ನಿರೂಪಣೆ: ನನ್ನ ಸಹೋದರಿಯ ಅನಿರೀಕ್ಷಿತ ವರ್ತನೆ ಅರ್ಥವಾಗಲಿಲ್ಲ

ಡಯಾಬಿಟಿಸ್‌ ಅಥವಾ ಹೃದಯ ರೋಗಗಳಂತೆಯೇ ಬೈಪೋಲಾರ್ ಡಿಸಾರ್ಡರ್‌, ಒಂದು ದೀರ್ಘಾಕಾಲ ಕಾಡುವ ಅನಾರೋಗ್ಯ ಸ್ಥಿತಿ. ಇದನ್ನು ನಾವು ಸೂಕ್ತವಾಗಿ ನಿಭಾಯಿಸಬೇಕಾಗುತ್ತದೆ.

ನನ್ನ ಸಹೋದರಿಯಲ್ಲಿ ಬೈಪೊಲಾರ್‌ ಡಿಸಾರ್ಡರ್‌ ಕಾಣಿಸಿಕೊಳ್ಳುವವರೆಗೆ ನನಗೆ ಈ ಖಾಯಿಲೆಯ ಬಗ್ಗೆ ತಿಳಿದೇ ಇರಲಿಲ್ಲ. ನನ್ನ ಸೋದರಿ ತನ್ನ ಶಿಕ್ಷಣವನ್ನು ಪೂರೈಸಿ ಶಿಕ್ಷಕಿಯಾಗಲು ಹೊರಟಿದ್ದಳು. ಅಕೆಗೆ 24 ವರ್ಷಗಳಾದಾಗ ಆಕೆಯ ವರ್ತನೆಯಲ್ಲಿ ವ್ಯತ್ಯಾಸವಾಗಿರುವುದನ್ನು ನಮ್ಮ ಕುಟುಂಬದವರು ಗಮನಿಸಿದರು. ಆಕೆ ರಾತ್ರಿ ನಿದ್ರೆ ಮಾಡುವುದು ಕಡಿಮೆಯಾಗಿತ್ತು. ಕೇವಲ ನಾಲ್ಕೈದು ತಾಸು ನಿದ್ರಿಸುತ್ತಿದ್ದಳು. ಕೋಣೆಯಲ್ಲಿನ ಸಾಮಗ್ರಿಗಳನ್ನೆಲ್ಲಾ ಒಂದೆಡೆಯಿಂದ ಇನ್ನೊಂದೆಡೆಗೆ ಸರಿಸುವ ಶಬ್ದ ರಾತ್ರಿಯಿಡೀ ಕೇಳುತ್ತಿತ್ತು. ಕೆಲವು ದಿನ ವೇಗವಾಗಿ ಏನೇನೋ ಮಾತನಾಡುತ್ತಿದ್ದುದನ್ನು ನಾವು ಗಮನಿಸಿದ್ದೆವು. ಆಕೆ ಹೇಳುತ್ತಿದ್ದ ಹಲವಾರು ಶಬ್ದಗಳಿಗೆ ಅರ್ಥವೇ ಇರುತ್ತಿರಲಿಲ್ಲ. ಹಲವು ದಿನಗಳವರೆಗೆ ಆಕೆ ಸ್ನಾನವನ್ನೇ ಮಾಡುತ್ತಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರಿಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಲಾಗಿತ್ತಾದರೂ, ಯಾವಯಾವುದೋ ಬಟ್ಟೆಗಳನ್ನು ಶಾಲೆಗೆ ಧರಿಸಿ ಹೋಗುತ್ತಿದ್ದಳು. ಯಾವುದೇ ಕಾರಣವೇ ಇಲ್ಲದೇ ಆಕೆ ಉದ್ರೇಕಗೊಳ್ಳುತ್ತಿದ್ದುದರಿಂದಾಗಿ ಆಕೆಯ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗಿತ್ತು. ಮೊದಲಿಗಿಂತಲೂ ಆಕೆ ತುಂಬಾ ಬದಲಾಗಿದ್ದಳು.

ಕೆಲವು ದಿನಗಳ ನಂತರ ಶಾಲೆಯ ಪ್ರಾಂಶುಪಾಲರು ನನ್ನ ಪಾಲಕರನ್ನು ಕರೆದು, ಆಕೆಯ ವರ್ತನೆ ಬದಲಾಗಿದ್ದರ ಬಗ್ಗೆ ದೂರಿದರು. ಆಕೆಯಲ್ಲಿ ಯಾವುದೇ ಸುಧಾರಣೆ ಕಾಣದಿದ್ದಾಗ, ಶಾಲೆಯ ಆಡಳಿತ ಮಂಡಳಿಯವರು ಆಕೆಗೆ ರಾಜೀನಾಮೆ ನೀಡಲು ಹೇಳಿದರು. ಒಂದು ದಿನ ಯಾವುದೇ ಕಾರಣವೇ ಇಲ್ಲದೆ ತೀರಾ ಸಿಟ್ಟುಗೊಂಡು ಅಮ್ಮನಿಗೆ ಹೊಡೆದಳು. ಈ ಘಟನೆಯ ನಂತರ ನಾವು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಲು ನಿರ್ಧರಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದೆವು.

