ಚಿಕಿತ್ಸೆಯ ವಿಧಗಳು

ಮಾನಸಿಕ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಲು ಹಲವು ರೀತಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಚಿಕಿತ್ಸೆಯ ಬೇರೆ ಬೇರೆ ವಿಧಾನಗಳು ಯಾವವು?

ಚಿಕಿತ್ಸೆಯ ಮೊದಲ ಹಂತವಾಗಿ ವೈದ್ಯರು ಕೂಲಂಕುಷವಾದ ರೋಗ ಪರೀಕ್ಷೆಯನ್ನು ಕೈಗೊಳ್ಳುತ್ತಾರೆ. ಈ ಪರೀಕ್ಷೆಯ ಆಧಾರದ ಮೇಲೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ. ನಿಯಂತ್ರಿತ ಲಕ್ಷಣಗಳನ್ನು ಹೊಂದಿದ ಅಲ್ಪ ಪ್ರಮಾಣದ ಮಾನಸಿಕ ತೊಂದರೆಗಳಿಗೆ ಅಲ್ಪಾವಧಿಯ ಚಿಕಿತ್ಸೆ ಸಾಕಾಗಬಹುದು. ಗಂಭೀರವಾದ ಮಾನಸಿಕ ಅಸ್ವಸ್ಥತೆಯಿರುವ ವ್ಯಕ್ತಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಮನೋವೈದ್ಯರು, ಮನೋವಿಜ್ಞಾನಿಗಳು, ಮಾನಸಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಬಹುದು. ಚಿಕಿತ್ಸೆಯು ಈ ಕೆಳಗೆ ತಿಳಿಸಿದ ಒಂದು ಅಥವಾ ಹೆಚ್ಚಿನ ವಿಧಾನಗಳನ್ನು ಹೊಂದಿರಬಹುದು.

ಸೂಚನೆ: ಯಾವುದೇ ಚಿಕಿತ್ಸೆಯಲ್ಲಿ ವ್ಯಕ್ತಿಯ ಒಪ್ಪಿಗೆ ಮತ್ತು ಅವರು ನೀಡುವ ಸಹಕಾರವು ಶೀಘ್ರವಾಗಿ ಗುಣಮುಖವಾಗಲು ಸಹಾಯ ಮಾಡುತ್ತದೆ. ಮೆದುಳಿನ ರಾಸಾಯನಿಕ ಅಸಮತೋಲನದಿಂದ ಕೆಲವು ಅಸ್ವಸ್ಥತೆಗಳು ಉಂಟಾಗಿದ್ದಿರಬಹುದು. ಕೆಲವೊಮ್ಮೆ ಈ ಅಸಮತೋಲನವು, ಗಂಭೀರ ಭಾವನಾತ್ಮಕ ಪ್ರಕ್ಷುಬ್ಧತೆಯಿಂದಲೂ ಉಂಟಾಗಿರಬಹುದು. ಅಂತಹ ವ್ಯಕ್ತಿಗಳು ಚೇತರಿಸಿಕೊಳ್ಳಲು ಕುಟುಂಬ ಮತ್ತು ಸ್ನೇಹಿತರ ಭಾವನಾತ್ಮಕ ಬೆಂಬಲ ಮತ್ತು ಅರ್ಥಮಾಡಿಕೊಳ್ಳುವಿಕೆ ಬಹಳ ಅವಶ್ಯಕವಾಗಿರುತ್ತದೆ.

ಕೆಲವು ಚಿಕಿತ್ಸಾ ವಿಧಾನಗಳು:

ಔಷಧಗಳು/ಔಷಧೀಯ ಚಿಕಿತ್ಸೆ:

ರೋಗಲಕ್ಷಣಗಳನ್ನು ನಿಯಂತ್ರಿಸಿ ಬೇಗ ಚೇತರಿಸಿಕೊಳ್ಳಲು ಔಷಧಗಳು ನೆರವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಔಷಧಗಳನ್ನು ಚಿಕಿತ್ಸೆಯ ಮೊದಲ ಆದ್ಯತೆಯಾಗಿ ಆಯ್ದುಕೊಳ್ಳಲಾಗುತ್ತದೆ. ಔಷಧದ ಪರಿಣಾಮವು ಖಾಯಿಲೆಯ ಗಂಭೀರತೆಯ ಮೇಲೆ ಹಾಗೂ ವ್ಯಕ್ತಿಯ ದೇಹವು ಆ ಔಷಧಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಆಧರಿಸಿದೆ.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಉಪಯೋಗಿಸುವ ಕೆಲವು ಔಷಧಗಳು:

 • ಖಿನ್ನತೆ ನಿವಾರಕಗಳು(ಆಂಟಿ ಡಿಪ್ರೆಸೆಂಟ್ಸ್) : ಮನೋವೈದ್ಯರು ಖಿನ್ನತೆ ಅಥವಾ ಆತಂಕದ ಲಕ್ಷಣಗಳನ್ನು ನಿಯಂತ್ರಿಸಲು ಅಥವಾ ಗುಣಪಡಿಸಲು ನೀಡುವ ಔಷಧ ಇವಾಗಿವೆ. ಖಿನ್ನತೆ ನಿವಾರಕಗಳು ವ್ಯಸನಕಾರಿಯಲ್ಲ ಹಾಗೂ ದೀರ್ಘಾವಧಿಗೆ ಬಳಸಿದಾಗಲೂ ಕೂಡ ಅವಲಂಬನೆಯನ್ನುಂಟು ಮಾಡುವುದಿಲ್ಲ.

 • ಆತಂಕ ನಿವಾರಣಾ ಔಷಧಗಳು: ಇವುಗಳನ್ನು ಶಾಮಕಗಳೆಂದೂ ಕರೆಯುತ್ತಾರೆ. ಇವು ಆತಂಕವನ್ನು ಕಡಿಮೆ ಮಾಡುವುದರಿಂದ ಆತಂಕದ ಸಮಸ್ಯೆ ನಿವಾರಣೆಗೆ ಬಳಸುತ್ತಾರೆ. ಇವು ಮನಸ್ಸನ್ನು ಪ್ರಶಾಂತಗೊಳಿಸಿ ಆರಾಮ ನೀಡುತ್ತದೆ, ಅಲ್ಲದೇ ತಳಮಳ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆ.

 • ಚಿತ್ತ ಸ್ಥಿರಕಾರಿ ಔಷಧಗಳು ( ಮೂಡ್ ಸ್ಟಾಬಲೈಸರ್ಸ್): ಮನೋರೋಗದ ಔಷಧಿಯೊಂದಿಗೆ ನೀಡಲಾಗುವ ಚಿತ್ತ ಸ್ಥಿರಕಾರಕಗಳು ಚಿತ್ತ ಸಂಬಂಧಿ ಅನಾರೋಗ್ಯ ನಿವಾರಣೆಗೆ ಸಹಕಾರಿಯಾಗಿವೆ. ಇವು ಮೆದುಳಿನಲ್ಲಿರುವ ಭಾವನೆ ಹಾಗೂ ನಡವಳಿಕೆಯನ್ನು ನಿಯಂತ್ರಿಸುವ ಕೆಲವು ನರ ಪ್ರೇಕ್ಷಕಗಳ ಸಮತೋಲನ ಕಾಪಾಡಲು ನೆರವಾಗುತ್ತದೆ. ಈ ಔಷಧವನ್ನು ಬೈಪೋಲಾರ್ ಡಿಸಾರ್ಡರ್ ವಾಸಿಮಾಡಲು ಉಪಯೋಗಿಸಲಾಗುತ್ತದೆ ಮತ್ತು ಈ ಔಷಧವು ಬೈಪೋಲಾರ್ ಡಿಸಾರ್ಡರಿನಲ್ಲಿ ಉನ್ಮಾದ ಸ್ಥಿತಿ ಮತ್ತು ಖಿನ್ನತೆ ಮರಳುವುದನ್ನು ತಡೆಗಟ್ಟುತ್ತದೆ. ಕೆಲವು ವೇಳೆ ಇವನ್ನು ತೀವ್ರವಾದ ಖಿನ್ನತೆಯ ಚಿಕಿತ್ಸೆಗೆ ಮತ್ತು ಸ್ಕಿಜೋಫ್ರೀನಿಯಾದಿಂದುಂಟಾದ ಖಿನ್ನತೆ ನಿವಾರಣೆಗೂ ಬಳಸುತ್ತಾರೆ.

 • ಮನೋವಿಕಾರ ನಿವಾರಣಾ ಔಷಧಗಳು( ಆಂಟಿ ಸೈಕೋಟಿಕ್): ಇವುಗಳನ್ನು ನ್ಯೂರೋಲೆಪ್ಟಿಕ್ಸ್ ಅಥವಾ ಪ್ರಧಾನ ಶಾಮಕಗಳೆಂದು ಕರೆಯುತ್ತಾರೆ. ಇವುಗಳನ್ನು ಸಾಮಾನ್ಯವಾಗಿ ಸ್ಕಿಜೋಫ್ರೀನಿಯಾದಂತಹ ಸಮಸ್ಯೆಗಳಿಂದುಂಟಾಗುವ ಲಕ್ಷಣಗಳ (ಭ್ರಮೆ,ಭ್ರಾಂತಿ,ಅಸಂಗತ ವಿಚಾರಗಳು,ಚಿತ್ತ ಚಾಂಚಲ್ಯ) ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಚಿಕಿತ್ಸೆಗಳು:

ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಮತ್ತು ಅನಾರೋಗ್ಯದಿಂದ ಚೇತರಿಸಿಕೊಳ್ಳುವಂತೆ ಮಾಡುವುದು ಯಾವುದೇ ಚಿಕಿತ್ಸೆಯ ಉದ್ದೇಶ. ಕೆಲವು ಜನರಿಗೆ ಔಷಧಗಳ ಜೊತೆಗೆ ಒಂದು ಚಿಕಿತ್ಸಾ ವಿಧಾನವನ್ನು ಸೂಚಿಸಲಾಗಿದ್ದರೆ ಇನ್ನು ಕೆಲವರಿಗೆ ಔಷಧದ ಜೊತೆಗೆ ಎರಡು ವಿಧದ ಚಿಕಿತ್ಸೆಯ ಸಲಹೆಯನ್ನು ನೀಡಿರಬಹುದು. ಚಿಕಿತ್ಸೆಯ ವಿಧಾನವು ಖಾಯಿಲೆಯ ಗಂಭೀರತೆಯನ್ನು ಹಾಗೂ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಮನೋಚಿಕಿತ್ಸೆ: ವೈದ್ಯಕೀಯ ತಜ್ಞರು (ಮನೋವೈದ್ಯರು ಅಥವಾ ಮನಶ್ಚಿಕಿತ್ಸೆಯಲ್ಲಿ ತರಬೇತಿ ಪಡೆದ ವೃತ್ತಿಪರ ಮನಃಶಾಸ್ತ್ರಜ್ಞರು) ಬಳಸುವ ವೈಜ್ಞಾನಿಕವಾಗಿ ಸಿದ್ಧಗೊಂಡ ವಿಧಾನ ಇದಾಗಿದ್ದು, ರೋಗಿಗಳಿಗೆ ತಮ್ಮ ಅಸಂಗತ, ಅತಾರ್ಕಿಕ ಯೋಚನೆಗಳನ್ನು ಧನಾತ್ಮಕ, ತಾರ್ಕಿಕ ಯೋಚನೆಗಳಾಗಿ ಬದಲಾಯಿಸಿಕೊಂಡು ಧನಾತ್ಮಕ ನಡವಳಿಕೆಯನ್ನು ರೂಪಿಸಿಕೊಳ್ಳಲು ಬೇಕಾದ ಆರೋಗ್ಯಕರ ವಿಧಾನಗಳನ್ನು ಕಲಿಸಿಕೊಡುತ್ತದೆ.

ಚಿಕಿತ್ಸಕರು ರೋಗಿಗಳನ್ನು ತಮ್ಮ ಲಕ್ಷಣಗಳು ಮತ್ತು ಇತರ ಸಮಸ್ಯೆಗಳ ಬಗ್ಗೆ ಮಾತನಾಡಲು ಉತ್ತೇಜಿಸುತ್ತಾರೆ ಮತ್ತು ಅವರಿಗೆ ತಮ್ಮ ಮನಸ್ಸು, ಭಾವನೆಗಳು, ಯೋಚನಾ ವಿಧಾನಗಳು, ನಡವಳಿಕೆಯನ್ನು ವಿಮರ್ಶಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಈ ಒಳನೋಟ ಮತ್ತು ತನ್ನನ್ನು ತಾನು ಅರ್ಥಮಾಡಿಕೊಳ್ಳುವಿಕೆಯಿಂದಾಗಿ ಆ ವ್ಯಕ್ತಿಯು ತನ್ನನ್ನು ನಿಭಾಯಿಸಲು ಮತ್ತು ತನ್ನ ಪರಿಸ್ಥಿತಿಯನ್ನು ನಿರ್ವಹಿಸಲು ತಕ್ಕಮಟ್ಟಿಗೆ ಸಮರ್ಥನಾಗುತ್ತಾನೆ. ಹಲವಾರು ರೀತಿಯ ಮನೋಚಿಕಿತ್ಸೆಗಳು ಲಭ್ಯವಿದ್ದು ಯಾವುದೇ ರೋಗವು ಇಂತಹುದೇ ನಿರ್ದಿಷ್ಟ ಚಿಕಿತ್ಸೆಯಿಂದ ವಾಸಿಯಾಗುತ್ತದೆಯೆಂಬ ಖಾತ್ರಿಯಿರುವುದಿಲ್ಲ.

