ಮಾನಸಿಕ ಆರೋಗ್ಯವನ್ನು -ಅರ್ಥಮಾಡಿಕೊಳ್ಳುವುದು

ಸಂದರ್ಶನ : ವಿಜಯಾ ಶ್ರೀಧರ್ ಅವರೊಂದಿಗೆ ಮಾತುಕತೆ

ಮಾನಸಿಕ ಅರ್ರೋಗ್ಯ ಮತ್ತು ಸಮಾಜದ ಕರ್ತವ್ಯ ಶ್ರೀಮತಿ ವಿಜಯ ಶ್ರೀಧರ್ ಅವರು ಹೆಸರಾಂತ ಕನ್ನಡ ಲೇಖಕಿ. ಕನ್ನಡ ಹಾಗೂ ಗಣಿತದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಪ್ರಸ್ತುತ ಇವರು ಶಿವಮೊಗ್ಗದಲ್ಲಿರುವ ಪ್ರತಿಷ್ಟಿತ ಸಾಹಿತ್ಯ ಸಂಸ್ಥೆಯಾಗಿರುವ

ವೈಟ್ ಸ್ವಾನ್ ಫೌಂಡೇಶನ್

ಪ್ರಶ್ನೆ: ಮಾನಸಿಕ ಆರೋಗ್ಯದ ಕುರಿತಂತೆ ನಿಮ್ಮ ಅನಿಸಿಕೆಗಳೇನು?

ಉತ್ತರ: ಮಾನಸಿಕ ಆರೋಗ್ಯ ಎಂದರೆ ಸಮಗ್ರವಾದ ಆರೋಗ್ಯ. ಅಂದರೆ, ಪ್ರತಿಯೊಬ್ಬ ಮನುಷ್ಯನೊಳಗೆಯೂ ಎಲ್ಲ ತರಹದ ಭಾವನೆಗಳಿರುತ್ತವೆ. ಯಾವ ಮನುಷ್ಯನಿಗೆ ಆ ಎಲ್ಲ ಭಾವನೆಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆಯೋ, ಅಂತವರು ಮಾನಸಿಕವಾಗಿ ಆರೋಗ್ಯಪೂರ್ಣವಾಗಿದ್ದಾರೆ ಎಂದು ನಾನು ನಂಬಿದ್ದೇನೆ.

ಪ್ರಶ್ನೆ: ಒಬ್ಬ ಮನುಷ್ಯ ಗುಣಾತ್ಮಕವಾಗಿ ಮಾನಸಿಕ ಆರೋಗ್ಯವನ್ನು ಹೊಂದಿರಬೇಕಾದರೆ ಏನು ಮಾಡಬೇಕು?

ಉತ್ತರ: ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಅಂದರೆ ಜೀವನದಲ್ಲಿ ಒಂದಿಷ್ಟು ಒಳ್ಳೆಯ ದೃಷ್ಟಿಕೋನವನ್ನು ಹೊಂದಿರಬೇಕು. ರುಚಿ ಮತ್ತು ಅಭಿರುಚಿ ಎರಡೂ ಜೀವನದಲ್ಲಿ ಬಹಳ ಮುಖ್ಯವಾಗುತ್ತವೆ. ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕೆ ನಾಲಿಗೆಯ ರುಚಿ ಹೇಗೆ ಮಹತ್ವದ್ದೋ, ಹಾಗೆಯೇ ಅಭಿರುಚಿ ಕೂಡ ಮಹತ್ವದ್ದಾಗಿರುತ್ತದೆ. ನಮ್ಮ ಅಭಿರುಚಿ ಚೆನ್ನಾಗಿದ್ದರೆ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. ಉದಾಹರಣೆಗೆ, ಪ್ರಕೃತಿ ವೀಕ್ಷಣೆ, ಸಂಗೀತ ಆಲಿಸುವುದು, ನೃತ್ಯವನ್ನು ನೋಡುವುದು ಮತ್ತು ಕಲಿಯುವುದು, ಕಲೆ-ಸಾಹಿತ್ಯಗಳಲ್ಲಿ ಆಸಕ್ತಿ ಹೊಂದಿರುವುದು ಮುಂತಾದವುಗಳು. ಈ ರೀತಿಯ ಸದಭಿರುಚಿಯನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ಮಾನಸಿಕವಾಗಿ ಹೆಚ್ಚು ಆರೋಗ್ಯಪೂರ್ಣರಾಗಿರುವುದು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆ: ಮಾನಸಿಕ ಆರೋಗ್ಯ ಅತ್ಯಂತ ಮಹತ್ವಪೂರ್ಣ ಸಂಗತಿ ಎಂಬುದರ ಕುರಿತು ನೀವೇನು ಹೇಳ ಬಯಸುತ್ತೀರಿ?

