ಬುಲಿಮಿಯಾ ನರ್ವೋಸಾ

Q

ಬುಲಿಮಿಯಾ ನರ್ವೋಸಾ ಎಂದರೇನು?

A

ಬುಲಿಮಿಯಾ ನರ್ವೋಸಾ ತಿನ್ನುವ ಖಾಯಿಲೆಯಾಗಿದ್ದು, ಈ ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾಗಿ ಆಹಾರ ಸೇವಿಸಿ ನಂತರ ವಾಂತಿ ಮಾಡುವುರ ಮೂಲಕ ಅದನ್ನು ಹೊರಹಾಕಲು ಪ್ರಯತ್ನಿಸುತ್ತಾರೆ. ಅಥವಾ ಅತಿಯಾದ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬಹುದು ಇಲ್ಲವೇ ವಿರೇಚಕಗಳನ್ನು ಬಳಸಿ ಭೇದಿಯುಂಟಾಗುವಂತೆ ಮಾಡಿಕೊಳ್ಳಬಹುದು. ಅವರಿಗೆ ಬೇಜಾರೆನಿಸಿದಾಗ ಯಾರಿಗೂ ತಿಳಿಯದಂತೆ ಅತಿಯಾಗಿ ಆಹಾರ ಸೇವಿಸಬಹುದು. ನಂತರ ತಾವು ನಿಯಂತ್ರಣ ಮೀರಿ ತಿಂದಿದ್ದರ ಬಗ್ಗೆ ತಪ್ಪಿತಸ್ಥ ಭಾವನೆ ಇರಬಹುದು. ಇದರಿಂದಾಗಿ ಅವರು ತಾವು ಸೇವಿಸಿದ ಅಹಾರವನ್ನು ವಾಂತಿ ಮಾಡುವ ಮೂಲಕ ಹೊರಹಾಕಲು ಪ್ರಯತ್ನಿಸುತ್ತಾರೆ ಅಥವಾ ಅತಿಯಾದ ವ್ಯಾಯಾಮ ಮಾಡತೊಡಗುತ್ತಾರೆ.

ದೇಹದ ಸೌಂದರ್ಯದ ಬಗ್ಗೆ ತಪ್ಪು ಗ್ರಹಿಕೆ ಅಥವಾ ತೆಳ್ಳಗಿರಬೇಕೆಂಬ ಬಯಕೆಯಿಂದ ಅವರು ಹೀಗೆ ಮಾಡಬಹುದು. ಈ ಕಾರಣದಿಂದ ಅವರ ಆತ್ಮವಿಶ್ವಾಸವೂ ಕಡಿಮೆಯಾಗಿರುತ್ತದೆ. ಸೇವಿಸಿದ ಆಹಾರವನ್ನು ಬಲವಂತವಾಗಿ ದೇಹದಿಂದ ಹೊರಹಾಕುವುದರಿಂದ ಅವರಿಗೆ ತಮ್ಮ ಜೀವನದ ವಿಷಯಗಳನ್ನು ತಾವು ನಿಯಂತ್ರಿಸಬಲ್ಲೆವೆಂಬ ಭಾವನೆ ಇರುತ್ತದೆ. ಅವರ ಸುತ್ತಲಿನ ವಿಷಯಗಳ ಮೇಲೆ ನಿಯಂತ್ರಣವಿಲ್ಲದಿದ್ದರೂ, ತಮ್ಮ ದೇಹ ಸೌಂದರ್ಯವನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿದಿರುತ್ತಾರೆ.

ಬುಲಿಮಿಯಾ ಸಮಸ್ಯೆಯಿಂದ ದೇಹದ ಮೇಲೆ ಬೀರುವ ಪರಿಣಾಮ ಗಂಭೀರವಾಗಿದ್ದರೂ, ವ್ಯಕ್ತಿಯು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಬಹುದು. ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಂಡು ತಮ್ಮ ಬಗ್ಗೆ ಸದಭಿಪ್ರಾಯವನ್ನು ಬೆಳೆಸಿಕೊಳ್ಳಬಹುದು. ಚಿಕಿತ್ಸೆಯಿಂದ ಅವರು ತಮ್ಮ ಒತ್ತಡ ಮತ್ತು ಆತಂಕವನ್ನು ಕೂಡಾ ಸೂಕ್ತವಾದ ರೀತಿಯಲ್ಲಿ ನಿಭಾಯಿಸಬಹುದು.

