ಪಾರ್ಕಿನ್ಸನ್ಸ್ ಖಾಯಿಲೆ

Q

ಪಾರ್ಕಿನ್ಸನ್ಸ್ ಖಾಯಿಲೆ ಎಂದರೇನು?

A

ದೇಹದ ಚಲನೆಯ ಮೇಲೆ ಪರಿಣಾಮ ಬೀರುವ ಒಂದು ಪ್ರಕಾರದ ನರ-ದೌರ್ಬಲ್ಯ ಪಾರ್ಕಿನ್ಸನ್ಸ್ ಖಾಯಿಲೆ(ಪಿಡಿ). ಮೆದುಳಿನಲ್ಲಿನಲ್ಲಿ ಉತ್ಪತ್ತಿಯಾಗಿ ದೇಹದ ಚಲನವನ್ನು ನಿಯಂತ್ರಿಸುವ ಡೋಪಮೈನ್ ಎಂಬ ರಾಸಾಯನಿಕದ ಕೊರತೆಯಾದಾಗ ಪಾರ್ಕಿನ್ಸನ್ಸ್ ಕಾಣಿಸಿಕೊಳ್ಳುತ್ತದೆ. ಪಾರ್ಕಿನ್ಸನ್ಸ್ ಖಾಯಿಲೆ ದೀರ್ಘಕಾಲ ಕಾಡುತ್ತದೆ ಮತ್ತು ಕಾಲಕ್ರಮೇಣ ಉಲ್ಬಣಗೊಳ್ಳುತ್ತದೆ. ಅಂದರೆ ಮೆದುಳಿನ ಜೀವಕೋಶಗಳು ಕ್ರಮೇಣವಾಗಿ ಕ್ಷೀಣಿಸುತ್ತವೆ. ದಿನ ಕಳೆದಂತೆ ರೋಗ ಲಕ್ಷಣಗಳು ಹೆಚ್ಚಾಗುತ್ತವೆ. ಪಾರ್ಕಿನ್ಸನ್ಸ್ ಖಾಯಿಲೆ ಸಾಂಕ್ರಾಮಿಕ ರೋಗವಲ್ಲ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. 

Q

ಪಾರ್ಕಿನ್ಸನ್ಸ್ ಖಾಯಿಲೆಗೆ ಕಾರಣಗಳೇನು?

A

ಪಾರ್ಕಿನ್ಸನ್ಸ್ ಖಾಯಿಲೆಗೆ ನಿಖರವಾದ ಕಾರಣ ತಿಳಿದಿಲ್ಲ. ಈ ತೊಂದರೆಗೆ ವಂಶವಾಹಿ ಅಥವಾ ವಾತಾವರಣ ಕಾರಣವಾಗಿರಬಹುದೆಂದು ತಜ್ಞರು ಊಹಿಸುತ್ತಾರೆ. ರೋಗ ಲಕ್ಷಣಗಳು ಮತ್ತು ತೀವ್ರತೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು.

  • ವಂಶವಾಹಿ ಅಂಶಗಳು: ಪಾರ್ಕಿನ್ಸನ್ಸ್ ಖಾಯಿಲೆಯ ಅಪಾಯವನ್ನು ಹೆಚ್ಚಿಸಬಹುದಾದ, ವಂಶವಾಹಿಯಲ್ಲಾಗುವ ಕೆಲವೊಂದು ಮಾರ್ಪಾಟುಗಳನ್ನು ಗುರುತಿಸಲಾಗಿದ್ದು, ಸಂಶೋಧನೆ ಇನ್ನೂ ನಡೆಯುತ್ತಿದೆ.