ಆಸ್ಪತ್ರೆಯಲ್ಲಿರುವಾಗ, ಸ್ವರ್ಗದಿಂದ ತನಗೆ ವಿಶೇಷ ಸಂದೇಶ ಬಂದಿದೆ. ವೈದ್ಯರು ತನ್ನನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದಳು.ಈ ಎಲ್ಲಾ ಗುಣಲಕ್ಷಣಗಳನ್ನು ವಿಶ್ಲೇಷಣೆ ಮಾಡಿ, ಆಕೆಯ ವೈದ್ಯಕೀಯ ಇತಿಹಾಸವನ್ನು ಅಧ್ಯಯನ ನಡೆಸಿದ ನಂತರ ಈಕೆ ಬೈಪೊಲಾರ್‌ ಡಿಸಾರ್ಡರ್‌ನಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ನಿರ್ಧರಿಸಿದರು ಮತ್ತು ಔಷಧವನ್ನು ಆರಂಭಿಸಿದರು. ಒಂದು ತಿಂಗಳವರೆಗೆ ಆಕೆ ಆಸ್ಪತ್ರೆಯಲ್ಲಿ ಇದ್ದಳು.

ಆಕೆ ಸುಧಾರಿಸತೊಡಗಿದ್ದಾಳೆ,  ಸಮಾಧಾನಗೊಂಡಿದ್ದಾಳೆ, ಕಳೆದ ಕೆಲವು ತಿಂಗಳಿನಿಂದ ಕಾಣುತ್ತಿದ್ದ ಅವಳ ಅಸಂಗತ ವರ್ತನೆ ಕಡಿಮೆಯಾಗಿದೆ ಎಂಬ ಭರವಸೆ  ಕಾಣಿಸಿಕೊಂಡ ಮೇಲೆ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ, ಮೊದಮೊದಲು ಆಕೆ ಔಷಧಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಳು. ಹಾಗಾಗಿ ಪುನಃ ಎರಡು  ವಾರಗಳ ಕಾಲ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಈ ಬಾರಿ ಆಕೆಯನ್ನು ಡಿಸ್‌ಚಾರ್ಜ್‌ ಮಾಡಿದ ನಂತರದಲ್ಲಿ ಔಷಧವನ್ನು ಮುಂದುವರಿಸುವುದು ಉತ್ತಮ ಎಂದು ಆಕೆಗೆ ಅರಿವಾಗಿದೆ. ಇದರಿಂದ ಆಕೆ ತನ್ನ ರೋಗಲಕ್ಷಣಗಳನ್ನು ನಿಯಂತ್ರಿಸಿ ಪರಿಸ್ಥಿತಿ ನಿಭಾಯಿಸುವುದು ಸಾಧ್ಯ ಎಂಬುದು ಅರಿವಾಗಿದೆ.

ತದನಂತರದಲ್ಲಿ ಆಕೆ ವಿಶೇಷ ಶಿಕ್ಷಣದಲ್ಲಿ ಆಕೆ ಸರ್ಟಿಫಿಕೇಟ್‌ ಕೋರ್ಸ್‌ ಪೂರೈಸಿ ಈಗ ಶಾಲೆಯೊಂದರಲ್ಲಿ  ಆಕೆ ಕೆಲಸ ಮಾಡುತ್ತಿದ್ದಾಳೆ. ಆ ನಂತರದಲ್ಲಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಬಂದಿಲ್ಲ. ಈಗ ಆಕೆಗೆ ಮದುವೆಯಾಗಿದೆ. ಮಗುವೂ ಇದೆ.

(ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ರೂಪಿಸಲಾಗಿದೆ. ಈ ಕಥೆಯು ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯ ಪ್ರಕರಣವಲ್ಲ. ಬದಲಿಗೆ ಈ ಖಾಯಿಲೆಯಿಂದ ಬಳಲುತ್ತಿರುವವರ ಎಲ್ಲರ ಕಥೆಯೂ ಹೌದು ಎಂಬುದನ್ನು ಅರಿತುಕೊಳ್ಳಬೇಕು.)

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org