ನಾನು ಹೇಗೆ ತಂಬಾಕು ತ್ಯಜಿಸಲಿ?

ನಾನು ಹೇಗೆ ತಂಬಾಕು ತ್ಯಜಿಸಲಿ?

ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳ ಬಳಕೆಯು ವ್ಯಕ್ತಿಯ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ? ತಂಬಾಕು ವ್ಯಸನದಿಂದಾಗುವ ತೊಂದರೆಗಳೇನು? ವ್ಯಸನವನ್ನು ಗುರುತಿಸುವುದು ಹೇಗೆ? ವ್ಯಸನ ಮುಕ್ತರಾಗುವುದು ಹೇಗೆ?

ತಂಬಾಕು ವ್ಯಸನ:

ತಂಬಾಕು ಭಾರತದಲ್ಲಿ ಹಲವು ರೂಪಗಳಲ್ಲಿ ಸರ್ವೇಸಾಮಾನ್ಯವಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.

ತಂಬಾಕು ಅತಿ ಹೆಚ್ಚಿನ ವ್ಯಸನಕಾರಿ ಪದಾರ್ಥ ಮತ್ತು ಅದರ ಸೇವನೆ ಬಿಡಬೇಕೆಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚಿನ ವಿಷಕಾರಿ ಗುಣ ಹೊಂದಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ ೫೦ ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತಂಬಾಕು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿದೆ.

ತಂಬಾಕು ಸಂಬಂಧಿತ ರೋಗಗಳಿಂದ ಭಾರತದಲ್ಲಿ ಪ್ರತಿನಿತ್ಯ 2500 ಜನರು ಮರಣ ಹೊಂದುತ್ತಿದ್ದಾರೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ.

ಏನಿದು ತಂಬಾಕು?

ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ (ನಶ್ಯ), ಧೂಮಪಾನದ ಮೂಲಕ (ಸಿಗರೇಟ್, ಬೀಡಿ) ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ.

ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವುದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ.

ತಂಬಾಕು ವ್ಯಸನ: ಕಾರಣಗಳು

ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್‌ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ.

ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದು ಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ.

ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.

ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ.

ತಂಬಾಕು ವ್ಯಸನದ ಪರಿಣಾಮಗಳು

ತಂಬಾಕು ಅಥವಾ ನಿಕೊಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಮುದ ನೀಡುವ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಯಾರು ಧೂಮಪಾನವನ್ನು ಮಾಡುತ್ತಾರೊ ಅವರು ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಪ್ಯಾನ್ಕ್ರಿಯಾಸ್, ಮೂತ್ರಪಿಂಡ ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು. ಹೊಗೆರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ, ಪ್ಯಾನ್ಕ್ರಿಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.

ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು.

ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.

ತಂಬಾಕಿನ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಹಾಗೂ ಇದು ಮಾರಕವೆಂದು ಸಾಬೀತಾಗಿದೆ. ದೀರ್ಘಾವಧಿಯ ಪರೋಕ್ಷ ಧೂಮಪಾನದಿಂದ ಶ್ವಾಸಕೋಶ, ಸ್ತನ ಹಾಗೂ ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದು ಸ್ಟ್ರೋಕ್ ಹಾಗೂ ಹೃದಯಾಘಾತಗಳಿಗೆ ಕೂಡ ಕಾರಣವಾಗಬಹುದು. ಪರೋಕ್ಷ ಧೂಮಪಾನದಿಂದ ಹೊರಬರಲು ಯಾವುದೇ ‘ಸುರಕ್ಷತೆ’ಗಳಿಲ್ಲ ಹಾಗೂ ಹೊಗೆಯ ಅಪಾಯವನ್ನು ತಡೆಯಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್ ಗಿಂತ ‘ಸುರಕ್ಷಿತ’ ಎಂಬ ನಂಬಿಕೆಯಿದೆ. ಇದು ಸತ್ಯವಲ್ಲ. ಅವು ಕೂಡ ಸಿಗರೇಟ್ನಂತೆಯೇ ವ್ಯಕ್ತಿ ಹಾಗೂ ಆತನ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.