  • ವಾತಾವರಣದ ಅಂಶಗಳು : ಡೋಪಮೈನ್ ಉತ್ಪಾದಿಸುವ ನರಕೋಶಗಳ ಮೇಲೆ ಕೆಲವು ವಿಷಕಾರಿ ಅಂಶಗಳಿಂದ ತೊಂದರೆ ಉಂಟಾಗಬಹುದೆಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ

ಇನ್ನಿತರ ಅಪಾಯಕಾರಿ ಅಂಶಗಳು:

ವಯಸ್ಸು: ವಯಸ್ಸಾಗುತ್ತ ಹೋದಂತೆಲ್ಲ, ಹೆಚ್ಚಾಗಿ 60 ವರ್ಷಗಳ ನಂತರ ಈ ಖಾಯಿಲೆ ಸಂಭವಿಸುವ ಅಪಾಯ ಹೆಚ್ಚು. ಆದರೆ ಲಕ್ಷಣವು ಬಹಳ ವರ್ಷಗಳ ಮೊದಲೇ ಆರಂಭವಾಗಬಹುದು.

ಲಿಂಗ: ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಖಾಯಿಲೆಯ ಅಪಾಯ ಹೆಚ್ಚು.

ಕೌಟುಂಬಿಕ ಇತಿಹಾಸ: ಕುಟುಂಬದ ಮೊದಲ ತಲೆಮಾರಿನ ಸಂಬಂಧಿಗಳಲ್ಲಿ (ತಂದೆ, ತಾಯಿ, ಸಹೋದರ) ಯಾರಾದರೂ ಪಾರ್ಕಿನ್ಸನ್ಸ್ ಖಾಯಿಲೆ ಹೊಂದಿದ್ದರೆ, ಆಗ ವ್ಯಕ್ತಿಯಲ್ಲಿ ಪಾರ್ಕಿನ್ಸನ್ಸ್ ಉಂಟಾಗುವ ಅಪಾಯ ಹೆಚ್ಚು.

ತಲೆಗೆ ಏಟು : ಮೆದುಳಿಗೆ ತೀವ್ರವಾಗಿ ಪೆಟ್ಟು ಬೀಳುವುದರಿಂದ ಉಂಟಾಗುವ ಗಾಯ ಈ ಖಾಯಿಲೆಯನ್ನು ಒಡ್ಡಬಹುದು.

Q

ಪಾರ್ಕಿನ್ಸನ್ಸ್ ಖಾಯಿಲೆಯ ಲಕ್ಷಣಗಳೇನು?

A

ಆರಂಭದಲ್ಲಿ ಪಾರ್ಕಿನ್ಸನ್ಸ್ ಖಾಯಿಲೆಯ ಲಕ್ಷಣಗಳು ಕಡಿಮೆಯಿದ್ದು ವ್ಯಕ್ತಿ ಅಥವಾ ಕುಟುಂಬದ ಸದಸ್ಯರಿಗೆ ಅದನ್ನು ಗುರುತಿಸಲು ಸಾಧ್ಯವಾಗದಿರಬಹುದು. ಲಕ್ಷಣಗಳ ಪ್ರಮಾಣ ಮತ್ತು ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

ಪ್ರಮುಖವಾದ ಕಾರಣಗಳೆಂದರೆ:

  • ನಡುಕ (ಕಂಪಿಸುವುದು): ಖಾಯಿಲೆ ಹೆಚ್ಚಾಗುತ್ತ ಸಾಗಿದಂತೆ, ನಡುಕ ಅಥವಾ ದೇಹ ಕಂಪಿಸುವುದು ಹೆಚ್ಚಾಗಿ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಮಾಡಬಹುದು.
  • ಸ್ನಾಯುಗಳು ಬಿಗಿದುಕೊಳ್ಳುವುದರಿಂದ ಸರಾಗ ಚಲನೆಗೆ ಅಡ್ಡಿಯಾಗಿ ನೋವು ಕಾಣಿಸಿಕೊಳ್ಳಬಹುದು.
  • ಚಲನೆಯು ನಿಧಾನವಾಗುವುದು ಮತ್ತು ದೇಹದ ಸ್ಥಿರತೆ ಹಾಗೂ ಸಮತೋಲನ ಕಾಪಾಡಿಕೊಳ್ಳಲು ಕಷ್ಟವಾಗಬಹುದು.
  • ನುಂಗಲು ಮತ್ತು ಮಾತನಾಡಲು ತೊಂದರೆಯುಂಟಾಗಬಹುದು.
  • ಸ್ನಾಯು ಸೆಳೆತ ಅಥವಾ ಸ್ನಾಯುಗಳು ಒತ್ತಿದ ಅನುಭವದಿಂದ ನೋವು ಉಂಟಾಗಬಹುದು.
  • ಬರೆಯಲು ಕಷ್ಟವಾಗುವುದು
  • ನಿದ್ರೆ, ವಾಸನೆ, ಕರುಳು ಮತ್ತು ಮೂತ್ರಕೋಶದ ಚಲನೆಯನ್ನು ನಿಯಂತ್ರಿಸುವ ಹಲವು ನರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು.

