ಆರ್ಥೋರೆಕ್ಸಿಯಾ: ಹೊಸ ರೀತಿಯ ತಿನ್ನುವ ಸಮಸ್ಯೆ

ಆರ್ಥೋರೆಕ್ಸಿಯಾ: ಹೊಸ ರೀತಿಯ ತಿನ್ನುವ ಸಮಸ್ಯೆ

ಆರೋಗ್ಯಕರ ಆಹಾರದ ಗೀಳು ಅನಾರೋಗ್ಯಕರ ಸಮಸ್ಯೆಯಾಗಬಹುದು

ಅರ್ಥೋರೆಕ್ಸಿಯಾ ಎಂದರೇನು?

ನಮ್ಮಲ್ಲಿ ಹಲವರು ತಾವು ಏನನ್ನು ತಿನ್ನುತ್ತಿದ್ದೇವೆಂಬ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ಕೆಲವರು ತಮ್ಮ ಆಹಾರ ಕ್ರಮದ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತಾರೆ ಮತ್ತು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುತ್ತಾರೆ. ಆರೋಗ್ಯಕರವಾದ ಆಹಾರ ಪದ್ಧತಿಯು ದೀರ್ಘಕಾಲೀನ ಲಾಭ ನೀಡುತ್ತದೆ. ಆದರೆ ಕೆಲವರಲ್ಲಿ ಇದು ಅನಾರೋಗ್ಯಕರ ಗೀಳಾಗಿ ಪರಿಣಮಿಸುತ್ತದೆ.

ಆರ್ಥೋರೆಕ್ಸಿಯಾದಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಬಳಕೆಯಾದ ವಸ್ತುಗಳ ಶುದ್ಧತೆ, ಸೇವನೆಯ ಸಮಯದಿಂದ ಹಿಡಿದು ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಅತಿಯಾಗಿ ಗಮನ ನೀಡುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ತಾವು ಸರಿಯೆಂಬ ಭಾವನೆಯುಂಟಾಗುತ್ತದೆ ಮತ್ತು ತಾವು ಉಳಿದವರಿಗಿಂತ ಉತ್ತಮ ಎಂದೇ ಅನಿಸುತ್ತದೆ.

ತಮ್ಮ ಸರಿಯಾದ ಕ್ರಮದ ಬಗ್ಗೆ ಹೆಮ್ಮೆಯಿರುತ್ತದೆ. ಈ ಗೀಳು ದಿನ ಹೋದಂತೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅವರು ಬೇರೆ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅವರ ಸಾಮಾಜಿಕ ಸಂಬಂಧಗಳು ಕೂಡ ಕೆಲವೊಮ್ಮೆ ಈ ಕಾರಣಕ್ಕಾಗಿ ಹಾಳಾಗಬಹುದು. ಯಾವಾಗಲೊಮ್ಮೆ ತಮ್ಮ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಲಾಗದಿದ್ದಾಗ ಅಥವಾ ಚಪಲತೆಗೆ ಒಳಗಾಗಿ ಏನನ್ನಾದರೂ ತಿಂದಾಗ ಇನ್ನಷ್ಟು ಕಠಿಣ ಆಹಾರ ಕ್ರಮವನ್ನು ಹೇರಿಕೊಂಡು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಬಹುದು.

