ಯೋಗದ ನಾಲ್ಕು ತಳಹದಿಗಳು

ಯೋಗಸಾಧನೆಯಲ್ಲಿ ಮುಖ್ಯವಾಗಿ ನಾಲ್ಕು ಮಾರ್ಗಗಳಿವೆ. ಮೇಲ್ನೋಟಕ್ಕೆ ಪರಸ್ಪರ ಸಂಪೂರ್ಣ ಭಿನ್ನವಾಗಿ ಕಂಡರೂ, ಅವೆಲ್ಲವುಗಳ ಗುರಿ ಆತ್ಮಸಾಕ್ಷಾತ್ಕಾರದತ್ತ ಮುನ್ನಡೆಸುವುದೇ ಆಗಿದೆ.

ಯೋಗ ಪದ್ಧತಿಯ ಬಳಕೆ ಶುರುವಾದಾಗ ಯೋಗದ ನಾಲ್ಕು ಮಾರ್ಗಗಳು ಅಸ್ತಿತ್ವದಲ್ಲಿದ್ದವು. ಆದರೆ ನಂತರದ ದಿನಗಳಲ್ಲಿ, ಅವುಗಳಲ್ಲಿ ಯಾವುದಾದರೂ ಒಂದು ಮಾರ್ಗವನ್ನು ಮಾತ್ರ ಆಯಾ ಸಂದರ್ಭಕ್ಕನುಗುಣವಾಗಿ ಬಳಸಲಾಗುತ್ತಿದೆ. ಭಗವದ್ಗೀತೆಯು ಯೋಗದ ನಾಲ್ಕು ಮಾರ್ಗಗಳನ್ನು ಚರ್ಚಿಸುತ್ತದೆ. ಶಂಕರಾಚಾರ್ಯರು ಪ್ರಮುಖವಾಗಿ ಜ್ಞಾನಯೋಗಕ್ಕೆ ಆದ್ಯತೆ ನೀಡಿದರೆ, ರಾಮಾನುಜರು ಭಕ್ತಿಯೋಗವನ್ನು ಕೇಂದ್ರೀಕರಿಸಿದರು. ಪತಂಜಲಿಯ ಯೋಗಸೂತ್ರಗಳು ಮುಖ್ಯವಾಗಿ ರಾಜಯೋಗದ ಪ್ರಾಮುಖ್ಯತೆಯ ಕುರಿತಾಗಿ ಸಾರಿವೆ. 1890 ರವರೆಗೂ ಕರ್ಮಯೋಗದ ಕುರಿತಾಗಿ ಹೆಚ್ಚಿನ ಜ್ಞಾನವಿರಲಿಲ್ಲ, ಆದರೆ ವಿವೇಕಾನಂದರು ತಮ್ಮ ಅಧ್ಯಯನಗಳಲ್ಲಿ ಹಾಗೂ ಉಪನ್ಯಾಸಗಳಲ್ಲಿ ಯೋಗದ ನಾಲ್ಕು ಮಾರ್ಗಗಳ ಕುರಿತಾಗಿ ಜಗತ್ತಿನೆಲ್ಲೆಡೆ ಹೇಳಿದಾಗ ಕರ್ಮಯೋಗದ ಪರಿಚಯವಾಯಿತು.

ರಾಜ ಯೋಗ – ಆತ್ಮಸ್ಥೈರ್ಯದ ಮಾರ್ಗ: 
ಪತಂಜಲಿಯ ಯೋಗಸೂತ್ರದ ಪ್ರಕಾರ, ಯೋಗವೆಂದರೆ, ಮನಸ್ಸಿನ ಮೇಲೆ ಹಿಡಿತ ಸಾಧಿಸುವ ನಿರಂತರ ಅಭ್ಯಾಸವಾಗಿದೆ. ಇದರಲ್ಲಿ ಎರಡು ವಿಧದ ಯೋಗ ಕ್ರಮಗಳಿವೆ:

  • ಬಹಿರಂಗ ಯೋಗ: ಬಹಿರಂಗ ಯೋಗವು, ವರ್ತನೆಯ ಮಟ್ಟದಲ್ಲಿ ನಿಯಮ ಮತ್ತು ನಿಬಂಧನೆಗಳನ್ನು (ಯಮ ಮತ್ತು ನಿಯಮ) ಹೇಳುತ್ತದೆ, ಅಂದರೆ ದೈಹಿಕ ಅಭ್ಯಾಸದ ಮೂಲಕ ದೇಹ ಹಾಗೂ ಮನಸ್ಸಿನ ಹಿಡಿತ ಸಾಧಿಸುವ ಪ್ರಕ್ರಿಯೆ (ಆಸನ ಮತ್ತು ಪ್ರಾಣಾಯಾಮ).
  • ಅಂತರಂಗ ಯೋಗ: ಅಂತರಂಗ ಯೋಗವು ಧಾರಣ (ಏಕಾಗ್ರತೆ), ಧ್ಯಾನ ಮತ್ತು ಸಮಾಧಿ(ಮನಸ್ಸಿನೊಂದಿಗೆ ನೇರವಾಗಿ ವ್ಯವಹರಿಸುವ ಪ್ರಜ್ಞೆ)ಗಳನ್ನು ಒಳಗೊಂಡಿದೆ.

ಕರ್ಮ ಯೋಗ – ಕ್ರಿಯೆಯ ಮಾರ್ಗ:
ಭಗವದ್ಗೀತೆಯು ಕರ್ಮ ಯೋಗದ ಪರಿಕಲ್ಪನೆಯ ಕುರಿತಾಗಿ ಹೇಳುವ ಪ್ರಮುಖ ಆಧಾರವಾಗಿದೆ; ನಂತರದ ದಿನಗಳಲ್ಲಿ ಸ್ವಾಮಿ ವಿವೇಕಾನಂದರು ಇದರ ಕುರಿತಾಗಿ ವಿಸ್ತಾರವಾಗಿ ಹೇಳಿದರು. ಕರ್ಮ ಯೋಗದ ಮುಖ್ಯ ತತ್ವವೆಂದರೆ, ಕ್ರಿಯೆಯ ನಂತರ ಬರುವ ಫಲಾಫಲಗಳ ಕುರಿತಾಗಿ ಯಾವ ರೀತಿಯ ಭಾವನೆಗಳನ್ನು ಇಟ್ಟುಕೊಳ್ಳದೇ ನಿರ್ಭಾವದಿಂದ ಕ್ರಿಯೆಯನ್ನು ಮಾಡುವುದು.

ಕರ್ಮಯೋಗವನ್ನು ಕೆಳಗಿನಂತೆ ವಿಭಾಗಿಸಲಾಗಿದೆ: 

  • ತಾಮಸಿಕ: ಇಲ್ಲಿ ಕತೃ ಆದವನು ಹಿಂಸೆ, ಪ್ರಲೋಭ ಭಾವನೆಗಳನ್ನು ಹೊಂದಿದ್ದು, ಕ್ರಿಯೆಯ ಫಲಿತಾಂಶದ ಕುರಿತಾಗಿ ಭ್ರಮೆ ಹಾಗೂ ಗೊಂದಲವನ್ನು ಹೊಂದಿರುತ್ತಾನೆ.
  • ರಾಜಸಿಕ: ಇಲ್ಲಿ ಕತೃವು ಹೆಚ್ಚಿನ ಶ್ರಮವಹಿಸಿ ಕ್ರಿಯೆಯನ್ನು ಮಾಡಿರುತ್ತಾನೆ, ಜೊತೆಗೆ ಫಲಿತಾಂಶದ ಕುರಿತಾಗಿ ಅತಿಯಾದ ಬಯಕೆಯನ್ನು ಹೊದಿರುತ್ತಾನೆ ಹಾಗೂ ಹೆಚ್ಚಿನ ಅಹಂಕಾರ ಸ್ವಭಾವದವನಾಗಿರುತ್ತಾನೆ.
  • ಸಾತ್ವಿಕ: ಇಲ್ಲಿ ಕತೃನು ಫಲಿತಾಂಶದ ಕುರಿತಾಗಿ ಯಾವುದೇ ನಿರೀಕ್ಷೆ ಹೊಂದಿರುವುದಿಲ್ಲ; ಪ್ರೀತಿ ಅಥವಾ ಧ್ವೇಷ ಅಥವಾ ಇನ್ನಾವುದೇ ಭಾವನೆಗಳನ್ನು ಇಟ್ಟುಕೊಳ್ಳದೆ ಕ್ರಿಯೆ ನಡೆಸಿರುತ್ತಾನೆ.

