ಬ್ಲಾಗಿಂಗ್ ನಿಮ್ಮ ಚೇತರಿಕೆಗೆ ಸಹಾಯ ಮಾಡಬಲ್ಲುದೇ?

ಬ್ಲಾಗಿಂಗ್ ಮಾಡುವ ಹವ್ಯಾಸ ಚೇತರಿಕೆಯ ಒಂದು ಸಾಧನ

ಮಧ್ಯ ಅಮೇರಿಕಾದ ಗ್ವಾಟೆಮಾಲಾ ಗ್ರಾಮೀಣ ಪ್ರದೇಶಗಳಲ್ಲಿ ನಿದ್ರೆಯ ಸಮಸ್ಯೆಯಿರುವ ಮಕ್ಕಳು ಮತ್ತು ಗಂಭೀರ ಚಿಂತೆಯಿರುವವರಿಗೆ 'ವರಿ ಡಾಲ್ಸ್' (ಚಿಂತೆಯ ಗೊಂಬೆಗಳು) ಗಳನ್ನು ನೀಡುತ್ತಾರೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಗೊಂಬೆಯ ಕಿವಿಯಲ್ಲಿ ತಮ್ಮ ಚಿಂತೆಗಳನ್ನು ಹೇಳಿಕೊಳ್ಳುವುದರಿಂದ ಗೊಂಬೆಯು ಅವರ ಎಲ್ಲಾ ಸಮಸ್ಯೆಗಳನ್ನು ಹೀರಿಕೊಳ್ಳುತ್ತದೆ ಮತ್ತು ಇದರಿಂದ ಅವರು ನಿಶ್ಚಿಂತೆಯಿಂದ ನಿದ್ರಿಸಬಹುದು ಎಂಬ ನಂಬಿಕೆ ಇದೆ.

ಇಂದಿನ ಡಿಜಿಟಲ್ ಯುಗದಲ್ಲಿ ಚಿಂತೆ ಗೊಂಬೆಗಳ ಜಾಗವನ್ನು ಇಂಟರ್ನೆಟ್ ಹೊಂದಿದ ಕಂಪ್ಯೂಟರುಗಳು ಆಕ್ರಮಿಸಿಕೊಂಡಿವೆ. ತಮ್ಮ ವೈಯಕ್ತಿಕ ಅನುಭವಗಳನ್ನು ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಿರುವ ಹೆಚ್ಚಿನ ಜನರು ತಮ್ಮ ಸಮಸ್ಯೆಗಳಿಗೆ ಬ್ಲಾಗಿಂಗ್ ಸ್ವ ಚಿಕಿತ್ಸೆಯಾಗಿ ಪರಿಣಮಿಸಿದೆ ಎಂದು ಹೇಳುತ್ತಾರೆ.

ಎಲ್ಲಾ ಸಂಸ್ಕೃತಿಗಳಲ್ಲಿಯೂ, ಚಿಕಿತ್ಸಕರ ಜೊತೆ ಮಾತನಾಡುವುದು, ಸ್ನೇಹಿತರ ಬಳಿ ಹಂಚಿಕೊಳ್ಳುವುದು, ಖಾಸಗಿ ಪುಸ್ತಕದಲ್ಲಿ ಬರೆಯುವುದು ಅಥವಾ ಬ್ಲಾಗಿಂಗ್ ಮೂಲಕ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ ಎಂದು ಭಾವಿಸಲಾಗುತ್ತದೆ. ನಾವು ನಮ್ಮ ಸಮಸ್ಯೆಗಳನ್ನು ಶಬ್ದಗಳ ಮೂಲಕ ವ್ಯಕ್ತಪಡಿಸಿದಾಗ ಮೆದುಳಿನ ತಾರ್ಕಿಕ ಮತ್ತು ಸಮಸ್ಯೆ ನಿರ್ವಹಣೆ ಭಾಗವಾದ – ಪ್ರಿ ಫ್ರಂಟಲ್ ಕ್ವಾರ್ಟೆಕ್ಸ್ ನಲ್ಲಿ ಹೆಚ್ಚಿನ ಚಟುವಟಿಕೆಯುಂಟಾಗಿ ಭಾವನೆಗಳನ್ನು ನಿರ್ವಹಿಸುವ ಭಾಗವಾದ ಅಮೈಗ್ಡಾಲಾವು ಶಾಂತಗೊಳ್ಳುತ್ತದೆ. ಇದರಿಂದ ನಾವು ಭಾವನೆಗಳ ಪ್ರಚೋದನೆಯಿಂದ ಹೊರಬಂದು ನಮ್ಮ ಸಮಸ್ಯೆಯನ್ನು ವೈಚಾರಿಕವಾಗಿ ವಿಶ್ಲೇಷಿಸಲು ಸಾಧ್ಯವಾಗುತ್ತದೆ.