ಯಾರ್ಯಾರು ತಂಬಾಕು ಸೇವನೆಯ ವ್ಯಸನಕ್ಕೆ ಬಲಿಯಾಗುವ ಅಪಾಯವಿದೆ?

ಯಾವ ವ್ಯಕ್ತಿ ದೀರ್ಘಕಾಲದಿಂದ ತಂಬಾಕು ಸೇವನೆಯನ್ನು ಮಾಡುತ್ತಾರೊ ಅವರು ತಂಬಾಕು ವ್ಯಸನಿಗಳಾಗುವ ಅಪಾಯವಿದೆ. ಆತ್ಮೀಯರು ತಂಬಾಕು ವ್ಯಸನಿಗಳಾಗಿದ್ದರೆ, ಚಿಕ್ಕಂದಿನಿಂದ ಅಥವಾ ಹದಿಹರೆಯದಲ್ಲಿಯೇ ತಂಬಾಕು ಸೇವನೆಯನ್ನು ರೂಢಿಸಿಕೊಂಡರೆ, ಇತರ ಮಾದಕ ದ್ರವ್ಯ ವ್ಯಸನದ ಚಟವಿದ್ದರೆ, (ಮದ್ಯ ಅಥವಾ ಡ್ರಗ್) ಮತ್ತು ಮಾನಸಿಕ ಅಸ್ವಸ್ಥತೆಗಳಿದ್ದರೆ ಅಂತಹ ವ್ಯಕ್ತಿಗಳು ತಂಬಾಕು ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.

ತಂಬಾಕು ವ್ಯಸನವನ್ನು ಗುರುತಿಸುವುದು ಹೇಗೆ?

ಪ್ರತಿನಿತ್ಯ ಕೆಲವು ಸಿಗರೇಟ್ ಸೇದುವ ಅಥವಾ ಕೆಲವು ತಂಬಾಕು ಸುಪಾರಿಗಳನ್ನು ಜಗಿಯುವ ಚಟವಿದ್ದರೆ, ಕ್ರಮೇಣ ಅದು ವ್ಯಸನವಾಗಿ ಬೆಳವಣಿಗೆ ಹೊಂದುತ್ತದೆ. ನಿಕೋಟಿನ್ ಅವಲಂಬಿತ ಧೂಮಪಾನಿಗಳ ವ್ಯಸನದ ಕೆಲವು ಲಕ್ಷಣಗಳೆಂದರೆ:

  • ನಿಮಗೆ ಧೂಮಪಾನ ಕೆಟ್ಟದ್ದು ಎಂದು ತಿಳಿದಿದೆ ಮತ್ತು ಧೂಮಪಾನವನ್ನು ಬಿಡಲು ಪ್ರಯತ್ನಿಸಿ ಸೋತಿದ್ದೀರಿ.
  • ಆರಂಭದ ದಿನಗಳಿಗಿಂತ ಈಗ ಪ್ರತಿದಿನ ಹೆಚ್ಚೆಚ್ಚು ಸೀಗರೇಟ್ ಸೇದುತ್ತಿದ್ದೀರಿ.
  • ‘ನಶೆಯೇರಲು’ ಈ ಹಿಂದಿನ ಕೆಲವು ತಿಂಗಳಿಗಿಂತ ಈಗ ಹೆಚ್ಚು ಸಿಗರೇಟುಗಳ ಅಗತ್ಯವಿದೆ.
  • ದಿನದ ಕೊನೆಯಲ್ಲಿ, ಮೊದಲೆ ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಸಿಗರೇಟ್ ಸೇದಿದ್ದೀರಿ ಎಂದು ನಿಮಗೆ ತಿಳಿಯುತ್ತದೆ.
  • ಸಿಗರೇಟ್ ಸ್ಟಾಕ್ ಮುಗಿದಾಗ ನಿಮಗೆ ಒತ್ತಡದ ಭಾವನೆ ಉಂಟಾಗುವುದು.
  • ಧೂಮಪಾನವನ್ನು ಬಿಡಲು ಪ್ರಯತ್ನಿಸಿದಾಗ, ವಿಥ್ ಡ್ರಾಯಲ್ ಸಿಂಪ್ಟಮ್ಮುಗಳಿಂದಾಗಿ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಕೂಡ ಕಷ್ಟವಾಗಬಹುದು.
  • ನಿರ್ದಿಷ್ಟ ಸಮಯದಲ್ಲಿ ಧೂಮಪಾನ ಮಾಡದೇ ಇದ್ದಲ್ಲಿ, ಹೇಗೆ ಮತ್ತು ಯಾವಾಗ ಮುಂದಿನ ಸಿಗರೇಟ್ ಸೇದುತ್ತೇನೆ ಎನ್ನುವ ಕುರಿತಾಗಿಯೇ ನಿಮ್ಮ ಅಲೋಚನೆಗಳು ಸುತ್ತುತ್ತಿರುತ್ತವೆ. .
  • ನೀವು ಹೊರ ಹೋಗುವ ಸ್ಥಳಗಳ ಹಾಗೂ ನಡೆಸುವ ಚಟುವಟಿಕೆಗಳು ಕುರಿತು ನೀವು ಆಯೋಜಿಸಿಕೊಳ್ಳುವ ವೇಳಾಪಟ್ಟಿಯು ಧೂಮಪಾನಕ್ಕೆ ಸಹಕಾರ ನೀಡುವಂತೆಯೇ ಇರುತ್ತದೆ (ಧೂಮಪಾನ ಮಾಡಲು ಅನುಮತಿ ಇರುವ ಹೊಟೆಲ್ ಅಥವಾ ಸಿಗರೇಟ್ ಕೊಂಡುಕೊಳ್ಳಲು ಸಾಧ್ಯವಿರುವ ಸ್ಥಳಗಳಿಗೆ ಹೋಗುವುದು).
  • ಅನುಮತಿಯಿಲ್ಲದ ಸ್ಥಳಗಳಲ್ಲಿ ಕೂಡ ನಿಮಗೆ ಸಿಗರೇಟ್ ಸೇದದಂತೆ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿರುವುದು.
  • ಅಸ್ವಸ್ಥಗೊಂಡಾಗ ಮತ್ತು ಸಾಮಾನ್ಯವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಸಮಯದಲ್ಲಿ ಕೂಡ ನೀವು ಧೂಮಪಾನ ಮಾಡುತ್ತೀರಿ.

ಈ ಮೇಲಿನವುಗಳಲ್ಲಿ ಕೆಲವು ಲಕ್ಷಣಗಳನ್ನು ಅನುಭವಿಸಿದ್ದೀರಿ ಎಂದು ನಿಮಗೆ ಅನಿಸಿದರೆ, ಆಗ ನೀವು ಸಿಗರೇಟ್ ವ್ಯಸನಕ್ಕೆ ಒಳಗಾಗಿದ್ದೀರಿ ಮತ್ತು ನಿಮಗೆ ಸಹಾಯದ ಅಗತ್ಯವಿದೆ ಎಂದರ್ಥ.

*ನೀವು ನಶ್ಯ, ಜಗಿಯುವ ತಂಬಾಕು ಅಥವಾ ಇತರ ತಂಬಾಕು ದ್ರವ್ಯಗಳ ವ್ಯಸನಕ್ಕೆ ಒಳಗಾಗಿದ್ದೀರಿ ಎಂದೆನಿಸಿದರೆ, ಈ ಮೇಲಿನ ಲಕ್ಷಣಗಳಿಗೆ ಹೋಲಿಸಿಕೊಂಡು ಅವುಗಳನ್ನು ತಿಳಿದುಕೊಳ್ಳಬಹುದು. “ಧೂಮಪಾನ” ಅಥವಾ “ಸಿಗರೇಟ್” ಎನ್ನುವ ಸ್ಥಳದಲ್ಲಿ ನೀವು ಸೇವಿಸುವ ಇತರ ದ್ರವ್ಯಗಳ ಹೆಸರನ್ನು ಸೇರಿಸಿಕೊಂಡು ಪ್ರಶೆಗಳಿಗೆ ಉತ್ತರಿಸಿ.

