ಸಹಾಯವಾಣಿ ಎಂದರೇನು?

ನಿಮ್ಮ ಸಮಸ್ಯೆಯು ಸಣ್ಣದಿರಲಿ, ದೊಡ್ಡದಿರಲಿ, ಸಹಾಯವಾಣಿಯು ನಿಮಗೆ ಮಾನಸಿಕ ಬೆಂಬಲವನ್ನು ಒದಗಿಸುತ್ತದೆ

ಸಹಾಯವಾಣಿ ಎಂದರೇನು?

ಸಹಾಯವಾಣಿಯು ಒಂದು ಆಲಿಸುವ ಸೇವೆಯಾಗಿದೆ. ನಿಮ್ಮ ಭಾವನೆ ಮತ್ತು ತೊಂದರೆಗಳ ಬಗ್ಗೆ ನೀವು ಮಾತನಾಡುವಾಗ ಸಹಾಯವಾನಿಯಲ್ಲಿ ಕೆಲಸಮಾಡುವ ಆಪತಸಮಾಲೊಚಕರು ತಾಳ್ಮೆಯಿಂದ ನಿಮ್ಮ ಮಾತನ್ನು ಆಲಿಸುತ್ತಾರೆ.  ಈ ಸೇವೆಯನ್ನು ಫೋನ್ ಕಾಲಿನ ಮೂಲಕ ನೀಡಲಾಗುತ್ತದೆ. ಕೆಲವು ಸಹಾಯವಾಣಿಗಳು ವಾರದ  7 ದಿನಗಳು ಹಾಗು ದಿನದ 24 ತಾಸು ಕಾರ್ಯ ನಿರ್ವಹಿಸುತ್ತವೆ. ಭಾವನಾತ್ಮಕ ಸಮಸ್ಯೆಯಿದ್ದರೆ ವ್ಯಕ್ತಿಯು ಸಹಾಯವಾಣಿಗೆ ಕರೆಮಾಡಿ ಬೆಂಬಲವನ್ನು ಪಡೆಯಬಹುದು. 

ಸಹಾಯವಾಣಿಯನ್ನು ಏಕೆ ಸಂಪರ್ಕಿಸಬೇಕು?

ನಾವೆಲ್ಲರೂ ಜೀವನದಲ್ಲಿ ಒಂದಲ್ಲಾ ಒಂದು ಸಮಯದಲ್ಲಿ ಕಠಿಣವಾದ ಒತ್ತಡ ಮತ್ತು ಸಂಕಷ್ಟಕ್ಕೆ ಒಳಗಾಗುತ್ತೇವೆ. ಕೆಲವೊಮ್ಮೆ, ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ನಮ್ಮ ಕಷ್ಟಗಳನ್ನು ಹಂಚಿಕೊಳ್ಳುತ್ತೇವೆ. ಕೆಲವೊಮ್ಮೆ ಅವರು ನಮ್ಮ ಬಗ್ಗೆ ಏನಾದರೂ ಅಂದುಕೊಳ್ಳಬಹುದೆಂಬ ಭಯದಿಂದ ಅಥವಾ ನಮ್ಮ ಸುತ್ತಲಿನ ಜನರು ನಮ್ಮನ್ನು ವಿಚಿತ್ರವಾಗಿ ನೋಡಬಹುದೆಂಬ ಚಿಂತೆಯಿಂದ ನಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.

