ಸ್ಕಿಜೋಫ್ರೇನಿಯಾ

Q

ಸ್ಕಿಜ಼ೋಫ್ರೇನಿಯಾ ಎಂದರೇನು?

A

ಸ್ಕಿಜ಼ೋಫ್ರೇನಿಯಾ ಹೊಂದಿದ ವ್ಯಕ್ತಿ, ಯಾರೂ ಮಾತನಾಡದಿದ್ದಾಗಲೂ ಧ್ವನಿ ಕೇಳಿಸುತ್ತಿದೆ ಎಂಬ ಭ್ರಮೆ, ತಪ್ಪು ಗ್ರಹಿಕೆ, ಅರ್ಥವಿಲ್ಲದ ನಂಬಿಕೆಗಳು, ಹೀಗೆ ಸಾಮಾನ್ಯವಲ್ಲದ ವರ್ತನೆಗಳನ್ನು ತೋರಿಸುತ್ತಾರೆ. ಅವರು ನಿಜ ಮತ್ತು ಕಲ್ಪನೆಯ ನಡುವೆ ವ್ಯತ್ಯ್ಯಸ ಅರಿಯರು. ಅವರಿಗೆ ಎಲ್ಲಾ ಕಲ್ಪನೆಗಳು ನಿಜ ಎನಿಸುವುದು. ಅವರದ್ದೇ ಲೋಕದಲ್ಲಿ ಕಳೆದುಹೋಗಿರುವಂತೆ ಬೇರೆಯವರಿಗೆ ಕಾಣಿಸುವರು.

ಸ್ಕಿಜ಼ೋಫ್ರೇನಿಯಾ ಇಂದ ಬಳಲುವವರು ಈ ಎಲ್ಲಾ ಅನುಭವಗಳನ್ನು ನಿಭಾಯಿಸುವ ಪರಿ ವಿಚಿತ್ರ. ಯಾರೋ ಅವರನ್ನು ನಿಯಂತ್ರಿಸಲು ಅಥವಾ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಾವನೆಯಲ್ಲಿ, ತಮ್ಮನ್ನು ಹಾಗು ಕುಟುಂಬದವರನ್ನು ರಕ್ಷಿಸಿಕೊಳ್ಳಲು ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚುವುದು ಇನ್ನಿತರ ಪ್ರಯತ್ನಗಳನ್ನು ಮಾಡುತ್ತಾರೆ.

ವ್ಯಕ್ತಿಯು ತಾನು ವಿಭಿನ್ನವಾಗಿ ವರ್ತಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಆಗುತ್ತಿರುವ ಬದಲಾವಣೆಯ ಅವರ ಗಮನಕ್ಕೆ ಬಂದಿರುವುದಿಲ್ಲ. ಏಕೆಂದರೆ ಅವರು ನಿಜ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸ ಅರಿಯರು. ಹೀಗಾಗಿ ಕುಟುಂಬ ಹಾಗು ಸ್ನೇಹಿತರಿಂದ ದೂರ ಉಳಿಯುತ್ತಾರೆ ಮತ್ತು ಚಿಕಿತ್ಸೆ ಪಡೆಯಲು ನಿರಾಕರಿಸುತ್ತಾರೆ.

 

Q

ಯಾವುದು ಸ್ಕಿಜ಼ೋಫ್ರೇನಿಯಾ ಅಲ್ಲ?

A

ಸ್ಕಿಜ಼ೋಫ್ರೇನಿಯಾ ಎಂದ ಕೂಡಲೇ ನಾವು ವ್ಯಕ್ತಿ ಹುಚ್ಚು ಹಿಡಿದಂತೆ, ಹರಕು ಬಟ್ಟೆ, ಕೆದರಿದ ಕೂದಲು, ತನ್ನ ವರ್ತನೆಯ ಬಗ್ಗೆ ಪರಿವೇ ಇಲ್ಲದವರು, ಉದ್ರೇಕದಿಂದ ನಡೆದುಕೊಳ್ಳುವರು, ಭೂತ ಮೆಟ್ಟಿಕೊಂಡಂತೆ ಆಡುವರು ಎಂಬ ಕಲ್ಪನೆ ಮಾಡಿಕೊಳ್ಳುತ್ತೇವೆ. ಚಲನಚಿತ್ರಗಳಲ್ಲಿ ಸ್ಕಿಜ಼ೋಫ್ರೇನಿಯಾ ಎಂದರೆ ಉನ್ಮಾದ, ಹುಚ್ಚು. ಅಂತವರನ್ನು ಜೀವನಪರ್ಯಂತ ಹುಚ್ಚಾಸ್ಪತ್ರೆಯಲ್ಲಿ ಬಂಧಿಸಿಡಬೇಕು ಎಂದು ತೋರಿಸಿದ್ದಾರೆ. ಭಾರತದಲ್ಲಿ ಸ್ಕಿಜ಼ೋಫ್ರೇನಿಯಾ ಇಂದ ಬಳಲುವವರು ತಮಗೂ ಹಾಗು ಸುತ್ತ-ಮುತ್ತಲಿನವರಿಗೂ ಅಪಾಯ ಎಂಬ ಭಾವನೆ ಇದೆ. ಈ ರೀತಿ ಮಾಧ್ಯಮದವರು ತೋರಿಸುವುದು ತಪ್ಪು ಎಂಬುದು ವೈದ್ಯರ ಅಭಿಪ್ರಾಯ.