Q

ಯಾವುದು ಪಾರ್ಕಿನ್ಸನ್ಸ್ ಖಾಯಿಲೆಯಲ್ಲ?

A

ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ, ಅವರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ವಯಸ್ಸಾದ ವ್ಯಕ್ತಿ ಕೆಲವು ಸಲ ನಡೆಯುವಾಗ ಸಮತೋಲನ ಕಳೆದುಕೊಳ್ಳಬಹುದು, ಶೀತ ಅಥವಾ ಜ್ವರದ ಕಾರಣದಿಂದ ವಾಸನೆಯನ್ನು ಗ್ರಹಿಸದೇ ಇರಬಹುದು. ಗಾಯಗಳಿಂದ ಅಥವಾ ಸಂಧಿವಾತದಂಥ ಯಾವುದೇ ಖಾಯಿಲೆಯಿಂದ ದೇಹದ ಚಲನೆಯಲ್ಲಿ ತೊಂದರೆ ಅನುಭವಿಸಬಹುದು. ಇವುಗಳು ಪಾರ್ಕಿನ್ಸನ್ಸ್ ಖಾಯಿಲೆಯ ಲಕ್ಷಣಗಳಲ್ಲ.

Q

ಪಾರ್ಕಿನ್ಸನ್ಸ್ ಖಾಯಿಲೆ ಪತ್ತೆಮಾಡುವುದು ಹೇಗೆ?

A

ಪಾರ್ಕಿನ್ಸನ್ಸ್ ಖಾಯಿಲೆ ನಿರ್ಧರಿಸಲು ಯಾವುದೇ ಒಂದು ನಿರ್ದಿಷ್ಟವಾದ ಪರೀಕ್ಷೆಯಿಲ್ಲ. ವೈದ್ಯರು ರೋಗಿಯ ಸ್ಥಿತಿಯ ತಪಾಸಣೆಗೆ ಆತನ ವೈದ್ಯಕೀಯ ಇತಿಹಾಸ ಮತ್ತು ನರವೈಜ್ಞಾನಿಕ ಪರೀಕ್ಷೆಗಳನ್ನು ಮಾಡಬಹುದು. ಇದು ಪಾರ್ಕಿನ್ಸನ್ಸ್ ಖಾಯಿಲೆ ಎಂದು ಖಚಿತಪಡಿಸುವ ಮೊದಲು ವೈದ್ಯರು ಮೇಲೆ ತಿಳಿಸಿದ ಲಕ್ಷಣಗಳನ್ನು ತೋರಿಸುವ ಬೇರೆ ರೋಗದ ಸಾಧ್ಯತೆಗಳನ್ನು ತಳ್ಳಿ ಹಾಕಲು ಮೆದುಳಿನ ಸ್ಕ್ಯಾನ್ ಅಥವಾ ಇನ್ನಿತರ ಪರೀಕ್ಷೆಗಳನ್ನು ಮಾಡಬಹುದು.