ಕೆಲವೊಮ್ಮೆ,  ಅತ್ಯಂತ ವೈಯಕ್ತಿಕ ಅಥವಾ ಗೌಪ್ಯವಾದ ವಿಚಾರವನ್ನು ನಿಮ್ಮ ಆಪ್ತರ ಹತ್ತಿರ ಕೂಡ  ಹೇಳಲು  ಆಗದೆ ಇರಬಹುದು . ಕೆಲವೊಮ್ಮೆ, ನೀವು ಅತ್ಯಂತ ಹತಾಶ ಸ್ಥಿತಿಯಲ್ಲಿರುವಾಗ ಆ ಬಗ್ಗೆ ಹೇಳಿಕೊಳ್ಳಲು ಬಯಸಿದರೂ, ನಿಮಗೆ ಬೇಕಾದ ವ್ಯಕ್ತಿಯನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಇಂತಹ ಯಾವುದೇ ಸಂದರ್ಭದಲ್ಲಿ  ಯಾರೂ ಇಲ್ಲದಿದ್ದರೆ  ನೀವು ಸಹಾಯವಾಣಿಗೆ ಕರೆ ಮಾಡಬಹುದು. ದೇಶದ ಹಲವು ಭಾಗಗಳಲ್ಲಿ ಮಾನಸಿಕ ಆರೋಗ್ಯ ಸೇವೆಯನ್ನು ಪಡೆಯುವುದಕ್ಕಿಂತ ಸಹಾಯವಾಣಿಯನ್ನು ಸಂಪರ್ಕಿಸುವುದು ಸುಲಭವಾಗಿರುತ್ತದೆ.

ಹೆಚ್ಚಿನ ಸಹಾಯವಾಣಿಗಳು ಉಚಿತ ಸೇವೆಯನ್ನು ಒದಗಿಸುತ್ತವೆ (ಟೆಲಿಫೋನ್ ಕರೆಯ ದರ ಮಾತ್ರ ವಿಧಿಸಬಹುದು). ಸಹಾಯವಾಣಿಗಳು ತರಬೇತಿ ಪಡೆದ ಆಪ್ತ ಸಮಾಲೋಚಕರನ್ನು ಹೊಂದಿದ್ದು, ಅವರು ನಿಮಗೆ ಮಾನಸಿಕ ಬೆಂಬಲವನ್ನು ಒದಗಿಸುತ್ತಾರೆ. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.  ನಿಮ್ಮ ಸಮಸ್ಯೆಯ ಬಗ್ಗೆ ಸಹಾಯವಾಣಿಅವರು ಗೌಪ್ಯವಾಗಿಡುವ ಭರವಸೆ ನೀಡುತ್ತಾರೆ  ಆದ ಕಾರಣ ನೀವು ನಿಶ್ಚಿಂತೆಯಿಂದ ಮಾತನಾಡಬಹುದು. ಸಹಾಯವಾಣಿಯ ಆಪ್ತಸಮಾಲೋಚಕರು ನಿಮ್ಮ ಅಗತ್ಯಗಳನ್ನು ಗುರುತಿಸಿ ಸನಿಹದಲ್ಲಿರುವ ಸಂಪನ್ಮೂಲಗಳಿಗೆ ಶಿಫಾರಸ್ಸು ಮಾಡಬಹುದು.

ಸಹಾಯವಾಣಿಯನ್ನು ಕೇವಲ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾತ್ರ ಸಂಪರ್ಕಿಸಬೇಕು ಎಂದಿಲ್ಲ. ಕೆಲವು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು, ಅಥವಾ ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಯಲು ಕೂಡ ನೀವು ಸಹಾಯವಾಣಿಯ ಪ್ರಯೋಜನವನ್ನು ಪಡೆಯಬಹುದು. ಮಾನಸಿಕ ಸಮಸ್ಯೆ ಹೊಂದಿರುವ ವ್ಯಕ್ತಿಗೆ ಹೇಗೆ ಸಹಾಯ ಮಾಡಬಹುದು ಎಂದು ತಿಳಿಯಲು ಕೂಡ ಇದರ ಪ್ರಯೋಜನ ಪಡೆಯಬಹುದು.

ಕೇವಲ ಫೋನಿನ ಮೂಲಕ ಮಾತ್ರವೇ ನಾನು ಸಹಾಯವನ್ನು ಪಡೆಯಬಹುದೇ?