ತಂಬಾಕು ಬಳಕೆಯನ್ನು ಬಿಡಲು ಹೊರಟಾಗ ನಡುಕ, ಆತಂಕ, ಖಿನ್ನತೆಯ ಮನಸ್ಥಿತಿ, ನಿದ್ರೆಯ ಕೊರತೆ, ಬುದ್ಧಿಸ್ಥಿರವಿಲ್ಲದ ಭಾವನೆ, ಹೃದಯ ಬಡಿತದ ಇಳಿಕೆ, ಹಸಿವು ಮತ್ತು ಕಿರಿಕಿರಿ ಹೆಚ್ಚಳ ಮುಂತಾದ ವಿಥ್ ಡ್ರಾಯಲ್ ಸಿಂಪ್ಟಮ್ಸ್ ಕಾಣಿಸಿಕೊಳ್ಳಬಹುದು.

ವ್ಯಸನ : ರೋಗ ನಿರ್ಣಯ ಮತ್ತು ಚಿಕಿತ್ಸೆ

ಅಮರ್ (ಹೆಸರು ಬದಲಿಸಲಾಗಿದೆ) ಪ್ರತಿದಿನ ಅನೇಕ ಸಿಗರೇಟ್ಗಳನ್ನು ಸೇದುವ ಚಟಕ್ಕೆ ಬಲಿಯಾಗಿದ್ದ. ಅವನು ಬಿಡುವಿಲ್ಲದ ವೃತ್ತಿಪರನಾಗಿದ್ದು, ಕೆಲಸದ ನಡುವೆ ಯಾವಾಗ ಸಿಗರೇಟ್ ಸೇದಬಹುದು ಎಂದು ಎದುರು ನೋಡುತ್ತಿದ್ದ. ಅವನು ಧೂಮಪಾನಕ್ಕೆ ಹೆಚ್ಚೆಚ್ಚು ಒಳಗಾಗುತ್ತಿದ್ದಂತೆ, ಕೆಲಸ ಹಾಗೂ ಇತರ ಚಟುವಟಿಕೆಗಳ ಮೇಲೆ ಒಂದು ಗಂಟೆಗಿಂತ ಅಧಿಕ ಸಮಯ ಗಮನ ನೀಡಲು ಅಸಾಧ್ಯವಾಗತೊಡಗಿತು. ಅವನು ಸಿಗರೇಟ್ ಗಳನ್ನು ತನ್ನ ಜೇಬುಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ, ಧೂಮಪಾನ ಮಾಡುವ ಸಲುವಾಗಿ ಮೀಟಿಂಗುಗಳಿಂದ ಬೇಗ ಹೊರನಡೆಯುತ್ತಿದ್ದ ಮತ್ತು ಸಿಗರೇಟ್ ನಿಷೇಧವಿದ್ದುದರಿಂದ ವಿಮಾನ ಓಡಾಟಗಳಿಂದ ತಪ್ಪಿಸಿಕೊಳ್ಳುತ್ತಿದ್ದ.

