ನಮ್ಮ ಸಹಾನುಭೂತಿಯೇ ನಮ್ಮನ್ನು ರಕ್ಷಿಸುತ್ತದೆ
ಆರೋಗ್ಯವಂತರಾಗಿರುವುದು

ನಮ್ಮ ಸಹಾನುಭೂತಿಯೇ ನಮ್ಮನ್ನು ರಕ್ಷಿಸುತ್ತದೆ

ನಮ್ಮ ಸಹಾನುಭೂತಿಯೇ ನಮ್ಮನ್ನು ರಕ್ಷಿಸುತ್ತದೆ

ನಮ್ಮನ್ನು ಕಾಡುತ್ತಿರುವ ಆತಂಕದ ಬಗ್ಗೆ ನಮಗೆ ಅರಿವಿದೆ ಎಂದರೆ ನಾವೇ ಅದೃಷ್ಟವಂತರು. ಅರಿವಿಲ್ಲದವರು ಕೆಲವು ಅಂಶಗಳನ್ನು ಅರಿತಿರಬೇಕು. ತಲೆನೋವು, ಬೆನ್ನು ನೋವು, ಹೊಟ್ಟೆ ನೋವು, ಮೈಗ್ರೇನ್, ಸೋಮಾರಿತನ, ತೂಕಡಿಕೆ, ನಿರಾಸಕ್ತಿ, ಬೇಸರ ಇವೆಲ್ಲವದ ಬಗ್ಗೆ ತಿಳಿದುಕೊಂಡಿರಬೇಕು.

ಆತಂಕ ಎನ್ನುವುದು, ನಮ್ಮ ದೇಹದ ವ್ಯವಸ್ಥೆಗೆ ಏನೋ ಅಪಾಯ ಉಂಟಾಗಲಿದೆ ಎಂಬ ಸೂಚನೆ. ಅದು ಎಚ್ಚರಿಕೆಯೂ ಹೌದು. ಈ ಎಚ್ಚರಿಕೆಯ ಮಾತನ್ನು ನಾವು ಕೇಳಿಸಿಕೊಳ್ಳಬೇಕು. ಆಗ ಅಪಾಯವನ್ನು ತಡೆಗಟ್ಟಲು ಮುನ್ನಡೆಯುವಂತೆ ಮಾನಸಿಕವಾಗಿ ಜಾಗೃತಿ ಮೂಡಿಸುತ್ತದೆ.  ಹೋರಾಡು,. ಓಡಿಹೋಗು, ಸಮಸ್ಯೆಯನ್ನು ನಿವಾರಿಸು, ಪ್ರಾಣಾಪಾಯದಿಂದ ರಕ್ಷಿಸಿಕೋ ಹೀಗೆ ಸೂಚನೆಗಳನ್ನು ನೀಡುತ್ತದೆ. ಹಾಗಾಗಿ ಪ್ರಸ್ತುತ ನಾವು ಎದುರಿಸುತ್ತಿರುವ ಕೊರೋನಾ ಭೀತಿಗೆ ನಮ್ಮ ನಿರೀಕ್ಷಿತ ಪ್ರತಿಕ್ರಿಯೆ ಎಂದರೆ ಮನೆಯಲ್ಲೇ ಇರುವುದು, ಏನೂ ಮಾಡದೆ ಇರುವುದು.

