ಸ್ವಯಂ- ಸಹಾನುಭೂತಿ ಎಂದರೇನು?

ಸ್ವ-ಸಹಾನುಭೂತಿಯು ನಿಮ್ಮ ಜೀವನಮಟ್ಟವನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ

ನೀವು ನಿಮ್ಮ ಬಗ್ಗೆಯೆ ಯಾವಾಗ ಅಸಾಮಾಧಾನಗೊಂಡಿರಿ ಎಂದು ಯೋಚಿಸಿ. ಹಲವು ಬಾರಿ, ನಾವು ನಮ್ಮ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸುತ್ತೇವೆ, ಮುಖ್ಯವಾಗಿ ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಪರಿಪೂರ್ಣರಾಗಿರಬೇಕೆಂದು ಸದಾ ಪ್ರಯತ್ನಿಸುತ್ತೇವೆ. ಒಂದು ವೇಳೆ ನಮ್ಮ ಪ್ರಯತ್ನ ವಿಫಲವಾದರೆ ನಮ್ಮನ್ನು ನಾವು ನಿಂದಿಸುತ್ತೇವೆ.

ಆದರೆ, ಸ್ವ-ವಿಮರ್ಶೆಯು ಯಾವಾಗಲೂ ಉತ್ತಮ ಬದಲಾವಣೆಗೆ ಕಾರಣವಾಗುತ್ತದೆಯೇ?

ನಾವು ನಮ್ಮನ್ನು ಉತ್ತಮಪಡಿಸಿಕೊಳ್ಳಲು ಬಯಸಿದಾಗ ಸ್ವ-ವಿಮರ್ಶೆಯು ಸಹಜವಾಗಿರುತ್ತದೆ. ಆದರೆ, ಇದು ದೀರ್ಘಕಾಲದವರೆಗೆ ಮುಂದುವರಿದರೆ ನಮ್ಮ ಯೋಚನೆ ಮತ್ತು ನಡವಳಿಕೆಯ ಮೇಲೆ ಪ್ರಭಾವ ಬೀರಬಹುದು.ನಾವು ಎಷ್ಟರ ಮಟ್ಟಿಗೆ ನಮ್ಮ ಕೊರತೆ ಅಥವಾ ವಿಫಲತೆಯ ಕುರಿತು ನಿರಂತರವಾಗಿ ವಿಮರ್ಶಿಸಿಕೊಳ್ಳುತ್ತಿದ್ದರೆ ನಾವು ಸ್ವ-ಸಹಾನುಭೂತಿಯ ಬಗ್ಗೆ ಯೋಚಿಸಬೇಕಾಗುತ್ತದೆ.

ಸ್ವ-ಸಹಾನುಭೂತಿ (self compassion) ಎಂದರೇನು?

ನಮ್ಮ ಸ್ನೇಹಿತರು, ಸಂಬಂಧಿಗಳು ಅಥವಾ ಇನ್ಯಾರಾದರೂ ಸಂಕಷ್ಟದಲ್ಲಿದ್ದಾಗ ಅವರಿಗೆ ಅನುಕಂಪ ತೋರಿಸುತ್ತೇವೆ ಮತ್ತು ಅವರಿಗೆ ಸಹಾಯ ಮಾಡುತ್ತೇವೆ. ಸ್ವ-ಸಹಾನುಭೂತಿಯು ನಮ್ಮ ಬಗೆಗಿರುವ ಸಹಾನುಭೂತಿಯಾಗಿದೆ.

ಸ್ವ-ಸಹಾನುಭೂತಿಯ ಮೂರು ಅಂಶಗಳೆಂದರೆ:

ಮೈಂಡ್ಫುಲ್ನೆಸ್ (Mindfulness): ನಮ್ಮ ಭಾವನೆ ಅಥವಾ ಯೋಚನೆಗಳನ್ನು ಸೂಕ್ಷ್ಮವಾಗಿ ಮತ್ತು ಮುಕ್ತವಾಗಿ ಗಮನಿಸಿ, ಅದೇ ಸಮಯದಲ್ಲಿ ನಮ್ಮ ಆಲೋಚನೆಗಳ ಪ್ರಭಾವಕ್ಕೆ ಒಳಗಾಗದೇ, ಯಾವುದೇ ಹಠಾತ್ ತೀರ್ಮಾನಕ್ಕೆ ಬರದೇ ಸಂದರ್ಭಕ್ಕೆ ಸೂಕ್ತವಾಗಿ ವರ್ತಿಸುವುದೇ ಮೈಂಡ್ಫುಲ್ನೆಸ್.