ಕಾಗ್ನೆಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ): ಇದರಲ್ಲಿ ಎರಡು ವಿಧಗಳಿವೆ; ಕಾಗ್ನೆಟಿವ್ ಥೆರಪಿ (ಸಿಟಿ) ಮತ್ತು ಬಿಹೇವಿಯರಲ್ ಥೆರಪಿ (ಬಿಟಿ). ಕಾಗ್ನೆಟಿವ್ ಥೆರಪಿಯು ವ್ಯಕ್ತಿಯ ಯೋಚನಾ ಪ್ರಕ್ರಿಯೆ ಮತ್ತು ನಂಬಿಕೆಗಳು ಆತನ ಮನಸ್ಸು ಹಾಗೂ ಕ್ರಿಯೆಗಳ ಮೇಲೆ ಬೀರುವ ಪರಿಣಾಮದ ಮೇಲೆ ಕೇಂದ್ರಿಕೃತವಾಗಿರುತ್ತದೆ ಮತ್ತು ಅವರ ವಿಚಾರ ಸರಣಿಯನ್ನು ಹೆಚ್ಚು ಹೊಂದಿಸಲು ಹಾಗೂ ಆರೋಗ್ಯಕರವಾಗಿಸಲು ಪ್ರಯತ್ನಿಸುತ್ತದೆ. ಬಿಹೇವಿಯರ್ ಥೆರಪಿಯು ವ್ಯಕ್ತಿಯ ಕಾರ್ಯಗಳ ಮೇಲೆ ಕೇಂದ್ರಿಕೃತವಾಗಿದ್ದು ಅವರ ಅನಾರೋಗ್ಯಕರ ನಡವಳಿಕೆಯನ್ನು ಬದಲಾಯಿಸಲು ನೆರವಾಗುತ್ತದೆ.

ಸಿಬಿಟಿಯು ವ್ಯಕ್ತಿಯು ತನ್ನ ಸಮಸ್ಯೆಯನ್ನು ಗುರುತಿಸಲು ಮತ್ತು ಅದನ್ನು ಪರಿಹರಿಸಿಕೊಳ್ಳಲು ನೆರವಾಗುತ್ತದೆ. ರೋಗಿ ಹಾಗೂ ಚಿಕಿತ್ಸಕರಿಬ್ಬರೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಚಿಕಿತ್ಸಕರು ರೋಗಿಗೆ ತನ್ನ ವಿಕೃತ ಮತ್ತು ಅಪ್ರಯೊಜಕ ಯೋಚನೆಗಳನ್ನು ಗುರುತಿಸಲು ಮತ್ತು ಅಸ್ಪಷ್ಟ, ಅವೈಚಾರಿಕ ಮತ್ತು ಅರ್ಥಹೀನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಲು ಹಾಗೂ ಅದರಂತೆ ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು ಇತರರ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತಾರೆ.

ತನ್ನ ಸಮಸ್ಯೆಗಳ ಅರಿವಿರುವ ರೋಗಿಗಳ ಚಿಕಿತ್ಸೆಗೆ ಸಿಬಿಟಿಯು ಸಹಕಾರಿಯಾಗಿದೆ. ಏಕೆಂದರೆ ಈ ಚಿಕಿತ್ಸೆಯು ರೋಗಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಅಪೇಕ್ಷಿಸುತ್ತದೆ. ಹಾಗೂ ಇದು ತಮ್ಮ ಮನಸ್ಥಿತಿಯ ಕುರಿತು ಡೈರಿ ನಿರ್ವಹಿಸುವುದು, ಅಪ್ರಯೋಜಕ ವಿಚಾರವನ್ನು ಗುರುತಿಸುವುದು ಹಾಗೂ ಧನಾತ್ಮಕ ಅಂಶಗಳನ್ನು ದಾಖಲಿಸುವುದು ಮುಂತಾದ ಹೋಂವರ್ಕ್ ಗಳನ್ನು ಒಳಗೊಂಡಿದೆ.

ಹಲವು ಮಾನಸಿಕ ಖಾಯಿಲೆಗಳಿಗೆ, ಉದಾಹರೆಣೆಗೆ ಖಿನ್ನತೆ, ಆತಂಕ, ತಿನ್ನುವ ಗೀಳು ಮತ್ತು ಬೈಪೋಲಾರ್ ಡಿಸಾರ್ಡರ್ ಗೆ ಚಿಕಿತ್ಸೆ ನೀಡಲು ಸಿಬಿಟಿ ವಿಧಾನವನ್ನು ಬಳಸಬಹುದಾಗಿದೆ.