ಮಾನಸಿಕ ವೃತ್ತಿಪರರ ಸಹಾಯ ತೆಗೆದುಕೊಂಡ ನಂತರ, ಅಮರನ ಜೀವನಶೈಲಿಯಲ್ಲಿ ಮತ್ತು ಉಳಿದೆಲ್ಲ ಚಟುವಟಿಕೆಗಳಲ್ಲಿ ಗಮನಾರ್ಹವಾದ ಚೇತರಿಕೆ ಕಂಡುಬಂದಿತು. ಅವನು ನಂತರ ಸಿಗರೇಟ್ ಮುಕ್ತವಾಗಿ ಒತ್ತಡವಿಲ್ಲದ ಜೀವನ ನಡೆಸುತ್ತಿರುವುದಾಗಿ ವೈದ್ಯರಿಗೆ ತಿಳಿಸಿದ.

ಈ ಕಾಲ್ಪನಿಕ ಬರಹವು ನಿಜ ಜೀವನದಲ್ಲಿ ಪರಿಸ್ಥಿತಿಯನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ತಿಳಿಸುತ್ತದೆ.

ಅನೇಕ ಜನರು ಕೋಲ್ಡ್ ಟರ್ಕಿ ವಿಧಾನದ ಮೂಲಕ ತಮ್ಮ ನಿಕೋಟಿನ್ ಚಟವನ್ನು ಬಿಡಲು ಸಮರ್ಥರಾಗಿದ್ದಾರೆ (ಆದರೆ ಮನೋವೈದ್ಯರು ಈ ವಿಧಾನವನ್ನು ಶಿಫಾರಸ್ಸು ಮಾಡುವುದಿಲ್ಲ). ಉಳಿದವರಿಗೆ ವೈದ್ಯಕೀಯ ವೃತ್ತಿಪರರ ನೆರವಿನ ಅಗತ್ಯವಿದೆ. ಧೂಮಪಾನದಿಂದ ಹೊರಬರಲು ಇಚ್ಛಿಸಿ, ಅದರಲ್ಲಿ ಸಫಲರಾಗದೆ ಇದ್ದಲ್ಲಿ ನಿರಾಶಾವಾದಿಗಳಾಗುವ ಅಗತ್ಯವಿಲ್ಲ. ಕೆಲವು ಸಹಾಯ ಸಹಕಾರಗಳ ಮೂಲಕ ನೀವು ಅದರಿಂದ ಹೊರಬರಲು ಸಾಧ್ಯವಿದೆ. ನೀವು ಸಹಾಯಕ್ಕಾಗಿ ಮನೋವೈದ್ಯರನ್ನು ಸಂಪರ್ಕಿಸಿ.

ಕೇವಲ 3%ದಷ್ಟು ಜನ ಮಾತ್ರ ಸ್ವಂತಂತ್ರವಾಗಿ ಧೂಮಪಾನ ಬಿಡಲು ಸಾಧ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ. ಉಳಿದ ಹೆಚ್ಚಿನ ಜನರಿಗೆ ವೃತ್ತಿಪರರ ಸಹಾಯ ಅಗತ್ಯ. ತಂಬಾಕು ಚಟದಿಂದ ಹೊರಬರುವುದು ಅಷ್ಟು ಸುಲಭವಲ್ಲ ಮತ್ತು ಅದರಿಂದ ಹೊರ ಬರಲು ಸಹಾಯ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.

ಹೆಚ್ಚಿನ ಸಂದರ್ಭದಲ್ಲಿ ವ್ಯಸನಿಗಳು, ಅವರ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಂದ ವೈದ್ಯರು ಅಥವಾ ಮನೋವೈದ್ಯರ ಹತ್ತಿರ ಕರೆತರಲ್ಪಡುತ್ತಾರೆ. ವೈದ್ಯರು ಅಥವಾ ಆಪ್ತಸಲಹೆಗಾರರು ನಿಮ್ಮನ್ನು ಪ್ರಶ್ನಿಸುತ್ತಾರೆ, ಇದರಿಂದ ನಿಮ್ಮ ವ್ಯಸನದ ತೀವ್ರತೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಫಾಗರ್ಸ್ಟೋರ್ಮ್ ಟೆಸ್ಟ್ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗಿನ ಮಾತುಕತೆಗಳ ಸಂಯೋಜನೆಯು ನಿಮಗೆ ಉತ್ತಮವಾದ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುತ್ತದೆ.

