ಕ್ಲಾಸ್ಟ್ರೋಫೋಬಿಯ

ಮುಕುಲ್, ಒಂದು ಖ್ಯಾತ ಇನ್ವೆಸ್ಟಮೆಂಟ್ ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.  ಆತನ ಸಾಧನೆಗಳನ್ನು ಪರಿಗಣಿಸಿ ಅವನಿಗೆ  ಆಫೀಸಿನ ಹತ್ತನೆಯ ಮಹಡಿಯಲ್ಲಿ ಕಾರ್ನರ್ ಆಫೀಸನ್ನು ನೀಡಲಾಗಿತ್ತು. ಆದರೆ ಅವನ ಸಹದ್ಯೋಗಿಗಳಿಗೆ  ಕುತೂಹಲ. ಮುಕುಲನು ಆಫೀಸಿನಲ್ಲಿ ಎಲಿವೇಟರುಗಳು ಇದ್ದರೂ ಮೆಟ್ಟಿಲುಗಳನ್ನು ಏಕೆ ಬಳಸುತ್ತಾನೆ? ಎಂಬುದೇ ಅವರ ಚರ್ಚೆಯ ವಿಷಯ. ಅವರು ಇದಕ್ಕೆ ಹಲವಾರು ಹಾಸ್ಯಭರಿತ ಕಾರಣಗಳನ್ನು ನೀಡುತ್ತಾರೆ: “ಅವನು ಫಿಟ್ ಆಗಿರಲು ಬಯಸುತ್ತಾನೆ…” “ಅವನು ಮೆಟ್ಟಿಲುಗಳನ್ನು ಹತ್ತುತ್ತಾ ಜೀವನದಲ್ಲಿ ಇನ್ನೂ ಮೇಲೆರುವುದು ಹೇಗೆಂದು ಯೋಚಿಸುತ್ತಾನೆ…” “ಇದು ಅವನಿಗೆ ಯಶಸ್ಸಿನ ಏಣಿಯನ್ನು ಏರಿದುದರ ನೆನಪನ್ನು ಉಂಟುಮಾಡುತ್ತದೆ…” ಆದರೆ  ಮುಕುಲನು ಏಕೆ ಹೀಗೆ ಮಾಡುತ್ತಾನೆ ಎಂದು  ಯಾರೂ ಅವನನ್ನು ಕೇಳಿಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ,  ರಾತ್ರಿ ಕೆಲಸವನ್ನು ಮುಗಿಸಿ ತನ್ನ ಸಹದ್ಯೋಗಿಗಳೊಂದಿಗೆ ಹೊರಟಿದ್ದ ಮುಕುಲನು ಎಲಿವೇಟರಿನ ಬಳಿ ಅವರನ್ನು ಬಿಟ್ಟು ಮೆಟ್ಟಿಲಿನ ಕಡೆ ನಡೆದನು. ಅವನ ಸಹದ್ಯೋಗಿಗಳು ಎಲಿವೇಟರಿನಲ್ಲಿ ಬರುವಂತೆ ಒತ್ತಾಯಿಸಿದಾಗ ಆತ ಗಡಿಬಿಡಿಯಿಂದ ಮೆಟ್ಟಿಲುಗಳನ್ನು ಇಳಿಯುತ್ತಾ ಓಡಿದನು. ಇದರಿಂದ ವಿಚಲಿತಗೊಂಡ ಅವನ ಸಹದ್ಯೋಗಿಗಳು ಅವನ ನಡವಳಿಕೆಗೆ ಕಾರಣವನ್ನು ತಿಳಿಯಲೇಬೇಕೆಂದು ನಿರ್ಧರಿಸಿದರು. ಆಗ ಮುಕುಲನು ತನಗೆ  ಕಡಿದಾದ ಸ್ಥಳಗಳ ಬಗ್ಗೆ ಇರುವ ಹೆದರಿಕೆಯನ್ನು (ಕ್ಲಾಸ್ಟ್ರೋಫೋಬಿಯ) ತಿಳಿಸಿದನು.

ಕ್ಲಾಸ್ಟ್ರೋಫೋಬಿಯ, ಕಡಿದಾದ/ ಇಕ್ಕಟ್ಟಾಗಿರುವ ಸ್ಥಳಗಳ ಕುರಿತು ಇರುವ ಭಯ.ಕ್ಲಾಸ್ಟ್ರೋಫೋಬಿಯ ಇರುವ ವ್ಯಕ್ತಿಗಳಿಗೆ ಇಕ್ಕಟ್ಟಾದ ಜಾಗದಲ್ಲಿ ಭಯ , ಆತಂಕ ಉಂಟಾಗುವುದು ಮತ್ತು ಅವರಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಚಿಂತೆ ಕಾಡುತ್ತದೆ. ಇಂತಹ ಸಂದರ್ಭಗಳಲ್ಲಿ  ಅವರಿಗೆ ಈ ಕೆಳಗಿನ ಅನುಭವಗಳಾಗಬಹುದು:

 • ನಡುಕ
 • ಉಸಿರಾಡಲು ತೊಂದರೆ ಮತ್ತು ಎದೆಬಿಗಿತ
 • ಜೋರಾದ ಎದೆ ಬಡಿತ
 • ಉಸಿರು ಕಟ್ಟಿದಂತಾಗುವುದು
 • ತಲೆತಿರುಗುವುದು
 • ವಾಕರಿಕೆ

ಕೆಲವೊಮ್ಮೆ ಅಂತಹ ಸನ್ನಿವೇಶದಲ್ಲಿ ಸಿಲುಕಿಕೊಳ್ಳುವುದನ್ನು ನೆನೆಸಿಕೊಳ್ಳುವುದರಿಂದಲೇ ಅವರಿಗೆ ಆತಂಕವುಂಟಾಗಿರುತ್ತದೆ.ಕ್ಲಾಸ್ಟ್ರೋಫೋಬಿಯ ಇರುವ ವ್ಯಕ್ತಿ ಸಾಮಾನ್ಯವಾಗಿ ಈ ಕೆಳಗಿನಂತಹ ಸನ್ನಿವೇಶಗಳಿಂದ ದೂರವಿರಲು ಬಯಸುತ್ತಾರೆ.

