We use cookies to help you find the right information on mental health on our website. If you continue to use this site, you consent to our use of cookies.

ವಿಶೇಷ ಪ್ರಶ್ನೆಗಳು

ನಾನು 26 ವರ್ಷದ ಯುವಕ .ಮೂರು ವರ್ಷಗಳಿಂದ ಒಂದು ಪ್ರಖ್ಯಾತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ನಾನು ಬೈಪೋಲಾರ್ ಅಸ್ವಸ್ಥತೆಯಿಂದ ಬಳಲುತ್ತಿದ್ದೆ. ಕಳೆದ ವರ್ಷ ಚಿಕಿತ್ಸೆ ಪಡೆಯಲೆಂದು ರಜೆ ಪಡೆಯಬೇಕಾಯಿತು. ಚಿಕಿತ್ಸೆ ಪಡೆದು ಗುಣಮುಖವಾದ ನಂತರ ಕಛೇರಿಗೆ ಹಿಂದುರಿಗಿದೆ. ಎಂದಿನಂತೆ ಎಲ್ಲವೂ ಸುಸ್ಥಿತಿಯಲ್ಲಿತ್ತು. ಆದರೆ ಇತ್ತೀಚೆಗೆ ನೋಟಿಸ್ ಪತ್ರವೊಂದು ಕೈ ಸೇರಿತು. ಅದರಲ್ಲಿ ಇನ್ನು ಮುಂದೆ ನಾನು ಕೆಲಸದಲ್ಲಿ ಮುಂದುವರೆಯಬಾರದೆಂಬ ಸೂಚನೆ ನೀಡಲಾಗಿತ್ತು. ನನ್ನ ದಾಖಲೆಗಳಲ್ಲಿ ಯಾವುದೇ ದೋಷವಿಲ್ಲದಿದ್ದರೂ, ಈ ರೀತಿ ನನ್ನನ್ನು ಕೆಲಸದಿಂದ ತೆಗೆದುಹಾಕಲು ನನ್ನ ಕಾಯಿಲೆಯೇ ಕಾರಣವಿರಬಹುದೆಂದು ನನ್ನ ಅಭಿಪ್ರಾಯ. ಇದಕ್ಕೆ ಏನಾದರೂ ಕಾನೂನು ಪರಿಹಾರವಿದೆಯೇ ?

ನಮ್ಮ ದೇಶದ ಖಾಸಗಿ ಕ್ಷೇತ್ರದಲ್ಲಿ ವಿಕಲಚೇತನ/ ಅಶಕ್ತತೆ ಆಧಾರದ ಮೇಲೆ ತಾರತಮ್ಯ ಮಾಡದೇ, ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂಬ ಯಾವುದೇ ಕಡ್ಡಾಯವಾದ ಕಾನೂನುಗಳಿಲ್ಲ. 1995 ರ ಕಾಯ್ದೆ ಪ್ರಕಾರ, ವಿಕಲಚೇತನರ ಹಕ್ಕುಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ವಿಷಯವು ವಿಕಲಚೇತನರಿಗಾಗಿ ನೇಮಕವಾಗಿರುವ ಮುಖ್ಯ ಆಯುಕ್ತರ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಈ ಕಾಯ್ದೆಯು ಸೂಚಿಸುವಂತೆ ವಿಕಲ ಚೇತನ ವ್ಯಕ್ತಿಯೊಬ್ಬ ತನ್ನ ಹಕ್ಕುಗಳ ಸಂಬಂಧ ದೂರು ನೀಡಬೇಕಾದರೆ, ತನ್ನ ಅಶಕ್ತತೆಯ ದೃಢೀಕರಣ ಪತ್ರ ಒದಗಿಸಬೇಕು.ಇಲ್ಲವಾದಲ್ಲಿ ಅಂತಹ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ.

