ಮಾನಸಿಕ ಆಘಾತದಿಂದ ಹೊರ ಬರುವುದು ಹೇಗೆ?

ಆಘಾತದ ನಿಜವಾದ ಅರ್ಥವೇನು?

ಈ ಲೇಖನವು ಕೆಲವರ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಮಾಹಿತಿಯನ್ನು ಒಳಗೊಂಡಿದೆ.

ಆಘಾತ ಎಂಬ ಶಬ್ದ ಓದುವಾಗ ನಿಮ್ಮ ಯೋಚನೆ ಹೇಗೆ ಸಾಗುತ್ತದೆ? ಗಾಯಗಳು, ಕಾರು ಅಪಘಾತಗಳು, ಭೂಕಂಪಗಳು ಮಕ್ಕಳ ದುರುಪಯೋಗ ಇಂತಹ ಘಟನೆಗಳು ಕಣ್ಣೆದುರಿಗೆ ಬರುತ್ತವೆಯೇ? ಬಹುಶಃ ಇಂತಹ ಘಟನೆಗಳು ನೆನಪಾಗಬಹುದು. ಎಲ್ಲರೂ ಆಘಾತಗಳನ್ನು ಅನುಭವಿಸುವುದರಿಂದ ನೀವು ಒಬ್ಬಂಟಿಯೇನಲ್ಲ.

ಆಘಾತ ಎಂಬುದು ಸಂಕೀರ್ಣವಾದ ಅರ್ಥವನ್ನು ಹೊಂದಿದೆ. ಒಮ್ಮೊಮ್ಮೆ ಇದು ದೀರ್ಘಕಾಲದವರೆಗೆ ಗಮನಕ್ಕೆ ಬರುವುದಿಲ್ಲ. ಆಘಾತ ಅಥವಾ ಒತ್ತಡ (ನೇರ ಒತ್ತಡವನ್ನು) ಪಿ.ಟಿ.ಎಸ್.ಡಿ(ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಎನ್ನಬಹುದು. ಆದರೆ ಆಘಾತದ ಪರಿಣಾಮವನ್ನು ಯಾವಾಗಲೂ ಈ ವಿಧಾನದಿಂದ ಸಂಪೂರ್ಣವಾಗಿ ಕಂಡುಕೊಳ್ಳಲು ಆಗುವುದಿಲ್ಲ. ಏಕೆಂದರೆ ಆಘಾತ ಅನುಭವಿಸಿದವರಿಗೆ ಪಿ.ಟಿ.ಎಸ್.ಡಿ. ವಿಧಾನದ ಬಗ್ಗೆ ಗೊತ್ತಿರುವುದಿಲ್ಲ. ಆದರೂ ಕೆಲವು ವ್ಯಕ್ತಿಗಳು ಸಂಕಷ್ಟದ ಘಟನೆಯನ್ನು ನಿಭಾಯಿಸಲು ತಮ್ಮದೇ ವಿಧಾನವನ್ನು ಕಂಡುಕೊಂಡಿರುತ್ತಾರೆ.

ಜೀವನದಲ್ಲಿ ತಾವು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ ಎಂದು ಹೇಳುವ ರೋಗಿಗಳನ್ನು ಮನಶ್ಶಾಸ್ತ್ರಜ್ಜರು ನೋಡುತ್ತಾರೆ. ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಕೆಲವು ರೋಗಿಗಳು “ನನ್ನ ಚಿಕ್ಕಪ್ಪ ನನ್ನೊಂದಿಗೆ ಸರಿಯಾಗಿಲ್ಲ” ಎನ್ನುತ್ತಾರೆ ಅಥವಾ "ಸಂಬಂಧಗಳು ತುಂಬಾ ಗೊಂದಲಮಯವಾಗಿದೆ" ಎನ್ನುತ್ತಾರೆ. ಇನ್ನು ಕೆಲವರು “ ನನ್ನ ತಂಗಿ ಜೀವನವನ್ನು ಕೊನೆಗೊಳಿಸಿದಳು, ಆದರೆ ಇದು ತುಂಬ ಹಿಂದೆಯೇ ಆಗಿತ್ತು” ಅನ್ನುತ್ತಾರೆ. ಒಟ್ಟಿನಲ್ಲಿ ಸಂಬಂಧಗಳು, ವೈಯಕ್ತಿಕ ಮೌಲ್ಯ, ಆತಂಕಗಳು, ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರಿರುತ್ತವೆ. ಇದನ್ನು ನಾನು ಕಂಡುಕೊಂಡಿದ್ದರೂ, ಈ ಘಟನೆಯ ಪ್ರಾಮುಖ್ಯತೆಯನ್ನು ಅವರು ಗುರುತಿಸುವುದಿಲ್ಲ. ಅವರು ಯಾವಾಗಲೂ ಭಯ ಅಥವಾ ಅಸಹಾಯಕತೆಯಿಂದ ಪ್ರತಿಕ್ರಿಯೆ ನೀಡುತ್ತಾರೆ.