Q

ಸ್ಕಿಜ಼ೋಫ್ರೇನಿಯಾ ಹೇಗೆ ಬರುತ್ತದೆ?

A

ಸ್ಕಿಜ಼ೋಫ್ರೇನಿಯಾ ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಹಾಗೂ ಪ್ರೌಢಾವಸ್ಥೆಯ ಆರಂಭದ ಸಮಯದಲ್ಲಿ ಕಂಡುಬರುತ್ತದೆ. ರೋಗವು ಸಾಮಾನ್ಯವಾಗಿ ವಾರಗಳು ಹಾಗೂ ತಿಂಗಳುಗಳು ಕಳೆದಂತೆ ನಿಧಾನವಾಗಿ ಹೆಚ್ಚಾಗುತ್ತದೆ. ಪ್ರಾರಂಭದಲ್ಲಿ ಉಳಿದ ಮಾನಸಿಕ ರೋಗಗಳಾದ ಹೊಂದಾಣಿಕೆ ಸಮಸ್ಯೆ, ಖಿನ್ನತೆ ಅಥವಾ ಆತಂಕ ಕಂಡುಬರುತ್ತವೆ.

ಆರಂಭದಲ್ಲಿ ವ್ಯಕ್ತಿಗಳು ’ಋಣಾತ್ಮಕ ಲಕ್ಷಣ’ಗಳನ್ನು ಅಂದರೆ, ಕುಟುಂಬ ಮತ್ತು ಆತ್ಮೀಯರಿಂದ ದೂರವಿರುವುದು, ಅವರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ, ಹವ್ಯಾಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಈ ಮೊದಲು ತುಂಬಾ ಕಾಳಜಿವಹಿಸುತ್ತಿದ್ದ ತಮ್ಮ ರೂಪ, ಶುಭ್ರತೆ ಹಾಗೂ ಆರೋಗ್ಯವನ್ನು ನಿರ್ಲಕ್ಷಿಸಬಹುದು. ಯಾವುದೇ ಸ್ಪಷ್ಟ ಕಾರಣಗಳಿಲ್ಲದೆ ತಮ್ಮಷ್ಟಕ್ಕೆ ತಾವೇ ನಗಬಹುದು. ತೊಂದರೆಯನ್ನು ಆರಂಭದಲ್ಲಿಯೆ ಗುರುತಿಸಿ, ಚಿಕಿತ್ಸೆ ನೀಡದೆ ಹೋದಲ್ಲಿ ರೋಗ ತೀವ್ರವಾದಾಗ, ವ್ಯಕ್ತಿಗಳು ಮಾತಿನಲ್ಲಿ ಹಾಗೂ ನಡವಳಿಕೆಯಲ್ಲಿ ಆಕ್ರಮಣ ಪ್ರವೃತ್ತಿ ತೋರಬಹುದು.

ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಒಟ್ಟು ಜನಸಂಖ್ಯೆಯ 1% ರಷ್ಟು ಜನru ಇದರಿಂದ ಬಳಲುತ್ತಾರೆ. ಇದು ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಕಂಡುಬಂದಿದೆ. ಸಾಮಾನ್ಯವಾಗಿ 15-25 ವಯಸ್ಸಿನವರಲ್ಲಿ ಈ ತೊಂದರೆಯು ಕಂಡುಬಂದಿದೆ. ಕೆಲವು ಸಂದರ್ಭಗಳಲ್ಲಿ ಇದರ ಮೇಲ್ಪಟ್ಟ ವಯಸ್ಸಿನವರಿಗೂ ಈ ರೋಗ ಬರಬಹುದು.

Q

ಸ್ಕಿಜ಼ೋಫ್ರೇನಿಯಾದ ಲಕ್ಷಣಗಳು

A

ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ವ್ಯಕ್ತಿಗಳು ಎಲ್ಲ ಸಮಯದಲ್ಲಿಯೂ ವಿಚಿತ್ರವಾಗಿ ವರ್ತಿಸುವುದಿಲ್ಲ. ಯಾವಾಗ ಲಕ್ಷಣಗಳು ಬಂದು ಹೋಗುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಾಗದು. ಲಕ್ಷಣದ ತೀವ್ರತೆ ಹೆಚ್ಚು ಕಡಿಮೆ ಆಗಬಹುದು.

ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ:

ಭ್ರಮೆ: ಏನನ್ನೊ ನೋಡಿದಂತೆ, ಯಾರದ್ದೊ ಮಾತು ಕೇಳಿದಂತೆ, ಯಾವುದೊ ವಸ್ತು ಎದುರಿಗೆ ಇರುವಂತೆ ಭ್ರಮೆಗೆ ಒಳಗಾಗುವುದು. ಯಾವುದೊ ತಿಂಡಿಯ ರುಚಿ ನೋಡಿದಂತೆ, ವಸ್ತುವೊಂದನ್ನು ಸ್ಪರ್ಶಿಸಿದಂತೆ, ಏನೊ ವಾಸನೆ ಬಂದಂತೆ ಭ್ರಮೆಗೆ ಒಳಗಾಗಬಹುದು. ಹೆಚ್ಚಿನ ರೋಗಿಗಳು ತಮ್ಮೊಡನೆ ಯಾರೊ ಮಾತನಾಡುತ್ತಿದ್ದಾರೆ, ಬೈಯುತ್ತಿದ್ದಾರೆ ಎಂದು ಹೇಳುತ್ತಾರೆ.

ತಪ್ಪು ಗ್ರಹಿಕೆ: ಯಾವುದೋ ವಿಷಯಗಳು ಸುಳ್ಳೆಂದು ಸಾಬೀತುಪಡಿಸಿದರೂ ಅದು ಸತ್ಯವೆಂದೆ ಭಾವಿಸುತ್ತಾರೆ. ಕೆಲವು ರೋಗಿಗಳು ತಮ್ಮನ್ನು ಯಾರೊ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಂಬಿರುತ್ತಾರೆ. ತಮ್ಮೊಂದಿಗೆ ಯಾರೊ ಒಬ್ಬ ವ್ಯಕ್ತಿ ರಹಸ್ಯವಾಗಿ ಟಿ.ವಿ ಕೋಡ್ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದಾರೆ, ಎಲ್ಲರೂ ತಮ್ಮ ಕುರಿತಾಗಿಯೆ ಮಾತನಾಡುತ್ತಿದ್ದಾರೆ ಎಂದು ಅನುಮಾನ ಪಡಬಹುದು. ತಾವು ಒಬ್ಬ ಪ್ರಸಿದ್ಧ ಅಥವಾ ಚರಿತ್ರೆ ಸೃಷ್ಟಿಸಿದ ವ್ಯಕ್ತಿ ಎಂದು ತಿಳಿದುಕೊಳ್ಳಬಹುದು.

ಗೊಂದಲದ ಯೋಚನೆಗಳು: ಈ ವ್ಯಕ್ತಿಗಳಿಗೆ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗದು. ಅವರು ಮಾತನಾಡುವ ಶೈಲಿ ಸುತ್ತಲಿನವರಿಗೆ ತರ್ಕರಹಿತ, ಅಸಂಬದ್ಧ ಎನಿಸುತ್ತದೆ. ವಾಕ್ಯ ಪೂರ್ಣಗೊಳ್ಳುವ ಮೊದಲೆ ಒಮ್ಮೆಲೆ ಮಾತು ನಿಲ್ಲಿಸಿಬಿಡಬಹುದು. ಅಲ್ಲದೆ ಪ್ರಶ್ನೆಗಳಿಗೆ ಅಪ್ರಸ್ತುತ ಉತ್ತರಗಳನ್ನು ನೀಡಬಹುದು ಅಥವಾ ಅಸಂಬದ್ಧ ಶಬ್ದಗಳನ್ನು ಬಳಸಬಹುದು.

ಮೇಲೆ ಚರ್ಚಿಸಿರುವುದು ಪಾಸಿಟಿವ್ ಲಕ್ಷಣಗಳು.

ತರ್ಕ ಸಮಸ್ಯೆ: ವ್ಯಕ್ತಿಗೆ ಉಂಟಾಗಿರುವ ಸಮಸ್ಯೆಯಿಂದ ಸರಳ ಕೆಲಸಗಳಲ್ಲಿಯೂ ಅವರು ಗಮನ ಹರಿಸಲು ಕಷ್ಟ ಪಡುತ್ತಾರೆ. ಯಾರ ಮತನ್ನೂ ಅರ್ಥ ಮಾಡಿಕೊಳ್ಳಲು, ದಿನನಿತ್ಯದ ಕೆಲಸಗಳನ್ನು ಮಾಡಲು ಕೂಡ ಅವರಿಗೆ ಸಾಧ್ಯವಾಗುವುದಿಲ್ಲ. ಈ ಲಕ್ಷಣಗಳು ಬೇಗನೇ ಕಾಣಿಸಿಕೊಂಡರೂ, ಕುಟುಂಬದವರು ಮತ್ತು ಸ್ನೇಹಿತರು ಖಾಯಿಲೆಯ ಬಗ್ಗೆ ಅರಿವು ಇಲ್ಲದ ಕಾರಣ ಇದನ್ನು ಗುರುತಿಸಲು ಸೋಲುತ್ತಾರೆ.

ಸಹಜ ನಡವಳಿಕೆಗೆ ತೊಡಕು: ಯಾರ ಜೊತೆಯೂ ಸಮಯ ಕಳೆಯಲು ಇಚ್ಛಿಸದೆ, ಒಬ್ಬರೇ ಇರುತ್ತಾರೆ. ಒಂದೇ ನಾದದಲ್ಲಿ ಕೆಳ ಧ್ವನಿಯಲ್ಲಿ ಮಾತನಾಡುವರು. ಅವರ ಮುಖ ಭಾವರಹಿತವಾಗಿರುತ್ತದೆ.

