ಆಸ್ಪರ್ಜರ್ಸ್ ಬೇನೆ ಎಂದರೇನು ?

ಆಸ್ಪರ್ಜರ್ಸ್ ಬೇನೆ ಎಂದರೇನು ?

ಆಸ್ಪರ್ಜರ್ಸ್ ಬೇನೆ ಎಂದರೆ ಬೆಳವಣಿಗೆಯಲ್ಲಿ ಕಂಡುಬರುವ ವ್ಯತ್ಯಯಗಳು. ಇದನ್ನು ಅಟಿಸಂ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತದೆ.

ಆಸ್ಪರ್ಜರ್ಸ್ ಲಕ್ಷಣಗಳನ್ನು ಮೊಟ್ಟಮೊದಲು ಗುರುತಿಸಿದ್ದು 1940ರಲ್ಲಿ, ವಿಯೆನ್ನಾದ ಶಿಶುವೈದ್ಯರಾದ ಹನ್ಸ್ ಆಸ್ಪರ್ಜರ್ಸ್. ತಮ್ಮ ಬಳಿ ಬರುತ್ತಿದ್ದ ಎಳೆ ವಯಸ್ಸಿನ  ಗಂಡುಮಕ್ಕಳಲ್ಲಿ ಆಸ್ಪರ್ಜರ್ಸ್ ಈ ಲಕ್ಷಣಗಳನ್ನು ಗುರುತಿಸಿದ್ದರು. ಈ ರೋಗಿಗಳಿಗೆ ಸಹಜವಾದ ಬುದ್ದಿಮತ್ತೆ ಇರುತ್ತಿತ್ತು, ಭಾಷೆಯ ಕಲಿಕೆಯಲ್ಲೂ ಯಾವುದೇ ಕೊರತೆ ಇರುತ್ತಿರಲಿಲ್ಲ. ಆದರೆ ಸಾಮಾಜಿಕ ಸಂವಹನದಲ್ಲಿ ದೌರ್ಬಲ್ಯ ಹೆಚ್ಚಾಗಿರುತ್ತಿತ್ತು. ಪರಿಣಾಮ ಸಾಮಾಜಿಕ ವಲಯದಲ್ಲಿ ಇತರರೊಡನೆ ಕಲೆತು ಬಾಳುವುದು ಕಷ್ಟವಾಗುತ್ತಿತ್ತು. ಈ ಹುಡುಗರನ್ನು ಹನ್ಸ್ ಆಸ್ಪರ್ಜರ್ಸ್ “ ಪುಟ್ಟ ಪ್ರೊಫೆಸರ್ಸ್ ” ಎಂದು ಕರೆಯುತ್ತಿದ್ದರು. ಏಕೆಂದರೆ ಈ ಮಕ್ಕಳು ತಮ್ಮ ನೆಚ್ಚಿನ ವಿಷಯದ ಬಗ್ಗೆ ಧಾರಾಳವಾಗಿ ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ಆಸ್ಪರ್ಜರ್ಸ್ ಲಕ್ಷಣವನ್ನು ಆಟಿಸಂನ ಮೃದು ಸ್ವರೂಪ ಎನ್ನಲಾಗುತ್ತದೆ. ಅಥವಾ ಉಲ್ಬಣಿಸಿದ ಆಟಿಸಂ ಎನ್ನಲಾಗುತ್ತದೆ. ಈ ಬೇನೆಯನ್ನು ಮಕ್ಕಳಲ್ಲಿ ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಆಸ್ಪರ್ಜರ್ಸ್ ಸಮಸ್ಯೆ ಇರುವ ಮಕ್ಕಳು ಪ್ರತಿಭಾವಂತರಾಗಿರುತ್ತಾರೆ, ಚೆನ್ನಾಗಿ ಮಾತನಾಡುತ್ತಾರೆ ಹಾಗೂ ತಮ್ಮ ನಿತ್ಯ ಚಟುವಟಿಕೆಗಳಲ್ಲಿ ಯಾವುದೇ ಸಮಸ್ಯೆ ಹೊಂದಿರುವುದಿಲ್ಲ. ಹಾಗಾಗಿ ಸಾಮಾಜಿಕ ವಲಯದಲ್ಲಿ ಅವರು ಎದುರಿಸುವ ಸವಾಲುಗಳನ್ನು ವರ್ತನೆಯ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸಲಾಗುತ್ತದೆ. 

