ಡಿಸಾರ್ಡರ್ (ಎಲ್.ಡಿ) ಕುರಿತಾಗಿರುವ ತಪ್ಪು ಕಲ್ಪನೆಗಳು, ಮಾಹಿತಿಯ ಕೊರತೆ, ಸಮಾಜದಲ್ಲಿರುವ ಮೂಢ ನಂಬಿಕೆ ಇವೆಲ್ಲವೂ ಪೋಷಕರಿಗೆ ಮತ್ತು ಮಕ್ಕಳಿಗೆ ಇದನ್ನು ಮೀರುವಲ್ಲಿ ಅಡ್ಡಗೋಡೆಯಾಗಿ ನಿಲ್ಲುತ್ತವೆ. ಎಲ್‌ಡಿಯನ್ನು ಗುರುತಿಸಿ ಸೂಕ್ತ ಚಿಕಿತ್ಸೆಯಿಂದ ಪರಿಹರಿಸದೇ ಹೋದರೆ, ಲಕ್ಷಾಂತರ ಮಕ್ಕಳು ಹಿಂದುಳಿಯುತ್ತಾರೆ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ, ಬದುಕಿನಲ್ಲಿ ಅವರ ಆಸಕ್ತಿ, ನಿರೀಕ್ಷೆಗಳು ಕಡಿಮೆಯಾಗುತ್ತವೆ. ಕನಸನ್ನು ನನಸಾಗಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ’- ಜೇಮ್ಸ್‌ ಎಚ್‌.ವೆಂಡಾರ್ಫ್, ಕಾರ್ಯಕಾರಿ ನಿರ್ದೇಶಕ, ಕಲಿಕೆ ವೈಕಲ್ಯತೆಗಾಗಿನ ರಾಷ್ಟ್ರೀಯ ಕೇಂದ್ರ.

Q

ಕಲಿಯುವ ತೊಂದರೆಗೆ ಕಾರಣಗಳೇನು?

A

ಕಲಿಕೆಯ ತೊಂದರೆಗಳಿಗೆ ಯಾವುದೇ ಒಂದು ನಿರ್ದಿಷ್ಟ ಕಾರಣವಿಲ್ಲ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ. ಆದರೂ, ಕಲಿಕೆಯ ತೊಂದರೆಯನ್ನುಂಟುಮಾಡುವ ಕೆಲವು ಅಂಶಗಳನ್ನು ಪಟ್ಟಿಮಾಡಬಹುದು. ಅವುಗಳೆಂದರೆ:

ಆನುವಂಶಿಕತೆ: ಪಾಲಕರಲ್ಲಿ ಕಲಿಕೆಯ ತೊಂದರೆಯಿದ್ದರೆ ಅದು ಮಗುವಿನಲ್ಲಿಯೂ ಬೆಳವಣಿಗೆಯಾಗುವ ಸಾಧ್ಯತೆಗಳಿರುತ್ತವೆ ಎಂಬುದು ಅಧ್ಯಯನಗಳ ಮೂಲಕ ತಿಳಿದು ಬರುತ್ತದೆ.

ಜನನ ಸಂದರ್ಭದಲ್ಲಿನ ಅಥವಾ ಜನನಾನಂತರದ ಅನಾರೋಗ್ಯ ಪರಿಸ್ಥಿತಿ: ಜನನ ಸಂದರ್ಭದಲ್ಲಿ ಅಥವಾ ಜನನಾನಂತರ ಸಂಭವಿಸುವ ಯಾವುದೇ ಅನಾರೋಗ್ಯ ಅಥವಾ ಗಾಯಗಳು ಕಲಿಕೆಯ ತೊಂದರೆಗಳನ್ನು ಉಂಟುಮಾಡಬಹುದು. ಗರ್ಭವತಿಯಾಗಿದ್ದಾಗ ಡ್ರಗ್ ಸೇವನೆ, ಮದ್ಯಪಾನ, ದೈಹಿಕ ಆಘಾತ, ಗರ್ಭಕೋಶದಲ್ಲಿ ಅಸಮರ್ಪಕ ಬೆಳವಣಿಗೆ, ಹುಟ್ಟಿದಾಗ ಕಡಿಮೆ ತೂಕ ಹೊಂದಿರುವುದು, ಅವಧಿಪೂರ್ವ ಅಥವಾ ಅವಧಿಗಿಂತಲೂ ಅಧಿಕ ಕಾಲದ ನಂತರದ ಜನನ ಮುಂತಾದ ಸಂಭಾವ್ಯ ಕಾರಣಗಳಿಂದಾಗಿಯೂ ಮಗುವಿನಲ್ಲಿ ಕಲಿಕೆಯ ತೊಂದರೆ ಕಾಣಿಸಿಕೊಳ್ಳಬಹುದು.