ಕಾಮ್ಯ ಕರ್ಮದಿಂದ (ಕ್ರಿಯೆ ಮತ್ತು ಬಯಕೆ) ಯೋಗ ಕರ್ಮ, ಅಂದರೆ ನಿರ್ಭಾವವಾಗಿ ಮತ್ತು ತಮ್ಮ ಶ್ರಮವನ್ನು ಒಂದು ಕ್ರಿಯೆಯನ್ನು ಪೂರ್ಣಗೊಳಿಸಲು ಸಂಪೂರ್ಣವಾಗಿ ವಿನಿಯೋಗಿಸುವುದು ಕರ್ಮ ಯೋಗದ ಸಾರವಾಗಿದೆ.

ಭಕ್ತಿ ಯೋಗ – ಆರಾಧನೆಯ ಮಾರ್ಗ: 
ಭಕ್ತಿ ಯೋಗವು ವ್ಯಕ್ತಿಯು ಭಾವನಾತ್ಮಕ ಪರಿಪಕ್ವತೆಯನ್ನು ಸಾಧಿಸಲು, ಸಮಾಜವನ್ನು ಪ್ರೀತಿಸುವ ಗುಣವನ್ನು ಬೆಳೆಸಲು ಮತ್ತು ಸಾರ್ವತ್ರಿಕ ಬಂಧುತ್ವ ಹಾಗೂ ಅಭೇದ ಭಾವವನ್ನು ಸಾರುವ ಉದ್ದೇಶ ಹೊಂದಿದೆ. ಷರತ್ತುಬದ್ಧ ಮತ್ತು ಬಯಕೆ ಪೂರಿತ ಪ್ರೀತಿಯಿಂದ ಷರತ್ತುರಹಿತ ಸತ್ಯ ಪ್ರೀತಿಯನ್ನು ಕಂಡುಕೊಳ್ಳಲು ಭಕ್ತಿ ಯೋಗ ಸಹಾಯ ಮಾಡುತ್ತದೆ. ಭಕ್ತಿಯೋಗದಲ್ಲಿ ಹೇಳುವ ಕಾಮವು, ತ್ಯಾಗ ಹಾಗೂ ಪ್ರೇಮದಿಂದ ಕೂಡಿರುತ್ತದೆ. ಅಲ್ಲದೇ ಪ್ರೇಮದ ಮೂಲಕ ಶರಣಾಗತಿಯನ್ನು ಸಾಧಿಸುವುದನ್ನು ಭಕ್ತಿ ಯೋಗವು ಹೇಳುತ್ತದೆ.

ಭಕ್ತಿ ಯೋಗ ಅಭ್ಯಾಸದ ಫಲಿತಾಂಶವಾಗಿ ತೃಪ್ತ ಭಾವವನ್ನು ಮತ್ತು ಮನಸ್ಸಿನ ಶಾಂತತೆಯನ್ನು ಪಡೆದುಕೊಳ್ಳಬಹುದು. ಅಲ್ಲದೆ, ನಾಲ್ಕು ಯೋಗ ಮಾರ್ಗಗಳಲ್ಲಿ, ಇದು ಅತ್ಯಂತ ಸುಲಭವಾದ ಅಭ್ಯಾಸ ಯೋಗ ಮಾರ್ಗವಾಗಿದೆ.

ಭಕ್ತಿ ಯೋಗವು ಮನುಷ್ಯ ಹಾಗೂ ಆತನ ಆಂತರಿಕ ಸಂಬಂಧವನ್ನು ಹೋಲುತ್ತದೆ; ಆದರೆ ಅದು ಆತ್ಮ ಮತ್ತು ಪರಮಾತ್ಮನ ನಡುವಿನ ಸಂಬಂಧವಾಗಿದೆ. ಭಗವದ್ ಪುರಾಣವು ಒಂಭತ್ತು ವಿಧವಾದ ಭಕ್ತಿಯನ್ನು ಹೇಳುತ್ತದೆ: ಶ್ರವಣ (ಕೇಳುವಿಕೆ), ಕೀರ್ತನೆ (ಪ್ರಾರ್ಥನೆ), ಸ್ಮರಣೆ (ನೆನಪಿಡುವಿಕೆ), ಪಾದ-ಸೇವನೆ (ತಲೆಬಾಗಿ ಸೇವೆ), ಅರ್ಚನೆ (ಪೂಜಿಸುವಿಕೆ), ವಂದನೆ (ಗೌರವಿಸುವಿಕೆ), ದಾಸ್ಯ (ಸೇವೆ), ಸಖ್ಯ (ಬಂಧುತ್ವ) ಮತ್ತು ಆತ್ಮ-ನಿವೇದನೆ (ಸ್ವಯಂ ಭಾವದ ಸಂಪೂರ್ಣ ಶರಣಾಗತಿ).