ಆರ್ಥೋರೆಕ್ಸಿಯಾ ಆಹಾರಾಭ್ಯಾಸದ ಸಮಸ್ಯೆಯೆಂದು ಡಯಾಗ್ನಾಸ್ಟಿಕ್ ಮತ್ತು ಸ್ಟಾಟಿಸ್ಟಿಕಲ್ ಪ್ರಕರಣ ಗ್ರಂಥ ಅಥವಾ ದಿ ಇಂಟರ್‍ನ್ಯಾಶನಲ್ ಕ್ಲಾಸಿಫಿಕೇಶನ್ ಆಫ್ ಡಿಸೀಸ್‍ನಲ್ಲಿ ಅಧಿಕೃತವಾಗಿ ಗುರುತಿಸಲಾಗಿಲ್ಲ. ಅದಾಗ್ಯೂ ಈಗೀಗ ಬಹಳಷ್ಟು ಜನರು ಈ ಸಮಸ್ಯೆಯ ಲಕ್ಷಣಗಳಿಂದ ಬಳಲುತ್ತಿದ್ದಾರೆ. ದಿನ ಕಳೆದಂತೆ ಅವರ ಆಹಾರ, ಆಹಾರಕ್ರಮ ಮತ್ತಷ್ಟು ನಿಯಂತ್ರಣಗೊಳ್ಳುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಆರಂಭವಾದ ಅಭ್ಯಾಸವು ನಿಜದಲ್ಲಿ ಆರೋಗ್ಯಕ್ಕೆ ಹಾನಿ ಮಾಡಲಾರಂಭಿಸುತ್ತದೆ. ಆರ್ಥೋರೆಕ್ಸಿಯಾದಿಂದಾಗಿ ರೋಗನಿರೋಧಕಶಕ್ತಿಯು ದುರ್ಬಲಗೊಂಡು, ಎಲುಬುಗಳು ಶಕ್ತಿಹೀನವಾಗಿ ದೇಹದ ಕಾರ್ಯಚಟುವಟಿಕೆಯು ಕುಂಠಿತಗೊಳ್ಳಬಹುದು.

ಆರ್ಥೋರೆಕ್ಸಿಯಾದ ಲಕ್ಷಣಗಳಾವವು?

ಆರ್ಥೋರೆಕ್ಸಿಯಾದ ಸಾಮಾನ್ಯ ಲಕ್ಷಣಗಳೆಂದರೆ:

  • ಆರ್ಥೋರೆಕ್ಸಿಯಾದಿಂದ ಬಳಲುತ್ತಿರುವ ವ್ಯಕ್ತಿಗಳು ತಾವು ತಯಾರಿಸಿರದ ಅಥವಾ ಅವರ ಆಹಾರಕ್ರಮಕ್ಕೆ ಸರಿಹೊಂದದ ಆಹಾರವನ್ನು ತಿನ್ನಲು ನಿರಾಕರಿಸಬಹುದು. ಉದಾಹರಣೆಗೆ, ಅವರು ಜನ್ಮದಿನದ ಸಮಾರಂಭದಲ್ಲಿ ಸಣ್ಣ ಕೇಕಿನ ತುಂಡನ್ನು ಸಹ ತಿನ್ನಲು ನಿರಾಕರಿಸಬಹುದು.

  • ಅವರು ಆಹಾರ ಸೇವಿಸಬೇಕಾಗುವುದೆಂಬ ಕಾರಣಕ್ಕಾಗಿ ಸಾಮಾಜಿಕ ಸಮಾರಂಭಗಳಿಂದ ದೂರವೇ ಉಳಿಯಬಹುದು. ಉದಾಹರಣೆಗೆ, ಸ್ನೇಹಿತರು ಮತ್ತು ಸಂಬಂಧಿಕರು ಊಟಕ್ಕೆ ಮನೆಗೆ ಕರೆದಾಗ ಹೋಗದಿರಬಹುದು.

  • ಅವರು ಅನಾರೋಗ್ಯಕರ ಆಹಾರ ಸೇವಿಸುವವರನ್ನು ಕೀಳಾಗಿ ನೋಡಬಹುದು ಮತ್ತು ಅವರಿಗಿಂತ ತಾವು ಶ್ರೇಷ್ಠರೆಂದು ಭಾವಿಸಬಹುದು.

