ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ : ಕಲ್ಪನೆ ಮತ್ತು ವಾಸ್ತವ

ಕಲ್ಪನೆ:ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಹೊಂದಿರುವ ವ್ಯಕ್ತಿಯ ಜೊತೆ ಇರುವುದು ಕಷ್ಟವಾಗುತ್ತದೆ. ಇದು ನಿಜವಾಗಿ ಖಾಯಿಲೆ ಅಲ್ಲ

ವಾಸ್ತವ:ಸಾಮಾನ್ಯ ವರ್ಗದಿಂದ ಹೊರತಾದ ಆತನ ಅಸ್ಥಿರ ಮತ್ತು ಒರಟು ವರ್ತನೆಯಿಂದಾಗಿ ಜನ ವ್ಯಕ್ತಿತ್ವದ ಖಾಯಿಲೆ ಹೊಂದಿರುವವರ ಜೊತೆ ಇರುವುದು ಕಷ್ಟ ಎಂದು ಭಾವಿಸಿದ್ದಾರೆ. ವ್ಯಕ್ತಿಯ ಚಂಚಲವಾದ ಅಥವಾ ಅಸ್ಥಿರ ನಡವಳಿಕೆಯು ಉದ್ಧೇಶಪೂರ್ವಕವಾದುದಲ್ಲ, ಅದು ಕೆಲವು ಮಾನಸಿಕ ಅಸ್ವಸ್ಥತೆಯ ಕಾರಣವಾಗಿ ಉಂಟಾಗಿರುವಂತಹದ್ದು ಎಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ.

ಕಲ್ಪನೆ: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಹೊಂದಿರುವ ವ್ಯಕ್ತಿಗಳು ಹಠಮಾರಿಯಾಗಿರುತ್ತಾರೆ ಮತ್ತು ವರ್ತನೆ ಬದಲಾಯಿಸಿಕೊಳ್ಳಲು ಒಪ್ಪುವುದಿಲ್ಲ. ಆದ್ದರಿಂದ ಅವರು ಗುಣಮುಖರಾಗುವುದಿಲ್ಲ.

ವಾಸ್ತವ: ನಾವೆಲ್ಲರೂ ಕೂಡ ಬದಲಾವಣೆಯನ್ನು ವಿರೋಧಿಸುತ್ತೇವೆ. ನಾವೆಲ್ಲ ಕೆಲ ಆಯ್ಕೆ/ಆದ್ಯತೆಗಳನ್ನು ಹೊಂದಿದ್ದೇವೆ ಮತ್ತು ಬಿಡಲಾಗದ/ಕಳೆದುಕೊಳ್ಳಲು ಇಚ್ಛಿಸದ ಕೆಲಸಗಳನ್ನು ಮಾಡಲು ಕೆಲ ಮಾರ್ಗಗಳನ್ನು ಹೊಂದಿದ್ದೇವೆ. ಸರಿಯಾಗಿ ಹೊಂದಿಕೊಂಡ ವ್ಯಕ್ತಿ ಕೂಡ ಬದಲಾವಣೆಯನ್ನು ವಿರೋಧಿಸುತ್ತಾನೆ. ಅದೇರೀತಿ, ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಇರುವ ವ್ಯಕ್ತಿಗಳಿಗೆ ಅವರ ವರ್ತನೆಯನ್ನು ಬದಲಾಯಿಸಿಕೊಳ್ಳಲು ಕಷ್ಟವಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಗುಣಮುಖನಾಗಲು ಯಾವ ರೀತಿಯಾಗಿ ಔಷಧೋಪಚಾರ ಮತ್ತು ಚಿಕಿತ್ಸೆ ಬೇಕೋ, ಅದೇ ರೀತಿ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಇರುವ ವ್ಯಕ್ತಿಗೆ ಕೂಡ ಚಿಕಿತ್ಸೆ ಅವಶ್ಯಕ.

ಕಲ್ಪನೆ: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಹೊಂದಿರುವ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನವರ ಕುರಿತು ಕಾಳಜಿ ಹೊಂದಿರುವುದಿಲ್ಲ. ಅವರು ಯಾವಾಗಲೂ ತನಗೇನುಬೇಕು ಎಂಬುದರತ್ತ ಮಾತ್ರ ಗಮನಹರಿಸುತ್ತಾರೆ.