ಸೂಚನೆ: ಭಾವನಾತ್ಮಕ ಸಮಸ್ಯೆಯನ್ನು ಎದುರಿಸುತ್ತಿರುವ ಕೆಲವು ವ್ಯಕ್ತಿಗಳು ಆಹಾರವನ್ನು ಸುಖದ ಮೂಲವೆಂದು ತಿಳಿದು ಅತಿಯಾಗಿ ತಿನ್ನುವ ಅಭ್ಯಾಸ (ಬಿಂಜ್ ಈಟಿಂಗ್)ವನ್ನು ಬೆಳೆಸಿಕೊಳ್ಳಬಹುದು. ಆದರೆ ಇವರು ಬುಲಿಮಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಂತೆ ದೇಹದ ತೂಕ ಹೆಚ್ಚುವುದನ್ನು ತಡೆಯಲು ಬಲವಂತವಾಗಿ ಆಹಾರವನ್ನು ಹೊರದೂಡುವುದಿಲ್ಲ ಅಥವಾ ಅತಿಯಾದ ವ್ಯಾಯಾಮ ಮಾಡುವುದಿಲ್ಲ . 

Q

ಬುಲಿಮಿಯಾದ ಲಕ್ಷಣಗಳೇನು?

A

ಬುಲಿಮಿಯಾದಿಂದ ಬಳಲುತ್ತಿರುವವರು ತಮ್ಮ ದೇಹದ ಸೌಂದರ್ಯ ಮತ್ತು ಆಕಾರದ ಬಗ್ಗೆ ವಿಪರೀತವಾಗಿ ಚಿಂತೆ ಮಾಡುತ್ತಾರೆ ಮತ್ತು ತೂಕ ಹೆಚ್ಚಾಗುವ ಬಗ್ಗೆ ಭಯಭೀತರಾಗಿರುತ್ತಾರೆ.

 • ಅವರಿಗೆ ಬೇಸರ ಅಥವಾ ಅಸಮಾಧಾನವಾದಾಗ ಅತಿಯಾಗಿ ತಿನ್ನಬಹುದು.
 • ಸ್ನೇಹಿತರು ಮತ್ತು ಮನೆಯವರಿಗೆ ತಿಳಿಯದಂತೆ ಮುಚ್ಚಿಟ್ಟುಕೊಂಡು ಆಹಾರ ಸೇವಿಸಬಹುದು.
 • ಊಟದ ನಂತರ ಅವರು ಯಾವಾಗಲೂ ಬಾತ್‍ರೂಮಿಗೆ ಹೋಗುತ್ತಿದ್ದರೆ, ಬಲವಂತವಾಗಿ ಆಹಾರವನ್ನು ಹೊರಹಾಕುವ ಉದ್ದೇಶವನ್ನು ಹೊಂದಿರಬಹುದು. ಅವರು ಬಲವಂತವಾಗಿ ವಾಂತಿಮಾಡುತ್ತಿರಬಹುದು ಅಥವಾ ವಿರೇಚಕಗಳನ್ನು ಬಳಸಿ ಭೇದಿಗೆ ಪ್ರಯತ್ನಿಸಬಹುದು. ಕೆಲವರು ತೂಕ ಇಳಿಸುವ ಹರ್ಬಲ್ ಟಾನಿಕ್ ತೆಗೆದುಕೊಳ್ಳಬಹುದು.
 • ಅತಿಯಾದ ವ್ಯಾಯಾಮದಲ್ಲಿ ತೊಡಗಬಹುದು. ಅಥವಾ ವ್ಯಾಯಾಮದ ಗೀಳಿಗೆ ಒಳಗಾಗಬಹುದು. ಉದಾಹರಣೆಗೆ ಹೊರಗೆ ಮಳೆಯಾಗುತ್ತಿರುವಾಗಲೂ ಓಡಲು ಬಯಸುವುದು.