ಶೈಶವಾವಸ್ಥೆಯಲ್ಲಿನ ಒತ್ತಡ: ಜನಾನಂತರ ಸಂಭವಿಸುವ ಹೆಚ್ಚಿನ ಪ್ರಮಾಣದ ಜ್ವರ, ತಲೆಗುಂಟಾಗುವ ಗಾಯ ಅಥವಾ ಅಪೌಷ್ಟಿಕ ಆಹಾರ ಮುಂತಾದ ತೀವ್ರ ಒತ್ತಡಕಾರಕ ಸಂಗತಿಗಳು.

ವಾತಾವರಣ: ಲೆಡ್ ನಂತಹ ವಿಷಕಾರಿ ವಸ್ತುಗಳ ವಿಪರೀತ ಬಳಕೆ (ಬಣ್ಣಗಳು, ಸಿರಾಮಿಕ್ಸ್, ಗೊಂಬೆ ಮುಂತಾದವುಗಳು)

ಸಹಸ್ವಭಾವಗಳು: ಕಲಿಕೆಯ ತೊಂದರೆಯನ್ನು ಹೊಂದಿರುವ ಮಕ್ಕಳಲ್ಲಿ ಸದಾ ಇತರರ ಗಮನಸೆಳೆಯಬೇಕೆನ್ನುವ ಸಮಸ್ಯೆಗಳು ಅಥವಾ ವಿಚ್ಛಿದ್ರಕಾರಕ ವರ್ತನೆಯ ಅಸ್ವಸ್ಥತೆಗಳ ಸಂಭವನೀಯತೆ ಇತರ ಸ್ವಾಭಾವಿಕ ಮಕ್ಕಳಿಗಿಂತಲೂ ಹೆಚ್ಚು. ಓದುವಲ್ಲಿ ತೊಂದರೆಯನ್ನು ಹೊಂದಿರುವ 25%ರಷ್ಟು ಮಕ್ಕಳು ಎಡಿಎಚ್ ಡಿ ಯನ್ನು ಕೂಡ ಹೊಂದಿರುತ್ತಾರೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ, ಎಡಿಎಚ್ ಡಿ ಯನ್ನು ಹೊಂದಿರುವ 15% ರಿಂದ 30%ರಷ್ಟು ಮಕ್ಕಳು ಕಲಿಕೆಯ ತೊಂದರೆಯನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ.   

Q

ಕಲಿಯುವ ತೊಂದರೆಯ ಲಕ್ಷಣಗಳಾವುವು?

A

ಮಗುವಿನ ಸಾಮಾನ್ಯವಾದ ಮಾನಸಿಕ ಬೆಳವಣಿಗೆಯಲ್ಲಿ ಗ್ರಹಿಕೆ ಮತ್ತು ಕೆಲವು ಚಲನಾ ಕೌಶಲ್ಯಗಳನ್ನು ಅದು ಬೆಳೆಸಿಕೊಳ್ಳುವುದನ್ನು ನಿರೀಕ್ಷಿಸಲಾಗುತ್ತದೆ. ಇದರಲ್ಲಿ ಯಾವುದೇ ಅಡೆತಡೆ ಅಥವಾ ಬೆಳವಣಿಗೆಯಲ್ಲಿ ಅಂತರ ಕಂಡುಬಂದರೆ ಅದು ಕಲಿಕಾ ವೈಕಲ್ಯದ ಲಕ್ಷಣವಾಗಿರಬಹುದು. ಖಾಯಿಲೆಯ ತಪಾಸಣೆಗೆ ಮೊದಲು ಅವಿರತ ಸಂಶೋಧನೆಯಿಂದ ಸಾಬೀತಾಗಿರುವ ಸರಣಿ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ.

ಸೂಚನೆ: ಶಾಲೆಗೆ ಹೋಗುವ ವಯಸ್ಸಿನ ಶೇ.5ರಷ್ಟು ಮಕ್ಕಳು ಕಲಿಕೆಯಲ್ಲಿನ ತೊಂದರೆಯಿಂದ ಬಳಲುತ್ತಿದ್ದಾರೆ. ಕಲಿಯುವ ತೊಂದರೆ ಹೊಂದಿರುವ ಮಕ್ಕಳು ಎಡಿಹೆಚ್ ಡಿಯನ್ನು ಕೂಡ ಹೊಂದಿರಬಹುದು.

ಕಲಿಯುವ ತೊಂದರೆ ಲಕ್ಷಣಗಳು ಬಾಲ್ಯದ ಪ್ರತಿಯೊಂದು ಹಂತದಲ್ಲಿಯೂ ಕೊಂಚ ಬದಲಾಗಬಹುದು.