ಇಂಟರ್ ಪರ್ಸನಲ್ ಥೆರಪಿ (ಐಪಿಟಿ): ವ್ಯಕ್ತಿಯು ಇನ್ನೊಬ್ಬರೊಂದಿಗೆ ಸಂವಹಿಸುವ ರೀತಿಯನ್ನು ಮತ್ತು ಸಂವಹನವನ್ನು ಸುಧಾರಿಸಲು ಈ ವಿಧಾನವನ್ನು ಬಳಸುತ್ತಾರೆ. ಯಾವಾಗ ಒಬ್ಬ ವ್ಯಕ್ತಿಯ ನಡವಳಿಕೆಯಿಂದ ತೊಂದರೆಯುಂಟಾಗುತ್ತಿರುತ್ತದೆಯೋ ಆಗ ಐಪಿಟಿಯು ಆ ವ್ಯಕ್ತಿಗಳಿಗೆ ತಮ್ಮ ಸಮಸ್ಯೆಯನ್ನು ಗುರುತಿಸಲು ಮತ್ತು ಅವುಗಳನ್ನು ಬದಲಾಯಿಸಿಕೊಳ್ಳಲು ನೆರವಾಗುತ್ತದೆ. ಐಪಿಟಿಯನ್ನು ಔಷಧಗಳ ಜೊತೆಯಲ್ಲಿಯೂ ಬಳಸಬಹುದು. ಸಂಶೋಧನೆಗಳ ಪ್ರಕಾರ, ಐಪಿಟಿಯ ಪರಿಣಾಮವು ಖಾಯಿಲೆಯ ಗಂಭೀರತೆ ಮತ್ತು ಚಿಕಿತ್ಸೆಯನ್ನು ಸರಿಯಾಗಿ ಅನುಸರಿಸಲು ವ್ಯಕ್ತಿಯು ನೀಡುವ ಸಹಕಾರವನ್ನವಲಂಬಿಸಿದೆ.

ಕೌಟುಂಬಿಕ ಚಿಕಿತ್ಸೆ: ಇಲ್ಲಿ ರೋಗಿ ಹಾಗೂ ಅವರ ಮನೆಯ ಸದಸ್ಯರೆಲ್ಲರಿಗೂ ಚಿಕಿತ್ಸಾ ಸೆಷನ್ ನಡೆಸಲಾಗುವುದು ಮತ್ತು ಕೌಟುಂಬಿಕ ಸಂಬಂಧವನ್ನು ಸುಧಾರಿಸಿ ಆ ಮೂಲಕ ರೋಗಿಯ ಚೇತರಿಕೆ ಮತ್ತು ಆರೈಕೆಯಲ್ಲಿ ಸುಧಾರಣೆಯನ್ನು ಸಾಧಿಸಲಾಗುವುದು.

ಮನೆಯ ಸದಸ್ಯರೊಂದಿಗೆ ಸೇರಿ ರೋಗಿಯ ಅನಾರೋಗ್ಯವನ್ನು ಹೆಚ್ಚಿಸುತ್ತಿರುವ ಮನೆಯ ಸಮಸ್ಯೆಯನ್ನು ಕಂಡುಹಿಡಿಯಲು ಚಿಕಿತ್ಸಕರು ಶ್ರಮಿಸುತ್ತಾರೆ. ಮತ್ತು ಈ ಸಮಸ್ಯೆಗಳನ್ನು ಮನೆಯವರ ಸಹಕಾರದಿಂದ ಪರಿಹರಿಸಲಾಗುತ್ತದೆ.

ಚಿಕಿತ್ಸಕರು ಮನೆಯ ಸದಸ್ಯರಿಗೆ ಅವರ ಪ್ರೀತಿಪಾತ್ರರ ಅನಾರೋಗ್ಯ ಮತ್ತು ಅದರ ಲಕ್ಷಣಗಳ ಬಗ್ಗೆ ತಿಳಿಸುತ್ತಾರೆ. ಮನೆಯ ಸದಸ್ಯರಿಂದ ರೋಗಿಯ ಕುರಿತು ಟೀಕೆ ಅಥವಾ ಅಸ್ನೇಹಿ ಮನೋಭಾವವು (ಅವರಿಗೆ ತಿಳಿಯದೆಯೇ ಅನಾರೋಗ್ಯ ಕಾರಣದಿಂದ) ವ್ಯಕ್ತವಾಗಿದ್ದರೆ ಅಂತಹ ಋಣಾತ್ಮಕ ಮನೊಭಾವವನ್ನು ಸರಿಪಡಿಸಲು ಚಿಕಿತ್ಸಕರು ಸಹಾಯ ಮಾಡುತ್ತಾರೆ. ಅದೇ ಸಮಯದಲ್ಲಿ ರೋಗಿಯು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಆತನು ಚಿಕಿತ್ಸೆಗೆ ಸಹಕಾರ ನೀಡುವುದು ಅಗತ್ಯವಾಗಿದ್ದು ಇದಕ್ಕೆ ಮನೆಯವರ ಬೆಂಬಲ ಮತ್ತು ಆರೈಕೆಯ ಅಗತ್ಯವಿದೆಯೆಂಬುದನ್ನು ತಿಳಿಸುತ್ತಾರೆ. ಕೌಟುಂಬಿಕ ಥೆರಪಿಯು ದೀರ್ಘವಾದ ಆರೈಕೆ ನೀಡುವಿಕೆಯಿಂದ ಮನೆಯ ಸದಸ್ಯರಲ್ಲಿ ಒತ್ತಡ ಉಂಟಾಗಿದ್ದಲ್ಲಿ ಅದನ್ನು ಕೂಡಾ ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಾರೆ.