ನಾವೆಲ್ಲರೂ ತೊಂದರೆಯಲ್ಲಿ ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ. ಅನುಭವ, ಅನುವಂಶೀಯ ಲಕ್ಷಣ ಮತ್ತು ನಾವು ವಾಸಿಸುವ ಪರಿಸರವು ಕಷ್ಟಗಳನ್ನು ಎದುರಿಸಲು ಸಹಾಯ ಮಾಡುತ್ತವೆ. ನನ್ನ ಅನುಭವವನ್ನು ಹೇಳುವುದಾದರೆ  ತಮ್ಮ ವೈಯಕ್ತಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಆಘಾತಕಾರಿ ಅನುಭವದ ನಂತರ ಜನರು ಬೇಗ ಚೇತರಿಸಿಕೊಳ್ಳುತ್ತಾರೆ.

ಕೆಲವರು ಅಷ್ಟು ಬೇಗ ಗುಣಹೊಂದುವುದಿಲ್ಲ. ಅಂಥವರು ಹೆಚ್ಚಾಗಿ ಭಯ ಮತ್ತು ದುಃಖದಿಂದ ಬಳಲುತ್ತಾರೆ. ತಮ್ಮ ಗಮನವನ್ನು ಕೇಂದ್ರೀಕರಿಸಲು ಕಷ್ಟಪಡುತ್ತಾರೆ. ಅವರು ಪ್ರಪಂಚವನ್ನು ಸಹಜವಾಗಿ ನೋಡುವುದಿಲ್ಲ. ಅಂಥವರು ಅಲ್ಪಾವಧಿಯ ಕೌನ್ಸಿಲಿಂಗಿನಿಂದ ಬೇಗ ಗುಣವಾಗಿ  ಬೆಳವಣಿಗೆ ಹೊಂದುವ ಸಾಧ್ಯತೆಯಿರುತ್ತದೆ.

ಕೆಳಕಂಡ ಲಕ್ಷಣಗಳಿರುವವರು ಪಿ.ಟಿ.ಎಸ್.ಡಿಯಿಂದ ಬಳಲುತ್ತಿದ್ದಾರೆ ಎನ್ನಬಹುದು. ಸೂಕ್ತ ಚಿಕಿತ್ಸೆಯಿಂದ ಇವರು ಖಂಡಿತವಾಗಿಯೂ ಗುಣಮುಖರಾಗಬಹುದು.

ಪಿ.ಟಿ.ಎಸ್.ಡಿ ಲಕ್ಷಣಗಳು:

*  ಖಿನ್ನತೆ, ನಿರಾಸಕ್ತಿ ಮತ್ತು ಕೋಪಗೊಳ್ಳುವಿಕೆ.

*  ಆಘಾತಕಾರಿ ಘಟನೆಗಳನ್ನು ನೆನಪಿಸಿಕೊಳ್ಳುವಿಕೆ.

* ನಿದ್ರಾಹೀನತೆ ಅಥವಾ ದುಃಸ್ವಪ್ನಗಳು.

* ಒತ್ತಡ ನಿಭಾಯಿಸಲು ಮಾದಕದ್ರವ್ಯದ ಸೇವನೆ.

* ಇತರರಿಂದ ದೂರವಾಗುವುದು.

* ಪರಸ್ಪರ ಸಂಬಂಧಗಳಲ್ಲಿ ತೊಂದರೆಗಳು.

ಲೈಂಗಿಕ ದುರ್ಬಳಕೆ ಅಥವಾ ಭಾವನಾತ್ಮಕ ನಿಂದನೆಗಳು ಮನಸ್ಸಿನಲ್ಲಿ ಆಳವಾಗಿ ಬೇರೂರಬಹುದು. ಇತರರನ್ನು ನಂಬುವ ಮತ್ತು ಅರ್ಥಪೂರ್ಣ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗಬಹುದು. ಪ್ರೀತಿಪಾತ್ರರ  ಭಾವನೆಗಳನ್ನು ತಿಳಿಯುವಲ್ಲಿ ಮತ್ತು ದಿನನಿತ್ಯದ ಒತ್ತಡಗಳನ್ನು ನಿಭಾಯಿಸುವಾಗ ಕಷ್ಟವಾಗಬಹುದು.