ಜ್ಞಾನ ಯೋಗ – ಅರಿವಿನ ಮಾರ್ಗ: 
ಅರ್ಥಗರ್ಭಿತವಾದ ಜ್ಞಾನವನ್ನು ಹಾಗೂ ಪರಿಪೂರ್ಣ ಅರಿವನ್ನು ತಾರ್ಕಿಕ ಮನೋಚಿಂತನೆಯಿಂದ ಕಂಡುಕೊಳ್ಳಲು ಜ್ಞಾನ ಯೋಗವು ಸಹಾಯ ಮಾಡುತ್ತದೆ. ಜ್ಞಾನ ಯೋಗದಲ್ಲಿ ಮೂರು ಮಾರ್ಗಗಳನ್ನು ಹೇಳಲಾಗಿದೆ:

  • ಶ್ರವಣ: ಯಾವುದೇ ರೂಪದ ಜ್ಞಾನವನ್ನು ಪಡೆಯಲು ಇರುವ ಮೊದಲನೇ ಹಂತವಾಗಿದೆ (ಓದುವ ಮೂಲಕ, ಉಪನ್ಯಾಸಗಳನ್ನು ಆಲಿಸುವ ಮೂಲಕ, ದೃಶ್ಯಗಳನ್ನು ನೋಡುವ ಮೂಲಕ ಜ್ಞಾನ ಪಡೆಯಬಹುದು).
  • ಮನನ: ತಿಳಿದುಕೊಂಡಿರುವ ವಿಷಯವನ್ನು ಮತ್ತಷ್ಟು ಪುನರಾವಲೋಕಿಸುವುದು.
  • ನಿಧಿಧ್ಯಾಸನ: ತಿಳಿದುಕೊಂಡಿರುವ ಜ್ಞಾನವನ್ನು ಆಚರಣೆಯ ರೂಪಕ್ಕೆ ತರುವುದು.

ಜ್ಞಾನ ಯೋಗದ ಅಂತಿಮ ಉದ್ದೇಶವೆಂದರೆ, ಆತ್ಮದ ವಾಸ್ತವ ಅಂಶವನ್ನು ಅರಿತುಕೊಳ್ಳುವುದು ಹಾಗೂ ದೇಹದಿಂದ ಅದನ್ನು ಬೇರ್ಪಡಿಸುವುದೇ ಆಗಿದೆ. ಪರಿಪೂರ್ಣವಾಗಿ ಜ್ಞಾನ ಯೋಗವನ್ನು ಸಾಧಿಸಿದ ವ್ಯಕ್ತಿಯು ಎಲ್ಲ ಪ್ರಾಪಂಚಿಕ ಬಯಕೆಗಳಿಂದ ಬಿಡುಗಡೆ ಹೊಂದಿ ನೆಮ್ಮದಿ ಕಂಡುಕೊಳ್ಳುತ್ತಾನೆ.

ಯೋಗದ ನಾಲ್ಕು ಮಾರ್ಗಗಳು ಪರಸ್ಪರ ಭಿನ್ನವಾಗಿ ತೋರಿದರೂ, ಅವೆಲ್ಲವೂ ಸಾರುವ ಉದ್ದೇಶ ಒಂದೇ ಆಗಿದೆ. ಅಂತಿಮವಾಗಿ ಎಲ್ಲ ಯೋಗ ಮಾರ್ಗಗಳು ಆತ್ಮ ಸಾಕ್ಷಾತ್ಕಾರ ಮತ್ತು ಸ್ವಯಂ ಹಾಗೂ ಸಾರ್ವತ್ರಿಕ ಬಂಧುತ್ವ ಭಾವವನ್ನು ಹೇಳುತ್ತವೆ.

{ಡಾ. ವಿನೋದ್ ಕುಮಾರ್, ಕಿರಿಯ ವೈಜ್ಞಾನಿಕ ಅಧಿಕಾರಿ (ಯೋಗ ಮತ್ತು ಮನಶಾಸ್ತ್ರ ವಿಭಾಗ), ನಿಮ್ಹಾನ್ಸ್}

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org