 • ಲಿಫ್ಟ್/ಎಲಿವೇಟರುಗಳು
 • ಚಿಕ್ಕದಾದ ಕೋಣೆ
 • ಸಾರ್ವಜನಿಕ ಶೌಚಾಲಯ
 • ಸುರಂಗ/ಸಬ್ವೇ
 • ಅತಿಯಾದ ಜನಸಂದಣಿಯಿರುವ ಪ್ರದೇಶದಲ್ಲಿ ಸಿಕ್ಕಿಹಾಕಿಕೊಳ್ಳುವುದು

ಇಂತಹ ಸನ್ನಿವೇಶದಿಂದ ಪಾರಾಗಲು ಅವರು ಕೆಳಗಿನ ನಡವಳಿಕೆಗಳನ್ನು ವ್ಯಕ್ತಪಡಿಸುತ್ತಾರೆ:

 • ಹಲವು ಮಹಡಿಗಳನ್ನು ಏರಬೇಕಾದಾಗಲೂ ಲಿಫ್ಟು ಅಥವ ಎಲಿವೇಟರ್ಗಳ ಬದಲು ಮೆಟ್ಟಿಲುಗಳನ್ನು ಉಪಯೋಗಿಸುತ್ತಾರೆ.
 • ಹಲವು ಜನರಿರುವ ಕೋಣೆಯಲ್ಲಿರುವಾಗ ಸಾಧ್ಯವಾದಷ್ಟು ಬಾಗಿಲಿಗೆ ಹತ್ತಿರದ  ಸ್ಥಳದಲ್ಲಿ  ಆಸೀನರಾಗಲು ಪ್ರಯತ್ನಿಸುತ್ತಾರೆ.
 • ವಾಹನಗಳ ದಟ್ಟಣೆಯಿರುವ ಸಮಯದಲ್ಲಿ  ಪ್ರಯಾಣ ಮಾಡುವುದಿಲ್ಲ.
 • ಕೋಣೆಯಲ್ಲಿರುವಾಗ ಬಾಗಿಲು ತೆರೆದೇ ಇರಲಿ ಎಂದು ಹೇಳಬಹುದು.

ಕಾರಣಗಳು

ಬೇರೆ ಆತಂಕಗಳಂತೆಯೇ ಕ್ಲಾಸ್ಟ್ರೋಫೋಬಿಯ ಕೂಡ ಬಾಲ್ಯದಲ್ಲಿ ನಡೆದ ಅಘಾತಕಾರಿ ಘಟನೆಯಿಂದ ಉಂಟಾಗಿರಬಹುದು. ಅದಕ್ಕೆ ಈ  ಕೆಳಗಿನ ರೀತಿಯ ಕಾರಣಗಳಿರಬಹುದು.

 • ಜನಸಮೂಹದಲ್ಲಿ ಹಲವು ಗಂಟೆಗಳವರೆಗೆ ಪಾಲಕರಿಂದ ದೂರವಾಗಿರಬಹುದು.
 • ತಾವೇ ನೀರಿಗೆ ಬಿದ್ದು ಈಜಲು ಸಾಧ್ಯವಾಗದಿರಬಹುದು.
 • ಆಳವಾದ ಕಂದಕ ಅಥವಾ ಬಾವಿಗೆ ಬಿದ್ದು ಸ್ವಲ್ಪ ಹೊತ್ತು ಹೊರಗೆ ಬರಲಾಗದೇ ಸಿಲುಕಿ ಕೊಂಡಿರಬಹುದು.

ಅಲ್ಲದೆ ಕೆಲವು ಜೈವಿಕ ಮತ್ತು ವಂಶವಾಹಿ ಕಾರಣಗಳಿಂದಲೂ  ಕ್ಲಾಸ್ಟ್ರೋಫೋಬಿಯಾ ಉಂಟಾಗಬಹುದು.

ಚಿಕಿತ್ಸೆ

ಕ್ಲಾಸ್ಟ್ರೋಫೋಬಿಯ ಹೆಚ್ಚಾಗಿ ಥೆರಪಿ ಆಧಾರಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆತಂಕದ ಲಕ್ಷಣಗಳಿಗೆ ಔಷಧಗಳನ್ನು ನೀಡಬಹುದು. ಕ್ಲಾಸ್ಟ್ರೋಫೋಬಿಯಾ ಚಿಕಿತ್ಸೆಯಲ್ಲಿ ಕಾಗ್ನೆಟಿವ್ ಬಿಹೇವಿಯರಲ್ ಥೆರಪಿಯು ಸಾಮಾನ್ಯವಾಗಿದ್ದು, ಕೆಲವೊಮ್ಮೆ ವ್ಯಕ್ತಿಗಳನ್ನು ಅವರು ಭಯಪಡುವ ಸಂದರ್ಭಗಳಿಗೆ ಒಳಪಡಿಸುವ ಮೂಲಕ ತಜ್ಞರು ಚಿಕಿತ್ಸೆಯನ್ನು ನೀಡುತ್ತಾರೆ. 

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org