ಒಂದು ಚಿಕಿತ್ಸೆಯಾಗಿ ಅಭಿವ್ಯಕ್ತಿ ಬರವಣಿಗೆಯ ಪಾತ್ರದ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಅಧ್ಯಯನಗಳ ಪ್ರಕಾರ ನಾವು ನಮ್ಮ ವಿಚಾರಗಳು ಮತ್ತು ಭಾವನೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದರಿಂದ (ಅಭಿವ್ಯಕ್ತಿ ಬರವಣಿಗೆ) ನಮ್ಮ ಒತ್ತಡವನ್ನು ನಿರ್ವಹಿಸಲು ಸ್ಮರಣಶಕ್ತಿಯನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ವೈದ್ಯರ ಭೇಟಿಯ ಅವಶ್ಯಕತೆಯೂ ಕಡಿಮೆಯಾಗುತ್ತದೆ. ಇದನ್ನು ಅಮೇರಿಕನ್ ಸೋಷಿಯಲ್ ಸೈಕಾಲಜಿಸ್ಟ್ ಡಾ. ಜೇಮ್ಸ್ ಪೆನೆಬೇಕರ್ ಅವರು ಒಪ್ಪುತ್ತಾರೆ.

ಸುಮಾರು 2 ದಶಕಗಳಿಗೂ ಹಿಂದೆಯೇ ಡಾ. ಪೆನೆಬೇಕರ್ ರವರು ಜನರಿಗೆ 3-4 ದಿನಗಳ ಕಾಲ ಯಾವುದೇ ಅಡಚಣೆಯಿಲ್ಲದೇ 20 ನಿಮಿಷಗಳ ಕಾಲ ಬರೆಯುವ ಸರಳ ಕಾರ್ಯವನ್ನು ನೀಡಿದ್ದರು. ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದವರಲ್ಲಿ ಹಲವಾರು ಧನಾತ್ಮಕ ಪರಿಣಾಮಗಳು ಕಂಡುಬಂದವು. ಅವರ ಇಮ್ಯೂನ್ ಸಿಸ್ಟಮ್ ಸಶಕ್ತವಾಯಿತು ಮತ್ತು ಒಳ್ಳೆಯ ಅಂಕ ಗಳಿಸಿದರು.