Q

ಪಾರ್ಕಿನ್ಸನ್ಸ್ ಖಾಯಿಲೆಗೆ ಚಿಕಿತ್ಸೆ

A

ಪಾರ್ಕಿನ್ಸನ್ಸ್ ಖಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿರ್ದಿಷ್ಟವಾದ ಚಿಕಿತ್ಸೆ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರ ಸೇವನೆ ಹಾಗೂ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು, ಸರಿಯಾಗಿ ನಿದ್ರೆ ಮಾಡುವುದು ಮತ್ತು ಕ್ರಿಯಾಶೀಲರಾಗಿರುವ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಈ ತೊಂದರೆಯನ್ನು ಎದುರಿಸಲು ಸಹಕಾರಿ. ದೇಹದ ಸಮತೋಲನ ಮತ್ತು ಬಾಗುವಿಕೆಯತ್ತ ಗಮನ ಹರಿಸುವ ದೈಹಿಕ ಚಿಕಿತ್ಸೆ ಕೂಡ ಲಾಭದಾಯಕ. ವಾಕ್ಚಿಕಿತ್ಸೆ ಮಾತಿನ ಸುಧಾರಣೆಗೆ ಸಹಾಯ ಮಾಡುತ್ತದೆ.

Q

ಸಹಕಾರ ಮತ್ತು ಬೆಂಬಲ

A

ದೀರ್ಘಕಾಲೀನ ಯಾವುದೇ ಅಸ್ವಸ್ಥತೆಯೊಂದಿಗೆ ಬದುಕುವುದು ಬಲು ಕಷ್ಟ. ಇದರಿಂದ ಸಹಜವಾಗಿ ಕೋಪ, ಹತಾಶೆ, ಧೈರ್ಯಗುಂದುವಿಕೆ ಮತ್ತು ಖಿನ್ನತೆಯ ಭಾವನೆಗಳು ಕಾಣಿಸಿಕೊಳ್ಳುವುದು ಸಹಜ. ಕುಟುಂಬದವರ ಬೆಂಬಲ ಮತ್ತು ಆರೈಕೆ ವ್ಯಕ್ತಿಗೆ ದೀರ್ಘಕಾಲದವರೆಗೆ ಅಸ್ವಸ್ಥತೆಯನ್ನು ನಿರ್ವಹಿಸಲು ಸಹಕಾರಿ. ಸಪೋರ್ಟ್ ಗ್ರೂಪ್ಗಳನ್ನು ಸೇರಿಕೊಳ್ಳುವುದು ಮತ್ತು ಅದೇ ರೀತಿಯ ತೊಂದರೆ ಎದುರಿಸುತ್ತಿರುವ ವ್ಯಕ್ತಿಗಳೊಂದಿಗೆ ಒಡನಾಡುವುದರಿಂದ ಸಮಸ್ಯೆಯನ್ನು ನಿಭಾಯಿಸಲು ಅಗತ್ಯವಿರುವ ಸಹಾಯ ಹಾಗೂ ಬೆಂಬಲ ದೊರೆಯುತ್ತದೆ.