ಪ್ರಮುಖ ಸಂಗತಿ: ಈ ಚಿಕಿತ್ಸೆಗಳು ಔಷಧಿಯ ಪರಿಣಾಮವನ್ನು ಹೆಚ್ಚಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಔಷಧಿಯ ಜೊತೆಗೆ ಮನೋಚಿಕಿತ್ಸೆಯನ್ನು ನೀಡುವ ಅಗತ್ಯವಿರುತ್ತದೆ. ಉದಾಹರೆಣೆಗೆ ಅಲ್ಪ ಖಿನ್ನತೆಯಿದ್ದಾಗ ಸಿಬಿಟಿಯ ಜೊತೆ ಬೆಂಬಲಾತ್ಮಕ ಮನೋಚಿಕಿತ್ಸೆಯು ಉತ್ತಮ ಪಲಿತಾಂಶ ನೀಡುತ್ತದೆ. ಅದೇ ರೀತಿ ತೀವ್ರ ಖಿನ್ನತೆಯಿದ್ದಾಗ ಔಷಧಿಯ ಚಿಕಿತ್ಸೆ (ಮೊದಲ ಆದ್ಯತೆಯ ಚಿಕಿತ್ಸೆ) ಮತ್ತು ಮನೋಚಿಕಿತ್ಸೆಯ ಸಂಯೋಜನೆಯು ಉತ್ತಮ ಫಲ ನೀಡಬಲ್ಲದು. ಆದರೆ ಮನೋವಿಕಾರದಂತಹ ಅನಾರೋಗ್ಯವಿದ್ದಾಗ ಮನೋಚಿಕಿತ್ಸೆಯು ಪ್ರಯೋಜನವಾಗದೇ ಇರಬಹುದು ಮತ್ತು ಔಷಧಗಳಿಂದ ಮಾತ್ರ ಉಪಯೋಗವಿರಬಹುದು.

ಮೆದುಳನ್ನು ಉತ್ತೇಜಿಸುವ ಚಿಕಿತ್ಸೆಗಳು:

ಔಷಧಗಳು ಮತ್ತು ಮನೋಚಿಕಿತ್ಸೆ ಯಾವುದೇ ರೀತಿಯ ಪರಿಣಾಮ ಬೀರಲು ವಿಫಲವಾದಾಗ ಮಾತ್ರ ಮೆದುಳನ್ನು ಉತ್ತೇಜಿಸುವ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಇವುಗಳನ್ನು ತೀವ್ರ ವೈದ್ಯಕೀಯ ಪರೀಕ್ಷೆಯ ನಂತರ ಮತ್ತು ಹಲವು ವೈದ್ಯರ ತಂಡವು ಈ ಚಿಕಿತ್ಸೆಯಿಂದ ರೋಗಿಗೆ ಲಾಭವಿದೆಯೆಂದು ನಿರ್ಧರಿಸಿದಾಗ ಮಾತ್ರ ಕೆಲವು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಪ್ರಯೋಗಿಸಲಾಗುತ್ತದೆ.

ಪ್ರಮುಖ ಸಂಗತಿ: ಈ ಸಂದರ್ಭದಲ್ಲಿ ರೋಗಿ ಹಾಗೂ ಆತನ ಆರೈಕೆನಿರತರು ಈ ಚಿಕಿತ್ಸೆ ಹಾಗೂ ಅದರ ಅಡ್ಡ ಪರಿಣಾಮಗಳ ಬಗ್ಗೆ ಸಂಪೂರ್ಣ ತಿಳಿದಿರಬೇಕು. ರೋಗಿ ಮತ್ತು ಅವರ ಆರೈಕೆದಾರರು ಒಪ್ಪಿಗೆ ನೀಡಿದ ಮೇಲಷ್ಟೇ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಇಲೆಕ್ಟ್ರೋಕನ್ವಲ್ಸಿವ್ ಥೆರಪಿ (ಇಸಿಟಿ): ನಿರ್ದಿಷ್ಟ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಈ ವಿಧಾನದಲ್ಲಿ ವಿದ್ಯುತ್ ಪ್ರವಾಹವನ್ನು ಮೆದುಳಿಗೆ ಹರಿಸಲಾಗುತ್ತದೆ. ಇಸಿಟಿ ಚಿಕಿತ್ಸೆಯನ್ನು ಯಾವಾಗ ಮತ್ತು ಏಕೆ ಬಳಸುತ್ತಾರೆ ಎಂದು ಇಲ್ಲಿ ಓದಿ ( ಇಸಿಟಿ ಲೇಖನಕ್ಕೆ ಲಿಂಕ್ ಒದಗಿಸಿರಿ)

ಟ್ರಾನ್ಸಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಶನ್ (ಟಿಎಮ್ಎಸ್): ಕೆಲವು ಮಾನಸಿಕ ಆರೋಗ್ಯವನ್ನು ಚಿಕಿತ್ಸೆಗೊಳಪಡಿಸಲು ಕಾಂತೀಯ ಕ್ಷೇತ್ರಗಳನ್ನು ಬಳಸಿ ಮೆದುಳಿನಲ್ಲಿರುವ ನರಕೋಶವನ್ನು ಉತ್ತೇಜಿಸಲಾಗುತ್ತದೆ.