ಕೆಲವು ಸಹಾಯವಾಣಿಗಳು ಫೋನಿನ ಮೂಲಕ ಮಾತ್ರವೇ ಸಂಪರ್ಕಿಸಬಹುದು. ಹಲವು ಸಹಾಯವಾಣಿಗಳು ಇ-ಮೇಲ್ ಮೂಲಕ ಮಾನಸಿಕ ಬೆಂಬಲವನ್ನೊದಗಿಸುತ್ತವೆ.  ನೀವು ಖುದ್ದಾಗಿ ಸಹಾವಾಣಿ ಆಫೀಸ್ ಗೆ ಭೇಟಿ ಮಾಡಿ ಆಪ್ತಸಮಾಲೋಚಕರ ಜೊತೆ ಮಾತನಾಡಬಹುದು. ಬೆಂಗಳೂರಿನಲ್ಲಿರುವ ಪರಿವರ್ತನ್ ಮತ್ತು ಸ್ನೇಹಾ ಸಂಸ್ಥೆಗಳಲ್ಲಿ ಈ ಸೌಲಭ್ಯವಿದೆ.

ಸಹಾಯವಾಣಿಯಿಂದ ನಾನು ಏನನ್ನು ನಿರೀಕ್ಷಿಸಬಹುದು?

ಸಹಾಯವಾಣಿಗೆ ಕರೆಮಾಡಿದಾಗ ನೀವು:

 • ಕನಿಷ್ಟ ತರಬೇತಿ ಮತ್ತು ಆಪ್ತಸಮಾಲೋಚನೆಯ ಕೌಶಲ್ಯವನ್ನು ಹೊಂದಿರುವ ಆಪ್ತಸಮಾಲೋಚಕರು ಅಥವಾ ಸ್ವಯಂಸೇವಕರೊಂದಿಗೆ ಮಾತನಾಡಬಹುದು.
 • ಯಾವುದೇ ರೀತಿಯ ಸಂಕೋಚವಿಲ್ಲದೇ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು.
 • ಆಪ್ತಸಮಾಲೋಚಕರು ಪರಾನುಭೂತಿಯಿಂದ ನಿಮ್ಮ ಮಾತನ್ನು ಆಲಿಸುತ್ತಾರೆ. ಅವರಿಂದ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು.
 • ನಿಮ್ಮ ಸಮಸ್ಯೆಗೆ ಇನ್ನೂ ಹೆಚ್ಚಿನ ಸಹಾಯನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಪಡೆಯಬಹುದು
 • ನಿಮಗೆ ಸಹಾಯಮಾಡಬಲ್ಲ ತಜ್ಞರ ಮಾಹಿತಿ ಪಡೆಯಬಹುದು.
 • ನಿಮಗೆ ಅಗತ್ಯವಿರುವ ಯಾವುದೇ ಇನ್ನಿತರ ಬೆಂಬಲ, ಉದಾಹರಣಗೆ ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಮಕ್ಕಳ ಸಹಾಯವಾಣಿಯ ಬಗ್ಗೆ ಮಾಹಿತಿ ಪಡೆಯಬಹುದು.

ನಾನು ಸಹಾಯವಾಣಿಗೆ ಕರೆಮಾಡಿದಾಗ ಅವರು ಯಾವ ಪ್ರಶ್ನೆಗಳನ್ನು ಕೇಳಬಹುದು?

ನೀವು ಸಹಾಯವಾಣಿಗೆ ಕರೆ ಮಾಡಿದಾಗ ಆಪ್ತಸಮಾಲೋಚಕರು ಅವರ ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಅವರು ನಿಮಗೆ ಸಹಾಯವಾಣಿಯ ಗೌಪ್ಯತೆಯ ನಿಯಮಗಳ ಬಗ್ಗೆ ತಿಳಿಸುತ್ತಾರೆ. ಸಮಸ್ಯೆಯ ತೀವ್ರತೆಯ ಆದಾರದ ಮೇಲೆ ನೀವು ಎಷ್ಟು ಸಮಯದವರೆಗೆ ಮಾತನಾಡಬಹುದು ಎಂಬ ಬಗ್ಗೆ ಪ್ರತಿಯೊಂದು ಸಹಾಯವಾಣಿಗಳೂ ಅವರದೇ ಆದ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿರುತ್ತವೆ. ಆಫ್ತಸಮಾಲೋಚಕರು ಸೂಕ್ತವಾದ ಮಾಹಿತಿಗಾಗಿ ನಿಮ್ಮ ವಯಸ್ಸು ಮತ್ತು ಸ್ಥಳಗಳ ಬಗ್ಗೆ ಕೇಳಬಹುದು. ನಿಮಗೆ ನಿಮ್ಮ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದಲ್ಲಿ ಅವರು ನಿಮ್ಮನ್ನು ಏನೆಂದು ಸಂಬೋಧಿಸಬೇಕು ಎಂದು ಕೇಳಬಹುದು. 