Q

ಪಾರ್ಕಿನ್ಸನ್ಸ್ ಖಾಯಿಲೆಯೊಂದಿಗೆ ಖಿನ್ನತೆ

A

ಪಾರ್ಕಿನ್ಸನ್ಸ್ ಖಾಯಿಲೆಯ ನಿಜಾಂಶ ಒಪ್ಪಿಕೊಂಡು ಜೀವಿಸುವ ಸಂದರ್ಭದಲ್ಲಿ ರೋಗಿಯು ಈ ಖಾಯಿಲೆಯ ಜೊತೆಗೆ ಕಾಣಿಸಿಕೊಳ್ಳುವ ಆತಂಕ ಮತ್ತು ಖಿನ್ನತೆಗೆ ಒಳಗಾಗಬಹುದು. ವರ್ಷಗಳು ಕಳೆದಂತೆ, ಪಾರ್ಕಿನ್ಸನ್ಸ್ ಖಾಯಿಲೆ ಇರುವ ವ್ಯಕ್ತಿಗಳಲ್ಲಿ ಖಿನ್ನತೆಯು ಸಾಮಾನ್ಯವಾಗಿ ಕಾಣಿಸುತ್ತದೆ ಎಂಬುದನ್ನು ಗುರುತಿಸಲಾಗಿದೆ. ವ್ಯಕ್ತಿಯ ಚಲನೆಯ ಮೇಲೆ ಪರಿಣಾಮ ಬೀರುವ ಮೆದುಳಿನ ಬದಲಾವಣೆಯೇ ಮೂಡ್ ಬದಲಾವಣೆಗೂ ಕಾರಣವಾಗಿ ಖಿನ್ನತೆಯನ್ನು ಉಂಟುಮಾಡಬಹುದು. ವ್ಯಕ್ತಿಯು ಖಿನ್ನತೆಯ ಸಾಕಷ್ಟು ಲಕ್ಷಣಗಳನ್ನು ಅನುಭವಿಸುವುದರಿಂದ ಖಾಯಿಲೆಯೊಂದಿಗೆ ಏಗಲು ಕಷ್ಟವಾಗಬಹುದು. ಇದು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಖಿನ್ನತೆಗೆ ಸರಿಯಾದ ಚಿಕಿತ್ಸೆ ಪಡೆಯುವುದು ಮುಖ್ಯ. ಖಿನ್ನತೆಯ ಉಪಶಮನದಿಂದ ರೋಗದ ಇತರ ಲಕ್ಷಣಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ.

Q

ಪಾರ್ಕಿನ್ಸನ್ಸ್ ಹೊಂದಿರುವ ವ್ಯಕ್ತಿಯ ಆರೈಕೆ

A

ನಿಮ್ಮ ಪ್ರೀತಿ ಪಾತ್ರರಿಗೆ ಪಾರ್ಕಿನ್ಸನ್ಸ್ ಖಾಯಿಲೆ ಉಂಟಾದಾಗ ಅವರಿಗೂ, ನಿಮಗೂ, ನಿಮ್ಮ ಕುಟುಂಬದವರಿಗೂ ಇದು ಕಷ್ಟದ ಪರಿಸ್ಥಿತಿಯಾಗಬಹುದು. ವ್ಯಕ್ತಿಗೆ ಯಾವಾಗಲೂ ಒಬ್ಬರ ಸಹಾಯದ ಅಗತ್ಯವಿರುವುದರಿಂದ, ಆರೈಕೆದಾರರಾದ ನಿಮ್ಮ ಜವಾಬ್ದಾರಿ ಹೆಚ್ಚು.

ಈ ಖಾಯಿಲೆ ನಿಧಾನವಾಗಿ ವೃದ್ಧಿಸುವ ಕಾರಣ,ಆರೈಕೆ ಮಾಡುವುದು ಕಷ್ಟಕರ ಸಂಗತಿ. ಆರೈಕೆದಾರರ ಮಾನಸಿಕ ಹಾಗು ದೈಹಿಕ ಸ್ಥಿತಿಯ ಮೇಲೆ ಇದರ ಪರಿಣಾಮವಾಗಬಹುದು. ಆರೈಕೆದಾರರಿಗೆ ರೋಗ ತಡೆಯುವ ಶಕ್ತಿ ಕ್ಷೀಣಿಸಿ ಕಿರಿಕಿರಿ ಮತ್ತು ಹಿಂಸೆ ಉಂಟಾಗಬಹುದು. ಆರೈಕೆದಾರರು ಸ್ವತಃ ಖಿನ್ನತೆ ಹಾಗು ಆತಂಕ ಎದುರಿಸುವ ಸಂದರ್ಭ ಹೆಚ್ಚು. ಹಾಗಾಗಿ ಅವರು ತಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಕುರಿತು ಕಾಳಜಿ ವಹಿಸಬೇಕು.

ಮನೋರೋಗ ವೈದ್ಯರ ಬಳಿ ಚರ್ಚಿಸಿ ಖಾಯಿಲೆಯ ಬಗ್ಗೆ ಹೆಚ್ಚು ಮಾಹಿತಿ ಪಡೆಯುವುದರಿಂದ ತಮ್ಮ ಆರೋಗ್ಯವನ್ನೂ ಗಮನಿಸುತ್ತಾ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಆರೈಕೆ ಮಾಡುವುದು ಸುಲಭವಾಗುತ್ತದೆ. 