ಕೆಲವು ದೈಹಿಕ ಲಕ್ಷಣಗಳೆಂದರೆ:

 • ಅವರ ಕೈಬೆರಳು ಅಥವಾ ಬೆರಳಿನ ಗಣ್ಣುಗಳ ಮೇಲೆ ಗಾಯವಾಗಿದ್ದರೆ ಅದು ಅವರು ನಿಯಮಿತವಾಗಿ ಬಲವಂತವಾಗಿ ವಾಂತಿ ಮಾಡಿಕೊಳ್ಳುತ್ತಿರುವ ಲಕ್ಷಣಗಳಾಗಿರಬಹುದು.
 • ನಿಯಮಿತವಾಗಿ ವಾಂತಿಮಾಡುವುದರಿಂದ ಹೊಟ್ಟೆಯಲ್ಲಿರುವ ಆಸಿಡ್ ಹೊರಗೆ ಬಂದು ಹಲ್ಲುಗಳಿಗೆ ತಾಕಿ, ಹಲ್ಲುಗಳು ಬಣ್ಣಗೆಡುತ್ತವೆ.
 • ಪದೇ ಪದೇ ವಾಂತಿಮಾಡುವುದರಿಂದ ದವಡೆ ಮತ್ತು ಕೆನ್ನೆಯ ಭಾಗಗಳು ಊದಿಕೊಳ್ಳುತ್ತವೆ.
 • ಅತಿಯಾಗಿ ತಿನ್ನುವುದು ಮತ್ತು ತಿಂದ ಆಹಾರವನ್ನು ಹೊರದೂಡುವುದನ್ನು ನಿಯಮಿತವಾಗಿ ಮಾಡಿದರೆ ದೇಹದ ತೂಕದಲ್ಲಿ ಪದೇ ಪದೇ ಬದಲಾವಣೆಯಾಗುತ್ತದೆ.

Q

ಬುಲಿಮಿಯಾ ಏಕೆ ಉಂಟಾಗುತ್ತದೆ?

A

ಬುಲಿಮಿಯಾಕ್ಕೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಜೀವನದ ಹಲವಾರು ಅಂಶಗಳಿಂದ ವ್ಯಕ್ತಿಯು ಬುಲಿಮಿಯಾ ಸಮಸ್ಯೆಗೆ ಒಳಗಾಗಬಹುದು. ಉಳಿದ ತಿನ್ನುವ ಸಮಸ್ಯೆಗಳಂತೆ ಬುಲಿಮಿಯಾ ಸಮಸ್ಯೆಯಿಂದ ಬಳಲುವವರುಸಹ ತಮಗಿರುವ ಮಾನಸಿಕ ಸಮಸ್ಯೆಯನ್ನು ನಿಭಾಯಿಸುವ ಪ್ರಯತ್ನದಲ್ಲಿ ಈ ರೀತಿ ಮಾಡಬಹುದು.

ಬುಲಿಮಿಯಾಗೆ ಕಾರಣವಾಗಬಲ್ಲ ಕೆಲವು ಅಂಶಗಳೆಂದರೆ:

 • ಮಾಧ್ಯಮ ಮೂಲಕ ದೇಹ ಸೌಂದರ್ಯದ ಬಗ್ಗೆ ತಪ್ಪು ಮಾಹಿತಿ ಪಡೆಯುವುದು.
 • ಪಿಯರ್ ಪ್ರೆಷರ್ ಕಾರಣದಿಂದ ದೇಹದ ಸೌಂದರ್ಯ ಬಗ್ಗೆ ಹೆಚ್ಚು ಚಿಂತೆ ಮಾಡುವುದು
 • ಒತ್ತಡದ ಜೀವನ: ಆಪ್ತರ ಮರಣ, ಉದ್ಯೋಗ ಕಳೆದುಕೊಳ್ಳುವುದು, ವಿವಾಹ ವಿಚ್ಛೇದನದಂತಹ ಘಟನೆಗಳು ಬುಲಿಮಿಯಾಗೆ ಕಾರಣವಾಗಬಹುದು. ಒತ್ತಡವನ್ನು ತಾಳಲಾರದೇ ವ್ಯಕ್ತಿಯು ಅತಿಯಾಗಿ ತಿನ್ನಬಹುದು ಮತ್ತು ತಿಂದ ಆಹಾರವನ್ನು ಬಲವಂತವಾಗಿ ಹೊರಹಾಕಬಹುದು.
 • ಈ ಹಿಂದೆ ಸಂಭವಿಸಿದ ಆಘಾತ, ಲೈಂಗಿಕ ಅಥವಾ ದೈಹಿಕ ಹಿಂಸೆಯು ವ್ಯಕ್ತಿಯನ್ನು ಬುಲಿಮಿಯಾಗೆ ಒಳಗಾಗಬಹುದು.
 • ಕೆಲವು ಸಂದರ್ಭಗಳಲ್ಲಿ ಮಾಡೆಲಿಂಗ್, ನಟನಾವೃತ್ತಿ ಮತ್ತು ಜಿಮ್ನಾಸ್ಟಿಕ್‍ನಲ್ಲಿರುವ ವ್ಯಕ್ತಿಗಳು ತೂಕ ಹೆಚ್ಚುವ ಭಯದಿಂದ ಬುಲಿಮಿಯಾಗೆ ಒಳಗಾಗಬಹುದು.