2013ರಲ್ಲಿ ಪ್ರಕಟವಾದ ಮಾನಸಿಕ ಖಾಯಿಲೆಗಳ ತಪಾಸಣೆ ಮತ್ತು ಅಂಕಿಅಂಶಗಳ ಕೈಪಿಡಿ (ಡಿಎಸ್ಎಂ-5)ರ ಅನ್ವಯ ಆಟಿಸಂ ಮತ್ತು ಆಸ್ಪರ್ಜರ್ಸ್ ಸಮಸ್ಯೆಯನ್ನು ಆಟಿಸಂ ಸ್ಪೆಕ್ಟ್ರಂ ಬೇನೆ ಎಂದು ಪರಿಗಣಿಸಲಾಗುತ್ತದೆ.

ಆಸ್ಪರ್ಜರ್ಸ್ ಬೇನೆಯ ಸೂಚನೆ ಮತ್ತು ಲಕ್ಷಣಗಳು

ಸಾಮಾಜಿಕ ಪರಸ್ಪರ ಕ್ರಿಯೆ: ಆಸ್ಪರ್ಜರ್ಸ್ ಬೇನೆ ಇರುವ ಮಕ್ಕಳಿಗೆ ಗ್ರಹಣ ಶಕ್ತಿ ಉತ್ತಮವಾಗಿರುತ್ತದೆ. ಭಾಷಾ ಕೌಶಲ್ಯ ಇರುತ್ತದೆ ಮತ್ತು ಇತರರೊಡನೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಕಾತುರರಾಗಿರುತ್ತಾರೆ. ಆದರೆ ಸಂವಹನ ನಡೆಸುವಲ್ಲಿ , ಇತರರೊಡನೆ ಮಾತನಾಡುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಸಾಮಾಜಿಕವಾಗಿ ಇಂತಹ ಮಕ್ಕಳು ವಿಚಿತ್ರವಾಗಿ ಕಾಣಿಸುತ್ತಾರೆ. ಸಾಮಾಜಿಕ ನಿಯಮಗಳನ್ನು ಅನುಸರಿಸುವುದಿಲ್ಲ. ದೇಹಭಾಷೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಮತ್ತೊಬ್ಬರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆಸ್ಪರ್ಜರ್ಸ್ ಬೇನೆ ಇರುವ ಮಕ್ಕಳು ಯಾವುದೇ ರೀತಿಯ ಸಂಜ್ಞೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ, ವ್ಯಂಗ್ಯವೂ ಅವರಿಗೆ ಅರ್ಥವಾಗುವುದಿಲ್ಲ. ಹೇಳಿದ್ದನ್ನು ಯಥಾವತ್ತಾಗಿ ಅರ್ಥಮಾಡಿಕೊಳ್ಳುತ್ತಾರೆ.

ನಿರ್ಬಂಧಿತ ಆಸಕ್ತಿಗಳು – ಮರುಕಳಿಸುವ ವರ್ತನೆ: ಆಸ್ಪರ್ಜರ್ಸ್ ಬೇನೆ ಇರುವ ಮಕ್ಕಳನ್ನು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಲು ತೊಡಗಿಸಬಹುದು. ಈ ವಿಷಯಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲು ಅವರಿಂದ ಸಾಧ್ಯವಾಗುತ್ತದೆ. ಉದಾಹರಣೆಗೆ ರೈಲುಗಳು, ಡೈನಾಸರ್ ಇತ್ಯಾದಿ.