Q

ಪಾರ್ಕಿನ್ಸನ್ಸ್ ಖಾಯಿಲೆ ಕುರಿತ ಕಲ್ಪನೆ ಮತ್ತು ವಾಸ್ತವ

A

ಕಲ್ಪನೆ: ಪಾರ್ಕಿನ್ಸನ್ಸ್ ಖಾಯಿಲೆ ಕೇವಲ ಚಲನೆಯ ಮೇಲೆ ಮಾತ್ರ ಪರಿಣಾಮ ಬೀರುತ್ತದೆ

ವಾಸ್ತವ: ಪಾರ್ಕಿನ್ಸನ್ಸ್ ಖಾಯಿಲೆ ಮೆದುಳಿನ ಹಲವು ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಕ್ಷೀಣಿಸುವುದು, ನಿದ್ರೆಯ ತೊಂದರೆ, ಅರಿವಿನ ಸಮಸ್ಯೆ, ಮಲಬದ್ಧತೆ/ಮೂತ್ರಕೋಶದ ಸಮಸ್ಯೆ, ಲೈಂಗಿಕ ನಿಷ್ಕ್ರಿಯತೆ, ಆಯಾಸ, ನೋವು, ಆತಂಕ ಮತ್ತು ಖಿನ್ನತೆ ಸೇರಿದಂತೆ ಅನೇಕ ಲಕ್ಷಣಗಳು ಕಾಣಿಸಬಹುದು.

ಕಲ್ಪನೆ: ಪಾರ್ಕಿನ್ಸನ್ಸ್ ಖಾಯಿಲೆ ವಯಸ್ಸಾದವರಲ್ಲಿ ಮಾತ್ರ ಕಾಣಿಸುತ್ತದೆ.

ವಾಸ್ತವ: ಹೆಚ್ಚಿನ ಜನರಲ್ಲಿ ಈ ತೊಂದರೆಯು ಐವತ್ತರ ಅಥವಾ ಅರವತ್ತು ವರ್ಷದ ಪ್ರಾರಂಭದಲ್ಲಿ ಕಾಣಿಸಿಕೊಳ್ಳುತ್ತದೆ. ಶೇ.10ರಷ್ಟು ಜನರಲ್ಲಿ ಇದು ನಲವತ್ತು ವರ್ಷಕ್ಕಿಂತ ಮೊದಲು ಕಾಣಿಸಿಕೊಳ್ಳುತ್ತದೆ.

ಕಲ್ಪನೆ: ಪಾರ್ಕಿನ್ಸನ್ಸ್ ಖಾಯಿಲೆ ಇರುವ ಎಲ್ಲರಲ್ಲಿಯೂ ನಡುಕ ಕಾಣಿಸುತ್ತದೆ

ವಾಸ್ತವ: ನಡುಗುವಿಕೆ ಅತಿ ಸಾಮಾನ್ಯವಾದ ಲಕ್ಷಣವಾದರೂ, ಈ ಖಾಯಿಲೆ ಹೊಂದಿರುವ ಕೆಲವರು ಯಾವತ್ತೂ ನಡುಕ ಅನುಭವಿಸದೇ ಇರಬಹುದು.

ಕಲ್ಪನೆ: ಪಾರ್ಕಿನ್ಸನ್ಸ್ ಖಾಯಿಲೆ ಅನಿರೀಕ್ಷಿತವಾಗಿ ತೀವ್ರಗೊಳ್ಳಬಹುದು

ವಾಸ್ತವ: ಲಕ್ಷಣಗಳು ದಿನವಿಡೀ ಏರುಪೇರಾದರೂ, ಖಾಯಿಲೆಯು ನಿಧಾನವಾಗಿ ಬೆಳೆಯುತ್ತದೆ. ದಿನ ಕಳೆದಂತೆ ಅಥವಾ ವಾರಗಳು ಉರುಳಿದಂತೆ ಲಕ್ಷಣಗಳು ಹೆಚ್ಚಾದರೆ, ಸೋಂಕು, ಔಷಧಗಳ ಅಡ್ಡ ಪರಿಣಾಮ, ಒತ್ತಡ ಅಥವಾ ಬೇರೊಂದು ವೈದ್ಯಕೀಯ ಸ್ಥಿತಿ ಆ ಉಲ್ಬಣಕ್ಕೆ ಕಾರಣವಾಗಬಹುದು.

