ಡಿಸ್ ಗ್ರಾಫಿಯಾ

Q

ಡಿಸ್ ಗ್ರಾಫಿಯಾ ಎಂದರೇನು?

A

ಇದೊಂದು ನಿರ್ದಿಷ್ಟ ರೀತಿಯ ಕಲಿಕಾ ಅಸಾಮರ್ಥ್ಯವಾಗಿದ್ದು, ಕಾಗುಣಿತ, ಕೈಬರಹ ಮತ್ತು ಗ್ರಹಿಕೆಗಳನ್ನು (ಪದಗಳು, ವಾಕ್ಯಗಳು ಮತ್ತು ಪರಿಚ್ಛೇದಗಳ ಸಂಯೋಜನೆ) ಒಳಗೊಂಡಿರುವ ಬರವಣಿಗೆಯ ಕೌಶಲ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬರವಣಿಗೆ ಮಾಡಲು ಸೂಕ್ಷ್ಮ ಸ್ವರೂಪದ ಚಲನೆ ಮತ್ತು ಭಾಷೆಯನ್ನು ಸಂಸ್ಕರಿಸುವ ಸಂಕೀರ್ಣ ಕೌಶಲ್ಯಗಳನ್ನು ಒಳಗೊಂಡಿರಬೇಕಾಗುತ್ತದೆ. ಡಿಸ್ ಗ್ರಾಫಿಯಾ ಸಮಸ್ಯೆಯಿರುವ ಮಕ್ಕಳಿಗೆ ಬರವಣಿಗೆಯ ಪ್ರಕ್ರಿಯೆಗಳು ಕಷ್ಟಕರವಾಗಿ ತೋರುತ್ತವೆ ಮತ್ತು ಏನನ್ನೇ ಆದರೂ ಅವರು ನಿಧಾನವಾಗಿ ಬರೆಯಲು ತೊಡಗುತ್ತಾರೆ.

ಡಿಸ್ಲೆಕ್ಸಿಯಾ ಅಥವಾ ಡಿಸ್ಕೆಲ್ಕ್ಯೂಲಿಯಾ ಮುಂತಾದ ಕಲಿಕಾ ನ್ಯೂನತೆಗಳಿಗೆ ಹೋಲಿಸಿದರೆ ಡಿಸ್ ಗ್ರಾಫಿಯಾ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ ಹಾಗೂ ಈ ಕುರಿತ ರೋಗಪತ್ತೆ ಪರೀಕ್ಷೆಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಸಮಸ್ಯೆಯ ಗುಣಲಕ್ಷಣಗಳು ಇನ್ನಿತರ ಸಮಸ್ಯೆಗಳ ಗುಣಲಕ್ಷಣಗಳಂತೆಯೇ ಕೂಡ ಕಂಡುಬರಬಹುದಾದ ಸಾಧ್ಯತೆಯಿದೆ. ಈ ಸಮಸ್ಯೆಯನ್ನು ನಿಖರವಾಗಿ ಕಂಡು ಹಿಡಿಯುವ ಯಾವುದೇ ಪ್ರಮಾಣೀಕೃತ ಪರೀಕ್ಷೆಗಳಿಲ್ಲ.

Q

ಯಾವುದು ಡಿಸ್ ಗ್ರಾಫಿಯಾ ಅಲ್ಲ?

A

ಮೊದಲಿಗೆ ನಿಧಾನಗತಿಯ ಅಥವಾ ಅವ್ಯವಸ್ಥಿತ ರೀತಿಯ ಬರವಣಿಗೆಯು ಡಿಸ್ ಗ್ರಾಫಿಯಾದ ಲಕ್ಷಣಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮಹತ್ವದ್ದಾಗಿದೆ. ಮಕ್ಕಳಿಗೆ ಶ್ರವಣದೋಷವಿದ್ದರೂ ಈ ಲಕ್ಷಣಗಳು ಕಂಡು ಬರುವ ಸಾಧ್ಯತೆಯಿದ್ದು, ಅಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಬೇರೆಯವರು ಏನು ಹೇಳುತ್ತಿದ್ದಾರೆ ಎಂಬುದು ಗೊತ್ತಾಗುವುದಿಲ್ಲ ಹಾಗೂ ಅವರು ಅದನ್ನು ಬರಹ ರೂಪದಲ್ಲಿ ವ್ಯಕ್ತಪಡಿಸಲು ವಿಫಲರಾಗುತ್ತಾರೆ. ಶ್ರವಣದೋಷ ಸಮಸ್ಯೆಯಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡು ಹಿಡಿಯಲು ಧ್ವನಿ ಮತ್ತು ಶ್ರವಣ ಸಾಮರ್ಥ್ಯ ಪರೀಕ್ಷೆಯನ್ನು ನಡೆಯಬೇಕಾಗುತ್ತದೆ.