Q

ಸ್ಕಿಜ಼ೋಫ್ರೇನಿಯಾದ ಕಾರಣಗಳೇನು?

A

ಚಿತ್ತವಿಕಲತೆ ಗೆ ನಿಖರವಾದ, ಸಮರ್ಪಕವಾದ ಕಾರಣಗಳೇನು ಎನ್ನುವುದನ್ನು ಗುರುತಿಸಲು ಸಂಶೋಧಕರಿಗು ಇನ್ನು ಸಾಧ್ಯವಾಗಿಲ್ಲ. ಸಂಶೋಧನೆಗಳು ಹೇಳುವ ಪ್ರಕಾರ, ಅಸಹಜವಾದ ಮೆದುಳಿನ ರಚನೆ ಕಾರಣವಿರಬಹುದು. ಇವುಗಳಲ್ಲದೆ, ಈ ಕೆಳಗಿವ ಅಂಶಗಳು ಸ್ಕಿಜ಼ೋಫ್ರೇನಿಯಾದ ಬೆಳವಣಿಗೆಗೆ ಕಾರಣವಾಗಿವೆ ಎಂದು ಅಭಿಪ್ರಾಯಪಡಲಾಗಿದೆ-

  • ವಂಶವಾಹಿ ಸಮಸ್ಯೆಗಳು- ಪಾಲಕರಲ್ಲಿ ಅಥವಾ ಸಂಬಂಧಿಗಳಲ್ಲಿ ಈ ರೋಗ ಇದ್ದಿರುವುದು.
  • ಮೆದುಳಿನಲ್ಲಿನ ರಾಸಾಯನಿಕಗಳ ಅಸಮತೋಲನ.
  • ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳು: ತಾಯಿಯು ಗರ್ಭಿಣಿಯಾಗಿದ್ದಾಗ ಪೌಷ್ಠಿಕ ಆಹಾರಗಳನ್ನು ತೆಗೆದುಕೊಳ್ಳದೇ ಇರುವುದು, ವೈರಲ್ ಸಮಸ್ಯೆಗಳು ಹುಟ್ಟುವ ಮಗುವಿನ ಚಿತ್ತವಿಕಲತೆಗೆ ಕಾರಣವಿರಬಹುದು.
  • ತೀವ್ರ ಒತ್ತಡ, ಅತಿಯಾದ ಔಷಧಗಳ ಸೇವನೆ ಹಾಗೂ ಮದ್ಯ ಸೇವನೆಯಿಂದ ಸ್ಕಿಜ಼ೋಫ್ರೇನಿಯಾ ಹೆಚ್ಚಾಗಬಹುದು.

Q

ಮನೋವಿಕಾರ (Psychosis) ಎಂದರೇನು?

A

ಮನೋವಿಕಾರ (Psychosisಎನ್ನುವ ಶಬ್ದವನ್ನು ಹೆಚ್ಚಾಗಿ ಸ್ಕಿಜ಼ೋಫ್ರೇನಿಯಾ ಮತ್ತು ಇತರ ಗಂಭೀರ ಮಾನಸಿಕ ರೋಗಗಳಲ್ಲಿ ಬಳಸಲಾಗುತ್ತದೆ. ನಿಜ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯನ್ನು ಮನೋವಿಕಾರ ಎನ್ನುವರು. ಅವರ ಮನಸ್ಥಿತಿ ಮತ್ತು ವರ್ತನೆಯ ಪರಿಣಾಮವಾಗಿ ಅವರು ಖಿನ್ನತೆಗೆ ಒಳಗಾಗಬಹುದು. ಚಿತ್ತವಿಕಲತೆ ಯಿಂದ ಬಳಲುತ್ತಿರುವ ವ್ಯಕ್ತಿಗಳು ಅನುಭವಿಸುವ ಭ್ರಮೆ ಮತ್ತು ತಪ್ಪು ಕಲ್ಪನೆಯಿಂದ ಭಯ, ಸಂದೇಹ, ಆತಂಕ ಹಾಗೂ ಖಿನ್ನತೆ ಅವರಲ್ಲಿ ಉಂಟಾಗಬಹುದು.

ಮನೋವಿಕಾರದ ಅಧ್ಯಾಯಗಳಲ್ಲಿ ವ್ಯಕ್ತಿಗೆ ತೀವ್ರ ಭ್ರಮೆ ಮತ್ತು ತಪ್ಪು ಕಲ್ಪನೆಗಳಿರುತ್ತವೆ. ಇದರ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ವ್ಯಕ್ತಿಯು ಕೆಲವು ಸಮಯದಲ್ಲಿ ಸಹಜವಾಗಿಯೇ ವರ್ತಿಸಬಹುದು.

ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು ತೀವ್ರವಾಗಿ ಕೆರಳಿ ತಮಗೆ ಅಥವಾ ಉಳಿದವರಿಗೆ ದೈಹಿಕವಾಗಿ ತೊಂದರೆ ನೀಡಬಹುದು. ಅಂತಹ ಸನ್ನಿವೇಶಗಳಲ್ಲಿ ಕಾನೂನಿನ ಆದೇಶದ ಮೇರೆಗೆ ವ್ಯಕ್ತಿಯ ಇಚ್ಛೆ ವಿರುದ್ಧ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗೆ ಒಳಪಡಿಸಬಹುದು.