ಈ ಚಿಕಿತ್ಸೆ ಡ್ರಗ್ ಮತ್ತು ಮದ್ಯ ವ್ಯಸನಗಳ ಚಿಕಿತ್ಸೆಯಂತಲ್ಲ. ಆಸ್ಪತ್ರೆಗೆ ದಾಖಲಾಗದೆಯೆ, ಹೊರರೋಗಿಯಾಗಿದ್ದುಕೊಂಡೇ ಚಿಕಿತ್ಸೆಯನ್ನು ಪಡೆಯಬಹುದು. ವ್ಯಕ್ತಿಗಳು ವ್ಯಸನವನ್ನು ಬಿಡುವಂತೆ ಅವರನ್ನು ಹುರುದುಂಬಿಸುವುದು ಚಿಕಿತ್ಸೆಯ ಗುರಿಯಾಗಿದೆ. ನಾನು ಧೂಮಪಾನಿಯಲ್ಲ ಎಂಬ ಚಿತ್ರಣವನ್ನು ವ್ಯಕ್ತಿಗೆ ಕಟ್ಟಿಕೊಡುವ ಮೂಲಕ, ಅವರು ಯಾವುದೇ ಸವಾಲುನ್ನು ಎದುರಿಸಲು ಈ ಚಿಕಿತ್ಸೆ ಸಹಾಯ ಮಾಡುತ್ತದೆ.

ತಂಬಾಕು ವ್ಯಸನಿಗಳಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಸಮಯದಲ್ಲಿ ‘ವ್ಯಸನ ಬಿಡುವ ದಿನಾಂಕ’ವನ್ನು ಆಯ್ಕೆಮಾಡಲು ಕೇಳಿಕೊಳ್ಳಲಾಗುತ್ತದೆ. ನಂತರ ಅವರಿಗೆ ನಿಕೋಟಿನ್ ನೀಡಲಾಗುತ್ತದೆ. ಇದರಿಂದ ಕ್ರಮೇಣವಾಗಿ ಅವರು ವ್ಯಸನ ಬಿಡಲು ಸುಲಭವಾಗುತ್ತದೆ. ವಿಥ್ ಡ್ರಾವಲ್ ಸಿಂಪ್ಟಮ್ಗಳನ್ನು ನಿಭಾಯಿಸಲು ಸೂಕ್ತ ಔಷಧಗಳನ್ನು ನೀಡಲಾಗುತ್ತದೆ.

ಸಪೋರ್ಟ್ ಗ್ರೂಪ್ಗಳೊಂದಿಗೆ ವ್ಯಕ್ತಿಗಳು ಬೆರೆಯಲು ಶಿಫಾರಸ್ಸು ಮಾಡಲಾಗುತ್ತದೆ. ಇದು ವಿಥ್ ಡ್ರಾಯಲ್ ಸಿಂಪ್ಟಮ್ಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ನಿಕೋಟಿನ್ ಬಳಕೆಯ ವಿಧಾನ ಹಾಗೂ ಸಮಸ್ಯೆಯನ್ನು ನಿಭಾಯಿಸುವ ಕೌಶಲಗಳ (coping skills) ಕುರಿತಾಗಿಯೂ ತಿಳಿಸಲಾಗುತ್ತದೆ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಪೋರ್ಟ್ ಗ್ರೂಪ್ನ ಸದಸ್ಯರು ದೀರ್ಘಕಾಲ ವ್ಯಕ್ತಿಗಳ ಒಡನಾಟದಲ್ಲಿದ್ದು ವ್ಯಸನದಿಂದ ಹೊರ ಬರಲು ಹಾಗೂ ತಂಬಾಕು ಮುಕ್ತ ಜೀವನ ನಡೆಸಲು ಸಹಕಾರ ನೀಡಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org