ಕೆಲವೊಮ್ಮೆ ಈ ಮಕ್ಕಳು ಒಂದೇ ರೀತಿಯ ವರ್ತನೆಯನ್ನು ಮತ್ತೆ ಮತ್ತೆ ತೋರುತ್ತಾರೆ. ಎರಡೂ ಕೈಗಳನ್ನು ಬೆಸೆದು ಹಿಡಿಯುವುದು ಇಂತಹ ಒಂದು ಲಕ್ಷಣ. ಆಟಿಸಂ ಸಮಸ್ಯೆಯಲ್ಲಿರುವಂತೆಯೇ ಆಸ್ಪರ್ಜರ್ ಸಮಸ್ಯೆಯಲ್ಲೂ  ಇಂದ್ರಿಯ ಸೂಕ್ಷ್ಮತೆ ಇರುತ್ತದೆ. ಅಂದರೆ ದೃಷ್ಟಿ, ಶಬ್ದ ಅಥವಾ ವಾಸನೆ ಇವರಿಗೆ ಬೇಗನೆ ತಲುಪುವುದೇ ಅಲ್ಲದೆ ಇವರ ಪ್ರತಿಕ್ರಿಯೆ ತೀಕ್ಷ್ಣವಾಗಿರುತ್ತದೆ. ಉದಾಹರಣೆಗೆ, ಮಗು ಕೆಲವು ಶಬ್ದಗಳಿಂದ ಅಥವಾ ವಾಸನೆಯಿಂದ ಬೇಗನೆ ಬೇಸರ ಮಾಡಿಕೊಳ್ಳುತ್ತದೆ, ಕೆಲವು ಸಂದರ್ಭಗಳಲ್ಲಿ ಭಾವುಕವಾಗಿ ಅರಚಾಡಿಬಿಡುತ್ತದೆ.

ಆಸ್ಪರ್ಜರ್ಸ್ ಬೇನೆ ಮತ್ತು ಅಟಿಸಂ ನಡುವೆ ಕಾಣಬಹುದಾದ ಒಂದು ವ್ಯತ್ಯಾಸ ಎಂದರೆ, ಆಸ್ಪರ್ಜರ್ಸ್ ಸಮಸ್ಯೆ ಎದುರಿಸುತ್ತಿರುವ ಮಗುವಿಗೆ ಭಾಷೆಯನ್ನು ಕಲಿಯುವುದು ಕಷ್ಟವಾಗುವುದಿಲ್ಲ. ಅಥವಾ ಗುರುತಿಸುತ್ತಾ ಬೆಳೆಯುವುದು ಕಷ್ಟವಾಗುವುದಿಲ್ಲ.

ಆಸ್ಪರ್ಜರ್ಸ್ ಸಮಸ್ಯೆ ಇರುವ ಮಕ್ಕಳು ಒಳ್ಳೆಯ ಓದಿನ ಹವ್ಯಾಸ ಹೊಂದಿರುತ್ತಾರೆ, ಸರಾಸರಿಗಿಂತಲೂ ಹೆಚ್ಚಿನ ಬುದ್ಧಿಮತ್ತೆ ಹೊಂದಿರುತ್ತಾರೆ. ಆದರೆ ಆಟಿಸಂ ಸಮಸ್ಯೆಯಂತೆಯೇ ಆಸ್ಪರ್ಜರ್ ಸಮಸ್ಯೆ ಇರುವ ಮಕ್ಕಳ ಮಾತಿನ ವೈಖರಿ ಮತ್ತು ವಿಧಾನ ಸಹಜವಾಗಿರುವುದಿಲ್ಲ. ಒಂದೇರೀತಿಯಾಗಿ ಮಾತನಾಡುವುದು, ಗಟ್ಟಯಾಗಿ ಮಾತನಾಡುವುದು, ಏರು ದನಿಯಲ್ಲಿ ಮಾತನಾಡುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು. ಮೋಟರ್ ಕೌಶಲ ವಿಳಂಬದ ಲಕ್ಷಣಗಳೂ ಇಂಥವರಲ್ಲಿ ಕಾಣಿಸಿಕೊಳ್ಳಬಹುದು. ಇದನ್ನು ಮಕ್ಕಳ ವಿಚಿತ್ರ ದೈಹಿಕ ಚಲನವಲನದಲ್ಲಿ ಗುರುತಿಸಬಹುದು.

