ಆತ್ಮಹತ್ಯೆಯ ಅಪಾಯದಿಂದ ಹೊರಬಂದವರಿಗೆ ಯಾವ ರೀತಿ ಸಹಾಯ ಮಾಡಬಹುದು

ಆತ್ಮಹತ್ಯೆಯ ಅಪಾಯದಿಂದ ಹೊರಬಂದವರಿಗೆ ನೀವು ಯಾವ ರೀತಿ ಸಹಾಯ ಮಾಡಬಹುದು

​ನಿಮ್ಮ ಆತ್ಮೀಯರೊಬ್ಬರು  ಆತ್ಮಹತ್ಯೆಗೆ ಪ್ರಯತ್ನಿಸಿ, ಬದುಕನ್ನು ಕೊನೆಗಾಣಿಸಲು ಪ್ರಯತ್ನಿಸಿದ ವಿಷಯ ತಿಳಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಮತ್ತು ಗೊಂದಲದಲ್ಲಿ ಸಿಲುಕುತ್ತೀರಿ. ಅಂತಹ ವ್ಯಕ್ತಿ ಚೇತರಿಸಿಕೊಳ್ಳಲು ನೀವು  ಯಾವ ರೀತಿ ಸಹಾಯ ಮಾಡಬಹುದು?

ತಕ್ಷಣ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿ

ನಿಮ್ಮ ಪರಿಚಯದವರೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿ, ತಮ್ಮ ಬದುಕನ್ನು ಕೊನೆಯಾಗಿಸಲು ಪ್ರಯತ್ನಿಸಿದ್ದರೆ  ತಕ್ಷಣ ಆಂಬುಲೆನ್ಸ್ ಗೆ ಕರೆಮಾಡಿ ಅಥವಾ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ನಿಮ್ಮ ಪ್ರಾಥಮಿಕ ಆದ್ಯತೆಯಾಗಲಿ.

ತೀರ್ಮಾನಕರ ಹೇಳಿಕೆಗಳನ್ನು ನೀಡದಿರಿ, ಕೋಪ ತೋರಿಸಿಕೊಳ್ಳಬೇಡಿ ಅಥವಾ ನೆಡೆದ ಘಟನೆಯ ಬಗ್ಗೆ ಅತಿಯಾಗಿ ಪ್ರಶ್ನಿಸಬೇಡಿ.  

ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯು ಈಗಾಗಲೇ ಸಾಕಷ್ಟು ನೊಂದಿರುತ್ತಾರೆ, ಮತ್ತು ಗೊಂದಲದ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ತಮ್ಮ ಪರಿಸ್ಥಿತಿಯ ಬಗ್ಗೆ ಮಾತನಾಡುವ ಮನಸ್ಸಿರುವುದಿಲ್ಲ. ಅವರ ಬಗ್ಗೆ ಯಾವುದೇ  ತೀರ್ಮಾನಕ್ಕೆ ಬರಬೇಡಿ.  ಕೋಪ ಮಾಡಿಕೊಳ್ಳಬೇಡಿ. ಅವರಿಗೆ ನಿಮ್ಮ ಸಹಾಯದ ಅವಶ್ಯಕತೆಯಿರುತ್ತದೆ.

ಅವರಿಗೆ ನಿಮ್ಮ ಸಂಪೂರ್ಣ ಬೆಂಬಲವಿದೆ ಎಂಬ ಭರವಸೆಯನ್ನು ನೀಡಿ.

 ಅವರಿಗೆ ನಿಮ್ಮ ಸಂಪೂರ್ಣ ಬೆಂಬಲವಿದೆ ಎಂಬ ವಿಶ್ವಾಸ ನೀಡಿ. ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ದರಿದ್ದೀರಿ ಮತ್ತು ಅವರು ಅಪಾಯದಿಂದ ಪಾರಾಗಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಡಿ.  

ಅವರು  ಆತ್ಮಹತ್ಯೆಗೆ ಪುನಃ ಪ್ರಯತ್ನಿಸಬಹುದು ಎಂಬ ಅನುಮಾನವಿದ್ದರೆ ,ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ.ಅವರಿಗೆ ಯಾವುದೇ ಕಿರಿಕಿರಿಯಾಗದಂತೆ ನೋಡಿಕೊಳ್ಳಿ. ಆದಷ್ಟು ಒಂಟಿಯಾಗಿರಲು ಬಿಡಬೇಡಿ ಮತ್ತು ಅವರ  ಸ್ವತಂತ್ರಕ್ಕೆ ಅಡ್ಡಿಯಾಗದಂತೆ  ಆರೈಕೆ ಮಾಡಿ.

ವೈದ್ಯಕೀಯ ಚಿಕಿತ್ಸೆ ಮೂಲಕ ಅಪಾಯದಿಂದ ಪಾರಾದ ನಂತರ, ಕ್ರಮೇಣವಾಗಿ, ಸೂಕ್ತ ಮಾನಸಿಕ ಆರೋಗ್ಯ ತಜ್ಞರು ಅಥವಾ ಆಪ್ತ ಸಮಾಲೋಚಕರೊಂದಿಗೆ ಮಾತನಾಡಲು ಪ್ರೋತ್ಸಾಹಿಸಿ.  