  • ತಮ್ಮ ಆಹಾರದ ಬಗ್ಗೆ ಯೋಚಿಸುತ್ತಾ ಯಾವಾಗ ಏನು ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು, ಎಲ್ಲಿ ಒಳ್ಳೆಯ ಆಹಾರ ಸಿಗುತ್ತದೆ, ಎಂದು ಸದಾ ಯೋಚಿಸುತ್ತಾರೆ. ಹೀಗೆ ಮಾಡುವುದರಿಂದ ತಮ್ಮ ಆಹಾರಕ್ರಮ ಗೀಳಾಗಿ ಬದಲಾಗುತ್ತದೆ. 

  • ದಿನಕಳೆದಂತೆ ಅವರು ಸೇವಿಸಲು ಸೂಕ್ತವೆನಿಸುವ ಆಹಾರದ ಪಟ್ಟಿಯು ಕಡಿಮೆಯಾಗುತ್ತಾ ಹೋಗುತ್ತದೆ.

  • ಅವರ ಆಹಾರಾಭ್ಯಾಸಕ್ಕೆ ಹೊಂದುವ ಆಹಾರವನ್ನೂ ಸಹ ಅವರು ಖುಷಿಯಿಂದ ಸೇವಿಸದೇ ಇರಬಹುದು. 

  • ತಮ್ಮ ಆಹಾರಾಭ್ಯಾಸಕ್ಕೆ ಸೂಕ್ತವಲ್ಲದ ಅನಾರೋಗ್ಯಕರ ಆಹಾರವನ್ನು ಸೇವಿಸಿದಾಗ ಅವರ ಆತ್ಮ ಗೌರವಕ್ಕೆ ಧಕ್ಕೆಯಾಗುತ್ತದೆ.

ಆರ್ಥೋರೆಕ್ಸಿಯಾದಿಂದ ಬಳಲುತ್ತಿರುವವರ ಆತ್ಮಗೌರವವು ಅವರ ಆಹಾರದ ಜೊತೆಗೆ ಹೆಣೆದುಕೊಂಡಿರುತ್ತದೆ.

ಸೂಚನೆ: ಕಟ್ಟುನಿಟ್ಟಾದ ಆಹಾರಕ್ರಮವನ್ನು ಪಾಲಿಸುವುದರಿಂದ ಮತ್ತು ಹಲವು ಬಗೆಯ ಆಹಾರವನ್ನು ತೆಗೆದುಕೊಳ್ಳಲು ನಿರಾಕರಿಸುವುದರಿಂದ ಅವರಿಗೆ ಪೋಷಕಾಂಶಗಳು ದೊರೆಯದೇ ಅಪೌಷ್ಠಿಕತೆ ಮತ್ತು ತೂಕದ ಇಳಿಕೆ ಕಂಡುಬರಬಹುದು.

ಆರ್ಥೋರೆಕ್ಸಿಯಾ ಏಕೆ ಉಂಟಾಗುತ್ತದೆ?

ಹಲವು ಪರಿಸರ ಮತ್ತು ಮಾನಸಿಕ ಅಂಶಗಳ ಸಂಯೋಗದಿಂದ ಆರ್ಥೋರೆಕ್ಸಿಯಾ ಉಂಟಾಗುತ್ತದೆ. ಆಹಾರ, ಅದರ ಗುಣಮಟ್ಟ ಮತ್ತು ಪೌಷ್ಠಿಕಾಂಶದ ಪ್ರಮಾಣದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಆದರೆ ಮಾಧ್ಯಮಗಳೂ ಸೇರಿದಂತೆ ಹಲವು ಮೂಲಗಳು ಯಾವುದು ಆರೋಗ್ಯಕರ ಆಹಾರವೆಂಬ ಬಗ್ಗೆ ತಪ್ಪಾದ ಮಾಹಿತಿ ನೀಡಬಹುದು. ಹೀಗಾಗಿ ಇವರು ಹಲವು ಬಗೆಯ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ ಅಪೌಷ್ಠಿಕತೆಗೆ ಎಡೆಮಾಡಬಹುದು.