ಓರ್ವ ಮನೋರೋಗ ಚಿಕಿತ್ಸಕರಾಗಿ, ಅತಿ ಹೆಚ್ಚು ಆತಂಕಕ್ಕೊಳಗಾಗಿರುವ ಜನರೊಡನೆ ಕೆಲಸ ಮಾಡುವುದು ಮತ್ತು ಅವರ ಉತ್ಕಟ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ನನ್ನ ನಿತ್ಯದ ಕೆಲಸ. ಹೀಗಿದ್ದರೂ, ನನ್ನ ಬಳಿ ಬರುವ ಗ್ರಾಹಕರಿಗೆ, ನೀವು ಸಕ್ರಿಯವಾಗಿರುವುದಕ್ಕೆ ನಿಮ್ಮೊಳಗಿನ ಭಾವಾವೇಶವೇ ಸಾಕ್ಷಿ ಎಂದು ನಂಬಿಸುವುದು ಬಹಳ ಕಷ್ಟ.  ಬೇಸರ, ಖುಷಿ ಮತ್ತು ಕೋಪ ಇವೆಲ್ಲವೂ ನಮ್ಮಲ್ಲಿ ಜೀವಂತಿಕೆ ಇರುವುದಕ್ಕೆ ಸಾಕ್ಷಿ. ಸಹಾನುಭೂತಿ ಮತ್ತು ಪಾಪಪ್ರಜ್ಞೆ ಇವೆರಡೂ ಅತಿ ಹೆಚ್ಚು ನೋವು ಕೊಡುವ ಭಾವನೆಗಳಾದರೂ ಅದು ನಮ್ಮೊಳಗಿನ ಮಾನವೀಯತೆಯ ಸಂಕೇತ. ಮತ್ತೊಬ್ಬ ವ್ಯಕ್ತಿಯ ಬಗ್ಗೆ ನಮ್ಮಲ್ಲಿರುವ ಭಾವನೆಗಳಲ್ಲೇ ಅತ್ಯಂತ ಅಮೂಲ್ಯವಾದ ಭಾವನೆಗಳು ಇವು. ಆದರೂ ನನ್ನ ಗ್ರಾಹಕರು ಆಗಾಗ್ಗೆ “ ನನಗೇನೂ ಅನಿಸುವುದಿಲ್ಲ ” “ ನಾನು ಮೌನವಾಗಿದ್ದುಬಿಡುತ್ತೇನೆ ” ಎಂದೆಲ್ಲಾ ಹೇಳುತ್ತಲೇ ಇರುತ್ತಾರೆ. ಹೀಗಿದ್ದರೆ ನೀವು ಜೀವಂತವಾಗಿರಲು ಬಯಸುತ್ತೀರಿ ಆದರೆ ಯಾವುದೇ ಭಾವನೆಗಳಿಲ್ಲದ ರೋಬೋಟ್ ಹಾಗೆ ಇರಲು ಬಯಸುತ್ತೀರಿ ಎಂದು ನನ್ನ ಪುಸ್ತಕದಲ್ಲಿ ಹೇಳಿದ್ದೇನೆ.

ಲಾಕ್ ಡೌನ್ ಸಂದರ್ಭದಲ್ಲಿ ರೋಬೋಟುಗಳಂತಾಗುವುದು  ಸುಲಭ. ಅದರಲ್ಲೂ ನಾವು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕಾಲ ಲಾಕ್ ಡೌನ್ ಆದರೆ ಹೀಗಾಗುತ್ತದೆ. ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಸಹ, ಜೀವನ ಸಹಜ ಸ್ಥಿತಿಗೆ ಮರಳುತ್ತದೆ ಎನ್ನುವ ನಮ್ಮ ನಂಬಿಕೆ ಕುಸಿದುಬಿದ್ದಾಗ ನಮ್ಮಲ್ಲಿ ಬಹುಪಾಲು ಜನರು ಲಾಕ್ ಡೌನ್ ಸಂದರ್ಭವನ್ನು ಹೇಗೆ ಎದುರಿಸುವುದು ಎಂದು ತಿಳಿಯದೆ ಹೆಣಗಾಡುತ್ತೇವೆ. ಲಾಕ್ ಡೌನ್ ರೋಬೋಟುಗಳಂತೆ ಆಗದಿರಲು ಏನು ಮಾಡಬೇಕು ಎಂದು ಯೋಚಿಸುತ್ತೇವೆ.