ಒಂದು ನಿರ್ದಿಷ್ಟ ಚಿಕಿತ್ಸೆಯು ಪ್ರಯೋಜನಕಾರಿ ಎಂದು ತಿಳಿಯುವುದು ಹೇಗೆ?

ಮಾನಸಿಕ ಆರೋಗ್ಯ ತಜ್ಞರು ರೋಗದ ವೈದ್ಯಕೀಯ ಹಿನ್ನೆಲೆಯನ್ನು ತಿಳಿದುಕೊಂಡು, ಲಕ್ಷಣಗಳನ್ನು ಪರಿಶೀಲಿಸಿ, ಕೂಲಂಕುಷ ಪರೀಕ್ಷೆಗಳನ್ನು ಮಾಡಿ, ಮನೆಯವರೊಡನೆ ಸಮಾಲೋಚಿಸಿ ರೋಗವನ್ನು ನಿಖರವಾಗಿ ನಿರ್ಧರಿಸಿದ ನಂತರವಷ್ಟೇ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಸೂಚಿಸುತ್ತಾರೆ. ರೋಗಿ ಮತ್ತು ಅವರ ಆರೈಕೆದಾರರಿಗೆ ಈ ಕುರಿತು ಎಲ್ಲಾ ಮಾಹಿತಿಗಳನ್ನು ನೀಡಲಾಗುವುದು. ಚಿಕಿತ್ಸೆಯು ಹೇಗೆ ತನ್ನ ಚೇತರಿಕೆಗೆ ನೆರವಾಗಲಿದೆ ಎಂದು ರೋಗಿಯು ಸಮಾಲೋಚಿಸುವ ಸ್ಥಿತಿಯಲ್ಲಿದ್ದರೆ, ಚಿಕಿತ್ಸಕರು ಅವರಿಗೆ ಎಲ್ಲವನ್ನೂ ತಿಳಿಸುತ್ತಾರೆ. ಇಲ್ಲದಿದ್ದರೆ ಒಂದೊಮ್ಮೆ ರೋಗಿಯ ಮನೆಯವರು ರೋಗದ ಬಗ್ಗೆ ಸಾಕಷ್ಟು ತಿಳಿದಿದ್ದು ಅದಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ ಎಂಬ ಅರಿವನ್ನು ಹೊಂದಿದ್ದರೆ ಬಹಳ ಪ್ರಯೋಜನವಾಗುತ್ತದೆ. ಆಗ ಚಿಕಿತ್ಸಕರು ಮತ್ತು ಮನೆಯವರ ಸಹಕಾರದಿಂದ ಚಿಕಿತ್ಸೆಗೆ ನೆರವಾಗಬಹುದು.

ಮಾನಸಿಕ ಅನಾರೋಗ್ಯದ ಚಿಕಿತ್ಸೆಗೆ ಯೋಗವು ನೆರವಾಗುತ್ತದೆಯೇ?

ಯೋಗವು ಹಲವು ಬಗೆಯ ಮಾನಸಿಕ ಅನಾರೋಗ್ಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಹೆಚ್ಚುವರಿ ಚಿಕಿತ್ಸಾ ವಿಧಾನವಾಗಿದೆ ಎಂದು ಕಳೆದ ದಶಕದಲ್ಲಿ ನಡೆಸಿದ ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚು ತಿಳಿಯಲು ಡಾ. ಶಿವರಾಮ ವಾರಂಬಲ್ಲಿಯವರ ಸಂದರ್ಶನವನ್ನು ಓದಿ. ಅವರು ಮಾನಸಿಕ ಅನಾರೋಗ್ಯಕ್ಕೆ ಹೆಚ್ಚುವರಿ ಚಿಕಿತ್ಸೆಯಾಗಿ ಯೋಗವು ಹೇಗೆ ಲಾಭದಾಯಕವಾಗಿದೆ ಎಂಬುದನ್ನು ವಿವರಿಸುತ್ತಾರೆ.

ಮಾನಸಿಕ ರೋಗದ ಔಷಧಗಳ ಅಡ್ಡಪರಿಣಾಮಗಳೇನು?