ಉತ್ತರ: ದೈಹಿಕವಾದ ನೋವು ಅಥವಾ ಅಸೌಖ್ಯದಿಂದಾಗಿ ವ್ಯಕ್ತಿಯೋರ್ವನು ಬಳಲುತ್ತಿದ್ದಾನೆಂದರೆ, ಆತ ಮಾತ್ರ ವೈಯಕ್ತಿಕವಾಗಿ ತೊಂದರೆಯನ್ನು ಅನುಭವಿಸುತ್ತಿರುತ್ತಾನೆ.. ಆದರೆ, ಮಾನಸಿಕ ಖಾಯಿಲೆ ಹಾಗಲ್ಲ. ವ್ಯಕ್ತಿಯ ಮಾನಸಿಕ ಆರೋಗ್ಯ ಕೆಟ್ಟರೆ, ಅವರ ಬದುಕಷ್ಟೇ ಅಲ್ಲ, ಅವರನ್ನು ಅವಲಂಬಿಸಿರುವ ಕುಟುಂಬ, ಸ್ನೇಹಿತರು, ಸುತ್ತ ಮುತ್ತಲಿನ ಜನ ಅಥವಾ ಸಮಾಜ, ಹೀಗೆ ಎಲ್ಲರ ಮೇಲೆಯೂ ದುಷ್ಪರಿಣಾಮ ಉಂಟಾಗತೊಡಗುತ್ತದೆ. ಉದಾಹರಣೆಗೆ ಮಾನಸಿಕ ರೋಗಿಯೊಬ್ಬನು ಅಸ್ವಾಭಾವಿಕವಾಗಿ ವರ್ತಿಸುತ್ತಾನೆ ಎಂದರೆ, ಅಂತವರ ಕುಟುಂಬ ಅಧೋಗತಿಗೆ ಇಳಿಯುವದಷ್ಟೇ ಅಲ್ಲ ಅವರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನಗಳೂ ಹಾಳಾಗುತ್ತವೆ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ. ದೈಹಿಕ ಆರೋಗ್ಯದಲ್ಲಿನ ಏರುಪೇರುಗಳನ್ನು ಹೇಗಾದರೂ ಎದುರಿಸಬಹುದು. ಆದರೆ, ಮಾನಸಿಕ ಅನಾರೋಗ್ಯವನ್ನು ಹಾಗೆಯೇ ಇಟ್ಟುಕೊಂಡಿರುವುದು ತುಂಬ ಕಷ್ಟದ ಕೆಲಸ.

ಪ್ರಶ್ನೆ: ಮಾನಸಿಕ ಖಾಯಿಲೆಗಳ ಕುರಿತು ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಮಾಜಿಕ ಕಳಂಕಗಳು, ಮೂಢನಂಬಿಕೆಗಳು ಮತ್ತು ಶೋಷಣೆಗಳನ್ನು ಪರಿಹರಿಸುವದು ಹೇಗೆ?

ಉತ್ತರ: ಈಗ ಮೊದಲಿನಂತಿಲ್ಲ. ಬಹಳಷ್ಟು ಬದಲಾವಣೆಗಳಾಗಿವೆ. ನಾವು ಚಿಕ್ಕವರಿದ್ದಾಗ ಮಾನಸಿಕ ರೋಗಿಗಳನ್ನು ಜನ ‘ಹುಚ್ಚರು’ ಎನ್ನುತ್ತಿದ್ದರು. ಅವರನ್ನು ಊರಾಚೆಗೆ ಇರಿಸುತ್ತಿದ್ದ ಪರಿಪಾಠವೂ ಇತ್ತು. ಕಠಿಣ ಶಿಕ್ಷೆಗಳನ್ನು ನೀಡುವ ಮೂಲಕ ಅಂತವವರನ್ನು ಹಿಂಸೆಗೆ, ಶೋಷಣೆಗೆ ಒಳಪಡಿಸಲಾಗುತ್ತಿದ್ದ ಕಾಲವೂ ಇತ್ತು. ಅಂತಹ ಪೀಡಿತರನ್ನು ಕೂಡಿ ಹಾಕುವುದು, ಕಟ್ಟಿಹಾಕುವುದು, ವಿವಿಧ ದೇವರಿಗೆ ಹರಕೆ ಹೇಳಿಕೊಳ್ಳುವುದು, ವಾಮಾಚಾರಗಳನ್ನು ಮಾಡಿಸುವುದು ಮುಂತಾಗಿ ಅನೇಕ ತಪ್ಪು ನಂಬಿಕೆಗಳು, ಆಚರಣೆಗಳು ಚಾಲ್ತಿಯಲ್ಲಿದ್ದುದನ್ನು ನಾವೇ ಕಂಡಿದ್ದೇವೆ.