ಭಾರತದಲ್ಲಿಯೂ ಚೆನ್ನೈನ ಈಸ್ಟ್ ವೆಸ್ಟ್ ಸೆಂಟರ್ ಫಾರ್ ಕೌನ್ಸೆಲಿಂಗ್ ನ ನಿರ್ದೇಶಕರು ಮತ್ತು ಅಭಿವ್ಯಕ್ತಿ ಕಲೆ ಚಿಕಿತ್ಸಕರು ಆಗಿರುವ ಮ್ಯಾಗ್ದಲಿನ್ ಜಯರತ್ನಂ ರವರು ತಮ್ಮ ಎಲ್ಲಾ ಪೇಷಂಟ್ಗಳಿಗೂ ಪ್ರತಿದಿನವು ಜರ್ನಲ್ ಬರೆಯಲು ಪ್ರೋತ್ಸಾಹಿಸುತ್ತಾರೆ. ಅವರ ಪೇಷಂಟ್ ಒಬ್ಬರು ಹಂಚಿಕೊಂಡ ಕತೆಯ ಬಗ್ಗೆ ಹೇಳುತ್ತಾರೆ. “ಕತೆಯಲ್ಲಿ ಬುಡಕಟ್ಟು ಜನರು ನಗರಕ್ಕೆ ವಲಸೆ ಬಂದು ಮನೆಗೆಲಸ ಹಾಗೂ ಇತರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸ್ಥಳೀಯ ರಾಜಕಾರಣಿಯೊಬ್ಬ ಬುಡಕಟ್ಟು ಜನರನ್ನು ಶೋಷಿಸುತ್ತಾನೆ. ಕತೆಯ ಕೊನೆಯಲ್ಲಿ ಅನಿರೀಕ್ಷಿತ ತಿರುವು ಇದ್ದು ಆ ರಾಜಕಾರಣಿಯ ಮಗನೇ ಬುಡಕಟ್ಟು ಜನರಿಗೆ ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ನೆರವಾಗುತ್ತಾನೆ. ಈ ಕತೆಯಿಂದ ನನಗೆ ನನ್ನ ಪೇಷಂಟ್ ಬಗ್ಗೆಯೂ ಬಹಳ ಮಾಹಿತಿ ಸಿಕ್ಕಿತು. ಆತ ಕೂಡ ಒಂದು ಸಣ್ಣ ನಗರದಿಂದ ಇತ್ತೀಚೆಗಷ್ಟೇ ಚೆನ್ನೈಗೆ ವಲಸೆ ಬಂದಿದ್ದ,” ಎಂದು ಜಯರತ್ನಂ ನೆನಪಿಸಿಕೊಳ್ಳುತ್ತಾರೆ. ಬರವಣಿಗೆಯಲ್ಲಿ ವ್ಯಕ್ತವಾದ ಶಬ್ದಗಳಿಗೆ ಚಿಕಿತ್ಸಕ ಗುಣಗಳು ಇರುತ್ತವೆ.

ತಂತ್ರಜ್ಞಾನದ ಈ ಯುಗದಲ್ಲಿ ಬರವಣಿಗೆಯು ಇಂದಿಗೂ ಸ್ವ ಅಭಿವ್ಯಕ್ತಿಯ ಜನಪ್ರಿಯ ಮಾಧ್ಯಮವಾಗಿದ್ದರೂ ಸಹ ಜನರು ಕೈಬರಹದ ಬದಲು ಬ್ಲಾಗಿಂಗ್ ನಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಖಾಸಗಿ ಪುಸ್ತಕಗಳಲ್ಲಿ ಬರೆಯುವುದು ಮತ್ತು ಬ್ಲಾಗಿಂಗ್ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ನಮ್ಮ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಹೆಚ್ಚಿನ ಸಾಧ್ಯತೆಯನ್ನು ಹೊಂದಿದೆ.

ಬ್ಲಾಗಿಂಗ್ ವಿನಿಮಯಾತ್ಮಕ ಸಂವಹನ ಮಾಧ್ಯಮವಾಗಿರುವ ಕಾರಣದಿಂದ ನಮಗೆ ಓದುಗರು ಕೂಡ ದೊರೆಯುತ್ತಾರೆ. ಇದೊಂದು ಆಧುನಿಕ ಸಂವಹ ಚಿಕಿತ್ಸೆ ಎಂದು ಪರಿಗಣಿಸಬಹುದು. ಒಂದೇ ವ್ಯತ್ಯಾಸವೇನೆಂದರೆ ಇಲ್ಲಿ ನಮ್ಮ ಸಂವಹನವನ್ನು ಚಿಕಿತ್ಸಕರು ಮೇಲ್ವಿಚಾರಿಸುಸುವುದಿಲ್ಲ. ನಾವು ಬ್ಲಾಗ್ ಮಾಡಿದಾಗ ನಮ್ಮ ಮಾನವ ಸಂವಹನದ ಬಯಕೆಯು ತೃಪ್ತಿಯಾಗುತ್ತದೆ. ನಾವು ನಮ್ಮನ್ನು ಜಡ್ಜ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಪ್ರತಿಕ್ರಿಯೆಗಳು ಬರುತ್ತವೆ, ಪ್ರತಿಕ್ರಿಯೆಗಳಿಗೆ ಸ್ಪಂದಿಸಬೇಕಾಗುತ್ತದೆ ಎಂಬ ಭಯವಿಲ್ಲದೇ ನಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು ಮತ್ತು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿರುವ ಜನರ ಸ್ವ-ಅನುಭವಗಳನ್ನು ಕೂಡ ತಿಳಿದುಕೊಳ್ಳಬಹುದು.