ಶಾಲಾಪೂರ್ವ ಅವಧಿ: ಶಾಲಾ ಪೂರ್ವ ಅವಧಿಯಲ್ಲಿ ಮಗು ಈ ರೀತಿಯ ಕೆಲವೊಂದು ತೊಂದರೆಗಳನ್ನು ಹೊಂದಬಹುದು:

  • ಚಿಕ್ಕ ಮಕ್ಕಳಲ್ಲಿ ಮಾತು ಬರಲು ಆರಂಭವಾಗುವ ಸಾಮಾನ್ಯ ವಯಸ್ಸಿನಲ್ಲಿ (೧೫ ರಿಂದ ೧೮ ತಿಂಗಳು) ಮಾತಿನ ಕೌಶಲ್ಯಗಳ ಬೆಳವಣಿಗೆಯಲ್ಲಿ ತೊಂದರೆ.
  • ಸರಳ ಪದಗಳನ್ನು ಉಚ್ಛರಿಸುವಲ್ಲಿ ಕಷ್ಟವಾಗುವುದು.
  • ಅಕ್ಷರ ಮತ್ತು ಪದಗಳನ್ನು ಗುರುತಿಸುವುದು ಕಷ್ಟವಾಗುವುದು.
  • ಸಂಖ್ಯೆಗಳು, ಪದ್ಯ ಮತ್ತು ಹಾಡುಗಳನ್ನು ಕಲಿಯುವುದು ಕಠಿಣವೆನಿಸುವುದು.
  • ಕೆಲಸಗಳ ಮೇಲೆ ಗಮನ ಕೇಂದ್ರಿಕರಿಸುವುದು ಕಷ್ಟವಾಗುವುದು.
  • ನಿಯಮ ಮತ್ತು ನಿರ್ದೇಶನ ಪಾಲಿಸುವುದು ಕಠಿಣವೆನಿಸುವುದು.
  • ದೈಹಿಕ ಕೆಲಸಗಳನ್ನು ಮಾಡಲು ಉತ್ತಮ\ಸೂಕ್ತ ಚಲನಾ ಕೌಶಲ್ಯ ಬಳಸುವಲ್ಲಿ ಕಷ್ಟವಾಗುವುದು

ಪ್ರಾಥಮಿಕ ಶಾಲಾ ಹಂತ:  ಈಹಂತದಲ್ಲಿಯೂ ಮಗು ಕೆಳಗೆ ಹೇಳಲಾದ ಹಲವು ರೀತಿಯ ತೊಂದರೆಯನ್ನು ಅನುಭವಿಸಬಹುದು.

  • ಪದಗಳನ್ನು ಮತ್ತು ಶಬ್ದಗಳನ್ನು ಜೋಡಿಸುಸುವಾಗ
  • ಒಂದೇ ರೀತಿ ಧ್ವನಿಯಿರುವ ಪದ ಮತ್ತು ಪ್ರಾಸಪದಗಳ ವ್ಯತ್ಯಾಸ ತಿಳಿಯುವಾಗ
  • ಓದು, ಉಚ್ಛಾರ, ಅಥವಾ ಸ್ಪಷ್ಟವಾಗಿ ಬರೆಯುವಾಗ
  • ಎಡದಿಂದ ಬಲವನ್ನು ಪ್ರತ್ಯೇಕಿಸಿ ಗುರುತಿಸುವಾಗ. ಉದಾ:25 ಮತ್ತು 52 ಅಂಕೆಗಳನ್ನು ಗುರುತಿಸುವಾಗ ಗೊಂದಲ, ‘ಬಿ’ ಮತ್ತು ‘ಡಿ’ ಅಕ್ಷಗಳನ್ನು, ‘ಆನ್‌’ ಮತ್ತು ‘ನೋ’, ‘ಎಸ್‌’ ಮತ್ತು ‘5’ ಅಂಕೆಗಳನ್ನು ತಪ್ಪಾಗಿ ಅರ್ಥೈಸುವುದು ಇತ್ಯಾದಿ.
  • ವರ್ಣಮಾಲೆಯ ಅಕ್ಷರಗಳನ್ನು ಗುರುತಿಸುವಾಗ
  • ಗಣಿತದ ಸಮಸ್ಯೆಗಳನ್ನು ಮಾಡುವಾಗ ಸರಿಯಾದ ಚಿಹ್ನೆಗಳ ಬಳಕೆಯಲ್ಲಿ
  • ಸಂಖ್ಯೆಗಳನ್ನು ಮತ್ತು ಇತರ ಅಂಶಗಳನ್ನು ನೆನಪಿಡುವಾಗ
  • ಹೊಸ ಕೌಶಲ್ಯಗಳನ್ನು ಕಲಿಯುವುದು; ಮಗುವು ತನ್ನ ವಯಸ್ಸಿನ ಇತರ ಮಕ್ಕಳಿಗಿಂತ ಕಲಿಕೆಯಲ್ಲಿ ನಿಧಾನಗತಿಯಲ್ಲಿ ಇರಬಹುದು.
  • ಪದ್ಯಗಳು ಮತ್ತು ಉತ್ತರಗಳನ್ನು ನೆನಪಿಟ್ಟುಕೊಳ್ಳುವಲ್ಲಿ
  • ಸಮಯದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವಾಗ
  • ಕೈ-ಮತ್ತು ಕಣ್ಣಿನ ನಡುವೆ ಸಮನ್ವಯತೆಯ ಕೊರತೆ. ಇದರಿಂದಾಗಿ, ದೂರ ಅಥವಾ ವೇಗವನ್ನು ಅಂದಾಜಿಸಲು ಸಾಧ್ಯವಾಗದಿದ್ದಾಗ ಅನೇಕ ಅಪಘಾತಗಳುಂಟಾಗಬಹುದು.
  • ಉತ್ತಮ ಚಲನಾ ಕೌಶಲ್ಯ ಹೊಂದಿರುವ ಕೆಲಸಗಳು: ಪೆನ್ಸಿಲ್ ಹಿಡಿಯುವುದು,ಶೂ ಲೇಸ್ ಕಟ್ಟುವುದು,ಶರ್ಟ್‌ ಬಟನ್‌ ಹಾಕಿಕೊಳ್ಳುವುದು ಇತ್ಯಾದಿ.
  • ಅಗತ್ಯ ವಸ್ತುಗಳನ್ನು ಸರಿಯಾಗಿಟ್ಟುಕೊಳ್ಳುವುದು