ಕಲ್ಪನೆ: ಔಷಧೋಪಚಾರದಿಂದ ಮಾತ್ರ ಪಾರ್ಕಿನ್ಸನ್ಸ್ ಖಾಯಿಲೆ ಗುಣವಾಗುತ್ತದೆ

ವಾಸ್ತವ: ಕೆಲವು ಲಕ್ಷಣಗಳನ್ನು ಔಷಧೋಪಚಾರದಿಂದ ಗುಣಪಡಿಸಬಹುದಾದರೂ. ಪ್ರತಿನಿತ್ಯ ವ್ಯಾಯಾಮ, ಸ್ನಾಯುವಿನ ಶಕ್ತಿ ಹೆಚ್ಚಿಸುವ ಥೆರಪಿಗಳು, ಪೌಷ್ಟಿಕ ಆಹಾರ ಸೇವನೆ ಮೊದಲಾದ ಜೀವನಶೈಲಿಯ ಬದಲಾವಣೆಗಳು ರೋಗ ಲಕ್ಷಣದ ತೀವ್ರತೆಯನ್ನು ಕಡಿಮೆಗೊಳಿಸಿ ಜೀವನ ಶೈಲಿಯ ಗುಣಮಟ್ಟ ಹೆಚ್ಚಿಸಬಹುದು. ವಾರದ ಏಳೂ ದಿನಗಳು ಸೇರಿ ಕೇವಲ ಒಂದು ತಾಸು ವ್ಯಾಯಾಮ ಮಾಡಿದ ರೋಗಿಯ ದೈನಂದಿನ ಚಟುವಟಿಕೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದನ್ನು ವೈದ್ಯರು ಗಮನಿಸಿದ್ದಾರೆ.

ಕಲ್ಪನೆ: ಪಾರ್ಕಿನ್ಸನ್ಸ್ ವಂಶವಾಹಿ ಖಾಯಿಲೆ

ವಾಸ್ತವ: ಪಾರ್ಕಿನ್ಸನ್ಸ್ ಖಾಯಿಲೆಗೆ ನಿಖರವಾದ ಕಾರಣ ತಿಳಿದಿಲ್ಲ ಮತ್ತು ಇದರಲ್ಲಿ ಶೇ.5-10ರಷ್ಟು ಮಾತ್ರ ವಂಶವಾಹಿ ಕಾರಣಗಳಿಂದ ಉಂಟಾಗಬಹುದು. ಖಾಯಿಲೆಗೆ ವಾತಾವರಣದ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗುತ್ತವೆ.

ಕಲ್ಪನೆ: ಪಾರ್ಕಿನ್ಸನ್ಸ್ ಮಾರಕ ಖಾಯಿಲೆ

ವಾಸ್ತವ: ಪಾರ್ಕಿನ್ಸನ್ಸ್ ಖಾಯಿಲೆಯೇ ಮರಣ ತರುವುದಿಲ್ಲ. ನುಂಗಲು ಸಮಸ್ಯೆಯಾಗಿ ನ್ಯುಮೋನಿಯಾದಂತಹ ಶ್ವಾಸಕೋಶದ ಸೋಂಕುಗಳು ಉಂಟಾಗಬಹುದು. ಆದರೆ ಹೆಚ್ಚಿನ ಜನರಿಗೆ ಇಂಥ ಅನುಭವ ಆಗುವುದಿಲ್ಲ. ರೋಗಪತ್ತೆಯಾದ ಬಳಿಕ ದಶಕಗಳ ಕಾಲ ಬದುಕಿದವರಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org