Q

ಸ್ಕಿಜ಼ೋಫ್ರೇನಿಯಾ ಪತ್ತೆ ಮಾಡುವುದು

A

ಸ್ಕಿಜೋಫ್ರೇನಿಯಾ ಪತ್ತೆ ಮಾಡಲು ಒಂದೇ ನಿರ್ದಿಷ್ಟ ಪರೀಕ್ಷೆಯಿಲ್ಲ. ವ್ಯಕ್ತಿಗಳಲ್ಲಿ ಇರಬಹುದಾದ ಲಕ್ಷಣಗಳನ್ನು, ಹಾಗೂ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ನಂತರ ಮನೋವೈದ್ಯರು ರೋಗದ ಕುರಿತಾಗಿ ನಿರ್ಧರಿಸುತ್ತಾರೆ. ಪರೀಕ್ಷೆಯ ಭಾಗವಾಗಿ ರೋಗಿಯ ನಡವಳಿಕೆ ಮತ್ತು ನಿದ್ರೆ, ಆಹಾರ ಕ್ರಮ, ಸಾಮಾಜಿಕ ವರ್ತನೆಯ ಕುರಿತು ಮಾಹಿತಿ ಪಡೆಯುತ್ತಾರೆ. ರೋಗಿಯ ವರ್ತನೆಯಲ್ಲಿನ ಬದಲಾವಣೆಯ ಕುರಿತಾಗಿ ಅವರ ಕುಟುಂಬದವರಿಂದ ಹಾಗೂ ಆಪ್ತರಿಂದ ತಿಳಿಯಲಾಗುತ್ತದೆ. ಈ ಎಲ್ಲಾ ಲಕ್ಷಣಗಳು ಕನಿಷ್ಠ ಒಂದು ತಿಂಗಳಿನಿಂದ ವ್ಯಕ್ತಿಗಳಲ್ಲಿ ಕಂಡುಬರುತ್ತಿದ್ದರೆ ಮಾತ್ರ ಅವರಿಗೆ ಸ್ಕಿಜ಼ೋಫ್ರೇನಿಯಾ ಇದೆ ಎಂದು ನಿರ್ದಧರಿಸಲಾಗುತ್ತದೆ.

 ನಿಮಗೆ ತಿಳಿದಿರುವವರು ಯಾರಾದರೂ ಸ್ಕಿಜ಼ೋಫ್ರೇನಿಯಾದಿಂದ ಬಳಲುತ್ತಿದ್ದರೆ, ನೀವು ವೈದ್ಯರನ್ನು ಕಾಣುವುದು ಒಳಿತು. ಉಳಿದ ಮಾನಸಿಕ ರೋಗಗಳಾದ ವ್ಯಸನ, ಬೈಪೋಲಾರ್ ತೊಂದರೆ ಮತ್ತು ಖಿನ್ನತೆಯಲ್ಲೂ ಸ್ಕಿಜ಼ೋಫ್ರೇನಿಯಾದಂತೆ ತಪ್ಪು ಗ್ರಹಿಕೆ, ಭ್ರಮೆ, ಸಮಾಜದಿಂದ ದೂರ ಇರುವ ಪ್ರಯತ್ನದ ಲಕ್ಷಣಗಳು ಇರುತ್ತವೆ. ಮನೋವೈದ್ಯರು ಮಾತ್ರ ನಿಖರವಾಗಿ ಸ್ಕಿಜ಼ೋಫ್ರೇನಿಯಾ ಗುರುತಿಸಬಲ್ಲರು.

Q

ಸ್ಕಿಜ಼ೋಫ್ರೇನಿಯಾ ಚಿಕಿತ್ಸೆ

A

ಸ್ಕಿಜ಼ೋಫ್ರೇನಿಯಾ ಗುಣಪಡಿಸಲು ಯಾವುದೆ ಒಂದು ನಿರ್ದಿಷ್ಟ ಚಿಕಿತ್ಸೆಯಿಲ್ಲ. ಅನೇಕ ರೀತಿಯ ಚಿಕಿತ್ಸೆಗಳನ್ನು ನೀಡಿ ವ್ಯಕ್ತಿಯು ಸ್ವತಂತ್ರವಾಗಿ ಜೀವಿಸುವಂತೆ ಮಾಡಬಹುದು. ಸ್ಕಿಜ಼ೋಫ್ರೇನಿಯಾ ಮಧುಮೇಹ ಹಾಗೂ ರಕ್ತದೊತ್ತಡದಂತೆ ದೀರ್ಘಸಮಯದ ಅಸ್ವಸ್ಥತೆಯಾಗಿದ್ದು ಅದನ್ನು ನಿಯಂತ್ರಣದಲ್ಲಿಡಬಹುದು.

