ನಿರೂಪಣೆ: ನಾನೆಂದೂ ವಿಶ್ರಾಂತಿಯನ್ನೇ ಪಡೆದಿಲ್ಲ ಎಂದು ಭರತ್‌,ಹೇಳುತ್ತಾರೆ

ನಿರ್ದಿಷ್ಟ ಪ್ರಮಾಣ ಮೀರಿದ ಆತಂಕವನ್ನು ಮಾನಸಿಕ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಚಿಕಿತ್ಸೆ ನೀಡಬಹುದು.

ಮೂವತ್ತು ವರ್ಷ ವಯಸ್ಸಿನ ಭರತ್‌ ಯಾವಾಗಲೂ ಆತಂಕಕ್ಕೆ ಒಳಗಾಗಿರುತ್ತಾರೆ. ಅವರು ಹೇಳುವಂತೆ ಆತ ಎಂದೂ ವಿಶ್ರಾಂತಿಯನ್ನೇ ಪಡೆದಿಲ್ಲ. ಅವರಲ್ಲಿ ಮನೆಮಾಡಿದ್ದ ಆತಂಕವು ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರತೊಡಗಿದ್ದರಿಂದ ಅವರ ಸ್ನೇಹಿತರೊಬ್ಬರು ವೈದ್ಯರನ್ನು ಕಾಣಲು ಸೂಚಿಸಿದ್ದರು. ಭರತ್ ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಿರ್ದಿಷ್ಟ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿನ ಒತ್ತಡ ಯಾವಾಗಲೂ ಹೆಚ್ಚಿರುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ಭರತ್ ಎಲ್ಲ ಸಮಯದಲ್ಲೂ ಕಿರಿಕಿರಿ ಉಂಟುಮಾಡುವಷ್ಟು ಆತಂಕಕ್ಕೊಳಗಾಗುತ್ತಿದ್ದಾರೆ ಎಂದು ಭರತ್‌ ಪತ್ನಿ ಈ ಸ್ನೇಹಿತರಿಗೆ ತಿಳಿಸಿದ್ದರು. ಇಡೀ ರಾತ್ರಿ ಚೆನ್ನಾಗಿ ನಿದ್ರಿಸಿದ್ದಾಗಲೂ, ಎದ್ದ ತಕ್ಷಣ ಹಿಂದಿನ ದಿನದ ಆತಂಕವೇ ಮುಂದುವರಿಯುತ್ತಿತ್ತು. ನಿರಂತರವಾಗಿ ಎಲ್ಲವನ್ನೂ ಮರೆಯುತ್ತಾರೆ, ಏನು ಹೇಳುತ್ತಾರೆ ಎಂಬುದರ ಕುರಿತು ಗಮನವೇ ಇರುವುದಿಲ್ಲ ಎಂದು ಪತ್ನಿ ದೂರುತ್ತಿದ್ದಳು

ಭರತ್‌ ಸಣ್ಣದಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿ ಅತಿಯಾದ ಉದ್ವೇಗಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಮನೋವೈದ್ಯರನ್ನು ಭೇಟಿಮಾಡಿದಾಗ ಖಚಿತವಾಯಿತು. ಕೆಲಸದ ಸ್ಥಳದಲ್ಲಿ ತನ್ನ ಸಿಟ್ಟನ್ನು ವ್ಯಕ್ತಪಡಿಸಲು ಸಾಧ್ಯವಾಗದ್ದರಿಂದ ಅವರು ಮನೆಗೆ ಬಂದು ಪತ್ನಿ ಮತ್ತು ಮಕ್ಕಳ ಮೇಲೆ ಹರಿಹಾಯುತ್ತಿದ್ದರು. ಇದರಿಂದ ಅವರಲ್ಲಿ ಅಪರಾಧಿ ಭಾವ ಮತ್ತು ನಾಚಿಕೆ ಭಾವ ಉಂಟಾಗುತ್ತಿತ್ತು. ಎಲ್ಲ ಸಮಯದಲ್ಲೂ ಉದ್ವೇಗ ಅಥವಾ ಟೆನ್ಷನ್‌ ಹೊಂದಿರುತ್ತೀರಾ ಎಂದು ಮನೋವೈದ್ಯರು ಭರತ್‌ನನ್ನು ಕೇಳಿದ್ದಕ್ಕೆ ಅವರು ಹೌದು ಎಂದು ತಲೆಯಾಡಿಸಿದ್ದರು.