ಮಾಧ್ಯಮಿಕ ಶಾಲಾ ಹಂತ:  ಈ ಹಂತದಲ್ಲಿ ಮಗು ಕೆಳಗಿನ ತೊಂದರೆಗಳನ್ನು ಹೊಂದಬಹುದು.

  • ಒಂದೇ ಹೋಲಿಕೆ ಇರುವ ಪದಗಳ ಉಚ್ಛಾರಣೆ, (sea/see, week/weak), ವಿಭಕ್ತಿ-ಪ್ರತ್ಯಯಗಳ ಉಪಯೋಗ
  • ಗಟ್ಟಿಯಾಗಿ ಓದುವುದು, ಅಸೈನ್‌ಮೆಂಟ್‌ ಬರೆಯುವುದು, ಗಣಿತದಲ್ಲಿನ ಸಮಸ್ಯೆಗಳನ್ನು ಬಿಡಿಸುಸುವಾಗ (ಮಗು ಈ ಕೌಶಲ್ಯಗಳನ್ನು ಒಳಗೊಂಡ ಕಾರ್ಯಗಳನ್ನು ತಪ್ಪಿಸಿಕೊಳ್ಳಬಹುದು)
  • ಕೈಬರಹ (ಮಗು ಪೆನ್ಸಿಲ್‌ನ್ನು ತುಂಬ ಬಿಗಿಯಾಗಿ ಹಿಡಿದುಕೊಳ್ಳಬಹುದು)
  • ನೆನಪಿಡುವುದು ಅಥವಾ ಪುನರುಚ್ಛರಿಸುವುದು
  • ಆಂಗಿಕ ಭಾಷೆ ಮತ್ತು ಮುಖಭಾವಗಳನ್ನು ಅರ್ಥೈಸಿಕೊಳ್ಳುವಾಗ
  • ಕಲಿಕಾ ಪರಿಸರದಲ್ಲಿ ಸೂಕ್ತ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ತೋರಿಸುವುದು (ಮಗು ಆಕ್ರಮಣಶಾಲಿಯಾಗುವುದು ಅಥವಾ ಸಿಡಿದೇಳುವ ಸ್ವಭಾವ ಪ್ರದರ್ಶಿಸುವುದು ಮತ್ತು ಅತಿಭಾವುಕವಾಗಿ ಪ್ರತಿಕ್ರಿಯಿಸುವುದು)

ಪ್ರೌಢಶಾಲಾ ಹಂತ: ಈ ಅವಧಿಯಲ್ಲಿ ಮಗು ಕೆಳಗಿನ ಕೆಲವೊಂದು ತೊಂದರೆಗಳನ್ನು ಹೊಂದಬಹುದು.

  • ಪದಗಳನ್ನು ನಿಖರವಾಗಿ ಬರೆಯುವಾಗ(ಮಗು ಒಂದೇ ಅಸೈನ್‌ಮೆಂಟ್‌ನಲ್ಲಿ ಒಂದೇ ಪದವನ್ನು ಬೇರೆ ಬೇರೆ ಅಕ್ಷರ ಬಳಿಸಿ ಬರೆಯಬಹುದು)
  • ಓದು ಮತ್ತು ಬರವಣಿಗೆಯ ಕಾರ್ಯಗಳು
  • ಸಾರಾಂಶ, ಭಾವಾರ್ಥ, ಸಮಸ್ಯೆಗಳಿಗೆ ಅಥವಾ ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವಾಗ
  • ನೆನಪಿನ ಶಕ್ತಿಯ ಕೊರತೆ
  • ಸುತ್ತಲಿನ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ
  • ಅಮೂರ್ತ ಪರಿಕಲ್ಪನೆಯನ್ನು (ಕಣ್ಣಿಗೆ ಗೋಚರಿಸದಿರುವ) ಅರ್ಥೈಸಿಕೊಳ್ಳುವಾಗ
  • ನಿರಂತರವಾಗಿ ಗಮನ ಕೇಂದ್ರೀಕರಿಸುವಲ್ಲಿ: ಮಗು ಕೆಲವು ಕೆಲಸ ನಿರ್ವಹಿಸುವಾಗ ಏಕಾಗ್ರತೆಯ ಕೊರತೆ ಯಾಗಬಹುದು, ಇನ್ನು ಕೆಲವಕ್ಕೆ ಅಗತ್ಯಕ್ಕಿಂತ ಅತಿಯಾದ ಗಮನ ನೀಡಬಹುದು.

