ನಿರೂಪಣೆ: ರಾತ್ರಿ ಮೂರು ತಾಸುಗಳವರೆಗೆ ಆತ ನೆಲವನ್ನು ಕೈಯಿಂದ ಬಡಿಯುತ್ತಿರುತ್ತಾನೆ

ಔಷಧ ಮತ್ತು ಥೆರಪಿಗಳ ಸಹಾಯದಿಂದ ಕಪಿಲ್ ತನ್ನ ಅಬ್ಸೆಸಿವ್ ಕಂಪಲ್ಸಿವ್ ಖಾಯಿಲೆಯಿಂದ ಶೇ. 80ರಷ್ಟು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ

ಕಚೇರಿಗೆ ತೆರಳುವ ಮೊದಲು ಕಪಿಲ್ ಪದೇಪದೆ ತನ್ನ ವಾಹನವನ್ನು ಸ್ವಿಚ್ ಆನ್ ಮತ್ತು ಆಫ್ ಮಾಡುತ್ತಿದ್ದ. ನಿದ್ದೆ ಮಾಡುವ ಮೊದಲು ಚಿತ್ರ ವಿಚಿತ್ರ ಹಾವಭಾವಗಳನ್ನು ಮಾಡುತ್ತಿದ್ದ. ಒಂದೇ ವಸ್ತುವನ್ನು ಮತ್ತೆಮತ್ತೆ ಪರಿಶೀಲಿಸುತ್ತಲಿದ್ದ. ಇದನ್ನೆಲ್ಲ ಕಂಡು ಕಪಿಲ್ ಪತ್ನಿ ಸುನೀತಾ ಬೇಸತ್ತಿದ್ದಳು. ಅವರ ಮನೆಗೆ ಸಮೀಪದಲ್ಲೇ ಒಬ್ಬ ಮನೋವೈದ್ಯರಿದ್ದಾರೆ ಎಂಬ ಸಂಗತಿ ಆಕೆಗೆ ಸ್ನೇಹಿತರಿಂದ ತಿಳಿದುಬಂತು. ಆಕೆಯ ಒತ್ತಾಯದ ಮೇರೆಗೆ ಕಪಿಲ್ ತನ್ನ ಹೆಂಡತಿಯೊಂದಿಗೆ ಕ್ಲಿನಿಕ್ಕಿಗೆ ತೆರಳಿದ್ದ.
 
ಮದುವೆಯಾದ ಕೆಲವು ತಿಂಗಳ ನಂತರ ಕಪಿಲ್ ನಿದ್ದೆ ಮಾಡುವ ಮೊದಲು ಪದೇಪದೆ ಕೆಲವು ವಿಚಿತ್ರ ಕ್ರಮಗಳನ್ನು ಮಾಡುವುದನ್ನು ನೋಡುತ್ತಿದ್ದೇನೆ ಎಂದು ಸುನೀತಾ ವೈದ್ಯರಿಗೆ ಹೇಳಿದಳು. ಆತ ನೆಲವನ್ನು ಕೈಯಿಂದ ಬಡಿಯುತ್ತಿದ್ದ. ನಂತರ ಹಾಸಿಗೆ ಮೇಲೆ ಒಂದು ಕ್ಷಣ ಮಲಗಿ ಮತ್ತೆ ಬಂದು ನೆಲವನ್ನು ಬಡಿಯುತ್ತಿದ್ದ. ಕೆಲವು ಬಾರಿ ಈ ಕ್ರಮ ಎರಡರಿಂದ ಮೂರು ಗಂಟೆಗಳವರೆಗೆ ನಡೆಯುತ್ತಿತ್ತು. ಆತ ಬೆಳಗ್ಗೆ ಕಾರನ್ನು ಹಲವು ಬಾರಿ ಆನ್ ಮತ್ತು ಆಫ್ ಮಾಡುವುದರಿಂದ  ನಿತ್ಯವೂ  ಕಚೇರಿಗೆ ತೆರಳುವುದು ಲೇಟಾಗುತ್ತಿತ್ತು. ಇದರಿಂದಾಗಿ ಆತ  ಕೆಲಸ ಕಳೆದುಕೊಳ್ಳಬಹುದೆಂಬ ಆತಂಕ ಆಕೆಗೆ ಕಾಡತೊಡಗಿತ್ತು. ಆಕೆಯೂ ಕೆಲಸಕ್ಕೆ ಹೋಗುವವಳಲ್ಲ. ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳೂ ಇದ್ದರು. ಹೀಗಾಗಿ ಕಪಿಲ್ ಕೆಲಸ ಕಳೆದುಕೊಂಡರೆ ಕುಟುಂಬದ ಹಣಕಾಸು ಸ್ಥಿತಿ ಏನಾದೀತೆಂಬ ಆತಂಕ ಆಕೆಯನ್ನು ಚಿಂತೆಗೀಡು ಮಾಡಿತ್ತು. ಹೀಗಾಗಿ ಆಕೆ ತನ್ನ ಪತಿಯನ್ನು ವೈದ್ಯರಲ್ಲಿಗೆ ಕರೆದೊಯ್ಯಲು ನಿರ್ಧರಿಸಿದ್ದಳು.
 