ಆಘಾತಗಳಿಗೆ  ಒಡ್ಡಿಕೊಳ್ಳುವಿಕೆಯು ಒಮ್ಮೆ ಮಾತ್ರ ನಡೆಯುವ ಕ್ರಿಯೆಯೇ ಅಥವಾ ಪುನರಾವರ್ತಿತವಾಗಿ ಸಂಭವಿಸುತ್ತದೆಯೇ ಎಂಬುದು ದೊಡ್ಡ ಗೊಂದಲವಾಗಿದೆ. ಒಮ್ಮೊಮ್ಮೆ  ಆಘಾತದ ಪರಿಣಾಮವು ಸಣ್ಣದಾಗಿರಬಹುದು. ಕಷ್ಟಗಳಿಗೆ ಹೆಚ್ಚೆಚ್ಚು ಒಡ್ಡಿಕೊಂಡಷ್ಟೂ ಪರಿಣಾಮಗಳು ಹೆಚ್ಚಿನದಾಗಿರುತ್ತದೆ.  ಪಿ.ಟಿ.ಎಸ್.ಡಿಯಿಂದ ಬಳಲುತ್ತಿರುವುದನ್ನು ತಿಳಿಯದೇ ಈ ಕುರಿತು ನಿರ್ಧಾರ ಮಾಡಲು ಸಾಧ್ಯವಿಲ್ಲ.

ನನ್ನ ಬಳಿ ಬರುವ ಬಹುತೇಕ ರೋಗಿಗಳು ಹೀಗೆ  "ನನ್ನ ಅನುಭವವು ಇತರರ ಅನುಭವದಂತೆಯೇ ಅತೀ ಕೆಟ್ಟದಾಗಿದೆ” ಎನ್ನುತ್ತಾರೆ. ಆಗ ಅವರಿಗೆ ರೋಗವು ತೀವ್ರವಾಗುವುದಕ್ಕೆ ಮುಂಚೆ ಚಿಕಿತ್ಸೆ ಮಾಡಿದರೆ ಖಂಡಿತ ಗುಣವಾಗುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ.

ಉದಾಹರಣೆಗೆ ತನ್ನ ಪ್ರೇಮಿಯು ತನ್ನ ನಡವಳಿಕೆಯ ಮೇಲೆ ನಿಗಾ ಇಡುತ್ತಿದ್ದಾನೆಂದು ಅನಿಸಬಹುದು. ಇದು ತಕ್ಷಣ ಪಿ.ಟಿ.ಎಸ್.ಡಿಗೆ  ದಾರಿ ಮಾಡಿಕೊಡದಿದ್ದರೂ, ಭಾವನೆಗಳ ಮೇಲೆ ಪರಿಣಾಮ ಬೀರಬಹುದು.

ಒಂದು ಸಂಕಟದ ಘಟನೆಯ ನಂತರ ಕುಸಿದಿರುವ ನಿಮ್ಮ ಭಾವನಾತ್ಮಕ ಆರೋಗ್ಯದ ಮೊದಲಿನ ಚಿಹ್ನೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ, ಆಘಾತಕಾರಿ ಘಟನೆ ನಡೆದ ಒಂದು ತಿಂಗಳ ನಂತರವೂ ಸಹ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಆಘಾತದ ಪರಿಣಾಮಗಳನ್ನು ಗುರುತಿಸಬಹುದು. ಈ ಸಂದರ್ಭದಲ್ಲಿ ವೃತ್ತಿಪರ ಸಲಹೆಗಾರರಿಂದ ಸಲಹೆ ಪಡೆಯುವುದು ಸೂಕ್ತ ದಾರಿಯಾಗಿದೆ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ. ಅಲ್ಲದೆ ನಮ್ಮ ಸಾಮರ್ಥ್ಯವನ್ನೂ ಸಹ ಅರಿತುಕೊಳ್ಳಬಹುದು.

ಪ್ರೀತಿಪಾತ್ರರೊಂದಿಗೆ, ಸಾಕುಪ್ರಾಣಿಗಳ ಜೊತೆ ಬೆರೆಯುವುದರಿಂದ, ವ್ಯಾಯಾಮ, ಯೋಗ ಮುಂತಾದವುಗಳನ್ನು ಮಾಡುವುದರಿಂದ ನಾವು ಆಘಾತಗಳಿಂದ ಬೇಗ ಚೇತರಿಸಿಕೊಳ್ಳಬಹುದು. ಈ ಮೂಲಕ ನೆಮ್ಮದಿಯಾಗಿ ಬದುಕಬಹುದು.

ಡಾ. ದಿವ್ಯಾಕಣ್ಣನ್ ಇವರು ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಗಿದ್ದು ಇತ್ತೀಚಿಗಷ್ಟೇ ಯುಎಸ್‌ಎನ ನಶ್ವಿಲ್ಲೆಯಲ್ಲಿರುವ ವಂಡರ್‌ಬಿಲ್ಟ್‌ ಯುನಿವರ್ಸಿಟಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿ ಇವರು ಹಲವಾರು ವರ್ಷಗಳ ಕಾಲ ಹಿಂಸಾಪೀಡಿತ ಹಿರಿಯನಾಗರಿಕರ ಜತೆ ಕಾರ್ಯನಿರ್ವಹಿಸಿದ್ದರು. ಈಗ ಬೆಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org