ವಾಸ್ತವ: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಇರುವ ವ್ಯಕ್ತಿಗಳು ಅವರ ಕುಟುಂಬ ಹಾಗೂ ಸ್ನೇಹಿತರ ಕುರಿತು ಕಾಳಜಿ ಹೊಂದಿರುತ್ತಾರೆ. ಆದರೆ, ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆಯ ಸಮ್ಯಸ್ಯೆಗಳು(ಮನೋಲಹರಿ ಬದಲಾವಣೆ, ಇತರರನ್ನು ನಿರ್ಲಕ್ಷಿಸುವುದು, ಹಠಾತ್‌ ವರ್ತನೆ ಮತ್ತು ಅಸ್ಥಿರವಾದ ಸ್ವಾಭಿಮಾನ) ತೀವ್ರಸ್ವರೂಪದಲ್ಲಿದ್ದು,  ಕೆಲವು ಸಲ ತಮ್ಮ ವರ್ತನೆ ಪ್ರೀತಿ ಪಾತ್ರರ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಎಂದು ಅರಿತುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರಲ್ಲಿ ಸಹಾನುಭೂತಿ ಮತ್ತು ಪ್ರಿತಿಯ ಭಾವನೆ ಇರಬಹುದು. ತಮ್ಮ ವರ್ತನೆಯಿಂದ ಬೇರೆಯವರಿಗಾದ ನೋವಿನ ಕುರಿತು ತಪ್ಪಿತಸ್ಥ ಭಾವ ಹೊಂದಬಹುದು, ಬೇಸರಗೊಳ್ಳಬಹುದು. ಆದಾಗ್ಯೂ ಅವರೊಳಗೆ ಅವರು ಎದುರಿಸುತ್ತಿರುವ ಸಂಕಟ ಅಗಾಧವಾಗಿರುತ್ತದೆ ಮತ್ತು ಬೇರೆಯವರಿಗೆ ಸಹಾಯ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ ಅಥವಾ ಇತರರ ಜೊತೆ ಎಲ್ಲ ಸಮಯದಲ್ಲಿ ಒಳ್ಳೆಯ ರೀತಿಯಲ್ಲಿರಲು ಸಾಧ್ಯವಾಗುವುದಿಲ್ಲ.

ಕಲ್ಪನೆ: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಇರುವ ವ್ಯಕ್ತಿಗಳು ಬೇರೆಯವರ ಗಮನ ಸೆಳೆಯುವುದಕ್ಕಾಗಿ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ ಹೊರತು, ನಿಜವಾಗಿಯೂ ಸಾಯಲು ಇಚ್ಛಿಸಿರುವುದಿಲ್ಲ.

ವಾಸ್ತವ: ಆತ್ಮಹತ್ಯೆಗೆ ಒಳಗಾಗುವ ಅನೇಕ ಜನರಂತೆ, ವ್ಯಕ್ತಿತ್ವಕ್ಕೆ ಸಂಬಂಧಿಸಿದ ಖಾಯಿಲೆ ಇರುವ ಜನರು ಕೂಡ ತಮ್ಮನ್ನು ತಾವೇ ಸಾಯಿಸಿಕೊಳ್ಳಲು ಇಚ್ಛಿಸುತ್ತಾರೆ. ಆ ಸಮಯದಲ್ಲಿ ಅವರ ಸಾಯುವ ಇಚ್ಛೆ ಎಷ್ಟು ಪ್ರಬಲವಾಗಿರುತ್ತದೆ ಎಂದರೆ, ಈ ಜೀವನ ಬದುಕಲು ಯೋಗ್ಯವಾಗಿದ್ದು ಎಂದು ಅವರು ಆಲೋಚಿಸುವುದೇ ಇಲ್ಲ. ತೀವ್ರವಾದ ನೋವಿನ ಭಾವನೆಯನ್ನು ಅವರು ಅನುಭವಿಸುತ್ತಿರುತ್ತಾರೆ. ಅದರಿಂದ ಹೊರಬರಲು ಆತ್ಮಹತ್ಯೆಯೊಂದೇ ಮಾರ್ಗ ಎಂದು ಯೋಚಿಸತೊಡಗುತ್ತಾರೆ. ತಮ್ಮೊಳಗಿನ ಹತಾಶ ಭಾವನೆಯಿಂದಾಗಿ ಅವರು ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org