ಚಿಕಿತ್ಸೆಯು ರೋಗ ಲಕ್ಷಣವನ್ನು ನಿಯಂತ್ರಿಸುವುದು ಮಾತ್ರವಲ್ಲದೇ, ವ್ಯಕ್ತಿಯು ಸಹಜವಾಗಿ ಜೀವನ ನಡೆಸುವಂತೆ ಮಾಡುತ್ತದೆ.

“ಮೂರರಲ್ಲಿ ಒಂದು ಭಾಗದಷ್ಟು ಜನ ಸ್ಕಿಜ಼ೋಫ್ರೇನಿಯಾದಿಂದ ಸಾಮಾನ್ಯ ಬದುಕಿಗೆ ಮರಳುತ್ತಾರೆ. ಇನ್ನು ಮೂರರಲ್ಲಿ ಒಂದರಷ್ಟು ಜನ ಸಾಮಾನ್ಯಕ್ಕಿಂತ ಸ್ವಲ್ಪ ಕೆಳಗಿನ ಹಂತಕ್ಕೆ ಮರಳುವರು. ಉಳಿದ ಮೂರನೇ ಒಂದರಷ್ಟು ಜನ ಜೀವನ ನಡೆಸಲು ಇನ್ನೂ ಹೆಚ್ಚಿನ ಸಹಾಯದ ಪಡೆಯಬೇಕಾಗುತ್ತದೆ. ವ್ಯಕ್ತಿಯು ಗುಣಮುಖರಾಗಿ ಸಾಮಾನ್ಯ ಜೀವನಕ್ಕೆ ಯಾವಾಗ ಹಿಂದಿರುಗುತ್ತಾರೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆರಂಭದ ಹಂತಗಳಲ್ಲಿಯೇ ನೀವು ಸಮಸ್ಯೆಯನ್ನು ಗುರುತಿಸಿ, ಪರೀಕ್ಷೆ ಮಾಡಿ, ಜಾಗ್ರತೆಯಿಂದ ಚಿಕಿತ್ಸೆಯನ್ನು ಪಡೆದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಸತತವಾಗಿ ಚಿಕಿತ್ಸೆಯನ್ನು ಪಡೆಯುವುದೇ ಗುಣಮುಖರಾಗಲು ಇರುವ ದಾರಿ” ಎನ್ನುತ್ತಾರೆ ರಿಚ್ಮಂಡ್ ಫೆಲೋಶಿಫ್ ಸೊಸೈಟಿಯ ಬೆಂಗಳೂರು ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ಆಗಿರುವ ಮನೋವೈದ್ಯ ಡಾ. ಎಸ್. ಕಲ್ಯಾಣಸುಂದರಮ್.

Q

ಮನೋವಿಕಾರಕ್ಕೆ ಔಷಧಿ ಮತ್ತು ವಿದ್ಯುತ್ ಕಂಪನ ಚಿಕಿತ್ಸೆ (ECT)

A

ಖಾಯಿಲೆಯ ಲಕ್ಷಣ ಮತ್ತು ತೀವ್ರತೆಯನ್ನು ಪರಿಶೀಲಿಸಿ ವೈದ್ಯರು ಔಷಧಿ, ಚಿಕಿತ್ಸೆ ಮತ್ತು ಪುನಶ್ಚೇತನಗಳ ಸಲಹೆ ನೀಡಬಹುದು. ಈ ಔಷಧಿಗಳು ಪಾಸಿಟಿವ್ ಲಕ್ಷಣಗಳನ್ನು ಕಡಿಮೆಗೊಳಿಸಲು ಸಹಾಯಕ. ಕೆಲವೊಮ್ಮೆ ವೈದ್ಯರು ವಿದ್ಯುತ್ ಕಂಪನ ಚಿಕಿತ್ಸೆಯ ಸಲಹೆ ನೀಡಬಹುದು.

“ಮನೋವಿಕಾರಕ್ಕೆ ನೀಡುವ ಔಷಧಿಗಳಿಂದ ದುಷ್ಪರಿಣಾಮಗಳು ಹೆಚ್ಚು ಎಂಬ ತಪ್ಪು ಕಲ್ಪನೆಯಿದೆ. ಈ ನಡುವೆ ಸಿಗುವ ಔಷಧಿಗಳಲ್ಲಿ ದುಷ್ಪರಿಣಾಮಗಳು ಬಹಳ ಕಡಿಮೆಯಿದ್ದು ಗುಣವಾಗಲು ಹೆಚ್ಚು ಸಹಾಯಕವಾಗಿದೆ. ವ್ಯಕ್ತಿಗೆ ನಡುಕ, ಬಿಗಿತದ ಅನುಭವಗಳಾಗಬಹುದು. ಅಗತ್ಯವಿದ್ದಾಗ ಇಂತಹ ಪರಿಣಾಮಗಳನ್ನು ಸರಿಪಡಿಸಲು ಕೂಡ ಔಷಧಿಗಳನ್ನು ನೀಡುತ್ತೇವೆ” ಎನ್ನುತ್ತಾರೆ ಕಿಮ್ಸ್ ಸಂಸ್ಥೆಯ ಪ್ರಾಧ್ಯಾಪಕರಾದ ಲಕ್ಷ್ಮಿ.ವಿ.ಪಂಡಿತ್.