ಒಂದು ವೇಳೆ ಇಂತಹ ಘಟನೆಗಳು, ಯೂರೋಪ್ ಒಕ್ಕೂಟ, ಯುನೈಟೆಡ್ ಕಿಂಗ್ಡಮ್ ಅಥವಾ ಯೂನೈಟೆಡ್ ಸ್ಟೇಟ್ಸ್ ಗಳಂತಹ ದೇಶಗಳ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಜರುಗಿದ್ದರೆ, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ಪರಿಹಾರ ಸಿಗುತ್ತಿತ್ತು. ಏಕೆಂದರೆ ಆ ರಾಷ್ಟ್ರಗಳಲ್ಲಿ ಪ್ರತಿಯೊಂದು ಖಾಸಗಿ ಸಂಸ್ಥೆಯೂ ತನ್ನ ಉದ್ಯೋಗಿಗಳಿಗಾಗಿ , ಮಾನಸಿಕ ಆರೋಗ್ಯ ಅಥವ ವಿಕಲ ಚೇತನ ಕುರಿತಂತೆ ತಾರತಮ್ಯ ಮಾಡದೇ ಉದ್ಯೋಗದಲ್ಲಿ ಸಮಾನತೆ ಕಾಯ್ದುಕೊಳ್ಳಲು ಕಾರ್ಯನೀತಿ ಅಳವಡಿಸಲು ಕಡ್ಡಾಯವಾದ ಕಾನೂನುಗಳಿವೆ. ಉದಾಹರಣೆಗೆ 1990ರ ಅಮೇರಿಕಾದ ಡಿಸೆಬಿಲಿಟಿ ಕಾಯ್ದೆ,2010 ರ ಯೂನೈಟೆಡ್ ಕಿಂಗ್ಡಮ್ ಇಕ್ವಾಲಿಟಿ ಕಾಯ್ದೆ,2008 ರ ಯೂರೋಪಿಯನ್ ಒಕ್ಕೂಟದ ಎಂಪ್ಲಾಯ್ ಮೆಂಟ್ ಇಕ್ವಾಲಿಟಿ ಡೈರೆಕ್ಟೀವ್ ಕಾಯ್ದೆ, ಇತ್ಯಾದಿಗಳು ಮಾದರಿಯಾಗಿವೆ.

ಭಾರತದಂತಹ ದೇಶದಲ್ಲಿ ನೀವು ಕೆಲಸ ಮಾಡುತ್ತಿದ್ದು, ಇಂತಹ ಕಾನೂನು ಅಥವ ಕಾಯ್ದೆಗಳ ಬಗ್ಗೆ ನಿಮ್ಮ ಸಂಸ್ಥೆಯ ಆಡಳಿತ ವರ್ಗ ಅಥವ ಮಾನವ ಸಂಪನ್ಮೂಲ ಇಲಾಖೆಯ ಗಮನಕ್ಕೆ ತರಲು ಇಚ್ಚಿಸುವಿರಾದರೆ ಒಂದು ಪತ್ರದ ಮೂಲಕ ವಿನಮ್ರವಾಗಿ ಚರ್ಚಿಸುವ ಪ್ರಯತ್ನಮಾಡಬಹುದು.ಇದರಿಂದ ನಿಮ್ಮ ಉದ್ಯೋಗವನ್ನು ಕಾಯ್ದುಕೊಳ್ಳಲು ಅಥವಾ ಏನಾದರೂ ಸಮಾಧಾನಕರ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಬಹುದು.ಆದರೆ ನಿಮ್ಮ ಅಶಕ್ತತೆಯ ಅಥವ ಮಾನಸಿಕ ಆರೋಗ್ಯಕ್ಕೆ ಸಂಬಂಧಿತ ಹಕ್ಕುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಏಕೆಂದರೆ ಭಾರತದ ಖಾಸಗಿ ವಲಯದಲ್ಲಿ ಅಶಕ್ತತೆ ಅಥವ ಮಾನಸಿಕ ಆರೋಗ್ಯ ಸಂಬಂಧಿತ ಕಾರ್ಯನೀತಿಗಳ ಅಳವಡಿಕೆ ಕಡ್ಡಾಯವಿಲ್ಲ. ಅದಾಗ್ಯೂ ಅದೆಷ್ಟೋ ಪ್ರಕರಣಗಳಲ್ಲಿ ಆರೋಗ್ಯಕರ ಚರ್ಚೆಗಳ ಮೂಲಕ ಪರಿಹಾರ ದೊರಕಿವೆ.