ಯಾವ ಸಮಸ್ಯೆಗಳಿಗೆ ನಾನು ಸಹಾಯವಾಣಿಯನ್ನು ಸಂಪರ್ಕಿಸಬಹುದು?

ನಿಮಗೆ ಯಾವ ರೀತಿಯ ಬೆಂಬಲದ ಅಗತ್ಯವಿದೆ ಎಂಬುದರ ಮೇಲೆ ಸಹಾಯವಾಣಿಯ ಆಯ್ಕೆ ಮಾಡಬಹುದು. ಹೆಚ್ಚಿನ ಸಹಾಯವಾಣಿಗಳು ಆಲಿಸುವ ಸೇವೆಯನ್ನೊದಗಿಸುತ್ತವೆ. ಕೆಲವು ಸಹಾಯವಾಣಿಗಳು ತಜ್ಞರ ಬೆಂಬಲವನ್ನು ಹೇಗೆ ಪಡೆಯಬೇಕೆಂಬ ನಿರ್ದಿಷ್ಟ ಮಾಹಿತಿಯನ್ನು ನೀಡುತ್ತವೆ.

ಭಾರತದಲ್ಲಿ, ಆತ್ಮಹತ್ಯೆ, ಕೌಟುಂಬಿಕ ದೌರ್ಜನ್ಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಇತ್ಯಾದಿ ವಿಷಯಗಳಿಗೆ ಬೆಂಬಲವನ್ನೊದಗಿಸುವ ಸಹಾಯವಾಣಿಗಳಿವೆ. ಈ ಸಹಾಯವಾಣಿಗಳು ವ್ಯಕ್ತಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ.

ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ನಾನು ಸಹಾಯ ಮಾಡಲು ಸಹಾಯವಾಣಿಯನ್ನು ಸಂಪರ್ಕಿಸಬಹುದೇ?

ಹೌದು, ನಿಮ್ಮ ಪ್ರೀತಿಪಾತ್ರರ ಸಮಸ್ಯೆಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಣಿಗೆ ಕರೆ ಮಾಡಬಹುದು.  ಆದರೆ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಅವರಿಗೆ ನೀವು ಆಪ್ತಸಮಾಲೋಚನೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಆಪ್ತ ಸಮಾಲೋಚನೆಯು ಪರಿಣಾಮಕಾರಿಯಾಗಬೇಕಾದರೆ ಅಗತ್ಯವಿರುವ ವ್ಯಕ್ತಿಯೇ ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು. ಹಾಗೆಯೇ ಸಮಸ್ಯೆಯಿರುವ ವ್ಯಕ್ತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ನಿಮಗೆ ಬೆಂಬಲ ದೊರೆಯಬಹುದು. ಇಲ್ಲವೇ ಆ ವ್ಯಕ್ತಿಯ ಸಮಸ್ಯೆಯಿಂದ ನಿಮ್ಮಲ್ಲಿ ಉಂಟಾಗಿರುವ ಆತಂಕ ಅಥವಾ ಒತ್ತಡಕ್ಕೆ ಸಹಾಯ ದೊರೆಯಬಹುದು.

ಸಹಾಯವಾಣಿಗೆ ಕರೆಮಾಡಿದಾಗ ನಾನು ಯಾರೊಂದಿಗೆ ಮಾತಾಡುತ್ತೇನೆ?