ನಮ್ಮಲ್ಲಿ ಅನೇಕರಿಗೆ, ಸಂಬಂಧಗಳು, ನೌಕರಿ ಮತ್ತು ನಮ್ಮ ಭಾವನೆಗಳನ್ನು ಕೆರಳಿಸುವ ಪ್ರತಿ ಸ್ಪಂದನೆಗಳು ಮನೆಯಿಂದ ಹೊರಗೆ ಇರುತ್ತವೆಯೇ ಹೊರತು, ಏಕಾಂಗಿಯಾಗಿದ್ದಾಗ ಇರುವುದಿಲ್ಲ. ನಮ್ಮ ನೌಕರಿ ಮತ್ತು ದುಡಿಮೆ ನಮ್ಮ ಭಾವನಾತ್ಮಕ ಜೀವನವನ್ನು ತೆಪ್ಪಗಾಗಿಸುತ್ತವೆ. ನಾವು ದುಡಿಮೆಯಲ್ಲಿ ತೊಡಗಿದ್ದಾಗ ಕೈಗಳು ಕೆಲಸ ಮಾಡುತ್ತಿರುತ್ತವೆ ಮಿದುಳೂ ಸಹ ಸಕ್ರಿಯವಾಗಿರುತ್ತದೆ.  ಇದು ನಮ್ಮ ಅಸ್ತಿತ್ವವನ್ನು ರೂಪಿಸುತ್ತವೆ. ಜೀವನಕ್ಕೆ ಅರ್ಥ ಕೊಡುತ್ತವೆ. ತಿಂಗಳ ಕೊನೆಯಲ್ಲಿ ವೇತನ ಪಡೆಯುವ ದೃಷ್ಟಿಯಿಂದಲೇ ಆದರೂ ಇದು ಸತ್ಯವೇ. ಲಾಕ್ ಡೌನ್ ಸಮಯದಲ್ಲಿ ನಮಗೆ ಕೆಲಸ ಇಲ್ಲದಿದ್ದರೆ, ಆಗ ನಮಗೆ ಕೆಲಸವಿಲ್ಲದ ಕೈಗಳು ಮತ್ತು ಮಿದುಳು, ನಾವು ಯಾವುದಕ್ಕೂ ಪ್ರಯೋಜನವಿಲ್ಲ ಎನ್ನುವುದನ್ನು ಎತ್ತಿ ತೋರುತ್ತವೆ.

ಲಾಕ್ ಡೌನ್ ರೋಬೋಟುಗಳನ್ನು ನಾನೇಕೆ ವಿರೋಧಿಸುತ್ತೇನೆ ? ಏಕೆಂದರೆ ಒಮ್ಮೆ ಈ ಸ್ಥಿತಿಗೆ ತಲುಪಿಬಿಟ್ಟರೆ ಅದರಿಂದ ಹೊರಬರುವುದು ಬಹಳ ಕಷ್ಟವಾಗುತ್ತದೆ. ಯಾವುದೇ ರೀತಿಯ ಭಾವನೆಗಳಿಲ್ಲದೆ ಒಮ್ಮೆ ರೋಬೋಟುಗಳಂತಾಗಿಬಿಟ್ಟರೆ, ಇದು ಜೀವನದ ಎಲ್ಲ ವಿಷಯಗಳಲ್ಲೂ ಹರಡುತ್ತದೆ, ಜೀವನದ ಹರುಷವನ್ನು ಕಸಿದುಕೊಳ್ಳುತ್ತದೆ. ಜುಗುಪ್ಸೆ ಉಂಟುಮಾಡುತ್ತದೆ. ಭಾರವಾದ ಹೃದಯ ಹೊತ್ತ ದೇಹ ಚಲಿಸುವ ಶವದಂತೆ ಆಗಿಬಿಡುತ್ತದೆ.