ಕಾನೂನು ಸಲಹೆಗಾರರು : ಅಂಬಾ ಸಾಲೇಲ್ಕರ್, ವಕೀಲರು, ಚೆನ್ನೈ( ವಿಶೇಷ ಆಸಕ್ತಿ :ವಿಕಲ ಚೇತನರಿಗೆ ಕಾನೂನು ಮತ್ತು ನೀತಿಗಳು )

ನನ್ನ ಮಗನಿಗೆ 24 ವರ್ಷ, ಅವನು ನಾಲ್ಕು ವರ್ಷಗಳಿಂದ ಸ್ಕೀಜ್ಹೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ.ಪ್ರಸ್ತುತ ಅವನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಗುಣಮುಖನಾಗಿದ್ದಾನೆ. ನಮಗೆ ಅವನ ಮದುವೆ ಮಾಡಬೇಕೆಂದು ಆಸೆಯಾಗಿದೆ. ಒಂದು ವೇಳೆ ಅವನು ಮದುವೆಯಾದಲ್ಲಿ, ಭವಿಷ್ಯದಲ್ಲಿ ಈ ಕಾಯಿಲೆಯಿಂದ ಏನಾದರೂ ತೊಂದರೆಯಾಗುವುದೇ?ಈ ವಿಷಯದಲ್ಲಿ ಹೇಗೆ ಹೆಜ್ಜೆಯಿಡಬೇಕು?

ಮಾನಸಿಕ ಅಸ್ವಸ್ಥತೆಯ ನಿರ್ವಹಣೆಯು, ನಮ್ಮ ನಂಬಿಕೆ ಮತ್ತು ಅರ್ಥೈಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಮದುವೆ ನಿಶ್ಚಯವಾಗಿರುವ ಹುಡುಗಿಯೊಂದಿಗೆ ಸಂಪೂರ್ಣ ವಿಷಯವನ್ನು ಮುಕ್ತವಾಗಿ ಮಾತನಾಡುವುದು ಒಳ್ಳೆಯದು.ಅದಕ್ಕೆ ಎರಡು ಪ್ರಮುಖ ಕಾರಣಗಳನ್ನು ನೀಡಬಹುದು: ಮೊದಲನೆಯದಾಗಿ, ಒಂದು ಸಂಬಂಧದಲ್ಲಿ ಪರಸ್ಪರ ಇರಬೇಕಾದ ನಂಬಿಕೆಯ ಪ್ರಶ್ನೆಯಾಗಿರುತ್ತದೆ ಮತ್ತು ಮದುವೆಯಾದ ನಂತರ ಸಂಗಾತಿಗೆ ಅಗತ್ಯವಿರುವ ಬೆಂಬಲ ನೀಡಲು ಸಾಧ್ಯವಿದೆಯೇ? ಎಂಬ ವಿಷಯದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕಾಗುತ್ತದೆ.

ಎರಡನೆಯದಾಗಿ, ಕಾನೂನಿನ ಪ್ರಕಾರ ಸತ್ಯವನ್ನು ಮರೆಮಾಚಿ ವಿವಾಹವಾದರೆ ವಂಚನೆಯ ಆರೋಪದ ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿವಾಹವು ಮುರಿದು ಬೀಳಬಹುದು ಅಥವಾ ಪರಿಸ್ಥಿತಿ ಇನ್ನೂ ಹದಗೆಡೆಬಹುದು.ಭಾರತೀಯ ದಂಡ ಸಂಹಿತೆ ( ಸೆಕ್ಷನ್498 A ) ಅಥವಾ 2005 ರ ಮಹಿಳೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅನ್ವಯ ಗಂಭೀರ ಪ್ರಕರಣ ದಾಖಲಾಗಬಹುದು.