Q

ಡಿಸ್ ಗ್ರಾಫಿಯಾ ಸಮಸ್ಯೆಯ ಲಕ್ಷಣಗಳಾವುವು?

A

ಡಿಸ್ ಗ್ರಾಫಿಯಾ ಸಮಸ್ಯೆಯ ಲಕ್ಷಣಗಳು ಮಕ್ಕಳಿಂದ ಮಕ್ಕಳಿಗೆ ಭಿನ್ನವಾಗಿರುತ್ತವೆ ಮತ್ತು ಬೆಳವಣಿಗೆಯ ಪ್ರತಿ ಹಂತದಲ್ಲಿ ಸಮಸ್ಯೆಯ ತೀವ್ರತೆ ಬದಲಾಗುತ್ತಿರುತ್ತದೆ. ಈ ಸಮಸ್ಯೆಯಿರುವ ಮಕ್ಕಳು ಈ ಕೆಳಗಿನ ವಿಷಯಗಳಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ.

ಹಂತಗಳು

ಡಿಸ್ ಗ್ರಾಫಿಯಾ ಸಮಸ್ಯೆಯಿರುವ ಮಕ್ಕಳು ಅನುಭವಿಸಬಹುದಾದ ತೊಂದರೆದಾಯಕ ಚಟುವಟಿಕೆಗಳು

Preschool

 • ಪೆನ್ಸಿಲನ್ನು ನಿರಾಯಾಸವಾಗಿ ಹಿಡಿದುಕೊಳ್ಳುವುದು. ಡಿಸ್ ಗ್ರಾಫಿಯಾ ಸಮಸ್ಯೆಯಿರುವ ಮಕ್ಕಳು ಪೆನ್ಸಿಲನ್ನು ಗಟ್ಟಿಯಾಗಿ ಮತ್ತು ವಿಚಿತ್ರ ರೀತಿಯಲ್ಲಿ ಹಿಡಿದುಕೊಳ್ಳಬಹುದು.

 • ಅಕ್ಷರಗಳು ಮತ್ತು ಸಂಖ್ಯೆಗಳ ಆಕಾರವನ್ನು ನಿರೂಪಿಸುವುದು.

 • ಅಕ್ಷರ ಮತ್ತು ಪದಗಳ ನಡುವೆ ಸ್ಥಿರ ಅಂತರವನ್ನು ಕಾಯ್ದುಕೊಳ್ಳುವುದು.

 • ದೊಡ್ಡಕ್ಷರ ಮತ್ತು ಸಣ್ಣಕ್ಷರಗಳನ್ನು ಅರ್ಥ ಮಾಡಿಕೊಳ್ಳುವುದು.

 • ಸಾಲಿನೊಳಗೆ ಅಥವಾ ಅಂಚಿನೊಳಗೆ ಬರೆಯುವುದು ಅಥವಾ ಚಿತ್ರ ಬಿಡಿಸುವುದು.

 • ಸುದೀರ್ಘ ಬರವಣಿಗೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಹಂತ

 

 • ಸ್ಫುಟವಾಗಿ ಬರೆಯುವುದು.

 • ಕರ್ಸಿವ್ ಮತ್ತು ಮುದ್ರಿತ ಬರವಣಿಗೆಯನ್ನು ಸಂಯೋಜಿಸುವುದು.

 • ಬರೆಯುವಾಗ ದೊಡ್ಡದಾಗಿ ಹೇಳುತ್ತ ಬರೆಯುವುದು.

 • ಬರೆಯುವಾಗ ಉಂಟಾಗುವ ಹೆಚ್ಚಿನ ಒತ್ತಡದ ಕಾರಣದಿಂದ ಬರೆದಿದ್ದನ್ನು ಗ್ರಹಿಸದೇ ಇರುವುದು.

 • ಟಿಪ್ಪಣಿಗಳನ್ನು ಬರೆದುಕೊಳ್ಳುವುದು.