“ECT ಬಗ್ಗೆ ಕೂಡ ತಪ್ಪು ಅಭಿಪ್ರಾಯಗಳಿವೆ. ವ್ಯಕ್ತಿಯ ಪಾಸಿಟಿವ್ ಲಕ್ಷಣಗಳನ್ನು ಗುಣಪಡಿಸಲು ಇದು ಬಹಳ ಸುರಕ್ಷಿತ ಮಾರ್ಗ. ಔಷಧಿಗಳಿಗೆ ಪ್ರತಿಕ್ರಯಿಸದ ವ್ಯಕ್ತಿಗಳಿಗೆ ಸೂಕ್ತ ವೃತ್ತಿಪರರಿಂದ ಈ ಚಿಕಿತ್ಸೆಯನ್ನು ಅನೆಸ್ತೇಶಿಯಾ ನೀಡಿ ಮಾಡುವ ಮೂಲಕ ವ್ಯಕ್ತಿಗೆ ತೊಂದರೆಯಾಗದೇ ಸಹಾಯ ಮಾಡಬಹುದು” ಎನ್ನುವರು ಡಾ.ಪಂಡಿತ್.

ಸ್ಕಿಜ಼ೋಫ್ರೇನಿಯಾ ನಿಭಾಯಿಸಲು ಔಷಧೋಪಚಾರ ಒಂದೆಡೆಯಾದರೆ, ಮನೆಯವರ ಬೆಂಬಲ, ಪುನಶ್ಚೇತನ ಕೂಡ ಮುಖ್ಯ ಪಾತ್ರ ವಹಿಸುತ್ತದೆ. 

Q

ಸ್ಕಿಜ಼ೋಫ್ರೇನಿಯಾ ಇರುವವರ ಆರೈಕೆ

A

ಸ್ಕಿಜ಼ೋಫ್ರೇನಿಯಾದಿಂದ ಬಳಲುತ್ತಿರುವ ನಿಮ್ಮ ಪ್ರೀತಿ ಪಾತ್ರರ ಆರೈಕೆ ಕಷ್ಟಕರವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಊಹಿಸಲಾಗದ ವರ್ತನೆಯು ನಿಮಗೆ ಆಘಾತ ಹಾಗೂ ನೋವನ್ನುಂಟುಮಾಡಬಹುದು. ಆರೈಕೆದಾರರು, ಅದರಲ್ಲೂ ಪಾಲಕರಲ್ಲಿ ಪಾಪಪ್ರಜ್ಞೆ ಹಾಗೂ ದುಃಖದ ಭಾವನೆ ಕಾಡಬಹುದು. "ನನಗೇ ಯಾಕೆ ಹೀಗಾಯಿತು?", "ನಾನೆಲ್ಲಿ ತಪ್ಪು ಮಾಡಿದೆ?", “ನಾನು ಒಳ್ಳೆಯ ಪಾಲಕನಲ್ಲವೇ?" ಎಂದು ಚಿಂತಿಸಬಹುದು.

ನಿಮ್ಮ ಪ್ರೀತಿಪಾತ್ರರು ಸ್ಕಿಜ಼ೋಫ್ರೇನಿಯಾ ಅನುಭವಿಸುತ್ತಿದ್ದಾರೆ ಎಂದು ನಿಮಗೆ ಅನ್ನಿಸಿದರೆ, ಅವರ ವರ್ತನೆಗಳಲ್ಲಿನ ಬದಲಾವಣೆಗಳನ್ನು ವೈದ್ಯರಿಗೆ ಹೇಳಿ. ರೋಗದ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಉಂಟಾದ ಆಘಾತ, ನೋವು ಅಥವಾ ಪಾಪಪ್ರಜ್ಞೆಯಿಂದ ಹೊರಬರಲು ವೈದ್ಯರ ಹತ್ತಿರ ಚರ್ಚಿಸಿ. ನಿಮ್ಮ ಬೆಂಬಲಕ್ಕಾಗಿ ಸ್ನೇಹಿತರ ಹಾಗೂ ಸಲಹೆಗಾರರ ಸಹಾಯ ಪಡೆಯಿರಿ.

ವೈದ್ಯರು ಹೇಳುವಂತೆ, ವ್ಯಕ್ತಿಯು ಭಾವನೆಗಳನ್ನು ತೋರಿಸುವುದು ಚೇತರಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ವ್ಯಕ್ತಿಯು ಎಚ್ಚರವಿರುವಾಗ ಮತ್ತು ಭ್ರಮೆಯಲ್ಲಿರುವಾಗ ವ್ಯಕ್ತಪಡಿಸಿದ ಭಾವನೆಗಳು ಕುಟುಂಬದವರಿಗೆ ವ್ಯಕ್ತಿಯ ಅಸ್ವಸ್ಥತೆಯ ಕುರಿತಾಗಿ ಸೂಚಿಸುತ್ತವೆ. ಕುಟುಂಬದ ಸಹಕಾರ ಮತ್ತು ಆರೈಕೆಯಿಂದಾಗಿ ವ್ಯಕ್ತಿಯು ಬೇಗ ಚೇತರಿಸಿಕೊಳ್ಳುತ್ತಾರೆ. ಕುಟುಂಬವು ವ್ಯಕ್ತಿಯ ಸ್ಥಿತಿಗೆ ಅವರನ್ನೇ ಆರೋಪಿಸಿದರೆ, ವ್ಯಕ್ತಿ ಗುಣಮುಖರಾಗಲು  ಕಷ್ಟ. ಜೊತೆಗೆ ಚೇತರಿಕೆಯಾಗುತ್ತಿರುವ ವ್ಯಕ್ತಿ ಪುನಃ ರೋಗ ಸ್ಥಿತಿಗೆ ಮರಳುವ ಸಾಧ್ಯತೆ ಇರುತ್ತದೆ.