ಪ್ರಸ್ತುತ ಭಾರತೀಯ ಕಾನೂನಿನ ಪ್ರಕಾರ, ನಿಮ್ಮ ಮಗನ ವಿವಾಹವನ್ನು ನೋಂದಣಿ ಮಾಡಿಸುವಾಗ ಆತ ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆ ಮಾನ್ಯತೆ ಪಡೆಯುತ್ತದೆ. ಮದುವೆಗೆ ಮುನ್ನ ಹುಡುಗಿಯೊಂದಿಗೆ ಮಾತನಾಡಿ ತನಗಿರುವ ಕಾಯಿಲೆ ಮತ್ತು ತೆಗೆದುಕೊಂಡ ಚಿಕಿತ್ಸೆಯ ವಿಷಯವನ್ನು ಸಂಪೂರ್ಣವಾಗಿ ತಿಳಿಸಿ ಮದುವೆಯಾಗುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಕಾಯಿಲೆಯ ನೆಪವೊಡ್ಡಿ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ.

ಒಂದು ವೇಳೆ ಮದುವೆಯಾದ ನಂತರ ಕಾಯಿಲೆ ಮರುಕಳಿಸಿದಲ್ಲಿ ಮತ್ತು ಹೆಣ್ಣಿಗೆ ತನ್ನ ಗಂಡ ವೈವಾಹಿಕ ಸಂಬಂಧದಲ್ಲಿ ಮುಂದುವರೆಯಲು ಶಕ್ತನಾಗಿಲ್ಲ ಎಂಬ ಅಭಿಪ್ರಾಯ ಬಂದಲ್ಲಿ ಮಾತ್ರ ವಿಚ್ಛೇದನ ಪಡೆಯಲು ಅವಕಾಶವಿರುತ್ತದೆ.

ಕಾನೂನಿನ ಅಡಚಣೆಗಳನ್ನು ದಾಟಿದ ಮಾತ್ರಕ್ಕೆ ಒಂದು ಸಂಬಂಧವು ಗಟ್ಟಿಯಾಗಿ ಉಳಿದುಕೊಳ್ಳುವುದಿಲ್ಲ. ನಿಮ್ಮ ಮಗ, ಮದುವೆ ನಿಶ್ಚಯವಾಗಿರುವ ಹುಡುಗಿಯೊಂದಿಗೆ ಮುಕ್ತವಾಗಿ ಮಾತನಾಡಿ, ಇರುವ ವಿಷಯವನ್ನು ಪ್ರಾಮಾಣಿಕವಾಗಿ ಹೇಳಿಕೊಳ್ಳವುದು ಉತ್ತಮವಾದ ಮಾರ್ಗ. ಹೀಗೆ ಮಾಡುವುದರಿಂದ ಆತನಿಗೆ ಭವಿಷ್ಯದಲ್ಲಿ ಕಾಯಿಲೆ ಮರುಕಳಿಸಿದರೆ ಸಂಬಂಧ ಪಟ್ಟ ಥೆರಪಿಸ್ಟ್, ಕುಟುಂಬದ ವ್ಯಕ್ತಿ ಅಥವ ಸ್ನೇಹಿತರ ಸಹಾಯ ಪಡೆಯಲು ಅವಕಾಶವಾಗುತ್ತದೆ.

ಬಹುಮುಖ್ಯವಾಗಿ ಚಿಕಿತ್ಸೆಯ ಕುರಿತು ತನ್ನ ಆಯ್ಕೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಆತನಿಗೆ ಕಾನೂನಿನ ರಕ್ಷಣೆಯ ಜೊತೆಗೆ ಕುಟುಂಬದವರ ಬೆಂಬಲವೂ ದೊರಕುತ್ತದೆ. (ಸೂಚನೆ: ಪ್ರಸ್ತುತ ಭಾರತದಲ್ಲಿ ಕಾನೂನಿನ ಪ್ರಕಾರ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಸಮ್ಮತಿಯಿಲ್ಲದೇ, ಆತನನ್ನು ಚಿಕಿತ್ಸೆಗೆ ಒಳಪಡಿಸಬಹುದು)

ಕಾನೂನು ಸಲಹೆಗಾರರು: ಅಂಬಾ ಸಾಲೇಲ್ಕರ್, ವಕೀಲರು, ಚೆನ್ನೈ ( ವಿಶೇಷ ಆಸಕ್ತಿ :ವಿಕಲ ಚೇತನರಿಗೆ ಕಾನೂನು ಮತ್ತು ನೀತಿಗಳು )