ಬ್ಲಾಗಿಂಗ್ ಮೂಲಕ ನಾವು ಎಂದಿಗೂ ಭೇಟಿ ಮಾಡದೇ ಇರುವ ವ್ಯಕ್ತಿಗಳ ಜೊತೆ ಸಂಪರ್ಕಿಸಬಹುದು. ಮತ್ತು ಇಂಟರ್ನೆಟ್ ಸ್ನೇಹಿತರು ಎಂದಿಗೂ ನೈಜ ಸ್ನೇಹಿತರಾಗಲಾರರು ಎಂಬ ಭಾವನೆಯನ್ನು ಅಳಿಸಿ ಹಾಕುತ್ತದೆ.

purisubzi.in, ನಲ್ಲಿ ಬರೆಯುವ ಬ್ಲಾಗರ್ ಭರತ್ ಅವರ ಪ್ರಕಾರ, “ನಿಜವಾದ ಸ್ನೇಹ ಬೆಳೆಯಲು ಸ್ನೇಹಿತರು ಸನಿಹದಲ್ಲೇ ಇರಬೇಕು ಎಂಬುದು ಜನರ ತಪ್ಪು ಕಲ್ಪನೆಯಾಗಿದೆ. ನನ್ನ ಇತ್ತೀಚಿನ ಬಹಳ ಒಳ್ಳೆಯ ಸ್ನೇಹಿತರು ನನಗೆ ಇಂಟರ್ನೆಟ್ ನಲ್ಲಿ ದೊರಕಿದವರೇ ಆಗಿದ್ದಾರೆ. ಸಮಾನ ಆಸಕ್ತಿ ಮತ್ತು ಭಾವನಗಳ ಆಧಾರದ ಮೇಲೆ ಸ್ನೇಹವು ಬೆಳೆದಿದ್ದರೆ ಸ್ನೇಹಿತ ಎಲ್ಲಿ ವಾಸವಾಗಿದ್ದಾನೆ ಎಂಬುದು ಮುಖ್ಯವಾಗುವುದಿಲ್ಲ.”

ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಯಲ್ಲಿ ಪ್ರತ್ಯೇಕತೆಯ ಭಯವು ಸಾಮಾನ್ಯ. ಹಾಗಾಗಿ ಅವರಿಗೆ ಬ್ಲಾಗಿಂಗ್ ಬಹಳ ಸಹಾಯ ಮಾಡಬಲ್ಲದು. ಇದನ್ನು ಬೆಂಬಲಿಸಲು ಸೂಕ್ತವಾದ ವೈಜ್ಞಾನಿಕ ಸಾಕ್ಷಿ ಇಲ್ಲದಿದ್ದರೂ ಸಹ 2012ರಲ್ಲಿ ಇಸ್ರೇಲಿ ಸಂಶೋಧಕರು ಒಂದು ಹಂತದ, ಸಾಮಾಜಿಕ ಆತಂಕ ಅಥವಾ ಹತಾಶೆಯ ಭಾವನೆ ಹೊಂದಿದ್ದ 161 ಯುವಜನರ ಮೇಲೆ ನಡೆಸಿದ ಸಂಶೋಧನೆಯನ್ನು ಇಲ್ಲಿ ಉಲ್ಲೇಖಿಸಬಹುದು.