ಪಾಲಕರು ಆರ್ಥೋರೆಕ್ಸಿಯಾ ಸಮಸ್ಯೆ ಹೊಂದಿದ್ದರೆ ಮಕ್ಕಳೂ ಅದನ್ನೇ ಕಲಿಯಬಹುದು. ಒಬ್ಸೆಸಿವ್ ಕಂಪಲ್ಸಿವ್ ನಡವಳಿಕೆ ಹೊಂದಿರುವುದು ಮತ್ತು ಪರಿಪೂರ್ಣತೆಯ ಸ್ವಭಾವದವರು ಆರೋಗ್ಯಕರ ಡಯಟ್ ಪಾಲಿಸಲು ಶುರುಮಾಡಿದರೆ ಅವರು ಆರ್ಥೋರೆಕ್ಸಿಯಾಕ್ಕೆ ಒಳಗಾಗುವ ಸಂಭವವಿರುತ್ತದೆ.

ಆರ್ಥೋರೆಕ್ಸಿಯಾ ಸಮಸ್ಯೆಗೆ ಚಿಕಿತ್ಸೆಗಳು:

ಆರ್ಥೋರೆಕ್ಸಿಯಾದಿಂದ ಬಳಲುತ್ತಿರುವವರು ತಾವು ಆರೋಗ್ಯ ಪೂರ್ಣವಾದ ಆಹಾರ ಸೇವಿಸುತ್ತಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ನೈಜವಾಗಿ ಅವರು ತಮ್ಮ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುತ್ತಿರುತ್ತಾರೆ. ಇದನ್ನು ಒಪ್ಪಿಕೊಳ್ಳುವುದು ಕಷ್ಟವೆನಿಸಿದರೂ ಇದಕ್ಕೆ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.

ಚಿಕಿತ್ಸೆಯು ನಿಮಗೆ ಆರೋಗ್ಯಕರ ಆಹಾರ ಸೇವಿಸುವ ಅಭ್ಯಾಸವನ್ನು ಸಾಧಿಸಲು ಸಹಾಯ ಮಾಡುತ್ತದೆ. ಆಪ್ತ ಸಮಾಲೋಚನೆಯು ನಿಮ್ಮ ಆತಂಕ, ಮತ್ತು ಒತ್ತಡವನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ಪರಿಪೂರ್ಣತೆಯ ಮನೋಭಾವವನ್ನು ಹಾಗೂ ಎಲ್ಲವನ್ನೂ ಹತೋಟಿಯಲ್ಲಿಡಬೇಕು ಎಂಬ ಆಕಾಂಕ್ಷೆಯನ್ನು ನಿಯಂತ್ರಿಸುವ ವಿಧಾನಗಳನ್ನು ಕಲಿಸುತ್ತದೆ.

ಆರ್ಥೋರೆಕ್ಸಿಯಾ ಇರುವವರ ಕಾಳಜಿ:

ನಿಮ್ಮ ಆಪ್ತರು ಆರ್ಥೋರೆಕ್ಸಿಯಾದಿಂದ ಬಳಲುವುದನ್ನು ನೋಡಲು ಅಹಿತವೆನಿಸಬಹುದು. ಆದರೆ ಅವರು ಗುಣಮುಖ ಹೊಂದಲು ನಿಮ್ಮ ಬೆಂಬಲ ಮತ್ತು ಸಹನೆ ಅತಿಮುಖ್ಯವಾಗಿರುತ್ತದೆ. ವ್ಯಕ್ತಿಯೊಬ್ಬ ಆರ್ಥೋರೆಕ್ಸಿಯಾಗೆ ಒಳಗಾದಾಗ ಆತನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡೂ ಹದಗೆಡುತ್ತವೆ.