 • ಬರೆಯುವಾಗ ಹೊಸ ಪದಗಳನ್ನು ಅಥವಾ ಸಮಾನ ಅರ್ಥ ಬರುವ ಪದಗಳನ್ನು ಯೋಚಿಸುವುದು.

 • ವಾಕ್ಯವನ್ನು ಸಂಪೂರ್ಣವಾಗಿ ಬರೆಯುವುದು. ಡಿಸ್ ಗ್ರಾಫಿಯಾ ಸಮಸ್ಯೆಯಿರುವ ಮಕ್ಕಳು ಕೆಲವು ಪದಗಳನ್ನು ಬಿಟ್ಟು ಬರೆಯುತ್ತಾರೆ ಅಥವಾ ವಾಕ್ಯಗಳನ್ನು ಅಪೂರ್ಣವಾಗಿ ಬರೆಯುತ್ತಾರೆ.

ಹದಿಹರೆಯ ಮತ್ತು ಯೌವನದ ಹಂತ

 

 • ತಮ್ಮ ಮಾತುಗಳನ್ನು ಬರವಣಿಗೆಯ ಮೂಲಕ ಪ್ರಕಟಗೊಳಿಸುವುದು.

 • ಆಗಲೇ ಬರೆದಿರುವ ಬರಹದ ಸಾರವನ್ನು ಅನುಸರಿಸಿಕೊಂಡು ಹೋಗುವುದು.

 • ಯಾವುದೇ ವ್ಯಾಕರಣ ತಪ್ಪಿಲ್ಲದೆ ಮತ್ತು ರಚನಾತ್ಮಕವಾದ ವಾಕ್ಯಗಳನ್ನು ಬರೆಯುವುದು.

Q

ಡಿಸ್ ಗ್ರಾಫಿಯಾ ಸಮಸ್ಯೆಗೆ ಕಾರಣಗಳೇನು?

A

ಈ ಸಮಸ್ಯೆಯ ಕಾರಣವನ್ನು ಕಂಡು ಹಿಡಿಯಲು ಸಂಶೋಧಕರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಮೆದುಳಿಗೆ ಮಾಹಿತಿಗಳನ್ನು ನಿಖರವಾಗಿ ಗ್ರಹಿಸಲು ಸಾಧ್ಯವಾಗದಿದ್ದರೆ ಇಂಥ ಸಮಸ್ಯೆ ಕಂಡು ಬರುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.

Q

ಡಿಸ್ ಗ್ರಾಫಿಯಾವನ್ನು ಪತ್ತೆ ಹಚ್ಚುವುದು ಹೇಗೆ?

A

ಪೋಷಕರು ಮತ್ತು ಶಿಕ್ಷಕರು ಶಾಲಾಪೂರ್ವ ಹಂತದಲ್ಲಿಯೇ ಮಕ್ಕಳಲ್ಲಿ ಈ ಸಮಸ್ಯೆಯ ಲಕ್ಷಣಗಳನ್ನು ಕಂಡು ಹಿಡಿಯಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಲಕ್ಷಣಗಳು ಯಾರ ಗಮನಕ್ಕೂ ಬಾರದೇ ಇರುವುದೇ ಹೆಚ್ಚು. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಪತ್ತೆ ಹಚ್ಚಿದರೆ, ಮಕ್ಕಳನ್ನು ಈ ತೊಂದರೆಯಿಂದ ಪಾರು ಮಾಡಬಹುದು. ಈ ಸಮಸ್ಯೆಯನ್ನು ಪತ್ತೆ ಹಚ್ಚುವ ಮೊದಲು ತಜ್ಞರು, ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಬರಹ ಪ್ರಕ್ರಿಯೆಗಳನ್ನು ಮಾಪನ ಮಾಡಲು ಕೆಲವು ಮೌಲ್ಯಮಾಪನ ಮತ್ತು ಬರಹ ರೂಪದ ಪರೀಕ್ಷೆಗಳನ್ನು ನಡೆಸುತ್ತಾರೆ.