ಸಹಾಯವಾಣಿಗೆ ಕರೆ ಮಾಡಿದಾಗ, ಮನೋಸಾಮಾಜಿಕ ಬೆಂಬಲವನ್ನು ನೀಡಲು ತಕ್ಕ ಮಟ್ಟಿನ ತರಬೇತಿಯನ್ನು ಪಡೆದ ಆಪ್ತಸಮಾಲೋಕರೊಡನೆ ನೀವು ಮಾತನಾಡಬಹುದು. ಆಯಾ ಸಹಾಯವಾಣಿಗಳ ನೀತಿನಿಯಮಾವಳಿಗೆ ತಕ್ಕಂತೆ ಕರೆಯನ್ನು ಉತ್ತರಿಸುವ ವ್ಯಕ್ತಿಯ ಅರ್ಹತೆಗಳು ಭಿನ್ನವಾಗಿರಬಹುದು. ಬೆಂಗಳೂರಿನಲ್ಲಿರುವ, ಆಪ್ತಸಮಾಲೋಚನೆ, ತರಬೇತಿ ಮತ್ತು ಸಂಶೋಧನಾ ಕೇಂದ್ರವಾಗಿರುವ ಪರಿವರ್ತನ್ ಸಂಸ್ಥೆಯು ನಡೆಸುವ ಸಹಾಯವಾಣಿಯಲ್ಲಿ ಆಪ್ತಸಮಾಲೋಚನೆ ಕೌಶಲ್ಯಗಳಲ್ಲಿ ಒಂದು ವರ್ಷದ ತರಬೇತಿ ಪಡೆದ ಆಪ್ತಸಮಾಲೋಚಕರೊಡನೆ ನೀವು ಮಾತನಾಡುತ್ತೀರಿ. ದಿ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ನಡೆಸುವ ಐ ಕಾಲ್ ಸಹಾಯವಾಣಿಯು ಕ್ಲಿನಿಕಲ್ ಸೈಕಾಲಜಿ ಅಥವಾ ಅಪ್ಲೈಡ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ತಜ್ಞರನ್ನು ಹೊಂದಿದೆ.

ಕೆಲವು ಸಹಾಯವಾಣಿಗಳು ಸ್ವಯಂ ಸೇವಕರನ್ನು ಹೊಂದಿದ್ದರೆ ಉಳಿದವು ಪೂರ್ಣಾವಧಿಯ ಸಿಬ್ಬಂದಿಗಳನ್ನು ಹೊಂದಿವೆ. ಅವರು ಸ್ವಯಂ ಸೇವಕರಾಗಿರಲಿ, ಪಾರ್ಟ್ಟೈಮ್ ಇಲ್ಲವೇ ಪೂರ್ಣಾವಧಿಯ ನೌಕರರಾಗಿರಲಿ, ಕರೆಗಳನ್ನು ಸ್ವೀಕರಿಸಲು ಆರಂಭಿಸುವ ಮೊದಲು ಅವರಿಗೆ ಟೆಲಿಫೋನ್ ಆಪ್ತ ಸಮಾಲೋಚನೆಯ ಬಗ್ಗೆ ತರಬೇತಿ ನೀಡಿರುತ್ತಾರೆ. 

ನನ್ನ ಮಾಹಿತಿಗಳು ಬಹಿರಂಗವಾಗುತ್ತವೆಯೇ?