ಸೂಚನೆ: ಕಲಿಕೆಯ ವೈಕಲ್ಯ ಹೊಂದಿರುವ ಮಗು ಕಲಿಕೆಯ ಕೆಲವು ಭಾಗದಲ್ಲಿ ಮಾತ್ರ ತೊಂದರೆ ಹೊಂದಿದ್ದು ತನ್ನ ಆಸಕ್ತಿಯ ಇತರೆ ಕ್ಷೇತ್ರದಲ್ಲಿ ಯೋಗ್ಯತೆ, ಕೌಶಲ್ಯ ಮತ್ತು ಪ್ರತಿಭೆ ಹೊಂದಿರಬಹುದು. ಸಾಮಾನ್ಯವಾಗಿ ನಾವು ಖಾಯಿಲೆಯ ಮೇಲೆ ಮಾತ್ರ ಗಮನಹರಿಸುತ್ತಾ ಮಗುವಿನ ಪ್ರತಿಭೆ ಅಥವಾ ಕೌಶಲ್ಯವನ್ನು ನಿರ್ಲಕ್ಷಿಸುತ್ತೇವೆ. ಪಾಲಕರು ಮತ್ತು ಶಿಕ್ಷಕರು ಮಗುವಿನಲ್ಲಿ ಅಡಗಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಮುಖ್ಯ.

Q

ಕಲಿಯುವ ತೊಂದರೆಯನ್ನು ಗುರುತಿಸುವುದು

A

ಕಲಿಯುವ ತೊಂದರೆಯನ್ನು ಪತ್ತೆಮಾಡುವುದು ತುಂಬ ಸಂಕೀರ್ಣ ಕೆಲಸ. ಮೊದಲ ಹಂತದಲ್ಲಿ ಶ್ರವಣಶಕ್ತಿ, ದೃಷ್ಟಿ, ಮಾತು, ಮತ್ತು ಬೆಳವಣಿಗೆ ಇವೆಲ್ಲವೂ ಸರಿಯಿದೆಯೇ ಎಂದು ಪರೀಕ್ಷೆ ಮಾಡುತ್ತಾರೆ. ಈ ಎಲ್ಲ ಪರೀಕ್ಷೆಗಳು ಸ್ವಾಭಾವಿಕ ಫಲಿತಾಂಶವನ್ನು ನೀಡಿದ ನಂತರದಲ್ಲಿ ಮನೋಶೈಕ್ಷಣಿಕ ವಿಧಾನದ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಶೈಕ್ಷಣಿಕ ಸಾಧನಾ ಪರೀಕ್ಷೆಯ ಜೊತೆಗೆ ಬೌದ್ಧಿಕ ಸಾಮರ್ಥ್ಯವನ್ನು ಸಹ ಅಳೆಯಲಾಗುತ್ತದೆ.


 

 

Q

ಕಲಿಯುವ ತೊಂದರೆಗೆ ಚಿಕಿತ್ಸೆ

A

ಕಲಿಯುವ ತೊಂದರೆಯನ್ನು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಮಗುವಿಗೆ ಓದಲು,ಬರೆಯಲು,ಕಲಿಯಲು ಕಷ್ಟವಾಗುತ್ತಿದೆಯೇ ಎಂಬುದನ್ನು ಮೊದಲು ಗುರುತಿಸುವವರು ಪಾಲಕರು ಮತ್ತು ಶಿಕ್ಷಕರು. ಮಗು ಕಲಿಕೆಯ ವೈಕಲ್ಯತೆ ಹೊಂದಿದೆ ಎಂದು ನೀವು ಎಣಿಸಿದರೆ, ಮಾನಸಿಕ ಆರೋಗ್ಯ ತಜ್ಞರಿಂದ ಅಥವಾ ವಿಶೇಷ ತರಬೇತಿ ಹೊಂದಿದ ತಜ್ಞರಿಂದ ಅಗತ್ಯವಿರುವ ಮದ್ಯಸ್ತಿಕೆ ಕಾರ್ಯಕ್ರಮ ಅಥವಾ ಚಿಕಿತ್ಸೆಯ ಸಹಾಯ ಪಡೆಯಬಹುದು.