ಆದರೆ, ಪರಿಸ್ಥಿತಿ ಇವತ್ತು ಬದಲಾಗತೊಡಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾನಸಿಕ ತಜ್ಞರು, ಮನೋವೈದ್ಯರು, ಸಮಾಜಶಾಸ್ರಜ್ಞರು ಮತ್ತು ವೈಟ್ ಸ್ವಾನ್ ಫೌಂಡೇಶನ್ನಿನಂತಹ ಹಲವಾರು ಸಂಘ ಸಂಸ್ಥೆಗಳು ಮುಂತಾದವರೆಲ್ಲ ಸೇರಿ ಜನ ಜಾಗೃತಿಯನ್ನುಂಟುಮಾಡುವಲ್ಲಿ, ಬದಲಾವಣೆ ತರುವಲ್ಲಿ ತುಂಬ ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಆಶಾದಾಯಕ ಬದಲಾವಣೆಗಳೂ ಕಂಡುಬರುತ್ತಿವೆ. ಮಾನಸಿಕ ಖಾಯಿಲೆಗಳುಂಟಾದಾಗ ವೈದ್ಯರನ್ನು ಕಾಣಬೇಕು ಎಂಬ ವಿಚಾರ ಇಂದು ಅನೇಕ ಜನರಿಗೆ ತಿಳಿದಿದೆ.

ಕೆಲವು ಸಂದರ್ಭಗಳಲ್ಲಿ, ಕೆಲಮಟ್ಟಿಗೆ, ಯಾವುದೋ ಆವೇಶಕ್ಕೊಳಗಾಗಿಯೋ, ಅಥವಾ ನಂಬಿಕೆಯಿಂದಲೋ ದೇವರಿಗೆ ನಡೆದುಕೊಳ್ಳುವುದು ಅಥವಾ ಪೂಜೆ ಪುನಸ್ಕಾರಗಳನ್ನು ಮಾಡುವುದು ಅಂತಹ ಅಡ್ಡಿಯನ್ನೇನೂ ಮಾಡುವುದಿಲ್ಲ. ಆದರೆ, ಸಂಪೂರ್ಣವಾಗಿ ಇಂತಹ ಆಚರಣೆಗಳನ್ನೇ ನಂಬಿಕೊಳ್ಳುವುದು ಸೂಕ್ತವಲ್ಲ. ಅದು ಸರಿಯೂ ಅಲ್ಲ.

ಇತ್ತೀಚಿನ ದಿನಮಾನಗಳಲ್ಲಿ ಅನೇಕ ಜನ ವೈದ್ಯರ ಬಳಿಗೆ ಬಂದು ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಇದು ಇನ್ನೂ ಹೆಚ್ಚು ಹೆಚ್ಚು ವ್ಯಾಪಕವಾಗಬೇಕು. ದೈಹಿಕ ಅನಾರೋಗ್ಯದ ಲಕ್ಷಣಗಳು ಕಂಡುಬಂದ ಕೂಡಲೇ ನಾವು ವೈದ್ಯರನ್ನು ಕಂಡು ಔಷಧಿಗಳನ್ನು ಪಡೆದುಕೊಳ್ಳುತ್ತೇವೆ. ಇದನ್ನು ಕಳಂಕವೆಂದು ಭಾವಿಸುವುದಿಲ್ಲ. ಮಲೇರಿಯಾ, ಫ್ಲೂ, ಜ್ವರ ಮುಂತಾದ ದೈಹಿಕ ಅನಾರೋಗ್ಯ ಕಾಣಿಸಿಕೊಳ್ಳುವಲ್ಲಿ ವ್ಯಕ್ತಿಗಳದೇನೂ ತಪ್ಪಿರುವುದಿಲ್ಲ. ಅದೊಂದು ದೈಹಿಕ ರೋಗ ಎಂದು ಜನ ಸಹಜವಾಗಿ ಸ್ವೀಕರಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಹಾಗೆಯೇ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಾಗ ಮಾನಸಿಕ ತಜ್ಞರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದು ಸಹಜವಾಗಿ ಸಾಧ್ಯವಾಗಬೇಕು.