ನಾನು ಕೆಲಸ ಮಾಡುವ ಕ್ಷೇತ್ರದಲ್ಲಿ ಇದನ್ನು ಪರಿಣಾಮದ ಪ್ರತ್ಯೇಕೀಕರಣ ಅಥವಾ ಅನಾಸಕ್ತಿ ಎಂದು ಗುರುತಿಸಲಾಗುತ್ತದೆ. ಹೀಗಾದಾಗ ನೀವು ಒಬ್ಬರ ಭಾವಾವೇಶದ ಬಗ್ಗೆ ( ಕೋಪ, ಬೇಸರ, ಆತಂಕ, ಖುಷಿ) ಮಾತನಾಡುತ್ತೀರಿ ಆದರೆ ನಮ್ಮ ದೇಹದಲ್ಲೇ ಅದರ ಅನುಭವ ಉಂಟಾಗುವುದರ ಬಗ್ಗೆ ನಿಮಗೆ ತಿಳಿಯುವುದೇ ಇಲ್ಲ. ಇದು ಒಂದು ರೀತಿಯ ರಕ್ಷಣಾ ತಂತ್ರಗಾರಿಕೆ. ನಮ್ಮ ಅತಿ ಹತ್ತಿರದ ಸಂಬಂಧಗಳಲ್ಲಿ ಉಂಟಾಗುವ ನೋವು ಮತ್ತು ಆಕ್ರೋಶದಿಂದ ರಕ್ಷಿಸಿಕೊಳ್ಳಲು ಬಾಲ್ಯದಲ್ಲೇ ಇದು ಹುಟ್ಟಿಕೊಳ್ಳುತ್ತದೆ. ನಂತರದ ಜೀವನದಲ್ಲಿ ಯಾವುದೋ ಒಂದು ಸಂಬಂಧವನ್ನು ರಕ್ಷಿಸಿಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ಇದು ತಂತಾನೇ ನಮ್ಮಲ್ಲಿ ಮೂಡುತ್ತದೆ. ಹಾಗೆಯೇ ನಮ್ಮೆದುರಿನ ವ್ಯಕ್ತಿಯ ಕೆಲಸದಿಂದ, ವರ್ತನೆಯಿಂದ ನಮಗೆ ನೋವಾಗದಂತೆ ರಕ್ಷಿಸಿಕೊಳ್ಳಲು ನೆರವಾಗುತ್ತದೆ. ಇಲ್ಲಿ ಮೂಲ ಉದ್ದೇಶ ನಮ್ಮ ಭಾವನಾತ್ಮಕ ರಕ್ಷಣೆಯಾಗಿರುತ್ತದೆ. ದುರದೃಷ್ಟವಶಾತ್ ಇದೇ ಕಾರಣದಿಂದ ಈ ಧೋರಣೆ ನಮ್ಮಲ್ಲಿ ಹಾಗೆಯೇ ಉಳಿದು, ದೀರ್ಘ ಕಾಲದ ನಂತರ ಅದನ್ನು ಹೋಗಲಾಡಿಸಲೂ ಸಾಧ್ಯವಾಗುವುದಿಲ್ಲ. ಇದು ನಮ್ಮ ದೇಹದ ಕಾರ್ಯವೈಖರಿಯಲ್ಲಿ ಕಾಣುವ ಸಹಜ ಪ್ರವೃತ್ತಿ. ನಾವು ಬಾಲ್ಯದಲ್ಲಿ ಕಲಿತ ಕೆಲವನ್ನು ಹೋಗಲಾಡಿಸುವುದು ಅಸಾಧ್ಯವಾಗಿಬಿಡುತ್ತದೆ. 

ತುರ್ತು ಅವಶ್ಯಕತೆ ಇರುವ ಸಂದರ್ಭದಲ್ಲಿ ನಮ್ಮ ಮನದಾಳದಲ್ಲಿ ನಮಗೇ ತಿಳಿಯದಂತೆ ತಂತಾನೇ ನೆಲೆಗೊಳ್ಳುವ ಸ್ವರಕ್ಷಣೆಯ ತಂತ್ರಗಾರಿಕೆ ಕ್ರಮೇಣ ನಮ್ಮನ್ನು , ನಾವು ಅನುಭವಿಸುವ ಕಷ್ಟಗಳಿಂದ ಮಾತ್ರವೇ ಅಲ್ಲದೆ ಇತರರ ಕಷ್ಟಗಳಿಂದಲೂ ವಿಮುಖರಾಗುವಂತೆ ಮಾಡುತ್ತದೆ. ಇಂದು ಇದೇ ಸನ್ನಿವೇಶ ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಆತಂಕಕ್ಕೊಳಗಾಗಿರುವ ವ್ಯಕ್ತಿಗಳಾಗಿ, ಒಂದು ಸಮಾಜವಾಗಿ ನಾವು ಇದಕ್ಕೆ ಅವಕಾಶ ನೀಡಲಾಗುವುದಿಲ್ಲ. ನಮ್ಮ ಸಹಾನುಭೂತಿಯೇ ನಮ್ಮನ್ನು ರಕ್ಷಿಸುತ್ತದೆ, ನಿರಾಸಕ್ತಿ ಅಲ್ಲ.