ಸೂಚನೆ: ಆರಂಭದ ಹಂತದಲ್ಲಿ ಎಲ್‌ಡಿ ಪತ್ತೆ ಮಾಡಿ ಚಿಕಿತ್ಸೆ ನೀಡುವುದರಿಂದ ಮಗುವಿಗೆ ಸಹಾಯವಾಗಬಹುದು. ನಿರ್ಲಕ್ಷಿಸಿದರೆ ಪರಿಸ್ಥಿತಿಯೊಂದಿಗೆ ಸಹಕರಿಸುವ ಮಗುವಿನ ಸಾಮರ್ಥ್ಯದ ಮೇಲೆ ಪರಿಣಾಮವಾಗಬಹುದು.

ಒಂದೊಮ್ಮೆ ನಿಮ್ಮ ಮಗು ಕಲಿಯುವ ತೊಂದರೆ ಹೊಂದಿದ್ದರೆ, ನಿಮ್ಮ ಮಗುವಿಗೆ ವೈದ್ಯರು ಅಥವಾ ಶಾಲೆ ಕೆಳಗಿನದ್ದನ್ನು ಶಿಫಾರಸು ಮಾಡಬಹುದು.

ಹೆಚ್ಚುವರಿ ಸಹಾಯ: ಓದಿಸುವ ವಿಶೇಷ ತಜ್ಞರು ಅಥವಾ ತರಬೇತಿ ಹೊಂದಿದ ವೃತ್ತಿಪರರು ನಿಮ್ಮ ಮಗುವಿಗೆ ಶೈಕ್ಷಣಿಕ ಕೌಶಲ್ಯವನ್ನು ಸುಧಾರಿಸುವ ಕಲಿಕಾ ತಂತ್ರಗಳನ್ನು ಕಲಿಸಬಹುದು. ಶಿಕ್ಷಕರು ಸಹ ಮಕ್ಕಳಿಗೆ ಸಾಂಸ್ಥಿಕ ಮತ್ತು ಅಧ್ಯಯನ ಕೌಶಲ್ಯಗಳನ್ನು ಕಲಿಸಬಹುದು.

ವ್ಯಕ್ತಿಗತ ಶಿಕ್ಷಣ ಕಾರ್ಯಕ್ರಮ(ಐಇಪಿ): ನಿಮ್ಮ ಮಗುವಿನ ಶಾಲೆ ಅಥವಾ ವಿಶೇಷ ಶಿಕ್ಷಕರು ಶಾಲೆಯಲ್ಲಿ ಮಗು ಹೇಗೆ ಉತ್ತಮ ಕಲಿಕೆಯನ್ನು ಹೊಂದುತ್ತದೆ ಎಂಬುದನ್ನು ವಿವರಿಸುವ ಐಇಪಿಯನ್ನು ಅಭಿವೃದ್ಧಿಗೊಳಿಸಬಹುದು.

ಚಿಕಿತ್ಸೆ: ಕಲಿಯುವ ತೊಂದರೆ ಆಧರಿಸಿ ಕೆಲವು ಮಕ್ಕಳು ತಪಾಸಣೆಯಿಂದ ಲಾಭವನ್ನು ಪಡೆಯಬಹುದು. ಉದಾ:ಯಾವ ಮಗು ಭಾಷಾ ಸಂಬಂಧಿತ ವೈಕಲ್ಯವನ್ನು ಹೊಂದಿರುತ್ತದೆಯೋ ಅಂಥ ಮಗುವಿಗೆ ಮಾತಿನ ಚಿಕಿತ್ಸೆ ಸಹಾಯವಾಗಬಹುದು. ಬರವಣಿಗೆ ಸಮಸ್ಯೆ ಹೊಂದಿರುವ ಮಗುವಿನ ಚಲನಾ ಕೌಶಲ್ಯಗಳನ್ನು ಸುಧಾರಿಸಲು ಔದ್ಯೋಗಿಕ ಚಿಕಿತ್ಸೆ ಸಹಾಯ ಮಾಡಬಹುದು.

ಪೂರಕ/ಪರ್ಯಾಯ ಚಿಕಿತ್ಸೆ: ಪರ್ಯಾಯ ಚಿಕಿತ್ಸೆಗಳಾದ ಸಂಗೀತ, ಕಲೆ ನೃತ್ಯಗಳ ಮೂಲಕ ಸಾಧ್ಯವಾಗುವ ಕಲಿಕೆ ವೈಕಲ್ಯ ಹೊಂದಿದ ಮಗುವಿಗೆ ಪ್ರಯೋಜನವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಚಿಕಿತ್ಸೆ ನೀಡುವಾಗ ಪಾಲಕರು ಮತ್ತು ತಜ್ಞರು ಒಂದು ನಿರ್ದಿಷ್ಟ ಗುರಿ ಹಾಕಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಆಯ್ದುಕೊಂಡ ಮಾದರಿಯ ಚಿಕಿತ್ಸೆಯಿಂದ ಮಗು ಅಭಿವೃದ್ಧಿ ಹೊಂದುತ್ತಿದೆಯಾ ಎಂಬುದನ್ನು ಪತ್ತೆ ಹಚ್ಚುವುದೂ ಮಹತ್ವದ್ದು. ಒಂದೊಮ್ಮೆ ಸುಧಾರಣೆ ಕಂಡುಬರದೇ ಇದ್ದಲ್ಲಿ ಮಗುವಿಗೆ ಸಹಾಯ ಮಾಡಲು ಪರ್ಯಾಯ ಮಾದರಿಗಳನ್ನು ಆಯ್ದುಕೊಳ್ಳುವುದು ಉತ್ತಮ.