ಸಾಮಾನ್ಯವಾಗಿ ಸಹಾಯವಾಣಿಗಳು ಮಾಹಿತಿಯನ್ನು ಗೌಪ್ಯವಾಗಿಡುತ್ತವೆ. ಹೆಚ್ಚಿನ ಸಹಾಯವಾಣಿಗಳು ಕರೆಮಾಡಿದ ವ್ಯಕ್ತಿಯು ಎಲ್ಲಿಯವರೆಗೆ ತನ್ನ ಜೀವಕ್ಕೆ ಅಥವಾ ಸುತ್ತಲಿನವರಿಗೆ ಹಾನಿಯುಂಟು ಮಾಡುವುದಿಲ್ಲವೋ ಅಲ್ಲಿಯವರೆಗೆ, ವ್ಯಕ್ತಿಯ ಹೆಸರು, ದೂರವಾಣಿ ಸಂಖ್ಯೆ ಅಥವಾ ವಿಷಯವನ್ನು ಹಂಚಿಕೊಳ್ಳುವುದಿಲ್ಲ. ನೀವು ಸಹಾಯವಾಣಿಯನ್ನು ಸಂಪರ್ಕಿಸಿದಾಗ ನಿಮ್ಮ ಮಾಹಿತಿಯು ಗೌಪ್ಯವಾಗಿರುವ ಬಗ್ಗೆ ಭರವಸೆ ಬೇಕೆಂದರೆ ಸಮಾಲೋಚನೆಗೆ ಮುನ್ನ ಅವರ ನೀತಿ ನಿಯಮಗಳ ಬಗ್ಗೆ ತಿಳಿದುಕೊಳ್ಳಬಹುದು. ಹೆಚ್ಚಿನ ಸಹಾಯವಾಣಿಗಳು ಅವರ ಕಾರ್ಯನೀತಿಯ ಬಗ್ಗೆ ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಿರುತ್ತವೆ. ಕರೆಮಾಡುವ ಮುನ್ನ ಅದನ್ನು ಓದುವುದು ಉತ್ತಮ.

ನಾನು ಮುಖಾಮುಖಿ ಆಪ್ತಸಮಾಲೋಚನೆಗೆ ಹೋಗಲು ಬಯಸುವುದಿಲ್ಲ. ಆದ್ದರಿಂದ ಸಹಾಯವಾಣಿಗೆ ಕರೆ ಮಾಡುತ್ತಿರಬಹುದೇ?

ಯಾವುದೇ ಸಹಾಯವಾಣಿಗಳು ದೀರ್ಘಕಾಲಿಕ ಆಪ್ತಸಮಾಲೋಚನೆ ಸೌಲಭ್ಯವನ್ನು ಒದಗಿಸುವುದಿಲ್ಲ. ಎಲ್ಲಾ ವ್ಯಕ್ತಿಗಳಿಗೂ ಚಿಕಿತ್ಸಕರ ಅಥವಾ ಮಾನಸಿಕ ತಜ್ಞರ ಅಗತ್ಯವಿರುವುದಿಲ್ಲ. ಸಹಾಯವಾಣಿಯ ಆಪ್ತಸಮಾಲೋಚಕರು ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಂಡು ಒಂದು ವೇಳೆ ಅಗತ್ಯವಿದ್ದರೆ, ಮಾನಸಿಕ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಅಥವಾ ನಿಮಗೆ ಹತ್ತಿರದಲ್ಲಿನ ಮಾನಸಿಕ ತಜ್ಞರನ್ನು ಶಿಫಾರಸ್ಸು ಮಾಡುತ್ತಾರೆ.

ಸಹಾಯವಾಣಿಯ ಆಪ್ತಸಮಾಲೋಚನೆಯು ನನ್ನ ಎಲ್ಲಾ ಮಾನಸಿಕ ಸಮಸ್ಯೆಗಳನ್ನು ಪರಿಹರಿಸುತ್ತವೆಯೇ?

ಸಹಾಯವಾಣಿ ಆಪ್ತಸಮಾಲೋಚನೆಯು ಎಲ್ಲಾ ಮಾನಸಿಕ ಸಮಸ್ಯೆಗೆ ಸೂಕ್ತವಾಗಿರುವುದಿಲ್ಲ ಅಥವಾ ಸಾಕಾಗುವುದಿಲ್ಲ. ಕೆಲವು ಮಾನಸಿಕ ಖಾಯಿಲೆಗಳಿಗೆ ಔಷಧಗಳು, ಥೆರಪಿ ಮತ್ತು ಪುನಃಶ್ವೇತನದ ಅಗತ್ಯವಿರುತ್ತದೆ. ಅವರು ನಿಮಗೆ ಚಿಕಿತ್ಸೆ ನೀಡಬಲ್ಲ ಮಾನಸಿಕ ತಜ್ಞರ ಮಾಹಿತಿ ನೀಡಬಹುದು.