ಅವರನ್ನು 6 ಗುಂಪುಗಳಲ್ಲಿ ವಿಭಾಗಿಸಲಾಯಿತು. ಮೊದಲ 4 ಗುಂಪುಗಳಿಗೆ ಬ್ಲಾಗಿಂಗ್ ಮಾಡಲು ತಿಳಿಸಿದರು. ಉಳಿದ 2 ಗುಂಪುಗಳು ಖಾಸಗಿ ಪುಸ್ತಕಗಳಲ್ಲಿ ಬರೆದರು ಅಥವಾ ಏನನ್ನೂ ಮಾಡಲಿಲ್ಲ. 10 ವಾರಗಳ ನಂತರ ಬ್ಲಾಗಿಂಗ್ ನಲ್ಲಿ ತೊಡಗಿದ ಯುವಕರಲ್ಲಿ ಖಾಸಗಿ ಪುಸ್ತಕದಲ್ಲಿ ಬರೆದ ಅಥವಾ ಏನನ್ನೂ ಮಾಡದ ಯುವಕರಿಗೆ ಹೋಲಿಸಿದಾಗ ಆತ್ಮಗೌರವವು ಸುಧಾರಣೆಯಾಗಿರುವುದು ಕಂಡುಬಂತು. ತಮ್ಮ ಅನುಭವಗಳನ್ನು ಬ್ಲಾಗ್ ಮೂಲಕ ಹಂಚಿಕೊಂಡಾಗ ಸಮಸ್ಯೆಯನ್ನು ಅನುಭವಿಸುತ್ತಿರುವ ಅಥವಾ ಅಂತವರಿಗೆ ಆರೈಕೆದಾರರಾಗಿರುವವರಿಗೆ ಇಂಟರ್ನೆಟ್ ಸಮೂಹದಿಂದ ಬೆಂಬಲ ದೊರಕುವುದಲ್ಲದೇ ಅವರು ಅಂತಹುದೇ ಸಮಸ್ಯೆ ಹೊಂದಿರುವವರಿಗೆ ಸ್ಫೂರ್ತಿಯಾಗುತ್ತಾರೆ.

2012ರಲ್ಲಿ ತನ್ನ ಬೈಪೊಲಾರ್ ಡಿಸಾರ್ಡರ್ ಬಗ್ಗೆ ಬ್ಲಾಗಿಂಗ್ ಶುರುಮಾಡಿದ ಪರ್ಸನಲ್ ಬ್ರಾಂಡಿಂಗ್ ಕೋಚ್ ಮತ್ತು ಬ್ಲಾಗರ್ ವಿಜಯ್ ನಲ್ಲವಲ್ಲ ಅವರಿಗೂ ಇಂತಹುದೇ ಅನುಭವವಾಯಿತು. ಅವರ ಬರಹವು ಕಮೆಂಟು ಮತ್ತು ಸಲಹೆಗಳಿಂದ ತುಂಬಿಹೋಯಿತು. “ಅಲ್ಲಿ ಬೈಪೊಲಾರ್ ಡಿಸಾರ್ಡರಿನಿಂದ ಬಳಲುತ್ತಿರುವ ವ್ಯಕ್ತಿ ನಾನೊಬ್ಬನೇ ಆಗಿರಲಿಲ್ಲ. ನನ್ನ ಬರವಣಿಗೆಯಿಂದ ನನ್ನ ಹತ್ತಿರದ ಸ್ನೇಹಿತರು, ಸಂಬಂಧಿಗಳು ಕೂಡ ಕೆಲವು ನಿರ್ದಿಷ್ಟ ಕೇಸುಗಳ ಬಗ್ಗೆ ತಿಳಿಸಿದರು. ಅವುಗಳಲ್ಲಿ ಒಂದು ಅಂಶ ಸಾಮಾನ್ಯವಾಗಿತ್ತು. ಅವರಲ್ಲಿ ಯಾರೂ ಸ್ಥಿರವಾದ ಮನಸ್ಥಿತಿಯಲ್ಲಿ ಇರಲಿಲ್ಲ. ಹೆಚ್ಚಿನವರು ತಜ್ಞರ ಸಹಾಯವನ್ನು ಪಡೆಯಲು ನಿರಾಕರಿಸಿದ್ದರು ಅಥವಾ ಮಧ್ಯದಲ್ಲೇ ನಿಲ್ಲಿಸಿ ಬಿಟ್ಟಿದ್ದರು,” ಎಂದು ವಿಜಯ್ ವಿವರಿಸುತ್ತಾರೆ. ಈ ಅನುಭವವು ವಿಜಯ್ ರವರು ಭಾರತದ ಮೊದಲ ಬೈಪೊಲಾರ್ಡಿಸಾರ್ಡರ್ ಮತ್ತು ಖಿನ್ನತೆಗೆ ಸಂಬಂಧಿಸಿದ ಆನ್ ಲೈನ್ ಕಮ್ಯುನಿಟಿ  http://www.bipolarindia.com  ಅನ್ನು ಸ್ಥಾಪಿಸಲು ಪ್ರೇರಣೆಯಾಯಿತು.