Q

ಕಲಿಯುವ ತೊಂದರೆಗೆ ಚಿಕಿತ್ಸೆ ನೀಡುವ ವಿವಿಧ ತಜ್ಞರು

A

ವಿಶೇಷ ತಜ್ಞರ ತಂಡ ಸರಣಿ ಪರೀಕ್ಷೆಗಳನ್ನು ಕೈಗೊಂಡ ನಂತರದಲ್ಲಿ ಎಲ್‌ಡಿ ರೋಗನಿರ್ಣಯ ಮಾಡುತ್ತದೆ. ಕೆಳಗಿನ ತಜ್ಞರು ಮಗುವಿನಲ್ಲಿನ ಎಲ್‌ಡಿ ಪತ್ತೆಗೆ ಮತ್ತು ಚಿಕಿತ್ಸೆಗೆ ಸಹಾಯ ಮಾಡಬಹುದು.

ಮಕ್ಕಳ ನರರೋಗ ವೈದ್ಯರು (Paediatric Neurologist): ಇವರು ಮೊದಲು ರೋಗಿಯ ವೈದ್ಯಕೀಯ ಇತಿಹಾಸವನ್ನು ದಾಖಲಿಸಿಕೊಳ್ಳುತ್ತಾರೆ. ನಂತರದಲ್ಲಿ ಹೈಪೊಥೈರಾಯ್ಡಿಸಂ, ತೀವ್ರಸ್ವರೂಪದ ಲೆಡ್ ವಿಷಯುಕ್ತತೆ, ನರರೋಗಗಳಾದ ಸೆರೆಬ್ರಲ್ ಪಾಲ್ಸಿ,, ವಿಲ್ಸನ್ಸ್ ಡಿಸಿಸ್, ಎಡಿಎಚ್‌ಡಿ ಮುಂತಾದವುಗಳ ಉಪಸ್ಥಿತಿಯನ್ನು ಅಲ್ಲಗಳೆಯಲು ವಿಸ್ತೃತವಾಗಿ ದೈಹಿಕ ಪರೀಕ್ಷೆ ನಡೆಸುತ್ತಾರೆ. ಮನೆ ಮತ್ತು ಶಾಲೆಗಳಲ್ಲಿನ ವರ್ತನೆಯನ್ನೂ ಪರೀಕ್ಷಿಸುತ್ತಾರೆ.

ಮನಶಾಸ್ತ್ರಜ್ಞ (Clinical Psychologist ): ಮಗುವಿನ ಬುದ್ಧಿಮಟ್ಟ ಸಾಮಾನ್ಯವಾಗಿದೆಯೇ ಎಂದು ಪತ್ತೆ ಮಾಡಲು ಇವರು ನಿರ್ದಿಷ್ಟವಾದ ಬುದ್ಧಿವಂತಿಕೆ ಪರೀಕ್ಷೆಯನ್ನು (ಮಕ್ಕಳಿಗೆ ವೆಕ್ಸಲರ್‌ ಇಂಟಿಲಿಜೆನ್ಸ್‌ ಪರೀಕ್ಷೆ) ನಡೆಸಬಹುದು. ಇದು ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿಯಲ್ಲಿರುವ ಬುದ್ಧಿಮಟ್ಟದ ಕಾರ್ಯ ಮತ್ತು ಅಲ್ಪ ಪ್ರಮಾಣದ ಬೌದ್ಧಿಕ ಅಸಾಮರ್ಥ್ಯದ ಸಾಧ್ಯತೆಯನ್ನು ತಳ್ಳಿ ಹಾಕಲು ಸಹಕಾರಿ. ಇವೆರಡೂ ಮಗುವಿನ ಶೈಕ್ಷಣಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಆಪ್ತ ಸಲಹೆಗಾರ: ಮಗುವಿನ ವರ್ತನೆಯನ್ನು ಅರ್ಥೈಸಿಕೊಳ್ಳುವಲ್ಲಿ ಆಪ್ತಸಲಹೆಗಾರರು ನೆರವಿಗೆ ಬರುತ್ತಾರೆ. ಯಾವುದೇ ಬಗೆಯ ವರ್ತನೆ ಸಮಸ್ಯೆಗಳಿವೆಯೇ ಎಂಬುದನ್ನು ಇವರು ಪರೀಕ್ಷಿಸುತ್ತಾರೆ. ಮನೆಯಲ್ಲಿನ ಸಮಸ್ಯೆಗಳು ಮತ್ತು ಶಾಲಾವಾತಾವರಣಗಳ ಕಾರಣಗಳಿಂದಾಗಿ ಉಂಟಾಗಿರುವ ಯಾವುದಾದರೂ ಸಮಸ್ಯೆಗಳಿವೆಯೇ ಅಥವಾ ಮಗು ಶಾಲೆಯಲ್ಲಿ ಕಳಪೆ ಪ್ರದರ್ಶನ ನೀಡಲು ಇನ್ನಾವುದೇ ಭಾವನಾತ್ಮಕ ಸಮಸ್ಯೆಗಳಿರುವವೇ ಎಂಬುದನ್ನೂ ಇವರು ಗಮನಿಸುತ್ತಾರೆ.