ಔಷಧಗಳು ಅಡ್ಡಪರಿಣಾಮ ಹೊಂದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೆಲವು ವ್ಯಕ್ತಿಗಳಿಗೆ ಅಡ್ಡಪರಿಣಾಮವು ಅನುಭವಕ್ಕೆ ಬರುವುದಿಲ್ಲ ಅಥವಾ ಅವರು ಅದನ್ನು ನಿಭಾಯಿಸಲು ಶಕ್ತರಾಗಿರುತ್ತಾರೆ. ಮಾನಸಿಕ ರೋಗಕ್ಕೆ ನೀಡುವ ಔಷಧಗಳ ವಿಷಯದಲ್ಲಿಯೂ ಅಡ್ಡಪರಿಣಾಮಗಳ ಮಾಹಿತಿಯನ್ನು ನಿಮಗೆ ನೀಡಿರುವ ಔಷಧಗಳ ಜೊತೆಯಿರುವ ಮಾಹಿತಿ ಹಾಳೆಯಲ್ಲಿ ನಮೂದಿಸಲಾಗಿರುತ್ತದೆ. ನಿಮ್ಮ ವೈದ್ಯರೊಂದಿಗೆ ಅಂತಹ ಅಡ್ಡಪರಿಣಾಮಗಳ ಬಗ್ಗೆ ಹಾಗೂ ಅವನ್ನು ನಿರ್ವಹಿಸುವ ಬಗ್ಗೆ ಚರ್ಚಿಸಿ ತಿಳಿದುಕೊಳ್ಳಿ.

ಮಾನಸಿಕ ರೋಗಕ್ಕೆ ನೀಡುವ ಔಷಧಗಳ ಕೆಲವು ಅಡ್ಡಪರಿಣಾಮಗಳೆಂದರೆ:

 • ನಿದ್ರೆ ಮತ್ತು ನಿಧಾನತೆ

 • ತೂಕ ಹೆಚ್ಚುವುದು

 • ಸಕ್ಕರೆ ಖಾಯಿಲೆಗೆ ಒಳಗಾಗುವ ಸಾಧ್ಯತೆ

 • ರಕ್ತದೊತ್ತಡದಲ್ಲಿ ಏರುಪೇರು ಮತ್ತು ತಲೆತಿರುಗುವುದು

 • ಋಣಾತ್ಮಕ ಲಕ್ಷಣಗಳು, ಕಡಿಮೆ ಉತ್ತೇಜನ, ಆಸಕ್ತಿ ಹೀನತೆ, ಕಡಿಮೆಯಾದ ಸ್ವಯಂ ಕಾಳಜಿ

 • ನೀವು ಈ ಕೆಳಗಿನ ಪ್ರಮುಖ ವಿಚಾರಗಳ ಬಗ್ಗೆ ಚಿಂತಿಸುವುದು ಒಳಿತು

 • ಔಷಧಿಯು ಹೊಂದಿರುವ ಸಣ್ಣ ಅಡ್ಡಪರಿಣಾಮಗಳಿಗಿಂತ ಅದರ ಪ್ರಯೋಜನವು ಮುಖ್ಯವಾಗಿದೆ.

 • ಔಷಧವು ನಿಮ್ಮ ಚೇತರಿಕೆಗೆ ಸಹಾಯ ಮಾಡಲು ನಿಮ್ಮ ವೈದ್ಯರು ತಿಳಿಸಿದ ಸಮಯದಲ್ಲಿಯೇ ತೆಗೆದುಕೊಳ್ಳಿರಿ.

 • ನೀವು ನಿಯಮಿತವಾಗಿ ಕೆಲ ಸಮಯದವರೆಗೆ ಔಷಧವನ್ನು ತೆಗೆದುಕೊಂಡರೆ ಅಡ್ಡಪರಿಣಾಮಗಳು ನಿಲ್ಲಬಹುದು.

 • ನಿಮ್ಮ ಅಡ್ಡಪರಿಣಾಮ ಹಾಗೆಯೇ ಇದ್ದು ನಿಮಗೆ ಔಷಧಿ ತೆಗೆದುಕೊಳ್ಳಲು ಹಿಂಜರಿಕೆಯಾಗುತ್ತಿದ್ದರೆ ವೈದ್ಯರಿಗೆ ತಿಳಿಸಿ ಅವರು ನಿಮ್ಮ ಡೋಸನ್ನು ಕಡಿಮೆ ಮಾಡಬಹುದು ಅಥವಾ ಬೇರೆ ಔಷಧಿ ನೀಡಬಹುದು.

 • ಚಿಕಿತ್ಸೆಯ ಯಾವುದೇ ಅವಧಿಯಲ್ಲಿ ವೈದ್ಯರು ಹೇಳಿದ ಹೊರತು ಹಠಾತ್ತಾಗಿ ಔಷಧ ಸೇವನೆಯನ್ನು ನಿಲ್ಲಿಸಬೇಡಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org