ಮಾನವೀಯತೆ: ತಾತ್ವಿಕ ನೆಲೆಗಟ್ಟಿನಲ್ಲಿ ಮಾನವ ಜೀವನದ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಮಾನವ ನಶ್ವರ ಮತ್ತು ಅವನಲ್ಲಿ ದೌರ್ಬಲ್ಯಗಳು ಕಂಡುಬರುತ್ತವೆ ಎಂಬ ನಿಜಾಂಶವನ್ನು ಅರಿಯಬೇಕು. ಆಗ ನಾವು ನಮ್ಮ ಮಿತಿ ತಿಳಿದು, ವೈಯಕ್ತಿಕ ಅಪೂರ್ಣತೆಯು ಮಾನವ ಜೀವನದ ಒಂದು ಭಾಗ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕರುಣೆ: ನಾವು ಸಂಕಷ್ಟದಲ್ಲಿರುವಾಗ, ಸೋತಾಗ ಅಥವಾ ಜೀವನದಲ್ಲಿ ಏನೋ ಕೊರತೆಯೆನಿಸಿದಾಗ, ನಮ್ಮ ಬಗ್ಗೆ ನಮಗೆ ಸಹನೆ ಹಾಗೂ ಸಹಿಷ್ಣುತೆ ಇರಬೇಕು

ಸ್ವ-ಸಹಾನುಭೂತಿಯ ಅನುಕೂಲಗಳು

ಸಂಶೋಧನೆಗಳು ಸ್ವ-ಸಹಾನುಭೂತಿಯ ಹಲವು ಲಾಭಗಳನ್ನು ದೃಢಪಡಿಸಿವೆ: ಧನಾತ್ಮಕ ಭಾವನೆಗಳ ಹೆಚ್ಚಳ, ಸಂತೃಪ್ತಿ, ವಿವೇಕ, ಭರವಸೆ,ಎಲ್ಲರೊಂದಿಗೆ ಅರ್ಥಪೂರ್ಣವಾದ ಸಂಬಂಧ ಬೆಳೆಸುವುದು. ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಸಮರ್ಥವಾಗಿ ಬಾಳಲು ಸಾಧ್ಯ. ಅದೇ ರೀತಿ ನಮ್ಮ ಬಗ್ಗೆ ಸಹಾನುಭೂತಿಯಿಲ್ಲದಿದ್ದರೆ ಹೆಚ್ಚು ನಿಂದಿಸುವುದು, ಅತಿಯಾಗಿ ಚಿಂತೆ ಮಾಡಿ ಭಾವನೆಗಳನ್ನು ಅದುಮಿ ಸಂಕಟ ಪಡುವುದು.

ಸ್ವ-ಸಹಾನುಭೂತಿಯನ್ನು ಬೆಳಸಿಕೊಳ್ಳಲು ಏನು ಮಾಡಬೇಕು?

  • ತಾರ್ಕಿಕ, ವೈಚಾರಿಕ ವಾದದ ಮೂಲಕ ನಿಮ್ಮ ಸ್ವ-ವಿಮರ್ಶೆಯನ್ನು ಕಡಿಮೆ ಮಾಡಿ.

  • ಪುಸ್ತಕದಲ್ಲಿ ನಿಮ್ಮ ಸ್ವ-ವಿಮರ್ಶೆಯ ಭಾವನೆಗಳ ಬಗ್ಗೆ ಬರೆಯಿರಿ ಮತ್ತು ಒಬ್ಬ ಸ್ನೇಹಿತನಿಗೆ ನೀವು ಇದೇ ರೀತಿ ಹೇಳುತ್ತಿದ್ದಿರೇ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ.

  • ನಿಮ್ಮ ವೈಕ್ತಿತ್ವ ಹೇಗಿದೆಯೋ ಹಾಗೆಯೇ ಅದನ್ನು ಒಪ್ಪಿಕೊಳ್ಳಿ.

  • ನಿಮ್ಮ ಸೋಲು, ವೈಫಲ್ಯ ಮತ್ತು ವೈಯಕ್ತಿಕ ಕುಂದುಗಳನ್ನು ಕ್ಷಮಿಸಿ.

  • ನಿಮ್ಮ ಬಗ್ಗೆ ಸಹಾನುಭೂತಿಯುಳ್ಳ ಸ್ನೇಹಿತ ಬರೆದ ರೀತಿಯಲ್ಲಿಯೇ ನಿಮಗೇ ನೀವೆ ಸ್ವ-ಸಹಾನುಭೂತಿಯ ಪತ್ರಗಳನ್ನು ಬರೆದುಕೊಳ್ಳಿ.

ಈ ಲೇಖನವು ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್ ಬೀಯಿಂಗ್ ನಡೆಸಿದ ಕಾರ್ಯಾಗಾರವನ್ನು ಆಧರಿಸಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org