Q

ಡಿಸ್ ಗ್ರಾಫಿಯಾಗೆ ಚಿಕಿತ್ಸೆ

A

ಈ ಸಮಸ್ಯೆಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಆದರೆ ಮಕ್ಕಳ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಲು ಕೆಲವು ಪರ್ಯಾಯ ವಿಧಾನಗಳಿವೆ. ಇದಕ್ಕಾಗಿ ನೀವು ವಿಶೇಷ ಶಿಕ್ಷಣ ತಜ್ಞರ ನೆರವನ್ನು ಪಡೆಯಬಹುದು. ಅವರು ಮಕ್ಕಳಿಗೆ ವಿವಿಧ ರೀತಿಯ ಕಲಿಕಾ ವಿಧಾನಗಳನ್ನು ಹೇಳಿಕೊಡುತ್ತಾರೆ ಮತ್ತು ನಿಮ್ಮ ಮಗುವಿಗೆ ಯಾವ ವಿಧಾನ ಸೂಕ್ತ ಎಂಬುದನ್ನು ಕಂಡು ಹಿಡಿಯುತ್ತಾರೆ.

Q

ಡಿಸ್ ಗ್ರಾಫಿಯಾ ಸಮಸ್ಯೆಯಿರುವ ಮಕ್ಕಳ ಆರೈಕೆ

A

ಈ ಸಮಸ್ಯೆಯಿರುವ ಮಕ್ಕಳ ಪೋಷಕರು ಮತ್ತು ವಿಶೇಷ ತಜ್ಞರು ಪರಸ್ಪರ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಕಲಿಕೆಗೆ ಕೆಲವು ಪರ್ಯಾಯ ವಿಧಾನಗಳನ್ನು ಬಳಸಬೇಕು.

1. ಮಕ್ಕಳಿಗೆ ವಿವಿಧ ರೀತಿಯ ಪೆನ್ಸಿಲ್ ಮತ್ತು ಪೆನ್‌ಗಳನ್ನು ಕೊಟ್ಟು ಬರೆಯಲು ಹೇಳಿ. ಅವರಿಗೆ ಹಿಡಿದುಕೊಳ್ಳಲು ಯಾವುದು ಹೆಚ್ಚು ಅನುಕೂಲವಾಗುತ್ತದೋ ಅದನ್ನೇ ಆಯ್ಕೆ ಮಾಡಿ.

2. ಅಕ್ಷರಗಳನ್ನು ಬರೆಯಲು ಮತ್ತು ಸಾಲಿನೊಳಗೆ ಬರೆಯಲು ಸಾಧ್ಯವಾಗುವಂತೆ ಸ್ಪಷ್ಟ ಗೆರೆಗಳಿರುವ ಮತ್ತು ಸಾಕಷ್ಟು ಸ್ಥಳಾವಕಾಶವಿರುವ ಪೇಪರ್‌ಗಳನ್ನು ಅವರಿಗೆ ಕೊಡಿ.

3. ಮಕ್ಕಳು ಬರೆಯುವಾಗ ಚಿತ್ರ, ನಕ್ಷೆ ಮತ್ತು ಧ್ವನಿಗಳನ್ನು ಉಪಯೋಗಿಸಿದರೆ ಅವರು ಅಕ್ಷರಗಳನ್ನು ಮತ್ತು ಪದಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ.

4. ಸಹಾಯಕ ತಂತ್ರಜ್ಞಾನ ಅಥವಾ ಧ್ವನಿ ಸಕ್ರಿಯವಾಗಿರುವ ಸಾಫ್ಟ್‌ವೇರ್‌ (ಪದ ಪ್ರಕ್ರಿಯೆ ಉಪಕರಣಗಳು ಮತ್ತು ಧ್ವನಿ ಉಪಕರಣಗಳು) ಬಳಕೆಯಿಂದ ಮಕ್ಕಳ ಬರವಣಿಗೆ ಸಾಮರ್ಥ್ಯ ಹೆಚ್ಚುತ್ತದೆ.

5. ಈ ಸಮಸ್ಯೆಯಿರುವ ಮಕ್ಕಳಿಗೆ ಪರೀಕ್ಷೆ ಬರೆಯಲು ಶಿಕ್ಷಕರು ಹೆಚ್ಚು ಸಮಯವನ್ನು ನೀಡಬೇಕು.

6. ಟೇಪ್ ರೆಕಾರ್ಡರ್‌ನ ಮೂಲಕ ಪಾಠಗಳನ್ನು ದಾಖಲೆ ಮಾಡಿಕೊಂಡು ಬಳಿಕ ನಿಧಾನವಾಗಿ ಆಲಿಸುತ್ತಾ ಬರೆಯಬೇಕು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org