ಭರತ್‌ ಜತೆಗೆ ಕೆಲವು ನಿಮಿಷಗಳವರೆಗೆ ಮಾತನಾಡಿ ಸಮಸ್ಯೆಯ ಗುಣಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡ ನಂತರ ವೈದ್ಯರು ಭರತ್‌ಗೆ ಸಾಮಾನ್ಯ ಆತಂಕ ಕಾಯಿಲೆಯಿದೆ ಎಂಬುದನ್ನು ಖಚಿತಪಡಿಸಿದರು. ಇದು ಸಾಮಾನ್ಯ ಕಾಯಿಲೆ ಮತ್ತು ಈ ರೀತಿಯ ಗುಣಲಕ್ಷಣಗಳು ಹಲವರಲ್ಲಿ ಕಾಣಿಸಿಕೊಂಡಿವೆ ಎಂಬುದನ್ನು ತಿಳಿದು ಭರತ್‌ ಸ್ವಲ್ಪ ಸಮಾಧಾನಗೊಂಡರು. ಆತಂಕದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು  ಚಿಕಿತ್ಸೆ ಲಭ್ಯವಿರುವುದು ಅವರಲ್ಲಿ ನೆಮ್ಮದಿಯುಂಟುಮಾಡಿತ್ತು.

ಭರತ್‌ಗೆ ಔಷಧವನ್ನು ನೀಡಲಾರಂಭಿಸಿದರು. ಕೆಲವು ವಾರಗಳವರೆಗೆ ಅವರಿಗೆ ವಾರಕ್ಕೊಮ್ಮೆ ಕೌನ್ಸೆಲಿಂಗ್ ಮಾಡಲಾಯಿತು. ಔಷಧಗಳನ್ನು ನೀಡಲು ಆರಂಭಿಸಿದ ಎರಡು ತಿಂಗಳಲ್ಲಿ ಅವರು ವೈದ್ಯರ ಬಳಿ,’ಈ ದೀರ್ಘಾವಧಿಯಲ್ಲಿ ಯಾವುದೇ ಒಂದೇ ವಿಚಾರಕ್ಕೆ ಸಂಬಂಧಿಸಿ ನಿರಂತರವಾಗಿ ಚಿಂತೆ ಮಾಡುವುದನ್ನು ಬಿಟ್ಟಿದ್ದೇನೆ’, ಎಂದು ಹೇಳಿಕೊಂಡಿದ್ದರು.

ಈಗ ಭರತ್‌  ಚೇತರಿಸಿಕೊಂಡಿದ್ದಾರೆ. ಪತಿಯಲ್ಲಿನ ಬದಲಾವಣೆಯನ್ನು ಪತ್ನಿ ಕೂಡ ಗಮನಿಸಿದ್ದಾಳೆ. ಕಚೇರಿಯಲ್ಲಿ ಅವರ ವಾರ್ಷಿಕ ಸಾಮರ್ಥ್ಯ ವಿಶ್ಲೇಷಣೆಯು ಉತ್ತಮ ಮಟ್ಟವನ್ನು ತಲುಪಿದೆ.

ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ಮಾಡಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಯ ಪ್ರಕರಣವಲ್ಲ. ಬದಲಿಗೆ ಸಾಮಾನ್ಯ ಆತಂಕ ಖಾಯಿಲೆಯಿಂದ ಬಳಲುತ್ತಿರುವ ಎಲ್ಲರಿಗೂ ಅನ್ವಯಿಸುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org