ಕೆಲವೊಮ್ಮೆ ಖಿನ್ನತೆ, ಆತಂಕ ಅಥವಾ ಇತರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಬುಲಿಮಿಯಾಗೆ ತುತ್ತಾಗಬಹುದು. ಅವರ ಮಾನಸಿಕ ಸಮಸ್ಯೆಯಿಂದ ಯಾವುದೂ ತಮ್ಮ ನಿಯಂತ್ರಣದಲ್ಲಿಲ್ಲ ಎಂದೆನಿಸಬಹುದು. ಅತಿಯಾಗಿ ಆಹಾರ ಸೇವಿಸಿದ ನಂತರ ಬಲವಂತವಾಗಿ ಅದನ್ನು ಹೊರಹಾಕುವುದರಿಂದ ಅವರಿಗೆ ತಾವು ತಮ್ಮ ದೇಹದ ಮೇಲೆ ಹತೋಟಿ ಸಾಧಿಸಿದ್ದೇವೆಂದೆನಿಸಬಹುದು.

Q

ಬುಲಿಮಿಯಾಗೆ ಚಿಕಿತ್ಸೆ

A

ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಬುಲೀಮಿಯಾ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು. ಚಿಕಿತ್ಸೆಯು ಒತ್ತಡ ಮತ್ತು ಆತಂಕವನ್ನು ನಿಭಾಯಿಸುವ ವಿಧಾನಗಳು ಮತ್ತು ಆಪ್ತಸಮಾಲೋಚನೆಯನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ವೈದ್ಯರು ನಿಮಗೆ ಖಿನ್ನತೆ ನಿವಾರಕ ಔಷಧಿಗಳನ್ನು ನೀಡಬಹುದು.

ನಿಮಗೆ ಯಾವುದಾದರೂ ದೈಹಿಕ ಸಮಸ್ಯೆಗಳಿದ್ದರೆ ನೀವು ಚೇತರಿಸಿಕೊಳ್ಳುವ ತನಕ ಆಸ್ಪತ್ರೆಯ ಒಳರೋಗಿಯಾಗಿ ದಾಖಲಾಗುವ ಅಗತ್ಯ ಬರಬಹುದು. ನಿಮ್ಮ ತೂಕವು ತೀರಾ ಕಡಿಮೆಯಾಗಿದ್ದರೆ ತಜ್ಞರ ತಂಡವು ನೀವು ಆರೋಗ್ಯಕರ ತೂಕಕ್ಕೆ ಮರಳಲು ಸಹಾಯ ಮಾಡುತ್ತಾರೆ ಹಾಗೂ ಆರೋಗ್ಯಕರ ಆಹಾರಾಭ್ಯಾಸದ ಬಗ್ಗೆ ತಿಳಿಸಿಕೊಡುತ್ತಾರೆ. ನಿಮ್ಮ ಚಿಕಿತ್ಸೆಯ ಅಂಶಗಳನ್ನು ಯಾವಾಗಲೂ ಪಾಲಿಸಬೇಕು. ನಿಮಗೆ ಮತ್ತೆ ಅತಿಯಾಗಿ ತಿನ್ನುವ ಬಯಕೆಯಾದರೆ ವೈದ್ಯರನ್ನು ಸಂಪರ್ಕಿಸಿ.