ಬ್ಲಾಗಿಂಗ್ ಸ್ವ-ಅಭಿವ್ಯಕ್ತಿಯ ಅತ್ಯುತ್ತಮ ಮಾಧ್ಯಮವಾಗಿದ್ದು ಅರ್ಥಪೂರ್ಣ ಸಂಪರ್ಕವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಉಳಿದ ಎಲ್ಲಾ ಸಾಮಾಜಿಕ ಮಾಧ್ಯಮದಂತೆಯೇ ಇದನ್ನು ಕೂಡ ಎಚ್ಚರಿಕೆಯಿಂದ ಬಳಸಬೇಕು.

ನೀವು ಬ್ಲಾಗಿಂಗ್ ಗೆ ಹೊಸಬರಾಗಿದ್ದಲ್ಲಿ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ:

  • ಇಂಟರ್ನೆಟ್ ಎಲ್ಲವನ್ನೂ ಸಂಗ್ರಹಿಸುತ್ತದೆ ಎಂದು ನೆನಪಿರಲಿ. ಏನನ್ನಾದರೂ ಪೋಸ್ಟ್ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ನೀವು ಆಮೇಲೆ ಅದನ್ನು ಡಿಲೀಟ್ ಮಾಡಬಹುದಾದರೂ ಇಂಟರ್ನೆಟ್ ಕೆಲವು ಅಂಶಗಳನ್ನು ಬಹಳ ಕಾಲದವರೆಗೆ ಸಂಗ್ರಹಿಸಿಡುತ್ತದೆ.

  • ನೀವು ಅತ್ಯಂತ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಬಯಸಿದರೆ ಯಾವುದಾದರೂ ಬೇರೆ ಹೆಸರಿನಲ್ಲಿ ಬರೆಯಿರಿ. ಅಥವಾ ನಿಮ್ಮ ವಿಚಾರಗಳನ್ನು ಖಾಸಗಿ ಪುಸ್ತಕದಲ್ಲಿ ಬರೆಯಿರಿ. “ನಾನು ವೈಯಕ್ತಿಕ ವಿಷಯಗಳನ್ನು ಬ್ಲಾಗಿನಲ್ಲಿ ಬರೆಯುತ್ತೇನಾದರೂ ಅತ್ಯಂತ ಆಳದ ವೈಯಕ್ತಿಕ ಯೋಚನೆಗಳನ್ನು ಜರ್ನಲ್ ನಲ್ಲಿಯೇ ಬರೆಯುತ್ತೇನೆ. ನನ್ನ ದೌರ್ಬಲ್ಯವನ್ನು ಅಭಿವ್ಯಕ್ತಿಗೊಳಿಸಲು ಬರವಣಿಗೆಯು ಒಂದು ಮಾಧ್ಯಮ, ಆದ್ದರಿಂದ ನಾನು ಯಾರಿಗೆ ಎಷ್ಟನ್ನು ಹೇಳಬೇಕು ಎಂಬುದರ ಬಗ್ಗೆ ಯಾವಾಗಲೂ ನಿಯಂತ್ರಣದಲ್ಲಿರಿಸುತ್ತೇನೆ,” ಎನ್ನುತ್ತಾರೆ ಭರತ್.

ನೆನಪಿಡಿ: ಮುಖ್ಯವಾಗಿ, ನೀವು ಮಾನಸಿಕ ಸಮಸ್ಯೆಯನ್ನು ಹೊಂದಿದ್ದರೆ ಬ್ಲಾಗಿಂಗ್ ನಿಮ್ಮ ವಿಚಾರಗಳನ್ನು ಸ್ಪಷ್ಟಗೊಳಿಸಿಕೊಳ್ಳಲು ಮತ್ತು ಸಪೋರ್ಟ್ ನೆಟ್ವರ್ಕ್ ಗಳಿಸಲು ಸಹಾಯ ಮಾಡುತ್ತದೆ. ಆದರೆ ಇದು ತಜ್ಞರ ಚಿಕಿತ್ಸೆಗೆ ಪರ್ಯಾಯವಲ್ಲ. ಇದು ತಜ್ಞರ ಚಿಕಿತ್ಸೆಗೆ ಪೂರಕವಾಗಿ ಮಾತ್ರ ಕೆಲಸ ಮಾಡುತ್ತದೆ.