ಆಸ್ಪರ್ಜರ್ಸ್ ಬೇನೆಯ ಕಾರಣಗಳು

ಆಸ್ಪರ್ಜರ್ಸ್ ಬೇನೆಯ ನಿರ್ದಿಷ್ಟ ಕಾರಣಗಳನ್ನು ಇನ್ನೂ ಗುರುತಿಸಲಾಗಿಲ್ಲ. ಆದ್ದರಿಂದ ಈ ಸಮಸ್ಯೆ ಹಲವು ಕುಟುಂಬಗಳಲ್ಲಿ ಇರುತ್ತದೆ, ವಂಶವಾಹಿನಿಯ ಪ್ರಭಾವವೂ ಇರುತ್ತದೆ. ಆದರೆ ಯಾವುದೇ ವಂಶವಾಹಿಯನ್ನು ಗುರುತಿಸಲಾಗಿಲ್ಲ. ಆಸ್ಪರ್ಜರ್ ಬೇನೆ ಹುಡುಗಿರಯರಿಗಿಂತಲೂ ಹುಡುಗರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಆಸ್ಪರ್ಜರ್ಸ್ ಬೇನೆಯ ಲಕ್ಷಣಗಳ ತಪಾಸಣೆ

ಆಸ್ಪರ್ಜರ್ಸ್ ಸಮಸ್ಯೆಯನ್ನು ಗುರುತಿಸಲು ಸಾಮಾನ್ಯವಾಗಿ ಪೋಷಕರೊಡನೆ ಅಥವಾ ಪಾಲಕರೊಡನೆ ವಿವರವಾದ ಸಂದರ್ಶನ ಮಾಡುವ ಮೂಲಕ , ಮಕ್ಕಳ ಶಿಕ್ಷಕರೊಡನೆ ಮಾತನಾಡುವ ಮೂಲಕ ಪ್ರಯತ್ನಿಸಲಾಗುತ್ತದೆ. ಮಕ್ಕಳ ಬೆಳವಣಿಗೆಯ ಹಂತಗಳು, ಬೆಳವಣಿಗೆಯ ವಿಧಾನ ಮತ್ತು ಲಕ್ಷಣಗಳ ಮಾಹಿತಿಯನ್ನು ಸಂಗ್ರಹಿಸಿ ತಜ್ಞರು ಮೂಲ ಸಮಸ್ಯೆಯನ್ನು ಗುರುತಿಸುತ್ತಾರೆ.

ಸಮಾಜದಲ್ಲಿ ಮಕ್ಕಳ ವರ್ತನೆ , ಪ್ರತಿಕ್ರಯಿಸುವ ರೀತಿ ಮತ್ತು ಚಟುವಟಿಕೆಯ ಮೂಲಕವೂ ಗುರುತಿಸಲಾಗುತ್ತದೆ. ಅಸ್ಪರ್ಜರ್ ಸಮಸ್ಯೆ ಇರುವ ಬಹುಪಾಲು ಮಕ್ಕಳು ಐದರಿಂದ ಒಂಬತ್ತು ವರ್ಷದವರಾಗಿರುತ್ತಾರೆ. ಈ ಮಕ್ಕಳ ಸ್ಥಿತಿಯನ್ನು ಗುರುತಿಸುವುದು ಕಷ್ಟವಾಗುವುದರಿಂದ ತಪ್ಪು ತಪಾಸಣೆಯಾಗುವ ಸಾಧ್ಯತೆ ಇರುತ್ತದೆ. ಅಥವಾ ಎಡಿಎಚ್ ಡಿ, ಒಸಿಡಿ ಅತವಾ ಟೋರೆಟ್ ಸಮಸ್ಯೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ.