ಮನೋವೈದ್ಯರು ಆಕೆಯ ಕಳವಳವನ್ನು ಕೇಳಿಸಿಕೊಂಡರು. ನಂತರದಲ್ಲಿ ಯಾವ ಯೋಚನೆ ತಲೆಯಲ್ಲಿ ಕೊರೆಯುತ್ತಿದೆ  ಎಂದು ವಿವರಿಸಲು ಕಪಿಲ್ ಗೆ ಹೇಳಿದರು. ಆರಂಭದಲ್ಲಿ ಕಪಿಲ್ ಮುಜುಗರಕ್ಕೆ ಒಳಗಾದವನಂತೆ ಕಂಡುಬಂದರೂ, ನಂತರದಲ್ಲಿ ಮಾತನಾಡಲು ಒಪ್ಪಿಕೊಂಡ.ಈ ರೀತಿ ವಿಚಿತ್ರವೆನಿಸುವದನ್ನು ಮಾಡದಿದ್ದರೆ ಆತನ ಉದ್ವೇಗ ಕಡಿಮೆಯಾಗುವುದಿಲ್ಲ ಎಂದು ಹೇಳಿಕೊಂಡ. ಇಂತಹ ಸಮಯದಲ್ಲಿ ಈ ರೀತಿ ವಿಚಿತ್ರವಾಗಿ ವರ್ತಿಸದಿದ್ದರೆ ಅಥವಾ ಈ ಕ್ರಮಗಳಲ್ಲಿ ಯಾವುದೇ ಹಂತವನ್ನು ತಪ್ಪಿಸಿದರೆ ಮನೆಯಲ್ಲೇನೋ ಕೆಟ್ಟದ್ದಾಗುತ್ತದೆ ಎಂಬ ಭಾವ ಮನಸಿನಲ್ಲಿ ಸುಳಿಯುತ್ತದೆ. ಪದೇಪದೇ ಈ ಕ್ರಮಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಿಳಿದಿದ್ದರೂ ತನ್ನೊಳಗಿನ ಉದ್ವೇಗ ಈ ರೀತಿ ಮಾಡುವಂತೆ ಪ್ರೋತ್ಸಾಹಿಸುತ್ತದೆ ಎಂದು ವೈದ್ಯರಿಗೆ ಹೇಳಿದ.
 
ಮುಂದಿನ ಸುಮಾರು ಅರ್ಧ ಗಂಟೆಗಳವರೆಗೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮಾಡುವ ಪುನರಾವರ್ತಿತ ಕಾರ್ಯಗಳ ಬಗ್ಗೆ ಕಪಿಲ್ ವೈದ್ಯರಿಗೆ ವಿವರಿಸಿದ. ಹಲವು ರೀತಿಯಲ್ಲಿ ಈ ಮನೋಭಾವವು ನಿತ್ಯ ಜೀವನದಲ್ಲಿ ಸಮಸ್ಯೆ ಉಂಟು ಮಾಡುತ್ತದೆ ಎಂಬುದು ಆತನಿಗೆ ತಿಳಿದಿತ್ತು. ಆದರೆ ಆತ ಅಸಹಾಯಕನಾಗಿದ್ದ ಮತ್ತು ಈ ರೀತಿಯ ವರ್ತನೆಯನ್ನು ನಿಲ್ಲಿಸುವುದು ಸಾಧ್ಯವಾಗಿರಲಿಲ್ಲ.
 
ಕಪಿಲ್ ನ ಸಮಸ್ಯೆಯನ್ನು ವೈದ್ಯರು ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಎಂದು ಪರಿಗಣಿಸಿದರು. ದಂಪತಿಗೆ ಒಸಿಡಿ ಬಗ್ಗೆ ವಿವರವಾಗಿ ತಿಳಿಹೇಳಿದರು. ಸಮಾಜದಲ್ಲಿ ಹಲವರು ಒಸಿಡಿಯಿಂದ ಬಳಲುತ್ತಿದ್ದಾರೆ ಮತ್ತು ಇದಕ್ಕೆ ಚಿಕಿತ್ಸೆ ಇದೆ ಎಂದು ವೈದ್ಯರು ಅವರಿಗೆ ಭರವಸೆ ನೀಡಿದರು.
 
ಇದಕ್ಕೆ ಸಂಬಂಧಿಸಿದಂತೆ ಕಪಿಲ್ಗೆ ಹಲವು ತಿಂಗಳುಗಳವರೆಗೆ ಔಷಧ ಮತ್ತು ಥೆರಪಿಗಳನ್ನು ನೀಡಲಾಯಿತು. ಕಪಿಲ್ ಮೊದಲಿಗಿಂತ ಶೇ.80ರಷ್ಟು ಸುಧಾರಿಸಿದ್ದಾನೆ ಎಂದು ಸುನೀತಾಗೆ ಅರಿವಾಗಿದೆ. ಅಲ್ಲದೇ ಕಪಿಲ್ ಕೂಡ ಇದನ್ನು ಒಪ್ಪಿಕೊಳ್ಳುತ್ತಾನೆ. ಕೆಲವೊಮ್ಮೆ ವಿಚಿತ್ರ ಕ್ರಮಗಳನ್ನು ಮಾಡಲು ಬಲವಾದ ಒತ್ತಡ ಬಂದರೂ ಅದನ್ನು ನಿಯಂತ್ರಿಸಿ ಇಂತಹ ಬಯಕೆಗಳನ್ನು ತಡೆಯಲು ಈಗ ಸಾಧ್ಯವಾಗುತ್ತಿದೆ.  ಕಚೇರಿಯಲ್ಲೂ ಕಪಿಲ್ ಉತ್ತಮ ಸಾಧನೆ ತೋರುತ್ತಿದ್ದಾನೆ. ಅನಾರೋಗ್ಯದಿಂದಾಗಿ ಕೆಲಸ ಕಳೆದುಕೊಳ್ಳುವ  ಭೀತಿ ಈಗಿಲ್ಲ.
 
ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ಹೆಣೆಯಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಯದ್ದಲ್ಲ.. ಬದಲಿಗೆ ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ)ಯಿಂದ  ಬಳಲುತ್ತಿರುವ ಎಲ್ಲ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org