ತಮ್ಮ ಕಷ್ಟದ ಸಮಯದಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು  ಆಪ್ತಸ್ನೇಹಿತರ ಪಟ್ಟಿ ಮಾಡಲು ಸಹಾಯ ಮಾಡಿ.

ಅದು ಸ್ನೇಹಿತರಾಗಲಿ ,ಕುಟುಂಬದವರಾಗಲಿ ಅಥವಾ ಆಪ್ತ ಸಮಾಲೋಚಕರಾಗಲಿ, ನಂಬಿಕೆಗೆ ಅರ್ಹ ವ್ಯಕ್ತಿಯಾಗಿರಬೇಕು ಮತ್ತು ಕಷ್ಟದ ಸಂದರ್ಭದಲ್ಲಿ ಟೆಲಿಫೋನ್ ಕರೆಗೆ ಉತ್ತರಿಸಲು ಸಿದ್ಧರಿರಬೇಕು. ಮಾನಸಿಕ ಆರೋಗ್ಯ/ ಆತ್ಮಹತ್ಯಾ ಸಹಾಯವಾಣಿಗೆ ಕರೆ ಮಾಡಲು ಸಲಹೆ ನೀಡಿ. 

ದಿನನಿತ್ಯದ ಚಟುವಟಿಕೆಗಳ ಕಡೆ ಗಮನ ನೀಡಲು ಬೆಂಬಲಿಸಿ . ಈ ಮೂಲಕ ಕಹಿ ಘಟನೆಯಿಂದ ಅವರು ಹೊರಬರಲು ಸಾಧ್ಯ.

ವ್ಯಕ್ತಿಯು ಆತ್ಮಹತ್ಯೆಗೆ ಪ್ರಯತ್ನಿಸಿದ ಮಾತ್ರಕ್ಕೆ ಆತನ  ಜೀವನದ ಬಗ್ಗೆಯಾವುದೇ ನಿರ್ಧಿಷ್ಟ ತೀರ್ಮಾನಕ್ಕೆ ಬಾರದಿರಿ. ನಡೆದ ಘಟನೆಯನ್ನು ಮರೆತು ಎಂದಿನಂತೆ ತನ್ನ ಕುಟುಂಬ, ಕೆಲಸ , ಸ್ನೇಹಿತರು ಮತ್ತು ಯೋಗಾಭ್ಯಾಸದಂತಹ ಆರೋಗ್ಯಕರ ಹವ್ಯಾಸದ ಕಡೆ ಗಮನ ಹರಿಸಲು ಉತ್ತೇಜನ ನೀಡಿ.

ನಿಮ್ಮ ಆತ್ಮಸ್ಥೈರ್ಯ ಕುಸಿದಂತೆ ಅನ್ನಿಸಿದರೆ,  ತಕ್ಷಣ ನುರಿತ ತಜ್ಞರ ಅಥವಾ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.

ಭಾವನಾತ್ಮಕವಾಗಿ ಅಥವಾ ಮಾನಸಿಕವಾಗಿ  ಪ್ರಕ್ಷುಬ್ಧತೆಯಲ್ಲಿರುವ ವ್ಯಕ್ತಿಯ  ಅವಶ್ಯಕತೆಗೆ ಸ್ಪಂದಿಸುವಾಗ  ನಮಗೆ ಮಾನಸಿಕವಾಗಿ ದಣಿವಾಗಬಹುದು ಅಥವ ಕಿರಿಕಿರಿಯೆನ್ನಿಸ ಬಹುದು. ಇಂತಹ ಸ್ಥಿತಿಯಲ್ಲಿ ಸೂಕ್ತ ತಜ್ಞರನ್ನು ಭೇಟಿಯಾಗಿ ಅಥವ ನಿಮ್ಮ ಆಪ್ತರ ಜೊತೆ ಮಾತನಾಡುವ ಮೂಲಕ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಿ.

ಈ ಅಪಾಯವನ್ನು ಹೇಗೆ ತಪ್ಪಿಸಬಹುದಾಗಿತ್ತು ಎಂದು ಘಟನೆಯನ್ನು ವಿಶ್ಲೇಷಿಸದಿರಿ.

ನಿಮ್ಮ ಸ್ನೇಹಿತ/ ಸಂಬಂಧಿಕರ ಆತ್ಮಹತ್ಯೆಯ ಪ್ರಯತ್ನವನ್ನು ನೀವು ತಪ್ಪಿಸಬಹುದಾಗಿತ್ತು ಎಂದು ಯೋಚಿಸಿ ಅಪರಾಧ ಪ್ರಜ್ಞೆ ಹೊಂದಬೇಡಿ. ಕೋಪ, ಹತಾಶೆ ಮತ್ತು ದುಃಖವನ್ನು ಸಹಜವಾಗಿ ಹೊರ ಹಾಕಿ.  ನಂಬಿಕೆಗೆ ಅರ್ಹರಾದ ಸ್ನೇಹಿತರ ಜೊತೆ ಮಾತನಾಡಿ ಮತ್ತು ನಿಮ್ಮ ಮನಸ್ಸಿನ ಭಾರವನ್ನು ಕಡಿಮೆಗೊಳಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org