ಕೆಲವೊಮ್ಮೆ ನಾನೇ ಸ್ವತಃ ನಿರಾಸಕ್ತನಾಗಿಬಿಡುತ್ತೇನೆ. ಜನರು ಅವರ ಆತ್ಮೀಯರನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದಾಗಲೂ, ಅವರಿಗೆ ಅಂತಿಮ ನಮನವನ್ನೂ ಸಲ್ಲಿಸಲಾಗದೆ, ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಸುಮ್ಮನಿದ್ದುಬಿಡುತ್ತೇನೆ. ಹಾಗೆಯೇ ವಲಸೆ ಕಾರ್ಮಿಕರು ಅನ್ನಾಹಾರ ಇಲ್ಲದೆ, ನೂರಾರು ಕಿಲೋಮೀಟರ್ ನಡೆದು, ಕೊನೆಗೆ ತಮ್ಮ ಮನೆಯನ್ನೂ ತಲುಪದೆ ಹಾದಿಯಲ್ಲೇ ಉಸಿರುಗಟ್ಟಿ ಸಾಯುತ್ತಾರೆ, ಕೆಲವು ಕುಟುಂಬಗಳನ್ನು ಅನ್ಯ ಧರ್ಮಕ್ಕೆ ಸೇರಿದವರೆಂದು ಬಹಿಷ್ಕರಿಸಲಾಗುತ್ತದೆ ಈ ಸಂದರ್ಭದಲ್ಲೂ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಸುಮ್ಮನಿದ್ದುಬಿಡುತ್ತೇನೆ. ಆ ಸುದ್ದಿಯನ್ನು ಕೂಡಲೇ ಪಕ್ಕಕ್ಕೆ ತಳ್ಳಿಬಿಡುತ್ತೇನೆ.

ಲಾಕ್ ಡೌನ್ ಆರಂಭವಾದ ದಿನದಿಂದಲೂ ನನ್ನ ಬೆನ್ನು ನೋಯುತ್ತಿದೆ. ಈ ಸಂದರ್ಭದಲ್ಲಿ ವಲಸೆ ಕಾರ್ಮಿಕನೊಬ್ಬನ ಮಗು ನಡೆಯಲು ತ್ರಾಣವಿಲ್ಲದೆ ಕುಸಿಯುವುದನ್ನು ನೋಡುತ್ತೇನೆ, ಒಬ್ಬ ವೈದ್ಯ ತನ್ನಿಂದ ಕುಟುಂಬದವರಿಗೆ ಸೋಂಕು ತಗಲುತ್ತದೆ ಎಂಬ ಭಯದಿಂದ ಮನೆಗೇ ಬರದಿರುವುದನ್ನು ನೋಡುತ್ತೇನೆ. ಆಗ ನನ್ನೊಳಗಿನ ನೋವು ಹೆಚ್ಚಾಗುತ್ತದೆ. ನನ್ನ ಕಣ್ಣೀರು ಕೆನ್ನೆಗಳ ಮೇಲೆ ಹರಿದು, ನನ್ನ ಕಂಗಳಲ್ಲಿ ಆಕ್ರೋಶ ವ್ಯಕ್ತವಾದಾಗ ನಾನು ಈ ಘಟನೆಗಳಿಂದ ದೂರವಾಗಿಲ್ಲ, ಇದರ ಬಗ್ಗೆ ನಿರಾಸಕ್ತನಾಗಿಲ್ಲ ಎಂದು ಹೆಮ್ಮೆ ಪಡುತ್ತೇನೆ. ನಮ್ಮ ಭಾವನಾತ್ಮಕ ರಕ್ಷಣಾ ತಂತ್ರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಹೆಮ್ಮೆ ಪಡುತ್ತೇನೆ. 

ಈಗ ನನ್ನ ಬೆನ್ನು ನೋವು ಕಡಿಮೆಯಾಗುತ್ತದೆ.

ಡಾ ನೂಪುರ್ ಧಿಂಗ್ರ ಪೈವ ಚಿಕಿತ್ಸಕ ಮನೋರೋಗ ವೈದ್ಯರಾಗಿದ್ದು ಲೇಖಕರೂ ಆಗಿದ್ದಾರೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org