Q

ಬುಲಿಮಿಯಾದಿಂದ ಬಳಲುತ್ತಿರುವವರ ಆರೈಕೆ

A

ಬುಲಿಮಿಯಾ ಇರುವವರು ತಮ್ಮ ಸಮಸ್ಯೆಯಿಂದ ಲಜ್ಜೆ ಪಡುತ್ತಾರೆ. ಇದರಿಂದ ಅವರು ತಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳದಿರಬಹುದು. ಆದರೆ ಬುಲಿಮಿಯಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿ ಮಡುತ್ತದೆ.

ಆದ್ದರಿಂದ ಆರೈಕೆ ಮಾಡುವವರು ಹೆಚ್ಚಿನ ಬೆಂಬಲ ನೀಡಬೇಕು. ಅವರಿಗೆ ಸಮಸ್ಯೆಯ ಬಗ್ಗೆ ಮಾತನಾಡಲು ಮತ್ತು ಚಿಕಿತ್ಸೆ ತೆಗೆದುಕೊಳ್ಳಲು ಉತ್ತೇಜನ ನೀಡಿ. ಅವರು ಮೊದಲಿಗೆ ನಿರಾಕರಿಸಿದರೂ ನೀವು ತಾಳ್ಮೆಯಿಂದ ವರ್ತಿಸಿ. ಅವರನ್ನು ಒತ್ತಾಯಿಸಬೇಡಿ ಅಥವಾ ಪರಿಣಾಮಗಳ ಕುರಿತು ಹೆದರಿಸಬೇಡಿ. ಚಿಕಿತ್ಸೆಯ ಸಮಯದಲ್ಲಿ ಕುಟುಂಬದವರು ಆರೋಗ್ಯಕರ ಆಹಾರ ಸೇವಿಸುವಂತೆ ನೋಡಿಕೊಳ್ಳಿ ಮತ್ತು ದೇಹದ ತೂಕ ಮತ್ತು ಆಹಾರದ ಬಗ್ಗೆ ಚರ್ಚೆ ಮಾಡಬೇಡಿ. ಅವರು ಚಿಕಿತ್ಸೆಯ ಸೂಚನೆಗಳನ್ನು ಪಾಲಿಸುವಂತೆ ನೋಡಿಕೊಳ್ಳಿ ಹಾಗೂ ಅವರ ಈ ಕಷ್ಟದ ಸಮಯದಲ್ಲಿ ಬೆಂಬಲ ನೀಡಿ.

Q

ಬುಲಿಮಿಯಾವನ್ನು ನಿಭಾಯಿಸುವುದು

A

ಬುಲಿಮಿಯಾದೊಂದಿಗೆ ಜೀವಿಸುವುದು ಬಹಳ ಒತ್ತಡದ ಸಂಗತಿಯಾಗಿದೆ. ಮಾನಸಿಕ ಒತ್ತಡದ ಜೊತೆಗೆ ನೀವು ದೇಹಕ್ಕೆ ಕೊಡುತ್ತಿರುವ ಶಿಕ್ಷೆಯಿಂದಾಗಿ ನಿಮ್ಮ ಆರೋಗ್ಯವು ಬಹಳಷ್ಟು ಹದಗೆಟ್ಟಿರುತ್ತದೆ. ಇದಕ್ಕೆ ಚಿಕಿತ್ಸೆಯಿದೆ. ನೀವು ಸಮಸ್ಯೆಯಿರುವುದನ್ನು ಒಪ್ಪಿಕೊಂಡು ಚಿಕಿತ್ಸೆ ಪಡೆಯಲು ಮುಂದಾಗುವದು ನಿಮ್ಮ ಚೇತರಿಕೆಯ ಮೊದಲ ಹಂತ.

ಬುಲಿಮಿಯಾದ ಚಿಕಿತ್ಸೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ನೀವು ತಾಳ್ಮೆಯಿಂದ ಚಿಕಿತ್ಸೆಯ ಸೂಚನೆಗಳು ಮತ್ತು ಆರೋಗ್ಯಕರವಾದ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಸಮಯದಲ್ಲಿ ನಿಮಗೆ ಬುಲಿಮಿಯಾದ ಲಕ್ಷಣಗಳು ಮರುಕಳಿಸಿದರೆ ಯಾರೊಂದಿಗಾದರೂ ಮಾತನಾಡಿ. ಹಿತವಾದ ವ್ಯಾಯಾಮ, ಓಡುವುದು, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮುಂತಾದ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ.   

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org