ಆರೈಕೆದಾರರು ನೆನಪಿಡಬೇಕಾದ ಪ್ರಮುಖ ಅಂಶವೆಂದರೆ, ವ್ಯಕ್ತಿಗೆ ಅವರ ವರ್ತನೆಯ ಬಗ್ಗೆ ತಿಳಿದಿರುವುದಿಲ್ಲ. ಅವರ ಮಿದುಳು ನೀಡುವ ಸಂಜ್ಞೆಯ ಪ್ರಕಾರ, ಭ್ರಮೆ ಮತ್ತು ಭ್ರಾಂತಿಗಳು ನಿಜ ಅನುಭವಗಳು ಎಂದು ನಂಬುತ್ತಾರೆ. ಇದೇ ಕಾರಣಕ್ಕಾಗಿ ಚಿಕಿತ್ಸೆಯನ್ನು ವಿರೋಧಿಸುತ್ತಾರೆ. ಆರೈಕೆದಾರರ ಒತ್ತಾಯದಿಂದ ಅವರ ಭಯ, ಭ್ರಮೆ ಹೆಚ್ಚಾಗಬಹುದು. ಅವರು ಜನರಿಂದ ದೂರ ಉಳಿಯಬಹುದು.

Q

ನೀವು ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಸಹಾಯ ಮಾಡಬಹುದು

A

  • ಅವರ ಅನುಭವಗಳ ಬಗ್ಗೆ ಕೇಳಿ (ಭ್ರಮೆ, ತಪ್ಪುಗ್ರಹಿಕೆ ಇತ್ಯಾದಿ).
  • ಅವರ ಅನುಭವಗಳು ಅವರಿಗೆ ಸತ್ಯ ಮತ್ತು ಅದರಿಂದ ಅವರಿಗಾಗುತ್ತಿರುವ ತೊಂದರೆಯನ್ನು ನಿರಾಕರಿಸಬೇಡಿ.
  •  ಅವರಿಗೆ ಚಿಕಿತ್ಸೆಯ ಕುರಿತಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹ ಮತ್ತು ಸಹಕಾರ ನೀಡಿ.
  •  ಅವರ ರೋಗ ಲಕ್ಷಣ ಮತ್ತು ಔಷಧೋಪಚಾರದ ಕುರಿತಾಗಿ ದಾಖಲೆಗಳನ್ನು ನೀವೆ ನಿರ್ವಹಣೆ ಮಾಡಿ.  ಇದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.
  • ಕುಟುಂಬದ ಇನ್ನಿತರ ಸದಸ್ಯರೊಂದಿಗೆ ರೋಗಿಯ ಮಾತನಾಡಿ, ನೀವೆಲ್ಲ ಸೇರಿ ಚಿಕಿತ್ಸೆಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಚರ್ಚಿಸಿ.
  • ಮಾನಸಿಕ ಸಲಹೆಗಾರರ ಮತ್ತು ಸ್ಥಳೀಯ ಸಲಹೆಗಾರ ಗುಂಪುಗಳೊಂದಿಗೆ ಮಾತನಾಡಿ. ಸ್ಕಿಜ಼ೋಫ್ರೇನಿಯಾದ ಆರೈಕೆ ಒತ್ತಡದಾಯಕ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಗಮನಿಸಿಕೊಳ್ಳುವುದು ನಿಮ್ಮ ಪ್ರೀತಿ ಪಾತ್ರರ ಆರೈಕೆಗೆ ಸಹಾಯ ಮಾಡುತ್ತದೆ.
  • ರೋಗ ಮರುಕಳಿಸುವ ಲಕ್ಷಣದ ಕಡೆ ಗಮನ ನೀಡುತ್ತಿರಿ. (ನಿಮ್ಮ ವೈದ್ಯರು ಆ ಕುರಿತಾಗಿ ಪೂರ್ಣ ಮಾಹಿತಿ ನಿಮಗೆ ನೀಡಿರುತ್ತಾರೆ) ಆಗ ಉದ್ರೇಕದ ಹಂತ ತಲುಪುವುದನ್ನು ತಡೆಯಬಹುದು. ರೋಗ ಉಲ್ಬಣವಾದರೆ ವ್ಯಕ್ತಿಯ ಚೇತರಿಕೆಗೆ ತಡೆಯನ್ನುಂಟು ಮಾಡಿ ಮಿದುಳಿನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org