ಎತ್ತರದಲ್ಲಿರುವ ಜಾಗಗಳಿಗೆ ಹೋಗಲು ಕೆಲವರು ಏಕೆ ಭಯ ಪಡುತ್ತಾರೆ?

ಆಕರ್ಷಕವಾಗಿರುವ ವಸತಿ ಸಮುಚ್ಛಯದ 12 ನೆಯ ಅಂತಸ್ತಿನಲ್ಲಿ ಸುಂದರವಾದ ಪೆಂಟ್ ಹೌಸನ್ನು ಹೊಂದಿರುವ ಖನ್ನಾರವರು, ಪ್ರತಿ ಹದಿನೈದು ದಿನಗಳಿಗೊಮ್ಮೆ ತಮ್ಮ ವಿಸ್ತಾರವಾದ ಟೆರೇಸಿನಲ್ಲಿ ಪಾರ್ಟಿಯನ್ನು ಆಯೋಜಿಸುತ್ತಾರೆ. ಆದರೆ ಪ್ರತಿಬಾರಿಯೂ ಶರ್ಮಾ ಕುಟುಂಬ, ರಾಜೇಶ್ ಮತ್ತು ನೀತು ಒಂದಲ್ಲಾ ಒಂದು ನೆಪ ಹೇಳಿ ಪಾರ್ಟಿಯಿಂದ ತಪ್ಪಿಸಿಕೊಳ್ಳುತ್ತಾರೆ. ಹಲವು ಬಾರಿ ಪಾರ್ಟಿಯನ್ನು ತಪ್ಪಿಸಿಕೊಳ್ಳತೊಡಗಿದ್ದರಿಂದ ಖನ್ನಾರವರು ಅವರನ್ನು ಖುದ್ದಾಗಿ ಭೇಟಿ ಮಾಡಿ ನೈಜ ಕಾರಣವನ್ನು ತಿಳಿಯಲು ಬಯಸಿದರು. ಪರಸ್ಪರರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ ಈ ವಿಷಯದ ಬಗ್ಗೆ ಮಾತು ಆರಂಭವಾಯಿತು. ಆಗ ನೀತಾಳು ತುಸು ಸಂಕೋಚದಿಂದಲೇ ತನಗೆ ಎತ್ತರದಲ್ಲಿರುವ ಜಾಗಗಳ ಬಗ್ಗೆ ಹೆದರಿಕೆಯಿರುವುದಾಗಿ ತಿಳಿಸಿದಳು. ಆಗ ಖನ್ನಾ ಇದು ನಾಚಿಕೆ ಪಡುವಂತಹ ವಿಷಯವಲ್ಲವೆಂದು ತಿಳಿಸಿದರು. ಬಹುಶಃ ಇದು ಒಂದು ರೀತಿಯ ಫೋಬಿಯಾ ಆಗಿರಬಹುದೆಂದೂ, ಅದಕ್ಕೆ ಚಿಕಿತ್ಸೆಯಿರುವುದಾಗಿಯೂ ಹೇಳಿದರು. ಈ ಕುರಿತ ಹೆಚ್ಚಿನ ವಿಚಾರಣೆಗೆ ತಮ್ಮ ನೆರೆಯವರೇ ಆಗಿರುವ ಪರಿಚಿತ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿಸುವುದಾಗಿಯೂ ಭರವಸೆ ನೀಡಿದರು.

ಬಹಳ ಜನರು ಎತ್ತರದ ಸ್ಥಳದಿಂದ ಕೆಳಗಡೆ ನೋಡಿದಾಗ ಆತಂಕಗೊಳ್ಳುತ್ತಾರೆ ಅಥವಾ ಭಯದಿಂದ ಅವರಿಗೆ ನಡುಕವುಂಟಾಗುತ್ತದೆ. ಆದರೆ ಕೆಲವು ಜನರಲ್ಲಿ ಈ ಬಗ್ಗೆ ಅತಿಯಾದ ಭಯವು ಮನೆ ಮಾಡಿರುತ್ತದೆ. ಅವರು ಎತ್ತರದಲ್ಲಿ ಸುರಕ್ಷಿತವಾಗಿರುವ ಕಟ್ಟಡಗಳ ಒಳಾಂಗಣದಲ್ಲಿದ್ದರೂ ಸಹಿತ ಆತಂಕಕ್ಕೆ ಒಳಗಾಗುತ್ತಾರೆ. ಇದರಿಂದ ಅಂತಹ ವ್ಯಕ್ತಿಗಳು ಎತ್ತರದ ಕಟ್ಟಡಗಳಲ್ಲಿ ವಾಸಿಸುವ ವ್ಯಕ್ತಿಗಳನ್ನು ಭೇಟಿಯಾಗಲು ಹಿಂಜರಿಯಬಹುದು. ಎತ್ತರದ ಕಟ್ಟಡದಲ್ಲಿ ಕೆಲಸ ಮಾಡಲು ಒಪ್ಪಿಕೊಳ್ಳದೇ ಹೋಗಬಹುದು. ವಿಮಾನ ಪ್ರಯಾಣವನ್ನು ನಿರಾಕರಿಸಬಹುದು. ಆಕ್ರೊಫೋಬಿಯಾ ಅಥವಾ ಎತ್ತರದ ಜಾಗಗಳ ಕುರಿತಾಗಿರುವ ಭಯ ಇದ್ದರೆ ಈ ಕೆಳಗಿನ ಲಕ್ಷಣಗಳನ್ನು ಕಾಣಬಹುದು:

  • ಜೋರಾದ ಎದೆಬಡಿತ
  • ತಲೆಸುತ್ತುವುದು
  • ನಿಯಂತ್ರಣ ಕಳೆದುಕೊಂಡಂತೆ ಭಾಸವಾಗುವುದು
  • ಉಸಿರು ಕಟ್ಟಿದಂತಾಗುವುದು
  • ಆತಂಕಕ್ಕೊಳಗಾಗುವುದು

ಆಕ್ರೊಫೋಬಿಯಾಕ್ಕೆ ಕಾರಣಗಳು

ಹಲವು ಕೇಸುಗಳಲ್ಲಿ ಆಕ್ರೊಫೋಬಿಯಾ ಎತ್ತರದ ಜಾಗಗಳಿಗೆ ಹೋಗಿದ್ದಾಗ ಆದ ಹಿಂದಿನ ಅನುಭವಗಳಿಗೆ ಅಥವಾ ಭಾವನಾತ್ಮಕ ಆಘಾತಕ್ಕೊಳಗಾದ ಸಂದರ್ಭಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಬಾಲ್ಯದಲ್ಲಿ ಸಂಭವಿಸಿದ ಅಥವಾ ಕಣ್ಣೆದುರಿಗೇ ಸಾಕ್ಷಿಯಾದ ಘಟನೆಗಳನ್ನು ನೋಡಿದ್ದೂ ಇದಕ್ಕೆ ಕಾರಣವಾಗಿರಬಹುದು.

ಚಿಕಿತ್ಸೆ

ಆಕ್ರೊಫೋಬಿಯಾದ ತೀವ್ರತೆಯ ಆಧಾರದ ಮೇಲೆ ತಜ್ಞರು  ಥೆರಪಿ ಮತ್ತು ಔಷಧಿಗಳ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಆತಂಕದ ಲಕ್ಷಣಗಳಿಗೆ ಸೂಕ್ತ ಥೆರಪಿಯ ಮುಖಾಂತರ ವ್ಯಕ್ತಿಯ ಭಯವನ್ನು ನಿಧಾನವಾಗಿ  ಮುಕ್ತಗೊಳಿಸಲಾಗುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org