ಮೊದಮೊದಲು ಆ ವ್ಯಕ್ತಿಯು ತಾನೊಂದು ಸಮಸ್ಯೆಯಿಂದ ಬಳಲುತ್ತಿರುವುದರ ಬಗ್ಗೆ ಯೋಚಿಸಲು, ಮಾತನಾಡಲು ನಿರಾಕರಿಸಬಹುದು. ಅವರ ಪ್ರಕಾರ ತಾವು ಆರೋಗ್ಯಕರ ಆಹಾರ ಸೇವಿಸುತ್ತಿತ್ತಿದ್ದೇವೆ ಎಂದು ತಮ್ಮ ಬಗ್ಗೆ ಹೆಮ್ಮೆಯಿರಬಹುದು. ಆದ್ದರಿಂದ ನೀವು ಸಹನೆಯಿಂದ ನಯವಾಗಿ ಅವರನ್ನು ಚಿಕಿತ್ಸೆ ತೆಗೆದುಕೊಳ್ಳಲು ಉತ್ತೇಜಿಸಬೇಕು. ಚಿಕಿತ್ಸೆಯ ಹಂತದಲ್ಲಿ ಅವರ ಸುತ್ತಲಿನವರು ಆರೋಗ್ಯಯುತ ಆಹಾರ ಪದ್ಧತಿಯನ್ನು ಪಾಲಿಸುವುದು ಅತೀ ಅವಶ್ಯಕವಾಗಿದೆ. ಆಹಾರ ಮತ್ತು ತೂಕ ಅಥವಾ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ಮಾಡಬೇಡಿ.

ಆರ್ಥೋರೆಕ್ಸಿಯಾವನ್ನು ನಿಭಾಯಿಸುವುದು:

ನೀವು ತಿನ್ನುವ ಸಮಸ್ಯೆಗೆ ಒಳಗಾದಾಗ ಅದನ್ನು ಆರೋಗ್ಯಕರ ಹವ್ಯಾಸವೆಂದು ತಿಳಿಯುತ್ತೀರಿ ಆದರೆ ನಂತರದಲ್ಲಿ ಅದು ಒಂದು ಗೀಳಾಗುತ್ತದೆ ಹಾಗೂ ಅನಾರೋಗ್ಯಕರವಾಗಿ ಬದಲಾಗುತ್ತದೆ. ಮತ್ತು ಇದನ್ನು ಒಪ್ಪಿಕೊಳ್ಳಲು ಮನಸ್ಸಾಗುವುದಿಲ್ಲ. ನಿಮ್ಮ ಸಮಸ್ಯೆಗೆ ಸೂಕ್ತ ಚಿಕಿತ್ಸೆಯಿದೆ ಹಾಗೂ ನೀವು ಸಂಪೂರ್ಣವಾಗಿ ಗುಣಮುಖರಾಗಬಲ್ಲಿರಿ ಎಂಬುದು ನಿಮಗೆ ತಿಳಿದಿರಲಿ. ಆದರೆ ನೀವು ವೈದ್ಯರ ಸಲಹೆಯಂತೆ ಚಿಕಿತ್ಸೆಯ ಅಂಶಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಆ ಅವಧಿಯಲ್ಲಿ ನಿಮಗೆ ಆರ್ಥೋರೆಕ್ಸಿಯಾದ ಲಕ್ಷಣಗಳು ಮತ್ತೆ ಕಾಣಿಸಿದರೆ ವೈದ್ಯರಿಗೆ ತಿಳಿಸಿ.

ನಿಮಗೆ ಈ ರೀತಿಯ ಗೀಳು ಕಾಣಿಸಿದಾಗ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಿ, ಯಾವುದಾದರೂ ಚಟುವಟಿಕೆ ಕೈಗೊಳ್ಳಿ ಆದರೆ ನಿಮ್ಮ ಬಯಕೆಗೆ ಸೋಲಬೇಡಿ. ಚಿಕಿತ್ಸೆಯ ಹಂತದಲ್ಲಿ ಬೇರೆಬೇರೆ ಆಹಾರಗಳಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಸಿಕೊಡಲಾಗುವುದು. ಇದನ್ನು ಪುನಃ ಪುನಃ ನೆನಪಿಸಿಕೊಂಡು ಸರಿಯಾದ ಆಹಾರಾಭ್ಯಾಸ ಮಾಡಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org