ಅದೇನೂ ಕಳಂಕವಲ್ಲ ಎನ್ನುವ ವಿಚಾರವನ್ನು ನಾವು ಸಮಾಜಕ್ಕೆ ತಿಳಿಹೇಳುವ ಕಾರ್ಯದಲ್ಲಿ ನಿರಂತರವಾಗಿ ತೊಡಗಬೇಕು. ಇದನ್ನು ಬೇರೆ ಬೇರೆ ರೀತಿಯಿಂದ ಮಾಡುವುದು ಸಾಧ್ಯವಿದೆ.

ಮಾನಸಿಕ ಅನಾರೋಗ್ಯದ ಕುರಿತು ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸುವುದು, ಲೇಖನಗಳನ್ನು ಪ್ರಕಟಿಸುವುದು, ಜನಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು, ಬೀದಿನಾಟಕಗಳನ್ನು ಆಯೋಜಿಸುವುದು, ರೇಡಿಯೋ ಭಾಷಣಗಳನ್ನು ನೀಡುವುದು ಹೀಗೆ ಬೇರೆ ಬೇರೆ ರೀತಿಯಲ್ಲಿ ತಿಳುವಳಿಕೆಯನ್ನು ಮೂಡಿಸಲು ಸಾಧ್ಯವಿದೆ.

ಭಾರತವೇಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಷ್ಠಿತ ಸಂಸ್ಥೆ ಎಂದು ಗುರುತಿಸಲ್ಪಟ್ಟಿರುವ ನಿಮ್ಹಾನ್ಸ್ ಈ ಕುರಿತು ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಅಲ್ಲಿ ತರಬೇತಿ ಪಡೆದ ವೈದ್ಯರು ಬೇರೆ ಬೇರೆ ಕಡೆಗಳಲ್ಲಿ ಸೇವೆಸಲ್ಲಿಸುತ್ತ ಜನಸೇವೆ ಮಾಡುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳಾಗಬೇಕು. ಸರಕಾರ ಮಾನಸಿಕ ರೋಗಿಗಳ ಪುನರ್ವಸತಿಯ ಕುರಿತು ಇನ್ನೂ ಹೆಚ್ಚಿನ ಗಮನ ಹರಿಸಬೇಕು, ಹಳ್ಳಹಳ್ಳಿಗಳಲ್ಲಿ ಮಾನಸಿಕ ವೈದ್ಯರ ಸೇವೆ ದೊರೆಯುವಂತೆ ಮಾಡಬೇಕು. ಚಲನಚಿತ್ರಗಳ ಮೂಲಕ ಮಾನಸಿಕ ಆರೋಗ್ಯದ ಕುರಿತಾಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನವಾಗಬೇಕು. ಎಲ್ಲ ಮಾದ್ಯಮಗಳಲ್ಲಿ ಮಾನಸಿಕ ರೋಗಿಗಳ ಕುರಿತಾಗಿ ಒಂದು ವಿಶಾಲ ದೃಷ್ಟಿಕೋನವನ್ನು ಹೊಂದಿರುವ ಚರ್ಚೆಗಳು, ಸಂವಾದಗಳು, ಜ್ಞಾನಪ್ರಸರಣ ಕ್ರಮಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಪ್ರಚುರಗೊಳಿಸಬೇಕು.. ಬೇರೆ ರೋಗಗಳ ತರಹ ಸಹಜವಾಗಿ ಚಿಕಿತ್ಸೆ ಪಡೆಯುವಂತಹ ಮನೋಭಾವ ಜನರಲ್ಲಿ ಮೂಡಬೇಕು. ಸಂಘ-ಸಂಸ್ಥೆಗಳೂ ಈ ಕುರಿತು ನಿಸ್ವಾರ್ಥವಾಗಿ ಕೆಲಸಮಾಡಬೇಕು ಎಂದು ನಾನು ಆಶಿಸುತ್ತೇನೆ.  

AD
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org