ಆಸ್ಪರ್ಜರ್ಸ್ ಬೇನೆಗೆ ಅಗತ್ಯವಾದ ಮಧ್ಯಸ್ತಿಕೆ ಮತ್ತು ಚಿಕಿತ್ಸೆ

ಆಸ್ಪರ್ಜರ್ಸ್ ಬೇನೆ ವಾಸಿಯಾಗುವಂತಹುದಲ್ಲ. ಆದರೆ ಹಲವು ರೀತಿ ಮಧ್ಯಸ್ತಿಕೆ ವಹಿಸುವ ಮೂಲಕ ಆಸ್ಪರ್ಜರ್ಸ್ ಬೇನೆ ಇರುವ ಮಕ್ಕಳಿಗೆ ಅವರ ಜೀವನದ ಮೇಲೆ ಯಾವುದೇ ದುಷ್ಪರಿಣಾಮ ಆಗದಂತೆ ಕೆಲವು ಸಲಹೆಗಳನ್ನು ನೀಡುವ ಮೂಲಕ ನೆರವಾಗಬಹುದು.

ಈ ವಿಧಾನದ ಮೂಲಕ ಮಕ್ಕಳಿಗೆ ಸಮಾಜದಲ್ಲಿ ಇತರರೊಡನೆ ಬೆರೆಯುವ, ಪ್ರತಿಕ್ರಯಿಸುವ ರೀತಿಯನ್ನು ಕಲಿಸಬಹುದು. ಚೆನ್ನಾಗಿ ಮಾತನಾಡುವಂತೆ ಚಿಕಿತ್ಸೆ ನೀಡುವುದು, ಸಾಮಾಜಿಕ ಕೌಶಲಗಳ ತರಬೇತಿ ನೀಡುವುದು ಕೆಲವು ಮಾರ್ಗಗಳು.

ಶಾಲೆಗಳಲ್ಲಿ ಪ್ರತ್ಯೇಕಿಸಲ್ಪಡುವ ಮಕ್ಕಳಿಗೆ ಅಂತಹ ಸನ್ನಿವೇಶವನ್ನು ಹೇಗೆ ಎದುರಿಸುವುದು ಎಂದು ಸೂಕ್ತ ಸಲಹೆಗಳ ಮೂಲಕ ತಿಳಿಯಪಡಿಸಬಹುದು. ಅವರ  ವರ್ತನೆಯನ್ನು , ಪ್ರತಿಕ್ರಯಿಸುವ ರೀತಿಯಲ್ಲಿ ಬದಲಾವಣೆಯಾಗುವಂತೆ ಸರಿಪಡಿಸಬಹುದು. ವೃತ್ತಿಪರ ಚಿಕಿತ್ಸೆಯ ಮೂಲಕ ಮೋಟರ್ ಕೌಶಲವನ್ನು ಹೆಚ್ಚಿಸುವುದು, ಅಂಗಾಂಗ ಸ್ಪರ್ಶದ ಸಮಸ್ಯೆಗಳನ್ನು ನಿವಾರಿಸುವುದು ಇನ್ನು ಕೆಲವು ಮಾರ್ಗಗಳು. ಇದರೊಟ್ಟಿಗೆ ಪೋಷಕರಿಗೆ ಮತ್ತು ಪಾಲಕರಿಗೆ ಹೆಚ್ಚಿನ ಧೈರ್ಯ ನೀಡುವಂತೆ ಹಲವು ಸಲಹೆಗಳನ್ನು ನೀಡಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org