ಬ್ಲಾಗಿಂಗ್ ಪ್ಲಾಟ್ಫಾರ್ಮ್ :

ಮಾನಸಿಕ ಆರೋಗ್ಯದ ಕುರಿತ ಬ್ಲಾಗ್ ಗಳು:

ನೀವು ಕೆಲವು ಮಾದರಿಗಳನ್ನು ನೋಡಲು ಅಥವಾ ಸ್ಫೂರ್ತಿಪಡೆಯಲು ಬಯಸಿದರೆ ಇಲ್ಲಿ ಕೆಲವು ಭಾರತೀಯ ಬ್ಲಾಗ್ ಗಳಿವೆ.

  1. https://autismindianblog.blogspot.com:ಇಲ್ಲಿ ಒಬ್ಬ ತಂದೆಯು ತನ್ನ ಮಗನನ್ನು ಬೆಳೆಸುವ ಸವಾಲು ಹಾಗೂ ಸುಂದರವಾದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಅವರ ಸಂದೇಶವು ಸ್ಪಷ್ಟವಾಗಿದೆ, “ಆಟಿಸಂನ ಕಲಿಕೆಯ ತಂತ್ರಗಳು ಉಳಿದ ಎಲ್ಲಾ ಕೆಲಸಗಳಂತೆಯೆ ಅತ್ಯಂತ ಪ್ರಯೋಗಾತ್ಮಕವಾಗಿದೆ. ನಾನು ಇವುಗಳನ್ನು ಹಂಚಿಕೊಂಡರೆ ಇತರರು ಹಾಗೂ ನಮಗೆಲ್ಲರಿಗೂ ಅದರಿಂದ ಪ್ರಯೋಜನವಾಗುತ್ತದೆ ಎಂಬ ಆಕಾಂಕ್ಷೆಯನ್ನು ಹೊಂದಿದ್ದೇನೆ.”

  2. https://indianhomemaker.wordpress.com: ಭಾರತದ ನಗರವೊಂದರಲ್ಲಿನ ಗೃಹಿಣಿಯ ದೈನಂದಿನ ಜೀವನದ ಕುರಿತಾಗಿದೆ. ಆಕೆಯ ಬರಹಗಳಲ್ಲಿ ನೋವಿನ ನಿಯಂತ್ರಣ, ಕೌಟುಂಬಿಕ ದೌರ್ಜನ್ಯ ಮತ್ತು ಲಿಂಗ ತಾರತಮ್ಯ ಸೇರಿದಂತೆ ಹಲವಾರು ಸೂಕ್ಷ್ಮ ವಿಷಯಗಳನ್ನು ಚರ್ಚಿಸಲಾಗುತ್ತದೆ.

  3. https://swapnawrites.wordpress.com: ಸ್ವಪ್ನಾಳ ತಾಯಿಯು ಡಿಮೆನ್ಶಿಯಾದಿಂದ ಬಳಲುತ್ತಿದ್ದರು ಮತ್ತು ಸ್ವಪ್ನಾ ತನ್ನ ಆರೈಕೆಯ ಅನುಭವಗಳು, ಮತ್ತು ತಾನು ಕಲಿತ ಪಾಠದ ಬಗ್ಗೆ ಬ್ಲಾಗ್ ಮಾಡಲು ಶುರುಮಾಡಿದಳು. ಆಕೆಯು ಉಳಿದ ಆರೈಕೆದಾರರಿಗೆ ಸಹಾಯ ಮಾಡಲು ಆರಂಭಿಸಿದ ಮೇಲೆ ಒಬ್ಬ ಸ್ವಯಂ ಸೇವಕಳಾಗಿ ತನ್ನ ಅನುಭವಗಳನ್ನು ಹಂಚಿಕೊಂಡಳು. ಆಕೆಯ ತಾಯಿಯ ಮರಣದ ನಂತರವೂ ಆಕೆ ಡಿಮೆನ್ಶಿಯಾದ ಆರೈಕೆಯ ಕುರಿತು ಬರೆಯುತ್ತಿದ್ದಾಳೆ.

ರೆಫರೆನ್ಸ್:

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org