ವಿಶೇಷ ಶಿಕ್ಷಕರು: ಇವರು ಗುಣಮಟ್ಟದ ಪರೀಕ್ಷೆಗಳನ್ನು (Wide Range Achievement Test, Peabody Individual Achievement Test, Woodcock-Johnson Tests of Achievement, Schonnel Attainment Test, Curriculum Based Test) ನಡೆಸಿ ಮಗುವಿನ ಶೈಕ್ಷಣಿಕ ಮಟ್ಟವನ್ನು ಅಳೆಯುತ್ತಾರೆ. ಓದು, ಪದ, ಬರವಣಿಗೆ, ಭಾಷೆ ಮತ್ತು ಗಣಿತದಲ್ಲಿ ಮಗುವಿನ ಸಾಮರ್ಥ್ಯವನ್ನು ಪರೀಕ್ಷಿಸುತ್ತಾರೆ. 2 ವರ್ಷದ ಒಳಗಿನ ಮಗುವಿನ ಶೈಕ್ಷಣಿಕ ಸಾಧನೆ ಮಗು ಹೊಂದಿರುವ ನಿರ್ದಿಷ್ಟ ಕಲಿಕಾ ವೈಕಲ್ಯವನ್ನು ಸೂಚಿಸಬಹುದು.

ಮಕ್ಕಳ ವೈದ್ಯರು: ಅತಿ ಆರಂಭಿಕ ಹಂತದಲ್ಲಿ ಕಲಿಕೆ ವೈಕಲ್ಯ ಪತ್ತೆಹಚ್ಚಲು ಇವರು ಸಹಾಯ ಮಾಡುತ್ತಾರೆ. ಕಲಿಕೆ ವೈಕಲ್ಯತೆಯ ಅನುಮಾನವಿದ್ದರೆ, ಪಾಲಕರು ಮಗುವಿನ ಮನೋಶೈಕ್ಷಣಿಕ ಮಾಪನ ಮಾಡಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಲು ಮಕ್ಕಳ ತಜ್ಞರು ಶಾಲೆಯಲ್ಲಿ ಮಗುವಿನ ಸಾಧನೆಯ ಕುರಿತು ವಿಚಾರಿಸುವ ಅವಶ್ಯಕತೆ ಇರುತ್ತದೆ. ವಿಶೇಷ ಶಿಕ್ಷಣದ ಉಪಯುಕ್ತತೆ ಕುರಿತು ಮಕ್ಕಳ ತಜ್ಞರು ಪಾಲಕರು ಮತ್ತು ಶಿಕ್ಷಕರನ್ನು ಕೂಡ ಆಪ್ತಸಲಹೆಯ ಸೆಶನ್ನುಗಳಿಗೆ ಕರೆಯಬಹುದು.

ಮಕ್ಕಳ ಮನೊರೋಗ ತಜ್ಞರು: ಇವರು ಎಡಿಎಚ್‌ಡಿ ಲಕ್ಷಣಗಳೇನಾದರೂ ಇವೆಯೇ ಎಂಬುದನ್ನು ಮೊದಲು ಪರೀಕ್ಷಿಸಬಹುದು. ಏಕೆಂದರೆ, ಯಾವುದೇ ತರಹದ ಕಲಿಕಾ ವೈಕಲ್ಯತೆಯೊಂದಿಗೆ ಎಡಿಎಚ್‌ಡಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಶೈಕ್ಷಣಿಕವಾಗಿ ಕಳಪೆ ಸಾಧನೆಗೆ ಕಾರಣವಾದ ಇತರೆ ಯಾವುದೇ ಖಾಯಿಲೆಗಳ ಪಸ್ಥಿತಿಯನ್ನೂ ಮನೊರೋಗ ತಜ್ಞರು ಪರೀಕ್ಷಿಸಬಹುದು.

ಔದ್ಯೋಗಿಕ ಚಿಕಿತ್ಸಕರು: ಇವರು ಅಂಗ ವಿನ್ಯಾಸ, ಚಲನೆ, ದೃಷ್ಟಿ ಮತ್ತು ಚಲನೆಗಳ ಸಮನ್ವಯತೆ, ಹಾಗೂ ಕೈಬರಹ ಸಮಸ್ಯೆ ಮುಂತಾದ ತೊಂದರೆಗಳಿಗೆ ಚಿಕಿತ್ಸೆ ನೀಡುತ್ತಾರೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org