ಸಹಾಯವಾಣಿಯನ್ನು ಸಂಪರ್ಕಿಸಿದಾಗ ಏನನ್ನು ಮಾಡಬಾರದು:

ಸಹಾಯವಾಣಿಗಳು ಯಾವ ಸೌಲಭ್ಯಗಳನ್ನು ಒದಗಿಸುತ್ತವೆ ಎಂಬುದನ್ನು ತಿಳಿಯುವುದು ಉತ್ತಮ:

 • ಒಂದು ಕರೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಭಾವಿಸಬೇಡಿ. ಕೆಲವು ಸಮಸ್ಯೆಗಳು ಗಂಭೀರವಾಗಿದ್ದು, ದೀರ್ಘಕಾಲದ ನೆರವಿನ ಅಗತ್ಯವಿರುತ್ತದೆ.

 • ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಆಪ್ತಸಮಾಲೋಚಕರಿಗೆ ನಿಮ್ಮ ಸಮಸ್ಯೆಯನ್ನು ಹೇಳಿದಾಕ್ಷಣ ಸಮಸ್ಯೆಯನ್ನು ಪರಿಹರಿಸುವ ಜವಾಬ್ಧಾರಿಯು ಸಮಾಲೋಚಕರದ್ದು ಎಂದು ತಿಳಿಯಬೇಡಿ.

 • ಸಲಹೆಗಳನ್ನು ಕೇಳಬೇಡಿ: ನಾನು ಏನು ಮಾಡಬಹುದು? ಆಪ್ತಸಮಾಲೋಚನೆಯ ಉದ್ದೇಶವು ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಗ್ರಹಿಸುವಂತೆ ಬೆಂಬಲ ನೀಡುತ್ತಾರೆಯೇ ಹೊರತು ನಿಮ್ಮ ಸಮಸ್ಯೆಗೆ ಸರಿಯೆನಿಸಿದ ಪರಿಹಾರ ಕೊಡುವುದಿಲ್ಲ.

 • ಅವರೇನು ಮಾಡಬೇಕು ಎಂದು ಹೇಳಬೇಡಿ: ಕೆಲವು ಪಾಲಕರು ಸಹಾಯವಾಣಿಗೆ ಕರೆ ಮಾಡಿ ತಾವು ತಮ್ಮ ಮಕ್ಕಳಿಂದ ಏನನ್ನು ಮಾಡಿಸಲು ಬಯಸುತ್ತಾರೋ ಅದನ್ನು ಆಪ್ತಸಮಾಲೋಚಕರಿಂದ ಮಕ್ಕಳಿಗೆ ಹೇಳಿಸಲು ಬಯಸುತ್ತಾರೆ. ಇದರಿಂದ ಮಕ್ಕಳು ಪಾಲಕರು ಮತ್ತು ಆಪ್ತಸಮಾಲೋಚಕರು ತಮ್ಮ ವಿರುದ್ಧ ಒಟ್ಟಾಗಿದ್ದಾರೆ ಎಂದು ಭಾವಿಸಿ ತಮ್ಮ ಪಾಲಕರಿಂದ ಇನ್ನಷ್ಟು ದೂರಾಗಬಹುದು.

 • ನಿಂದಿಸಬೇಡಿ ಮತ್ತು ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಬೇಡಿ: ಆಣೆಪ್ರಮಾಣಗಳನ್ನು ಉಪಯೋಗಿಸಬೇಡಿ ಮತ್ತು ನಿಮ್ಮ ಲೈಂಗಿಕ ಕಲ್ಪನೆಗಳನ್ನು ವಿವರವಾಗಿ ತಿಳಿಸಬೇಡಿ.

 • ಕೇವಲ “ಚಾಟ್“ ಮಾಡಲು ಕರೆಮಾಡಬೇಡಿ- ಸಹಾಯವಾಣಿಯ ಆಪ್ತಸಮಾಲೋಚಕರು ವೃತ್ತಿಪರರಾಗಿರುತ್ತಾರೆಯೆ ಹೊರತು ನಿಮ್ಮ ಸ್ನೇಹಿತರಲ್ಲ. ಔಚಿತ್ಯವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿರುತ್ತದೆ. ನೀವು ಕಾಲಕಳೆಯಲು ಕರೆಮಾಡಿದರೆ ಬಿಕ್ಕಟ್ಟಿನಲ್ಲಿರುವವರಿಕಗೆ ಕರೆಮಾಡಲಾಗದೇ ಸಮಯಕ್ಕೆ ಸರಿಯಾಗಿ ನೆರವು ದೊರೆಯದಿರಬಹುದು.

ನನಗೆ ಯಾವ ಸಹಾಯವಾಣಿಯು ಉಚಿತ ಎಂದು ತಿಳಿಯುವುದು ಹೇಗೆ?

ಯಾವ ಸಹಾಯವಾಣಿಯು ಉತ್ತಮ ಅಥವಾ ಪರಿಣಾಮಕಾರಿ ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಅವರ ಗೌಪ್ಯತೆಯ ನಿಯಮವು ನಿಮಗೆ ಸರಿಯೆನಿಸಿದರೆ ಕರೆ ಮಾಡಿ. ಈ ಪ್ರಶ್ನೆಗಳ ಬಗ್ಗೆ ಆಲೋಚಿಸಿ. "ನಿಮ್ಮ ಅಗತ್ಯಗಳು ಈಡೇರಿವೆಯೇ?", " ನಿಮ್ಮ ಪ್ರಶ್ನೆಗಳಿಗೆ, ಅಗತ್ಯಗಳಿಗೆ ಆಪ್ತಸಮಾಲೋಚಕರ ಪ್ರತಿಕ್ರಿಯೆಯು ನಿಮಗೆ ತೃಪ್ತಿತಂದಿದೆಯೇ?", "ಕರೆಯು ನಿಮಗೆ ಸಮಾಧಾನ ನೀಡಿದೆಯೇ, ಅಥವಾ ಸ್ಪಷ್ಟತೆ ನೀಡಿದೆಯೇ?" ಈ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರವಿಲ್ಲದಿದ್ದರೆ ಸಹಾಯವಾಣಿಯ ಬಗ್ಗೆ ಇನ್ನೊಮ್ಮೆ ಯೋಚಿಸಿ.

ಸಹಾಯವಾಣಿ ಸಂಸ್ಥೆಗಳು

1098

Helpline number:  1098
Working hours:  24/7
Website/ e-mail:  http://www.childlineindia.org.in/1098/b1b-partnership-model.htm

Sahai

Location: Bangalore
Helpline number: 080 - 25497777
Working hours: Monday to Saturday, 10 am to 6 pm
Website/ e-mail: http://www.sahaihelpline.org

Parivarthan Counselling Helpline

Location: Bangalore
Helpline number: 080 - 65333323 
Working hours: Monday to Friday, 4 pm to 10 pm
Website/ e-mail: http://www.parivarthan.org/

iCall

Location: Mumbai
Run by:  Tata Institute of Social Sciences
Helpline number: 022-25563291or write to icall@tiss.edu
Working hours: Monday to Saturday, 10 am to 10 pm
Website/ e-mail: http://www.tiss.edu/TopMenuBar/field-action/projects/i-call-initiating-concern-for-all

NIMHANS helpline for the elderly

Location: Bangalore
Helpline number: 080-26685948 or 09480829670
Working hours: Monday to Saturday, 9.30 am to 4.30 pm
Website/ e-mail: nimhans.wellbeing@gmail.com

Sneha India

Location: Chennai
Helpline number: 044-24640050; 91-44-2464 0060 or e-mail help@snehaindia.org

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org